Sunday, June 9, 2024

ಅಷ್ಟಾಕ್ಷರೀ 60 ಜಗಾಮಾತ್ಮಸಮಾಧಿನಾ (Astaksari -60 Jagamatmasamadhina)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ನಮ್ಮ ಧರ್ಮಶಾಸ್ತ್ರಗಳನ್ನು ತಿರುವಿಹಾಕಿದರೆ, ಒಂದಂಶವು ಗೋಚರವಾಗುತ್ತದೆ. ಅದೆಂದರೆ, ಅವನ್ನೆಲ್ಲಾ ಪ್ರಧಾನವಾಗಿ ಗಂಡಸರಿಗಾಗಿಯೇ ಬರೆದಿರುವುದು. ಗಂಡಸರಿಗೆಂದರೂ ಪ್ರಧಾನವಾಗಿ ಬ್ರಾಹ್ಮಣರಿಗಾಗಿಯೇ ಹೇಳಿರುವುದು. ಇದೆಲ್ಲ ಪಕ್ಷಪಾತವಲ್ಲವೇ? - ಎಂದೆನಿಸುವುದು ಸಹಜವೇ - ಆಳವಾಗಿ ಅಧ್ಯಯನ ಮಾಡಿಲ್ಲದಿದ್ದರೆ.

ವಾಲ್ಮೀಕಿ-ರಾಮಾಯಣದ ಶಬರೀ-ಪ್ರಸಂಗವೊಂದನ್ನವಲೋಕಿಸಿದರೆ ಸಹ, ವಸ್ತುಸ್ಥಿತಿಯು ಹಾಗಿಲ್ಲವೆಂಬುದು ಗೋಚರವಾಗುತ್ತದೆ.

ಶಬರಿಯ ವಿಷಯವನ್ನು ರಾಮಲಕ್ಷ್ಮಣರಿಗೆ ತಿಳಿಸುವುದು ಕಬಂಧ: ಅವಳು ಪರಿಚಾರಿಣಿ, ಮತಂಗಮುನಿಯ ಶಿಷ್ಯರುಗಳ ಸೇವೆ ಮಾಡಿಕೊಂಡಿರುವವಳು; ಚಿರಜೀವಿನಿ, ಸಾಕಷ್ಟು ವಯಸ್ಸಾದವಳು; ಮತ್ತು ಅವಳೊಬ್ಬ ಶ್ರಮಣೀ.

ಶ್ರಮಣನೆಂಬ ಪದವನ್ನು ಧ್ಯಾನಪರರಾದ ಯೋಗಿಗಳಿಗೆ, ತಪಸ್ವಿಗಳಿಗೆ ಬಳಸುವುದುಂಟು. ಶ್ರಮಣ-ಶ್ರಮಣಿಯರೆಂದರೆ ಶ್ರಮದಿಂದ ಜೀವಿಸುವವರು; ಎಷ್ಟಾದರೂ, ತಪಸ್ಸೆಂಬುದು ಬಹು-ಶ್ರಮ-ಸಾಧ್ಯವೇ ಸರಿ. ಶಬರನೆಂದರೆ ಭಿಲ್ಲ, ಕಿರಾತ; ಹೀಗಾಗಿ, ಶಬರಿಯೆಂದರೆ ಬೇಡರ ಜಾತಿಯವಳು, ಭಿಲ್ಲೆ.

ರಾಮಾಯಣದ ಶಬರಿಯು ತಪಸ್ಸಿದ್ಧಿಯನ್ನು ಪಡೆದಿರುವವಳು; ಅವಳ ತಪೋನಿಯಮಗಳು ಉಗ್ರವಾಗಿದ್ದವು. ಅವಳು ಸಿದ್ಧ-ಮಾನ್ಯೆ: ಅವಳ ತಪಃಪ್ರಗತಿಯು ಅನ್ಯ-ತಪಸ್ವಿಗಳಿಗೂ ವಿದಿತವಾಗಿತ್ತು.

ರಾಮ-ಲಕ್ಷ್ಮಣರನ್ನವಳು ವಿಧ್ಯುಕ್ತವಾಗಿ ಸ್ವಾಗತಿಸಿದಳು. ಅವಳ ಕುಶಲ-ಪ್ರಶ್ನೆ ಮಾಡುತ್ತಾ, ಅವಳ ವಿಘ್ನ-ಜಯ, ಕ್ರೋಧ-ಜಯ, ಆಹಾರ-ನಿಯತತೆ, ತಪೋನಿಯಮ-ಪಾಲನ, ಮನಸ್ಸೌಖ್ಯ, ಗುರುಶುಶ್ರೂಷಾ-ಸಾಫಲ್ಯ, ತಪೋವೃದ್ಧಿ - ಇವನ್ನು ವಿಚಾರಿಸಿದ, ಶ್ರೀರಾಮ.

ಅದಕ್ಕವಳೆಂದಳು: "ದೇವಶ್ರೇಷ್ಠನಾದ ನಿನ್ನನ್ನು ಪೂಜಿಸಿದೆನಾಗಿ, ಇಂದು ನನ್ನ ತಪಸ್ಸು ಸಿದ್ಧಿಯನ್ನು ಪಡೆಯಿತು; ಜನ್ಮವೇ ಸಫಲವಾಯಿತು; ಹಿರಿಯರನ್ನು ನಾನು ಚೆನ್ನಾಗಿಯೇ ಅರ್ಚಿಸಿದ್ದೇನೆ - ಎಂದೇ ನಿನ್ನ ದರ್ಶನವೆನಗಾಗಿರುವುದು. ನನಗೆ ಸ್ವರ್ಗ-ಪ್ರಾಪ್ತಿಯಾಗುವುದು; ನಿನ್ನ ಸೌಮ್ಯ-ಚಕ್ಷುಸ್ಸಿನಿಂದಲೇ ನಾನು ಪೂತಳಾಗಿದ್ದೇನೆ (ಅರ್ಥಾತ್, ಪವಿತ್ರಳಾಗಿದ್ದೇನೆ.) ನಿನ್ನ ಪ್ರಸಾದದಿಂದಾಗಿ ನಾನು ಅಕ್ಷಯವಾದ ಲೋಕಗಳನ್ನು ಹೊಂದತಕ್ಕವಳು. ಯಾರ ಪರಿಚಾರಣೆಯನ್ನು, ಎಂದರೆ ಸೇವೆಯನ್ನು, ನಾನು ಮಾಡಿದೆನೋ, ಅವರುಗಳು ದಿವ್ಯ-ವಿಮಾನಗಳನ್ನೇರಿ ಇಲ್ಲಿಂದಲೇ ಸ್ವರ್ಗಕ್ಕೆ ಹೊರಟುಬಂದರು. ಹೊರಡುವ ಮೊದಲು ಹೇಳಿದ್ದರು: ನಿನ್ನೀ ಪುಣ್ಯಾಶ್ರಮಕ್ಕೆ ರಾಮನು ಬರುವನು; ಆತನನ್ನು ಕಂಡ ಬಳಿಕ ನೀನು ಶ್ರೇಷ್ಠವೂ ಅಕ್ಷಯವೂ ಆದ ಲೋಕಗಳನ್ನು ಸೇರುವೆ – ಎಂಬುದಾಗಿ."

ಹೀಗೆ ಹೇಳಿ, ತಾನು ಅವರಿಗಾಗಿ ತಂದಿಟ್ಟಿದ್ದ ಫಲಗಳನ್ನು ಅರ್ಪಿಸಿದಳು. ಆಗ ರಾಮನು "ವಿಜ್ಞಾನದಲ್ಲಿ ಅಬಹಿಷ್ಕೃತಳಾದ" ಆಕೆಯನ್ನು ಕುರಿತು, "ನಿನ್ನ ತಪಃಪ್ರಭಾವವನ್ನು ಕೇಳಿ ಬಲ್ಲೆ" - ಎಂದನು.

ಆಗ ಶಬರಿಯು ಆ ಮತಂಗವನ-ಮಾಹಾತ್ಮ್ಯವನ್ನು ತಿಳಿಸಿ, "ನಿನ್ನ ಅನುಮತಿಯನ್ನು ಪಡೆದು ನಾನು ಈ ಶರೀರವನ್ನು ಬಿಟ್ಟುಹೋಗಬೇಕೆಂದಿರುವೆ" ಎಂದಳು. ರಾಮನೂ ಅದಕ್ಕೆ, "ನೀನು ಭಕ್ತಿಯಿಂದ ನನ್ನನ್ನರ್ಚಿಸಿದ್ದೀಯೆ. ನಿನಗೆ ಹೇಗಿಷ್ಟವೋ ಹಾಗೆ ಮಾಡು" ಎಂದನು.

ತನ್ನ ಜೀರ್ಣವಾದ ದೇಹವನ್ನು ಶಬರಿಯು ಆಗ ಅಗ್ನಿಯಲ್ಲಿ ಹೋಮಮಾಡಿಕೊಂಡಳು. ಅಗ್ನಿಯಂತೆ ಬೆಳಗುತ್ತಾ ಸ್ವರ್ಗತಳಾದಳು. ಪುಣ್ಯಾತ್ಮರಾದ ಮಹರ್ಷಿಗಳು ಸೇರುವೆಡೆಯನ್ನೇ "ಆತ್ಮ-ಸಮಾಧಿಯಿಂದ" ಸೇರಿದಳು (ಜಗಾಮ ಆತ್ಮ-ಸಮಾಧಿನಾ).

ಇಲ್ಲಿ ಎರಡು ಪದಗಳಿಗೆ ವಿವರಣೆ ಅಪೇಕ್ಷಿತ. ಶಬರಿಯು ವಿಜ್ಞಾನದಲ್ಲಿ ಅಬಹಿಷ್ಕೃತಳು - ಎಂದರೇನು? ಆತ್ಮಸಮಾಧಿಯಿಂದ ಸ್ವಸ್-ಸ್ಥಾನವನ್ನು ಸೇರಿದಳು - ಎಂದರೇನು?

ಇಲ್ಲಿರುವ ವಿಜ್ಞಾನವೆಂಬ ಪದಕ್ಕೆ ಇಂದು ನಾವು ಬಳಸುತ್ತಿರುವ ಅರ್ಥವಲ್ಲ. ಆತ್ಮಜ್ಞಾನವನ್ನೇ ಹೇಳುವ ಪದವದು. ಆ ಆತ್ಮವಿಜ್ಞಾನದ ವಿಷಯದಲ್ಲಿ ಅವಳಿಗೆ ಎಂದೂ ಬಹಿಷ್ಕಾರವಿರಲಿಲ್ಲ. ಅರ್ಥಾತ್ ಅವಳು ಆಚಾರ್ಯಾನುಗ್ರಹದಿಂದ ಬ್ರಹ್ಮಜ್ಞಾನವನ್ನು ಪಡೆದಿದ್ದಳಷ್ಟೇ ಅಲ್ಲದೆ, ಅದರ ಅಂತರಂಗವನ್ನೇ ಅರಿತಿದ್ದಳು - ಎಂದದರರ್ಥ.

ಯೋಗಿಗಳು ಆತ್ಮ-ಸಮಾಧಿಯಿಂದ ಪರಮ-ಪದವನ್ನು ಮುಟ್ಟುವರು. ಇವಳು ನಾರಿಯೆಂದೋ ನಿಕೃಷ್ಟ-ಜಾತಿಯವಳೆಂದೋ ಅವಳಿಗೆ ಮಹರ್ಷಿಗಳು ಸತ್ಸಂಸ್ಕಾರ-ಮಾರ್ಗದರ್ಶನಗಳನ್ನು ಕೊಡದಿರಲಿಲ್ಲ – ಎಂಬುದನ್ನಿಲ್ಲಿ ಗಮನಿಸಬೇಕು.

ಮಾನವ-ಶರೀರದಿಂದ ಸಾಧಿಸಬೇಕಾದುದು ಆತ್ಮಜ್ಞಾನ-ಸಂಪಾದನೆ. ಅದನ್ನು ಸಂಪಾದಿಸಿ, ಆತ್ಮ-ಸಮಾಧಿಯಲ್ಲಿ ನೆಲೆಗೊಂಡವಳಾಗಿ, ಈ ಶರೀರದಿಂದ ಇನ್ನಾಗಬೇಕಾದುದೇನೂ ಇಲ್ಲವೆಂಬುದನ್ನರಿತುಕೊಂಡು, ಸಂಕಲ್ಪ-ಪೂರ್ವಕವಾಗಿ ರಾಮ-ಲಕ್ಷ್ಮಣರೆದುರಿನಲ್ಲಿ ಕೃತ-ಕೃತ್ಯತೆಯ ಭಾವದಿಂದ ಶರೀರ-ತ್ಯಾಗವನ್ನು ಸ್ವ-ತೇಜೋ-ಬಲದಿಂದ  ಮಾಡಿದ ಶಬರಿಯೇ ಧನ್ಯೆ!

ಯೋಗವಿದ್ಯೆಯಿಂದ, ಅದರಲ್ಲೂ ಅದರ ಉನ್ನತ-ಸೋಪಾನವೆನಿಸುವ ಧ್ಯಾನದಿಂದ, ಸ್ತ್ರೀಯರೂ ಪರಮ-ಪದವನ್ನು ಇಂದೂ ಮುಟ್ಟಬಲ್ಲರು - ಎಂಬುದನ್ನು ತಮ್ಮ ಉಪದೇಶದಿಂದ ಮಾತ್ರವಲ್ಲದೆ, ಸ್ವತಃ ಯುಕ್ತ-ಮಾರ್ಗ-ದರ್ಶನದಿಂದಲೂ ಶ್ರೀರಂಗಮಹಾಗುರುಗಳು ಪ್ರತಿಪಾದಿಸಿರುವರು.

ಪಾರ್ವತಿಯು ತಪಸ್ಸಮಾಧಿಯಿಂದ ಈಶ್ವರನನ್ನು ಮೆಚ್ಚಿಸಿದುದನ್ನು ಕಾಳಿದಾಸನ ಕುಮಾರಸಂಭವವು ನಿರೂಪಿಸುತ್ತದೆಯಲ್ಲವೇ? ಕೌಸಲ್ಯೆಯು ಪ್ರಾಣಾಯಾಮ-ಪರಾಯಣಳಾಗಿದ್ದುದನ್ನು ರಾಮಾಯಣವೇ ಹೇಳಿದೆಯಲ್ಲವೇ?

ಹೀಗಾಗಿ, ಆತ್ಮವಿದ್ಯೆ-ಯೋಗಸಮಾಧಿಗಳು ಸ್ತ್ರೀಯರಿಗೂ ಇಂದಿಗೂ ಸಾಧ್ಯವಾಗತಕ್ಕವೇ ಸರಿ.

ಸೂಚನೆ: 25/05/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.