Sunday, April 2, 2023

ಯಕ್ಷ ಪ್ರಶ್ನೆ -32(Yaksha prashne -32)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಶ್ನೆ – 31 ಯಾವುದು ವೇಗದಿಂದ ಬೆಳೆಯುತ್ತದೆ ?

ಉತ್ತರ - ನದಿ

ಈ ಹಿಂದಿನ ಲೇಖನದಲ್ಲಿ ಯಾವುದು ಅತ್ಯಂತ ವೇಗವಾದುದು? ಎಂಬ ವಿಷಯದಲ್ಲಿ ಕೆಲವು ವಿಚಾರಗಳನ್ನು ವಿವರಿಸಿದ್ದೆ. ಆ ಸಂಗತಿಗಳನ್ನು ಇಲ್ಲಿ ಸ್ಮರಿಸಿಕೊಂಡು ಈ ಲೇಖನವನ್ನು ಅನುಸಂಧಾನಮಾಡಬೇಕಾದ ಅವಶ್ಯಕತೆ ಇದೆ. ಮನಸ್ಸು ಎಲ್ಲಕ್ಕಿಂತಲೂ ವೇಗ ಉಳ್ಳದ್ದು ಎಂಬುದು ಚರ್ಚಿತವಾದ ವಿಷಯ. ಆದರೆ ಈ ವೇಗಕ್ಕೆ ಕಾರಣ ಯಾವುದು ? ಮತ್ತು ವೇಗದಿಂದ ಇನ್ನಷ್ಟು ಬೆಳೆಯುವ- ವೃದ್ಧಿಯಾಗುವ ಅಥವಾ ವಿಸ್ತಾರವಾಗುವ ವಿಷಯ ಯಾವುದು? ಎಂಬುದು ಪ್ರಸ್ತುತ ಯಕ್ಷಪ್ರಶ್ನೆಯ ವಿಷಯವಾಗಿದೆ. ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ವೇಗದಿಂದ ಬೆಳೆಯುವಂತಹದ್ದು ಯಾವುದು? ಎಂದು. ಅಂದರೆ ತನ್ನ ಗಾತ್ರದಲ್ಲೋ, ತನ್ನ ಪಾತ್ರದಲ್ಲೋ ಅಥವಾ ಸಾಮರ್ಥ್ಯದಲ್ಲೋ ವಿಸ್ತಾರವಾಗುವಂತಹ ವಿಷಯ ಯಾವುದು? ಎಂಬುದು. ಅದಕ್ಕೆ ಧರ್ಮರಾಜನ ಉತ್ತರ 'ನದೀ' ಎಂಬುದಾಗಿ. ನದಿಗೆ ಒಂದು ಉಗಮಸ್ಥಾನವಿರುತ್ತದೆ. ಅಲ್ಲಿಂದ ಆರಂಭವಾದ ಅದರ ಪಯಣ ಸಮುದ್ರದಲ್ಲಿ ಕೊನೆಯಾಗುತ್ತದೆ. ತನ್ಮಧ್ಯದಲ್ಲಿ ಅದು ಅನೇಕ ಪರಿವರ್ತನೆಯನ್ನು ಪಡೆದುಕೊಳ್ಳುತ್ತದೆ. ಆರಂಭದಲ್ಲಿ ಒಂದು ಸಣ್ಣ ಬಿಂದುವಿನಿಂದ ಶುರುವಾಗಿ ಹೋಗುತ್ತಾ ಹೋಗುತ್ತಾ ಅನೇಕ ಹಳ್ಳ, ಕೊಳ್ಳ, ತೊರೆ, ಝರಿ ಮುಂದಾದ ನೀರಿನ ಸ್ರೋತಸ್ಸುಗಳನ್ನು ಸೇರಿಸಿಕೊಂಡು ಸಿಂಧುವಾಗುತ್ತದೆ. ಇದರ ಪರಿಣಾಮವಾಗಿ ನದಿಯಲ್ಲಿ ನೀರಿನ ಹರಿವು ಜಾಸ್ತಿ ಆಗುತ್ತದೆ. ಆಗ ಅದು ತನ್ನ ಗಾತ್ರವನ್ನು ವಿಸ್ತರಿಸಿಕೊಳ್ಳುತ್ತದೆ. ನೀರಿನ ಹರಿವಿನ ಪಾತ್ರವೂ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ನೀರಿನ ವೇಗವೂ ವೃದ್ಧಿಸುತ್ತದೆ. ಇಲ್ಲಿ ಯಕ್ಷನ ಪ್ರಶ್ನೆಯ ಆಶಯ ನದಿಯ ವೇಗಕ್ಕೆ ಸಂಬಂಧಿಸಿದ್ದಲ್ಲ. ಇಲ್ಲಿ ನದೀ ಎಂದರೆ ಮನೋರೂಪವಾದದ್ದು.  ಚಿತ್ತನದಿಯು ವೇಗದ ಕಾರಣದಿಂದ ಇನ್ನಷ್ಟು ಬೆಳೆಯುತ್ತದೆ. ಅಂದರೆ ಮನಸ್ಸು ಬೆಳೆಯುತ್ತದೆ ಎಂದರ್ಥವಲ್ಲ. ಮನಸ್ಸು ತನ್ನ ಗಾತ್ರವನ್ನು ಹಿಗ್ಗಿಸಿಕೊಳ್ಳುತ್ತದೆ ಎಂದೂ ಅರ್ಥವಲ್ಲ. ಏಕೆಂದರೆ ಶಾಸ್ತ್ರಗಳಲ್ಲಿ ಮನಸ್ಸಿಗ ಗಾತ್ರದ ಬಗ್ಗೆ ವಿಮರ್ಶೆ ಮಾಡಲಾಗಿದೆ. ಅದಕ್ಕೊಂದು ನಿರ್ದಿಷ್ಟ ಪರಿಮಾಣವನ್ನು ವಿಭಿನ್ನವಾಗಿ ಹೇಳಲಾಗಿದೆ. ಅದಾಗ್ಯೂ ಅಲ್ಲಿನ ಪರಿಮಾಣದಲ್ಲಿ ಯಾವುದೇ ಬದಲಾವಣೆಯಂತೂ ಸಾಧ್ಯವಿಲ್ಲ. ಅಂದರೆ ಇಲ್ಲಿ ವೃದ್ಧಿಸುವುದು ಮನಸ್ಸಲ್ಲ. ಮನಸ್ಸಿನ ವೃತ್ತಿಗಳು- ಆಲೋಚನೆಗಳು-ಚಿಂತೆ-ಚಿಂತನೆಗಳು.  .

ಮನಸ್ಸು ಬೆಳೆಯಲು ಬಾಹ್ಯ ಇಂದ್ರಿಯಗಳೇ ಕಾರಣ. ಕಣ್ಣು ಕಿವಿ ಮೊದಲಾದ ಇಂದ್ರಿಯಗಳ ಮೂಲಕ ರೂಪ ಶಬ್ದ ಮೊದಲಾದ ವಿಷಯಗಳನ್ನು ಮನಸ್ಸು ಗ್ರಹಿಸುತ್ತದೆ. ರೂಪಾದಿ ವಿಷಯಗಳು ಅನೇಕ ಪದಾರ್ಥಗಳನ್ನು ಆಶ್ರಯಿಸಿಕೊಂಡು ಇರುವುದರಿಂದ ಆ ಎಲ್ಲ ವಸ್ತುಗಳನ್ನು ಧರಿಸುವ ಅನಿವಾರ್ಯಕ್ಕೆ ಮನಸ್ಸು ಸಿಲುಕುತ್ತದೆ. ಹೀಗೆ ಹತ್ತಾರು ಸಹಸ್ರಾರು ವಿಷಯಗಳನ್ನು, ಬೇಕಾದದ್ದು ಅಥವಾ ಬೇಡವಾದದ್ದು ಎಲ್ಲವನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಾ ಚಿತ್ತದ ವೃತ್ತಿಗಳು ಆಲೋಚನೆಗಳು ಹೆಚ್ಚಾಗುತ್ತಾ ಸಾಗುತ್ತವೆ. ಇದು ಇತಿಮಿತಿಯಿಲ್ಲದೆ ಬೆಳೆಯುತ್ತಾ ಸಾಗುತ್ತದೆ. ಇದು ಚಿಂತೆಗೆ ಅಥವಾ ಮಾನಸಿಕ ಕ್ಷೋಭೆಗೆ, ಅಶಾಂತಿಗೆ ಕಾರಣವಾಗುತ್ತದೆ. ಹೇಗೆ ಒಂದು ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಜನ ಸಂಮರ್ದ ಉಂಟಾಗಿ ಕೋಲಾಹಲಕ್ಕೆ ಕಾರಣವಾಗುತ್ತದೆ. ಅದೇ ಮನೆಯಲ್ಲಿ ತಾನೊಬ್ಬನೇ ಇದ್ದರೆ ಅಲ್ಲಿ ಕಲಹಕ್ಕೆ - ಸದ್ದಿಗೆ ಅವಕಾಶವಿರುವುದಿಲ್ಲ. ಆದ್ದರಿಂದ ಮನಸ್ಸಿನಲ್ಲಿ ವೃತ್ತಿಗಳು ಬೆಳೆದಷ್ಟೂ ತೊಂದರೆ, ಕಷ್ಟ, ನಷ್ಟಗಳು. ಇದಕ್ಕಾಗಿ ನಮ್ಮ ಮಹರ್ಷಿಗಳು 'ಚಿತ್ತವೃತ್ತಿಗಳನ್ನು ನಿಗ್ರಹಿಸಬೇಕು' ಎಂದಿದ್ದಾರೆ. ಇದರಿಂದ ನೆಮ್ಮದಿ ಶಾಂತಿ ದೊರಕುತ್ತದೆ. ಚಿತ್ತನದಿಯು ಬೆಳೆದಷ್ಟು ಆತಂಕ, ಅದು ಕ್ಷಯಿಸಿದಷ್ಟು ನಿರಾತಂಕ ಎಂಬುದೇ ಈ ಪ್ರಶ್ನೆಯಲ್ಲಿರುವ ಸಾರ.

ಸೂಚನೆ : 2/4/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.