Showing posts with label author_crramaswami. Show all posts
Showing posts with label author_crramaswami. Show all posts

Monday, February 5, 2024

ದೇವಾಸುರರು -ಉಪಸಂಹಾರ (Devasuraru -Upasanhara)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ
(ಪ್ರತಿಕ್ರಿಯಿಸಿರಿ lekhana@ayvm.in)


ಈ ಲೇಖನಮಾಲೆಯ ಪ್ರಾರಂಭದಲ್ಲಿ ನೆನಪಿಸಿಕೊಂಡಂತೆ ದೇವತೆಗಳಬಗ್ಗೆ ಸಾಮಾನ್ಯವಾದ ಅಭಿಪ್ರಾಯ - ಅವರು ಅಮೃತಪಾನ ಮಾಡಿದ  ಸ್ವರ್ಗವಾಸಿಗಳು, ಸರ್ವೈಶ್ವರ್ಯದಿಂದಕೂಡಿ  ಸುಖ-ಭೋಗಗಳನ್ನನುಭವಿಸುವವರು ಇತ್ಯಾದಿ. ಅಸುರರೆಂದರೆ ಕ್ರೂರರೂಪಿಗಳು, ಬಲದಿಂದ ಕೊಬ್ಬಿ ಎಲ್ಲರನ್ನೂ ಹಿಂಸಿಸುವವರು, ಕಾಮಕ್ರೋಧಾದಿ ಅರಿಷಡ್ವರ್ಗಗಳ ಮೂರ್ತಾಕಾರವಾದವರು ಇತ್ಯಾದಿ. ಪುರಾಣಗಳು ದೇವಾಸುರರ ಬಗ್ಗೆ ಅನೇಕ ಕಥೆಗಳನ್ನು ಹೇಳುತ್ತವೆ. ಅವು ಸ್ವಾರಸ್ಯಕರವಾಗಿದ್ದರೂ ಕೆಲವೊಮ್ಮೆ ಅರ್ಥಹೀನ-ಅಸಂಭವ-ಕಾಲ್ಪನಿಕ ಕಥೆಗಳೆನಿಸುವುದಲ್ಲದೆ ಪುರಾಣಗಳೆಲ್ಲ ಕಟ್ಟುಕಥೆಯ ಕಂತೆಗಳೋ ಎಂಬ ಸಂಶಯವನ್ನೆಬ್ಬಿಸುತ್ತವೆ.  ಈಗಿನ ವಿಚಾರಪರರ ಸಮಾಜದಲ್ಲಿ ಇವು ನಗೆಪಾಟಲಿಗೆ ವಿಷಯಗಳು. 


ಪುರಾಣದ ಕಥೆಗಳಲ್ಲಿ ಮೂರು ವಿಧಗಳುಂಟೆಂದು ಜ್ಞಾನಿಗಳು  ತಿಳಿಸುತ್ತಾರೆ -ಐತಿಹಾಸಿಕವಾದವು, ತತ್ತ್ವವನ್ನು ಸ್ಪಷ್ಟಪಡಿಸುವ ರೂಪಕಗಳು ಮತ್ತು  ಸಾಧನೆಯಲ್ಲಾಗುವ ಅಂತರ್ದರ್ಶನಗಳನ್ನು ತಿಳಿಸುವ ಕಥೆಗಳು. ಆದ್ದರಿಂದಲೇ ಪುರಾಣಗಳನ್ನು ಗುರುಮುಖೇನ ಉಪದೇಶದಿಂದಲೇ ತಿಳಿಯಬೇಕೆನ್ನುವ ಪದ್ಧತಿ ಬೆಳೆದುಬಂದಿದೆ. 


ಹೀಗೆ ಜ್ಞಾನಿಗಳ ನೋಟವು ತಿಳಿಸುವುದನ್ನು ನೆನೆಪಿಸಿಕೊಳ್ಳುವುದಾದರೆ,   ದೇವಾಸುರರಿಬ್ಬರೂ  ಎಲ್ಲ ಜೀವಕೋಟಿಗಳ ಒಳಗೂ ಹೊರಗೂ ಇದ್ದು ಆಡಿಸುವ ಶಕ್ತಿರೂಪರು, ಸ್ಥೂಲ ಶರೀರವಿಲ್ಲದ ತೇಜೋರೂಪರು.  ಸೃಷ್ಟಿ-ಸ್ಥಿತಿ-ಲಯ ವ್ಯಾಪಾರಗಳನ್ನು ನಡೆಸಲು ಭಗವಂತನಿಂದಲೇ  ಸೃಷ್ಟಿಸಲ್ಪಟ್ಟ ಶಕ್ತಿಗಳು. ಆದ್ದರಿಂದಲೇ ಒಂದೇ ತಂದೆಯ ಮಕ್ಕಳು, ಅಣ್ಣತಮ್ಮಂದಿರು ಎಂಬ ಮಾತಿದೆ.  ಇವರು ಜ್ಞಾನದೃಷ್ಟಿಗೆ ಮಾತ್ರವೇ ಗೋಚರರು. ಉದಾಹರಣೆಗೆ ವಿದ್ಯುತ್ ಎನ್ನುವುದು ಶಕ್ತಿ ರೂಪ. ಅದನ್ನು ಬರಿಕಣ್ಣಿನಿಂದ ನೋಡಳಸಾಧ್ಯ.  ಬಲ್ಬ್-ಫಾನ್ ಇತ್ಯಾದಿಗಳ ಚಾಲನೆಯ ಮೂಲಕವೇ  ಅದರ ಇರವಿಕೆಯನ್ನು ತಿಳಿಯಬೇಕಾಗಿದೆ.  ಅಂತೆಯೇ ಬ್ರಹ್ಮಾಂಡ-ಪಿಂಡಾಂಡಗಳ ಕಾರ್ಯಶೀಲತೆಯಿಂದಲೇ ದೇವಾಸುರರ  ಇರವಿಕೆಯನ್ನು ಅರಿಯಬೇಕು. 


ಸೃಷ್ಟಿಎಲ್ಲವೂ ತ್ರಿಗುಣಗಳ ಸೇರುವೆಯಿಂದಲೇ ಆಗಿದೆಯಾದ್ದರಿಂದ ನಮ್ಮಂತೆಯೇ ದೇವಾಸುರರಲ್ಲೂ ತ್ರಿಗುಣಗಳ ವ್ಯಾಪಾರ ನಡೆಯುವುದುಂಟು. ದೇವತೆಗಳಲ್ಲಿ ಸತ್ವಗುಣವು ಪ್ರಧಾನವಾಗಿದ್ದು ರಜಸ್ತಮೋಗುಣಗಳು ಗೌಣವಾಗಿರುತ್ತವೆ. ಆದ್ದರಿಂದ ದೈವೀಶಕ್ತಿ ಕೆಲಸಮಾಡುವ ವ್ಯಕ್ತಿಗಳು ಸಾತ್ವಿಕರಾಗಿಯು ಪ್ರಸನ್ನತೆ ಇತ್ಯಾದಿ ಸದ್ಗುಣಗಳಿಂದಲೂ ಕೂಡಿರುತ್ತಾರೆ. ಅಸುರರಲ್ಲಿ ರಜಸ್ತಮೋಗುಣಗಳೇ ಪ್ರಧಾನವಾಗಿದ್ದು ಸತ್ವಗುಣವು  ಗೌಣವಾಗಿರುವುದರಿಂದ ಆಸುರೀ ಪ್ರಕೃತಿಗಳಲ್ಲಿ ಕಾಮಕ್ರೋಧಾದಿ ಅರಿಷಡ್ವರ್ಗಗಳು ಉಲ್ಬಣವಾಗಿರುತ್ತವೆ. ಕ್ರೌರ್ಯ-ಹಿಂಸೆ ಮುಂತಾದ ದುರ್ಗುಣಗಳೂ ಪ್ರಬಲವಾಗುತ್ತವೆ. ಆಸುರೀಶಕ್ತಿಯ ಮೂರ್ತಾಕಾರವಾದ ಹಿರಣ್ಯಾಕ್ಷ-ಹಿರಣ್ಯಕಶಿಪು ಮುಂತಾದವರು ಇದಕ್ಕೆ ಉದಾಹರಣೆ. 

 

ಕ್ರಿಯಾಶೀಲತೆಯನ್ನುಂಟುಮಾಡುವ ರಜೋಗುಣವು ಸತ್ವ-ತಮಸ್ಸು ಎರಡರ ಜೊತೆಗೂ ಸೇರಬಲ್ಲದು. ಎರಡರಲ್ಲಿ ಯಾವುದು ಪ್ರಧಾನವಾಗಿದೆಯೋ ಆ ದಿಕ್ಕಿನಲ್ಲಿ ಕಾರ್ಯವೆಸುಗುವಂತೆ ಮಾಡುತ್ತದೆ. 


ದೇವತೆಗಳ ಸಂಖ್ಯೆಯೇ ಅಸುರರಿಗಿಂತ ಹೆಚ್ಚೆಂಬುದು ವಿಚಿತ್ರವಾಗಿ ಕಂಡರೂ ಸಹಜವೇ ಆಗಿದೆ.  ಸೃಷ್ಟಿಯನ್ನು ಸಕ್ರಮವಾಗಿ ನಡೆಸುವವರು ದೇವತೆಗಳು. ಅಕ್ರಮವಾದದ್ದು ಅಸುರರ ಕಾರ್ಯ. ಯಾವುದೇ ಕಾರ್ಯಕ್ಕೂ ಸರಿಯಾದ ದಾರಿ ಒಂದಾದರೆ ತಪ್ಪು ದಾರಿಗಳು ಎಷ್ಟು ಬೇಕಾದರೂ ಇರಬಹುದಲ್ಲವೇ? ಆದ್ದರಿಂದ ಅಸುರರ ಸಂಖ್ಯೆ ಅಧಿಕವಾಗಿರುವುದು ಸಹಜವೇ ಆಗಿದೆ. 


ಇನ್ನು 33 ಕೋಟಿ ದೇವತೆಗಳ ಆಗತ್ಯವೇನು? ಎಂದರೆ ನಮ್ಮ ದೇಹದ ಭೌತಿಕವ್ಯಾಪಾರಕ್ಕೆ ಸಹಸ್ರಾರು ನರನಾಡಿಗಳು ಆಗತ್ಯವಾಗಿರುವಂತೆಯೇ ಬ್ರಹ್ಮಾಂಡ-ಪಿಂಡಾಂಡಗಳಲ್ಲಿ ಶಕ್ತಿಯನ್ನು ತುಂಬಿ ಕಾರ್ಯನಿರ್ವಹಿಸಲು ಸಹಸ್ರಾರು ಶಕ್ತಿಗಳು ಇರುವುದರಲ್ಲಿ ಆಶ್ಚರ್ಯವೇನು?  

ಸೃಷ್ಟಿಯೇ ತ್ರಿಗುಣಾತ್ಮಕವಾಗಿರುವುದರಿಂದ ಸೃಷ್ಟಿಗಿಳಿದಿರುವ ನಾವು ತ್ರಿಗುಣಗಳ ಸೇರುವೆಯಿಂದಲೇ ಕಟ್ಟಲ್ಪಟ್ಟಿರುವೆವು. ನಮ್ಮ ಪೂರ್ವಕರ್ಮಾನುಗುಣವಾಗಿಯೇ ನಮ್ಮಲ್ಲಿ ಈ ತ್ರಿಗುಣಗಳ ಪ್ರಮಾಣವು ನಿರ್ಧಾರವಾಗುವುದು. ನಮ್ಮೊಳಗೆ ಕೆಲಸಮಾಡುವ ದೇವಾಸುರ ಶಕ್ತಿಗಳು ಸದಾ ಪರಸ್ಪರ ಪೈಪೋಟಿಯಲ್ಲಿ ನಿರತರಾಗಿರುತ್ತಾರೆ. ಸತ್ಕರ್ಮಗಳು ದೇವತಾಶಕ್ತಿಗಳಿಂದ ಪೋಷಿಸಲ್ಪಡುತ್ತವೆ. ಎಚ್ಚರತಪ್ಪಿ ನಡೆದರೆ ಅಲ್ಲಿ ಅಸುರರ  ಕೆಲಸ ಪ್ರಾರಂಭ.  ಹೇಗೆ ಹಣ್ಣನ್ನು ಕುಯ್ಯುವ ಕತ್ತಿಯನ್ನು ಸರಿಯಾಗಿ ಬಳಸದಿದ್ದಾಗ ಅದು ಕೈಯನ್ನೇ ಕುಯ್ಯುವುದೋ ಹಾಗೆ. 


ಪುರುಷಾರ್ಥಗಳ ಸಾಧನೆಯೇ ಧ್ಯೇಯವಾಗಿದ್ದು ಜೀವನ ಸಾಗಿಸಿ ಕೊನೆಗೆ ಪರಮಪುರುಷನನ್ನು  ಹೊಂದಿದಾಗಲೇ ಜೀವನದ ಸಾರ್ಥಕ್ಯ. ಇಂತಹ ಧ್ಯೇಯಬದ್ಧವಾದ ಜೀವನದಲ್ಲಿ ಮಾರ್ಗದರ್ಶನ ನೀಡುವುದು ಶಾಸ್ತ್ರಗಳು, ಭಕ್ತರ-ಮಹಾಪುರುಷರ  ಆದರ್ಶಗಳು. ಅದನ್ನು ಬಿಟ್ಟರೆ ಸದ್ಗತಿಯಿಲ್ಲ. `ಯಶ್ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ  ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂಗತಿಂ` 


ಆದ್ದರಿಂದ ಅಸುರರ ಧಾಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ಮೇಲೆಹೇಳಿದ ಮಾರ್ಗದರ್ಶನವನ್ನು ಅವಲಂಬಿಸಿಯೇ ವರ್ತಿಸ ಬೇಕು. ಜೀವನವೆಂಬುದು ತೈಲಸವರಿದ ಕಂಬದಂತೆ. ಅದರ ಮೇಲೇರುವುದು ಅತಿಕಷ್ಟಸಾಧ್ಯ. ಆ ಕಂಬವನ್ನು ಏರುವುದೆಂಬುದೇ ಜೀವಿಯ ಅಧ್ಯಾತ್ಮಜೀವನದ ಏಳಿಗೆಯನ್ನು ಸೂಚಿಸುವುದಾಗಿದೆ. ಏರುವವನನ್ನು ಕೆಳಗೆ ಸುಲಭವಾಗಿ-ವೇಗವಾಗಿ ಜಾರಿಸುವಂತಹ ಕಂಬವದು. ಆದಕ್ಕಾಗಿ ಹತ್ತುವ ಪ್ರಯತ್ನವನ್ನೇ ಮಾಡದೇನೇ ನಿಂತಲ್ಲೇ ನಿಲ್ಲುತ್ತೇವೆಂದರೂ ಅದು ಬಿಡುವುದಿಲ್ಲ. ತೈಲಕಂಬ ಜಾರಿಸುವುದು ಶತಸ್ಸಿದ್ಧ. ಅಂತೆಯೇ, ದೇವತೆಗಳನ್ನಾಶ್ರಯಿಸಿದರೆ ಮೇಲೇಳಲು ಸಹಾಯಮಾಡುತ್ತಾರೆ. ಅವರ ನೆರವನ್ನು ಬೇಡದಿದ್ದರೆ ದೇವತೆಗಳ ಸ್ಥಾನವನ್ನು ಆಕ್ರಮಿಸಲು ಸದಾ ಕಾಯುತ್ತಿರುವ ಅಸುರರು ಮುನ್ನುಗ್ಗಿಬಂದು ನಮ್ಮನ್ನು ಕೆಳಕ್ಕೆಳದೇ ಎಳೆಯುತ್ತಾರೆ.


   ದೇವಾಸುರರಿಬ್ಬರೂ ನಮ್ಮೊಳಗೇ ಕೆಲಸಮಾಡುವ ಶಕ್ತಿಗಳೆಂಬುದನ್ನು ನಾವೆಂದಿಗೂ ಮರೆಯುವಂತಿಲ್ಲ. ಆದ್ದರಿಂದ ಋಷಿವಾಕ್ಯಗಳನ್ನವಲಂಬಿಸಿ ದೈವೀಮಾರ್ಗವನ್ನು ಹಿಡಿದರೆ ತ್ರಿಗುಣಗಳಿಂದ ಕೂಡಿದ ಜೀವನದಲ್ಲೇ ತ್ರಿಗುಣಾತೀತವಾದ ಸ್ಥಿತಿಯನ್ನು ತಲುಪಬಹುದೆಂಬುದನ್ನು ಅರಿತು ಗುರಿಮುಟ್ಟುವವರಾಗೋಣ.

ಈ ಲೇಖನಮಾಲಿಕೆಯಲ್ಲಿ ತಿಳಿಸಿರುವ ವಿಷಯಗಳು ಬಹುಮಟ್ಟಿಗೆ ಶ್ರೀ ಶ್ರೀರಂಗಮಹಾಗುರುವಿನ ದೃಷ್ಟಿಕೋಣವನ್ನವಲಂಬಿಸಿ, ಶ್ರೀ ರಂಗಪ್ರಿಯಯತಿವರೇಣ್ಯರು ಮುಂತಾದ ಹಿರಿಯರ ಪ್ರವಚನಗಳ ಆಧಾರಿತ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು.


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  3/2/2024 ರಂದು ಪ್ರಕವಾಗಿದೆ.

Sunday, January 28, 2024

ದೇವಾಸುರರ ಪ್ರಕೃತಿಗಳು (Devasurara Prakrtigalu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ
(ಪ್ರತಿಕ್ರಿಯಿಸಿರಿ lekhana@ayvm.in)

ತ್ರಿಗುಣಗಳು ಮತ್ತು ದೇವಾಸುರರು  

ದೇವಾಸುರರಿಬ್ಬರ ಸಹಾಯದಿಂದಲೇ ಭಗವಂತನು ತನ್ನ ಸೃಷ್ಟಿ-ಸ್ಥಿತಿ-ಲಯ ವ್ಯಾಪಾರವನ್ನು ಮಾಡುವನು. ಈ ಮೂರರಲ್ಲಿಯೂ ಜೊತೆಜೊತೆಯಾಗಿಯೇ ಇರುತ್ತಾರೆ. ತ್ರಿಗುಣಗಳಲ್ಲಿ ದೇವತೆಗಳಲ್ಲಿ ಸತ್ವಗುಣಪ್ರಧಾನ, ರಜಸ್ತಮೋಗುಣಗಳು ಗೌಣ. ಅಸುರರಲ್ಲಿ ರಜಸ್ತಮೋಗುಣಗಳು ಪ್ರಧಾನ, ಸತ್ವಗುಣವು  ಗೌಣ. ರಜೋಗುಣ ಎನ್ನುವುದು ಎರಡೂಕಡೆಯಲ್ಲಿಯೂ ಸೇರುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸತ್ವಗುಣದ ಜೊತೆಯಲ್ಲಿದ್ದಾಗ ದೇವತಾಂಶ ಹೆಚ್ಚಾಗಿರುತ್ತದೆ. ತಮೋಗುಣದ ಕಡೆ ಸೇರಿದರೆ ಆಸುರೀಭಾವ ಹೆಚ್ಚಾಗುತ್ತದೆ. ಆದ್ದರಿಂದ ಮನುಷ್ಯ ಇದನ್ನನುಸರಿಸಿ ತನ್ನ ಪ್ರಕೃತಿಯಲ್ಲಿ ಸಮತೋಲನವನ್ನು ಸಾಧಿಸುವ ರೀತಿಯಲ್ಲಿ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು. 

 

ಅಸುರಸೃಷ್ಟಿಯ ಅವಶ್ಯಕತೆಯಾದರೂ ಇದೆಯೇ? 

 ಅಸುರರು ಏಕೆ ಇರಬೇಕು? ದೇವತೆಗಳು ಮಾತ್ರವಿದ್ದರೆ ಸಾಲದೇ? ಎಂಬ ಪ್ರಶ್ನೆ ಏಳಬಹುದು. ಮೂಗು ಸುವಾಸನೆಯನ್ನು ಮಾತ್ರ ಗ್ರಹಿಸಬೇಕು, ದುರ್ವಾಸನೆ ಗ್ರಹಿಸುವಂತಿಲ್ಲ ಎಂದು ಹೇಳಲಾದೀತೇ? ಅಂತೆಯೇ ಬ್ರಹ್ಮನಿಗೂ ದೇವತೆಗಳನ್ನು ಮಾತ್ರ ಸೃಷ್ಟಿಮಾಡಲು ಸಾಧ್ಯವಿಲ್ಲ. ಕೇವಲ ಸತ್ತ್ವಗುಣದಿಂದ ಸೃಷ್ಟಿಯು ಅಸಾಧ್ಯ. ರಜಸ್ತಮೋಗುಣಗಳ ಅತಿರೇಕದಲ್ಲಿ ಅಸುರರ ಉತ್ಪತ್ತಿ. ಹೀಗಾಗಿ ದೇವತೆಗಳ-ಅಸುರರ ಸಹಬಾಳ್ವೆ,  ಅಣ್ಣತಮ್ಮಂದಿರಂತೆ. ಒಂದೇ ತಂದೆಯ ಮಕ್ಕಳು ಎಂಬ ಮಾತಿಗೂ ಇದೆ ಅರ್ಥ. ಕ್ರಮಬದ್ಧವಾಗಿ ಕಾರ್ಯಸಾಗದೇ ವ್ಯತ್ಯಾಸವಾದಾಗ ಏನಾಗಬೇಕೆನ್ನುವುದಕ್ಕೂ ಒಂದು ಹಾದಿ ಬೇಕು. ಅದನ್ನು ನಡೆಸಿಕೊಡುವವರು ಅಸುರರೇ. ಒಬ್ಬರು ಎಚ್ಚರತಪ್ಪಿದರೆ ಮತ್ತೊಬ್ಬರು ತಮ್ಮ ಕೆಲಸವನ್ನು ಸಾಧಿಸಿಕೊಳ್ಳಲು ಕಾಯುತ್ತಲೇ ಇರುವರು. ಇಬ್ಬರಿಗೂ ಪೈಪೋಟಿ- ಯುದ್ಧ ನಡೆಯುತ್ತಲೇ ಇರುತ್ತದೆ. ಒಬ್ಬರು ಗೆದ್ದರೆ ಮತ್ತೊಬ್ಬರು ಸೋಲನ್ನಪ್ಪುವರೆನ್ನುವುದು ನಿತ್ಯಸತ್ಯ.  


ದೈವಾಸುರರಲ್ಲಿನ  ಭೇದ 

 ದೈವೀ ಮತ್ತು ಆಸುರೀ/ರಾಕ್ಷಸೀ ಪ್ರವೃತ್ತಿಗಳೆರಡೂ ಪ್ರಕೃತಿಯ ಅಭಿವ್ಯಕ್ತಿಗಳೇ. ಮನುಷ್ಯನ  ಚರ್ಯೆಯಲ್ಲಿ ಇವೆರಡರ ಮಿಶ್ರಣವನ್ನು ಕಾಣಬಹುದು. ಇದಕ್ಕೆ ಕಾರಣ ಜೀವಿಯ ಪೂರ್ವಕರ್ಮ. ಕರ್ಮದಂತೆ ಜನ್ಮ. ಪುಣ್ಯ ಕರ್ಮದಿಂದ ಸತ್ಕುಲದಲ್ಲಿ ಜನ್ಮವೆತ್ತಿದ ಉತ್ತಮನ ಲಕ್ಷಣಗಳನ್ನು ಶ್ರೀಕೃಷ್ಣನು ಗೀತೆಯಲ್ಲಿ ವರ್ಣಿಸುತ್ತಾನೆ:  ನಿರ್ಭಯವಾಗಿ ಸತ್ಯವನ್ನು ನುಡಿಯುವುದು-ಧರ್ಮವನ್ನಾಚರಿಸುವುದು, ವಿನಯ, ನಿರ್ಮಲಮನಸ್ಕನಾಗಿರುವುದು,  ಭಗವಂತನನ್ನು ಪಡೆಯುವ ಹಂಬಲ-ಸಾಧನೆ, ದಾನ, ಇಂದ್ರಿಯಸಂಯಮ, ಈಶ್ವರಪೂಜೆ, ಸ್ವಾಧ್ಯಾಯ, ತಪಸ್ಸು, ಸರಳತೆ, ಚಾಡಿಹೇಳುವ ಚಾಳಿ ಇಲ್ಲದಿರುವುದು-ಇವೆಲ್ಲ ಸಾತ್ತ್ವಿಕಗುಣಗಳು, ದೈವೀಸಂಪತ್ತು. 

ಇದರ ವಿರುದ್ಧವಾದ ಆಸುರೀಸಂಪತ್ತಿನ ದುರ್ಲಕ್ಷಣಗಳು: ಕಾಮಕ್ರೋಧಾದಿ ಅರಿಷಡ್ವರ್ಗಗಳು. ಇವು  ಪೂರ್ವಜನ್ಮ ಪಾಪದಫಲ- ಸಂಸಾರ ಬಂಧನ ಹಾಗೂ ನರಕಕ್ಕೆ ಅಣಿಮಾಡುವುವು.  ಕಾಮ-ಕ್ರೋಧ-ಲೋಭಗಳು ನರಕಕ್ಕೆ ಮೂರು ಬಾಗಿಲುಗಳಂತೆ. ಕೆಲವರಲ್ಲಿ ಇವು ಉಲ್ಬಣವಾಗಿದ್ದುದನ್ನು ಕಾಣಬಹುದು - ಕೀಚಕನಲ್ಲಿ ಕಾಮವುಪ್ರಧಾನ; ಕಂಸನಲ್ಲಿ ಕ್ರೋಧ; ದುರ್ಯೋಧನನಲ್ಲಿ ಲೋಭ. ಮೂರೂ ಸೇರಿದ್ದು ರಾವಣನಲ್ಲಿ! ಇವುಗಳ ಜೊತೆಗೆ ಮೋಹ-ಮದ-ಮಾತ್ಸರ್ಯ. ಈ ಗುಣಗಳು ಚೆನ್ನಾಗಿ ಊರಿದಾಗ ಫಲ - ಸತ್ಯ-ಈಶ್ವರ-ವೇದ ಯಾವುದನ್ನೂ ಒಪ್ಪುವುದಿಲ್ಲ, ಧರ್ಮವ್ಯವಸ್ಥೆ ಕೃತ್ರಿಮ ಎಂಬಿತ್ತ್ಯಾದಿ ನಾಸ್ತಿಕವಾದ, ಪ್ರತ್ಯಕ್ಷವೆಷ್ಟೋ ಅಷ್ಟೇ ಜೀವನವೆಂಬ ನಂಬಿಕೆ, ಜಗತ್ತು ಕೇವಲ ಪರಮಾಣುಸಂಘಟನೆ ಎನ್ನುವವಾದ(materialists),  ಇತ್ಯಾದಿ.  


ಮೈ-ಮನಗಳ ಮೇಲೆ ಅಸುರರ ದಾಳಿ   

ಕತ್ತಿಯನ್ನು ತರಕಾರಿ ಹೆಚ್ಚುವುದಕ್ಕೆ ಉಪಯೋಗಿಸುವಾಗ ಸ್ವಲ್ಪ ಎಚ್ಚರತಪ್ಪಿದರೆ ಬೆರಳನ್ನು  ಕೊಯ್ದುಕೊಳ್ಳುತ್ತೇವೆ. ರಕ್ತ ಸುರಿಯುತ್ತದೆ. ಬೆರಳನ್ನು ಕೊಯ್ದು ರಕ್ತಬರಿಸುವುದು ಕತ್ತಿಯ ಗುರಿಯಲ್ಲ. ಅದನ್ನು ಕ್ರಮವರಿತು ಉಪಯೋಗಿಸಿದ್ದಲ್ಲಿ ಸತ್ಪ್ರಯೋಜನವಾಗುತ್ತಿತ್ತು. ಅಂತೆಯೇ ದೇವತೆಗಳ ಸಹಾಯದಿಂದಾಗುವುದು ಸತ್ಪ್ರಯೋಜನ, ಆದರೆ ಅಜಾಗರೂಕ ವರ್ತನೆಯಾದರೆ ಅಸುರರು ಮುನ್ನುಗ್ಗಿ ವಿಪರೀತ ಪರಿಣಾಮ. ಎಚ್ಚರಿಕೆ ವಹಿಸಿದಾಗ ಅಸುರರ ಹಿನ್ನಡೆ, ದೇವತೆಗಳ ಮುನ್ನಡೆ. ಇದೇ ದೇವಾಸುರರ ನಡುವಣ ಸಾಗುವ ಯುದ್ಧದ ಪರಿಣಾಮ. 

ಹಾಗೆಯೇ ಇನ್ನು ನಮ್ಮ ಮನಸ್ಸಿನ ಮೇಲಾಗುವ ಪರಿಣಾಮವನ್ನು ಗಮನಿಸಿದರೆ, ಪ್ರಮಾದಕ್ಕೆ ವಶರಾದರೆ (ಎಚ್ಚರತಪ್ಪಿದರೆ) ಸಮಯಕಾಯುತ್ತಿರುವ ಅಸುರರು ನಮ್ಮ ಮೇಲೆ ದಾಳಿಮಾಡಿ ನಮ್ಮಲ್ಲಿ ದುಷ್ಟವಾದ ಭಾವನೆಗಳನ್ನು ಅಂದರೆ ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಎಬ್ಬಿಸುವರು. ಅಂತೆಯೇ ಬುದ್ಧಿಯಲ್ಲಿ ವಿಕೃತಿಯನ್ನು ಒಡ್ಡುವರು- ಪರಿಣಾಮ, ನಾಸ್ತಿಕವಾದ ರುಚಿಸತೊಡಗುವುದು. ಸತ್ಯ-ಧರ್ಮದಲ್ಲಿ ಅಸಡ್ಡೆ ಹುಟ್ಟುವುದು. 

 

ತಿಳಿಯದಿದ್ದರೂ ಕೆಲಸ ನಡೆಯುವುದೇ? 

ನಮ್ಮ ಪ್ರಕೃತಿಯಲ್ಲಿ ಭೌತಿಕ-ದೈವಿಕ-ಆಧ್ಯಾತ್ಮಿಕ ಏಳಿಗೆಗೆ ಪೋಷಕವಾದ ಧರ್ಮ ಒಂದುಂಟು. ಆ ಧರ್ಮದ ರಕ್ಷಕರೇ ದೇವತೆಗಳು.  ನಮ್ಮ ದೈನಂದಿನ ಕರ್ಮಗಳಲ್ಲಿ ದೇವತೆಗಳ ಪಾತ್ರದ ಅರಿವು ನಮಗಿಲ್ಲದಿರಬಹುದು. ಆದರೂ ತಮಗೆ ವಿಧಿಸಿರುವ ಕರ್ತವ್ಯವನ್ನು ಅವರು ನಿರ್ವಹಿಸುತ್ತಲೇ ಇರುವರು. ಏಕೆಂದರೆ ಇವರೆಲ್ಲರೂ ಭಗವಂತನಿಂದ ತನ್ನ ಸೃಷ್ಟಿ-ಸ್ಥಿತಿ-ಲಯ ಕಾರ್ಯನಿರ್ವಹಣೆಗೆ ನಿಯಮಿಸಲ್ಪಟ್ಟವರು. ಉದಾಹರಣೆಗೆ Passport officeಗೆ ಅಪ್ಲಿಕೆಷನ್ ಕೊಟ್ಟರೆ ಸಾಕು. ಅಲ್ಲಿಯ ಕಾರ್ಯವಿಧಾನಗಳ ಪೂರ್ಣಅರಿವು ನಮಗೆ ಇರಬೇಕೆಂದಿಲ್ಲ. ಅದಕ್ಕಾಗಿ ನಿಯಮಿಸಲ್ಪಟ್ಟವರ ಹೊಣೆಗಾರಿಕೆ ಅದು. ಅಂತೆಯೇ ನಮ್ಮಲ್ಲೂ ಕೂಡ ದೇವಾಸುರರಿಬ್ಬರೂ ಭಗವಂತನ ಆಜ್ಞಾನುಸಾರ ಕಾರ್ಯಗಳನ್ನು ನಿರ್ವಹಿಸುವರು. ನಮಗೆ ಅದರ ಅರಿವಿರಲಿ-ಇಲ್ಲದಿರಲಿ ನಾವು ಒಪ್ಪಲಿ-ಒಪ್ಪದಿರಲಿ ಅವರವರ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಆದ್ದರಿಂದ ಇಬ್ಬರ ಸಹಕಾರವೂ ನಮ್ಮ ಜೀವನದ ಆಗುಹೋಗುಗಳಿಗೆ ಅವಶ್ಯಕ.  


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  27/1/2024 ರಂದು ಪ್ರಕವಾಗಿದೆ.

Wednesday, January 24, 2024

ಕರ್ಮಗಳಲ್ಲಿ ದೇವಾಸುರರು - ತಾತ್ತ್ವಿಕ ಹಿನ್ನೆಲೆ (Karmagalalli Devasuraru -Tattvika Hinnele)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)



ದೇವಾಸುರರೆಂಬುದರ ಹಿಂದಿರುವ ತತ್ತ್ವಗಳನ್ನು ಕೆಲವು ಪುರಾಣಕಥೆಗಳ ಮೂಲಕ ಗಮನಿಸಿದೆವು. ಅಂತೆಯೇ ಕೆಲವು ಕರ್ಮಗಳಲ್ಲಿಯೂ ದೇವಾಸುರರ ಪ್ರಕರಣವು ಪ್ರಚಲಿತವಿರುವುವು. ಉದಾಹರಣೆಗೆ, ಶ್ರಾದ್ಧಕರ್ಮದಲ್ಲಿ ಪಿತೃಕಾರ್ಯವು ಪೂರ್ಣಗೊಳ್ಳದಂತೆ ಅಸುರರು ಧ್ವಂಸಮಾಡುತ್ತಾರಂತೆ. ಅಲ್ಲಿ ಸೌಮ್ಯರಾದ ಪಿತೃದೇವತೆಗಳ ರಕ್ಷಣೆಗಾಗಿ ಶಸ್ತ್ರಪಾಣಿಗಳಾದ ವಿಶ್ವೇದೇವತೆಗಳಿರಬೇಕೆಂಬ ನಿಯಮವಿದೆ.  ಆದರೆ ಶ್ರಾದ್ಧಕರ್ಮಗಳನ್ನು ಅನೇಕ ಶತಮಾನಗಳಿಂದಲೂ ಆಚರಿಸುತ್ತಲಿದ್ದರೂ ಎಂದೂ ಯಾರೂ ಅಸುರರನ್ನಾಗಲಿ ಪಿತೃದೇವತೆಗಳನ್ನಾಗಲಿ ಕಂಡಿಲ್ಲ! ಹಾಗಿದ್ದಲ್ಲಿ ಶ್ರಾದ್ಧಾಚಾರಣೆಯ ಔಚಿತ್ಯವೇನು? ಅಂತೆಯೇ ಪುಂಸವನ-ಸೀಮಂತ ಸಂಸ್ಕಾರಗಳಲ್ಲಿ ಗರ್ಭಿಣಿಯನ್ನು ಮತ್ತು ಗರ್ಭವನ್ನು ಅಸುರರ ದೆಸೆಯಿಂದ ರಕ್ಷಿಸಲೋಸುಗ ಕೆಲವು ವಿಶೇಷ ಕ್ರಿಯೆಗಳು ಆಚರಿಸಲ್ಪಡುತ್ತವೆ. ಇಲ್ಲೂ ಸಹ ಯಾವ ಅಸುರರೂ ಗೋಚರವಾಗಿಲ್ಲ. ಈ ವಿಚಾರವನ್ನು ಅರ್ಥೈಸಿಕೊಳ್ಳಲು  ಇದರ ಹಿಂಬದಿಯಲ್ಲಿನ  ಮರ್ಮವನ್ನು ತಿಳಿಯಬೇಕಾಗಿದೆ. 


ಯಾವ ಶಕ್ತಿ ಯಾವಾಗ ಪ್ರಬಲ?

ಶಕ್ತಿ-ಪ್ರಕಾಶಗಳೇ ದೇವತೆಗಳ ಮೂಲಭೂತಸ್ವರೂಪ. ಅವರದು ಪಾಂಚಭೌತಿಕಶರೀರವಲ್ಲ. ಅಂದರೆ ನಮ್ಮಂತೆ ಸ್ಥೂಲರೂಪಿಗಳಲ್ಲ. ವಿಶೇಷ ಯೋಗದೃಷ್ಟಿ-ದೈವೀದೃಷ್ಟಿಗೆ ಮಾತ್ರವೇ ಪುರುಷಾಕಾರದಿಂದಲೂ ಗೋಚರವಾಗುವವರು ಎಂಬುದನ್ನು ಹಿಂದೆಯೇ ಗಮನಿಸಿದ್ದೇವೆ. ಅಸುರರೂ ಸಹ ಶಕ್ತಿಸ್ವರೂಪರಾಗಿದ್ದು ಬ್ರಹ್ಮಾಂಡದಲ್ಲಿಯೂ ಪಿಂಡಾಡದಲ್ಲಿಯೂ ತಮ್ಮ ಕಾರ್ಯವನ್ನು ನಿರ್ವಹಿಸುವರು.

ಅವರ ಕಾರ್ಯನಿರ್ವಹಣಾ ಕ್ರಮವನ್ನು ಉದಾಹರಣೆಗಳ ಮೂಲಕ ಗಮನಿಸಬಹುದು.

1. ನಮ್ಮ ಜೀರ್ಣಕ್ರಿಯೆಯಲ್ಲಿ ಶರೀರದ ಅಂಗಗೋಪಾಂಗಗಳು ತಮ್ಮತಮ್ಮ ಕ್ರಿಯೆಯಮೂಲಕ ಆಹಾರದಲ್ಲಿರುವ ಸಾರವನ್ನು ಹೀರಿ ಇಡೀ ಶರೀರಕ್ಕೆ ಶಕ್ತಿಯನ್ನು ಕೊಡುತ್ತದೆಯಷ್ಟೇ. ಜೀರ್ಣಶಕ್ತಿ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಜೀರ್ಣಕ್ರಿಯೆ ಸರಿಯಾಗಿ ಸಾಗುತ್ತಿದೆಯೇ ಎಂಬುದನ್ನು ಅದರ ಪರಿಣಾಮದಿಂದ ತಿಳಿಯುತ್ತೇವೆ. ಅಂತೆಯೇ ಆಹಾರ ಜೀರ್ಣವಾಗದಿದ್ದಾಗ ಶರೀರದಲ್ಲಿ ನಾನಾ ತರಹದ ಬಾಧೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಅಜೀರ್ಣ ಎಲ್ಲಿದೆ ತೋರಿಸಿ ಎಂಬ ಪ್ರಶ್ನೆ ಅಸಂಬದ್ಧವಾಗುವುದು. ಅಂತೆಯೇ ಅಜೀರ್ಣಶಕ್ತಿ-ಜೀರ್ಣಶಕ್ತಿ ಇವೆರಡೂ ಶರೀರದಲ್ಲಿ ಕೆಲಸ ಮಾಡುತ್ತವೆಯಾದರೂ ಎರಡೂ ಒಟ್ಟಿಗೆ ಕೆಲಸ ಮಾಡುವುದಿಲ್ಲ.  ಆರೋಗ್ಯವಾಗಿರುವಾಗ ಜೀರ್ಣಶಕ್ತಿ ಉತ್ತಮರೀತಿಯಲ್ಲಿ ಕೆಲಸ ಮಾಡುತ್ತದೆ. ಜೀರ್ಣಶಕ್ತಿ ಕುಂಠಿತವಾದರೆ ಪರಿಣಾಮ ಅಜೀರ್ಣವೇ. ಆದ್ದರಿಂದ ಇವೆರಡರಲ್ಲಿ ಯಾವುದಾದರೊಂದು ಮಾತ್ರ ಅನುಭವಕ್ಕೆ ಬರುವುದು. 

ಹಾಗೆಯೇ ಜೀರ್ಣಕ್ರಿಯೆಗಿಂತಲೂ ಅಜೀರ್ಣಕ್ರಿಯೆಯು ತನ್ನನ್ನು ವಿವಿಧರೀತಿಯಲ್ಲಿ ಪ್ರಕಟಪಡಿಸಿಕೊಳ್ಳುತ್ತದೆ. ಅಂದರೆ, ಸಕ್ರಮ ಒಂದಾದರೆ ಅಕ್ರಮ ಅನೇಕ ಇರಬಹುದೆನ್ನುವುದು ಇಲ್ಲಿ ಗಮನಾರ್ಹ. ಗಣಿತದಲ್ಲೂ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಒಂದೇ, ತಪ್ಪುತ್ತರ ನೂರಾರು ಇರಬಹುದೆನ್ನುವುದೂ ಸರ್ವವಿದಿತ.

2. ಹಲಸಿನ ಹಣ್ಣನ್ನು ಮಿತಪ್ರಮಾಣದಲ್ಲಿ ಸೇವಿಸಿದರೆ ನಾಲಿಗೆಗೆ ರುಚಿ, ಮನಸ್ಸಿಗೆ ಖುಷಿ, ಶರೀರಕ್ಕೆ ಪುಷ್ಟಿ. ಆದರೆ ಅದನ್ನೇ ಮಿತಿಮೀರಿ ತೆಗೆದುಕೊಂಡರೆ ದುಷ್ಪರಿಣಾಮವಾಗಿ, ಅಜೀರ್ಣಕ್ಕೆ ಹಲಸಿನ ಹಣ್ಣೇ ಕಾರಣವೆಂದು ತೀರ್ಮಾನಿಸುವುದು ತಪ್ಪೇನಲ್ಲ. ಆದರೆ ಅಜೀರ್ಣವನ್ನು ಹಲಸಿನಹಣ್ಣಿನಲ್ಲಿ ಹುಡುಕಿದರೆ ಕಾಣಿಸೀತೇ! ಆದ್ದರಿಂದ ಜೀರ್ಣಶಕ್ತಿ-ಅಜೀರ್ಣಶಕ್ತಿ ಎರಡೂ ಇರುವುದು ನಮ್ಮಲ್ಲೇ, ಆದರೆ ಅವುಗಳು ಕಾಣಸಿಗುವುದು ಪರಿಣಾಮದಲ್ಲಿ ಮಾತ್ರವೇ.  ಅಂತೆಯೇ ಶಕ್ತಿರೂಪರಾದ ದೇವಾಸುರರನ್ನು ಚರ್ಮಚಕ್ಷುಸ್ಸಿನಿಂದ ಹುಡುಕುವಂತಿಲ್ಲ. ಅವರುಗಳ ಇರುವನ್ನು ಪರಿಣಾಮದ ಮೇಲೆಯೇ ತಿಳಿಯತಕ್ಕದ್ದು. ದೇವಾಸುರರಲ್ಲಿ ಪ್ರಬಲರಾರೆನ್ನುವುದನ್ನು ಪರಿಣಾಮದಿಂದಲೇ ತೀರ್ಮಾನಿಸಬೇಕಾಗುವುದು. 


ಪೈಪೋಟಿ  

ಇಲ್ಲಿ, ಕ್ರಮಬದ್ಧವಾಗಿ ಜೀರ್ಣಕ್ರಿಯೆಯು ಸಾಗುವುದನ್ನು ದೇವತೆಗಳ ಕೆಲಸ ಎನ್ನಬಹುದು. ಅಂದರೆ, ಶರೀರದಲ್ಲಿನ ಸೃಷ್ಟಿನಿಯಮವನ್ನು ಕಾಪಾಡುವವರು ದೇವತಾಶಕ್ತಿಗಳು. ಜೀರ್ಣಶಕ್ತಿ(ದೇವತೆಗಳು) ಕುಂಠಿತವಾದಾಗ ಅಜೀರ್ಣಶಕ್ತಿ(ಅಸುರರು) ನುಗ್ಗಿ ಪ್ರಕೃತಿಯನ್ನು ಕೆಡಿಸುತ್ತದೆ. ಅಸುರರಿಂದ ಶರೀರನಿಯಮವು ಅಸ್ತವ್ಯಸ್ತವಾಗುವುದು. ಜೀರ್ಣ-ಅಜೀರ್ಣ ಎರಡೂ ಜೊತೆಯಾಗಿರುವಂತೆ ಕಂಡರೂ ಅವೆರಡಕ್ಕೂ ಪರಸ್ಪರ ಪೈಪೋಟಿ ಇರುತ್ತದೆ. ಯಾವುದಕ್ಕೆ ಜಯ ಎನ್ನುವುದು ನಮ್ಮ systemಅನ್ನು ಅವಲಂಬಿಸಿರುತ್ತದೆ. ಅಂದರೆ ಪರಸ್ಪರ ಎರಡಕ್ಕೂ ಕೂಡ ಘರ್ಷಣೆ ಆಗುತ್ತಲೇ ಇರುತ್ತದೆ. ಕೊನೆಗೆ ಯಾವುದೋ ಒಂದಕ್ಕೆ ಜಯ. ಅದು ವಿಜೃಂಭಿಸುತ್ತದೆ.  

ಇದನ್ನೇ ಶಕ್ತಿರೂಪದಲ್ಲಿ ತೆಗೆದುಕೊಂಡಾಗ ದೇವತೆಗಳಿಗೂ ಅಸುರರಿಗೂ ನಡೆಯುವ ಯುದ್ಧ  ಎನ್ನಬೇಕಾಗುವುದು. ಶ್ರಾದ್ಧ, ಸೀಮಂತ ಮುಂತಾದ ಕರ್ಮಗಳಲ್ಲೂ ಸಾಧಿಸಬೇಕಾದ ಧ್ಯೇಯವೊಂದುಂಟು. ಆ ಧ್ಯೇಯ ಸಾಧನೆಗೆ ಬೇಕಾದ ಶರೀರಧರ್ಮವೊಂದುಂಟು. ಆ ಧರ್ಮವನ್ನು ಕಾಪಿಡುವ ಶಕ್ತಿಗಳೇ ದೇವತೆಗಳು. ಅದು ವ್ಯತ್ಯಸ್ತವಾಗುವುದು ಆಸುರೀಶಕ್ತಿಗಳಿಂದ. ಇವೆರಡೂ ಶಕ್ತಿಗಳು ಶರೀರದಲ್ಲಿಯೇ ನೆಲೆಸಿ ಸೆಣಸುತ್ತವೆ. ಯಾರ ದೇಹಪ್ರಕೃತಿಯಲ್ಲಿ ದೇವತಾಶಕ್ತಿಗಳು ಗೆಲ್ಲುತ್ತವೆಯೋ ಆ ವ್ಯಕ್ತಿಯು ಕರ್ಮದ ಗುರಿಮುಟ್ಟುವನು ಎಂಬುದು ತಾತ್ಪರ್ಯ. 

 

ದೇವಾಸುರರ ಸಂಧಿ 

ಅಮೃತ ಮಥನದ ಕಥೆಯಂತೆ ಕೆಲವೊಮ್ಮೆ ದೇವಾಸುರರಿಬ್ಬರೂ ಒಂದೇ ಗುರಿಮುಟ್ಟಲು ಸಂಧಿಮಾಡಿಕೊಳ್ಳುವ ಸಂಭವವೂ ಉಂಟು. ಸಂಧಿಯ ಹಿಂಬದಿಯಲ್ಲಿ ಸಂಚು ಇರಬಹುದೆಂದು ಇಬ್ಬರಿಗೂ ಅನುಮಾನ ಇದ್ದೇ ಇರುವುದು. ಮರತ್ವವನ್ನು ಹೊಂದಲು ಅಮೃತವನ್ನು ಪಡೆಯಲೋಸುಗ ಇಬ್ಬರೂ ಸೇರಿ ಸಮುದ್ರಮಥನಕ್ರಿಯೆಯನ್ನು ಕೈಗೊಳ್ಳುತ್ತಾರೆ. ಒಂದುಕಡೆ ದೇವತೆಗಳು ಮತ್ತೊಂದುಕಡೆ ಅಸುರರಿದ್ದು ಕಡೆದಾಗಲೇ ಅಮೃತವು ದೊರೆಯುವುದು. ಮಥನಕ್ರಿಯೆಗೆ ನಾನಾರೀತಿಯಲ್ಲಿ ಸಹಾಯಮಾಡಿದಂತೆ ಮಹಾವಿಷ್ಣುವು ಮೋಹಿನೀರೂಪಧರಿಸಿ ಅಮೃತವನ್ನು ದೇವತೆಗಳಿಗೂ ಸುರಾಪಾನವನ್ನು ಅಸುರರಿಗೂ ಉಪಾಯದಿಂದ ಹಂಚಿ ದೇವತೆಗಳನ್ನು ಸಂರಕ್ಷಿಸಿದನು.


(ಮುಂದುವರಿಯುವುದು) 

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  20/1/2024 ರಂದು ಪ್ರಕಟವಾಗಿದೆ. 

Saturday, January 13, 2024

ನರಕಾಸುರ (Narakasura)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)


 


ನರನಿಗೆ ಅತ್ಯಂತ ದುಃಖವನ್ನುಂಟುಮಾಡುವುದೇ ನರಕ. ಅದನ್ನು ಪ್ರಕಟಪಡಿಸುವ ಸಾಕಾರಮೂರ್ತಿಯೇ ನರಕಾಸುರ. ಭೂಮಿದೇವಿಯ ಮಗನಾದ್ದರಿಂದ 'ಭೌಮ' ಎಂದೂ ಕರೆಯಲ್ಪಡುತ್ತಿದ್ದನು. ಇವನ ರಾಜಧಾನಿ ಪ್ರಾಗ್ಜ್ಯೋತಿಷಪುರ. ಜನ್ಮತಃ ಇವನು ಅಸುರ. ಉತ್ಕಟತಪಸ್ಸಿನ ಪ್ರಭಾವದಿಂದ ಮಹಾಬಲಿಷ್ಠನಾಗಿದ್ದನು. ಜೊತೆಗೆ ಅವನ ತಾಯಿಯ ವರವೂ ಸೇರಿತ್ತು - "ನನ್ನನ್ನು ಯಾರೂ ಕೊಲ್ಲುವುದಕ್ಕೆ ಆಗದಿರಲಿ" ಎಂದು ಪ್ರಾರ್ಥಿಸಿದಾಗ, ಭೂದೇವಿಯು "ಅದು ಅಸಾಧ್ಯ, ಬದಲಿಗೆ ನನ್ನ ಅನುಮತಿ ಇಲ್ಲದೆ ಯಾರೂ ನಿನ್ನನ್ನು  ಕೊಲ್ಲದಿರಲಿ" ಎಂದು ಆಶೀರ್ವಾದ ಮಾಡಿದ್ದಳು. ತಾಯಿಯಾದವಳು ಮಗನನ್ನು ಸಂಹರಿಸಲು ಅನುಮತಿ ಖಂಡಿತ ನೀಡಲಾರಳು ಎಂಬ ವಿಶ್ವಾಸದಿಂದ ಮರಣವೇ ಇಲ್ಲವೆಂಬ ಧೈರ್ಯ ಇವನಿಗೆ !!


ಇಂತಹ ಸೌಲಭ್ಯವನ್ನು ಲೋಕಕಲ್ಯಾಣಕ್ಕಾಗಿ ಉಪಯೋಗಿಸದೆ ವರಬಲದಿಂದ ಮತ್ತನಾಗಿ ಲೋಕಕಂಟಕನಾದ. ಧರ್ಮಸೇತುವೆಯನ್ನು ರಕ್ಷಿಸಲು ಭಗವಂತನಿಂದ ನಿಯಮಿಸಲ್ಪಟ್ಟಿರುವ ದೇವತೆಗಳಿಗೇ ಕಂಟಕನಾದನು. ತನ್ನ ಅಸಾಧಾರಣ ಪರಾಕ್ರಮದಿಂದ ಅವರನ್ನು ಜಯಿಸಿದ್ದಲ್ಲದೇ ಇಂದ್ರನ ಸಾರ್ವಭೌಮಛತ್ರವು, ದೇವಮಾತೆಯಾದ ಆದಿತೀದೇವಿಯ ಕುಂಡಲಗಳು ಮುಂತಾದ ಅವರ ಚಿಹ್ನೆಗಳನ್ನು ಕಿತ್ತುತಂದನು. ಇಂದ್ರನು "ನರಕಾಸುರನ ತೀವ್ರಉಪದ್ರವದಿಂದ ನಮ್ಮನ್ನು ಕಾಪಾಡಬೇಕು" ಎಂದು ಕೃಷ್ಣನಲ್ಲಿ ಪ್ರಾರ್ಥಿಸಿಕೊಂಡ. ಇಂದ್ರನ ಮೊರೆಯನ್ನು ಕೇಳಿದ ಶ್ರೀಕೃಷ್ಣನು ಗರುಡಾರೂಢನಾಗಿ ಪ್ರಾಗ್ಜ್ಯೋತಿಷಪುರಕ್ಕೆ ಹೊರಟನು. ಗರುತ್ಮಂತ ಭಗವಂತನಿಗೆ ವಾಹನವಷ್ಟೇ ಅಲ್ಲದೇ ಮಿತ್ರನಾಗಿಯೂ ದಾಸನಾಗಿಯೂ ಧ್ವಜವಾಗಿಯೂ ಶೇಷಭೂತನಾಗಿಯೂ ಇರುವವನು. ಶ್ರೀಕೃಷ್ಣನು ಸ್ಮರಿಸಿದಮಾತ್ರಕ್ಕೇ ಅವನ ಮುಂದೆ ಕಾಣಿಸಿಕೊಳ್ಳುವನು. ಇವನ ಸಾಮರ್ಥ್ಯವೆಂದರೆ ಭೂಮಿಯಲ್ಲಿ, ಸಮುದ್ರದಲ್ಲಿ, ಸ್ವರ್ಗದಲ್ಲಿ, ಪರಮವೈಕುಂಠದಲ್ಲಿಯಾಗಲೀ ಸಂಚರಿಸಬಲ್ಲವನು. ಇಂತಹ ಗರುಡನ ಹೆಗಲೇರಿ ಸತ್ಯಭಾಮಾ ಸಮೇತನಾಗಿ ನರಕಾಸುರನ ರಾಜಧಾನಿಗೆ ಹೊರಟನು. ಸತ್ಯಭಾಮೆಯೂ ಭೂದೇವಿಯ ಅವತಾರವೇ. ಭೂಮಾತೆಯು ಅನುಮತಿ ಕೊಡುವವರೆಗೂ ಅವನಿಗೆ ಮರಣವಿಲ್ಲವೆಂಬ ವರಪಡೆದವನ ಸಂಹಾರಕ್ಕೆ ಭೂದೇವಿಯೇ ಆಜ್ಞೆಯನ್ನು ನೀಡಬೇಕು. 


ಪ್ರಾಗ್ಜ್ಯೋತಿಷಪುರವು ಗಿರಿದುರ್ಗ-ಶಸ್ತ್ರದುರ್ಗ-ಜಲದುರ್ಗ-ಆಗ್ನಿದುರ್ಗ-ವಾಯುದುರ್ಗಗಳೆಂಬ ಐದು ದುರ್ಗಗಳಿಂದ ಕೂಡಿದ್ದಾಗಿತ್ತು. ಇದು ಸಾಲದೋ ಎಂಬಂತೆ, ಮುರಾಸುರನೆಂಬ ಐದು ತಲೆಯ ರಾಕ್ಷಸನ ನೂರಾರು ಪಾಶಗಳು ಇದಕ್ಕೆ ರಕ್ಷಣೆಯನ್ನು ನೀಡುತ್ತಿದ್ದವು. ಶ್ರೀಕೃಷ್ಣನು ತನ್ನ ಗದೆಯಿಂದ ಅಲ್ಲಿಯ ಗಿರಿದುರ್ಗವನ್ನೂ, ಬಾಣಗಳಿಂದ ಶಸ್ತ್ರದುರ್ಗವನ್ನೂ ಸುದರ್ಶನ ಚಕ್ರದಿಂದ ಜಲ-ಅಗ್ನಿ-ವಾಯುದುರ್ಗಗಳನ್ನೂ ಧ್ವಂಸಮಾಡಿದನು. ಅಂತೆಯೇ ತನ್ನ ನಂದಕವೆಂಬ ಕತ್ತಿಯಿಂದ ಮುರಾಸುರನ ನೂರಾರು ಪಾಶಗಳನ್ನು ಕತ್ತರಿಸುತ್ತಾ ತನ್ನ ಅಮೋಘವಾದ ಶಂಖನಾದದಿಂದ ಅಸುರರ ಹೃದಯಗಳನ್ನೂ ಯಂತ್ರಗಳನ್ನೂ ಭೇದಿಸಿದನು. ಶಂಖದ ಭಯಂಕರ ಧ್ವನಿಯನ್ನು ಕೇಳಿ ಮುರಾಸುರನು ನಿದ್ರೆಯಿಂದೆದ್ದು ತ್ರಿಶೂಲದೊಡನೆ ಕ್ರೋಧದಿಂದ ಧಾವಿಸಿದನು. ಶೂಲವನ್ನು ಗರುತ್ಮಂತನಮೇಲೆ ವೇಗವಾಗಿ ಎಸೆದಾಗ ಕೃಷ್ಣನು ಅದನ್ನು ಚೂರುಮಾಡಿದನು. ಹೀಗೆ ಅವನ ಅನೇಕ ಅಸ್ತ್ರ-ಶಸ್ತ್ರಗಳು ವಿಫಲವಾದಮೇಲೆ ಕಡುಕೋಪದಿಂದ ಓಡಿಬರುತ್ತಿದ್ದ ಮುರಾಸುರನ ಐದೂತಲೆಗಳನ್ನು ಲೀಲಾಜಾಲವಾಗಿ ಚಕ್ರಾಯುಧದಿಂದ ಕತ್ತರಿಸಿದನು. ತಂದೆಯ ಮರಣದಿಂದ ಕೋಪಗೊಂಡ ಮುರನ ಏಳುಮಂದಿ ಪುತ್ರರು ಪ್ರಯೋಗಿಸಿದ ಅನೇಕಾನೇಕ ಆಯುಧಗಳನ್ನು ಕೃಷ್ಣನು ಛಿದ್ರಛಿದ್ರವಾಗಿಸಿ ಅವರ ತಲೆಗಳನ್ನೂ ಕತ್ತರಿಸಿದನು. 

ನಂತರ ನರಕನೇ ಕೋಪಾವೇಶದಿಂದ ಕೃಷ್ಣನನ್ನು ಎದುರಿಸಿದನು. ಮೊದಲು ಗರುತ್ಮಂತನಮೇಲೆ ನೂರಾರು ಜನರನ್ನು ಸಂಹರಿಸುವಂತಹ ತನ್ನ ಶತಘ್ನಿಯನ್ನು(ಇಂದಿನ ಬಾಂಬ್ ನಂತೆ) ಪ್ರಯೋಗಿಸಿದ. ಶ್ರೀಕೃಷ್ಣನು ತನ್ನ ತೀಕ್ಷ್ಣವಾದ ಬಾಣಗಳಿಂದ ಅದನ್ನು ವಿಫಲಗೊಳಿಸಿ ಅನೇಕಾನೇಕ ರಾಕ್ಷಸರನ್ನೂ ಮಹಾಸೇನೆಯನ್ನೂ ಸಂಹಾರ ಮಾಡಿದನು. ಗರುಡನೂಸಹ ತನ್ನ ರೆಕ್ಕೆಗಳ ಬಡಿದಾಟದಿಂದ ಅಸುರಸೈನ್ಯವನ್ನು ಸಂಹಾರ ಮಾಡುತ್ತಿದ್ದನು. ಆಗ ನರಕಾಸುರನೇ ತನ್ನ ಶಕ್ತ್ಯಾಯುಧವನ್ನು ಕೃಷ್ಣನಮೇಲೆ ಪ್ರಯೋಗಿಸಿದನು. ಅದನ್ನು ಸಹಿಸಲಾರದ ಸತ್ಯಭಾಮೆಯು ಅವನನ್ನು ಕೂಡಲೇ ಸಂಹರಿಸೆಂದು ಆಜ್ಞಾಪಿಸಿದಳು. ಆಗ ಕೃಷ್ಣನು ಆತನ ಆಯುಧದಿಂದ ಸ್ವಲ್ಪವೂ ವಿಚಲಿತನಾಗದೆ ಆತನ ತಲೆಯನ್ನು ಚಕ್ರಾಯುಧದಿಂದ ಕತ್ತರಿಸಿ ಭೂಮಿಯಲ್ಲಿ ಬೀಳಿಸಿದನು. ಅಸುರರಲ್ಲಿ ಹಾಹಾಕಾರವಾಗುತ್ತಲೇ ದೇವತೆಗಳೆಲ್ಲ ಪುಷ್ಪವೃಷ್ಟಿಸಮೇತ ಸ್ತುತಿಸಿದರು. ಭೂಮಾತೆಯೂ ಅಸುರನು ದುರಹಂಕಾರದಿಂದ ಅಪಹರಿಸಿದ್ದ ದಿವ್ಯಪದಾರ್ಥಗಳೆಲ್ಲವನ್ನೂ  ಕೃಷ್ಣನಿಗೆ ಒಪ್ಪಿಸಿ ನಮಸ್ಕರಿಸಿದಳು. ನರಕಾಸುರನಿಂದ ಸೆರೆಹಿಡಿಯಲ್ಪಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನೂ ಕೃಷ್ಣನು ವಿವಾಹವಾದನು.


ತತ್ತ್ವಾರ್ಥ: ಭೂದೇವಿಯ ಮಕ್ಕಳಾಗಿ ಆಕೆಯ ಸಂಪತ್ತುಗಳನ್ನು ರಕ್ಷಿಸದೆ ಆಸುರೀಪ್ರವೃತ್ತಿಯಿಂದ ಸೂರೆಯಾಡಿ  ದೇವಲೋಕ-ಮನುಷ್ಯಲೋಕದ ಕಂಟಕರಾಗುವವರೆಲ್ಲರೂ ನರಕಾಸುರರೇ. ಪ್ರಾಗ್ಜ್ಯೋತಿಷಪುರವೆಂಬುದು   ಹೊರಮುಖವಾದ ಇಂದ್ರಿಯಗಳಕಡೆ ಹರಿಯುವ ಪ್ರವೃತ್ತಿಯುಳ್ಳ ದೇಶ. ಇದು ಯೋಗಿಗಳ ನೆಲೆಯಾದ  ಪ್ರತ್ಯಗ್ಜ್ಯೋತಿಷಪುರಕ್ಕೆ-ಅಂತರ್ಮಾರ್ಗಕ್ಕೆ ವಿರುದ್ಧವಾದುದು. ಹೀಗೆ ರಾಜಧಾನಿಯ ಹೆಸರೂ ಅನ್ವರ್ಥವಾಗಿಯೇ ಇದೆ!   ಐದುತಲೆಯ ಮುರಾಸುರನೂ ಆತನ ಪಾಶಗಳೂ ಪಂಚಪ್ರಾಣಗಳನ್ನೂ ಅವುಗಳ ವೃತ್ತಿಗಳನ್ನೂ ಪ್ರತಿನಿಧಿಸುತ್ತವೆ.  ಅವನ ನಗರದ ಪಂಚದುರ್ಗಗಳು ಪಂಚಭೂತಗಳನ್ನು ಪ್ರತೀಕಿಸುತ್ತವೆ. ಸೆರೆಹಿಡಿಯಲ್ಪಟ್ಟ ಸ್ತ್ರೀಯರೇ ಹದಿನಾರುಸಾವಿರ ನಾಡಿಗಳು. ಆತನ ಕೃತ್ಯಗಳಿಂದ ಬಾಧಿತವಾದವುಗಳನ್ನು ಬಿಡಿಸಿ ಪರಮಾತ್ಮ ತನ್ನದಾಗಿಸಿಕೊಳ್ಳುವುದೇ ಆತನ ವಿವಾಹದಿಂದ ಸೂಚಿಸಲ್ಪಡುವುದು. ಹೀಗೆ ಸರ್ವಾತ್ಮನಾ ಇಂದ್ರಿಯ ಪ್ರಪಂಚದಲ್ಲೇ ಓಡಾಡುತ್ತಾ ತೀವ್ರ ಹಿಂಸಾಪ್ರವೃತ್ತಿಯುಳ್ಳವನನ್ನು ವಶಪಡಿಸುವುದು ಇಂದ್ರಿಯಗಳ ರಾಜನಾದ ದೇವೇಂದ್ರನಿಗೂ ಸಾಧ್ಯವಾಗುವುದಿಲ್ಲ. ಸಾಕ್ಷಾತ್ ಮಹಾವಿಷ್ಣುವೇ ಪ್ರಾಣಸ್ವರೂಪನಾದ ಗರುತ್ಮಂತಸಹಿತನಾಗಿ ಆಗಮಿಸಿ ಆಸುರೀಭಾವವನ್ನು ಸಂಪೂರ್ಣವಾಗಿ ನಾಶಪಡಿಸಿ ಇಂದ್ರಿಯಾತೀತಸ್ಥಿತಿಗೆ ಒಯ್ಯಬೇಕಾಗುವುದು ಎಂಬ ತತ್ತ್ವವನ್ನು ಬೋಧಿಸುವ ಸುಂದರ ಕಥೆಯಿದು.


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  13/1/2024 ರಂದು ಪ್ರ

Sunday, January 7, 2024

ತ್ರಿಪುರಾಸುರರು ( Tripurasuraru)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

 

ತ್ರಿಪುರಾಸುರರ ಕಥೆಯು ಶಿವಪುರಾಣದಲ್ಲೂ ಶ್ರೀಮತ್ ಭಾಗವತದಲ್ಲೂ ಮತ್ತು ವೇದದ ತೈತ್ತಿರೀಯ ಸಂಹಿತೆಯಲ್ಲಿಯೂ ಮತ್ತಿತರ ಪುರಾಣಗಳಲ್ಲೂ ವಿವರಿಸಲ್ಪಟ್ಟಿದೆ. ತ್ರಿಪುರಾಸುರರು ಎಂದರೆ ತಾರ-ತಾರಾಕ್ಷ-ಕಮಲಾಕ್ಷ ಎಂಬ ಮೂವರು. ಈ ಮೂವರೂ ತಾರಕಾಸುರನ  ಪುತ್ರರು. ಮಹಾಪರಾಕ್ರಮಿಗಳು, ಆಸುರರಾದರೂ ಸತ್ಯವಾದಿಗಳು, ವ್ರತನಿಷ್ಠರು, ಉದಾರಸತ್ವರು, ಶಿವನ ಭಕ್ತರು. ಇಷ್ಟೆಲ್ಲಾ ಗುಣಸಂಪನ್ನರಾದರೂ ದೇವತೆಗಳ ವಿಷಯದಲ್ಲಿ ನಿಷ್ಕಾರಣವಾಗಿ ದ್ವೇಷಕಾರುವವರು. ದೇವತೆಗಳು ಭಗವಂತನ ಧರ್ಮಸೇತುವೆಯನ್ನು ರಕ್ಷಣೆಮಾಡುವವರು. ಭಗವಂತನ ಸೇವಕರು. ಅಂತಹವರನ್ನು ವಿನಾಕಾರಣ ದ್ವೇಷಿಸುವುದೇ ಮಹಾಪರಾಧ.  


ವರ ಸಂಪಾದನೆ: ತ್ರಿಪುರಾಸುರರು ಅನೇಕವರ್ಷಗಳಕಾಲ ಘೋರತಪಸ್ಸುಗಳಿಂದ ಬ್ರಹ್ಮನನ್ನು ಒಲಿಸಿ ಅಜರಾಮರತ್ವವನ್ನು ಪ್ರಾರ್ಥಿಸಿದರು. "ಅದು ಸಾಧ್ಯವಿಲ್ಲ. ಯಾವರೀತಿ ವಧೆಯಾಗಬೇಕೆನ್ನುವ ಮಾರ್ಗವನ್ನು ನೀವೇ ಆರಿಸಿಕೊಳ್ಳಿ" ಎಂದು ಬ್ರಹ್ಮನು ಉತ್ತರಿಸಿದ. ದೀರ್ಘಾಲೋಚನೆಯನಂತರ "ಶಿವಭಕ್ತರಾದ ನಮಗೆ ಶಿವನಿಂದಲೇ ಮರಣವಾಗಲೆಂದು ಪ್ರಾರ್ಥಿಸಿದರು". ಅಂದರೆ ಶಾಂತಸ್ವರೂಪನಾದ ಶಿವನು ತನ್ನ ಭಕ್ತರನ್ನು ಹೇಗೆತಾನೇ ಸಂಹರಿಸುವನೆಂಬ ಭರವಸೆ ಮತ್ತು ಲೆಕ್ಕಾಚಾರ ಅವರದು. ಆದ್ದರಿಂದ ಅಮರರೇ ಆಗುತ್ತೇವೆ ಎಂಬ ದೃಢನಂಬಿಕೆ. ಮತ್ತೊಂದು ಷರತ್ತನ್ನೂ ಹಾಕಿದರು: ಬ್ರಹ್ಮದೇವರ ಆಜ್ಞೆಯಂತೆ ಮಯಾಸುರನಿಂದ ಉತ್ತಮಭೋಗಗಳಿಂದ ಕೂಡಿದ ಮತ್ತು ಸದಾಸಂಚಾರ ಮಾಡುವ ಸುವರ್ಣ-ರಜತ(ಬೆಳ್ಳಿ)-ಕಬ್ಬಿಣಮಯವಾದ ಮೂರು ಪಟ್ಟಣಗಳ ನಿರ್ಮಾಣವಾಗಬೇಕು.  ಮೂರೂ ಸಂಧಿಸುವುದು ಸಾವಿರವರ್ಷಕ್ಕೊಮ್ಮೆಯೇ, ಸಂಧಿಯೂ ಕ್ಷಣಮಾತ್ರವೇ ಆಗಿದ್ದು ಸಂಧಿಕಾಲ ಮಧ್ಯಾಹ್ನದಲ್ಲೇ ಕೂಡಿಬಂದು, ಒಂದೇ ಬಾಣದಿಂದ ಮಹಾದೇವನೇ ಅವರನ್ನು ಕೊಲ್ಲುವಂತಾದರೆ ಮಾತ್ರ ಮರಣ! ಇದರಲ್ಲಿ ಯಾವ ಒಂದು ಲೋಪವಾದರೂ ಮರಣವಿಲ್ಲ! ಎಂತಹ ಷರತ್ತು!! ಬ್ರಹ್ಮ ದೇವರು ಒಪ್ಪಿದರು.  


ಸಂಹಾರ: ಕಾಲಕಳೆದಂತೆ, ಇಂತಹ ಅಮೋಘವರದಿಂದ ದೇವತೆಗಳಿಗೆ ವಿರುದ್ಧವಾಗಿ ಲೋಕಕಂಟಕರಾಗುತ್ತಾರೆ. ಅಧರ್ಮ ಮಾರ್ಗವನ್ನು ಹಿಡಿದು ನಾಸ್ತಿಕವಾದವನ್ನು ಒಪ್ಪುತ್ತಾರೆ. ಪರಿಸ್ಥಿತಿ ಮಿತಿಮೀರಿದಾಗ ಅವರುಗಳು ಸಂಹಾರಕ್ಕೆ ಯೋಗ್ಯರೆಂದು ತಿಳಿದು ವಿಷ್ಣುವಿನಿಂದಲೇ ಸಂಹಾರಕಾರ್ಯದ ಸಿದ್ಧತೆ ಪ್ರಾರಂಭವಾಗುತ್ತದೆ. ವಿಶ್ವಕರ್ಮನು ಮಹಾದೇವನಿಗೆ ವಿಶ್ವಮಯವಾದ ಸುವರ್ಣರಥವೊಂದನ್ನು ನಿರ್ಮಿಸುತ್ತಾನೆ: ಇದರ ಬಲಭಾಗದಲ್ಲಿ 12 ಅರೆಪಟ್ಟಿಗಳೊಂದಿಗೆ ಸೂರ್ಯ, ಎಡಭಾಗದಲ್ಲಿ 16 ಅಡ್ಡಪಟ್ಟಿಗಳು ಮತ್ತು 27 ಅಲಂಕಾರಗಳಿಂದ ಕೂಡಿದ ಚಂದ್ರನೂ ಇದ್ದು, ರಥಕ್ಕೆ ಬ್ರಹ್ಮನೇ ಸಾರಥಿಯಾಗುತ್ತಾನೆ. ಗಂಗಾ-ಯಮುನಾದಿ ನದಿಗಳು ಧನುಷ್ಪಾಣಿಯಾದ ಮಹಾದೇವನಿಗೆ ಚಾಮರಸೇವೆಯನ್ನು ಮಾಡಿದವಂತೆ. ಸಂಹಾರಕ್ಕೆ ಏಕೈಕ ಬಾಣವೇ ಮಹಾವಿಷ್ಣು. ರಥವನ್ನು ಹತ್ತಿದ ಮಹಾದೇವನು ದೇವತೆಗಳಿಗೆ ಒಂದು ಕಂಡೀಷನ್ ಹಾಕುತ್ತಾನೆ. "ನೀವುಗಳೆಲ್ಲಾ ನನಗೆ ಪಶುಗಳಾಗಬೇಕು, ನಾನು ಪಶುಪತಿಯಾಗಬೇಕು" ಎಂದು. ಅವರು ಒಪ್ಪಿದಮೇಲೆ ಬಾಣಪ್ರಯೋಗಕ್ಕೆ ಸಿದ್ಧನಾಗುತ್ತಾನೆ. ಇದ್ದಕ್ಕಿದ್ದಂತೆ ಮಹಾಧಾನುಷ್ಕನೂ ಪಿನಾಕಿ ಎಂದು ಸ್ತುತಿಸಲ್ಪಡುವವನೂ ಆದ ಮಹಾದೇವನ ಬೆರಳುಗಳು ಅಲ್ಲಾಡಿತಂತೆ. ಹೆಬ್ಬೆರಳನ್ನು ಆಡಿಸಿದುದು ಗಣೇಶ! ವಿಘ್ನೇಶ್ವರನಿಗೆ ಪೂಜೆಯಾಗಬೇಕಿತ್ತು. ತಂದೆಯಾದರೂ  ವಿಘ್ನನಿವಾರಣೆಗಾಗಿ ಮಗನಿಗೆ ಪೂಜೆ ಮಾಡಲೇಬೇಕಲ್ಲವೇ? ಸರಿ. ಅದೂ ಸಂಪನ್ನವಾಯಿತು. ಇಷ್ಟೆಲ್ಲ ಆದಮೇಲೇ ಮೂರು ಪಟ್ಟಣಗಳೂ ಇದ್ದಕ್ಕಿದ್ದಂತೆ ನಿಶ್ಚಲವಾಗಿ ಒಂದೆಡೆ ಸೇರುತ್ತವೆ. ಸಮಯ 12ಘಂಟೆ. ಮಹಾದೇವ ಬಾಣಪ್ರಯೋಗಿಸಲಾಗಿ ಏಕಕಾಲದಲ್ಲಿ ಮೂರುಪುರಗಳೂ ಭಸ್ಮವಾದವು. ಆದುದರಿಂದಲೇ ಪರಶಿವನು ಪುರಾರಿ-ತ್ರಿಪುರಾರಿ ಎಂದು ಸ್ತುತಿಸಲ್ಪಡುವನು.   


ತತ್ತ್ವಾರ್ಥ: ಇದು ತತ್ತ್ವಮಯವಾಗಿ ಪೋಣಿಸಲ್ಪಟ್ಟಿರುವ ಒಂದು ಕಥೆ. ಇಲ್ಲಿ ತ್ರಿಪುರಗಳು ತ್ರಿಗುಣಗಳ ಪ್ರತೀಕ. ಸುವರ್ಣವರ್ಣ ಸತ್ವಗುಣದ ಪ್ರತೀಕವಾದರೆ, ಕೆಂಪುಬಣ್ಣ ರಜೋಗುಣವನ್ನು, ಕಪ್ಪುಬಣ್ಣವು ತಮೋಗುಣವನ್ನು ಪ್ರತೀಕಿಸುತ್ತವೆ. ತ್ರಿಗುಣಗಳ ಸ್ವಭಾವವೇ ಚಲನೆ. ಮೂರೂ ಒಂದೆಡೆ ಸೇರುವುದು ದುಷ್ಕರವೇಸರಿ. ಎಂದರೆ ವೈಷಮ್ಯವಿದ್ದೇ ಇರುತ್ತದೆ. ತ್ರಿಗುಣಗಳ ವೈಷಮ್ಯದಿಂದಲೇ ಸೃಷ್ಟಿಯಾಗುವುದು. ಸಾಮಾನ್ಯವಾಗಿ ತ್ರಿಗುಣಗಳಲ್ಲಿ ಒಂದು ಗುಣ ಪ್ರಧಾನವಾಗಿಯೂ ಉಳಿದೆರಡೂ ಅದಕ್ಕೆ ಅಧೀನವಾಗಿಯೂ ಇರುವುದು. ಎಂದಾದರೂ ಈ ಮೂರೂ ಒಟ್ಟಿಗೆಸೇರಿ ಸಾಮ್ಯಸ್ಥಿತಿಯುಂಟಾದರೆ ಅದೇ ಸಮಾಧಿಸ್ಥಿತಿ. ಇಲ್ಲಿ ತ್ರಿಪುರಾಸುರರ ಸಂಹಾರ ಎಂದರೆ ತ್ರಿಗುಣಗಳ ಏರಿಳಿತವಿಲ್ಲದೆ ಮನಸ್ಸು ಸಮಾಧಿಯಲ್ಲಿ ಲೀನವಾಗುವುದು ಎಂಬ ತತ್ತ್ವಾರ್ಥ. ಇದನ್ನು ಪಡೆಯುವುದು ಅತ್ಯಂತ ಕಷ್ಟಕರವಾದದ್ದು. ಸಾಧನೆಯಿಂದ ಕಾಲವಿಶೇಷದಲ್ಲಿ ಉಂಟಾಗುವುದು ಎಂಬ ತತ್ತ್ವವನ್ನೂ ದೇವತೆಗಳೆಲ್ಲರೂ ಸಹಕರಿಸಿ ತಮ್ಮತನವನ್ನು ಕಳೆದುಕೊಂಡು ಮಹಾದೇವನಲ್ಲಿ ಶರಣುಹೊಂದಿದರೇನೇ ಈ ಸ್ಥಿತಿಯು ಸಾಧ್ಯವಾಗುವುದೆಂದೂ ತಿಳಿಸುತ್ತದೆ. ಈ ಲಯವನ್ನು ಕರುಣಿಸುವವನೇ ಮಹಾಯೋಗಿಯಾದ ಮಹಾದೇವನು. ಅವನಿಗೇ ಇದು ಸಾಧ್ಯ. ಅವನಿಗೆ ಸಾರಥಿ ಮತ್ತು ಬಾಣದ ರೂಪದಲ್ಲಿ ಸಹಾಯಕರಾಗಿರುವವರು ಬ್ರಹ್ಮ ಮತ್ತು ವಿಷ್ಣು.  ತ್ರಿಗುಣಗಳ ಅಧಿಪತಿಗಳೇ ಬ್ರಹ್ಮ-ವಿಷ್ಣು-ಮಹೇಶ್ವರರು. ಅವರುಗಳು ಅಧಿಪತಿಗಳಾಗಿ ಅವುಗಳನ್ನು ನಡೆಸುತ್ತಾರೆಯೇ ವಿನಾ ಅವುಗಳಿಗೆ ಎಂದಿಗೂ ವಶರಾಗುವುದಿಲ್ಲ. ತ್ರಿಗುಣಗಳ ಸೇರುವಿಕೆ ಮತ್ತು ಬೇರ್ಪಡುವಿಕೆಯಿಂದಲೇ ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳು ನಡೆಯುತ್ತವೆ ಎಂಬ ತತ್ತ್ವಾರ್ಥವನ್ನು ಬೋಧಿಸುತ್ತದೆ.


ಇದು ಆದ್ಯಂತ ಆಧ್ಯಾತ್ಮಿಕ ಕಥೆ. ತ್ರಿಗುಣಗಳಲ್ಲಿ ಓಡಾಟ ಕೊನೆಯಲ್ಲಿ ತ್ರಿಗುಣಗಳನ್ನೂ ಭಸ್ಮಮಾಡಿ ತ್ರಿಗುಣಾತೀತ ಸ್ಥಿತಿಯನ್ನು ಹೊಂದುವುದೇ ತಾತ್ಪರ್ಯ. ಈ ಕಥೆಯ ತತ್ತ್ವಾರ್ಥವನ್ನು ಬೋಧಿಸಿದ ಯತಿವರೇಣ್ಯರಾದ ಶ್ರೀಶ್ರೀರಂಗಪ್ರಿಯಶ್ರೀಗಳಿಗೆ ನಮೋನಮಃ 

ಪುರಾ ನಾರಾಯಣಾಸ್ತ್ರೇಣ ಭವರೂಪಂ ಪುರತ್ರಯಂ |

ಭಸ್ಮೀ ಚಕಾರ ಯೋಗೀಂದ್ರಃ ತಸ್ಮೈ ರುದ್ರಾತ್ಮನೇ ನಮಃ ||


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  06/1/2024 ರಂದು ಪ್ರಕಟವಾಗಿದೆ . 

Saturday, December 30, 2023

ವೃತ್ರಾಸುರನ ವೃತ್ತಾಂತ (Vrtrasurana Vrttanta)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

ಅಧ್ಯಾತ್ಮಸಾಧನೆಗೆ ಸಂಬಂಧಿಸಿದ ಕ್ಲಿಷ್ಟತತ್ತ್ವಗಳನ್ನು  ಸಾಮಾನ್ಯ ಜನಗಳಿಗೆ ಕಥಾರೂಪದಲ್ಲಿ ತಿಳಿಸುವ ಕೌಶಲ್ಯ ಪುರಾಣಗಳದ್ದು. ಉದಾಹರಣೆಗೆ, ವೃತ್ರಾಸುರನ ಆಖ್ಯಾನವು ಶ್ರೀಮತ್ಭಾಗವತದಲ್ಲಿಯೂ ವೇದಗಳಲ್ಲಿಯೂ ಅನೇಕಕಡೆ ವಿವರಿಸಲ್ಪಟ್ಟಿದೆ.  ವೃತ್ರಾಸುರನು ಲೋಕಕಂಟಕ ಮತ್ತು ದೇವಕಂಟಕ.  ನಾನಾರೀತಿಯಲ್ಲಿ ಇಂದ್ರಾದಿದೇವತೆಗಳಿಗೆ  ಕಿರುಕುಳ ಕೊಡುತ್ತಿದ್ದನು. ಕೆಲವೊಮ್ಮೆ ಸರ್ಪರೂಪವನ್ನೂ ತಾಳುವುದರಿಂದ ಅಹಿ ಎಂಬ ಹೆಸರುಂಟು. ದೇವತೆಗಳ ನಿಯಮಿತ ಸಂಚಾರಮಾರ್ಗಗಳನ್ನು ತಡೆಯುತ್ತಿದ್ದನು. ಮೂರುಲೋಕದ ಪ್ರಯೋಜನಕ್ಕಾಗಿ ಹರಿದುಬರುತ್ತಿರುವ ತೀರ್ಥಪ್ರವಾಹದ ಮಾರ್ಗಗಳನ್ನು ಸ್ತಂಭನ ಮಾಡುತ್ತಿದ್ದನು. 

ಒಮ್ಮೆ ದೇವಗುರುವಾದ ಬೃಹಸ್ಪತಿಯು ಇಂದ್ರನಿಂದ ಗೌರವಿಸಲ್ಪಡದಿದ್ದುದರಿಂದ ಅದೃಶ್ಯರಾದರು. ತಾತ್ಕಾಲಿಕಗುರುವಾಗಿ ನೇಮಿಸಲ್ಪಟ್ಟ ತ್ವಷ್ಟೃವಿನ ಮಗನಾದ ವಿಶ್ವರೂಪನಿಗೆ ಅಸುರರ ಸಂಪರ್ಕವಿದ್ದದ್ದರಿಂದ  ಇಂದ್ರನು ಗುರುವನ್ನೇ ಸಂಹರಿಸಿದನು. ಅದರಿಂದ ತೀವ್ರಕುಪಿತನಾದ ತ್ವಷ್ಟೃುವು ಇಂದ್ರನನ್ನು ಕೊಲ್ಲಲು ಅಮೋಘವಾದ ಯಾಗವೊಂದನ್ನು  ಕೈಗೊಂಡನು. ಆದರೆ ವೇದಮಂತ್ರದ ಸ್ವರವ್ಯತ್ಯಾಸದಿಂದ (ಇಂದ್ರನನ್ನು ಸಂಹಾರಮಾಡುವ ಪುತ್ರನ ಬದಲು) ಇಂದ್ರನೇ ಸಂಹಾರಮಾಡುವ ಪುತ್ರನು ಹುಟ್ಟುವಂತಾಯಿತು. ಆತನೇ ವೃತ್ರ. ಯುವಕನಾಗಿಯೇ ಹುಟ್ಟಿದ ಆತನ ಜನನವಾದೊಡನೆ ಸಮಸ್ತ ಲೋಕಗಳೂ ನಡುಗಿದವು. ವೃತ್ರನು ಮಹಾಪರಾಕ್ರಮಿಗಳಾದ ಅಸುರರೆಲ್ಲರ  ನಾಯಕತ್ವವನ್ನು ವಹಿಸಿ ದೇವತೆಗಳಮೇಲೆ ಆಕ್ರಮಣಮಾಡಿ ವಿಜಯಗಳಿಸುತ್ತಿದ್ದ. ವರಬಲದಿಂದ ಬಲಿಷ್ಠನಾದ ಅವನನ್ನು ಯಾವ ಅಸ್ತ್ರಗಳೂ ಸಂಹರಿಸಲಾಗುತ್ತಿರಲಿಲ್ಲ. ಅವನ ಉಪದ್ರವವನ್ನು ತಾಳಲಾರದೇ ಇಂದ್ರನು, ಮಹಾವಿಷ್ಣುವಿನ ಸಲಹೆಯಂತೆ, ಮಹಾದಯಾಮಯರೂ ಸರ್ವದೇವತಾಶಕ್ತಿಮಯರೂ ಆದ ದಧೀಚಿಮಹರ್ಷಿಗಳನ್ನು ಪ್ರಾರ್ಥಿಸಿದನು.  ಸದಾ ಲೋಕಹಿತಚಿಂತಕರಾದ ಅವರು ದೇವಕಾರ್ಯಕ್ಕಾಗಿ ತಮ್ಮ ಬೆನ್ನುಮೂಳೆಯನ್ನು ದಾನಮಾಡಲು ಅನುಮತಿಸಿದರು. ಅದಕ್ಕಾಗಿ ಧ್ಯಾನಸಮಾಧಿಯಲ್ಲಿ ಅವರು ಶರೀರತ್ಯಾಗಮಾಡಿದಾಗ ಅವರ ಮೂಳೆಗಳಿಂದ ವಿಶ್ವಕರ್ಮನ ಮೂಲಕ ಅಮೋಘವಾದ ಪ್ರತ್ಯಸ್ತ್ರವಿಲ್ಲದ ವಜ್ರಾಯುಧವನ್ನು ನಿರ್ಮಿಸಿದನು. ಇದರ ಬಲದಿಂದ ಅತ್ಯಂತ ಉತ್ಸಾಹದಿಂದ ಇಂದ್ರನು ವೃತ್ರನನ್ನು ಎದುರಿಸಿದನು. ಮಹಾಸ್ತ್ರಸಂಪನ್ನನಾದ ಇಂದ್ರನನ್ನು ನೋಡಿ ಭಯದಿಂದ ಓಡಿದ ಅಸುರರನ್ನು ಹುರಿದುಂಬಿಸಿ ವೃತ್ರನು ಇಂದ್ರನಕಡೆಯ ದೇವತೆಗಳನ್ನೆಲ್ಲ ವಶಪಡಿಸಿಕೊಂಡು ಘೋರಯುದ್ಧ ನಡೆಸಿದನು.  ಇಂದ್ರನ ಐರಾವತದ ಕುಂಭಸ್ಥಳಕ್ಕೆ ಹೊಡೆದೋಡಿಸಿದನು. ಇಂದ್ರನು ಬೇಗನೇ ಅದನ್ನು ಸ್ವರೂಪಕ್ಕೆತಂದು ಯುದ್ಧ ಮುಂದುವರಿಸಿದಾಗ ಅವನು ಪ್ರಯೋಗಿಸಿದ ಅಸ್ತ್ರಗಲೆಲ್ಲವನ್ನೂ ವೃತ್ರನು ನುಂಗಿಹಾಕಿ ಇಂದ್ರನಿಗೆ ಭೀತಿಯನ್ನು ಹುಟ್ಟಿಸಿದನು! ವಜ್ರಾಯುಧವಲ್ಲದೆ ಇನ್ನಾವ ಅಸ್ತ್ರದಿಂದಲೂ ತನಗೆ ಮರಣವಿಲ್ಲವೆಂಬ ಗುಟ್ಟನ್ನು ತಾನೇ ತಿಳಿಸಿಕೊಟ್ಟನು. ಮತ್ತು ಅಸುರನಾದರೂ ವೃತ್ರನು ಇಂದ್ರನಿಗೇ ಅಧ್ಯಾತ್ಮತತ್ತ್ವವನ್ನು  ಉಪದೇಶಮಾಡಿದನು!

ಅಷ್ಟಲ್ಲದೆ, ಇಂದ್ರಸಹಿತವಾಗಿ ಐರಾವತವನ್ನೇ ನುಂಗಿಬಿಟ್ಟನು. ನಾರಾಯಣ-ಕವಚದ ಮಹಿಮೆಯಿಂದ  ಬದುಕಿದ್ದ ಇಂದ್ರನು ವೃತ್ರಾಸುರನ ಹೊಟ್ಟೆಯನ್ನು ಸೀಳಿಕೊಂಡು ಹೊರಬಂದು ಅವನ ತಲೆಯನ್ನು ವಜ್ರಾಯುಧದಿಂದ ಕಡಿದುಹಾಕಿದನು. ಆಗ ಲೋಕವೆಲ್ಲವೂ ಪ್ರಸನ್ನವಾಗಿ, ದೇವತೆಗಳು ಪರಮಾನಂದಭರಿತರಾದರು. ಅಮೃತದ ಮಳೆಸುರಿಯಿತು.

ವೃತ್ರಾಸುರನು ಅಧ್ಯಾತ್ಮಉಪದೇಶ ಮಾಡಿದ್ದು ಹೇಗೆಂದರೆ ಹಿಂದಿನ ಜನ್ಮದಲ್ಲಿ ಅವನು ಚಿತ್ರಕೇತುವೆಂಬ ರಾಜನಾಗಿದ್ದು ನಾರದಮಹರ್ಷಿಯಿಂದ ಉಪದೇಶಾನುಗ್ರಹ ಪಡೆದು ವಿದ್ಯಾಧರ ಪದವಿಯನ್ನು ಹೊಂದಿದ್ದನು. ನಂತರ ಮದಾಂಧನಾಗಿ ಪಾರ್ವತೀ-ಪರಮೇಶ್ವರರನ್ನು ಅವಹೇಳನ ಮಾಡಿದ್ದರಿಂದ ಕುಪಿತಳಾದ ಪಾರ್ವತಿಯು ಅಸುರನಾಗಿ ಹುಟ್ಟೆಂಬ ಶಾಪವನ್ನು ನೀಡುತ್ತಾಳೆ. ನಂತರ ಕ್ಷಮಾಪಣೆಬೇಡಿ ಅಸುರನಾದರೂ ಅಧ್ಯಾತ್ಮಜ್ಞಾನವನ್ನು ಮರೆಯಬಾರದೆಂಬ ವರವನ್ನೂ ಪಡೆದುಕೊಂಡನು.

ತತ್ತ್ವಾರ್ಥ: ಅಧ್ಯಾತ್ಮಧ್ವನಿಯಿಂದ ಕೂಡಿದ್ದಾಗಿ, ಅಧ್ಯಾತ್ಮಭಾವಕ್ಕೆ ಅಡ್ಡಿಯನ್ನೊಡ್ಡುವ ಆಸುರೀಗುಣಗಳನ್ನು ತಿಳಿಹೇಳುವ ತತ್ತ್ವಮಯವಾದ ಕಥೆಯಿುದು. ವೃತ್ರನೆಂದರೆ ಎಲ್ಲವನ್ನೂ ಆವರಿಸುವ ಕತ್ತಲೆ ಎಂದರ್ಥ. ಆದ್ದರಿಂದಲೇ ಅಸುರನು.  ಸುಷುಮ್ನೆಯಲ್ಲಿ ಸಾಧಕನ ಪ್ರಾಣಗಳು ಆರೋಹಣಕ್ರಮದಲ್ಲಿ ಹರಿದಂತೆ ಅವನು ವಿವಿಧ ಆಧ್ಯಾತ್ಮಿಕ ಅನುಭವಗಳನ್ನು ಪಡೆಯುತ್ತಾನೆ. ಪ್ರಾಣಗಳು ಬ್ರಹ್ಮರಂದ್ರವನ್ನು ತಲುಪಿದಾಗ ಅಮೃತಮಯವಾದ ಆನಂದಾನುಭವವು ಉಂಟಾಗುತ್ತದೆ. ಅವರೋಹಣದಲ್ಲಿ ಈ ಸುಧೆಯು ಸ್ರವಿಸಿ ಧಾರೆಯಾಗಿ, ಕೆಳಸ್ತರದ ಇಂದ್ರಿಯಗಳಿಗೆ(ಇಂದ್ರನು ಇಂದ್ರಿಯಾಧಿಪತಿ) ಹರಿಯುತ್ತದೆ. ಈ ಧಾರೆಯನ್ನು ಮಳೆ ಅಥವಾ ಕಟ್ಟೆಯೊಡೆದ ನೀರಿನ ಬಿಡುಗಡೆ ಎಂದು ವರ್ಣಿಸುತ್ತಾರೆ. ಈ ಓಘವನ್ನೇ ವೃತ್ರನು ತಡೆಹಿಡಿದು ನಿಲ್ಲಿಸಿ ಸುಧೆಯಿಂದ ಇಂದ್ರಿಯಗಳನ್ನು ವಂಚಿತರನ್ನಾಗಿ ಮಾಡುವುದು.

ಇಂದ್ರಿಯಗಳ ರಾಜ ಇಂದ್ರ, ದೇವೇಂದ್ರನೂ ಹೌದು. ಅವನಿಗೆ ಮನಸ್ಸಿನೊಂದಿಗೆ ಸಂಬಂಧವಿರುವುದು. ಮನಸ್ಸು ವಿವಿಧ ಊಹಾ-ಪೋಹಗಳನ್ನು ರೂಪಿಸಿ-ಪ್ರಯೋಗಿಸಲು ಪ್ರಯತ್ನಿಸುವುದು. ಆದರೆ ನಿರ್ಧಾರ ತೆಗೆದುಕೊಳ್ಳುವುದು ಬುದ್ಧಿಯೇ(ಇಂದ್ರನ ಗುರು ಬೃಹಸ್ಪತಿ-ಬುದ್ಧಿಸ್ಥಾನದಲ್ಲಿ). ಇದರ ಅನುಪಸ್ಥಿತಿಯಲ್ಲಿ ಮನಸ್ಸಿನ ವ್ಯರ್ಥಅಲೆದಾಟ. ಪರಿಣಾಮ-ಆಡಂಬರ, ದುರಹಂಕಾರ. ಆಗ ಅಸುರರಿಂದ ಸೋಲು ನಿಶ್ಚಿತ. ಆಗ ಸರ್ವರಕ್ಷಕನಾದ ವಿಷ್ಣುವನ್ನೇ ಮೊರೆಹೋಗಬೇಕು. ಅವನ ಸಲಹೆಯಂತೆ ಇಂದ್ರನು ತನ್ನ ಮನಸ್ಸಿನ ಸಂಯಮದ ತಪಸ್ಶಕ್ತಿಯಾದ ದಧೀಚಿ ಮಹರ್ಷಿಯಿಂದ ಸಕಲದೇವತಾಶಕ್ತಿಗಳನ್ನೂ ಸಂಗ್ರಹಿಸಿ ನಿರ್ಮಿಸಿದ ವಜ್ರಾಯುಧವನ್ನುಪಯೋಗಿಸಿ ವೃತ್ರನನ್ನು ವಧಿಸುತ್ತಾನೆ. ವೃತ್ರನ ವಧೆಯಿಂದ(ನೀಗಿದ ಕತ್ತಲೆಯಿಂದ) ಅವನು ಅಡ್ಡಗಟ್ಟಿದ ಎಲ್ಲ ತೊರೆಗಳಿಂದಲೂ ಈ ಹರಿವು ಸಾಧ್ಯವಾಗುತ್ತದೆ. ದೇವತೆಗಳಿಗೆಲ್ಲಾ ಅಮೃತವನ್ನು ಇಂದ್ರನು ದೊರಕಿಸಿಕೊಟ್ಟಂತಾಗುತ್ತದೆ.

ಈ ರೀತಿ ಸಾಧಕನಲ್ಲಿ ಕಾಣಿಸುವ ಹಿರಿದಾದ ತತ್ತ್ವಗಳನ್ನು ಸುಲಭ ಶೈಲಿಯಲ್ಲಿ ಕಥೆಗಳಮೂಲಕ ವಿವರಿಸುವ ಜಾಣ್ಮೆ ಪುರಾಣಗಳದ್ದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ವೃತ್ರಾಸುರನ ವೃತ್ತಾಂತ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  30/12/2023 ರಂದು ಪ್ರಕಟವಾಗಿದೆ. 

Sunday, December 24, 2023

ದೇವತೆಗಳಿನ ಸಂಬಂಧಗಳು (Devategalina Sambandhagalu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

 ಪುರಾಣಗಳನ್ನು ಪರೀಕ್ಷಿಸಿದರೆ, ದೇವರುಗಳಲ್ಲಿಯೂ ಮನುಷ್ಯರಂತೆ ಗಂಡ-ಹೆಂಡಿರು, ತಂದೆ-ತಾಯಂದಿರು, ಮಗ-ಮಗಳು ಮೊದಲಾದ ಸಂಬಂಧಗಳು ಕಾಣಿಸುವುದು ನಗೆಪಾಟಲಾಗುವುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪುರಾಣಗಳು ಜನಸಾಮಾನ್ಯರ ಉಪದೇಶಕ್ಕಾಗಿ ರಚಿಸಿದ ವಿಶಿಷ್ಟವಾದ ಗ್ರಂಥಗಳು. ವೇದಗಳಲ್ಲಿ ಮತ್ತಿತರ ಗ್ರಂಥಗಳಲ್ಲಿ ಅರುಹಿರುವ ತತ್ತ್ವಗಳ ತಿರುಳನ್ನೇ ಕಥೆ-ರೂಪಕ-ಉದಾಹರಣೆಗಳ ಮೂಲಕ ಬಿತ್ತರಿಸುತ್ತವೆ. ಬಾಲರಿಗೆ ತಿಳಿಯಪಡಿಸಲು 'ಪಂಚತಂತ್ರ' ಮೊದಲಾದ ಕಥೆಗಳನ್ನು ಚೊಕ್ಕವಾಗಿ ಹೆಣೆದಿರುವಹಾಗೆ, ಪುರಾಣಗಳು ವಿಶೇಷವಾದ ತಂತ್ರಗಳನ್ನುಪಯೋಗಿಸಿ, ಅವರ ಉದ್ಧಾರಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತವೆ.

ಇಲ್ಲಿ ಶ್ರೀರಂಗಮಹಾಗುರುಗಳು ನೀಡಿದ ನೋಟವು ಪ್ರಸ್ತುತ. ಸೃಷ್ಟಿಯಲ್ಲಿ ಯಾವುದು ವಿಕಾಸವಾಗುತ್ತದೆಯೋ ಆ ಬೀಜವನ್ನು 'ಪುರುಷ-ಪಿತಾ' ಎಂದೂ, ಯಾವುದು ವಿಕಾಸಕಾರ್ಯವನ್ನು ನಿರ್ವಹಿಸುತ್ತದೆಯೋ ಅದನ್ನು 'ಸ್ತ್ರೀ-ಮಾತಾ' ಎಂದೂ ಕರೆಯುತ್ತಾರೆ (ದ್ಯೌಃ ಪಿತಾ- ಪೃಥಿವೀ ಮಾತಾ). ಬೀಜ ಪತಿಯಾದರೆ, ಅದನ್ನು ವಿಕಸಿತಗೊಳಿಸುವ ಪೃಥ್ವಿ(ಭೂಮಿ) ಪತ್ನಿ. ಇವುಗಳ ಸಂಸರ್ಗದಿಂದ ಹೊರಡುವ ಎಲೆ, ಕಾಯಿ, ಹಣ್ಣು ಮೊದಲಾದವು ಇವುಗಳ ಮಕ್ಕಳಲ್ಲವೇ? ಇವುಗಳಲ್ಲಿ ಯಾವುದನ್ನವಲಂಬಿಸಿದರೂ 'ಬೀಜ'ವನ್ನು ತಲುಪಬಹುದು. 

ಹಾಗೆಯೇ, ಹಾಲು-ಮೊಸರುಗಳ ಸಂಸರ್ಗದಿಂದ, 'ವಿವಾಹ'ದಿಂದ, ಮಗುವಾದ ಬೆಣ್ಣೆ, ಮೊಮ್ಮಗುವಾದ ತುಪ್ಪ ಉತ್ಪತ್ತಿಯಾಗುವುದಿಲ್ಲವೇ? ಈ ಮದುವೆ, ಪೂರ್ಣಗೊಳ್ಳಬೇಕಾದರೆ, ಬೇರೆಯವರು ಸಹಕರಿಸಬೇಕು! ಉದಾಹರಣೆಗೆ ಬ್ಯಾಕ್ಟೀರಿಯಾಗಳ ಸಹಕಾರವಿಲ್ಲದೆ, ಈ ಕ್ರಿಯೆ ನೆರವೇರುವುದಿಲ್ಲ. ಅಂತೆಯೇ ಈ ಪ್ರಕ್ರಿಯೆಗೆ ಯಾವ ಅಡ್ಡಿ-ಆತಂಕಗಳೂ ಇರಬಾರದು. 'ಕೆನೆ' ಎಂಬ ತಡೆಯನ್ನು ತಡೆಗಟ್ಟಬೇಕು. ಶಿವ-ಪಾರ್ವತೀಯರ ಸಂಗಮದಿಂದ ಉದ್ಭವಿಸುವ 'ಗಣೇಶ' ಮತ್ತು 'ಷಣ್ಮುಖ' ರೆಂಬ ಸುತರಿಂದ ಮೂಲಸ್ಥಾನವಾದ ಶಿವ-ಶಕ್ತಿಯರನ್ನು ತಲುಪಬಹುದು. ಆದುದರಿಂದಲೇ, ತಂದೆ-ತಾಯಿ-ಮಕ್ಕಳೆಂಬ ಪರಿಕಲ್ಪನೆ. 

ದೇವತೆಗಳ ವಾಹನ:  ವಾಹನ ರವಾನಿಸುವ ಸಾಧನ. ಯಾವ ಸಾಧನವನ್ನು ಬಳಸಬೇಕೆಂಬುದು, ಯಾವ ಸಾಮಗ್ರಿಯನ್ನು ರವಾನಿಸುತ್ತೇವೆಯೋ ಅದರ ಆಧಾರವನ್ನವಲಂಬಿಸಿಲ್ಲವೇ? ಮನುಷ್ಯರೇ? ಸಾಮಗ್ರಿಗಳೇ? ಯಾವ ಉದ್ದೇಶಕ್ಕೆ? ವಿಹಾರಕ್ಕೋ? ಸೇನಾಸಾಮಗ್ರಿಗಳಿಗೋ? ಅವುಗಳು ಒಳಪಡಬೇಕಾದ ನಿಯಮಾವಳಿ - ವೇಗ, ಸೌಲಭ್ಯಗಳು, ತಗಲುವ ವೆಚ್ಚ ಮೊದಲಾದವುಗಳ ಮೇಲೆ ಆಧಾರಿತವಾಗಿದೆ. ಒಂದು ಅಥವಾ ಈ ಎಲ್ಲ ನಿಯಮಗಳೂ, ಸಾಧನ ಯಾವುದು ಎಂಬುದನ್ನು ನಿಶ್ಚಯಿಸುತ್ತವೆ. ಆದುದರಿಂದ 'ಪ್ರಯಾಣದ ವಿಧಾನ' ಪ್ರಯಾಣದ ಗುರಿಯಮೇಲೆ ತೀರ್ಮಾನವಾಗುತ್ತದೆ. ಅಂತರಿಕ್ಷದಲ್ಲಿ ಹಾರುವ ವಿಮಾನದಬದಲಾಗಿ ಭೂಮಿಯಲ್ಲಿ ಚಲಿಸುವ ರೈಲುಗಾಡಿಯನ್ನೂ  ರೈಲಿನಬದಲಿಗೆ, ವಿಮಾನವನ್ನೂ- ವಿಶೇಷ ಸೌಲಭ್ಯಗಳಿದ್ದರೂ ಸಹ- ಬಳಸಲಾಗುವುದಿಲ್ಲ. 

ಈ ಲೌಕಿಕ ಪ್ರಪಂಚದಲ್ಲೇ ಭೂಮಿ, ಆಕಾಶ, ನೀರು ಇವುಗಳಲ್ಲಿ ಪ್ರಯಾಣಿಸಲು ಇಷ್ಟೆಲ್ಲಾ ವಿವಿಧ ಮಾಧ್ಯಮಗಳಿದ್ದರೆ, ಅಂತಃಪ್ರಪಂಚದ ಅನ್ವೇಷಣೆಗೆ ಒಬ್ಬ ಸಾಧಕನಿಗೆ 'ವಾಹನ'ಗಳಾಗಬಹುದಾದವು ಯಾವುವು? ಇದಕ್ಕೆ ಉತ್ತರ - ಆತನ ಗುರಿಯನ್ನು ತಲುಪಿಸಬಲ್ಲ ಯಾವ ಮಾಧ್ಯಮವಾದರೂ ಸಾಧನವಾಗಬಹುದು. ಆತನ ಪ್ರಯಾಣ ಈ ಭೌತಿಕಕ್ಷೇತ್ರದಿಂದ ಆಧ್ಯಾತ್ಮಿಕ ಕ್ಷೇತ್ರದವರೆವಿಗೆ. ತನ್ನ ದೇಹ, ತನ್ನದೇ ನಿಯಂತ್ರಣದಲ್ಲಿರುವ ಕೈ-ಕಾಲು-ಕಣ್ಣು ಮೊದಲಾದ ಕರ್ಮ-ಜ್ಞಾನೇಂದ್ರಿಯಗಳು, ಮನಸ್ಸು-ಬುದ್ಧಿ ಇವುಗಳನ್ನೇ ಉಪಯೋಗಿಸಿಕೊಂಡು ಚಲಿಸಬೇಕಾಗುತ್ತದೆ. ದೈವಿಕಕ್ಷೇತ್ರವನ್ನು ನಿಯಂತ್ರಿಸುವವರು ದೇವತೆಗಳು. ಆದ್ದರಿಂದ, ಆತನ ವ್ಯವಹಾರ ದೈವಿಕ, ಆಧ್ಯಾತ್ಮಿಕ ಕ್ಷೇತ್ರಗಳೆಲ್ಲದರಲ್ಲೂ ವ್ಯಾಪಿಸಿರುತ್ತದೆ. ಅವನು, ತನ್ನ ಪರಂಬ್ರಹ್ಮನ ಅನ್ವೇಷಣೆಯಲ್ಲಿ ಯಾವುದಾದರು ವಿಧಾನವನ್ನು ಆಯ್ದುಕೊಳ್ಳಬೇಕಾಗುತ್ತದೆ; ಉದಾಹರಣೆಗೆ ವೇದಗಳ ಅಧ್ಯಯನ. ವೇದಗಳನ್ನು, ಅವನನ್ನು ಸ್ಥಳಾಂತರಗೊಳಿಸುವ ವಾಹನವಾಗಿ, ಪಕ್ಷಿಯಾಗಿ, ಪ್ರಾಣದೇವರಾದ ಗರುತ್ಮಂತನಾಗಿ ಗುರುತಿಸುತ್ತಾರೆ. ಗರುಡ, ವಿಷ್ಣುವಿನ ಸಮೇತನಾಗಿ ಧಾವಿಸಿ, ಸಾಧಕನನ್ನು ಅವನೆಡೆಗೆ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆದ್ದರಿಂದ, ಗರುಡ, ವಿಷ್ಣುವಿಗೆ ವಾಹನ. ಇದರಂತೆಯೇ, ಯಾವಮಾಧ್ಯಮವು, ಸಾಧಕನನ್ನು ಆ ದೇವತಾ ಸ್ಥಾನಕ್ಕೆ ಕೊಂಡೊಯ್ಯಬಲ್ಲುದೋ, ಅಂತೆಯೇ ಸಾಧಕನನ್ನೂ ಆ ದೇವತೆಯನ್ನೂ ಒಟ್ಟುಗೂಡಿಸುವುದೋ ಅದೇ ಆ ದೇವತೆಯ ವಾಹನ. 

ಯಾವುದನ್ನು ನಿಯಂತ್ರಿಸಬಲ್ಲೆವೋ ಅದನ್ನೂ ವಾಹನವೆಂದು ಕರೆಯುತ್ತಾರೆ. ಅಧ್ಯಾತ್ಮದಹಾದಿಯಲ್ಲಿ, ಸಾಧಕನು ಬಹುತೇಕ ವಿಘ್ನಗಳನ್ನೆದುರಿಸಬೇಕಾಗುವುದು. ಗಣೇಶ, ಆ ವಿಘ್ನಗಳನ್ನು ನಿಯಂತ್ರಿಸುತ್ತಾನೆ, ಅವುಗಳಮೇಲೆ 'ಸವಾರಿ' ಮಾಡುತ್ತಾನೆ. ಆದುದರಿಂದಲೇ ಆತ, 'ವಿಘ್ನೇಶ್ವರ. 'ಇಲಿ' ಈ ಎಲ್ಲ ವಿಘ್ನಗಳನ್ನು ಒಟ್ಟಾರೆ ಪ್ರತಿನಿಧಿಸುತ್ತದೆ. ಇಲಿಯನ್ನು ನಿಯಂತ್ರಿಸದಿದ್ದರೆ, ಅದು ತನ್ನ ವೇಗವಾದ ಚಲನೆಯಿಂದ, ಹಾವಳಿಯನ್ನುಂಟುಮಾಡುತ್ತದೆ. ಆದ್ದರಿಂದ, ಈ ದೇವತೆಯನ್ನು ಸರಿಯಾದಕ್ರಮದಲ್ಲಿ ಒಲಿಸಿಕೊಂಡರೆ, ಆತ ತನ್ನ ವಾಹನದಮೇಲೆ ಸಹಾಯಕ್ಕೆ ಬರುತ್ತಾನೆ. ಇದು, ಒಬ್ಬ ಯೋಧ, ತಾನು ಸೋಲಿಸಿದ ವೈರಿಯ ರಥದಮೇಲೆ ಸವಾರಿಮಾಡಿಕೊಂಡು ಬರುವುದನ್ನು ನೆನೆಪಿಸುತ್ತದೆ. 

ದರ್ಶನ:  ದೇವತೆಗಳು ಮತ್ತು  ಅವರ ವಾಹನಗಳು ಕೇವಲ ಸಂಕೇತಗಳೇ? ಅವುಗಳನ್ನು ಆಧುನಿಕ ಪ್ರತೀಕಗಳೊಂದಿಗೆ ಬದಲಿಸಬಹುದೇ? ಎಂದರೆ, ದೇವತೆಗಳು, ಅಂತರ್ದೃಷ್ಟಿಗೆ ಗೋಚರವಾಗುವವರು. ಮತ್ತು, ನಿರ್ದೇಶಿಸಿರುವ ಅಧ್ಯಾತ್ಮ ಮಾರ್ಗದಲ್ಲಿ ಸಾಗುವವರೆಲ್ಲರಿಗೂ ಈ ದರ್ಶನ ಒದಗುತ್ತದೆ ಎಂಬ ಶ್ರೀರಂಗಮಹಾಗುರುಗಳ ಉಕ್ತಿಯನ್ನು  ಸ್ಮರಿಸಬಹುದು. ಈ ದರ್ಶನ ಸಾರ್ವತ್ರಿಕ. ಆದ್ದರಿಂದ ಇದನ್ನು ಸಾಮಾನ್ಯರು ಬದಲಿಸುವುದು ಸೂಕ್ತವಲ್ಲ. ಯೋಗದ ಎಣಿಸಲಾಗದ ದಾರಿ-ಕವಲುಗಳನ್ನೆಲ್ಲ ಅನ್ವೇಷಿಸಿ, ದೇವತೆಗಳನ್ನೂ ಅವರ ವಿವಿಧ ರೂಪ-ಭಂಗಿಗಳನ್ನೂ, ಅವರ ವಾಹನ-ಆಯುಧಗಳನ್ನೂ ಕಂಡು ಗ್ರಂಥಗಳಲ್ಲಿಯೂ, ಶಿಲ್ಪಗಳಲ್ಲಿಯೂ ದಾಖಲುಮಾಡಿದ ಭಾರತೀಯಋಷಿಗಳ ಯತ್ನ ಅತ್ಯಂತ ಶ್ಲಾಘನೀಯವೇಸರಿ. 

(ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  23/12/2023 ರಂದು ಪ್ರಕಟವಾಗಿದೆ.   

Saturday, December 16, 2023

ದೇವತಾಸಂಖ್ಯೆಯ ಪ್ರಶ್ನೆ (Devatasankhyeya Prasne)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

ಪ್ರಾಚೀನ ಮಹರ್ಷಿಗಳು ಪ್ರಕೃತಿಯ ನಿಗೂಢತೆಯನ್ನು ಅರಿಯಲು ಹಗಲು-ಇರುಳು ಶ್ರಮಿಸಿದರು. ಸತ್ಯವನ್ನರಿಯಲು ಅವರು ಉಪಯೋಗಿಸಿದ ವಿಶಿಷ್ಟವಾದ ಪ್ರಯೋಗಾಲಯ, ಅವರದೇ ದೇಹ. ಅವರು ಅನ್ವೇಷಣೆಗೆ ಉಪಯೋಗಿಸಿದ ಸೂಕ್ಷ್ಮದರ್ಶಕ, ಯೋಗದ ಅಭ್ಯಾಸದಿಂದ ತೀಕ್ಷ್ಣಗೊಳಿಸಿ, ಹದಗೊಳಿಸಿ, ತಯಾರುಮಾಡಿದ ಬುದ್ಧಿಯ-ಲೆನ್ಸ್; ಅದನ್ನು ಕೇಂದ್ರೀಕರಿಸಿ ನೋಡಿದಾಗ ಅತ್ಯಂತ ಆಳದಲ್ಲಿ ಅಡಗಿರುವ ವಸ್ತುವನ್ನು ಸ್ಪಷ್ಟವಾಗಿ ದೃಷ್ಟಿಗೆ ದೊರಕಿಸಿಕೊಟ್ಟಿತು. ಅದರಿಂದ ಹೃದಯತುಂಬಿ ಹರಿದುಬಂದಿತು ಪರಮಪುರುಷನ ದರ್ಶನದ ಉದ್ಗಾರ. ಇದೇ ದರ್ಶನವನ್ನು ಪಡೆದ ಅನೇಕಾನೇಕ ಮಹರ್ಷಿಗಳು ಉಪನಿಷತ್ ಗಳಲ್ಲೂ, ಮತ್ತಿತರ ಗ್ರಂಥಗಳಲ್ಲಿಯೂ ತಾವುಗಳು ಕಂಡಿದ್ದನ್ನು ದಾಖಲಿಸಿರುವರು.  

ಅವರ ಈ ಅನ್ವೇಷಣೆ-ಸಂಶೋಧನೆಗಳು ಒಂದೇ ಸತ್ಯದಕಡೆ ಬೆಟ್ಟುತೋರಿಸುತ್ತವೆ ('ಏಕಂ ಸತ್')-ಸದ್ವಸ್ತು, ಪರಮೇಶ್ವರ ಒಬ್ಬನೇ ಎಂದು. ಅವನು ಸರ್ವವ್ಯಾಪಕ, ಎಲ್ಲದರಲ್ಲೂ ಅಂತರ್ಗತ ಮತ್ತು ಎಲ್ಲವನ್ನೂ ಮೀರಿದವನು (ಈಶಾವಾಸ್ಯಮಿದಂ ಸರ್ವಂ). ಈ ಒಂದು, ಸಮಯದ ಆದಿಯಲ್ಲಿ ತನ್ನ ಇಚ್ಛೆಯಂತೆ ಅನೇಕರೂಪಗಳಾಗಿ ವಿಕಾಸಗೊಳ್ಳಲು ಆರಂಭಿಸುತ್ತದೆ (ಸೋsಕಾಮಯತ  ಬಹುಸ್ಯಾಮ್ ಪ್ರಜಾಯೇಯೇತಿ). ಈ ಸರ್ವೋಚ್ಛಶಕ್ತಿಯೇ ತನ್ನನ್ನುತಾನು ವಿಶ್ವವಾಗಿ ವಿಸ್ತರಿಸಿಕೊಂಡಿತು. ಆದ್ದರಿಂದ ಋಷಿಗಳು ಅದನ್ನು ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ (ವಿಪ್ರಾಃ ಬಹುಧಾ ವದಂತಿ).  ಈ ವಿಸ್ತಾರ-ಕೆಲಸವನ್ನು ನಿರ್ವಹಿಸಲು ಅದು ತನ್ನನ್ನುತಾನು ಮೂರು ಶಕ್ತಿಗಳಾಗಿ ವಿಭಜಿಸಿಕೊಂಡಿತು - ವಿಶ್ವದಲ್ಲಿನ ಪ್ರತಿಯೊಂದು ಸೃಷ್ಟಿಯಕಾರ್ಯಕ್ಕೂ ಬ್ರಹ್ಮನು; ತಾನೇ ಬಯಸಿದ ಸ್ಥಿತಿಯಲ್ಲಿರಿಸುವ ಕಾರ್ಯಕ್ಕೆ ವಿಷ್ಣುವು; ಮತ್ತು ಇವುಗಳನೆಲ್ಲವನ್ನೂ ಮೊದಲ ವಸ್ತುವಿನಲ್ಲಿ ಲಯಹೊಂದಿಸುವುದಕ್ಕಾಗಿ ಶಿವನು (ಏಕೈವ ಮೂರ್ತಿಃ ಬಿಭಿದೇ ತ್ರಿಧಾಸಾ). ಸ್ಥೂಲ-ಸೂಕ್ಷ್ಮವಿಶ್ವಗಳ ನಿರ್ವಹಣೆಗೆ, ಈ ಮೂರು ಶಕ್ತಿಗಳು ತಮ್ಮನ್ನು ಮೂವತ್ತಮೂರು (ವಸು(8)+ರುದ್ರ(11)+ಆದಿತ್ಯ(12)+ಇಂದ್ರ+ಪ್ರಜಾಪಾತಿ = 33)  ಉಪಶಕ್ತಿಗಳಾಗಿಯೂ ಮತ್ತು ಇನ್ನೂ ಮುಂದುವರಿದು ಕೋಟ್ಯಂತರ ಸೂಕ್ಷ್ಮಶಕ್ತಿಗಳಾಗಿಯೂ ವಿಂಗಡಿಸಿಕ್ಕೊಂಡವು. ಹೀಗೆ ಅವರ ರೂಪಗಳ ಸಂಖ್ಯೆ ಅಪಾರ-ಅನಂತ. ಮೂವತ್ತುಮೂರು ಕೋಟಿ ಎಂಬ ಸಂಖ್ಯೆ ಇದನ್ನೇ ಸೂಚಿಸುವುದು. ಈ ಶಕ್ತಿಗಳನ್ನೇ ದೇವತೆಗಳು- ಅಂದರೆ ಪ್ರಕಾಶಮಾನವಾದವು ('ದಿವ್ ದೀಪ್ತೌ'=ಹೊಳೆಯುವ)- ಎಂಬುದಾಗಿಯೂ ಆ ಸರ್ವೋಚ್ಚಶಕ್ತಿಯನ್ನು ಪರಾದೇವತೆ (ಭಗವಂತ) ಎಂದೂ ಉಲ್ಲೇಖಿಸಿದ್ದಾರೆ. ಆದುದರಿಂದ ವಿಕಾಸವಾಗದ ಸ್ಥಿತಿಯಲ್ಲಿ ಪರಮಪುರುಷನು 'ಒಬ್ಬನೇ' ಆಗಿರುವನು. ವಿಕಾಸದ ದೆಸೆಯಲ್ಲಿ ಪ್ರತಿಯೊಬ್ಬ  ದೇವತೆಯೂ ಆತನ ವಿಸ್ತಾರರೂಪವಾಗಿ ಕಾಣುವರು.  

ಇಷ್ಟು ಕೋಟಿ ದೇವತೆಗಳ ಆಗತ್ಯವಿದೆಯೇ ಎಂದರೆ, ಒಂದು ಕಾರ್ಖಾನೆಯಲ್ಲಿ ಉತ್ಪಾದನೆ- ಮಾರುಕಟ್ಟೆ-ದುರಸ್ತಿ-ಆಡಳಿತ ಮೊದಲಾದ ಪ್ರತಿಯೊಂದು ವಿಭಾಗವನ್ನೂ ಸಮರ್ಪಕವಾಗಿ ನಿರ್ವಹಿಸುವುದಕ್ಕೆ ಎಷ್ಟುಮಂದಿ ಕಾರ್ಮಿಕರ ಅವಶ್ಯಕತೆಯಿದೆಯೆಂಬುದನ್ನು ಹೇಗೆ ನಿರ್ಧರಿಸಬೇಕು? ಆ ಸಂಖ್ಯೆ, ಕೆಲಸದ ಪ್ರಮಾಣದ ಅಗಾಧತೆಯಮೇಲೆ ನಿಂತಿದೆ. ತುಲನಾತ್ಮಕವಾಗಿ, ವಿಶ್ವವೆಂಬ ಕಾರ್ಖಾನೆಯನ್ನು ನಿರ್ವಹಿಸಲು ಕೋಟಿಗಟ್ಟಲೆ ಸಂಖ್ಯೆಯಿದ್ದರೆ ಅಸಮಂಜಸವೆಂದೇನೂ ತೋರುವುದಿಲ್ಲ. ಮತ್ತು, ವಿರಾಟ್ ಪುರುಷನಿಗೆ ಸಹಸ್ರ ತಲೆಗಳು-ಸಹಸ್ರ ಕಣ್ಣುಗಳು-ಸಹಸ್ರ ಪಾದಾಗಳು ಎಂಬ ವರ್ಣನೆಯಲ್ಲಿ ಸಹಸ್ರ ಎಂಬುದು 999+1 ಎಂಬ ಅರ್ಥವಲ್ಲ. ಅನಂತ ಎಂಬುದಾಗಿ ತಿಳಿಯಬೇಕು ಎಂಬ ಶ್ರೀರಂಗಮಹಾಗುರುವಿನ ವಿವರಣೆಯಂತೆ ಇಲ್ಲಿಯೂ 33 ಕೋಟಿ ಎಂಬುದನ್ನೂ  ಅರ್ಥೈಸಿಕೊಳ್ಳಬೇಕಾಗಿದೆ.    

ಅಂತೆಯೇ ಈ ಪಿಂಡಾಂಡವೆಂಬ ಮಾನವದೇಹವು ತನ್ನ ಕಾರ್ಯನಿರ್ವಹಣೆ ಮಾಡಲು ಲಕ್ಷೋಪಲಕ್ಷ ನರಗಳು, ರಕ್ತನಾಳಗಳು ಬೇಕಾಗುತ್ತವೆಯಲ್ಲವೇ? ನೋಡುವ ಕ್ರಿಯೆಯಲ್ಲಿ ಕಣ್ಣಿನ ಪಾತ್ರ ಒಂದೇ ಇರುವುದಿಲ್ಲವಲ್ಲ. ಅದರ ಹಿಂದೆ ಅಸಂಖ್ಯಾತ ನರಗಳು-ರಕ್ತನಾಳಗಳು-ಸ್ನಾಯುಗಳು ಮುಂತಾದವುಗಳು ಮೆದುಳಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಶ್ರವಣ-ಆಘ್ರಾಣ-ರಕ್ತಸರಬರಾಜು-ಜೀರ್ಣಕ್ರಿಯೆ ಮುಂತಾದ ಪ್ರತಿಯೊಂದು ಕ್ರಿಯೆಯಲ್ಲಿಯೂ ಲಕ್ಷಾಂತರ ಶಕ್ತಿಗಳ ಸಹಾಯ ಆವಶ್ಯಕ ಮತ್ತು ಅನಿವಾರ್ಯ. 

ಕಾರ್ಖಾನೆಯನ್ನು ಸಮರ್ಪಕವಾಗಿ ನಡೆಸಲು, ಒಂದು ನಿರ್ವಹಣಾಸರಣಿ ಮತ್ತು ಅಧಿಕಾರವ್ಯಾಪ್ತಿ ಅಗತ್ಯ. ಆಡಳಿತದಲ್ಲಿ ಮಾಲೀಕನಿಂದ office-boyವರೆವಿಗೂ ಅಧಿಕಾರವ್ಯಾಪ್ತಿ ಹರಿದುಬಂದಿರುತ್ತದೆ. ಈ ವ್ಯವಸ್ಥೆಯು ಸುಸೂತ್ರವಾಗಿಯೂ ಲಾಭದಾಯಕವಾಗಿಯೂ ನಡೆಯಬೇಕಾದರೆ, ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಒಪ್ಪಿಸಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗುತ್ತದೆ. ಹಾಗೂ, ಪ್ರತಿಯೊಂದು ಕೆಲಸವೂ ಅಷ್ಟೇಮುಖ್ಯ. ಸಂಸ್ಥೆಯ ಎಲ್ಲಾಸದಸ್ಯರೂ ಅವರವರ ಕ್ಷೇತ್ರದಲ್ಲಿ ಅತಿಮುಖ್ಯ ಅಂಗಗಳೇ. ಆದ್ದರಿಂದ, ಸಂಸ್ಥೆಯಲ್ಲಿನ ಯಾರಿಬ್ಬರನ್ನೂ ತುಲನೆಮಾಡುವುದು ಸೂಕ್ತವೆನಿಸುವುದಿಲ್ಲ. ಅದರಂತೆಯೇ ದೇವತೆಗಳಲ್ಲಿನ ಮೇಲು-ಕೀಳು ಭಾವವೂ ಅನುಚಿತವೇ ಸರಿ. 

ಆದುದರಿಂದ ಸ್ಥೂಲ ಹಾಗೂ ಸೂಕ್ಷ್ಮವಿಶ್ವದಲ್ಲಿ ಭಗವಂತನ ಆದೇಶದಂತೆ ಕಾರ್ಯನಿರ್ವಹಣೆಯನ್ನು ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ದೇವತೆಯ ಪಾಲಿಗೂ ಇದೆ. ಪ್ರತಿಯೊಂದು ಕೆಲಸವೂ ಅಷ್ಟೇಮುಖ್ಯ ಎಂಬುದೂ ಗಮನಾರ್ಹ. ಋಷಿ-ಮಹರ್ಷಿಗಳು ತಿಳಿಸಿರುವಂತೆ ದೇವತೆಗಳು ಈ ಬ್ರಹ್ಮಾಂಡ-ಪಿಂಡಾಂಡಗಳಲ್ಲಿ ಸೃಷ್ಟಿ-ಸ್ಥಿತಿ-ಲಯಗಳ ಹಿಂಬದಿಯಲ್ಲಿ, ಸೂಕ್ಷ್ಮಾತಿಸೂಕ್ಷ್ಮಸ್ತರಗಳಲ್ಲಿ ಬಹುವಿಧವಾದ ಕಾರ್ಯಗಳನ್ನು ನಿರ್ವಹಿಸುವ ಶಕ್ತಿಗಳಾಗಿದ್ದಾರೆ. ಅವರೆಲ್ಲರೂ ಪರಬ್ರಹ್ಮನಿಂದಲೇ ಸೃಷ್ಟಿಯಾದ, ಅವನದೇ ಆದ ವಿಭೂತಿಗಳು, ಅವನ ಸಹಾಯಕರು. ಅವನ ಧರ್ಮ-ಸೇತುವೆಯನ್ನು ಕಟ್ಟಿ-ರಕ್ಷಿಸುವ ಕರ್ತವ್ಯ ಅವರ ಪಾಲಿನದು. ಅವರ ನಿರ್ದಿಷ್ಟ ಕರ್ತವ್ಯಗಳನ್ನು ಸ್ವಾಭಾವಿಕವಾಗಿಯೇ ಸೃಷ್ಟಿಗೆ ಒಡಯನೇ ನಿಗದಿಪಡಿಸುತ್ತಾನೆ. 

(ಮುಂದುವರಿಯುವುದು) 

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  16/12/2023 ರಂದು ಪ್ರಕಟವಾಗಿದೆ.    

Monday, December 11, 2023

ಬಹು-ದೇವತೆಗಳ ಅಗತ್ಯ ಏನಿದೆ? (Bahu Devategala Agatyavenu?)

(ಪ್ರತಿಕ್ರಿಯಿಸಿರಿ lekhana@ayvm.in)

ದೇವತೆಗಳ ಸ್ವರೂಪ, ಸ್ವಭಾವ, ಕೃತ್ಯಗಳ ಬಗ್ಗೆ ಪರಿಚಯ ಮಾಡಿಕೊಂಡೆವು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕವಾದ ಕೆಲವು ವಿಚಾರಗಳು ಆಧುನಿಕ ವೈಜ್ಞಾನಿಕಬುದ್ಧಿಗೆ ಗೊಂದಲಮಯವಾಗಿ, ನಿರರ್ಥಕಗಳಾಗಿ, ಕೆಲವೊಮ್ಮೆ ನಗೆಪಾಟಲುಗಳಾಗಿಯೂ ಕಾಣಿಸುತ್ತವೆ. ಈ ಸಂಧರ್ಭದಲ್ಲಿ ಸಾಮಾಜಿಕ ಹಾಗೂ ದಾರ್ಶನಿಕ ತಳಹದಿಯಾಗಿರುವ ಒಂದು ಸಮಸ್ಯೆಯಾದ  "ಬಹು-ದೇವತೆಗಳು" ಎಂಬ ವಿಚಾರವನ್ನು ವಿಮರ್ಶಿಸಲಾಗುವುದು. 

ದೇವತೆ - ಒಂದೋ, ಹಲವೋ ? "ದೇವತೆಗಳು ಮೂವತ್ತು ಮೂರು ಕೋಟಿ" ಎಂಬುದು ಬೃಹತ್  ಸಂಖ್ಯೆ; ಅವರುಗಳನ್ನು ಯಾರು ಕಂಡಿದ್ದಾರೆ? ಕರಾರುವಾಕ್ಕಾಗಿ ಯಾರು ಎಣಿಸಿದ್ದಾರೆ? ಅಷ್ಟೆಲ್ಲ ದೇವತೆಗಳ ಅವಶ್ಯಕತೆಯಾದರೂ ಏನು? ಎಲ್ಲರೂ ಪೂಜಿಸಬಹುದಾದ ದೇವತೆ ಒಂದೇ ಆದರೆ ಸಾಲದೇ?" ಎಂಬ ಪ್ರಶ್ನೆಗಳನ್ನು  ಆಧುನಿಕ ಬುದ್ಧಿ ಪ್ರಸ್ತಾಪಿಸುತ್ತದೆ. 'ಏಕದೇವತೆಯ' ನಮೂನೆಯ ಅನುಕೂಲಗಳು ಬಹಳ. ಅದು ಸರಳ, ಅರ್ಥಮಾಡಿಕ್ಕೊಳ್ಳಲು ಸುಲಭ, ಮತ್ತು ನಂಬಿಕೆಯುಳ್ಳವರೂ ಅನುಮೋದಿಸಬಹುದು. ಸಮಾನತೆ ಹಾಗು ಸಾಮರಸ್ಯವನ್ನು ಒದಗಿಸುವುದಲ್ಲದೆ, ನಂಬಿಕೆಯುಳ್ಳವರ ಸoಧಿಗ್ಧತೆಯನ್ನು ದೂರೀಕರಿಸಿ, ಘರ್ಷಣೆಗಳನ್ನು ನಿವಾರಿಸುತ್ತದೆ. ತರ್ಕಬದ್ಧವಾಗಿರುವುದಲ್ಲದೆ, ಆಕರ್ಷಕವಾಗಿಯೂ ಇರುವುದು. ಆದರೆ ಈ 'ಬಹುದೇವತೆ'ಗಳ ಆಸ್ತಿಕ್ಯದಿಂದ ಸಮಾಜವು ಚೂರು ಚೂರಾಗಿದೆ. 'ಮೇಲಿನ' ಹಾಗೂ 'ಕೆಳಗಿನ' ದೇವರು-ದೇವತೆಗಳು ಎಂಬ ಭಾವನೆ ಇದರ ಸ್ವಾಭಾವಿಕ ವಿಸ್ತಾರ. ಆದ್ದರಿಂದ, ತಾವು ಇತರರಿಗಿಂತ 'ಹೆಚ್ಚು' ಎನ್ನುವ ಭಕ್ತರನ್ನು ತಯಾರುಮಾಡುವುದಾಗಿದೆ. 

ಆಧುನಿಕರ ದೃಷ್ಟಿಕೋಣ: ಇಷ್ಟಾದರೂ, ವೈಜ್ಞಾನಿಕ ಅನ್ವೇಷಣೆಯಲ್ಲಿ ಶಿಕ್ಷಣಹೊಂದಿದ ಆಧುನಿಕಬುದ್ಧಿ, ಇದುವರೆವಿಗಿನ ತನ್ನ ಊಹೆ, ನಿಶ್ಚಯಗಳನ್ನು ಮತ್ತೆ ಪರೀಕ್ಷೆಗೆ ಒಳಪಡಿಸುತ್ತದೆ. ಅದರಲ್ಲೂ ಹೊಸ ಮಾಹಿತಿಗಳು, ಪುರಾವೆಗಳು ಅದರ  ತಿಳುವಳಿಕೆಯ ಉಗ್ರಾಣಕ್ಕೆ ಸಿಕ್ಕಾಗ. ಆಧುನಿಕ ಮಾನವ ಎಂದೂ ಮೇಲ್ನೋಟಕ್ಕೆ ಮಾರುಹೋಗಲಾರ.  ಅವನು, ಅದೇ ಮೂಲಗ್ರಂಥಗಳನ್ನು, ಈ ಹೊಸ ದೃಷ್ಟಿಕೋನದಿಂದ ಪರಿಶೀಲಿಸದಿರನು. ಈ ಆಧಾರದಮೇಲೆ, ನಾವು ಈಗಾಗಲೇ ಬಿತ್ತರಿಸಿದ ಅಂಶಗಳನ್ನು ಮತ್ತೆ ಪರಿಶೀಲಿಸಲು ಮುಂದುವರಿಯೋಣ.  

ಪ್ರಕೃತಿಯಲ್ಲಿನ ವಿವಿಧತೆ: ವಿವಿಧತೆಯೇ ಒಂದು ಆಕ್ಷೇಪಣೆಯೇ? ಪ್ರಕೃತಿಯಲ್ಲಿನ ಕೆಲವು ತುಲನಾತ್ಮಕ ವಿಷಯಗಳನ್ನು ಪರಿಶೀಲಿಸೋಣ. (ಅ) ವಿಶ್ವವೇ ವಿವಿಧತೆಯ ಪ್ರತೀಕವಲ್ಲವೇ? ಮಿನುಗುವ ತಾರೆಗಳು, ಗಗನಚುಂಬಿ ಪರ್ವತಗಳು, ಊಹೆಗೂ ನಿಲುಕದ ಜಲರಾಶಿಗಳು; ಸೂಕ್ಷ್ಮಾತಿಸೂಕ್ಷ್ಮದ ವೈರಸ್ ಗಳಿಂದ ಹಿಡಿದು ಮಾನವನವರೆಗೂ ಆಕೃತಿ, ಸಂಯೋಜನೆ, ಬಣ್ಣ ಹಾಗು ಗುಣಗಳಲ್ಲಿ ವೈವಿಧ್ಯಗಳು.  ವಿಶ್ವದಲ್ಲಿನ ಪ್ರತಿಯೊಂದು ಭೌತಿಕವಸ್ತುವೂ ಪರಮಾಣುಗಳು ಮತ್ತು ಅಣುಗಳ(ಮಾಲಿಕ್ಯೂಲ್ಸ್) ವಿಚಿತ್ರ ಸಂಯೋಜನೆಗಳಿಂದ ವಿಕಸಿತವಾಗಿದೆಯಲ್ಲವೇ? ಮುಂದುವರಿದು, ವಿಶ್ವದಲ್ಲಿನ ವೈವಿಧ್ಯತೆಯನ್ನು ಕ್ವಾರ್ಕ್ಸ್(quarks)  ಮತ್ತು ಲೆಪ್ಟಾನುಗಳ (leptons) ಗುಂಪುಗಳ  ಅವತಾರವೆಂದು ತಿಳಿಯುತ್ತೇವೆ.   

(ಆ) ಸಾಮಾನ್ಯ ನೋಟಕ್ಕೂ, ಆಧುನಿಕ ಗೃಹಸೌಲಭ್ಯಗಳಾದ ಫ್ಯಾನ್, ಟ್ಯೂಬ್-ಲೈಟ್, ಟೇಪ್-ರೆಕಾರ್ಡರ್ ಮೊದಲಾದವು ತಮ್ಮದೇ ಆದ ಆಕೃತಿ, ರೂಪ, ಬಣ್ಣ, ಉಪಯೋಗಗಳ ಪ್ರಭೇದಗಳನ್ನು ಹೊಂದಿವೆ. ಆದರೂ, ಇವುಗಳೆಲ್ಲದರಲ್ಲೂ ಒಂದು ಸಾಮಾನ್ಯ ಎಳೆ ಹರಿಯುತ್ತಿಲ್ಲವೇ? ಎಂದರೆ ಹೌದು; ವಿದ್ಯುತ್-ಶಕ್ತಿ. ಕೇವಲ ಒಂದು ಮೇನ್ ಸ್ವಿಚ್ಚನ್ನು ಒತ್ತಿದರೆ, ಈ ಎಲ್ಲಾ  ಉಪಕರಣಗಳೂ ಜೀವಂತವಾಗುತ್ತವೆ, ಹಾಗೂ ಅದೇ ಸ್ವಿಚ್ಚನ್ನು 'ಆಫ್' ಮಾಡಿದರೆ ಅವು ಖಂಡಿತವಾಗಿಯೂ ಕೆಲಸನಿಲ್ಲಿಸುತ್ತವೆ ಎಂಬ ಎಲೆಕ್ಟ್ರಿಸಿಟಿಯ ಏಕಸೂತ್ರತೆಯನ್ನಲ್ಲವೇ ನಾವು ಹುಡುಕುತ್ತಿರುವುದು? ಆದ್ದರಿಂದ, ಇವೆಲ್ಲವೂ ಅತ್ಯಂತ ಶಕ್ತಿಶಾಲಿಯಾದ ಒಂದು ವಿದ್ಯುತ್-ಚ್ಛಕ್ತಿಯ ಸಕ್ರಿಯಾತ್ಮಕ ಅವತಾರಗಳೇ ಎನ್ನಬಹುದು. ಇವು ವಿದ್ಯುತ್-ಶಕ್ತಿಯು ದೀಪ, ಶಬ್ದ, ಶಾಖ, ಯಂತ್ರ ಮೊದಲಾದ ಬೇರೆ ಬೇರೆ ರೂಪಗಳನ್ನು ತಾಳುವುದರ  ಉದಾಹರಣೆಯೇ. 

(ಇ) ಅಂತೆಯೇ, ಆಧುನಿಕ ವಿಜ್ಞಾನದ ವಿವಿಧ ಕವಲುಗಳಾದ ಭೌತವಿಜ್ಞಾನ, ಭೂವಿಜ್ಞಾನ, ಆನುವಂಶಿಕ ವಿಜ್ಞಾನ (Genetics), ಮೊದಲಾದವುಗಳೆಲ್ಲವೂ ಪ್ರಕೃತಿಯ ಬೇರೆ-ಬೇರೆ ಮುಖಗಳೇ. ಇವುಗಳಲ್ಲಿ ಪ್ರತಿಯೊಂದೂ, ಅನೇಕ ಶಾಖೆ, ಉಪಶಾಖೆಗಳಿಗೆ ಎಡೆಮಾಡಿಕೊಡುವುದಿಲ್ಲವೇ? 

ಈ ರೀತಿ ಗಮನಿಸಿದಾಗ, ವೈವಿಧ್ಯತೆಯೇ ವಿಕಾಸದ ಮುಖವೆಂಬುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ವೇದಗಳು ಅರುಹಿರುವ ದೇವತೆಗಳ ವಿವರಣೆಗಳು ಕಾಲ್ಪನಿಕವೋ ಸಹಜವೋ? ಅಂತೆಯೇ, ದೇವತೆಗಳನ್ನು ಹುಟ್ಟುಹಾಕಿದರೋ ಅಥವಾ ಅವರಿಗೆ ಅವರದೇ ಆದ ಅಸ್ತಿತ್ವವಿದೆಯೋ? ಎಂಬುದನ್ನೂ ಪರೀಕ್ಷಿಸೋಣ.

ದೇವತೆಗಳ ಸಂಖ್ಯೆ 33 ಕೋಟಿ ಎಂದು ವೇದಗಳು, ಪುರಾಣಗಳು ಸಾರುತ್ತವೆ. ಈ  ನಿಗೂಢ ಸಂಖ್ಯೆ ವಿಚಿತ್ರವಾಗಿಯೂ ಮತ್ತು ಬೃಹತ್ತಾಗಿಯೂ ಅನಿಸುತ್ತದೆ! ಈ ಸಂಖ್ಯೆಯು ಏಕೆ-ಹೇಗೆ ಎಂಬುದರ ವಿವರಣೆ ಅಗತ್ಯ. ಶ್ರೀರಂಗಮಹಾಗುರುವಿನ ನೋಟವು ಇಲ್ಲಿ ಸ್ಮರಣೀಯ: ಭೂಮಿಯಲ್ಲಿ ಬಿತ್ತುವಾಗ 'ಬೀಜ' ಒಂದೇ ಆಗಿರುತ್ತದೆ. ಅದು, ಸಂಪೂರ್ಣವೃಕ್ಷವಾಗಿ ವಿಸ್ತರಿಸಿಕೊಂಡಾಗ ಅದೇ ಬೀಜವೇ ಕಾಂಡ-ಕೊಂಬೆಗಳು-ಎಲೆಗಳು-ಹಣ್ಣು ಮತ್ತು ಪುನಃ ಅದರಿಂದ ಬಹು ಸಂಖ್ಯೆಯ ಬೀಜಗಳು- ಹೀಗೆ ಬಹುವಾಗಿ ವಿಕಾಸಗೊಳ್ಳುತ್ತದೆ. ಇದು ಸುಸೂತ್ರವಾಗಿ ನಡೆಯಲು, ವೃಕ್ಷದ ಪ್ರತಿಯೊಂದು ಭಾಗವೂ ಬೀಜ 'ವಿಧಿಸಿದ' ಕಾರ್ಯವನ್ನು ಸಮಂಜಸವಾಗಿ ನಿರ್ವಹಿಸಬೇಕಾಗುತ್ತದೆ. ಸಸ್ಯವಿಜ್ಞಾನದ ದೃಷ್ಟಿಕೋಣದಿಂದ 'ಬೀಜವನ್ನೇ' ಸಂಪೂರ್ಣವೃಕ್ಷವಾಗಿ ನಾವು ಕಾಣಬಹುದು-ಸೂಕ್ಷ್ಮರೂಪದಲ್ಲಿ. ಅಂತೆಯೇ ವಿಕಸಿತ ವೃಕ್ಷದ ಪ್ರತಿಯೊಂದು ಭಾಗದಲ್ಲೂ ಅಂತರ್ಗತ ಬೀಜವನ್ನು ಅರಿಯಬಹುದು.

(ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  9/12/2023 ರಂದು ಪ್ರಕಟವಾಗಿದೆ.