Showing posts with label author_doct_yashaswini. Show all posts
Showing posts with label author_doct_yashaswini. Show all posts

Wednesday, July 15, 2020

ಸಾತ್ವಿಕತೆ - ಜೀವನದ ಬೆಳಕು (Satvikate - Jivanada Belaku)

ಲೇಖಕರು: ಡಾ| ಯಶಸ್ವಿನಿ
(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಜೀವನದಲ್ಲಿ ಕೆಲವು ವಿಚಾರಗಳು ಚಿಂತನೆಗೆ ಸೋಪಾನವಾದರೆ, ಕೆಲವು ಚಿಂತೆಗೊಳಗಾಗಿಸುತ್ತದೆ. ಚಿಂತೆಯು ಚಿತೆಗೆ ಸಮಾನವಂತೆ. ಚಿಂತೆ ಮಾಡದೇ "ಚಿಂತನೆ"ಮಾಡಿ ಬಗೆಹರಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಬೇಕು. ನಕಾರಾತ್ಮಕ ಚಿಂತೆಗಳು ಪೆಡಂಭೂತದಂತೆ ಒಳ್ಳೆಯದನ್ನು ನೋಡಲು ಸಾಧ್ಯವೇ ಇಲ್ಲದಂತೆ ಮಾಡಿಬಿಡುತ್ತವೆ.  ಸಾತ್ತ್ವಿಕ, ರಾಜಸಿಕ, ತಾಮಸಿಕ ಎಂಬುದಾಗಿ ಮೂರು ಬಗೆಯ ಚಿಂತೆಗಳಿರುತ್ತವೆ. ಬಹು ದುಷ್ಟತನದಿಂದ ತನ್ನನ್ನೇ ತಾನು ಹಿಂಸಿಸಿಕೊಳ್ಳುವುದು, ಪರರಿಗೂ ಹಿಂಸೆಯಾಗುವಂತೆ ಚಿಂತಿಸುವ ಪರಿ ತಾಮಸಿಕ ಚಿಂತೆಯ ಫಲ. ಅಳುವುದು-ಗರ್ಜನೆ -ರಂಪಾಟ -ವಾದ -ವಿವಾದಗಳು ರಾಜಸಿಕ ಚಿಂತೆಯ ಫಲ. ಕ್ರಿಯಾಶೀಲತೆಯಿಂದ ಯಾರಿಗೂ ನೋವಾಗದ ರೀತಿಯಲ್ಲಿ ಉಪಾಯವನ್ನು ಚಿಂತಿಸುವುದು ಸಾತ್ತ್ವಿಕ ಚಿಂತನೆಯ ಫಲ.ನಮ್ಮ ಚಿಂತನೆ ಈ ಮೂರರಲ್ಲಿ ಯಾವರೀತಿ ಇದ್ದರೆ ಜೀವನ ಸೊಗಸಾಗಿರುತ್ತದೆ ಎಂಬುದನ್ನು ನಾವೇ ತೀರ್ಮಾನಿಸಬಹುದು. ಗೀತೆಯಲ್ಲಿ ಭಗವಂತನು ಅಪ್ಪಣೆ ಕೊಡಿಸಿದಂತೆ-

ಊರ್ಧ್ವಂ ಗಚ್ಛ೦ತಿ  ಸಾತ್ತ್ವಿಸ್ಥಾ:
ಮಧ್ಯೇ ತಿಷ್ಠ೦ತಿ ರಾಜಸಾ: 
ಜಘನ್ಯ ಗುಣ ವೃತ್ತಿಸ್ಥಾ ಅಧೋ ಗಚ್ಛ೦ತಿ ತಾಮಸಾ : -

ಪ್ರಾಪಂಚಿಕ ಚಿಂತೆಗಳನ್ನು ಬದಿಗಿರಿಸಿ ಜೀವನದ ಧ್ಯೇಯವಾದ ಭಗವಂತನ ನೆಲೆಗೆ ತಲುಪುವ ಉರ್ಧ್ವಗತಿಯ ಚಿಂತನೆ ಸಾತ್ತ್ವಿಕರದು. ರಾಜಸ ಪ್ರವೃತ್ತಿಯುಳ್ಳವರು ವಾದ - ವಿವಾದದಲ್ಲಿ ಸಿಲುಕಿ ಕೊನೆಮೊದಲಿಲ್ಲದ ಕ್ರಿಯಾಶೀಲತೆಯಲ್ಲೇ ಜೀವನ ಕಳೆಯುತ್ತಾ ಮಧ್ಯೆ ನಿಲ್ಲುತ್ತಾರೆ. ತಾಮಸಿಕರು ಅತ್ಯಂತ ನೀಚವಾದ ಚಿಂತನೆಯಿಂದ ಸಮಾಜಕ್ಕೂ ಅಹಿತವನ್ನೇ ಮಾಡಿ ತಾವೂ ಅದಃಪತನ ಹೊಂದುತ್ತಾರೆ. ಆದ್ದರಿಂದ ನಮ್ಮನ್ನು ನಾವು ಸಾತ್ತ್ವಿಕರನ್ನಾಗಿಸಿಕೊಳ್ಳಬೇಕು. ಶ್ರೀರಂಗ ಮಹಾಗುರುಗಳು "ನಿಮ್ಮ ಹೃದಯ ಕಮಲವನ್ನು ಸದಾ ಅರಳಿದ ಪುಷ್ಪದಂತೆ ಇರಿಸಿಕೊಳ್ಳಿ ಬಾಡದಂತೆ ನೋಡಿಕೊಳ್ಳಿ'' ಎನ್ನುತ್ತಿದ್ದರು.

ಕೊಳಚೆ ತುಂಬಿದ ಪಾತ್ರೆಯೊಳಕ್ಕೆ ಶುದ್ಧವಾದ ನೀರನ್ನು ತುಂಬುವ ಎರಡು  ಬಗೆಯಿದೆ- ೧] ಕೊಳಚೆಯನ್ನು ಹೊರಕ್ಕೆ ಚೆಲ್ಲಿ ಪಾತ್ರಶುದ್ಧಗೊಳಿಸಿ ಶುದ್ದನೀರನ್ನು ತುಂಬುವುದು.೨] ಶುದ್ಧವಾದ ನೀರನ್ನು ಅತಿ ರಬಸದಿಂದ ಪಾತ್ರೆಯೊಳಕ್ಕೆ ತುಂಬಿ ಕೊಳಚೆಯ ಲವಲೇಶವೂ ಪಾತ್ರೆಯೊಳಗಿರದೇ ಶುದ್ಧವಾದ ಜಲವೇ ಉಳಿಯುವಂತಾಗಬೇಕು. ಅಂತೆಯೇ ಸನ್ನಡತೆ, ಸದ್ವಿಚಾರಗಳನ್ನು ಹೆಚ್ಚು ಹೆಚ್ಚಾಗಿ ನಮ್ಮಲ್ಲಿ ತುಂಬಿಕೊಳ್ಳಬೇಕು. ಸದ್ವಿಚಾರಗಳನ್ನುಕೇಳಿ, ಮನನ ಮಾಡಿ, ಮೆಲುಕುಹಾಕುತ್ತಾ ನಮ್ಮ ಜೀವನಗಳಲ್ಲಿ ರೂಡಿಸಿಕೊಳ್ಳುವಂತಾಗಬೇಕು. ಇವುಗಳಿಂದ ಸಾತ್ತ್ವಿಕತೆಯನ್ನು ಹೆಚ್ಚಿಸಿಕೊಳ್ಳಬೇಕು. ಆತ್ಮಸಂತೃಪ್ತಿಯನ್ನು ಹೊಂದಬೇಕು  ಎಂಬುದು ಈ ದೇಶದ ಋಷಿಗಳ ಆಶಯ. ನಾವೆಲ್ಲರೂ ಅಂತಹ ನೆಮ್ಮದಿಯ ಬದುಕಿಗಾಗಿ ಶ್ರಮಿಸೋಣ.

ಸೂಚನೆ: 15/07/2020 ರಂದು ಈ ಲೇಖನ
ಉದಯವಾಣಿ ಯಲ್ಲಿ ಪ್ರಕಟವಾಗಿದೆ. 

Saturday, June 6, 2020

ಸ್ತ್ರೀ ಸಮಾನತೆ, ಸ್ವಾತಂತ್ರ್ಯ? (Stre Samanate, Svatantrya?)

ಲೇಖಕಿ ; ಡಾ. ಯಶಸ್ವಿನೀ
(ಪ್ರತಿಕ್ರಿಯಿಸಿರಿ lekhana@ayvm.in)



ಹೆಣ್ಣು ಸಮಾಜದ ಕಣ್ಣು. ಸ್ತ್ರೀ ಇರುವ ಮನೆ ಅಚ್ಚುಕಟ್ಟಾಗಿ ಇರುತ್ತದೆ. "ಗೃಹಿಣೀ ಗೃಹಮುಚ್ಯತೇ". ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ, ಅವಳ ವಿಶೇಷತೆಗಳನ್ನು ಗಮನಿಸಿ ಅದಕ್ಕೆ ತಕ್ಕುದಾದ ವಿಶೇಷ ಗೌರವ, ಜವಾಬ್ದಾರಿಗಳನ್ನು ವಹಿಸಿದ್ದಾರೆ. "ಯತ್ರ ನಾರ್ಯಸ್ತು ಪೂಜ್ಯಂತೆ,ರಮಂತೇ ತತ್ರ ದೇವತಾಃ ಎಂಬ ಪ್ರಸಿದ್ಧವಾದ ವಾಕ್ಯವೇ ಇದೆ. ಶಿಕ್ಷಣವಿಲ್ಲದೆ ಸ್ವೇಚ್ಛೆಯಿಂದ ವರ್ತಿಸುವುದು ಎಂದೂ ಸ್ವಾತಂತ್ರ್ಯವಾಗದು. ಸ್ವಾತಂತ್ರ್ಯ ತನಗೇ ನಿಸರ್ಗದತ್ತವಾಗಿ ಬಂದ ತಂತ್ರ. ಅದರಂತೆ ನಡೆಯುವುದೇ ನಿಜವಾದ ಸ್ವಾತಂತ್ರ. ಪುರುಷ ಒಂದು ಬಗೆಯ ಶರೀರ ಮನಸ್ಸುಗಳನ್ನು ಹೊತ್ತು ಬಂದಿದ್ದಾನೆ, ಸ್ತ್ರೀ ಇನ್ನೊಂದು ಬಗೆಯ ದೇಹ, ಮನಸ್ಸುಗಳನ್ನು ಹೊಂದಿ ಬಂದಿದ್ದಾಳೆ. ಅದರಂತೆ ನಿರ್ವಹಿಸುವ ಕೆಲಸವೂ ಕೆಲವೊಮ್ಮೆ ಬೇರೆ ಬೇರೆಯಾಗಿರುತ್ತವೆ. ಇಬ್ಬರ ಸಮಾನತೆ ಎನ್ನುವುದು ಬರಿಯ ಅಸಹಜವಾದ ಘೋಷಣೆ ಅಷ್ಟೇ. ಇಬ್ಬರೂ ಅವರವರಿಗೆ ಒದಗಿಬಂದ ಸೌಲಭ್ಯಕ್ಕನುಗುಣವಾಗಿ ಒಂದು ಒಳ್ಳೆಯ ಜೀವನವನ್ನು ನಿರ್ವಹಿಸುವಂತಾಗುವುದೇ ಸಹಬಾಳ್ವೆ. ಅವನ ಉಡುಪನ್ನು ಇವಳು ಧರಿಸುವುದು. ಇವಳ ಸೀರೆಯನ್ನು ಅವನು ಉಡುವುದು ಎಂದಲ್ಲ ಸಮಾನತೆ ಎಂದರೆ. 

"ಶಿವ ಶಕ್ತ್ಯಾತ್ಮಕಂ ಇದಂ ಜಗತ್ "  ಶಿವಶಕ್ತಿಯರು ಸೇರಿಯೇ ಸೃಷ್ಟಿ ಎಲ್ಲವೂ.  ಸ್ತ್ರೀ  ಶಕ್ತಿ  ಸ್ವರೂಪಪಿಣಿ.  ಇದು ಭಾರತೀಯರ ದೃಷ್ಟಿಕೋನ. ಇಲ್ಲಿ ನಾ ಹೆಚ್ಚು ನೀ ಕಡಿಮೆ ಎಂಬ ಪ್ರಶ್ನೆ ಇಲ್ಲ.  ಪುರುಷ ಮತ್ತು ಸ್ತ್ರೀ
ಇಬ್ಬರು ಸಹ ಯೋಗ-ಭೋಗಮಯವಾದ ಜೀವನವನ್ನು ನಡೆಸಲು ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿಸಿದ್ದಾರೆ  ಒಬ್ಬರ ಅವಶ್ಯಕತೆಯನ್ನು ಇನ್ನೊಬರು ಪೂರೈಸಬಲ್ಲರು. ಪರಮಾರ್ಥವನ್ನು ಸಾಧಿಸಬಲ್ಲರು. ಇದಕ್ಕಗಾಗಿಯೇ ಗೃಹಸ್ಥಾಶ್ರಮ-ವಿವಾಹವೆಂಬ ಪದ್ಧತಿಯು ಇರುವುದಾಗಿದೆ. ಹೀಗಿರುವಾಗ, ಈ ಘಟ್ಟದಲ್ಲಿ ಒಬ್ಬರನ್ನೊಬ್ಬರು ಪೂಜ್ಯ ಭಾವದಿಂದ, ಅನ್ಯೋನ್ಯವಾಗಿ ಭಾವಿಸುವುದು ಮುಖ್ಯ. ಪ್ರವಚನಗಳ, ಒಳ್ಳೆಯ ಕೆಲಸಗಳ ಆರಂಭ ಮಾಡುವ ಮುನ್ನ ಸ್ತ್ರೀ ಹಸ್ತದಿಂದ ದೀಪ ಬೆಳಗಿಸುವ ಮೂಲಕ ವಿದ್ಯಾ ದೇವಿಯ ಅನುಗ್ರಹವನ್ನು ಪಡೆಯಬೇಕು ಎಂಬುದು ಶ್ರೀರಂಗ ಮಹಾಗುರುಗಳ ಪಾಠವಾಗಿತ್ತು. ಹೀಗೆ ಸ್ತ್ರೀ ಪುರುಷರು ಪರಸ್ಪರ ಸ್ಪರ್ಧಾ ಮನೋಭಾವವನ್ನು ತ್ಯಜಿಸಿ ಸಹಕಾರ ಭಾವದಿಂದ ಒಳ್ಳೆಯ ಮನಸ್ಸು, ಮನೆ, ಕುಟುಂಬ, ಸಮಾಜ, ರಾಷ್ಟ್ರ ನಿರ್ಮಾತೃಗಳಾಗ ಬೇಕೆಂಬುದು ಭಾರತೀಯರ ಚಿಂತನೆಯಾಗಿದೆ.

ಸೂಚನೆ: 3/06/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Thursday, April 16, 2020

ಉಪನಿಷತ್ತಿನ ಕಥಾ ಸಾರ (Upanisattina Katha Sara)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)


ಹಿಂದೊಮ್ಮೆ ಮಾನವರೆಲ್ಲಾ ಯಥೇಚ್ಛವಾಗಿ ಸಂಪಾದಿಸುತ್ತಿದ್ದರೂ, ಇನ್ನೂ ತೃಪ್ತಿಯಿಲ್ಲದಂತೆ ದುಡಿಯತೊಡಗಿದರು. ಇನ್ನೊಂದೆಡೆ ರಾಕ್ಷಸರು ಯಥೇಚ್ಛವಾಗಿ ದುಷ್ಟಕರ್ಮಗಳನ್ನು ಮಾಡತೊಡಗಿದ್ದರು. ಹಿಂಸಿಸುವುದು, ಅನ್ಯರನ್ನು ನೋಯಿಸುವುದು, ಅನ್ಯಾಯಗೈಯುವುದರಲ್ಲೇ ಸುಖಪಡುತ್ತಲಿದ್ದರು. ಮತ್ತೊಂದೆಡೆ ದೇವತೆಗಳು ಇಂದ್ರಿಯಗಳಿಗೆ ಕಡಿವಾಣವೇ ಇಲ್ಲದಂತೆ ವೈಭೋಗ ವ್ಯಸನಗಳಲ್ಲಿ ತಲ್ಲೀನರಾಗಿದ್ದರು. ಹೀಗೆ ದೇವತೆಗಳು, ರಾಕ್ಷಸರು, ಮಾನವರು ಮೂರು ವರ್ಗದವರೂ ಮನಸೋ ಇಚ್ಛೆಯಾಗಿ ವರ್ತಿಸಿದರೂ ಅವರಿಗೆ ನೆಮ್ಮದಿ ದೊರಕುತ್ತಿರಲಿಲ್ಲ. ಅತಿಯಾದ ಸುಖವೂ ದುಃಖಕ್ಕೆ ಕಾರಣವಂತೆ. ಹಾಗೆ ಯಥೇಚ್ಛ ಸುಖದ ಅನುಭವದಲ್ಲಿದ್ದರೂ, ದುಃಖತಪ್ತರಾಗಿ, ಮೂರೂ ವರ್ಗದವರು ಬ್ರಹ್ಮನಲ್ಲಿಗೆ ಹೋಗಿ ತಮ್ಮ ಸಮಸ್ಯೆಯನ್ನಿಟ್ಟರು.

ಬ್ರಹ್ಮನು ಇವರೆಲ್ಲರ ವಿಶೇಷತೆಗಳನ್ನು ಗಮನಿಸಿ ಪರಿಹಾರ ಸೂಚಕವಾಗಿ ಒಂದೇ ಒಂದು ಅಕ್ಷರವನ್ನು ಅರುಹಿದ. "ದ" ಎಂಬುದಾಗಿ. "ದ" ಎಂಬ ಒಂದೇ ಶಬ್ದವನ್ನು ಮೂವರೂ ಅವರ ಸಂಸ್ಕಾರಕ್ಕನುಗುಣವಾಗಿ ಗ್ರಹಿಸಿದರು. ದೇವತೆಗಳು “ದಾಮ್ಯತ” ಎಂದು ಬ್ರಹ್ಮನು ಹೇಳಿರಬೇಕೆಂದು ಭಾವಿಸಿದರು.(“ದಾಮ್ಯತ” ಎಂದರೆ ನೀವು ಸಂಯಮ ಮಾಡಿ ಎಂದರ್ಥ.) ಮನುಷ್ಯರು “ದತ್ತ” ಎಂದು ಬ್ರಹ್ಮನು ಸೂಚಿಸಿದುದು ಎಂದು ಭಾವಿಸಿದರು. (ದತ್ತ-ಎಂದರೆ ದಾನ ಮಾಡಿರಿ ಎಂದರ್ಥ.) ಅಸುರರು “ದಯಧ್ವಮ್” ಎಂದು ಬ್ರಹ್ಮನು ಹೇಳಿದುದು ಎಂದು ಅರ್ಥೈಸಿಕೊಂಡರು. (ದಯಧ್ವಮ್-ಎಂದರೆ ದಯಾ ತೋರಿರಿ ಎಂದರ್ಥ.)

ದೇವತಾಭಾವ, ಆಸುರೀ ಭಾವ, ಮಾನುಷೀ ಭಾವ ಎಲ್ಲವೂ ನಮಲ್ಲಿ ಆಗಾಗ ಆಡುವಂತಹದ್ದೇ.  ಇಂದ್ರಿಯ ಸುಖಕ್ಕೆ ಅಲ್ಲಲ್ಲಿ ಕಡಿವಾಣ ಹಾಕುತ್ತಾ, ಅನ್ಯರಿಗೆ ಹಿಂಸೆ ಮಾಡದೇ, ತಮಗೇ ತಾವು ಹಿಂಸೆಗೈದುಕೊಳ್ಳದೇ ದಯಾಪರರಾಗಿ, ಜೀವನೋಪಾಯಕ್ಕಾಗಿ ಮಾತ್ರವೇ ದುಡಿಯುತ್ತಾ, ಸಮಾಜದ ಒಳಿತಿಗಾಗಿ ನಿಯಮಾನುಸಾರ ದಾನವನ್ನು ಮಾಡುತ್ತಾ ಭಗವಂತನ ಸ್ಮರಣೆಯಲ್ಲಿ ತೊಡಗಬೇಕು ಎಂಬುದೇ ಈ ಉಪನಿಷತ್ತಿನ ಕಥೆಯ ಸಾರ. ಒಟ್ಟಿನಲ್ಲಿ ಜೀವನದಲ್ಲಿ ಅವಿನಾಶಿಯಾಗಿ ಉಳಿಯುವ ಬದುಕೇ ಸತ್ಯವಸ್ತುವಾಗಿದೆ. ಅದರ ಕಡೆಗೆ ಲಕ್ಷ್ಯವಿಟ್ಟು ಬಾಳಿದಾಗ ಸತ್ಯಸ್ವರೂಪವಾಗಿ ಜೀವನ ಉಳಿಯುತ್ತದೆ ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಸೂಚನೆ: 15/04/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Friday, March 27, 2020

ಯುಗಾದಿ - ಋಷಿದೃಷ್ಟಿ (Ugadi - Rusidrusti)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)


ಯುಗಾದಿಹಬ್ಬ ಎಂದರೆ ಸಡಗರ, ಸಂಭ್ರಮ. ಕೆಲಸಕ್ಕೆ ರಜೆ ಇರುವ ದಿನ. ನವ ವಸ್ತ್ರ ಧರಿಸಿ, ಬಗೆ ಬಗೆ ಹೂವುಗಳಿಂದ ಭಗವಂತನ ಪೂಜೆಯ ಮಾಡಿ, ಬೇವು ಬೆಲ್ಲ ತಿಂದು ಪಂಚಾಂಗ ಶ್ರವಣ ಮಾಡಿ, ಹಬ್ಬದ ಅಡುಗೆಯ ಸವಿಯುವ ದಿನ. ವರ್ಷವಿಡೀ ಸಿಹಿ, ಕಹಿ ಅನುಭವಗಳನ್ನು ಸಂಪೂರ್ಣ ಭಗವದರ್ಪಣೆ ಮಾಡುತ್ತೇವೆ. ಸಿಹಿ, ಕಹಿಯನ್ನು ಸಮವಾಗಿ ಕಾಣುತ್ತೇನೆ ಎಂಬ ಮನಸ್ಸಿನಲ್ಲಿ ವರ್ಷವನ್ನು ಆರಂಭಮಾಡುವ ದಿನ. ಇಂದು ಹೊಸ ಸಂಕಲ್ಪಗಳನ್ನು ಪ್ರಾರಂಭಿಸಲು ಯೋಗ್ಯವಾದ ದಿನ. ಇಂದು ವರ್ಷಾದ್ಯಂತ ಆಚರಿಸುವ ಸತ್ಕಾರ್ಯ, ಜಪ ಮುಂತಾದ ಒಳ್ಳೆಯ ಕಾರ್ಯಗಳನ್ನು ಪ್ರಾರಂಭಿಸಲು, ಸಂಕಲ್ಪ ಮಾಡಲು ಪ್ರಶಸ್ತವಾದ ದಿನ. ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ- ಇವತ್ತು ಬೇಗನೆ ಏಳು. ತಡವಾಗಿ ಎದ್ದರೆ ವರ್ಷವಿಡೀ ತಡವಾಗಿ ಏಳುತ್ತೀಯ ಎಂದು ಇವತ್ತು ಕೋಪ, ಹಠ ಮಾಡಬಾರದು, ಅಳಬಾರದು, ನಗುನಗುತ್ತಾ ಸಂತೋಷದಿಂದಿರು. ಆಗ ವರ್ಷವಿಡೀ ಸಂತೋಷದಿಂದ ಸಮಾಧಾನದಿಂದ ಇರುತ್ತೀಯ ಎಂದು. ಈ ವಿಚಾರಗಳು ಮನೆಮನೆಗಳಲ್ಲಿ ಸಂಸ್ಕಾರ ರೂಪದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರಗಳು. 

ಜಿಜ್ಞಾಸೆ 
ಈಗಿನ ಜೀವನಶೈಲಿಗೆ ಇವೆಲ್ಲವೂ ಕಾಲಬಾಹಿರ ವಿಷಯಗಳು ಎನ್ನಿಸಬಹುದು. ವರ್ಷದ ಮೊದಲ ರಜೆ. ರಜೆದಿನ ಹೊಸತಿಂಡಿ ಮನೆಕೆಲಸ ಅಂತ ಮತ್ತೆ ಆಯಾಸ ಮಾಡಿಕೊಳ್ಳುವುದಕ್ಕಿಂತ ಹಾಯಾಗಿ ಸ್ವಿಗ್ಗಿಯಲ್ಲಿ ಸುಗ್ಗಿಯ ಅಡುಗೆ ಆರ್ಡರ್ ಮಾಡಬಹುದಲ್ಲ? ಎಂಬ ಯೋಚನೆ ಬರಬಹುದು. ಅಥವಾ ಫ್ಯಾಮಿಲಿ ಔಟಿಂಗ್ ಪ್ರವಾಸಕ್ಕೆ ಹೋಗಿ ಶ್ರಮವನ್ನು ಕಳೆದುಕೊಂಡು ಬರಬಹುದಲ್ಲ ಎಂಬ ಚಿಂತನೆಗಳೂ ಈಗ ಸಹಜವಾಗಿವೆ.ಈ ಹಬ್ಬದ ಪರಿಪೂರ್ಣ ಉಪಯೋಗ ಏನು? ಪ್ರಯೋಜನೆ ಏನು? ಎಂಬ ಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯಾದ ಬಗೆ ಬಗೆ ಯೋಚನೆಗಳು ಸಹಜ. ಭಾರತೀಯರ ಹಬ್ಬಗಳು ಕ್ಯಾಲೆಂಡರ್ ದಿನಾಂಕ ಆಧಾರಿತ ಹಬ್ಬಗಳಲ್ಲ. ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ. 

 ಹಿನ್ನೆಲೆ 
ಯುಗಾದಿಯನ್ನು ಒಂದು ಪರ್ವ ಎಂದು ಕರೆಯುತ್ತಾರೆ. ಪರ್ವ ಎಂದರೆ ಗಿಣ್ಣು ಎಂದರ್ಥ. ಕಬ್ಬಿನಲ್ಲಿ ಗಿಣ್ಣುಗಳನ್ನು ನೋಡುತ್ತೇವೆ. ಈ ಗಿಣ್ಣುಗಳಿಗೆ ಪರ್ವ ಎಂದು ಹೆಸರು. ಇದು ಹಳೆಯದಕ್ಕೆ ಅಂತ್ಯ, ಮುಂದಿನದಕ್ಕೆ ಪ್ರಾರಂಭ. ಒಂದು ಸಂಧಿಯ ಕಾಲ. ಇಂತಹ ಸಂಧಿಕಾಲದಲ್ಲಿ ನಮ್ಮ ಶರೀರದಲ್ಲಿ ಭಗವತ್ ಕಾರ್ಯಕ್ಕೆ ಅನುಕೂಲತೆ ಏರ್ಪಡುತ್ತದೆ. ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಅಂತಹ ವಿಶೇಷ ದಿನಗಳಲ್ಲಿ ಯುಗಾದಿ ಒಂದು. ರಾತ್ರಿ ಕಳೆದು ಹಗಲು, ಹಗಲು ಕಳೆದು ಮಧ್ಯಾಹ್ನ, ಮಧ್ಯಾಹ್ನ ಕಳೆದು ರಾತ್ರಿ. ಹೀಗೆ ಒಂದು ದಿನದಲ್ಲಿ ಮೂರು ಸಂಧ್ಯಾಕಾಲಗಳು ಸಂಭವಿಸುತ್ತದೆ. ಈ ಸಂಧ್ಯಾಕಾಲಗಳು ಯೋಗಸಾಧನೆಗೆ, ಸಂಧ್ಯಾವಂದನೆಗೆ, ಧ್ಯಾನ, ಪ್ರಾರ್ಥನೆ, ಭಜನೆ, ಪೂಜಾ, ಮಂಗಳಾರತಿಗೆ ಯೋಗ್ಯಕಾಲ. ಸಂಧ್ಯಾಕಾಲದಲ್ಲಿ ಸಾತ್ವಿಕ ಪ್ರವೃತ್ತಿ ಹೆಚ್ಚಾಗಿ ಇರುವಂತಹ ಕಾಲ. ಹಾಗೆಯೇ ಇಡೀ ಒಂದು ವರ್ಷದಲ್ಲಿ ಆತ್ಮಸಾಧನೆಗೆ, ಭಗವಂತನ ಅನುಗ್ರಹಕ್ಕೆ ಯೋಗ್ಯ ಕಾಲಗಳು ಒದಗಿಬರುತ್ತದೆ. ಅಂತಹ ದಿನಗಳಲ್ಲಿ ಗ್ರಹ, ನಕ್ಷತ್ರಾದಿಗಳಲ್ಲಿ ಯೋಗ ಉಂಟಾದಾಗ ಅವುಗಳನ್ನು ಹಬ್ಬಗಳನ್ನಾಗಿ ಆಚರಿಸುತ್ತಿದ್ದೇವೆ. ಗಣೇಶನ ಅನುಗ್ರಹಕ್ಕೆ ಅನುಕೂಲವಾದ ತಿಥಿ, ಪಕ್ಷದಂದು ಗಣಪತಿ ವ್ರತ ಆಚರಿಸುತ್ತಿದ್ದೇವೆ. ನಮ್ಮ ಪೂರ್ವಜರಾದ ಆರ್ಯ ಋಷಿಗಳು ಆಯಾ ದೇವತಾ ಅನುಗ್ರಹಕ್ಕೆ ಸಹಜವಾಗಿ ಯೋಗ ಕೂಡಿಬರುವುದನ್ನು ಗುರುತಿಸಿ ಹಬ್ಬಕ್ಕೆ ಒಂದು ಚೌಕಟ್ಟು ಹಾಕಿಕೊಟ್ಟಿರುತ್ತಾರೆ. ಹಬ್ಬ ಯಾವ ಋತುವಿನಲ್ಲಿರುತ್ತದೆಯೋ ಅದಕ್ಕೆ ತಕ್ಕಂತಹ ಆಹಾರ, ಭಕ್ಷ್ಯ ಅಂದು ಮಾಡುವ ಸಂಪ್ರದಾಯವಿದೆ. ಆಯಾ ದೇವತಾ ಪ್ರಸನ್ನತೆಗೆ ನಮ್ಮೀ ಶರೀರವು ಬಿಟ್ಟುಕೊಡುವಂತೆ ನಮ್ಮಲ್ಲಿ ಧಾತುಸಾಮ್ಯತೆ ಉಂಟಾಗುವಂತೆ ಮಾಡುವ ವ್ಯವಸ್ಥೆ ಇದು. ರಾಮನವಮಿಯಲ್ಲಿ ಬಿಸಿಲ ಬೇಗೆಗೆ ಶರೀರದಲ್ಲಿಯ ಉಷ್ಣತೆ ಕಡಿಮೆ ಮಾಡಿ ಧಾತು ಸಾಮ್ಯತೆ ತರಲು ಕೋಸಂಬರಿ, ಪಾನಕ, ಗಣೇಶ ಚತುರ್ಥಿಯಂದು ಮೂಲಾಧಾರಕ್ಕೆ ಪುಷ್ಟಿಯನ್ನು ನೀಡುವ ಚಕ್ಕಲಿ ಭಕ್ಷ್ಯ ಸೇವನೆ ಮಾಡುವ ಕ್ರಮ ಇರುವುದಾಗಿದೆ.

ಶಾರ್ವರಿ ವರ್ಷಾರಂಭ
ಪ್ರಸ್ತುತ ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ-ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ. ಯುಗದ ಆದಿಯ ದಿನವಾದ ಇಂದು ಚೈತ್ರ ಮಾಸಕ್ಕೆ ಪ್ರಥಮ ತಿಥಿ. ಪ್ರಥಮ ಋತುವಿಗೆ, ಹೊಸ ಶಾರ್ವರಿ ಸಂವತ್ಸರಕ್ಕೆ ಪ್ರಥಮ ದಿನ. ಇಂತಹ ಶುಭ ದಿನದಂದು ನಮ್ಮ ಶರೀರದಲ್ಲಿ ನವೀನತೆ ಉಂಟಾಗಲು ಎಳ್ಳೆಣ್ಣೆಯಿಂದ ಅಭ್ಯಂಜನವನ್ನು ಮಾಡುವುದಿದೆ. ಸೃಷ್ಟಿಕರ್ತನಾದ ಬ್ರಹ್ಮನು ಸೃಷ್ಟಿಯನ್ನು ಮೊದಲು ಮಾಡಿದ ದಿನ. ಕೃತಯುಗದ ಪ್ರಾರಂಭದ ದಿನ. ಆದ್ದರಿಂದಲೇ ಕೃತಯುಗದ ಲಕ್ಷಣಗಳು ಈ ಯುಗಾದಿ ದಿನದಂದು ಇರುತ್ತದೆ. ವಸಂತ ಮಾಸದಲ್ಲಿ ಬಿಸಿಲಿನ ಬೇಗೆಗೆ ಕರಗುವ ಕಫ ಭಗವತ್ ಕಾರ್ಯಕ್ಕೆ ಅಡ್ಡಿಬಾರದಿರಲೆಂದು ಬೇವು ತಿನ್ನುವ ಒಂದು ಪದ್ಧತಿಯನ್ನು ತಂದಿದ್ದಾರೆ.

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ| 
ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ|| 

ಬೇವಿನ ಕಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖಿನ್ನತೆ ಉಂಟಾಗುತ್ತದೆ. ಲೆಕ್ಕರಸ, ವಾತ ಪ್ರಕೋಪಕ್ಕೂ ಕಾರಣವಾಗುತ್ತದೆ. ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮ ಬಂದಿದೆ. ಹಬ್ಬವನ್ನು ಸತ್ಯ ವಿಧಾನವಾದ ಮನಸ್ಸಿನಿಂದ, ನಿಷ್ಠೆಯಿಂದ ಆಚರಿಸೋಣ. ಹಬ್ಬದ ಸಂಪೂರ್ಣ ಪ್ರಯೋಜನವನ್ನು ಪಡೆಯೋಣ. ವಿಶ್ವವನ್ನೆಲ್ಲಾ ವ್ಯಾಪಿಸಿ ಬೆಳಗುತ್ತಿರುವ ಲೋಕವಂದ್ಯನೂ ಮಹಾಯೋಗೇಶ್ವರನೂ, ಸುರೇಶ್ವರನೂ ಆದ ಭಗವಂತನನ್ನು ನಮ್ಮಲ್ಲಿ ನಾವು ಕಾಣುವಂತಾಗಲಿ. ಎಲ್ಲರಿಗೂ ಸುಖ, ಶಾಂತಿ ನೆಮ್ಮದಿಯು ದೊರಕಲಿ.

ಯುಗಾದಿಯ ಆಚರಣೆ 
ಯುಗಾದಿಯ ಶಾಸ್ತ್ರ ಸಂಪ್ರದಾಯಗಳ ಗುರಿಯು ಪುರಷಾರ್ಥಗಳ ಸಿದ್ಧಿ. ಅಂದರೆ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕೂ ಫಲಗಳನ್ನು ಪಡೆಯುವುದೇ ಆಗಿದೆ. ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಎಲ್ಲದಕ್ಕೂ ಒಳ್ಳೆಯದನ್ನು ಮಾಡುವ ಪದಾರ್ಥಗಳನ್ನು ಅಂದು ಸೇವಿಸಬೇಕೆಂಬುದೇ ಇದರ ಉದ್ದೇಶ. ಯಾಂತ್ರಿಕವಾಗಿ ಸೇವನೆ ಮಾಡದೆ ಸಂಕಲ್ಪ ಸಹಿತವಾಗಿ, ಅಂತರಂಗದಲ್ಲಿರುವ ದೇವತೆಗಳ ಆರಾಧನೆಯೊಡನೆ ಸ್ವೀಕರಿಸಬೇಕೆಂದು ಋಷಿಗಳ ಆಶಯ. ಅಭ್ಯಂಗ: ಪ್ರಾತ:ಕಾಲದಲ್ಲಿ "ಅಭ್ಯಂಗ" ಮಾಡಿಕೊಳ್ಳಬೇಕು. ಎಳ್ಳೆಣ್ಣೆಯಿಂದಲೇ ಅಭ್ಯಂಗ ಮಾಡಿಕೊಳ್ಳುವುದು ಪ್ರಶಸ್ತ. ಅಭ್ಯಂಗವನ್ನು ಪ್ರತಿದಿನವೂ ಆಚರಿಸಬೇಕು. ಅದು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು. ದೃಷ್ಟಿಪಾಟವವನ್ನು ಕೂಡುವುದು. "ಪುಷ್ಟಿ" ಆಯಸ್ಸು, ನಿದ್ರೆಯ ಸೌಖ್ಯ ಇವುಗಳನ್ನುಂಟುಮಾಡುವುದು. ಚರ್ಮದ ಆರೋಗ್ಯ, ಸೌಂದರ್ಯ ಧೃಢತೆಗಳನ್ನು ತಂದುಕೊಡುವುದು ಎಂದು ಆಯುರ್ವೇದವು ಹೇಳುತ್ತದೆ. ಇದರಿಂದ ದೈಹಿಕ, ಮಾನಸಿಕ ಎರಡು ವಿಧವಾದ ಆರೋಗ್ಯವು ಕೂಡಿ ಬರುತ್ತದೆ. ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ. ದೇಹವು ಹಗುರವಾಗುತ್ತದೆ. ಅಂದು ಅಚರಿಸಬಹುದಾದ ಆರೋಗ್ಯವ್ರತಕ್ಕೂ ಇದು ನಾಂದಿಯಾಗುತ್ತದೆ. ಭೌತಿಕ ಲಾಭಗಳೊಂದಿಗೆ ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ ಮನಸ್ಸನ್ನು ಹಗುರಗೊಳಿಸುತ್ತದೆ.

ಗೃಹಾಲಂಕಾರ-ಪೂಜೆ 
ಗೃಹಾಲಂಕಾರ:- ತಳಿರು ತೋರಣಗಳಿಂದ, ರಂಗವಲ್ಲಿ, ಹೂ ಅಲಂಕಾರಗಳಿಂದ ಇಂದು ಮನೆಯನ್ನೂ, ಪೂಜಾಗೃಹವನ್ನೂ ವಿಶೇಷವಾಗಿ ಅಲಂಕರಿಸಬೇಕು. ಕಣ್ಣುಗಳಿಗೆ ಹಬ್ಬವಾಗಿ ಮನಸ್ಸನ್ನು ಹಸಿರನ್ನಾಗಿ ಮಾಡುತ್ತದೆ. ಮನಸ್ಸನ್ನು ದಿವ್ಯಭಾವಕ್ಕೆ ಒಯ್ಯುವ ಪದಾರ್ಥಗಳ ಮತ್ತು ಕಲಾಕೃತಿಯ ಸೌಂದರ್ಯದಿಂದ ಅಲಂಕರಿಸಬೇಕು. ಪೂಜೆ: ನಿತ್ಯವೂ ಪೂಜೆ ಮಾಡಬೇಕು. ಇಂದಿನ ದಿನ ಪ್ರಜಾಪತಿಯು ಸೃಷ್ಟಿಯ ಆರಂಭ ಮಾಡಿದ್ದರಿಂದ ಪ್ರಜಾಪತಿ/ಕಾಲಪುರುಷನನ್ನು ಇಂದು ಪೂಜಿಸಬೇಕು. ಭಗವಂತ, ನಿನ್ನ ದೇಹವಾಗಿರುವ ಈ ಕಾಲದಲ್ಲಿ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಅರ್ಥವತ್ತಾಗಿ ಆಚರಿಸಿ ಕಾಲವನ್ನೇ ದಾಟಿ ನಿನ್ನನ್ನು ಸೇರುವ ಸಾಧನೆಗಾಗಿ ಸಂಸಾರಸಾಗರದಿಂದ ಮುಕ್ತರಾಗುವಂತೆ ಮಾಡು ಎಂಬ ಅರಿಕೆಯನ್ನು ಇಡುವುದು ಉಚಿತವಾಗಿದೆ. 

ಪಂಚಾಗ ಶ್ರವಣ
ಪಂಚಾಗ ಶ್ರವಣ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಜ್ಞಾನದೊಡನೆಯೇ ಪ್ರತಿದಿನ ವ್ಯವಹರಿಸಬೇಕು. ಕಡೇಪಕ್ಷ ಅವುಗಳ ತಿಳುವಳಿಕೆಯಾದರೂ ಇರಬೇಕು. ಯುಗದ ಆದಿಯ ದಿನವಾದ ಇಂದು, ಇಂದಿನ ದಿನದ ಪಂಚಾಂಗದ ಜೊತೆಗೆ, ಇಡೀ ಸಂವತ್ಸರದ ಪಂಚಾಂಗವನ್ನು, ಸಾಮಾನ್ಯವಾದ ಯೋಗವನ್ನು ಕೇಳಿ ತಿಳಿದರೆ ಅದಕ್ಕೆ ತಕ್ಕಂತೆ ವರ್ಷದ ಕಾರ್ಯಯೋಜನೆ ಹಾಕಿಕೊಳ್ಳಲು ಸಹಾಯವಾಗುವುದು ಎಂದು. ಈ ರೀತಿಯಾಗಿ ಪಂಚಾಂಗ ಶ್ರವಣ ಮಾಡುವ ಜ್ಯೋತಿಷರಿಗೆ ಕೃತಜ್ಞತೆಯಿಂದ ಯಥೋಚಿತ ಸಂಭಾವನೆ ನೀಡುವುದು ಕ್ರಮ. ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನ ಮುಂತಾದವುಗಳ ಜೊತೆಗೆ, ವಿಶೇಷವಾಗಿ ಪಂಚಾಂಗ, ಮತ್ತು ವಸ್ತ್ರಭೂಷಣಗಳನ್ನು ದಾನಮಾಡಬೇಕಂತೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ.

 ನೈವೇದ್ಯ
ಇಂದು ಅರ್ಪಿಸಿ ಸೇವಿಸಬೇಕಾದ ವಿಶೇಷವಾದ ನೈವೇದ್ಯ "ಬೇವು" ಹೂವಿನೊಡನೆ ಕೂಡಿದ ಚಿಗುರಬೇವು, ಬೇವು ಅಸ್ಥಿಗತವಾದ ರೋಗವನ್ನೂ ವಿಷದ ಸೋಂಕನ್ನೂ ನಿವಾರಿಸುವ ಮಹೌಷಧಿ. ಬೇವಿನಿಂದ ಉಂಟಾಗುವ ವಾತ ವೃದ್ಧಿಯನ್ನು ಶಮನ ಮಾಡಲು ಸುಲಭವಾಗಿ ತಿನ್ನಲಾಗುವಂತೆ ಬೆಲ್ಲದೊಂದಿಗೆ ತಿನ್ನಬೇಕು. ಬೇವಿನ ಚಿಗುರೆಲೆಯ ಪಲ್ಯವು ಯುಗಾದಿಯ ದೇವತೆಯಾದ ಪ್ರಜಾಪತಿ ಕಾಲಪುರಷನಿಗೆ ಅತಿಪ್ರಿಯವಾದುದು.

ಯುಗಾದಿ 
ಯುಗಾದಿ ಎಂಬ ಪದವೇ ಹೇಳುವಂತೆ, "ಯುಗಸ್ಯ ಆದಿ" ಯುಗಾದಿ, ಯುಗದ ಪ್ರಾರಂಭ ಎಂದರ್ಥ. ಯುಗ ಎಂದರೆ ಜೋಡಿ-ನೊಗ ಎಂಬ ಅರ್ಥಗಳಿವೆ. ಪ್ರಕೃತಿ-ಪುರುಷ ಶಕ್ತಿಗಳು ಕೂಡಿ ಸೃಷ್ಟಿ ಪ್ರಾರಂಭಿಸಿದ ದಿನ. ಯುಗಗಳು ನಾಲ್ಕು. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ ಎಂದು. ಶ್ರೀರಂಗಮಹಾಗುರುಗಳು ತಮ್ಮ ಯುಗಾದಿಯ ಸಂದೇಶಾಮೃತದಲ್ಲಿ ಯುಗಾದಿಯನ್ನು ಸತ್ಯಯುಗದ ಆದಿ ಎಂದು ನಿರ್ದೇಶಿಸಿದ್ದಾರೆ. ಬ್ರಹ್ಮನು ಈ ದಿನ ಜಗತ್ತನ್ನು ಸೃಷ್ಟಿಸಿದನು. ಅವನು ಪ್ರಾರಂಭಿಸಿದ್ದು ಸತ್ಯಯುಗವನ್ನು. ಅಂದರೆ ಸತ್ಯಧರ್ಮಮಯವಾದ ಬಾಳಾಟಕ್ಕೆ ತಕ್ಕ ಯೋಜನೆ ಹಾಕಿಕೊಂಡು ಅದನ್ನು ಪ್ರಾರಂಭಿಸಿವುದಕ್ಕೆ ಅನುಗುಣವಾದ ಧರ್ಮವುಳ್ಳ ದಿನ ಇಂದು. ಸಂಕ್ರಾಂತಿ ದಿನದಂದು "ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂದು ಹೇಳುವಂತೆ ಯುಗಾದಿ ದಿನದಂದು "ಬೇವು ಬೆಲ್ಲ ತಿಂದು ಸತ್ಯಧರ್ಮದಿಂದ ಕೂಡಿದ ಬಾಳಾಟವನ್ನು ಮಾಡಿ" ಎಂಬ ಸಂದೇಶವನ್ನು ಈ ಆಚರಣೆಯ ಮಾತಿನಲ್ಲಿ ಅಡಗಿಸಿಟ್ಟಿದ್ದಾರೆ. ಹೊಸ ಸಂವತ್ಸರದ ಪ್ರಾರಂಭ ದಿನ. ಸಂವತ್ಸರ ಎಂದರೆ ಋತುಗಳು ಪರಿವರ್ತನೆ ಹೊಂದುವ ಕಾಲ. ಆರು ಋತುಗಳಾದ ವಸಂತ, ಗ್ರೀಷ್ಮ ವರ್ಷ, ಶರತ್, ಹೇಮಂತ ಹಾಗೂ ಶಿಶಿರಗಳಲ್ಲಿ ವಸಂತ, ಗ್ರೀಷ್ಮ, ವರ್ಷ ಋತುಗಳು ದಕ್ಷಿಣಾಯನದಲ್ಲಿ ಬರುವ ಋತುಗಳು. ಇದನ್ನು ಆಯುರ್ವೇದದಲ್ಲಿ ವಿಸರ್ಗ ಕಾಲ ಎಂಬುದಾಗಿ ಪರಿಗಣಿಸಿದ್ದಾರೆ. ಅಂದರೆ ಶರತ್, ಹೇಮಂತ, ಶಿಶಿರ ಋತುಗಳು, ಉತ್ತಾರಾಯಣದಲ್ಲಿ ಬರುವ ಋತುಗಳು. ಯುಗಾದಿಯ ವಿಚಾರದಲ್ಲಿ ಜನರಲ್ಲಿ ದ್ವಂದ್ವ, ಗೊಂದಲ ಇದೆ. ಯುಗಾದಿಯನ್ನು ಆಚರಿಸುವ ಕೆಲವರು ಚೈತ್ರ, ಶುದ್ಧ ಪ್ರತಿಪತ್ ಎಂದು ಆಚರಿಸುತ್ತಾರೆ. ಇನ್ನು ಕೆಲವರು ಮೇಷ, ಸಂಕ್ರಮಣದ ದಿವಸದಲ್ಲಿ ಯುಗಾದಿ ಆಚರಿಸುತ್ತಾರೆ. ಹಿಂದುಗಳಲ್ಲಿಯೇ ಈ ಗೊಂದಲ ದ್ವಂದ್ವಗಳು ಏಕೆ ಎಂಬ ಪ್ರಶ್ನೆ ಇದೆ. ಭಾರತದಲ್ಲಿ ಈ ಎರಡೂ ಯುಗಾದಿಯ ಆಚರಣೆ ವಾಡಿಕೆಯಲ್ಲಿದೆ. ಬ್ರಹ್ಮನು ಸೃಷ್ಟಿಸಿದ ದಿನದಂದು ಗ್ರಹ, ನಕ್ಷತ್ರಗಳೆಲ್ಲವೂ ಚಲಿಸಲು ಪ್ರಾರಂಭವಾಯಿತು. ಚಂದ್ರನ ಚಲನೆಯನ್ನೇ ಆಧರಿಸಿ, ಚಂದ್ರನನ್ನು ನಾವು ಪಕ್ಷದ ಗಣನೆಯ ಮೂಲಕ ಗಣನೆ ಮಾಡುತ್ತೇವೆ. ಚೈತ್ರ ಮಾಸದ, ಶುಕ್ಲಪಕ್ಷದ ಪಾಡ್ಯದಿನಕ್ಕೆ ಚಂದ್ರನು ಭೂಮಿಯೊಂದಿಗೆ ಸೂರ್ಯನನ್ನು ಸುತ್ತಿ ಒಂದು ಆವರ್ತ ಸಮಾಪ್ತಿಯಾಗಿ ಮತ್ತೊಂದು ಆವರ್ತ ಪ್ರಾರಂಭವಾಗುತ್ತದೆ. 

ಚಾಂದ್ರಮಾನ-ಸೌರಮಾನ ಯುಗಾದಿ 
ಚಂದ್ರನ ನಡೆಗೆ ಅನುಸಾರವಾಗಿ ಕಾಲ ಗಣನೆಮಾಡುವ ಗುಂಪು, ಚಾಂದ್ರಮಾನ ಯುಗಾದಿಯೆಂದು ಆಚರಿಸುತ್ತಾರೆ. ಅಂತೆಯೇ ಸೂರ್ಯನು ಮೇಷ, ವೃಷಭ, ಮಿಥುನಾದಿ 12 ನಕ್ಷತ್ರಗಳ ಗುಚ್ಛವನ್ನು ಸಂಕ್ರಮಿಸುತ್ತಾನೆ. ಮೇಷ ಸಂಕ್ರಮಣದಂದು ಸೂರ್ಯನ ಒಂದು ಆವರ್ತನೆ ಮುಗಿಯುತ್ತದೆ. ಹೊಸ ಆವರ್ತ ಪ್ರಾರಂಭವಾಗುತ್ತದೆ. ಈ ರೀತಿ ಸೂರ್ಯನ ಚಲನೆಯನ್ನಾಧರಿಸಿ ಕಾಲ ಗಣನೆಯಿಡುವ ಗುಂಪು ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಅವರದ್ದು ಸರಿ, ಇವರದ್ದು ತಪ್ಪು ಎಂಬ ಗೊಂದಲಕ್ಕೆ ಇಲ್ಲಿ ಪ್ರಶ್ನೆಯೇ ಇಲ್ಲ. ಎರಡೂ ಸಮಂಜಸ. ಅವರ ಪೂರ್ವಜರು ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿರುತ್ತಾರೋ ಆದಿನವೇ ಅವರಿಗೆ ಪ್ರಾಶಸ್ತ್ಯ. ಹೆಚ್ಚಾಗಿ ಉತ್ತರ ಭಾರತದವರು ಸೌರಮಾನ ಯುಗಾದಿಯನ್ನು "ಚಿತ್ರವಿಪು" ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. 

ಆಚರಣೆ ಅಂತರ್ಥ 
ದಕ್ಷಿಣಭಾರತದಲ್ಲಿ ಚಾಂದ್ರಮಾನ ಯುಗಾದಿಯನ್ನು "ಸಂವತ್ಸರ ಪ್ರತಿಪತ್" ಎಂಬುದಾಗಿ ಆಚರಿಸುತ್ತಾರೆ. ಪಕ್ಷಗಳಲ್ಲಿ ಶುಕ್ಲಪಕ್ಷವು ದೇವತೆಗಳಿಗೆ ಪ್ರಿಯವಾದದ್ದು. ಪಿತೃ ಪಕ್ಷವು ಪತೃಗಳಿಗೆ ಪ್ರಿಯವಾದುದು. ನವವರ್ಷದ ಪ್ರಥಮ ದೇವತಾ ಪೂಜೆಯೇ ಪ್ರಧಾನವಾಗಿರುವ ಯುಗಾದಿ ಶುಭಪರ್ವದ ಆಚರಣೆಗೆ ಶುಕ್ಲಪಕ್ಷವೇ ತಕ್ಕದಾದುದ್ದು. ಸೃಷ್ಟಿ ಮತ್ತು ಧಾರಣೆ ಪೋಷಣೆಗಳಿಗೆ ಅನ್ನ ಮತ್ತು ಔಷದಿಗಳು ಬೇಕು. ಆ ಔಷದಿಗಳಿಗೆಲ್ಲಾ ರಾಜನಾದ ಸೋಮ(ಚಂದ್ರ)ನು ವೃದ್ಧಿಯಾಗುವ ಪ್ರಥಮ ದಿವಸ. ಉಳಿದ ತಿಥಿಗಳಲ್ಲಿ ಚಂದ್ರನು ಅಪೂರ್ಣನಾಗಿರುತ್ತಾನೆ. ಅಥವಾ ಪೂರ್ಣನಾಗಿರುತ್ತಾನೆ. ಆರಂಭದ ದಿವಸಗಳಾಗುವುದಿಲ್ಲ. ಆದುದರಿಂದ ವರ್ಷದ ಪ್ರಥಮ ದಿನವನ್ನಾಗಿ ಚೈತ್ರ, ಶುಕ್ಲ ಪ್ರಥಮೆಯನ್ನೇ ಪರಿಗಣಿಸುವುದು ಯುಕ್ತವಾಗಿದೆ. ಸೌರಮಾನ ಯುಗಾದಿಯಂದು ಸೂರ್ಯನು ರಾಶಿಚಕ್ರದಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲವನ್ನು ಸಂಕ್ರಾಂತಿ ಅಥವಾ ಸಂಕ್ರಮಣ ಎನ್ನುತ್ತಾರೆ. ಇವುಗಳೆಲ್ಲವೂ ಪರ್ವಗಳೇ. ಅವುಗಳಲ್ಲಿ ಮೇಷ ಸಂಕ್ರಮಣವು ಅತ್ಯಂತ ಶುಭವಾದ ಕಾಲ. ಈ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುತ್ತಿರುವಂತೆ ಸಮಕಾಲದಲ್ಲಿ ನಮ್ಮೊಳಗಿನ ಜೀವ ಸೂರ್ಯನು ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ ಮತ್ತು ಸಮಾಧಿಯಲ್ಲಿ ಅವಗಾಹನೆ ಮಾಡಲು ತೊಡಗುತ್ತಾನೆ ಎಂಬುದು ಅನುಭವಿ ಜ್ಞಾನಿಗಳ ಮಾತು. ಆಗ ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವಕಾಲದ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಆ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸುತ್ತಿದ್ದರು. ಹೀಗೆ ದೇವತಾನುಗ್ರಹದಿಂದಲೂ, ಪುರುಷಪ್ರಯತ್ನದಿಂದಲೂ ಧರ್ಮ, ಅರ್ಥ, ಕಾಮ, ಮೋಕ್ಷಗಳಾದ ಎಲ್ಲಾ ಪುರಷಾರ್ಥಗಳ ಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನಕ್ಕೆ "ಯುಗಾದಿಯ" ಆಚರಣೆಯೂ ಕೈಗನ್ನಡಿಯಾಗಿದೆ. ಈ ಪವಿತ್ರ ಸ್ಮರಣೆಯಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುವಂತಾಗಲಿ.

ಸೂಚನೆ: 21/03/2020 ರಂದು ಈ ಲೇಖನದ ಆಯ್ದ ಭಾಗವು ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Saturday, March 21, 2020

ಶಾರ್ವರಿ ಯುಗಾದಿಯ ಸಂತಸ (Sharvari ugadiya Santasa)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)



ಯುಗಾದಿಹಬ್ಬ ಎಲ್ಲೆಲ್ಲೂ ಸಡಗರ, ಸಂಭ್ರಮ. ಕೆಲಸಕ್ಕೆ ರಜೆ ಇರುವ ದಿನ. ನವ ವಸ್ತ್ರ ಧರಿಸಿ,ಬಗೆ ಬಗೆ ಹೂವುಗಳಿಂದ ಭಗವಂತನ ಪೂಜೆಯ ಮಾಡಿ, ಬೇವು ಬೆಲ್ಲ ತಿಂದು ಪಂಚಾಂಗ ಶ್ರವಣ ಮಾಡಿ, ಹಬ್ಬದ ಅಡುಗೆಯ ಸವಿಯುವ ದಿನ. ವರ್ಷವಿಡೀ ಸಿಹಿ, ಕಹಿಯನ್ನು ಸಮವಾಗಿ ಕಾಣುತ್ತೇನೆ ಎಂಬ ಮನಸ್ಸಿನಲ್ಲಿ ವರ್ಷವನ್ನು ಆರಂಭಮಾಡುವ ದಿನ. ಇಂದು ಹೊಸ ಸಂಕಲ್ಪಗಳನ್ನು ಪ್ರಾರಂಭಿಸಲು ಯೋಗ್ಯವಾದ ದಿನ. ನಮ್ಮ ಮನೆಯಲ್ಲಿ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ- ಇವತ್ತು ಬೇಗನೆ ಏಳು. ತಡವಾಗಿ ಎದ್ದರೆ ವರ್ಷವಿಡೀ ತಡವಾಗಿ ಏಳುತ್ತೀಯ ಎಂದು ಇವತ್ತು ಕೋಪ, ಹಠ ಮಾಡಬಾರದು, ಅಳಬಾರದು, ನಗುನಗುತ್ತಾ ಸಂತೋಷದಿಂದಿರು. ಆಗ ವರ್ಷವಿಡೀ ಸಂತೋಷದಿಂದ ಸಮಾಧಾನದಿಂದ ಇರುತ್ತೀಯ ಎಂದು. ಈ ವಿಚಾರಗಳು ಮನೆಮನೆಗಳಲ್ಲಿ ಸಂಸ್ಕಾರ ರೂಪದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರಗಳು.

ಈಗಿನ ಜೀವನಶೈಲಿಗೆ ಇವೆಲ್ಲವೂ ಕಾಲಬಾಹಿರ ವಿಷಯಗಳು ಎನ್ನಿಸಬಹುದು. ವರ್ಷದ ಮೊದಲ ರಜೆ. ರಜೆದಿನ ಹೊಸತಿಂಡಿ ಮನೆಕೆಲಸ ಅಂತ ಮತ್ತೆ ಆಯಾಸ ಮಾಡಿಕೊಳ್ಳುವುದಕ್ಕಿಂತ ಹಾಯಾಗಿ ಸ್ವಿಗ್ಗಿಯಲ್ಲಿ ಸುಗ್ಗಿಯ ಅಡುಗೆ ಆರ್ಡರ್ಮಾಡಬಹುದಲ್ಲ? ಎಂಬ ಯೋಚನೆ ಬರಬಹುದು. ಅಥವಾ ಫ್ಯಾಮಿಲಿ ಔಟಿಂಗ್ ಪ್ರವಾಸಕ್ಕೆ ಹೋಗಿ ಶ್ರಮವನ್ನು ಕಳೆದುಕೊಂಡು ಬರಬಹುದಲ್ಲ ಎಂಬ ಚಿಂತನೆಗಳೂ ಈಗ ಸಹಜವಾಗಿವೆ.ಈ ಹಬ್ಬದ ಪರಿಪೂರ್ಣ ಉಪಯೋಗ ಏನು? ಪ್ರಯೋಜನೆ ಏನು? ಎಂಬ ಶಿಕ್ಷಣ ಇಲ್ಲದಿರುವುದರಿಂದ ಈ ರೀತಿಯಾದ ಬಗೆ ಬಗೆ ಯೋಚನೆಗಳು ಸಹಜ. ಭಾರತೀಯರ ಹಬ್ಬಗಳು ಕ್ಯಾಲೆಂಡರ್ ದಿನಾಂಕ ಆಧಾರಿತ ಹಬ್ಬಗಳಲ್ಲ. ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ ನಮಗೆ ತಿಳಿಸಿಕೊಟ್ಟಿರುವ ವೈಜ್ಞಾನಿಕ ಸತ್ಯ. ಯುಗಾದಿ ಹಬ್ಬದಂದು ಪ್ರಕೃತಿಯಲ್ಲಿ ಹೊಸತನ-ಹೊಸ ಚಿಗುರುಗಳು ಮೊಳೆಯುವ ಕಾಲ. ಹೂವು ಬಿರಿಯುವ ಕಾಲ. ಎಲ್ಲಾ ಜೀವ ಜಂತುಗಳಲ್ಲಿಯೂ ನವನವೀನತೆಯು ಮೊಳೆಯುವ ಕಾಲ.

ಯುಗದ ಆದಿಯ ದಿನವಾದ ಇಂದು ಚೈತ್ರ ಮಾಸಕ್ಕೆ ಪ್ರಥಮ ತಿಥಿ. ಪ್ರಥಮ ಋತುವಿಗೆ, ಹೊಸ ಶಾರ್ವರಿ ಸಂವತ್ಸರಕ್ಕೆ ಪ್ರಥಮ ದಿನ. ಯುಗಾದಿಯ ಆಚರಣೆ - ಪ್ರಾತ:ಕಾಲದಲ್ಲಿ ಎಳ್ಳೆಣ್ಣೆಯಿಂದ "ಅಭ್ಯಂಗ" ಮಾಡಿಕೊಳ್ಳಬೇಕು. ಪ್ರತಿದಿನವೂ ಅಭ್ಯಂಗವನ್ನು ಆಚರಿಸಬೇಕು. ಅದು ಮುಪ್ಪು, ಆಯಾಸ, ವಾತದ ದೋಷಗಳನ್ನು ನಿವಾರಣೆ ಮಾಡುವುದು. ದೃಷ್ಟಿಪಾಟವವನ್ನು ಕೂಡುವುದು. ಭೋಗಪ್ರದವಾದ ಆಚರಣೆಯಾದರೂ ಯೋಗಕ್ಕೆ ಅನುಕೂಲಕರ ಈ ಅಭ್ಯಂಗ. ದೇಹ, ಇಂದ್ರಿಯ ಮನಸ್ಸನ್ನು ಹಗುರಗೊಳಿ"ಪುಷ್ಟಿ" ಆಯಸ್ಸು, ನಿದ್ರೆಯ ಸೌಖ್ಯನ್ನುಂಟುಮಾಡುವುದು. ಎಂದು ಆಯುರ್ವೇದವು ಹೇಳುತ್ತದೆ.ಯುಗಾದಿ ದಿನದಂದು ಸಂಕಲ್ಪಪೂರ್ವಕವಾಗಿ ಈ ಆಭ್ಯಂಗವನ್ನು ಕೈಗೊಂಡರೆ, ನಿತ್ಯವೂ ಅಭ್ಯಂಗವನ್ನು ಆಚರಿಸುವಂತಾಗುತ್ತದೆ ಇಂದಿನ ದಿನ ಪ್ರಜಾಪತಿ/ಕಾಲಪುರುಷನನ್ನು ಪೂಜಿಸಬೇಕು.ನಿನ್ನ ದೇಹವಾಗಿರುವ ಈ ಕಾಲದಲ್ಲಿ ಪರ್ವಸ್ಥಾನಗಳನ್ನು ಅರಿತು ಅವುಗಳನ್ನು ಅರ್ಥವತ್ತಾಗಿ ಆಚರಿಸಿ ಕಾಲವನ್ನೇ ದಾಟಿ ನಿನ್ನನ್ನು ಸೇರುವ ಸಾಧನೆಗಾಗಿ ಸಂಸಾರಸಾಗರದಿಂದ ಮುಕ್ತರಾಗುವಂತೆ ಮಾಡು ಎಂಬ ಅರಿಕೆಯನ್ನು ಇಡುವುದು ಉಚಿತವಾಗಿದೆ. ಪಂಚಾಗ ಶ್ರವಣ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇವುಗಳ ಜ್ಞಾನದೊಡನೆಯೇ ಪ್ರತಿದಿನ ವ್ಯವಹರಿಸಬೇಕು.ಇಂದಿನ ದಿನದ ಪಂಚಾಂಗದ ಜೊತೆಗೆ, ಇಡೀ ಸಂವತ್ಸರದ ಪಂಚಾಂಗವನ್ನು, ಸಾಮಾನ್ಯವಾದ ಯೋಗವನ್ನು ಕೇಳಿ ತಿಳಿದರೆ ಅದಕ್ಕೆ ತಕ್ಕಂತೆ ವರ್ಷದ ಕಾರ್ಯಯೋಜನೆ ಹಾಕಿಕೊಳ್ಳಲು ಸಹಾಯವಾಗುವುದು ಎಂದು. ದಾನ: ಯುಗಾದಿಯ ಪರ್ವದಲ್ಲಿ ಸಾಮಾನ್ಯವಾದ ಅನ್ನದಾನಗಳ ಜೊತೆಗೆ, ವಿಶೇಷವಾಗಿ ಪಂಚಾಂಗ, ಮತ್ತು ವಸ್ತ್ರಭೂಷಣಗಳನ್ನು ದಾನಮಾಡಬೇಕಂತೆ. ವಸಂತ ಋತುವಿನಲ್ಲಿ ಉಷ್ಣತೆ ಹೆಚ್ಚು ಇರುವುದರಿಂದ ಅಂದು ನೀರಿನ ಪಾತ್ರೆಗಳನ್ನು, ದೇವಸ್ಥಾನಾದಿ ಜಾಗಗಳಲ್ಲಿ ಸಿಹಿನೀರು, ಮಜ್ಜಿಗೆ, ಪಾನಕ ಮುಂದಾದವುಗಳನ್ನು ದಾನ ಮಾಡುವುದು ಕಾಲೋಚಿತವಾದ ದಾನವೇ ಆಗುತ್ತದೆ. ನೈವೇದ್ಯ : ಇಂದು ಅರ್ಪಿಸಿ ಸೇವಿಸಬೇಕಾದ ವಿಶೇಷವಾದ ನೈವೇದ್ಯ "ಬೇವು". ಹೂವಿನೊಡನೆ ಕೂಡಿದ ಚಿಗುರಬೇವು, ವಸಂತ ಮಾಸದಲ್ಲಿ ಬಿಸಿಲಿನ ಬೇಗೆಗೆ ಕರಗುವ ಕಫ ಭಗವತ್ ಕಾರ್ಯಕ್ಕೆ ಅಡ್ಡಿಬಾರದಿರಲೆಂದು ಬೇವು ತಿನ್ನುವ ಪದ್ಧತಿ.

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ| 
ಸರ್ವಾರಿಷ್ಟವಿನಾಶಾಯ ನಿಂಬಕಂದಳಭಕ್ಷಣಂ||

ಕಹಿ ಬೇವು ತಿನ್ನುವುದರಿಂದ, ಹೃದಯಕ್ಕೆ ಖಿನ್ನತೆ ಉಂಟಾಗುತ್ತದೆ. ವಾತ ಪ್ರಕೋಪಕ್ಕೂ ಕಾರಣವಾಗುತ್ತದೆ. ಧಾತುಗಳಲ್ಲಿ ವೈಷಮ್ಯತೆ ಉಂಟುಮಾಡದಿರಲೆಂದು ಬೇವಿನೊಂದಿಗೆ ಬೆಲ್ಲ ಸೇರಿಸಿ ಭಕ್ಷಿಸುವ ಕ್ರಮ ಬಂದಿದೆ. 


ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳ ಶ್ರೀರಂಗಮಹಾಗುರುಗಳು ಯುಗಾದಿಯನ್ನು ಸತ್ಯಯುಗದ ಆದಿ ಎಂದು ನಿರ್ದೇಶಿಸಿದ್ದಾರೆ. ಕೆಲವರು ಚೈತ್ರ, ಶುದ್ಧ ಪ್ರತಿಪತ್ ಎಂದು ಆಚರಿಸುತ್ತಾರೆ. ಇನ್ನು ಕೆಲವರು ಮೇಷ, ಸಂಕ್ರಮಣದ ದಿವಸದಲ್ಲಿ ಯುಗಾದಿ ಆಚರಿಸುತ್ತಾರೆ. ಬ್ರಹ್ಮನು ಸೃಷ್ಟಿಸಿದ ದಿನದಂದು ಗ್ರಹ, ನಕ್ಷತ್ರಗಳೆಲ್ಲವೂ ಚಲಿಸಲು ಪ್ರಾರಂಭವಾಯಿತು. ಚಂದ್ರನ ಚಲನೆಯನ್ನೇ ಆಧರಿಸಿ, ಚಂದ್ರನನ್ನು ನಾವು ಪಕ್ಷದ ಗಣನೆಯ ಮೂಲಕ ಗಣನೆ ಮಾಡುತ್ತೇವೆ. ಚಂದ್ರನ ನಡೆಗೆ ಅನುಸಾರವಾಗಿ ಕಾಲ ಗಣನೆಮಾಡುವ ಗುಂಪು, ಚಾಂದ್ರಮಾನ ಯುಗಾದಿಯೆಂದು ಆಚರಿಸುತ್ತಾರೆ. ಅಂತೆಯೇ ಸೂರ್ಯನ ಚಲನೆಯನ್ನಾಧರಿಸಿ ಕಾಲ ಗಣನೆಯಿಡುವ ಗುಂಪು ಸೌರಮಾನ ಯುಗಾದಿ ಎಂದು ಆಚರಿಸುತ್ತಾರೆ. ಅವರದ್ದು ಸರಿ, ಇವರದ್ದು ತಪ್ಪು ಎಂಬ ಗೊಂದಲಕ್ಕೆ ಇಲ್ಲಿ ಪ್ರಶ್ನೆಯೇ ಇಲ್ಲ. ಎರಡೂ ಸಮಂಜಸ. ಅವರ ಪೂರ್ವಜರು ಯಾವ ರೀತಿಯಲ್ಲಿ ಆಚರಿಸಿಕೊಂಡು ಬಂದಿರುತ್ತಾರೋ ಆದಿನವೇ ಅವರಿಗೆ ಪ್ರಾಶಸ್ತ್ಯ. ಸೌರಮಾನ ಯುಗಾದಿಯನ್ನು "ಚಿತ್ರವಿಷು" ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಚಾಂದ್ರಮಾನ ಯುಗಾದಿಯನ್ನು "ಸಂವತ್ಸರ ಪ್ರತಿಪತ್" ಎಂಬುದಾಗಿ ಆಚರಿಸುತ್ತಾರೆ. ಈ ಕಾಲದಲ್ಲಿ ಹೊರಗಿನ ಸೂರ್ಯನು ರಾಶಿಯಲ್ಲಿ ಹೆಜ್ಜೆ ಹಾಕುತ್ತಿರುವಂತೆ ಸಮಕಾಲದಲ್ಲಿ ನಮ್ಮೊಳಗಿನ ಜೀವ ಸೂರ್ಯನು ಸುಷುಮ್ನೆಯ ಗ್ರಂಥಿಯೊಳಗೆ ಸಂಗಮ ಹೊಂದುತ್ತಾನೆ ಮತ್ತು ಸಮಾಧಿಯಲ್ಲಿ ಅವಗಾಹನೆ ಮಾಡಲು ತೊಡಗುತ್ತಾನೆ ಎಂಬುದು ಅನುಭವಿ ಜ್ಞಾನಿಗಳ ಮಾತು. ಆಗ ಪ್ರಾಮಾಣಿಕವಾಗಿ ಧ್ಯಾನಾಭ್ಯಾಸ ಮಾಡುವ ಸಾಧಕರಿಗೆ ಈ ಪರ್ವಕಾಲದ ಮಹಾಮೌಲ್ಯವು ಅನುಭವಕ್ಕೆ ಬರುವ ವಿಷಯಗಳಾಗಿವೆ. ನಾಡೀ ವಿಜ್ಞಾನದಲ್ಲಿ ಒಳ್ಳೆಯ ಪರಿಚಯವುಳ್ಳವರಿಗೆ ಆ ಮಹತ್ವವನ್ನು ಪ್ರಾಯೋಗಿಕವಾಗಿಯೂ ತೋರಿಸಬಹುದು ಎಂಬುದನ್ನು ಶ್ರೀರಂಗಮಹಾಗುರುಗಳು ತಿಳಿಸುತ್ತಿದ್ದರು. ಹೀಗೆ ದೇವತಾನುಗ್ರಹದಿಂದಲೂ, ಪುರುಷಪ್ರಯತ್ನದಿಂದಲೂ ಧರ್ಮ, ಅರ್ಥ, ಕಾಮ, ಮೋಕ್ಷಗಳಾದ ಎಲ್ಲಾ ಪುರಷಾರ್ಥಗಳಸಾಧನೆಗೂ ಹೊಂದಿಕೆಯಾಗಿ ಮಹರ್ಷಿಗಳ ಅದ್ಭುತವಾದ ಕಾಲವಿಜ್ಞಾನಕ್ಕೆ "ಯುಗಾದಿಯ" ಆಚರಣೆಯೂ ಕೈಗನ್ನಡಿಯಾಗಿದೆ. ಈ ಪವಿತ್ರ ಸ್ಮರಣೆಯಲ್ಲಿ ನಾವೆಲ್ಲರೂ ಹಬ್ಬವನ್ನು ಆಚರಿಸುವಂತಾಗಲಿ.

ಸೂಚನೆ: 21/03/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.

Saturday, February 22, 2020

ಸ್ವಾಸ್ಥ್ಯದ ಅಂತರಾರ್ಥ (Svasthyada Antarartha)

ಲೇಖಕರು: ಡಾII ಯಶಸ್ವಿನೀ
ಆಯುರ್ವೇದ ವೈದ್ಯೆ
(ಪ್ರತಿಕ್ರಿಯಿಸಿರಿ lekhana@ayvm.in)



ಸ್ವಾಸ್ಥ್ಯ ಎಂದರೆ ಆರೋಗ್ಯವಾಗಿರುವುದು ಎಂಬುದು ಸಾಮಾನ್ಯವಾದ ಅರ್ಥವಾಗಿರುತ್ತದೆ. ನೀರೋಗಃ ಆರೋಗ್ಯಃ | ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೈಹಿಕ ಹಾಗು ಮಾನಸಿಕವಾಗಿ ರೋಗ ಮುಕ್ತರಾಗಿ ಇರುವವರೇ ಸ್ವಸ್ಥರು. ಖಂಡಿತವಾಗಿಯೂ ಸತ್ಯದ ವಿಚಾರ. ನಮ್ಮ ಭಾರತದ ಋಷಿಮಹರ್ಷಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಶೋಧಿಸಿ ನಿರ್ಣಯಿಸಿದ ವಿಚಾರವೇನೆಂಬುದನನ್ನು ಒಮ್ಮೆ ಅವಲೋಕಿಸೋಣ. ಒಬ್ಬ ಜೀವಿಯು ನಾಲ್ಕು ಅಂಶಗಳಿಂದ ಕೂಡಿದವನಾಗಿರುತ್ತಾನೆ.

ಶರೀರೇಂದ್ರಿಯ ಸತ್ವಾತ್ಮ ಸಂಯೋಗೋಧಾರಿ ಜೀವಿತಂ |
ನಿತ್ಯಗಶ್ಚಾನುಬಂದಾಶ್ಚ ಪರ್ಯಾಯೈರಾಯುರುಚ್ಯತೆ ||

ಶರೀರ, ಇಂದ್ರಿಯ, ಮನಸ್ಸು, ಆತ್ಮ ಎಂಬುದೇ ಈ ನಾಲ್ಕು ಅಂಶಗಳು. ಇವುಗಳ ಸಾಮರ್ಥ್ಯ ಹಾಗೂ ವ್ಯಾಪ್ತತೆಯ ಅರಿವಿಗಾಗಿ ಒಂದು ಚಟುವಟಿಕೆ ಮಾಡೋಣ. ಒಂದು ಕೊಠಡಿಯಲ್ಲಿ ನಾವು ಬಂಧಿಯಾಗಿ ಕುಳಿತಿದ್ದೀವೆ ಎಂದೊಮ್ಮೆ ಭಾವಿಸೋಣ. ಶರೀರವು ತನ್ನ ಸಂಬಂಧಿಯಾದ ಹಾಗು ತನ್ನ ಸಂಪರ್ಕಕ್ಕೆ ಬಂದದ್ದನ್ನು ಮಾತ್ರ ಗ್ರಹಿಸಬಸಬಲ್ಲದು. ಉದಾಹರಣೆಗೆ, ಶೆಖೆ/ಚಳಿ ಅನುಭವ ಗ್ರಹಿಸಬಲ್ಲದು. ಹಸಿವೆ, ಬಾಯಾರಿಕೆ, ನಿದ್ರೆ, ಮಲ ಮೂತ್ರಾದಿ ವೇಗಗಳನ್ನು ಗ್ರಹಿಸಬಲ್ಲದು. ಇಂದ್ರಿಯವು ಅದರ ಮಿತಿಗೆ ಅನುಸಾರ, ಕೊಠಡಿಯ ವ್ಯಾಪ್ತಿಯೊಳಗಿರುವುದನ್ನು ಗ್ರಹಿಸಬಲ್ಲದು. ಮನಸ್ಸು, ಕೊಠಡಿ ವ್ಯಾಪ್ತಿಯ ಮೀರಿ, ಊಹಾ ಪೋಹಾದಿಗಳಿಂದ ತಿಳುವಳಿಕೆಯ ಆಧಾರದ ಮೇಲೆ ಇಂದ್ರಿಯಗಳಿಗಿಂತ ಅಧಿಕವಾಗಿ ಗ್ರಹಿಸಬಲ್ಲದು. ಆತ್ಮವು, ನಿತ್ಯ ಹಾಗು ಏಕತ್ವಗುಣವನ್ನು ಹೊಂದಿರುವಂತಹದ್ದು. ಅದಕ್ಕೆ ಪರಿಮಿತಿ ಇಲ್ಲ. ಈ ಆತ್ಮ ಎಲ್ಲಾ ವ್ಯಾಪ್ತಿ ಗಳನ್ನೂ ಮೀರಿ, ಪರಂ-ಆತ್ಮದ (ಪರಮಾತ್ಮನ/ಜ್ಞಾನದ) ಅನುಭವವನ್ನೇ ಪಡೆಯಬಲ್ಲದ್ದು. ಈ ನಾಲ್ಕರ ಸಮಂಜಸವಾದ ಸಹಕಾರ ಇದ್ದಾಗ ಉಂಟಗುವುದೇ ಸ್ವಾಸ್ಥ್ಯ ಎಂದು ಆಯುರ್ವೇದ ಶಾಸ್ತ್ರದ ಆರೋಗ್ಯ ಸೂತ್ರ.


ಈ ನಾಲ್ಕರಲ್ಲಿ ಒಗ್ಗಟ್ಟು ಏರ್ಪಡಲು ಏನು ಮಾಡಬೇಕು?  ಚರಕರು ಹೇಳುವಂತೆ, ಸದಾ ಸುಖಕರವಾದ ಚಿಂತನೆ ಮಾಡುತ್ತಾ, ಒಳ್ಳೆಯ ಮಾತುಗಳನ್ನಾಡುತ್ತಾ, ಸತ್ವ ವೃದ್ಧಿ ಕ್ರಿಯೆಗಳು, ಶುದ್ಧ ಜ್ಞಾನ, ತಪಸ್ಸು, ನಿರಂತರವಾದ ಯೋಗ ಸಾಧನೆಗಳನ್ನು ಯಾರು ಮಾಡುವರೋ, ಅವರಿಗೆ ರೋಗ ಬರುವುದಿಲ್ಲ. ನಾನು - ನಾನೆಂಬ ಅಹಂಕಾರ ತೊರೆದು 'ಎಲ್ಲರಲ್ಲೂ ಇರುವ ಆತ್ಮ ಆ ಪರಮಾತ್ಮನ ಅಂಶವೇ' ಎಂಬ ಭಾವ ನಮ್ಮದಾಗಬೇಕು. ಧಾತುಪ್ರಸಾದಾತ್ ಮಹಿಮಾನಮೀಶಂ – ಧಾತು ಪ್ರಸನ್ನತೆಯಿಂದ ಮಹಿಮವಂತನಾದ ಈಶನನ್ನು ಕಾಣಬಹುದಂತೆ. ಅದನ್ನೇ ಆಯುರ್ವೇದ ಶಾಸ್ತ್ರವು ಹೇಳುತ್ತಿದೆ. ಶ್ರೀರಂಗ ಮಹಾಗುರುಗಳು ಈ ವಿಚಾರವಾಗಿ ತಿಳಿಪಡಿಸಿದ್ದೇನೆಂದರೆ, ಸ್ವಾ- ಎಂದರೆ ಮೂಲತತ್ವ. ಪರಂಜೋತಿ. ಸ್ಥ- ಎಂದರೆ ಅದರಲ್ಲಿ ನೆಲೆ ನಿಂತವನು. ಆತನೇ ಸ್ವಸ್ಥ! ಎಂಬುದು ಅವರ ಸ್ಪಷ್ಠ ಅಭಿಪ್ರಾಯವಾಗಿತ್ತು. ಆಯುರ್ವೇದ ಶಾಸ್ತ್ರವು ಹೇಳುವ ಸ್ವಾಸ್ಥ್ಯದ ಸೂತ್ರದ ಗೂಡಾರ್ಥವೂ ಇದಾಗಿದೆ. ಸ್ವಾಸ್ಥ್ಯ ಹೊಂದಲು ಶರೀರದ ಎಲ್ಲಾ ಅಂಶಗಳೂ ಸಹಕರಿಸಬೇಕಾಗುತ್ತದೆ.

ಸಮದೋಷ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ |
ಪ್ರಸನ್ನಾತ್ಮೇಂದ್ರಿಯ ಮನಾಃ ಸ್ವಸ್ಥ ಇತ್ಯಭಿದೀಯತೇ ||

ದೋಷ(ವಾತ, ಪಿತ್ತ, ಕಫ) , ಅಗ್ನಿ, ಧಾತು, ಮಲ ಸಾಮ್ಯತೆಯನ್ನು ಹೊಂದಿರುವ ಒಡಲು, ಫೋಕಸ್ ಮಾಡಿರಿಸಿದಂತಹ ಲೆನ್ಸ್ ನಂತೆ. ಪರಂಜೋತಿಯ ಬೆಳಕಿನ ಅನುಭವವನ್ನು ಈ ಶರೀರರದಲ್ಲಿ ಹೊಂದಿದಾಗ ಪರಿಪೂರ್ಣ ಸ್ವಾಸ್ಥ್ಯ ಹೊಂದಬಹುದು.  ಇದರಿಂದ ಪರಮಾತ್ಮಾನುಭವದ  ಹೊಂಗಿರಣಗಳು ಮನಸ್ಸು, ಜ್ಞಾನೇಂದ್ರಿಯ, ಕರ್ಮೇಂದ್ರಿಯ ಹಾಗೂ ದೇಹದ ಕಣಕಣಕ್ಕೂ ತಲುಪುವಂತಾಗುತ್ತದೆ. ಗಾಢ ನಿದ್ರೆಯಿಂದ ದೇಹ, ಇಂದ್ರಿಯ, ಮನಸ್ಸು ಸುಖಿಸುವಂತೆ, ಪರಮಾತ್ಮನ ಅನುಭವವು ದೇಹೇಂದ್ರಿಯ ಮನಸ್ಸುಮಾತ್ರವಲ್ಲದೇ, ಆತ್ಮ ಪ್ರಸನ್ನತೆಯನ್ನೂ ಉಂಟುಮಾಡುವುದೇ ನಿಜವಾದ ಸ್ವಾಸ್ಥ್ಯ. ನಾವೆಲ್ಲರೂ ಆ ರೀತಿಯಾದ ಸ್ವಾಸ್ತ್ಯಪೂರ್ಣವಾದ ಬದುಕನ್ನು ಹೊಂದಲು ಪ್ರಯತ್ನಿಸೋಣ.

ಸೂಚನೆ: 22/02/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.