Sunday, June 9, 2024

ಕೃಷ್ಣಕರ್ಣಾಮೃತ - 17 ಪಶ್ಚಾತ್ತಾಪ ಸಾಕೇ? ಪ್ರಾಯಶ್ಚಿತ್ತ ಬೇಕೇ?((Krishnakarnamrta - 17 Pashcattapa Sake? Prayashchitta Beke?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಮಾತನ್ನು ಹೇಗೆಲ್ಲಾ ಬಳಸಬಹುದು - ಒಳ್ಳೆಯ ಉದ್ದೇಶಗಳಿಗೆ! ಆದರೆ ಏನೇನನ್ನೋ ಮಾತನಾಡುತ್ತೇವೆ! ಬೇಡದ ಮಾತೇ ಹೆಚ್ಚು. ಸುಳ್ಳು ಹೇಳುವುದೇನು, ಚಾಡಿ ಹೇಳುವುದೇನು, ಅನ್ಯರ ಮನಸ್ಸನ್ನು ನೋಯಿಸುವುದೇನು? - ಒಂದೇ ಎರಡೇ? ಮಾಡಿದವರ ಪಾಪ ಆಡಿದವರ ಬಾಯಿಗೆ - ಎನ್ನುತ್ತಾರೆ; ಆದರೆ ಪರನಿಂದೆಯಲ್ಲೇ ನಮ್ಮ ನಲಿವು!

ಸಾರವಾಗಿ, ಉದ್ವೇಗಕರವೋ ಅಸತ್ಯವೋ ಅಪ್ರಿಯವೋ ಅಹಿತವೋ ಆದ ಮಾತುಗಳು ಹೊಮ್ಮುತ್ತಲೇ ಇರುತ್ತವೆ, ಸದಾ ವಟಗುಟ್ಟುವ ನಮ್ಮ ಬಾಯಿಂದ! ಇಷ್ಟು ಮಾತ್ರವಲ್ಲ, ಯಾರಾದರೂ ತುಂಬ ಒಳ್ಳೆಯ ಕೆಲಸ ಮಾಡಿದಾಗ ಬಾಯ್ತುಂಬ ಹೊಗಳುವ ಬದಲು, ಮೌನವಹಿಸಿಬಿಡುವುದೂ ಗರ್ಹ್ಯವೇ! ಗರ್ಹ್ಯವೆಂದರೆ ನಿಂದ್ಯ.

ಅಂತೂ ಮಾತನ್ನು ಅಯುಕ್ತವಾಗಿ ಆಡಿ ಅಕೃತ್ಯವೆಸಗುತ್ತಿರುವುದು; ಯುಕ್ತವಾಗಿ ಆಡದೆಯೂ ಅಕೃತ್ಯವೆಸಗುತ್ತಿರುವುದು! ಇದು ಅನೇಕ ಮಂದಿಯ ನಿತ್ಯ-ಚರಿತ: ದುಶ್ಚರಿತ! ವಾಕ್ಕಿನ ಸದುಪಯೋಗವನ್ನು ಮಾಡುತ್ತಲೇ ಇಲ್ಲವೆಂದಲ್ಲ; ದುರುಪಯೋಗವೇ ಬಹುತೇಕ!

ಹೊಟ್ಟೆಹೊರೆಯುವುದಕ್ಕಾಗಿ ಮೇಲಧಿಕಾರಿಗಳನ್ನು ಓಲೈಸಲಂತೂ ನಮ್ಮ ವಾಕ್-ಚಮತ್ಕಾರವನ್ನೆಲ್ಲ ಖರ್ಚುಮಾಡುತ್ತೇವೆ! ಪಿಠರ ಎಂದರೆ ಮಡಕೆ; ಪುಟ್ಟ ಮಡಕೆಯು ಪಿಠರಿ. ಹೀಗೆ ಜಠರ-ಪಿಠರಿಯ ಪೂರೈಕೆಗಾಗಿ ಅನುಚಿತವಾದ ಮಾತುಗಳು: ಖಳರೆದುರಿಗೆ ಹೊಗಳಿಕೆಯ ಮಾತುಗಳು; ನಾಚಿಕೆಬಿಟ್ಟು ಆಡುವಂತಹವುಗಳು! 

"ಯಾವ ಕೆಲಸವನ್ನು ಮಾಡುವ ಮೊದಲು, ಅಥವಾ ಮಾಡುತ್ತಿರುವಾಗ, ಅಥವಾ ಮಾಡಿಯಾದ ಬಳಿಕ - ಲಜ್ಜೆಯುಂಟಾಗುವುದೋ, ಅಂತಹ ಕೆಲಸವನ್ನು ಮಾಡಬೇಡ" - ಎನ್ನುತ್ತದೆ ಮನುಸ್ಮೃತಿ. ಕೆಲವೊಮ್ಮೆಯಂತೂ ಮೂರೂ ಸಂದರ್ಭಗಳಲ್ಲೂ ಲಜ್ಜಾ-ಪ್ರಸಂಗಗಳು!

ಲಜ್ಜೆಯಾಗಬೇಕಾದ ಸಂನಿವೇಶದಲ್ಲೂ ನಾಚಿಕೆಪಟ್ಟುಕೊಳ್ಳದಿರುವುದನ್ನೇ ಭಂಡತನವೆನ್ನುವುದು. ಅನುಚಿತವಾದ ಕ್ರಿಯೆಗಳಲ್ಲಿ ತೊಡಗುವಾಗ ಮೊದಮೊದಲು ಹಿಂಸೆಯು ಉತ್ಕಟವೇ ಆಗುವುದು; ಆದರೂ ಮತ್ತೆ ಮತ್ತೆ ಅದರಲ್ಲೇ ತೊಡಗಿದ್ದರೆ, ಬರಬರುತ್ತಾ ಆ ಉತ್ಕಟತೆಯು ಕ್ಷೀಣಿಸುವುದು; ಲಜ್ಜೆಯೂ ದುರ್ಬಲವಾಗುವುದು.

"ಇದು ಸರಿಯೇ ತಪ್ಪೇ?" ಎಂಬ ಚಿಂತೆ-ಜಿಜ್ಞಾಸೆಗಳಿಗೆ ಆಶಂಕೆಯೆನ್ನುವರು; ಅದಿಲ್ಲವಾದಲ್ಲಿ 'ಅಸ್ತಾಶಂಕ': ಆಶಂಕೆಯು ಅಸ್ತವಾಗಿದ್ದರೆ, ಎಂದರೆ ಮುಳುಗಿದ್ದರೆ, ಅದು ಅಸ್ತಾಶಂಕ. ಅಕಾರ್ಯದಲ್ಲೇ ಮುಳುಗಿರುವವರಿಗೆ ಯಾವ ಆಶಂಕೆ?

ಬೇರೆಯವರ ವರ್ತನೆ ಹೀಗೆ - ಎಂಬುದಾಗಿ ಲೀಲಾಶುಕನು ಹೇಳುತ್ತಿಲ್ಲ. ಬದಲಾಗಿ, ತಾನೇ ಹಾಗೆಲ್ಲ ಮಾಡಿರುವನೆಂದು ಹೇಳಿಕೊಳ್ಳುತ್ತಾನೆ! "ಕೆಟ್ಟವರೆದುರಿಗೇ ಅವರನ್ನು ಕೊಂಡಾಡುವುದಾಗಿಹೋಗಿದೆ, ಅದೂ ಅಸ್ತಾಶಂಕವಾಗಿ; ಇದಕ್ಕಿಂತಲೂ ಮಿಗಿಲಾಗಿ ಅನುಚಿತವಾದದ್ದು ಮತ್ತೇನೂ ಇರಲಾರದು" ಎಂಬ ಅಭಿಪ್ರಾಯವವನದು; ಅದನ್ನು ಆತನು ಹೇಳುವ ಪರಿಯೇ ವಿಶಿಷ್ಟವಾದದ್ದು.

ಜಠರ-ಪಿಠರಿಯನ್ನು ತುಂಬಿಸಲು ತಾನೇ ಹಾಗೆ ಮಾಡಿರುವುದನ್ನು ಕವಿ ನೆನಸುತ್ತಾನೆ. ಇಂತಹ ಸಂದರ್ಭಗಳಲ್ಲಿ ಹೊಮ್ಮುವ ಮಾತಿನ ಆಟ ವಿಚಿತ್ರವಾದದ್ದು. ಎಂದೇ ತನ್ನ ಮಾತನ್ನು ಆ ಪರಿಯಲ್ಲಿ "ಕುಣಿಸಿರುವುದಾಗಿ" ಹೇಳಿಕೊಳ್ಳುತ್ತಾನೆ. ಆಡುವುದಕ್ಕಿಂತಲೂ ಹಾಡು ಹೆಚ್ಚು ಪ್ರಭಾವಶಾಲಿ; ಹಾಡಿಗಿಂತಲೂ ಕುಣಿತವು ಹೆಚ್ಚು ಪರಿಣಾಮಕಾರಿ. ನರ್ತನವಂತೂ ಮೋಹಕವೇ ಸರಿ.

ಆದರೆ ಕುಲ-ಶೀಲ-ಸಮನ್ವಿತೆಯಾದವಳು ದುಷ್ಟರೆದುರಿಗೆ ಮೈಚೆಲ್ಲಿ ನರ್ತಿಸಿಯಾಳೆ? ಕವಿಯು ತನ್ನ ವಾಣಿಯನ್ನು, ಎಂದರೆ ಮಾತನ್ನು, ಕುರಿತು ಹೀಗೆ ಹೇಳಿಕೊಳ್ಳುತ್ತಿದ್ದಾನೆ. "ನನ್ನ ವಾಣಿಯೇ, ನಿನ್ನನ್ನು ಹಾಗೆಲ್ಲಾ ನಿರ್ಲಜ್ಜವಾಗಿ ಕುಣಿಯುವಂತೆ ಮಾಡಿಬಿಟ್ಟಿದ್ದೇನೆ – ಅಯ್ಯೋ!"

ಮಾಡಬಾರದ್ದನ್ನು ಮಾಡಿದರೆ, "ಆಮೇಲೆ ಅಯ್ಯೋ ಹೀಗೆ ಮಾಡಿಬಿಟ್ಟೆನೆಲ್ಲಾ?" - ಎಂದು ಪರಿತಾಪವುಂಟಾಗುವುದು. ಹೀಗೆ ಆಮೇಲಾಗುವ ತಾಪಕ್ಕೇ ಪಶ್ಚಾತ್-ತಾಪವೆನ್ನುವುದು. ಏಕೆಂದರೆ, ಪಶ್ಚಾತ್ ಎಂದರೆ ಆಮೇಲೆ.

ಎಷ್ಟೋ ಮಂದಿ ಪಶ್ಚಾತ್ತಾಪಪಟ್ಟಿದ್ದೇವೆಂದು ಹೇಳಿಕೊಳ್ಳುವುದುಂಟು. ಅದು ನಿಜವೇ ಆಗಿದ್ದಲ್ಲಿ, ಯಾವುದನ್ನು ಮಾಡಿದ್ದರಿಂದಾಗಿ ತಾಪವುಂಟಾಯಿತೋ  ಅಂತಹ ಕೃತ್ಯವನ್ನು ಮತ್ತೆ ಮಾಡಲೇ ಆರರು! ನಿಜವಾದ ಪಶ್ಚಾತ್ತಾಪದ ಲಕ್ಷಣವೆಂದರೆ, ಆ ಅಕೃತ್ಯದಲ್ಲಿ ಮತ್ತೆ ತೊಡಗಲು ಪ್ರವೃತ್ತಿಯೇ ಬಾರದಿರುವುದು; ವಸ್ತುತಃ ಮತ್ತೆ ಅಂತೆಯೇ ಮಾಡಲು ಲಜ್ಜೆ-ಭಯಗಳು ಉಂಟಾಗುವಂತಹುದು. ಅದಕ್ಕಾಗಿಯೇ ಕವಿಯು ಹೇಳುತ್ತಿರುವುದು "ಇನ್ನು ಮುಂದೆ ಹೀಗೆಂದೂ ಮಾಡೆ" (ನ ಅತಃ ಪರಂ).

ಅಕೃತ್ಯವನ್ನು ಮಾಡಿರುವುದು ಖಚಿತವೇ ಆಗಿದ್ದ ಪಕ್ಷದಲ್ಲಿ, ಪಶ್ಚಾತ್ತಾಪವೊಂದೇ ಸಾಲದು; ಮಾಡಿಯಾಗಿರುವ ತಪ್ಪಿಗೆ ಪರಿಹಾರವೆಂಬುದೂ ಬೇಕಾದ ಒಂದು ಅಂಶವೇ.

"ಅಯ್ಯೋ ಹೀಗೆ ಮಾಡಿಬಿಟ್ಟೆನೆಲ್ಲಾ" ಎಂದು ನೊಂದುಕೊಳ್ಳುವುದು ಪಶ್ಚಾತ್ತಾಪ; ಅದನ್ನು ಕವಿಯು ಶ್ಲೋಕ-ಪೂರ್ವಾರ್ಧದಲ್ಲಿ ಹೇಳಿಕೊಂಡಿದ್ದಾನೆ. ಆಗಿಹೋದ ಅಕಾರ್ಯದ ದುಷ್ಪರಿಣಾಮವು ತಗ್ಗಲೆಂದು/ತಟ್ಟದಿರಲೆಂದು ಮಾಡಿಕೊಳ್ಳಬೇಕಾದುದೇ ಪ್ರಾಯಶ್ಚಿತ್ತ.  ಮುಂದಾಗುವ ಅನರ್ಥವನ್ನು ಪಶ್ಚಾತ್ತಾಪವು ತಡೆಯುತ್ತದೆ; ಈಗಾಗಲೇ ಆಗಿಹೋಗಿರುವ ಅನರ್ಥದ ದುಷ್ಪರಿಣಾಮವನ್ನು ಪ್ರಾಯಶ್ಚಿತ್ತವು ಇಳಿ(ಲ್ಲವಾಗಿ)ಸುತ್ತದೆ. 

ಉತ್ತರಾರ್ಧದಲ್ಲಿ ಪ್ರಾಯಶ್ಚಿತ್ತವನ್ನು ಕವಿಯು ಹೇಳಿಕೊಳ್ಳುತ್ತಾನೆ: ಕವಿಗಳಿಗೆ ವಾಣಿಯು ತಾಯಿಯಂತೆ. ವಾಣಿಯೆಂದರೆ ಮಾತು. ವಾಣಿಯೆಂದರೆ ವಾಗ್ದೇವಿ ಸರಸ್ವತಿಯೂ ಹೌದು. ತಾಯಿಯು ಎಂದಿಗೂ ವತ್ಸಲೆ. ಎಂದರೆ ವಾತ್ಸಲ್ಯ ತೋರುವವಳು, ತಪ್ಪುಗಳನ್ನು ಮನ್ನಿಸುವವಳು. ಎಂದೇ ಅವಳ ಕ್ಷಮೆಯನ್ನು ಯಾಚಿಸುತ್ತಾನೆ.

ಪ್ರಾಯಶ್ಚಿತ್ತದತ್ತ ಇಡುವ ಮೊದಲ ಹೆಜ್ಜೆಯೆಂದರೆ ಕ್ಷಮೆಬೇಡುವುದು; ಯಾರಿಗೆ ಅಪಚಾರವೆಸಗಲಾಗಿದೆಯೋ ಅವರಲ್ಲೇ ಬೇಡುವುದು. ಹಾಗೆ ಕೇಳುತ್ತಲೇ, ಅದು ಹಾರ್ದವಾದ ಯಾಚನೆಯೆಂದು ತೋರಿದೊಡನೆಯೇ, ಕೆರಳಿದ್ದವರ ಕೋಪವೂ ಇಳಿದೀತು! ತಾಯಿಯ ಮನಸ್ಸಂತೂ ಬೇಗನೆ ಕರಗೀತು! ಈ ಬಗೆಯ ಸಹಜ-ಸರಲತೆಯು ಅವಳಲ್ಲಿರುವುದು.

ವಾಸ್ತವವಾದ ಪ್ರಾಯಶ್ಚಿತ್ತವೆಂದರೇನೆಂಬುದನ್ನು ಅಂತಿಮ-ಪಾದದಲ್ಲಿ (ಎಂದರೆ ಕೊನೆಯ ಸಾಲಿನಲ್ಲಿ) ಹೇಳಿದೆ: ಗೋಪ-ವೇಷ-ಧಾರಿಯಾದ ವಿಷ್ಣುವಿನ ಗುಣ-ಗಾನವೇ ಪ್ರಾಯಶ್ಚಿತ್ತ.

"ಗೋಪ-ವೇಷಸ್ಯ ವಿಷ್ಣೋಃ" ಎನ್ನುವ ಪದ-ಗುಚ್ಛ ಕಾಳಿದಾಸನದು. ಅದನ್ನೇ ಲೀಲಾಶುಕ ಇಲ್ಲಿ ಬಳಸಿರುವುದು. ಕೃಷ್ಣಾವತಾರದಲ್ಲಲ್ಲದೆ ಮತ್ತಿನ್ನಾವ ಅವತಾರದಲ್ಲೂ ವಿಷ್ಣುವು ಗೋಪ-ವೇಷವನ್ನು ಧರಿಸಿಲ್ಲ. ಗೋವುಗಳನ್ನು ಯಾರು ಪಾಲನೆ ಮಾಡುವನೋ ಆತನೇ ಗೋ-ಪ. ಭೂಮಿಯನ್ನು ಪಾಲಿಸುವವನು ಭೂ-ಪ ಎನ್ನುವಂತೆ. ಗೋಪನೆಂದರೆ ಗೊಲ್ಲ. ಕೃಷ್ಣನೂ ಕ್ಷತ್ರಿಯನೇ ಆದರೂ ಗೊಲ್ಲರ ನಡುವೆ ಬೆಳೆದನಲ್ಲವೇ? ಶ್ರೀಕೃಷ್ಣನ ಸಾರಲ್ಯವನ್ನು, ಎಂದರೆ ಸರಲತೆಯನ್ನು, ಶ್ರೀರಂಗ-ಮಹಾಗುರುಗಳು ಹೀಗೆ ನಿರೂಪಿಸಿರುವರು: "ಬಾಲರ ಜೊತೆಯಲ್ಲಿ ಬಾಲನಾಗಿ, ಋಷಿಗಳ ಜೊತೆಯಲ್ಲಿ ಋಷಿಯಾಗಿ, ಗೋಪಿಯರ ಜೊತೆ ಗೊಲ್ಲನಾಗಿ ಓಡಾಡಿದ ಮಹಾಮಹಿಮ ಶ್ರೀಕೃಷ್ಣ" 

ಅಂತಹ ಮಹಾಮಹಿಮನ ಗುಣ-ಗಣನವೇ ಪ್ರಾಯಶ್ಚಿತ್ತ. ವಸ್ತುತಃ ಭಗವಂತನ ಗುಣಗಳು ಅಸಂಖ್ಯೇಯ, ಎಂದರೆ ಎಣಿಸಲಾಗದ್ದು. ಆದರೂ ಅವಲ್ಲಿ ಎಷ್ಟೆಷ್ಟನ್ನು ಸ್ಮರಿಸಿಕೊಂಡರೆ ಅಷ್ಟಷ್ಟು ಪುಣ್ಯ; ಎಷ್ಟೆಷ್ಟನ್ನು ಆಸ್ವಾದಿಸಿದರೆ ಅಷ್ಟಷ್ಟು ಪಾಪ-ಪರಿಹಾರ.

ಅಂತೂ ತನ್ನ ಅಪರಾಧವನ್ನೇ ತೋಡಿಕೊಳ್ಳುವ ನೆಪದಲ್ಲಿ, ಕವಿಯು ನಾವು ಮಾಡಬಾರದ್ದನ್ನೂ, ಅಂತಹುದನ್ನು ಮಾಡಿದ್ದರೆ ಸರಿಪಡಿಸಿಕೊಳ್ಳುವ ವಿಧಾನವನ್ನೂ, ನಮಗೆ ಮನಮುಟ್ಟುವಂತೆ ಸೂಚಿಸುತ್ತಿದ್ದಾನಲ್ಲವೇ?

ಶ್ಲೋಕವಿದು:

ಮಾತರ್ನಾತಃ ಪರಮನುಚಿತಂ ಯತ್ ಖಲಾನಾಂ ಪುರಸ್ತಾದ್ /

ಅಸ್ತಾಶಂಕಂ ಜಠರ-ಪಿಠರೀ-ಪೂರ್ತಯೇ ನರ್ತಿತಾಸಿ |

ತತ್ ಕ್ಷಂತವ್ಯಂ ಸಹಜ-ಸರಲೇ! ವತ್ಸಲೇ! ವಾಣಿ! ಕುರ್ಯಾಂ /

ಪ್ರಾಯಶ್ಚಿತ್ತಂ ಗುಣ-ಗಣನಯಾ ಗೋಪ-ವೇಷಸ್ಯ ವಿಷ್ಣೋಃ ||

ಸೂಚನೆ : 8/6/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.