ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)
ಒಂದು ಪಟ್ಟಣದಲ್ಲಿ, ಹಳೆಯ ಕಬ್ಬಿಣ ಮತ್ತು ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುವ ಒಬ್ಬ ಬಡ ವ್ಯಕ್ತಿ ವಾಸಿಸುತ್ತಿದ್ದನು. ಅದೇ ಊರಿನ ಸಮೀಪದಲ್ಲಿ ಒಬ್ಬ ಮಹರ್ಷಿಯು ಮರದ ಕೆಳಗೆ ಧ್ಯಾನಸ್ಥರಾಗಿರುತ್ತಿದ್ದರು. ಈ ಮಹರ್ಷಿಗಳು ಈತನನ್ನು ಗಮನಿಸಿ ಒಮ್ಮೆ ಅವರ ಬಳಿ ಕರೆದು - "ಏನಪ್ಪಾ! ನಿನ್ನ ಜೀವನ ಹೇಗೆ ನಡಿಯುತ್ತಿದೆ? ನೀನು ಕಷ್ಟ ಪಟ್ಟು ಹಳೆಯ ಸಾಮಾನುಗಳ ಮಾರಾಟ ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಿನ್ನ ಮನೆಯಲ್ಲಿ ಸೌಖ್ಯವೇ? ನಿನ್ನ ಕುಟುಂಬದ ಹೊಟ್ಟೆ ಬಟ್ಟೆಗಾಗುವಷ್ಟು ಸಂಪಾದನೆ ಆಗುತ್ತಿದ್ದೀಯಾ?" ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಅವನು ಬಹಳ ಬೇಸರದಿಂದ ಅವನ ಕಷ್ಟಗಳನ್ನು ಹೇಳಿಕೊಳ್ಳುತ್ತಾನೆ. ಅವನ ಸಂಪಾದನೆ ಊಟ ಮಾಡುವುದಕ್ಕೂ ಸಾಲುತ್ತಿಲ್ಲ, ಮತ್ತು ಒಂದು ಮನೆಯು ಇಲ್ಲದೆ ಒಂದು ಸಣ್ಣ ಗುಡಿಸಲಿನಲ್ಲಿ ಅವನ ಹೆಂಡತಿ ಮಕ್ಕಳರೊಡನೆ ವಾಸ ಮಾಡುತ್ತಿದ್ದೇನೆ ಎಂದು ಪೇಚಾಡಿಕೊಳ್ಳುತ್ತಾನೆ. ತಾವೇ ನನಗೆ ಅನುಗ್ರಹ ಮಾಡಬೇಕು ಎಂದು ಪ್ರಾರ್ಥಿಸುತ್ತಾನೆ.
ಇದನ್ನು ಕೇಳಿ ಆ ಮಹರ್ಷಿಗಳು ಅವನಿಗೆ ಒಂದು ತಾಮ್ರದ ನಿಧಿಯ ಜಾಗವನ್ನು ತಿಳಿಸುತ್ತಾರೆ. ಆ ತಾಮ್ರವನ್ನು ಮಾರಾಟ ಮಾಡಿದರೆ ಸಾಕಷ್ಟು ದುಡ್ಡು ಬರತ್ತದೆ ಅದರಿಂದ ನಿನ್ನ ಜೀವನ ಚೆನ್ನಾಗುತ್ತದೆ ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ಈತ ಬಹಳ ಸಂತೋಷದಿಂದ ಈ ತಾಮ್ರದ ನಿಧಿಯನ್ನು ಪಡೆದು, ಅವರು ಹೇಳಿದಂತೆ ಇದರ ಮಾರಾಟ ಮಾಡಿ ಹೊಸದಾಗಿ ಜೀವನ ಮಾಡವುದಕ್ಕೆ ಶುರು ಮಾಡುತ್ತಾನೆ.
ಸ್ವಲ್ಪ ಕಾಲದ ನಂತರ, ಮತ್ತೆ ಈತ ಮಹರ್ಷಿಗಳನ್ನು ಭೇಟಿಯಾಗುತ್ತಾನೆ. ಈಗ ಮತ್ತೆ ಆ ಮಹಾತ್ಮರು ಈತನ ಸೌಖ್ಯವನ್ನು ವಿಚಾರಿಸುತ್ತಾರೆ. ಅದಕ್ಕೆ ಈತ "ಹೆಂಡತಿ ಮಕ್ಕಳಿಗೆಲ್ಲ ಊಟ, ಬಟ್ಟೆಗೆ ಬೇಕಾದಷ್ಟು ಸಂಪಾದನೆ ಆಗುತ್ತಿದೆ ಸ್ವಾಮಿ, ಆದರೆ, ಒಂದು ಒಳ್ಳೆ ಮನೆಯನ್ನು ಕಟ್ಟುವ ಸಾಮರ್ಥ್ಯ ಒದಗುವಂತೆ ತಾವು ಅನುಗ್ರಹಿಸಬೇಕು ಎಂದು ಪ್ರಾರ್ಥಿಸುತ್ತಾನೆ. ಇದನ್ನು ಕೇಳಿ ಮಹರ್ಷಿಗಳು ಈ ಬಾರಿ ಅವನಿಗೆ ಒಂದು ಬೆಳ್ಳಿಯ ನಿಧಿಯ ದಿಕ್ಕನ್ನು ತೋರಿ ಆಶೀರ್ವದಿಸುತ್ತಾರೆ. ಬಹಳ ಸಂತೋಷದಿಂದ ಇವನು ಅದೇ ದಿಕ್ಕಿನಲ್ಲಿ ಹೋದಾಗ ಸಿಕ್ಕ ಬೆಳ್ಳಿಯ ನಿಧಿಯನ್ನು ನೋಡಿ ಬಹಳ ಸಂತಸ ಪಡುತ್ತಾನೆ.
ಈ ನಿಧಿಯನ್ನು ಪಡೆದ ಮೇಲೆ ಬೆಳ್ಳಿಯ ಮಾರಾಟದಿಂದ ತುಂಬಾ ಶ್ರೀಮಂತನೇ ಆಗಿಬಿಡುತ್ತಾನೆ. ಒಂದು ಒಳ್ಳೆಯ ಮನೆ ಕಟ್ಟಿ ಸುಖವಾಗಿ ಜೀವನ ಮಾಡುವುದಕ್ಕೆ ಶುರು ಮಾಡುತ್ತಾನೆ. ಸ್ವಲ್ಪ ಕಾಲ ಹೀಗೆ ಕಳೆಯತ್ತದೆ. ಎಲ್ಲ ಸುಖಗಳಿದ್ದರೂ, ಅವನಿಗಿಂತ ಶ್ರೀಮಂತರಾದ ಜನರನ್ನು ನೋಡಿ, ಅವನು ಮತ್ತೊಮ್ಮೆ ಅದೇ ಮಹರ್ಷಿಗಳ ಬಳಿ ಹೋಗುತ್ತಾನೆ. ಅವರನ್ನು ನಮಸ್ಕರಿಸಿ, ಅವರ ಕೃಪೆಯಿಂದ ಎಲ್ಲ ತುಂಬಾ ಚೆನ್ನಾಗಿದೆ, ಎಂದು ಕೃತಜ್ಞತೆಯನ್ನು ಸಲ್ಲಿಸಿ ಕೃತಜ್ಞತೆಯ ಜೊತೆಯಲ್ಲೇ ಅವರಲ್ಲಿ ಇನ್ನೊಂದು ಪ್ರಾರ್ಥನೆಯನ್ನು ಮಾಡುತ್ತಾನೆ: "ತಮಗೆ ಇನ್ನು ಯಾವುದಾದರೂ ಧನದ ಬಗ್ಗೆ ತಿಳಿದಿದ್ದರೆ, ಅದನ್ನು ತಿಳಿಸಬಹುದೇ? ಇನ್ನು ಧನ ಸಿಕ್ಕಿದರೆ ಆಗ ಎಲ್ಲ ಅಕ್ಕ ಪಕ್ಕದ ಊರಿನಲ್ಲೂ ನಾನೇ ಎಲ್ಲರಿಗಿಂತ ಶ್ರೀಮಂತನಾಗುತ್ತೇನೆ. ಆಗ ಇನ್ನೂ ಸುಖವಾಗಿ ಜೀವನ ಮಾಡಬಹುದು" ಎಂದು ಬೇಡುತ್ತಾನೆ. ಇದಕ್ಕೆ ಈ ಬಾರಿ ಮಹರ್ಷಿಗಳು ಅವನಿಗೆ ಒಂದು ದೊಡ್ಡ ಚಿನ್ನದ ನಿಧಿಯ ಬಳಿ ಕಳುಹಿಸುತ್ತಾರೆ. ಇವನು ಚಿನ್ನದ ನಿಧಿಯೂ ಇರಬಹುದಾ ಎಂದು ಆಶ್ಚರ್ಯದಿಂದ, ಮತ್ತು ಅಷ್ಟೇ ಉತ್ಸಾಹದಿಂದ ಅವರು ಕೊಟ್ಟ ಮಾರ್ಗವನ್ನನುಸರಿಸಿ ಬರುತ್ತಾನೆ. ಅಲ್ಲಿ ಆ ಹೊಳೆಯುತ್ತಿರುವ ಚಿನ್ನದ ರಾಶಿಯನ್ನು ನೋಡಿ ಆಶ್ಚರ್ಯದಿಂದ ಒಂದು ಕ್ಷಣ ಮೈ ಮರೆಯುತ್ತಾನೆ. ಇದನ್ನು ಮಾರಾಟ ಮಾಡಿದರೆ ಎಂತಹ ಅದ್ಭುತವಾದ ಜೀವನವನ್ನು ಮಾಡಬಹುದು ಎಂದು ಯೋಚಿಸಿ ಅವನ ಭವ್ಯವಾದ ಭವಿಷ್ಯದ ಯೋಚನೆಗಳಲ್ಲಿ ಮುಳುಗುತ್ತಾನೆ. ಹೀಗೆ ಯೋಚಿಸುತ್ತಿರುವಾಗ ಅವನಿಗೆ ಇಲ್ಲಿಯವರೆವಿಗೂ ಬರದಿದ್ದ ಒಂದು ಪ್ರಶ್ನೆ ಹುಟ್ಟುತ್ತದೆ. ಈ ಮಹರ್ಷಿಗಳಿಗೆ ಇದೆಲ್ಲ ನಿಧಿಗಳ ಬಗ್ಗೆ ಗೊತ್ತಿದ್ದರೂ ಅವರು ಮಾತ್ರ ಆ ಸಣ್ಣ ಗುಡಿಸಲಿನಲ್ಲಿ ವಾಸ ಮಾಡಿಕೊಂಡು, ಭಿಕ್ಷಾಟನದಿಂದ ಬಂದ ಆಹಾರವನ್ನೇ ಸ್ವೀಕರಿಸುತ್ತ ಇದ್ದಾರಲ್ಲ! ಇದು ಯಾಕೆ ಎಂದು ಯೋಚಿಸಿ, ಆ ಚಿನ್ನವನ್ನು ಮುಟ್ಟಲ್ಲು ಮನಸ್ಸಾಗದೇ ಮೊದಲು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕೆಂದು ಹಿಂದಿರುಗೆ ಮಹರ್ಷಿಗಳ ಬಳಿ ಓಡಿಹೋಗುತ್ತಾನೆ.
"ಮಹರ್ಷಿಗಳೇ! ನಿಮಗೆ ಇಷ್ಟೆಲ್ಲಾ ನಿಧಿಗಳ ಬಗ್ಗೆ ಗೊತ್ತಿದ್ದರೂ ನೀವು ಯಾಕೆ ಇಂತಹ ಸಣ್ಣ ಗುಡಿಸಲಿನಲ್ಲಿ ವಾಸ ಮಾಡಿಕೊಂಡು ಬಡವರ ತರಹ ಬಾಳುತ್ತಿದ್ದೀರಾ?" ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಮಹರ್ಷಿಗಳು, ಹಸನ್ಮುಖರಾಗಿ, " ಅಪ್ಪ, ಈ ನಿಧಿಗಳೆಲ್ಲ ನನ್ನ ಬಳಿ ಇರುವ ನಿಧಿಗೆ ಹೋಲಿಸಿದರೆ ತುಂಬಾ ಚಿಕ್ಕದು. ನನ್ನ ಹತ್ತಿರ ವಜ್ರದ ನಿಧಿಯೇ ಇದೆ, ಅದು, ಎಂದಿಗೂ ಕ್ಷಯವೇ ಆಗದಂತಹ ಅಕ್ಷಯ ನಿಧಿ. ಇದು ಇರುವಾಗ ಯಾವ ಬೆಳ್ಳಿ ನಿಧಿ, ಯಾವ ಚಿನ್ನದ ನಿಧಿ ಬೇಕು" ಎಂದು ಹೇಳುತ್ತಾರೆ.
ಇದನ್ನು ಕೇಳಿ "ಅಕ್ಷಯವಾದ ವಜ್ರದ ನಿಧಿಯೇ? ಎಲ್ಲಿದೆ? ನನಗೂ ಅದು ಬೇಕಲ್ಲ. ತಾವು ಅನುಗ್ರಹಿಸಬಹುದೇ?" ಎಂದು ಬೇಡುತ್ತಾನೆ. ಆಗ ಮಹರ್ಷಿಗಳು "ಆಗಬಹುದು, ಆದರೆ, ಅದು ಅಷ್ಟು ಸುಲಭವಲ್ಲ. ನಾನು ಹೇಳಿದ ಹಾಗೆ ನೀನು ಮಾಡಬೇಕಾಗತ್ತದೆ, ಮತ್ತು ಸ್ವಲ್ಪ ಕಾಲ ಹಿಡಿಯತ್ತದೆ, ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಗತ್ತದೆ, ಇದಕ್ಕೆಲ್ಲಾ ನೀನು ಸಿದ್ಧವೇ? " ಎಂದು ಪ್ರಶ್ನಿಸುತ್ತಾರೆ. ಈತ ಇದಕ್ಕೆ ಬಹಳ ಉತ್ಸಾಹದಿಂದ "ನೀವು ಏನು ಹೇಳಿದರೂ ನಾನು ಮಾಡಲು ಸಿದ್ಧ" ಎಂದು ಒಪ್ಪಿಕೊಳ್ಳುತ್ತಾನೆ.
ಇದಾದ ನಂತರ ಆ ಮಹರ್ಷಿಗಳು ಇವನನ್ನು ಶಿಷ್ಯನಾಗಿ ಸ್ವೀಕರಿಸಿ, ಸಾಧನ ಮಾರ್ಗವನ್ನು ಹೇಳಿಕೊಡುತ್ತಾರೆ. ಈ ಮಾರ್ಗವನ್ನು ಅನುಸರಿಸಿ ಅವರು ಹೇಳಿದಂತೆ ಮಾಡುತ್ತ, ಸ್ವಲ್ಪ ವರ್ಷಗಳು ಕಳೆಯುತ್ತವೆ. ಹೀಗೆ ಒಂದು ದಿನ ಇವನಿಗೆ ಆತ್ಮ ಸಾಕ್ಷಾತ್ಕಾರವೇ ಆಗಿಬಿಡುತ್ತದೆ. ಆತ್ಮ ಸಾಕ್ಷಾತ್ಕಾರವೆಂದರೆ ಅವನ ಒಳಗಡೆ ಇರುವ ಅಂಗುಷ್ಠಾಕಾರವಾಗಿರುವ ಜ್ಯೋತಿಯ ದರ್ಶನ ಆಗತ್ತದೆ. ಆ ಕ್ಷಣದಲ್ಲಿ ಅವನು ಎಂದೂ ಅನುಭವಿಸಿರದ ಪರಮಾನಂದವನ್ನು ಅನುಭವಿಸುತ್ತಾನೆ. ಅವನ ಕಣ್ಣುಗಳಲ್ಲಿ ಧಾರಾಕಾರವಾಗಿ ಆನಂದ ಭಾಷ್ಪವು ಹರಿಯುತ್ತದೆ.
ಈ ಅದ್ಭುತವಾದ ಅನುಭವವನ್ನು ಅವನ ಗುರುಗಳ ಬಳಿ ತಿಳಿಸುತ್ತಾನೆ. ಇದನ್ನು ಕೇಳಿ, ಆ ಮಹರ್ಷಿಗಳಿಗೂ ತುಂಬಾ ಸಂತೋಷವಾಗುತ್ತದೆ. "ಇದೇನಪ್ಪಾ! ಎಲ್ಲದಕ್ಕಿಂತ ದೊಡ್ಡ ಅಕ್ಷಯವಾದ ವಜ್ರದ ನಿಧಿ. ಇದನ್ನು ಎಲ್ಲ ಮನುಷ್ಯರು ಪಡಿಯಬೇಕು" ಎಂದು ಹೇಳುತ್ತಾರೆ. ಒಳಗೆ ಹೊಳೆಯುವುದು ಬೆಳಕಾಗಿರುವುದರಿಂದ ಮತ್ತು ಅತ್ಯಂತ ದೊಡ್ಡ ಆನಂದ ಅದರಲ್ಲಿರುವುದರಿಂದ, ಮಹರ್ಷಿಗಳು ಹೊಳೆಯುವ ಮತ್ತು ಅತ್ಯಂತ ಬೆಲೆ ಬಾಳುವ ವಜ್ರದ ಉದಾಹರಣೆಯೊಂದಿಗೆ ಆತ್ಮಾನುಭವದ ಬಗ್ಗೆ ಅವನಿಗೆ ತಿಳಿಹೇಳಿದ್ದರು.
ಈ ವಿಷಯದಲ್ಲಿ ಶ್ರೀರಂಗ ಮಹಾಗುರುಗಳ ವಾಕ್ಯವು ಅತ್ಯಂತ ಸ್ಫೂರ್ತಿದಾಯಕ - "ಆತ್ಮ ಸಾಕ್ಷಾತ್ಕಾರ ಪ್ರತಿಯೊಬ್ಬ ಮನುಷ್ಯನ ಹಕ್ಕಪ್ಪಾ! ಇದನ್ನು ಎಲ್ಲ ಮಾನವರೂ ಪಡೆಯಬೇಕು" ಎಂದು ಸಾರಿದ್ದಾರೆ. ಇವರ ಮಾತಿನಂತೆಯೇ ನಾವೆಲ್ಲರೂ ನಮ್ಮ ಜೀವನದ ಗುರಿಯೂ, ಮತ್ತು ಹಕ್ಕಾಗಿರುವ ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಸಾಗುವಂತಾಗಲಿ ಮತ್ತು ಈ ಅಕ್ಷಯವಾದ ನಿಧಿಯನ್ನು ಪಡಯುವಂತಾಗಲಿ ಎಂದು ಪ್ರಾರ್ಥನೆ.
ಸೂಚನೆ: 16/09/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.