Showing posts with label author_bgananth. Show all posts
Showing posts with label author_bgananth. Show all posts

Thursday, February 25, 2021

ಗುರುವೆಂಬ ಮಹಾಸಿಂಹ (Guruvemba Mahasinha)

ಲೇಖಕರು:  ವಿದ್ವಾನ್  ಶ್ರೀ ಬಿ.ಜಿ.ಅನಂತ
(ಪ್ರತಿಕ್ರಿಯಿಸಿರಿ lekhana@ayvm.in)



ಒಂದು ದಿನ ಕುರಿಗಾಹಿಯೊಬ್ಬ ಎಂದಿನಂತೆ ಕುರಿಗಳನ್ನು ಮೇಯಿಸಲು ಕಾಡಿನ ಅಂಚಿಗೆ ಹೋದ. ಅಚ್ಚರಿಯೆಂಬಂತೆ ಅಂದು ಕಾಡಿನಲ್ಲಿ ಅವನಿಗೆ ಸಿಂಹದ ಮರಿಯೊಂದು ಕಾಣಿಸಿತು.  ಕುರಿಗಾಹಿಯು ಇನ್ನೂ ಕಣ್ಣು ಬಿಟ್ಟಿರದ ಆ ಪುಟ್ಟ ಮರಿಯನ್ನು ಕರುಣೆಯಿಂದ ಮನೆಗೆ ಕರೆತಂದ. ಅದನ್ನು ತನ್ನ ಮಂದೆಯಲ್ಲಿನ ಕುರಿಮರಿಗಳಂತೆ ಅಕ್ಕರೆಯಿಂದ ಸಾಕಿದ. ಅದು ಕುರಿಗಳ ಹಾಲನ್ನೇ ಕುಡಿಯುತ್ತ ಕುರಿಗಳ ಜೊತೆಯಲ್ಲಿಯೇ ಬೆಳೆದು ದೊಡ್ಡದಾಯಿತು. ತನ್ನ ತಾಯಿಯನ್ನೂ, ಬಂಧುಗಳನ್ನೂ ಕಂಡಿರದ ಸಿಂಹದ ಮರಿಯು ಇತರ ಕುರಿಮರಿಗಳಂತೆಯೇ ಕುರಿಗಳನ್ನೇ ತನ್ನ ಸಂಗಾತಿಗಳೆಂದು ಭಾವಿಸಿಕೊಂಡಿತು. ಕುರಿಮಂದೆಯ ಜೊತೆಗೆ ನಿತ್ಯವೂ ಕಾಡಿನ ಅಂಚಿನಲ್ಲಿ ಮೇಯುತ್ತಾ, ಕುರಿಗಾಹಿಯ ಕೈಯಲ್ಲಿದ್ದ ಬೆತ್ತಕ್ಕೆ ಬೆದರುತ್ತಾ, ತೋಳಗಳನ್ನು ಕಂಡರೆ ಹೆದರಿ ಓಡುತ್ತಾ, ನೋಡನೋಡುತ್ತಲೇ ಬೃಹದಾಕಾರದ ಸಿಂಹವಾಗಿ ಬೆಳೆಯಿತು.

ಹೀಗಿರುವಾಗಲೇ ಒಂದು ದಿವಸ, ಮೇಯುತ್ತಿದ್ದ ಕುರಿಮಂದೆಯನ್ನು ಕಾಡಿನಲ್ಲಿದ್ದ ಮತ್ತೊಂದು ಸಿಂಹವು ಅಕಸ್ಮಾತ್ತಾಗಿ ನೋಡಿತು. ಅದಕ್ಕೆ ಪರಮ ಅಚ್ಚರಿಯೆಂಬಂತೆ ಕುರಿಗಳ ಮಧ್ಯದಲ್ಲಿ ಸುಲಕ್ಷಣವಾದ ಸಿಂಹವೊಂದು ಕಾಣಿಸಿತು. ಮತ್ತಷ್ಟು ಗಮನಿಸಿದಾಗ ಅದರ ಚಲನವಲನಗಳೆಲ್ಲವೂ ಕುರಿಗಳಿಗಿಂತ ಭಿನ್ನವಾಗೇನೂ ಇರಲಿಲ್ಲ. ಕೂಡಲೇ ಕಾಡಿನ ಸಿಂಹವು ಮಂದೆಯ ಕಡೆಗೆ ಧಾವಿಸಿತು. ಅದನ್ನು ಕಂಡು ಕುರಿಗಾಹಿಯೂ, ಕುರಿಮಂದೆಯೂ ದಿಕ್ಕಾಪಾಲಾಗಿ ಚದುರಿಹೋದವು.  ಈ ಸಿಂಹವು ಓಡಿಹೋಗಿ ಮಂದೆಯಲ್ಲಿದ್ದ ಸಿಂಹವನ್ನು ಹಿಡಿದು ನಿಲ್ಲಿಸಿತು. ನಡುಗುತ್ತಾ ನಿಂತಿದ್ದ ಅದನ್ನು ಕುರಿತು, 'ನೀನಾರು ಗೊತ್ತೇ?' ಎಂದು ಪ್ರಶ್ನಿಸಿತು.  'ನಾನೊಂದು ಕುರಿ. ನಾನು ನನ್ನವರೊಂದಿಗೆ ಹೋಗಬೇಕು' ಎಂದುತ್ತರಿಸಿತು ಮಂದೆಯ ಸಿಂಹ.  ಅದಕ್ಕೆ ಕಾಡಿನ ಸಿಂಹವು ನಗುತ್ತಾ, 'ಇಲ್ಲ, ನೀನು ಹೋಗಬೇಕಾದ ದಾರಿ ನಾಡಿನದಲ್ಲ-ಕಾಡಿನದು. ನಿನ್ನ ಬಂಧುಗಳು ಕುರಿಗಳಲ್ಲ-ಸಿಂಹಗಳು.  ನೀನು ಮೃಗರಾಜನಂತೆ ನಿರ್ಭೀತಿಯಿಂದ ಬಾಳ ಬೇಕಾದವನು; ಕುರಿಗಳಂತಲ್ಲ ಎಂದಿತು. ಅನುಮಾನದಿಂದ ನೋಡುತ್ತಾ ನಿಂತಿದ್ದ ಅದನ್ನು ಹತ್ತಿರದಲ್ಲಿದ್ದ ಸರೋವರದ ಬಳಿಗೆ ಕರೆದೊಯ್ದಿತು. ನೀರಿನಲ್ಲಿ ತನ್ನ ದೇಹದ ಪ್ರತಿಬಿಂಬವನ್ನು ನೋಡಿಕೊಳ್ಳಲು ಹೇಳಿ, 'ನೋಡು ನಿನಗೆ ನನ್ನಂತೆಯೇ ಸಿಂಹಗಳಿಗಿರುವ ದೇಹವಿದೆ, ದೊಡ್ಡ ಕೋರೆದಾಡೆಗಳಿವೆ, ಉದ್ದದ ಕೇಸರಗಳಿವೆ. ನೀನು ಕುರಿಗಳ ಮಧ್ಯದಲ್ಲಿ ಬೆಳೆದರೂ ಕುರಿಯಲ್ಲ; ಮೃಗರಾಜ. ಬಾ ನನ್ನ ಜೊತೆಗೆ' ಎಂದಿತು. ತನ್ನ ಬಗ್ಗೆ ಕೇಳಿ ತಿಳಿಯುತ್ತಾ, ತನ್ನ ಪ್ರತಿಬಿಂಬವನ್ನು ನೋಡಿ ಪುನಃ ಪುನಃ ತನ್ನ ಸುಪುಷ್ಟವಾದ ಶರೀರವನ್ನು ನೋಡಿಕೊಳ್ಳುತ್ತಿದ್ದಂತೆ, ಕುರಿಯಂತಿದ್ದ ಸಿಂಹವು, ನಿಜವಾದ ಸಿಂಹವಾಯಿತು. ಅದಕ್ಕೀಗ ಕುರಿಗಾಹಿಯ ಕೋಲಿನ ಭಯವಿಲ್ಲ, ತೋಳಗಳ ಅಂಜಿಕೆಯಿಲ್ಲ, ಅದಕ್ಕೀಗ ಯಾರ ಭಯವೂ ಇಲ್ಲ. ಅದು ಮೊದಲ ಬಾರಿಗೆ ಒಂದು ಸಿಂಹದಂತೆ ಹೆಜ್ಜೆಗಳನ್ನು ಇಡುತ್ತಾ ಕಾಡಿನೊಳಕ್ಕೆ ಪ್ರವೇಶಿಸಿತು.

ಕೇಳುವುದಕ್ಕೆ ಚಂದಮಾಮದ ಕಥೆಯಂತೆ ಕಾಣುವ ಇದು ಜ್ಞಾನಿಗಳ ಕಡೆಯಿಂದ ಬಂದ ಕಥೆಯಾಗಿದೆ. ಸಂಸಾರವೆಂಬ ಕುರಿಮಂದೆಯಲ್ಲಿ ಸಿಲುಕಿ ಎಲ್ಲವಕ್ಕೂ ಹೆದರಿ ಹೆದರಿ ಕುರಿಗಳಂತೆ ಜೀವಿಸುತ್ತಿರುವ ಸಿಂಹದ ಮರಿಗಳು ನಾವೇ ಆಗಿದ್ದೇವೆ. ನಮಗೆ ಆಗಿರುವ ಈ ಆತ್ಮ ವಿಸ್ಮೃತಿಯನ್ನು ಕಳೆದು ನಮ್ಮನ್ನು ನಮ್ಮ ಮೂಲನೆಲೆಯಾದ ಆತ್ಮ ಸಾಮ್ರಾಜ್ಯದ ಕಡೆಗೆ ಕರೆದೊಯ್ಯಲು ಬರುವ ಮತ್ತೊಂದು ಮಹಾ ಸಿಂಹವೇ - ಸರ್ವಜ್ಞನಾದ ಗುರು. ನಮ್ಮ ಮತ್ತು ಗುರುವಿನ ಆತ್ಮಸ್ವರೂಪವು ಒಂದೇ ಆಗಿದೆ. ಅರಿತುಕೊಂಡರೆ, ನಾವೆಲ್ಲರೂ ಆತ್ಮರಾಜ್ಯದ ರಾಜರೇ ಆಗಿದ್ದೇವೆ. ನಮ್ಮನ್ನು ನಾವು ಅರಿತುಕೊಳ್ಳುವುದೇ ಇದರ ಮೊದಲ ಹೆಜ್ಜೆಯಾಗಿದೆ.
ಶ್ರೀರಂಗಮಹಾಗುರುವು, 'ಅಪ್ಪಾ!  ನೀವೆಲ್ಲ ಅಮೃತಪುತ್ರರಾಗಿದ್ದೀರಿ. ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ' ಎಂದಿರುವುದನ್ನು ಈ ಸಿಂಹಗಳ ಕಥೆಗೆ ಅನ್ವಯಿಸಿಕೊಳ್ಳಬಹುದಾಗಿದೆ.

ಸೂಚನೆ: 25/02/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ. 

Monday, June 8, 2020

ಹಳೆಯ ಕಳ್ಳನನ್ನು ಓಡಿಸಲು ಹೊಸ ಉಪಾಯ (Haleya Kallanannu Odisalu Hosa Upaya)

ಲೇಖಕರು:  ವಿದ್ವಾನ್  ಶ್ರೀ ಬಿ.ಜಿ.ಅನಂತ 
(ಪ್ರತಿಕ್ರಿಯಿಸಿರಿ lekhana@ayvm.in)
 


ನಮ್ಮಲ್ಲಿ ದುಷ್ಟ ಅಭ್ಯಾಸಗಳು, ಅನಾತ್ಮ ಗುಣಗಳೆಲ್ಲ ಬಹುಕಾಲದಿಂದ ಇರುತ್ತವೆ. ಕೆಲವೊಂದು ವಂಶಪಾರಂಪರ್ಯವಾಗಿ ಬಂದಿರುವುದೂ ಉಂಟು. ಇದ್ದಕ್ಕಿದ್ದಂತೆ ಅವುಗಳನ್ನು ನಾವೇನಾದರೂ ಅಂಕೆ ಮಾಡಲು ನೋಡಿದರೆ ಅವು ಅಷ್ಟು ಸುಲಭಕ್ಕೆ ಬಗ್ಗುವುದಿಲ್ಲ. ಬದಲಾಗಿ, 'ನಾವಿಲ್ಲಿ ಬಹಳ ಕಾಲದಿಂದಲೂ ಇರುವವರಾಗಿದ್ದೇವೆ. ಇಷ್ಟು ಕಾಲ ಸುಮ್ಮನಿದ್ದು ಈಗೇಕೆ ಗಲಾಟೆ ಮಾಡುತ್ತೀರಿ?' ಎಂದು ತಿರುಗಿ ಬೀಳುತ್ತವೆ. ಈ ಮಾತುಗಳಿಗೆ ಶ್ರೀರಂಗ ಮಹಾಗುರುಗಳು ಘಟನೆಯೊಂದನ್ನು ಉದಾಹರಿಸುತ್ತಿದ್ದರು.

ಅವರ ಹಿರಿಯರ ಕಾಲದಲ್ಲಿ ಒಮ್ಮೆ ಕಾಲರಾ ರೋಗ ಬಂದಿತ್ತಂತೆ. ಆಗಿನ ವಾಡಿಕೆಯಂತೆ ಊರಿನ ಎಲ್ಲರೂ ಹಳ್ಳಿಯನ್ನು ತೊರೆದು ಊರಹೊರಗೆ ವಾಸಿಸತೊಡಗಿದರು. ತಾತ್ಕಾಲಿಕವಾದ ವ್ಯವಸ್ಥೆಯಾದ್ದರಿಂದ ಅಡಿಕೆ-ತೆಂಗಿನ ಗರಿಗಳಿಂದ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು.  

ಗುರುಗಳ ಪೂರ್ವಜರ ಗುಡಿಸಿಲಿನಲ್ಲಿ ಒಂದು ಉಪ್ಪಿನಕಾಯಿಯ ಜಾಡಿ ಇತ್ತು‌.  ಅದರ ಭರ್ತಿ ರುಚಿಯಾದ ಉಪ್ಪಿನಕಾಯಿಗಳು. ದಿನಗಳು ಕಳೆದಂತೆ ಜಾಡಿಯಲ್ಲಿದ್ದ ಉಪ್ಪಿನಕಾಯಿ ನಿರೀಕ್ಷೆಗಿಂತ ವೇಗವಾಗಿ ಖಾಲಿಯಾಗ ತೊಡಗಿತು. ಒಂದು ದಿವಸ ಮನೆಯವರು ನೋಡುತ್ತಿದ್ದಂತೆಯೇ ಗುಡಿಸಲಿನ ಸಂದಿಯಿಂದ ಕೈಯ್ಯೊಂದು ಉಪ್ಪಿನಕಾಯಿಯ ಜಾಡಿಯಿಂದ ಉಪ್ಪಿನಕಾಯಿಯನ್ನು ಕದಿಯುತ್ತಿದೆ! ಇವರು, 'ಕಳ್ಳನು ಸಿಕ್ಕಿಬಿದ್ದ' ಎಂದು ಹೋಗಿ ಹಿಡಿದುಕೊಂಡರಂತೆ. ವಿಶೇಷವೆಂದರೆ, ಸಿಕ್ಕಿಬಿದ್ದ ವ್ಯಕ್ತಿಯು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾ, 'ಎಷ್ಟೋ ದಿನಗಳಿಂದ ನಾನಿಲ್ಲಿ ಉಪ್ಪಿನಕಾಯಿಯನ್ನು ತೆಗೆದುಕೊಳ್ಳುತ್ತಿದ್ದೇನೆ, ಇಂದೇಕೆ ವೃಥಾ ಹುಯಿಲೆಬ್ಬಿಸುತ್ತಿದ್ದೀರಿ?'  ಎಂದನಂತೆ.  ಕಳ್ಳನಿಂದಲೇ ಯಜಮಾನನ ಮೇಲೆ ಆಕ್ಷೇಪ !.  
 ಎಂದರೆ ದುರ್ಗುಣಗಳು ಬಹುಕಾಲ ನಮ್ಮೊಳಗೆ ನೆಲೆಯೂರದಂತೆ ನೋಡಿಕೊಳ್ಳಬೇಕು. ಒಂದುವೇಳೆ ದೀರ್ಘಕಾಲದಿಂದ ತಳವೂರಿಬಿಟ್ಟಿದ್ದರೆ ಉಪಾಯವಾಗಿ ಹೊರಹಾಕಬೇಕಾಗುತ್ತದೆ. ವರ್ಷಗಟ್ಟಲೆ ನಾವೇ ಸಾಕಿದ ನಾಯಿ- ಬೆಕ್ಕುಗಳು ನಮಗೆ ಬೇಡ ಎನಿಸಿದರೆ, ಒಮ್ಮೆಗೇ ಅವುಗಳನ್ನು ಹೊರಹಾಕಲಾಗದು. ಹಾಗೆ ಅವು ಒಮ್ಮೆಲೇ ಹೊರಟುಹೋದರೆ ನಮಗೂ ದುಃಖವಾಗುತ್ತದಷ್ಟೇ.  

ಹೀಗಿರುವಾಗ ಇನ್ನು ಜನ್ಮಾಂತರಗಳಿಂದ ಬಂದ ಸಂಸ್ಕಾರಗಳು ಅಷ್ಟು ಸುಲಭದಲ್ಲಿ ಹೋಗುವುದುಂಟೆ?  ಆದರೆ ಅದಕ್ಕೊಂದು ಉಪಾಯವಿದೆ. ನಮ್ಮ ನಮ್ಮ ಪ್ರಕೃತಿಯನ್ನು ಓಲೈಸಿ ಅದನ್ನು ಒಲಿಸಿಕೊಂಡು, ನಿಧಾನವಾಗಿ ನಮಗೆ ಬೇಡದ ಸಂಸ್ಕಾರಗಳನ್ನು ಹೊರಹಾಕಿ, ಬೇಕಾದ ಆತ್ಮಗುಣಗಳನ್ನು ಒಳಗೆ ಬರಮಾಡಿಕೊಳ್ಳಬೇಕು.

ಪ್ರಕೃತಿಯಲ್ಲಿ ಇದಕ್ಕೆ ಇನ್ನೊಂದು ಉಪಾಯವೂ ಉಂಟು.  ಅದನ್ನು ಒಂದು ಉದಾಹರಣೆಯ ಮೂಲಕ ನೋಡೋಣ. ರಾತ್ರಿಯ ಹೊತ್ತು ಎಲ್ಲರೂ ಮಲಗಿರುವಾಗ ಕಳ್ಳನೊಬ್ಬನು ಮನೆಯನ್ನು ಪ್ರವೇಶಿಸಿದ ಎಂದಿಟ್ಟುಕೊಳ್ಳೋಣ.  ಕಳ್ಳನು ಒಳಗೆ ಬಂದಿರುವುದು ಮನೆಯ ಯಜಮಾನನ ಗಮನಕ್ಕೆ ಬಂದಿದೆ. ತಾನು ಬಂದಿರುವುದು, ಯಜಮಾನನಿಗೆ ತಿಳಿದಿದೆ ಎಂಬುದು ಕಳ್ಳನಿಗೂ ತಿಳಿದುಹೋದರೆ,  ಆಗೇನಾಗುತ್ತದೆ?  ಯಜಮಾನನು ವಿಶೇಷವಾಗಿ ಮತ್ತೇನನ್ನೂ ಮಾಡದಿದ್ದರೂ ಕಳ್ಳನೇ ತಾನೇತಾನಾಗಿ ಮನೆಯಿಂದ ಹೊರಗೆ ಹೋಗಲು ಪ್ರಯತ್ನಿಸುತ್ತಾನಷ್ಟೇ. ನಮಗೆ ಬೇಡದ ದುರ್ಗುಣವೂ ಹಾಗೆಯೇ. ಅದರ ಇರುವು ನಮ್ಮ ಅರಿವಿಗೆ ಬಂದ ಪಕ್ಷದಲ್ಲಿ, ಆ ದುರ್ಗುಣವು ತಾನೇತಾನಾಗಿ ಹೊರಹೋಗುತ್ತದೆ. ಅದಕ್ಕೆ ಸ್ವಲ್ಪ ಸಮಯ ಹಿಡಿದೀತು.

ಇದು ನಮ್ಮ ನಮ್ಮ ಮನಸ್ಸಿಗೆ ಇರುವ ಸಾಮರ್ಥ್ಯ.  ನಾವು ಯಾವುದನ್ನು ಬೇಡ ಎಂದುಕೊಳ್ಳುತ್ತೇವೆಯೋ ಅದು ಹೊರಟುಹೋಗುತ್ತದೆ, ಯಾವುದು ಬೇಕು ಎಂದು ಸ್ವಾಗತಿಸುತ್ತೇವೆಯೋ ಅದು ಒಳಬಂದು ನಿಧಾನವಾಗಿ ಗೂಡುಮಾಡಿಕೊಳ್ಳುತ್ತದೆ. ಹಾಗಾಗಿ ನಮ್ಮೊಳಗೆ ನಮಗೇ ಬೇಡದ ದುರ್ಗುಣಗಳು ಯಾವ ಯಾವುದು ಸೇರಿಕೊಂಡಿದೆ ಎಂಬುದನ್ನು ಪ್ರಾಮಾಣಿಕವಾಗಿ ಗುರುತಿಸಿಕೊಳ್ಳುವ ಕೆಲಸ ಅತ್ಯಂತ ಮುಖ್ಯ. ಗುರುತಿಸಿಕೊಂಡ ಮೇಲೆ ನನಗೆ ಇದು ಖಂಡಿತವಾಗಿಯೂ ಬೇಡ ಎಂಬ ಸಂಕಲ್ಪ ಮಾಡಿಕೊಳ್ಳುವುದು ಮುಂದಿನ ನಡೆ.  ದೈವವೇ! ಈ ಸಲ್ಲದ ಗುಣದಿಂದ ನನ್ನನ್ನು ಪಾರುಮಾಡು ಎಂಬ ಗಟ್ಟಿ ಪ್ರಾರ್ಥನೆಯನ್ನು ಮಾಡಿದರಂತೂ ದುರ್ಗುಣವು ಖಂಡಿತವಾಗಿಯೂ ಹೆಚ್ಚು ಕಾಲ ಉಳಿಯಲಾರದು. ಈ ಪ್ರಯೋಗವನ್ನು ನಾವೆಲ್ಲರೂ ಮಾಡಿ ಯಶಸ್ವಿಯಾಗೋಣ.  

ಸೂಚನೆ: 19/05/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Sunday, February 9, 2020

ಭೋಜನ ಸ್ವೀಕರಿಸಲು ಬೇಕಾದ ಕಾರಣ. (Bhojana sveekarisalu bekaada kaarana)

ಲೇಖಕರು: ವಿದ್ವಾನ್  ಬಿ. ಜಿ.ಅನಂತ.
(ಪ್ರತಿಕ್ರಿಯಿಸಿರಿ : lekhana@ayvm.in)


ಭೋಜನ ಎಂಬುದು ಅವರವರ ಅಭಿರುಚಿ ಮತ್ತು ಸೌಲಭ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹಾಗಿದ್ದರೂ ಭಾರತೀಯ ಶಾಸ್ತ್ರಗಳು ಈ ಬಗ್ಗೆ ಅನೇಕ ವಿಧಿ-ನಿಷೇಧಗಳನ್ನು ಹೇಳಿದೆ. ಅದರಲ್ಲಿ ಯಾರ ಅನ್ನವನ್ನು ಬಳಸಬೇಕು, ಯಾರ ಅನ್ನವನ್ನು ಬಳಸಬಾರದು, ಯಾವ ಸಂದರ್ಭದಲ್ಲಿ ಬಳಸಬಹುದು ಇತ್ಯಾದಿ ವಿಷಯಗಳು ಸೇರಿವೆ. ಈ ಬಗ್ಗೆ  ಮಹಾಭಾರತ್ದಲ್ಲಿ ಒಂದು ಸ್ವಾರಸ್ಯವಾದ ಕಥೆಯಿದೆ.

ಪಾಂಡವರು ವನವಾಸವನ್ನು ಮುಗಿಸಿ ಬಂದ ನಂತರ ಅವರಿಗೆ ನ್ಯಾಯವಾಗಿ ಕೊಡಬೇಕಾಗಿದ್ದ ರಾಜ್ಯವನ್ನು ಕೊಡಲು ದುರ್ಯೋಧನನು ನಿರಾಕರಿಸುತ್ತಾನೆ. ಆಗ ಯುದ್ಧವೇ ಅನಿವಾರ್ಯ ಎಂಬ ಪರಿಸ್ಥಿತಿ ಬಂದೊದಗುತ್ತದೆ. ಯುದ್ಧದಿಂದ ಆಗುವ ಸಾವು-ನೋವುಗಳನ್ನು ಮನಗಂಡ ಧರ್ಮರಾಯನು ಯುದ್ಧವನ್ನು ಬಿಟ್ಟು ಬೇರೆ  ಮಾರ್ಗದಿಂದ ರಾಜ್ಯವನ್ನು ಪಡೆಯಲು ಸಾಧ್ಯವೇ ಎಂದು ಯೋಚಿಸುತ್ತಾನೆ. ಸಂಧಾನಕ್ಕಾಗಿ ಶ್ರೀ ಕೃಷ್ಣನನ್ನು ತನ್ನ ದೂತನನ್ನಾಗಿ ಕಳುಹಿಸುತ್ತಾನೆ. ಸಂತೋಷದಿಂದ ಒಪ್ಪಿದ ಶ್ರೀ ಕೃಷ್ಣನು ಹಸ್ತಿನಾವತಿಯ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ಶ್ರೀ ಕೃಷ್ಣನ ಆಗಮನವನ್ನೂ ಅದರ ಉದ್ದೇಶವನ್ನೂ ಅರಿತ ಕೌರವನು ಶ್ರೀ ಕೃಷ್ಣನನ್ನು ಆತಥ್ಯದಿಂದ ಸಂಪ್ರೀತಿಗೊಳಿಸಿ ಅವನನ್ನೇ ತಮ್ಮ ಕಡೆಗೆ ಸೆಳೆದುಕೊಳ್ಳಲು ಯೋಚಿಸುತ್ತಾನೆ. ಅದಕ್ಕಾಗಿ ಕೃಷ್ಣನಿಗೆ ಪ್ರಿಯವಾದ ಬಗೆ ಬಗೆಯ ಪದಾರ್ಥಗಳನ್ನು ಭೋಜನಕ್ಕಾಗಿ ಸಿದ್ಧಪಡಿಸಲಾಗುತ್ತದೆ. ಆದರೆ ಭಕ್ತಪ್ರಿಯನೂ ಸರಳನೂ ಆದ ಭಗವಂತನು ನೇರವಾಗಿ ತನ್ನ ಅಂತರಂಗದ ಭಕ್ತನಾದ ವಿದುರನ ಮನೆಗೆ ದಯಮಾಡಿಸುತ್ತಾನೆ.

ಅಲ್ಲಿ ಬಹಳ ಪ್ರೀತಿಯಿಂದ ವಿದುರನು ಸಮರ್ಪಿಸಿದ ಹಾಲು ಹಣ್ಣುಗಳನ್ನು ಸ್ವೀಕರಿಸಿ ಸಂತೃಪ್ತನಾಗುತ್ತಾನೆ. ಮಾರನೆಯ ದಿವಸ ಕೌರವನ ಸಭೆಗೆ ಪಾಂಡವರ ದೂತನಾಗಿ ದಯಮಾಡಿಸುತ್ತಾನೆ. ಆಗ ಹಿಂದಿನ ದಿವಸ ಶ್ರೀ ಕೃಷ್ಣನ ಆತಿಥ್ಯಕ್ಕಾಗಿ ನಡೆಸಿದ್ದ ಸಿದ್ಧತೆಯನ್ನು ತಿಳಿಸುತ್ತಾ ಕೌರವನು ಶ್ರೀ ಕೃಷ್ಣನನ್ನು ಹೀಯಾಳಿಸುತ್ತಾನೆ. ನೀನು ಎಷ್ಟಾದರೂ ನೀಚ ಕುಲದವನು. ಆದ್ದರಿಂದಲೇ ನಿನಗೆ ಸಮಾನನಾದ ಅಲ್ಪನಾದ ವಿದುರನಲ್ಲಿ ಆಥಿತ್ಯವನ್ನು ಸ್ವೀಕರಿಸಿದೆ.  ಸರಿಯಾಯಿತು ಬಿಡು. ನಿನಗೆ ರಾಜಯೋಚಿತವಾದ ಭೋಜನವಾದರೂ ಏಕೆ? ಎಂದು. ಅದಕ್ಕೆ ಶ್ರೀ ಕೃಷ್ಣನು ಕೊಡುವ ಉತ್ತರವು ಬಲು ಸೊಗಸಾಗಿದೆ. ಎಲೈ ದುರ್ಯೋಧನನೇ ಯಾರಾದರೂ ಪ್ರೀತಿಯಿಂದ ಕೊಟ್ಟ ಅನ್ನವನ್ನು ಮಾತ್ರವೇ ಸ್ವೀಕರಿಸಬೇಕು. ಅಥವಾ ಪ್ರೀತಿಯಿಂದ ಕೊಡದಿದ್ದರೂ ನಾವು ಆಪತ್ತಿನಲ್ಲಿದ್ದರೆ ಆಗ ದೊರಕುವ ಅನ್ನವನ್ನು ಬಳಸಬಹುದು. ಆದರೆ ನೀನೇನೂ ಪ್ರೀತಿಯಿಂದ ನಮ್ಮನ್ನು ಆದರಿಸಲೂ ಇಲ್ಲ. ಆದರವಿಲ್ಲದಿದ್ದರೂ ಭುಂಜಿಸುವ ಅನಿವಾರ್ಯತೆಯೂ ನನಗೆ ಇರಲಿಲ್ಲ.

ಶ್ರೀ  ಕೃಷ್ಣನ ಮಾತುಗಳು ಎಷ್ಟೊಂದು ಸರ್ವಕಾಲಿಕವಾಗಿದೆಯಲ್ಲವೇ.   

ಸೂಚನೆ: 08/02/2020 ರಂದು ಈ ಲೇಖನ ಉದಯವಾಣಿಯ ಬಹುಮುಖಿ ಅಂಕಣದಲ್ಲಿ ಪ್ರಕಟವಾಗಿದೆ

Tuesday, January 14, 2020

ಭಗವಂತನ ಸಾಕ್ಷಾತ್ಕಾರಕ್ಕಾಗಿ ತಪಸ್ಸಿರಲಿ (Bhagavanthana saakshathkarakkagi thapassirali)

ಲೇಖಕರು:  ವಿದ್ವಾನ್ ಶ್ರೀ ಬಿ.ಜಿ.ಅನಂತ
(ಪ್ರತಿಕ್ರಿಯಿಸಿರಿ lekhana@ayvm.in)



ತಪಸ್ಸು ಎಂದರೆ ಸುಡುವುದು ಎಂದರ್ಥ. ಯಾವುದನ್ನು ಸುಡುವುದು? ಎಂದರೆ, ಯಾವುದು ನಮಗೂ ಭಗವಂತನಿಗೂ ನಡುವೆ ಅಡ್ಡಿಯಾಗಿ ನಿಂತಿದೆಯೋ ಅಂತಹ ನಮ್ಮೊಳಗಿನ ಪಾಪವನ್ನು.  ಪ್ರಧಾನವಾಗಿ ಎರಡು ಉದ್ದೇಶಗಳಿಗಾಗಿ ತಪಸ್ಸನ್ನು ಆಚರಿಸುತ್ತಾರೆ. ಮೊದಲನೆಯದು ಕೇವಲ ಮೋಕ್ಷಕ್ಕಾಗಿ, ಭಗವಂತನ ಸನ್ನಿಧಿಯನ್ನು ಸವಿಯುವ ಆನಂದಕ್ಕಾಗಿ. ಹಾಗಲ್ಲದೆ ಐಹಿಕವಾದ ವಿವಿಧ ಕಾಮನೆಗಳನ್ನು ಪಡೆಯಲು ಆಚರಿಸುವುದು ಎರಡನೆಯ ಕಾರಣ. ಧರ್ಮಕ್ಕೆ ವಿರುದ್ಧವಲ್ಲದ ಕಾಮನೆಗಳು ತಪ್ಪಲ್ಲ. ಹಾಗಾಗಿ ಅವುಗಳನ್ನು ಈಡೇರಿಸಿಕೊಳ್ಳಲು ಆಚರಿಸುವ ತಪಸ್ಸು ಕೂಡ ತಪ್ಪಲ್ಲ. ಆದರೆ 'ಬೇಕಾದುದನ್ನು ಕೇಳಿಕೋ' ಎಂದು ದೈವವು ಎದುರಿಗೆ ನಿಂತಾಗ, ಏನನ್ನು ಕೇಳಬೇಕು ಎಂಬ ವಿವೇಕವು ಅತ್ಯಗತ್ಯ. ವರವನ್ನು ಕೇಳುವ ಸಮಯದಲ್ಲಿ ಮೈಮರೆತು ವಿನಾಶಕಾರಿಯಾದ ವರಗಳನ್ನು ಕೇಳಿ, ಅದರ ಫಲವಾಗಿ ಸ್ವತಃ ತಾವೇ ನಷ್ಟರಾಗಿಹೋದ ಕುಂಭಕರ್ಣ ಭಸ್ಮಾಸುರಾದಿಗಳ ಉದಾಹರಣೆಗಳು ಕಣ್ಣ ಮುಂದಿವೆ.

  ಹೀಗೆ ಸಮಯದಲ್ಲಿ ಮೈ ಮರೆಯುವಂತೆ ಮಾಡುವ ಶಕ್ತಿಗಳು ರಜಸ್ಸು ಮತ್ತು ತಮಸ್ಸು ಎಂಬುದಾಗಿ. ಇವು ಅಧಿಕವಾಗಿರುವ ದೇಹಪ್ರಕೃತಿಯನ್ನು ಹೊಂದಿರುವವರಿಗೆ ತಪಸ್ಸಿನ ಆಚರಣೆಯು ಅನುಕೂಲಕರವಲ್ಲ. ತಪಸ್ಸನ್ನು ಆಚರಿಸಿದ ಹೆಚ್ಚಿನ ದೈತ್ಯ-ದಾನವರು, ವರವಾಗಿ ಕೇಳಿಕೊಂಡದ್ದು ಅತೀಂದ್ರಿಯ ಶಕ್ತಿ ಸಾಮರ್ಥ್ಯಗಳನ್ನು. ಆದರೆ ಅವುಗಳನ್ನು ಬಳಸಿಕೊಂಡು, ಮಾಡಿದ್ದು ಮಾತ್ರ ಲೋಕ ವಿನಾಶಕರವಾದ ಕಾರ್ಯಗಳನ್ನು ತಾನೇ. 

ತನ್ನ  ತಲೆಗಳನ್ನೇ ಕಡಿದು ಅಗ್ನಿಗೆ ಅರ್ಪಿಸಿದ ರಾವಣನು ಸುದಾರುಣವಾದ ತಪಸ್ಸನ್ನೇ ಆಚರಿಸಿದನಷ್ಟೇ. ಆದರೆ ಸಾಂಬಶಿವನು ಎದುರಿಗೆ ಬಂದು ನಿಂತಾಗ ಕೇಳಿದ್ದು ಮಾತ್ರ 'ಪಾರ್ವತಿಯನ್ನು  ಕೊಡು'; ಎಂದು. ಎಂದರೆ ಜಗನ್ಮಾತೆಯನ್ನೇ ಕಾಮಿಸುವ ಹೊಲಸು ಕಾಮವು ಪ್ರಕೃತಿಯಲ್ಲಿ ತುಂಬಿಕೊಂಡಿದೆ. ಇದೇ ಹೆಜ್ಜೆಯ ಮುಂದುವರಿಕೆಯಾಗಿ ಮುಂದೆ ಅವನು ಸೀತಾಮಾತೆಯನ್ನು ಕೂಡ ಕಾಮಿಸಿದನು ಎಂದು ಶ್ರೀರಂಗ ಮಹಾಗುರುವು ಉಲ್ಲೇಖಿಸಿದ್ದರು.  

   ಹೀಗಿರುವುದರಿಂದಲೇ 'ತಪಸ್ಸು ಎಲ್ಲರಿಗೂ ಅಲ್ಲ; ಈ ಬಗ್ಗೆ ಎಚ್ಚರಿಕೆಯು ಅಗತ್ಯ' ಎಂಬ ಮಾತನ್ನು  ಶ್ರೀಗುರುವು, ಇದೇ ರಾವಣನ ಉದಾಹರಣೆಯನ್ನೇ ಕೊಟ್ಟು ಹೇಳಿರುವುದುಂಟು. ಅದರಿಂದ ತಪಸ್ಸು ಮುಖ್ಯವಾಗಿ ಭಗವಂತನ ಸಾಕ್ಷತ್ಕಾರಕ್ಕಾಗಿಯೇ ಇರಬೇಕೆಂಬುದು ಭಾರತೀಯ ಮಹರ್ಷಿಗಳ ನೋಟ .  

ಸೂಚನೆ 13/1/2020ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, August 3, 2019

ಜೀವಾಳವೋ? ತಂಬುರವೋ? (Jeevalavo? Tamburavo?)

ಲೇಖಕರು: ವಿದ್ವಾನ್ ಬಿ. ಜಿ. ಅನಂತ 


ಜೀವನದಲ್ಲಿ ಯಾವುದು ಮುಖ್ಯ ಯಾವುದು ಅಮುಖ್ಯ ಎಂದು ತೀರ್ಮಾನಿಸಿ ಕೊಳ್ಳುವುದು ಬಹಳ ಮುಖ್ಯ.  ಇರುವ ಪದಾರ್ಥಗಳಲ್ಲಿ ಅತಿ ಮುಖ್ಯವಾದದ್ದನ್ನು ಗುರುತಿಸಲು ನಮಗೇ ಸ್ವತಃ ಒಂದು ತಿಳುವಳಿಕೆ ಬೇಕು.  ಅದನ್ನು 'ವಿವೇಕ' ಎನ್ನುತ್ತಾರೆ.  ಅದು ಎಲ್ಲರಿಗೂ ಎಲ್ಲ ಕಾಲಗಳಲ್ಲಿಯೂ ಇರಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಜ್ನಾನಿಗಳಿಂದ, ಮಹಾತ್ಮ ರಿಂದ ಅದನ್ನು ಕೇಳಿ ತಿಳಿಯಬೇಕು. ಜೀವನದಲ್ಲಿ ಮುಖ್ಯವಾದದ್ದನ್ನು ಗೌಣ ಎಂದು ಕೊಳ್ಳುವುದು, ಗೌಣವಾದದ್ದನ್ನು ಮುಖ್ಯ ಎಂದುಕೊಳ್ಳುವುದು ಈ ಎರಡೂ ಅನರ್ಥಕಾರಿಯೇ.  ಶ್ರೀರಂಗ ಮಹಾಗುರುಗಳು ಈ ಕುರಿತು ಹಾಸ್ಯಮಯವಾದ ಕಥೆಯೊಂದನ್ನು ಹೇಳುತ್ತಿದ್ದರು-

   ಒಬ್ಬ ದಾಸಯ್ಯನಿದ್ದ.  ಯಾವಾಗಲೂ ದೇವರ ಧ್ಯಾನ ಜಪ ಭಜನೆಗಳನ್ನು ಮಾಡಿಕೊಂಡಿರುವುದು, ಹೊಟ್ಟೆಪಾಡಿಗಾಗಿ ನಾಲ್ಕಾರು ಮನೆಗಳ ಮುಂದೆ ಹಾಡುತ್ತಾ ಭಿಕ್ಷೆ ಬೇಡುವುದು- ಹೀಗೆ ಜೀವನ ಸಾಗಿಸುತ್ತಿದ್ದ. ಹಾಡುವಾಗ ಶ್ರುತಿ ಹಿಡಿಯಲೆಂದು ಒಂದು ತಂಬೂರವನ್ನು ಇಟ್ಟುಕೊಂಡಿದ್ದ. ಇಂದು ಈ ಊರು, ನಾಳೆ ಮುಂದಿನ ಊರು ಹೀಗೆ ಅವನ ಜೀವನ ಸಾಗಿತ್ತು. 

    ಒಮ್ಮೆ ಹೀಗೆಯೇ ಭಿಕ್ಷೆಗಾಗಿ ಒಂದು ಹಳ್ಳಿಯ ಕಡೆಗೆ ಸಾಗುತ್ತಿದ್ದ. ಕಾಡಿನ ದಾರಿ.  ಕೈಯಲ್ಲಿ ತಂಬೂರಿಯನ್ನು ಮೀಟಿಕೊಂಡು ದೇವರ ನಾಮ ಹಾಡುತ್ತಾ ನಡೆಯುತ್ತಿದ್ದ.  ಇದ್ದಕ್ಕಿದ್ದಂತೆ ದರೋಡೆಕಾರರ ಗುಂಪೊಂದು ಇವನನ್ನು ಹಿಡಿಯಿತು. ಎಲ್ಲಾ ಹುಡುಕಿದರು. ಇವನ ಬಳಿ ಏನೂ ಸಿಗಲಿಲ್ಲ. ಆದರೆ ಹಿಡಿದಮೇಲೆ ಏನನ್ನಾದರೂ ಕಿತ್ತುಕೊಳ್ಳದೇ ಕಳುಹಿಸುವುದು ಅಪಮಾನವಲ್ಲವೇ.  ಹಾಗಾಗಿ ದರೋಡೆಕೋರರ ನಾಯಕನು  ಇವನಿಂದ ಏನನ್ನು ಕಿತ್ತುಕೊಳ್ಳಬಹುದು ಎಂದು ನೋಡುತ್ತಿದ್ದ. ಅವನ ಕಣ್ಣಿಗೆ ದಾಸಯ್ಯನ ಕೈಯಲ್ಲಿದ್ದ ತಂಬೂರ ಕಾಣಿಸಿತು. ಸರಿ ಅದನ್ನೇ ಕಿತ್ತುಕೊಂಡ.  ಪಾಪ, ನಮ್ಮ ದಾಸಯ್ಯನಿಗೆ ಜಂಘಾಬಲವೇ ಉಡುಗಿಹೋಯಿತು.  ತಂಬೂರವಿಲ್ಲದಿದ್ದರೆ ಹಾಡುವಾಗ ಶ್ರುತಿ ತಪ್ಪಬಹುದು, ಭಿಕ್ಷೆ ಬೇಡಲೂ ತೊಂದರೆ. ತಂಬೂರವನ್ನು ಹೇಗಾದರೂ ಪಡೆಯಬೇಕು. ಆದರೆ ಹೇಗೆ?  ದಾಸಯ್ಯ ಬಹಳ ಬುದ್ಧಿವಂತನಿದ್ದ. ಅವನು ಕಳ್ಳರ ನಾಯಕನನ್ನು ಕುರಿತು ಹೇಳಿದನಂತೆ, 'ಅಯ್ಯಾ! ತಂಬೂರವನ್ನು ಬೇಕಾದರೆ ನೀವೇ ಇಟ್ಟುಕೊಳ್ಳಿ.  ನನಗೇನೂ ತೊಂದರೆ ಇಲ್ಲ. ಆದರೆ ಅದರಲ್ಲಿರುವ ಜೀವಾಳವನ್ನು ಮಾತ್ರ ಕೊಟ್ಟುಬಿಡಿ. ನನ್ನ ಹೊಟ್ಟೆ ತುಂಬಿಸುವುದು ಅದೇ. ಅದನ್ನು ಕೊಟ್ಟು ಪುಣ್ಯಕಟ್ಟಿಕೊಳ್ಳಿ' ಎಂದು ಗೋಗರೆದ. 
   
      ವಾಸ್ತವವಾಗಿ ಜೀವಾಳವೆಂದರೆ  ಕಂಬಳಿಯ ಸಣ್ಣ ದಾರ. ನಾದವು ಚೆನ್ನಾಗಿ ಬರಲಿ ಎಂದು ತಂಬೂರಕ್ಕೆ ಅಳವಡಿಸಿರುತ್ತಾರೆ. ಈ ಕಳ್ಳರ ನಾಯಕನಿಗೆ ತಂಬೂರದ ಬಗ್ಗೆ ಯಾವ ತಿಳುವಳಿಕೆಯೂ ಇರಲಿಲ್ಲ. ಅವನು ಯೋಚಿಸಿದ, 'ಇವನು ಇಷ್ಟೊಂದು ಕೇಳುತ್ತಿರುವುದನ್ನು ನೋಡಿದರೆ ಇದರಲ್ಲಿ ಈ ಜೀವಾಳ ಎಂಬುದೇ ಮುಖ್ಯ ಎನಿಸುತ್ತದೆ' ಎಂದು. ಹಾಗಾಗಿ ಆ ಜೀವಾಳವನ್ನು ತಾನು ಇಟ್ಟುಕೊಂಡು ತಂಬೂರವನ್ನು ದಾಸಯ್ಯನಿಗೆ ಕೊಟ್ಟುಬಿಟ್ಟನಂತೆ. ದಾಸಯ್ಯನು ಬದುಕಿದೆ ಎಂದುಕೊಂಡು ಜಾಗ ಖಾಲಿ ಮಾಡಿದ.  ಮುಂದೆ ತನ್ನ ಬಳಿ ಇದ್ದ ಕಂಬಳಿಯಿಂದ ಒಂದು ದಾರವನ್ನು ತೆಗೆದು ತಂಬೂರಕ್ಕೆ ಜೀವಾಳ ಮಾಡಿಕೊಂಡನಂತೆ.

     ಇದು ಜ್ಞಾನಿಗಳ ಕಡೆಯಿಂದ ಬಂದ ಕಥೆ. ಪದಾರ್ಥಗಳ ವಿಜ್ಞಾನವನ್ನು ತಿಳಿಯದಿದ್ದರೆ ಜೀವನದಲ್ಲಿ ಸುಖವಿಲ್ಲ ಎಂಬ ಸಂದೇಶವನ್ನು ಕೊಡುವಂತೆ ಮೇಲ್ನೋಟಕ್ಕೆ ಕಾಣುತ್ತದೆ.  ಆದರೆ ಒಳಗಿನ ಅರ್ಥವು ಬೇರೊಂದೇ ಇದೆ. ಜೀವನದಲ್ಲಿರುವ ಬಗೆಬಗೆಯಾದ ಸುಖ ಸಂತೋಷಗಳನ್ನು ಅನುಭವಿಸೋಣ;  ಆದರೆ ಇವೆಲ್ಲಕ್ಕಿಂತ ಅತ್ಯಂತ ಪ್ರಧಾನವಾದುದು ಭಗವಂತನ ಸಾಕ್ಷಾತ್ಕಾರ ಸುಖ. ಅದನ್ನು ಬಿಟ್ಟು ಉಳಿದ ಸಣ್ಣಪುಟ್ಟ  ಪದಾರ್ಥಗಳೇ ಬಹಳ ಮುಖ್ಯ ಎಂದು ಭ್ರಮಿಸಿ ಜೀವನವನ್ನು ಕಳೆದುಬಿಡುವುದು ಬುದ್ಧಿವಂತಿಕೆಯಲ್ಲ.  ಹಾಗೊಂದು ವೇಳೆ ನಡೆದರೆ ಅದು, ತಂಬೂರವನ್ನು ಬಿಟ್ಟು ಕಂಬಳಿಯ ನೂಲೇ ಮುಖ್ಯ ಎಂದುಕೊಂಡಂತೆ ಆಗುತ್ತದೆ  ಎಂಬುದು ಜ್ಞಾನಿಗಳ ಹೃದಯದ ಮಾತು. 

ಸೂಚನೆ:  03/08/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Wednesday, July 3, 2019

ಕೃಷ್ಣಾನುಕರಣೆ (Krishnanukarane)

ಲೇಖಕರು: ವಿದ್ವಾನ್ ಬಿ.ಜಿ. ಅನಂತ




ಪೌಂಡ್ರಕ ವಾಸುದೇವ ಎಂಬ ಹೆಸರಿನ ರಾಜನೊಬ್ಬನಿದ್ದ.  ಅವನು ಶ್ರೀಕೃಷ್ಣನ ಕಾಲದವನು. ಆ ವೇಳೆಗಾಗಲೇ ಶ್ರೀಕೃಷ್ಣನು ಬಹಳ ಜನಪ್ರಿಯವಾಗಿದ್ದ. ಅವನ ಸಾಹಸಗಳು, ಅವನ ಸುಂದರ ರೂಪ, ಯಾರಲ್ಲೂ  ಇಲ್ಲದ ಅವನ ಆಯುಧಗಳು, ನವಿಲುಗರಿ ಎಲ್ಲವೂ ಕೃಷ್ಣನನ್ನು ವಿಶಿಷ್ಟ ವ್ಯಕ್ತಿಯನ್ನಾಗಿ ಮಾಡಿದ್ದವು.


ಶ್ರೀಕೃಷ್ಣನ ತಂದೆ ವಸುದೇವ. ಕಾಕತಾಳೀಯವಾಗಿ ಪೌಂಡ್ರಕನ ತಂದೆಯ ಹೆಸರೂ ಕೂಡ ವಸುದೇವ ಎಂದೇ.  ಹಾಗಾಗಿ ವಸುದೇವನ ಮಗನಾದ್ದರಿಂದ ನಿಜವಾದ ವಾಸುದೇವನು ನಾನೇ ಎಂಬ ಭ್ರಮೆಯು ಪೌಂಡ್ರಕನನ್ನು ಆವರಿಸಿತು.  ಕೃಷ್ಣನ ವೇಷಭೂಷಣಗಳು, ಹಾವಭಾವಗಳೆಲ್ಲವನ್ನೂ ಪೌಂಡ್ರಕನು ಅನುಕರಿಸತೊಡಗಿದ. ಕೃಷ್ಣನಂತೆಯೇ ಪೀತಾಂಬರವನ್ನುಟ್ಟ,  ಕಿರೀಟ ತೊಟ್ಟ, ಅದಕ್ಕೊಂದು ನವಿಲುಗರಿಯನ್ನೂ ಸಿಕ್ಕಿಸಿಕೊಂಡ. ಊದಲು ಬಾರದಿದ್ದರೂ ಚಿನ್ನದ ಕೊಳಲನ್ನು ಹಿಡಿದ.ಎಡ-ಬಲ ಭುಜಗಳಿಗೆ ಶಂಖ ಚಕ್ರಗಳನ್ನು ಕಟ್ಟಿಕೊಂಡ. ವಿಷ್ಣುವಿನ ವಾಹನವಾದ ಗರುಡನನ್ನು ಹೋಲುವ ಕೃತ್ರಿಮವಾದ ಗರುಡನನ್ನು ಮಾಡಿಸಿಕೊಂಡ.  ಇವೆಲ್ಲವುಗಳಿಂದ ಅವನ ಭ್ರಮೆಯು ಮತ್ತಷ್ಟು ಬಲಿಯುತ್ತ ಹೋಯಿತು. ಸದಾ ಕಾಲದಲ್ಲೂ ‘ನಾನೇ ಕೃಷ್ಣ ನಾನೇ ಕೃಷ್ಣ’ ಎಂಬ ಭಾವದಿಂದ ನಿರಂತರ ಕೃಷ್ಣ ಧ್ಯಾನವು ಮೊದಲಾಯಿತು.

ಕೊನೆಗೊಂದು ದಿವಸ ಕೃಷ್ಣನಿಗೇ ಹೇಳಿ ಕಳುಹಿಸಿದನಂತೆ- ನಾನೇ ನಿಜವಾದ ಕೃಷ್ಣ, ನೀನು ಕಪಟ ವೇಷಧಾರಿ, ಹಾಗಾಗಿ ನಿನ್ನ ವೇಷಭೂಷಣಗಳನ್ನು ಕಳಚಿ ನನಗೆ ಶರಣಾಗು. ಇಲ್ಲವೇ ಯುದ್ಧಕ್ಕೆ ಬಾ ಎಂದು.

ಸರಿ ಇದೇನು ತಮಾಷೆ ಎಂದು ನೋಡಲು ಶ್ರೀಕೃಷ್ಣನೇ ಯುದ್ಧಕ್ಕೆ ಬರುತ್ತಾನೆ.  ನೋಡಿದರೆ ಆಶ್ಚರ್ಯವಾಗುವಂತೆ ತನ್ನ ತದ್ರೂಪಿನಂತೆ ನಿಂತಿದ್ದಾನೆ ಪೌಂಡ್ರಕ ವಾಸುದೇವ. ಅವನನ್ನು ನೋಡಿ ಕೃಷ್ಣನು ಪಕಪಕನೇ ನಕ್ಕನಂತೆ. ಯುದ್ಧದಲ್ಲಿ ಪೌಂಡ್ರಕನನ್ನು ತನ್ನ ಚಕ್ರಾಯುಧದಿಂದ ಸಂಹರಿಸುತ್ತಾನೆ ಶ್ರೀಕೃಷ್ಣ. ಆಗ ಎಲ್ಲರೂ ನೋಡುವಂತೆ ಪೌಂಡ್ರಕನ ದೇಹದಿಂದ ಹೊರ ಹೊರಟ ಜ್ಯೋತಿಯೊಂದು ಶ್ರೀಕೃಷ್ಣನಲ್ಲಿ ಸೇರಿಕೊಂಡಿತು.  ಎಂದರೆ ಪೌಂಡ್ರಕನಿಗೆ ಸದ್ಗತಿಯೇ ದೊರೆಯಿತು.
   
ತಮ್ಮನ್ನೇ ತಾವು ಮರೆತು ಕೇವಲ ಭಗವಂತನನ್ನು ಧ್ಯಾನಿಸುವುದು ದೊಡ್ಡ ದೊಡ್ಡ ಭಕ್ತರಿಗೂ ಕಷ್ಟಕರವಾದುದು.  ಆದರೆ ಪೌಂಡ್ರಕನ ಕೃಷ್ಣಾನುಕರಣೆಯು, ತಾನು ಪೌಂಡ್ರಕ ವಾಸುದೇವ ಎಂಬುದನ್ನೇ ಮರೆತು ಶ್ರೀಕೃಷ್ಣನೇ ತಾನು ಎಂಬ ತಾದಾತ್ಮ್ಯವು  ಬೆಳೆದು ಬಿಡುವಷ್ಟು ಗಾಢವಾಗಿದ್ದಿತು. ಮಹಾ ಭಕ್ತರಿಗೂ ಈ ಮಟ್ಟದ ತಾದಾತ್ಮ್ಯವು ಸುಲಭವಾಗಿ ದೊರಕುವಂಥದ್ದಲ್ಲ.

  ಹೀಗೆ ಜೀವನದುದ್ದಕ್ಕೂ ತನ್ನನ್ನು ತಾನು ಕೃಷ್ಣ ಎಂದುಕೊಂಡ ಪೌಂಡ್ರಕನು ಕೊನೆಯಲ್ಲಿ ಕೃಷ್ಣನಲ್ಲಿ ಸೇರಿ ನಿಜವಾಗಿ ಕೃಷ್ಣನೇ ಆಗಿ ಹೋಗುತ್ತಾನೆ. ಇದೊಂದು  ಪರಮಾಶ್ಚರ್ಯಕರವಾದ ಭಕ್ತಿಯ ವಿಧ.


ಸೂಚನೆ:  3/07/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Thursday, June 6, 2019

ಕರಡಿಯಾದ ಕಂಬಳಿ (Karadiyada kambali)

ಲೇಖಕರು: ಬಿ.ಜಿ. ಅನಂತ

ಈ ಪ್ರಪಂಚವು ಅಸಂಖ್ಯ ವಸ್ತುಗಳಿಂದಲೂ ಅಗಣಿತವಾದ ವಿಷಯಗಳಿಂದಲೂ ತುಂಬಿಹೋಗಿದೆ.  ಅವುಗಳ ಮಧ್ಯದಲ್ಲೇ ನಮ್ಮ ಜೀವನವು ಸಾಗಬೇಕು. ಹಾಗಿರುವಾಗ ನಮಗೆ ಬೇಕಾದ ವಸ್ತು ವಿಷಯಗಳಿಗೆ ಮಾತ್ರ ಕೈಚಾಚುವುದು ವಿವೇಕವೆನಿಸುತ್ತದೆ.  ಹಾಗಲ್ಲದೆ ಕಂಡ ಕಂಡ ವಸ್ತುಗಳನ್ನೆಲ್ಲಾ ಅಪ್ಪಿಕೊಳ್ಳಲು ಹೋದರೆ ಮುಂದೊಮ್ಮೆ ನಾವೇ ಅವುಗಳ ಹಿಡಿತಕ್ಕೆ ಸಿಕ್ಕಿ ಬಿಡಿಸಿಕೊಳ್ಳಲಾಗದೆ ಒದ್ದಾಡುವಂತೆ ಆಗಬಹುದು.  'ನಾನು ಇದನ್ನು ಏನೋ ಎಂದುಕೊಂಡು ಸ್ವೀಕರಿಸಿ ಬಿಟ್ಟೆ, ಆದರೆ ಈಗ ನೋಡಿದರೆ ಇದು ಮತ್ತೇನೋ ಆಗಿಬಿಟ್ಟಿದೆ' ಎಂದು ನಿಡುಸುಯ್ಯುವಂತೆ ಆಗಬಹುದು.  ಈ ಬಗ್ಗೆ ಶ್ರೀರಂಗ ಗುರುಗಳು ಸ್ವಾರಸ್ಯಕರ ಕಥೆಯೊಂದನ್ನು ಹೇಳುತ್ತಿದ್ದರು.

ಒಮ್ಮೆ ಒಂದು ಹೊಳೆಯ ದಡದಲ್ಲಿ ಇಬ್ಬರು ಸ್ನೇಹಿತರು ನಿಂತಿದ್ದರು. ಉಕ್ಕಿ ಹರಿಯುತ್ತಿದ್ದ ಹೊಳೆಯ ಅಬ್ಬರವನ್ನು ನೋಡುತ್ತಾ ಮೈಮರೆತು ಆನಂದಿಸುತ್ತಿದ್ದರು.  ಅಷ್ಟರಲ್ಲಿ ಹೊಳೆಯ ಮಧ್ಯದಲ್ಲಿ ಕಪ್ಪಗಿನ ವಸ್ತುವೊಂದು ತೇಲಿಬರುತ್ತಿರುವುದು ಕಾಣಿಸಿತು.  ಆ ಇಬ್ಬರಲ್ಲಿ ಚೆನ್ನಾಗಿ ಈಜು ಬಲ್ಲವನು, 'ಅದೋ ಅಲ್ಲಿ ನೋಡು, ಒಂದು ಒಳ್ಳೆಯ ಕರಿಯ ಕಂಬಳಿಯು ಪ್ರವಾಹದಲ್ಲಿ ತೇಲಿ ಬರುತಿದೆ. ಯಾವುದಕ್ಕಾದರೂ ಬೇಕಾಗುತ್ತದೆ.  ಈಗಲೇ ತರುತ್ತೇನೆ' ಎಂದು ನೀರಿಗೆ ಬಿದ್ದು ಪ್ರವಾಹದಲ್ಲಿ ಈಜತೊಡಗಿದ. ಪ್ರಯಾಸದಿಂದ ಈಜಿ  ಈಜಿ ಕೊನೆಗೂ ಆ ಕಪ್ಪಗಿನ ವಸ್ತುವನ್ನು ಹಿಡಿದುಕೊಂಡ.  ಆದರೆ ಕೂಡಲೇ ಕೂಗಿಕೊಂಡನಂತೆ- 'ಗೆಳೆಯಾ ಇದು ಕಂಬಳಿಯಲ್ಲ, ಕರಡಿ'.  ಕೂಡಲೇ ದಡದಲ್ಲಿದ್ದ ಗೆಳೆಯನೂ ಕೂಗಿ ಹೇಳಿದನಂತೆ 'ಹಾಗಾದರೆ ಏಕೆ ಹಿಡಿದುಕೊಂಡಿದ್ದೀಯೆ?  ಬಿಟ್ಟು ಬಾ ಅದನ್ನು' ಎಂದು.  'ಅಯ್ಯೋ! ನಾನು ಬಿಟ್ಟರೂ ಅದು ನನ್ನನ್ನು ಬಿಡುತ್ತಿಲ್ಲ' ಎಂದು ಮಾರುತ್ತರ ಬಂದಿತು. ಎಂದರೆ ಇವನು ಕರಡಿಯನ್ನು ಬಿಟ್ಟರೂ, ಕರಡಿಯು ಇವನನ್ನು ಬಿಡುತ್ತಿಲ್ಲ. 

ಇದು ನಮ್ಮಗಳದ್ದೇ ಕಥೆ. ನಮಗೆ ಅಗತ್ಯವಾಗಿ ಬೇಕಾದದ್ದು ಎಂದು ನಾವು ಅನೇಕ ಪದಾರ್ಥಗಳನ್ನು  ಆಸೆಪಡುತ್ತೇವೆ.  ಅವುಗಳನ್ನು ಪಡೆಯಲು ಎಷ್ಟೆಷ್ಟೋ ಶ್ರಮಪಡುತ್ತೇವೆ.  ಅದಕ್ಕಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನೂ, ಅಮೂಲ್ಯವಾದ ಸಮಯವನ್ನೂ ವ್ಯಯಿಸುತ್ತೇವೆ.  ಇಷ್ಟೆಲ್ಲ ಆಗಿ ಸ್ವಲ್ಪ ಕಾಲದ ನಂತರ ನಮಗೆ ಅರಿವಾಗುತ್ತದೆ - ನನಗೆ ಬೇಕಿದ್ದದ್ದು ಇದಲ್ಲ. ನಾನು ಅಂದುಕೊಂಡಿದ್ದೇ ಬೇರೆ, ಈ ವಸ್ತುವೇ ಬೇರೆ ಎಂದು.  ಎಷ್ಟೋ ಬಾರಿ ಹೀಗಾಗುವುದುಂಟು ಅಲ್ಲವೇ! ಆದರೆ ಏನು ಮಾಡುವುದು?  ಈಗಾಗಲೇ ನಾವೇ ಅಪ್ಪಿಕೊಂಡ ವಸ್ತು ಅದು.  ಈಗ ಗಟ್ಟಿಯಾಗಿ ಅಂಟಿಕೊಂಡಿದೆ.  ಆದ್ದರಿಂದ ಯಾವುದನ್ನೇ ಆಗಲಿ ಹಚ್ಚಿಕೊಳ್ಳುವ ಮುನ್ನ ಚೆನ್ನಾಗಿ ಯೋಚಿಸಬೇಕು.  ಶ್ರೀರಂಗ ಮಹಾಗುರುವು ಈ ಬಗ್ಗೆ ಹೇಳುತ್ತಾ, "ವಿಶ್ವಾಸವಿಟ್ಟು ಅನಂತರ ನಿಶ್ವಾಸ ಬಿಡುವಂತೆ ಆಗಬಾರದು" ಎನ್ನುತ್ತಿದ್ದರು. ಈ ಬಗ್ಗೆ ಎಚ್ಚರಿಕೆ ಅಗತ್ಯ.  ಒಂದಷ್ಟು ಕಾಲ ನಾಯಿ ಬೆಕ್ಕುಗಳನ್ನು ಸಾಕಿಬಿಟ್ಟರೆ ಆಮೇಲೆ ನಮಗೆ ಬೇಡವೆನಿಸಿದರೂ ಅವುಗಳನ್ನು ಬಿಡಲಾಗದು.  ಏಕೆಂದರೆ, ತಳ್ಳಿದರೂ ಅವು ಮನೆಯನ್ನು ಬಿಟ್ಟು ಹೋಗಲೊಲ್ಲವು.  ಕೆಲವು ವಿಷಯಗಳೂ ಹೀಗೆಯೇ.  ಒಮ್ಮೆ ನಮ್ಮ ತಲೆಯಲ್ಲಿ ಜಾಗ ಕೊಟ್ಟೆವೋ - ಮುಗಿಯಿತು.  ನಮ್ಮನ್ನು ಗಟ್ಟಿಯಾಗಿ ಅಂಟಿಕೊಂಡು ಬಿಡುತ್ತವೆ. ಹಾಗಾಗಿ ಅನಗತ್ಯ ವಿಷಯಗಳನ್ನು,ಮಾಹಿತಿಗಳನ್ನು ನಮ್ಮತಲೆಗಳಲ್ಲಿ ತುಂಬಿಕೊಳ್ಳದಿರೋಣ. 


ಸೂಚನೆ:  05/06/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Saturday, April 27, 2019

ಅಂಧಕಾಸುರ (Andhakasura)

ಲೇಖಕರು : ವಿದ್ವಾನ್ ಅನಂತ. ಬಿ. ಜಿ


ಒಂದಾನೊಂದು ಕಾಲದಲ್ಲಿ ಅಂಧಕಾಸುರ ಎಂಬ ಹೆಸರಿನ ಒಬ್ಬ ರಾಕ್ಷಸನಿದ್ದನು. ಅವನು ಬಹಳ ಶಕ್ತಿವಂತನಾಗಿದ್ದನು.  ಆದರೆ ಚಿಕ್ಕಂದಿನಲ್ಲಿ ಅವನಿಗೆ ಬಹಳ ದುಷ್ಟಬುದ್ಧಿಯೂ, ದುಷ್ಟ ಸ್ವಭಾವವೂ ಇದ್ದಿತು.  ಯಾವಾಗಲೂ ಬೇರೆಯವರಿಗೆ ಹಿಂಸೆ ಕೊಡುವುದು, ದೊಡ್ಡವರು ಮಾಡಬಾರದು ಎಂಬ ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಮಾಡುವುದು, ಯಾವುದೇ ಒಳ್ಳೆಯ ಕೆಲಸಕ್ಕೆ ಅಡ್ಡಿ ಆತಂಕಗಳನ್ನು ಉಂಟುಮಾಡುವುದು ಅವನಿಗೆ ಬಹಳ ಸಂತೋಷ ಕೊಡುತ್ತಿದ್ದ ಕೆಲಸಗಳಾಗಿದ್ದವು.

ಅವನ ತಂದೆ ಒಬ್ಬ ರಾಜನಾಗಿದ್ದನು.  ಹಾಗಾಗಿ ಅಂಧಕನಿಗೆ ಅಧಿಕಾರದ ಮದವೂ ತುಂಬಿಕೊಂಡಿತ್ತು.ಇಷ್ಟು ಸಾಲದೆಂಬಂತೆ ಅವನು ಹುಟ್ಟುವಾಗಲೇ ಈಶ್ವರನಿಂದ ಒಂದು ವಿಶಿಷ್ಠವಾದ  ವರವನ್ನು ಪಡೆದುಕೊಂಡು ಬಂದಿದ್ದನು. ಈಶ್ವರನಿಂದ ಅಲ್ಲದೆ ಮತ್ತೆ ಯಾರಿಂದಲೂ ತನಗೆ ಸಾವಿಲ್ಲ ಎಂಬುದೇ  ಆ ವರ.  ಅಂಧಕನಿಗೆ ಇದು ಮತ್ತಷ್ಟು ದುಷ್ಟತನವನ್ನು ಹೆಚ್ಚಿಸಿಕೊಳ್ಳಲು ಕಾರಣವಾಯಿತು. ಇದರ ಪರಿಣಾಮವಾಗಿ ಸಜ್ಜನರು ಯಾರಿಗೂ ಅವನ ರಾಜ್ಯದಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದೇ ಹೋಯಿತು.   ಶಿವನೊಬ್ಬನು ಮಾತ್ರವೇ ತನ್ನನ್ನು ಸಂಹರಿಸಬಲ್ಲನು ಎಂಬುದನ್ನು ಅರಿತಿದ್ದ ಅಂಧಕನು ದೇವ ಲೋಕದ ಮೇಲೆ ದಾಳಿ ನಡೆಸಿ ಅಲ್ಲಿದ್ದ ದೇವತೆಗಳನ್ನೆಲ್ಲ ಹಿಂಸಿಸಲು ಪ್ರಾರಂಭಿಸಿದನು.   ದೇವೇಂದ್ರನ ಸಿಂಹಾಸನದಲ್ಲಿ ತಾನೇ ಕುಳಿತು ತನ್ನ ಅಧರ್ಮದ ರಾಜ್ಯಭಾರವನ್ನು ನಡೆಸಲು ಮೊದಲು ಮಾಡಿದನು.  ಬಲ ಮತ್ತು ಅಧಿಕಾರಗಳು ಎಂಥವರನ್ನೂ ತಪ್ಪು ದಾರಿಗೆ ಎಳೆಯುತ್ತವೆ ಎಂಬ ಮಾತಿಗೆ ಅಂಧಕನು ಮತ್ತೊಂದು ಉದಾಹರಣೆಯಾಗಿ ನಿಂತನು.

ದೇವತೆಗಳೆಲ್ಲರೂ ಗುಪ್ತವಾಗಿ ಸಭೆ ಸೇರಿದರು.  ಹೇಗಾದರೂ ಮಾಡಿ ಅಂಧಕನ ಕಾಟವನ್ನು ನಿವಾರಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದರು.  ಆದರೆ ಹೇಗೆ? ಅವನನ್ನು ಯುದ್ಧದಲ್ಲಿ ಸೋಲಿಸುವ ಮಾತೇ ಇಲ್ಲ.  ಕೊಲ್ಲುವುದಂತೂ  ಕೇವಲ ಪರಮೇಶ್ವರನಿಂದ ಆಗುವ ಕೆಲಸ.

ಪರಮೇಶ್ವರನಾದರೋ ಮಂದರ ಎಂಬ ಗಿರಿಯ ಶಿಖರದ ಮೇಲೆ ಆಳವಾದ ತಪಸ್ಸಿನಲ್ಲಿ ಮುಳುಗಿ ಹೋಗಿದ್ದಾನೆ. ಅವನನ್ನು ಎಚ್ಚರಿಸುವ ಧೈರ್ಯವು ಯಾರಿಗೂ ಇಲ್ಲ.  ಹಾಗಾದರೆ ಈ ಸಮಸ್ಯೆಗೆ ಪರಿಹಾರವೆಂತು?  ಎಂದು ಎಲ್ಲರೂ ಚಿಂತಾಮಗ್ನರಾದರು. ಆಗ ನಾರದ ಮಹರ್ಷಿಗಳು,  ‘ತಾವೆಲ್ಲರೂ ಇನ್ನು ಅಂಧಕಾಸುರನ ವಿಷಯದಲ್ಲಿ ನಿಶ್ಚಿಂತರಾಗಿರಿ, ನಾನು ಅವನ ಕಾಟವನ್ನು ನಿವಾರಿಸುತ್ತೇನೆ’ ಎಂದು ಆಶ್ವಾಸನೆಯನ್ನು ಕೊಟ್ಟರು.

ಪರಮೇಶ್ವರನು ಮಂದರ ಪರ್ವತ ಎಂಬ ಎತ್ತರವೂ, ಪವಿತ್ರವೂ ಆದ ಸ್ಥಳದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ಅಲ್ಲಿಗೆ ಸಾಧುಗಳನ್ನು ಬಿಟ್ಟು ಉಳಿದವರಿಗೆ ಪ್ರವೇಶಕ್ಕೆ ಅನುಮತಿಯಿರಲಿಲ್ಲ.  ಅಲ್ಲಿನ ಮತ್ತೊಂದು ವಿಶೇಷ ಎಂದರೆ ಮಂದಾರ ಪುಷ್ಪ.  ಅದು ಅಲ್ಲಿ ಮಾತ್ರ ದೊರೆಯುತ್ತಿದ್ದಂತಹ ಸುಗಂಧ ಪುಷ್ಪ.  ನೇರವಾಗಿ ಮಂದರ ಪರ್ವತಕ್ಕೆ ತೆರಳಿದ ನಾರದರು ಮಂದಾರ ಪುಷ್ಪದ ಘಮಘಮಿಸುವ ಮಾಲೆಯನ್ನು ಧರಿಸಿದವರಾಗಿ ಅಂಧಕಾಸುರನ ಮನೆಗೆ ತೆರಳಿದರು.

ನಾರದರು ಬಂದಕೂಡಲೇ ಮಂದಾರ ಪುಷ್ಪದ ಪರಿಮಳವು ಅರಮನೆಯನ್ನೆಲ್ಲ ತುಂಬಿಬಿಟ್ಟಿತು. ಅದರ ಸೌಂದರ್ಯಕ್ಕೂ ಸುಗಂಧಕ್ಕೂ ಮನಸೋತ ಅಂಧಕನು,  ಆ ಪುಷ್ಪವು ಎಲ್ಲಿ ಸಿಗುತ್ತದೆ ಎಂದು ಕಾತರನಾಗಿ ಕೇಳಿದನು.  ಆದರೆ ನಾರದರು ಬುದ್ಧಿವಂತಿಕೆಯಿಂದ, ‘ಆ ಒಂದು ವಿಷಯವನ್ನು ಮಾತ್ರ ಕೇಳಬೇಡ ಅಂಧಕ! ಏಕೆಂದರೆ ಅದು ನಿನಗೆ ಯಾವ ಕಾರಣಕ್ಕೂ ಸಿಗುವ ವಸ್ತುವಲ್ಲ’ ಎಂದು ಕೆಣಕುತ್ತಾರೆ.  ಅತ್ಯಂತ ಕೋಪಗೊಂಡ ಅಂಧಕನು, ‘ತಾವು ಆ ಪುಷ್ಪವು ಸಿಗುವ ಸ್ಥಳವನ್ನು ಹೇಳಲೇಬೇಕು ‘ ಎಂದು ಬಲವಂತ ಪಡಿಸುತ್ತಾನೆ. ಆಗ ನಾರದರು ಹೆದರಿದವರಂತೆ ನಟಿಸಿ ಮಂದರ ಪರ್ವತವು ಇರುವ ಸ್ಥಳವನ್ನು ತಿಳಿಸುತ್ತಾರೆ.

ತನ್ನನ್ನು ಗೆಲ್ಲುವವರು ಯಾರು? ಎಂಬ ಅಹಂಕಾರದೊಂದಿಗೆ ಮಂದರ ಪರ್ವತಕ್ಕೆ ತೆರಳಿದ ಅಂಧಕನನ್ನು ಅಲ್ಲಿರುವ ಕಾವಲು ಭಟರು ತಡೆಯುತ್ತಾರೆ. ಇದರಿಂದ ಕೋಪಗೊಂಡ ಅಂಧಕನು ತನ್ನ ಗದೆಯಿಂದ ಮಂದರ ಪರ್ವತವನ್ನೇ  ಹೊಡೆಯಲು ಯತ್ನಿಸುತ್ತಾನೆ. ಮಹಾ ಬಲಶಾಲಿಯಾದ ಅವನ ಗದೆಯ ಪ್ರಹಾರದಿಂದ ಮಂದರ ಪರ್ವತವು ಕಂಪಿಸತೊಡಗುತ್ತದೆ. ಇದರಿಂದ ಪರಮೇಶ್ವರನ ತಪಸ್ಸಿಗೆ ಭಂಗವುಂಟಾಗುತ್ತದೆ.  ಇದೆಲ್ಲದಕ್ಕೂ  ಅಂಧಕನೇ ಕಾರಣ ಎಂದು ತಿಳಿದುಕೊಂಡ ಪರಮೇಶ್ವರನು, ಮಹಾ ಕೋಪದಿಂದ ತನ್ನ ಶೂಲವನ್ನು ಎತ್ತಿ ಅಂಧಕಾಸುರನ ಕಡೆಗೆ ಎಸೆಯುತ್ತಾನೆ.  ಆ ಶೂಲವು ಅಂಧಕನ ಎದೆಯನ್ನು ಸೀಳಿ ಅವನನ್ನು  ಕೊಲ್ಲುತ್ತದೆ.

ಅಂಧ ಎಂದರೆ ಕಣ್ಣು ಕಾಣಿಸದವನು ಎಂದರ್ಥ. ಇಲ್ಲಿ ಅಂಧಕನಿಗೆ ಹೊರಗಿನ ಕಣ್ಣುಗಳು ಚೆನ್ನಾಗಿಯೇ ಕಾಣಿಸುತ್ತಿದ್ದವು.  ಆದರೆ ಬುದ್ಧಿಯಲ್ಲಿ ವಿವೇಕವಿಲ್ಲದೆ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದುದರಿಂದ ಎಲ್ಲರೂ ಅವನನ್ನು ಅಂಧಕ ಎಂದು ಕರೆದರು.  ದೊಡ್ಡವರು, ‘ಮಾಡಬೇಡ’ ಎಂಬ ಕೆಲಸವನ್ನು ಮಾಡಿದರೆ, ಅದರಿಂದ ಅನಾಹುತ ನಿಶ್ಚಿತ.  ಅಂತೆಯೇ ದೇವರು ಕೊಟ್ಟ ದೇಹಬಲ ಬುದ್ಧಿಬಲ ಇತ್ಯಾದಿಗಳನ್ನು ಸಮಾಜದ ಒಳಿತಿಗಾಗಿ ಬಳಸಿದರೆ ಅದರಿಂದ ಎಲ್ಲರಿಗೂ ಕ್ಷೇಮ. ಹಾಗಲ್ಲದೆ ಬೇರೆಯವರಿಗೆ ತೊಂದರೆ ಉಂಟು ಮಾಡಿದರೆ, ಮುಂದೆ ಅದಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ.

ಸೂಚನೆ:  26/04/2019 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

Tuesday, March 26, 2019

ಅಹಿಂಸಾಪರಮೋ ಧರ್ಮ (Ahimsaparamo dharma)

 ಲೇಖಕರು: ಬಿ. ಜಿ. ಅನಂತ


ಮಾ ಹಿಂಸ್ಯಾತ್ ಸರ್ವಾ ಭೂತಾನಿ ( ಎಂದರೆ ಯಾರಿಗೂ ಹಿಂಸೆಯನ್ನು ಉಂಟು ಮಾಡಬೇಡ ) ಎನ್ನುತ್ತವೆ ಭಾರತೀಯ ಶಾಸ್ತ್ರಗಳು. ಹಿಂಸೆ ಎಂದರೆ ತೊಂದರೆ ಎಂದರ್ಥ. ಹಿಂಸೆಯೆಂಬುದು ಒಬ್ಬನನ್ನು ಸಣ್ಣ ಮಟ್ಟದಲ್ಲಿ ದೈಹಿಕ ಮಾನಸಿಕವಾಗಿ ಘಾಸಿಗೊಳಿಸುವುದರಿಂದ ಹಿಡಿದು ಪ್ರಾಣವನ್ನು ತೆಗೆಯುವವರೆಗೂ ಆಗಬಹುದು. ಹೀಗೆ ಯಾರಿಗೂ ಹಿಂಸೆ ಯನ್ನು ಉಂಟುಮಾಡದೆ ಬದುಕುವುದನ್ನೇ ಅಹಿಂಸೆ ಎಂದು ಕರೆದಿದ್ದಾರೆ. ಇದೊಂದು ಶ್ರೇಷ್ಠವಾದ ಆತ್ಮಗುಣ ಎಂಬುದು ಭಾರತೀಯ ಮಹರ್ಷಿಗಳ ಅಭಿಪ್ರಾಯ.  ಅಹಿಂಸೆ ಎಂಬುದು ಕೇವಲ ಮನುಷ್ಯರಿಗೆ ಪ್ರಾಣಿ-ಪಕ್ಷಿಗಳಿಗೆ ಅಷ್ಟೇ ಅಲ್ಲದೆ ಜಡವಾಗಿ ಕಾಣುವ ಗಿಡ ಮರ ಬಳ್ಳಿಗಳಿಗೂ, ಕಲ್ಲು ಮಣ್ಣು ಕಾಷ್ಠಗಳಿಗೂ  ಅನ್ವಯಿಸುತ್ತದೆ.   ಏಕೆಂದರೆ ಅವೆಲ್ಲವೂ ಜೀವಗಳೇ ಎಂಬುದು ಭಾರತೀಯರ ದರ್ಶನ. ಹಾಗಾದರೆ ಬದುಕುವುದು ಹೇಗೆ? ಎಂಬ ಪ್ರಶ್ನೆ ಎದುರಾಗುವುದು ಸಹಜ.  ಏಕೆಂದರೆ ಜೀವೋ ಜೀವಸ್ಯ ಜೀವನಂ ಎಂಬ ಮಾತು ಕೂಡ ಪ್ರಸಿದ್ಧವಾಗಿದೆ.  ಎಂದರೆ ಒಂದು ಜೀವಿಯು ಮತ್ತೊಂದು ಜೀವಿಯನ್ನು ತಿಂದೇ ಬದುಕಬೇಕು. ಅಂತಿರುವಾಗ ಯಾರಿಗೂ ತೊಂದರೆಯನ್ನೇ ಕೊಡದೆ ನೂರಕ್ಕೆ ನೂರು ಅಹಿಂಸಾಪರನಾಗಿ ಬದುಕುವುದು ಸಾಧ್ಯವೇ?  ಇದು ಮಹರ್ಷಿಗಳಿಗೆ ತಿಳಿಯದ್ದೇನೂ ಅಲ್ಲ.  ಹಾಗಿದ್ದರೂ ಈ ಮಾತನ್ನು ಆಡಿದ್ದಾರೆ ಎಂದರೆ ಇದರ ಹಿಂದೆ ಆಳವಾದ ವೈಜ್ಞಾನಿಕ ಚಿಂತನೆ ಅಡಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು.
ಒಂದು ಹಿಂಸೆ ಮತ್ತೊಂದು ಹಿಂಸೆಗೆ ಮುನ್ನುಡಿಯನ್ನು ಬರೆಯುತ್ತದೆ.  ಹೇಗೆಂದರೆ ಒಬ್ಬ ಮನುಷ್ಯನು ಒಂದು ಪ್ರಾಣಿಯನ್ನು ಕೊಂದ ಎಂದಿಟ್ಟುಕೊಳ್ಳೋಣ. ಮುಂದೆ ಆ ಪ್ರಾಣಿಯು ಮನುಷ್ಯನಾಗಿ ಹುಟ್ಟುತ್ತದೆ, ಈ ಮನುಷ್ಯನು ಪ್ರಾಣಿಯಾಗಿ ಹುಟ್ಟುತ್ತಾನೆ. ಹಿಂದೆ ಮನುಷ್ಯನು ಆ ಪ್ರಾಣಿಗೆ ಕೊಟ್ಟಿದ್ದ ಹಿಂಸೆಯನ್ನು  ಮುಂದಿನ ಜನ್ಮದಲ್ಲಿ ಆ ಪ್ರಾಣಿಯ ಪುನರಾವರ್ತಿಸುತ್ತದೆ ಎನ್ನುತ್ತವೆ ನಮ್ಮ ಶಾಸ್ತ್ರಗಳು. ಇದಲ್ಲದೆ, ಮಾಡಿದ ಹಿಂಸೆಯು ವಾತಾವರಣದಲ್ಲಿ ಒಂದು ಅನಪೇಕ್ಷಿತ ವಾದ ಭಯದ ಅಲೆಯನ್ನು ಹುಟ್ಟು ಹಾಕುತ್ತದೆ. ಹಿಂಸೆಗೆ ಒಳಗಾದ ಪ್ರಾಣಿಯು ಅನುಭವಿಸುವ ಯಾತನೆಯು ಅಂತಹ ಅಲೆಗೆ ಕಾರಣ.  ಇದಲ್ಲದೆ ಹಿಂಸೆಯನ್ನು ಕೊಟ್ಟ ಮನುಷ್ಯನ ಮನಸ್ಸಿನಲ್ಲಿಯೂ ಕೂಡ ಅದರ ಒಂದು ಅಲೆಯು ಮೂಡಿಯೇ ಮೂಡುತ್ತದೆ.  ಇದು ಕ್ಷಣ ಕಾಲವಾದರೂ ಅವನ ಮನಸ್ಸಿನ ಶಾಂತತೆಯನ್ನು ಕದಡುತ್ತದೆ. ತತ್ಪರಿಣಾಮವಾಗಿ ಮನಸ್ಸಿನ ನೆಮ್ಮದಿ ಸಂತೋಷದ ಅನುಭವಗಳು ಕೆಲವು ಕಾಲದ ಮಟ್ಟಿಗಾದರೂ ಮರೆಯಾಗುತ್ತವೆ.  ಈ ಕಾರಣದಿಂದಲೇ ಧ್ಯಾನವನ್ನು ಅಭ್ಯಾಸ ಮಾಡುವವರು ಸಾಧ್ಯವಾದಷ್ಟೂ ಹಿಂಸೆಯನ್ನು ಬಿಡಬೇಕು ಎನ್ನುತ್ತದೆ ಯೋಗಶಾಸ್ತ್ರ.

ಆದರೆ ಹಿಂಸೆಯ ಮೂಲಕವೇ ಆಹಾರವನ್ನು ಪಡೆಯಬೇಕಲ್ಲವೇ?  ಹಾಗಾಗಿ ನಮಗೆ ಅಗತ್ಯವಿರುವಷ್ಟು ಆಹಾರಕ್ಕಾಗಿ ಮಾಡುವ ಹಿಂಸೆಯು ಹೆಚ್ಚಿನ ವಿಪರಿಣಾಮವನ್ನು ಉಂಟು ಮಾಡುವುದಿಲ್ಲ.  ಆದರೆ ಅಲ್ಲಿಯೂ ಕೂಡ ಸಾಧ್ಯವಾದಷ್ಟೂ ಕಡಿಮೆ ಹಿಂಸೆ ಇರುವ ಆಹಾರವನ್ನು ಆರಿಸಿಕೊಳ್ಳಬೇಕು ಎಂಬುದು ತಿಳಿದವರ ಮಾತು. ಜೊತೆಗೆ, ಆಹಾರದಲ್ಲಿನ ಈ ಹಿಂಸೆಯ ದೋಷವು ಮರೆಯಾಗಲಿ ಎಂಬ ಕಾರಣದಿಂದಲೇ ನಾವು ಸ್ವೀಕರಿಸುವ ಆಹಾರವನ್ನು ಭಗವಂತನಿಗೆ ಸಮರ್ಪಿಸಿ ಅವನ ಸ್ಮರಣೆಯೊಂದಿಗೆ ಪ್ರಸಾದ ರೂಪವಾಗಿ ಅದನ್ನು ಬಳಸುವ ಪದ್ಧತಿಯಿದೆ.  ಒಟ್ಟಾರೆ ಆಹಾರದ ಮೂಲಕ ಪಾಪವು ಸಂಗ್ರಹವಾಗುವುದುರಿಂದಲೇ ಅಗತ್ಯವಿರುವಷ್ಟು  ಆಹಾರವನ್ನು ಮಾತ್ರ ಸೇವಿಸಬೇಕು, ಹಸಿವೆಯಾದಾಗ ಮಾತ್ರ ಆಹಾರವನ್ನು ಬಳಸಬೇಕು ಎಂಬ ನಿಯಮಗಳಿವೆ.  ಆಹಾರವೆಂದರೆ ಅವೆಲ್ಲವೂ ಜೀವಗಳೇ- ಅದು ಪ್ರಾಣಿಯ ಮಾಂಸವಾಗಿರಲಿ ಅಥವಾ ಸಸ್ಯಗಳು ಧಾನ್ಯಗಳೇ ಆಗಿರಲಿ.

ಇನ್ನು ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಂಡ ಯೋಗಿಯೊಬ್ಬನು ಆಹಾರವನ್ನು ಬಳಸಿದಾಗ ಅವನು, ತಾನು ಬಳಸಿದ ಆಹಾರವನ್ನು ನೇರವಾಗಿ ಭಗವಂತನಿಗೆ ಸಮರ್ಪಿಸುತ್ತಾನೆ.  ಆದ್ದರಿಂದ ಅವನು ಆಹಾರ ರೂಪವಾಗಿ ಬಳಸಿದ ಜೀವಿಗಳೆಲ್ಲವೂ ಸದ್ಗತಿ ದೊರಕುತ್ತವೆ ಎನ್ನುತ್ತಾರೆ ಯೋಗಿ ಜನರು.  ಹಾಗಾಗಿ ಅಲ್ಲಿ ಹಿಂಸೆಯ ದೋಷವಿಲ್ಲ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

Saturday, October 13, 2018

ದೀರ್ಘಬಂಧು (Dirghabandhu)

ಲೇಖಕರು: ವಿದ್ವಾನ್ ಬಿ.ಜಿ. ಅನಂತ, ಮೈಸೂರು

ಭವತಾರಕನಾದ ಗುರುವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದುಂಟು.  ಈ ಹೆಸರುಗಳು ಕೇವಲ ಹೆಸರುಗಳೋ ಸಮಾನಾರ್ಥಕ ಪದಗಳೋ ಆಗಿರದೆ ಗುರುವೆಂಬ ಕರುಣಾ ಸಾಗರನ ಬೇರೆ ಬೇರೆ ಗುಣಗಳನ್ನೂ ಸ್ವಭಾವಗಳನ್ನೂ ಹೇಳುವವುಗಳೇ ಆಗಿವೆ.  ಅವುಗಳಲ್ಲಿ ‘ದೀರ್ಥಬಂಧು’ ಎಂಬುದೂ ಒಂದು.
ಬಂಧು
ಬಂಧನ ಎಂಬರ್ಥದಲ್ಲಿ ಪ್ರಯೋಗದಲ್ಲಿರುವ ಶಬ್ದ ಬಂಧು ಎಂಬುದು.  ಎಂದರೆ ‘ಕಟ್ಟು’ ಎಂದರ್ಥ.  ಯಾರೋ ಇಬ್ಬರ ನಡುವೆ ಒಂದು ಕಟ್ಟು, ಕಟ್ಟಿಕೊಳ್ಳವಿಕೆ ಇದೆ ಅಥವಾ ಯಾವುದೋ ಒಂದು ವಿಷಯದ ಬಂಧನಕ್ಕೆ ಒಳಗಾದವರು ಎಂಬ ಅರ್ಥದಲ್ಲಿ ಬಂಧುಗಳು ಎಂಬ ಶಬ್ದ ಬಂದಿದೆ.  ಆ ಬಂಧವು ರಕ್ತದಿಂದ(ಹುಟ್ಟಿನಿಂದ) ಬಂದದ್ದು ಎಂಬರ್ಥದಲ್ಲಿ ಇಂದು ಹೆಚ್ಚಾಗಿ ಚಾಲ್ತಿಯಲ್ಲಿದೆ.

ರಕ್ತ ಸಂಬಂಧವು ಒಮ್ಮೆ ಉಂಟಾದರೆ ಅದು ಅಜೀವ ಪರ್ಯಂತವೂ ಮತ್ತು ಆಮೇಲೂ ಇರುತ್ತದೆ.  ಉದಾಹರಣೆಗೆ ಶ್ರೀರಾಮ-ದಶರಥರು ತಂದೆ ಮಕ್ಕಳು. ಅವರು ಆ ಸಂಬಂಧವು ಇನ್ನು ಸಾವಿರ ವರ್ಷ ಕಳೆದರೂ ಹೋಗುವಂಥದ್ದಲ್ಲ.

ಇನ್ನು ಕೆಲವು ಹುಟ್ಟಿನ ಅನಂತರ ಉಂಟಾಗುವ ಸಂಬಂಧಗಳೂ ಹೀಗೆಯೇ ಅಜೀವ ಪರ್ಯಂತ ಇರುವುದುಂಟು.  ಉದಾಹರಣೆಗೆ ಪತಿಪತ್ನಿಯರು,  ಅಂತೆಯೇ ಸ್ನೇಹಿತರು.  ಗುರುಶಿಷ್ಯರ ಸಂಬಂಧವೂ ಹೀಗೆಯೇ-ಒಮ್ಮೆ ಹುಟ್ಟಿಕೊಂಡರೆ ಮುಗಿಯಿತು.  ಆ ಸಂಬಂಧಕ್ಕೆ ಹುಟ್ಟುವುದಕ್ಕೂ ಮೊದಲು ಆಸ್ತಿತ್ವವಿಲ್ಲ.  ಆದರೆ ಒಮ್ಮೆ ಹುಟ್ಟಿಕೊಂಡುಬಿಟ್ಟರೆ ಆಮೇಲೆ ಸಾವಿಲ್ಲ.  ಆಮೇಲೆ ಅದು ಅಮರ.  ಗುರುವು ಶಿಷ್ಯನನ್ನು ಪರಿಗ್ರಹಿಸುವುದಕ್ಕೆ ಮುಂಚೆ ಅಥವಾ ವಿದ್ಯಾರ್ಥಿಯು ಬೋಧಕನನ್ನು ಗುರುವಾಗಿ ಒಪ್ಪುವುದಕ್ಕೆ ಮುಂಚೆ ಅವರು ಗುರುಶಿಷ್ಯರಲ್ಲ.  ಅಲ್ಲೊಂದು ಸಂಬಂಧವೂ ಇಲ್ಲ.  ಆದರೆ ಒಮ್ಮೆ ಹುಟ್ಟಿತೋ, ಅಲ್ಲಿಗೆ ಅದು ಪ್ರಾರಂಭವಾಯಿತು ಅಷ್ಟೇ.
ಗುರುವು
ಲೋಕದಲ್ಲಿ ಕಲಿಯಲು ಕೋಟಿ ವಿಷಯಗಳಿವೆ.  ಆದರೆ ಅವುಗಳನ್ನು ಕಲಿಸುವವರೆಲ್ಲ ಗುರುಗಳಲ್ಲ.  ಕಲಿಯುವವನು ಶಿಷ್ಯನೂ ಅಲ್ಲ.  ಈ ‘ಗುರು’ ಎಂಬುದೂ ‘ಶಿಷ್ಯ’ ಎಂಬುಂದೂ ವಿಶೇಷಾರ್ಥವನ್ನುಳ್ಳ ಪಾರಿಭಾಷಿಕ ಶಬ್ದಗಳು. ಯಾವನು ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಸಾಧಕನ ಕೈಹಿಡಿದು ನಡೆಸುತ್ತಾನೆಯೋ ಮತ್ತು ಅಂತಿಮವಾಗಿ ತತ್ತ್ವಸಾಕ್ಷಾತ್ಕಾರವನ್ನು ಮಾಡಿಸುತ್ತಾನೆಯೋ ಅವನೇ ಗುರುವು ಮತ್ತು ಅಂತಹ ಸಾಧಕನು ಮಾತ್ರ ಶಿಷ್ಯ.  ಆ ಮಾರ್ಗದಲ್ಲಿ ಗುರುವಾದವನು ಕೊಡುವ ಮಾರ್ಗದರ್ಶನವೇನಿದೆಯೋ ಅದುವೇ ವಿದ್ಯೆ.  ಇದನ್ನೇ ಕೃಷ್ಣನು ಗೀತೆಯಲ್ಲಿ ಅಧ್ಯಾತ್ಮ ವಿದ್ಯಾ ವಿದ್ಯಾನಾಂ- ವಿದ್ಯೆಗಳಲ್ಲಿ ಅಧ್ಯಾತ್ಮವಿದ್ಯೆಯೇ ನಾನು ಎಂದಿದ್ದಾನೆ.
ಕೇವಲ ಮೋಕ್ಷವನ್ನೇ ಜೀವನದ ಏಕ ಗುರಿಯಾಗಿ ಇಟ್ಟುಕೊಂಡ ಜೀವಿಯ ತನ್ನ ಕೈ ಹಿಡಿದು ಆ ಮಾರ್ಗಕ್ಕೆ ಹತ್ತಿಸುವಂತೆ ಗುರುವಾದವನಲ್ಲಿ ಬೇಡಿಕೊಳ್ಳುತ್ತಾನೆ.  ಹಾಗೆ ಬೇಡುವವನಲ್ಲಿ ಸಾಮರ್ಥ್ಯವಿದ್ದುದೇ ಆದರೆ ಗುರುವು ಅವನನ್ನು ಒಪ್ಪುತ್ತಾನೆ.  ಅವನನ್ನು ಶಿಷ್ಯನಾಗಿ ಪರಿಗ್ರಹಿಸುತ್ತಾನೆ.  ಆ ಕ್ಷಣವೊಂದು ಅಮೃತಘಳಿಗೆ.  ಆ ಮುಹೂರ್ತದಿಂದ ಅವರಿಬ್ಬರೂ ಗುರುಶಿಷ್ಯರಾಗುತ್ತಾರೆ.   ನೆನಪಿಡಬೇಕಾದ ಅಂಶವೆಂದರೆ ಇಲ್ಲಿ ಶಿಷ್ಯನು ಸಾಧಕನೂ, ಗುರುವು ಈಗಾಗಲೇ ಸಾಧನೆಯ ಕೊನೆಮುಟ್ಟಿದ ಸಿದ್ಧನೂ ಆಗಿರುತ್ತಾನೆಂಬುದು.  ಇಬ್ಬರೂ ಸಾಧಕರೇ ಆಗಿದ್ದರೆ ಅದರಲ್ಲಿ ಒಬ್ಬನು ಗುರುವಾಗಲಾರ ಏಕೆಂದರೆ ಒಟ್ಟಿಗೇ ಇಬ್ಬರು ಈಜು ಕಲಿಯುತ್ತಿರುವವರಲ್ಲಿ ಒಬ್ಬನು ಈಜು ಕಲಿಸುವವನಾದರೆ ಆಗುವುದೇನು?
ದೀರ್ಘಬಂಧು
ನಿಜವಾದ ಗುರುವಾದರೆ ಒಮ್ಮೆ ಒಬ್ಬನನ್ನು ಶಿಷ್ಯನಾಗಿ ಪರಿಗ್ರಹಿಸಿದರೆ ಆಯಿತು; ಶಿಷ್ಯನು ಕೊನೆಮುಟ್ಟುವವರೆಗೂ ಅವನು ಗುರುವೇ.  ನೂರು ಜನ್ಮಗಳಾಗಲಿ ಅವನು ಶಿಷ್ಯನ ಬೆನ್ನುಬಿಡುವುದಿಲ್ಲ.
ತಾಯಿಮೀನು ತನ್ನ ಮರಿಯನ್ನು ಕಾಯುವಂತೆ ಬೇರೆಬೇರೆ ರೀತಿಗಳಲ್ಲಿ ರಕ್ಷಣೆಯನ್ನು ಕೊಟ್ಟುಬಿಡುತ್ತಾನೆ.  ಆದ್ದರಿಂದಲೇ ಅವನನ್ನು ದೀರ್ಘಬಂಧು ಎಂದು ಸಾಧಕಲೋಕವು ಕೃತಜ್ಞತೆಯಿಂದ ಭಾವಿಸುತ್ತದೆ.  ಗುರುಶಿಷ್ಯರ ಬಂಧವನ್ನು ಬಿಟ್ಟು ಜಗತ್ತಿನ ಮತ್ತಾವ ಬಂಧವೂ ಇಷ್ಟು ದೀರ್ಘವಾಗಿರುವುದಿಲ್ಲ ಎಂಬುದು ವಿಶೇಷ.  ಅಂತಹ ಕರುಣಾಮಯನಾದ ದೀರ್ಘಬಂಧುವಿಗೆ ನಮೋ ನಮಃ
ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ