Showing posts with label youtube_link_https://youtu.be/0POud_Kq1Nc. Show all posts
Showing posts with label youtube_link_https://youtu.be/0POud_Kq1Nc. Show all posts

Thursday, June 6, 2019

ಕರಡಿಯಾದ ಕಂಬಳಿ (Karadiyada kambali)

ಲೇಖಕರು: ಬಿ.ಜಿ. ಅನಂತ

ಈ ಪ್ರಪಂಚವು ಅಸಂಖ್ಯ ವಸ್ತುಗಳಿಂದಲೂ ಅಗಣಿತವಾದ ವಿಷಯಗಳಿಂದಲೂ ತುಂಬಿಹೋಗಿದೆ.  ಅವುಗಳ ಮಧ್ಯದಲ್ಲೇ ನಮ್ಮ ಜೀವನವು ಸಾಗಬೇಕು. ಹಾಗಿರುವಾಗ ನಮಗೆ ಬೇಕಾದ ವಸ್ತು ವಿಷಯಗಳಿಗೆ ಮಾತ್ರ ಕೈಚಾಚುವುದು ವಿವೇಕವೆನಿಸುತ್ತದೆ.  ಹಾಗಲ್ಲದೆ ಕಂಡ ಕಂಡ ವಸ್ತುಗಳನ್ನೆಲ್ಲಾ ಅಪ್ಪಿಕೊಳ್ಳಲು ಹೋದರೆ ಮುಂದೊಮ್ಮೆ ನಾವೇ ಅವುಗಳ ಹಿಡಿತಕ್ಕೆ ಸಿಕ್ಕಿ ಬಿಡಿಸಿಕೊಳ್ಳಲಾಗದೆ ಒದ್ದಾಡುವಂತೆ ಆಗಬಹುದು.  'ನಾನು ಇದನ್ನು ಏನೋ ಎಂದುಕೊಂಡು ಸ್ವೀಕರಿಸಿ ಬಿಟ್ಟೆ, ಆದರೆ ಈಗ ನೋಡಿದರೆ ಇದು ಮತ್ತೇನೋ ಆಗಿಬಿಟ್ಟಿದೆ' ಎಂದು ನಿಡುಸುಯ್ಯುವಂತೆ ಆಗಬಹುದು.  ಈ ಬಗ್ಗೆ ಶ್ರೀರಂಗ ಗುರುಗಳು ಸ್ವಾರಸ್ಯಕರ ಕಥೆಯೊಂದನ್ನು ಹೇಳುತ್ತಿದ್ದರು.

ಒಮ್ಮೆ ಒಂದು ಹೊಳೆಯ ದಡದಲ್ಲಿ ಇಬ್ಬರು ಸ್ನೇಹಿತರು ನಿಂತಿದ್ದರು. ಉಕ್ಕಿ ಹರಿಯುತ್ತಿದ್ದ ಹೊಳೆಯ ಅಬ್ಬರವನ್ನು ನೋಡುತ್ತಾ ಮೈಮರೆತು ಆನಂದಿಸುತ್ತಿದ್ದರು.  ಅಷ್ಟರಲ್ಲಿ ಹೊಳೆಯ ಮಧ್ಯದಲ್ಲಿ ಕಪ್ಪಗಿನ ವಸ್ತುವೊಂದು ತೇಲಿಬರುತ್ತಿರುವುದು ಕಾಣಿಸಿತು.  ಆ ಇಬ್ಬರಲ್ಲಿ ಚೆನ್ನಾಗಿ ಈಜು ಬಲ್ಲವನು, 'ಅದೋ ಅಲ್ಲಿ ನೋಡು, ಒಂದು ಒಳ್ಳೆಯ ಕರಿಯ ಕಂಬಳಿಯು ಪ್ರವಾಹದಲ್ಲಿ ತೇಲಿ ಬರುತಿದೆ. ಯಾವುದಕ್ಕಾದರೂ ಬೇಕಾಗುತ್ತದೆ.  ಈಗಲೇ ತರುತ್ತೇನೆ' ಎಂದು ನೀರಿಗೆ ಬಿದ್ದು ಪ್ರವಾಹದಲ್ಲಿ ಈಜತೊಡಗಿದ. ಪ್ರಯಾಸದಿಂದ ಈಜಿ  ಈಜಿ ಕೊನೆಗೂ ಆ ಕಪ್ಪಗಿನ ವಸ್ತುವನ್ನು ಹಿಡಿದುಕೊಂಡ.  ಆದರೆ ಕೂಡಲೇ ಕೂಗಿಕೊಂಡನಂತೆ- 'ಗೆಳೆಯಾ ಇದು ಕಂಬಳಿಯಲ್ಲ, ಕರಡಿ'.  ಕೂಡಲೇ ದಡದಲ್ಲಿದ್ದ ಗೆಳೆಯನೂ ಕೂಗಿ ಹೇಳಿದನಂತೆ 'ಹಾಗಾದರೆ ಏಕೆ ಹಿಡಿದುಕೊಂಡಿದ್ದೀಯೆ?  ಬಿಟ್ಟು ಬಾ ಅದನ್ನು' ಎಂದು.  'ಅಯ್ಯೋ! ನಾನು ಬಿಟ್ಟರೂ ಅದು ನನ್ನನ್ನು ಬಿಡುತ್ತಿಲ್ಲ' ಎಂದು ಮಾರುತ್ತರ ಬಂದಿತು. ಎಂದರೆ ಇವನು ಕರಡಿಯನ್ನು ಬಿಟ್ಟರೂ, ಕರಡಿಯು ಇವನನ್ನು ಬಿಡುತ್ತಿಲ್ಲ. 

ಇದು ನಮ್ಮಗಳದ್ದೇ ಕಥೆ. ನಮಗೆ ಅಗತ್ಯವಾಗಿ ಬೇಕಾದದ್ದು ಎಂದು ನಾವು ಅನೇಕ ಪದಾರ್ಥಗಳನ್ನು  ಆಸೆಪಡುತ್ತೇವೆ.  ಅವುಗಳನ್ನು ಪಡೆಯಲು ಎಷ್ಟೆಷ್ಟೋ ಶ್ರಮಪಡುತ್ತೇವೆ.  ಅದಕ್ಕಾಗಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನೂ, ಅಮೂಲ್ಯವಾದ ಸಮಯವನ್ನೂ ವ್ಯಯಿಸುತ್ತೇವೆ.  ಇಷ್ಟೆಲ್ಲ ಆಗಿ ಸ್ವಲ್ಪ ಕಾಲದ ನಂತರ ನಮಗೆ ಅರಿವಾಗುತ್ತದೆ - ನನಗೆ ಬೇಕಿದ್ದದ್ದು ಇದಲ್ಲ. ನಾನು ಅಂದುಕೊಂಡಿದ್ದೇ ಬೇರೆ, ಈ ವಸ್ತುವೇ ಬೇರೆ ಎಂದು.  ಎಷ್ಟೋ ಬಾರಿ ಹೀಗಾಗುವುದುಂಟು ಅಲ್ಲವೇ! ಆದರೆ ಏನು ಮಾಡುವುದು?  ಈಗಾಗಲೇ ನಾವೇ ಅಪ್ಪಿಕೊಂಡ ವಸ್ತು ಅದು.  ಈಗ ಗಟ್ಟಿಯಾಗಿ ಅಂಟಿಕೊಂಡಿದೆ.  ಆದ್ದರಿಂದ ಯಾವುದನ್ನೇ ಆಗಲಿ ಹಚ್ಚಿಕೊಳ್ಳುವ ಮುನ್ನ ಚೆನ್ನಾಗಿ ಯೋಚಿಸಬೇಕು.  ಶ್ರೀರಂಗ ಮಹಾಗುರುವು ಈ ಬಗ್ಗೆ ಹೇಳುತ್ತಾ, "ವಿಶ್ವಾಸವಿಟ್ಟು ಅನಂತರ ನಿಶ್ವಾಸ ಬಿಡುವಂತೆ ಆಗಬಾರದು" ಎನ್ನುತ್ತಿದ್ದರು. ಈ ಬಗ್ಗೆ ಎಚ್ಚರಿಕೆ ಅಗತ್ಯ.  ಒಂದಷ್ಟು ಕಾಲ ನಾಯಿ ಬೆಕ್ಕುಗಳನ್ನು ಸಾಕಿಬಿಟ್ಟರೆ ಆಮೇಲೆ ನಮಗೆ ಬೇಡವೆನಿಸಿದರೂ ಅವುಗಳನ್ನು ಬಿಡಲಾಗದು.  ಏಕೆಂದರೆ, ತಳ್ಳಿದರೂ ಅವು ಮನೆಯನ್ನು ಬಿಟ್ಟು ಹೋಗಲೊಲ್ಲವು.  ಕೆಲವು ವಿಷಯಗಳೂ ಹೀಗೆಯೇ.  ಒಮ್ಮೆ ನಮ್ಮ ತಲೆಯಲ್ಲಿ ಜಾಗ ಕೊಟ್ಟೆವೋ - ಮುಗಿಯಿತು.  ನಮ್ಮನ್ನು ಗಟ್ಟಿಯಾಗಿ ಅಂಟಿಕೊಂಡು ಬಿಡುತ್ತವೆ. ಹಾಗಾಗಿ ಅನಗತ್ಯ ವಿಷಯಗಳನ್ನು,ಮಾಹಿತಿಗಳನ್ನು ನಮ್ಮತಲೆಗಳಲ್ಲಿ ತುಂಬಿಕೊಳ್ಳದಿರೋಣ. 


ಸೂಚನೆ:  05/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.