Saturday, July 10, 2021

ಷೋಡಶೋಪಚಾರ - 8 ಆಚಮನ (Shodashopachaara - 8 Achamana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಷೋಡಶೋಪಚಾರಗಳಲ್ಲಿ ಐದನೆಯ ಉಪಚಾರ ಆಚಮನ. ಆಚಮನವೆಂದರೆ ಜಲವನ್ನು ಕುಡಿಯುವುದು. ವೈದಿಕ, ತಾಂತ್ರಿಕ ಮತ್ತು ಪೌರಾಣಿಕವಾದ ಎಲ್ಲಾ ಕರ್ಮಗಳಲ್ಲೂ ಆಚಮನ ವಿಧಿಯಿದೆ. ಆಚಮನವನ್ನು ಮಾಡದೆ, ಕರ್ಮವನ್ನು ಮಾಡಿದರೆ  ಅದು ವ್ಯರ್ಥವಾಗುತ್ತದೆ ಎಂಬ ಋಷಿವಚನವಿದೆ. ಭೋಜನ, ಯಾಗ, ದಾನ, ಪರಿಗ್ರಹ, ಸಂಧ್ಯಾಕಾರ್ಯ, ಸ್ನಾನ ಮೊದಲಾದ ಕಡೆ, ಆಚಮನವನ್ನು ವಿಧಿಸಲಾಗಿದೆ. "ಗೋಕರ್ಣಾಕೃತಿಹಸ್ತೇನ ಮಾಷಮಗ್ನಜಲಂ ಪಿಬೇತ್" ಎಂಬ ವಚನದಂತೆ ಐದು ಗುಂಜ (೧ ಉದ್ದು) ಮುಳುಗುವಷ್ಟು ನೀರನ್ನು ಮೂರು ಬಾರಿ ಸ್ವೀಕರಿಸಬೇಕು. ಆಚಮನವು ಬಾಹ್ಯ ಮತ್ತು ಅಂತರಂಗವನ್ನು ಶುದ್ಧಿಗೊಳಿಸುವ ಪ್ರಕ್ರಿಯೆ. ಇಲ್ಲಿ ನೀರನ್ನೇ ಸ್ವೀಕರಿಸಬೇಕು. ಮತ್ತು ಪ್ರಾಕೃತವಾಗಿ ಇರುವ ತಂಪಾದ ನೀರನ್ನೇ ಕುಡಿಯಬೇಕು. ಸಾಮರ್ಥ್ಯವಿದೆ ಎಂದೋ, ಬಾಯಾರಿಕೆಗೆಂದೋ ನೀರಿನ ಬದಲಿಗೆ ಹಾಲು, ಮೊಸರು ಮೊದಲಾದ ದ್ರವ, ದ್ರವ್ಯವನ್ನು ಉಪಯೋಗಿಸುವಂತಿಲ್ಲ. ಅದಕ್ಕೆ ಕಾರಣವಿಷ್ಟೆ- ಸಂಸ್ಕೃತದಲ್ಲಿ ನೀರಿಗೆ ಅಮೃತ ಎಂಬ ಪದವಿದೆ. ಮೃತಪ್ರಾಯವಾಗಿರುವ ಮನಸ್ಥಿತಿಯನ್ನು ಉಜ್ಜೀವನಗೊಳಿಸುವ ಸಾಮರ್ಥ್ಯವಿರುವುದು ನೀರಿಗೆ ಮಾತ್ರ. ಉಲ್ಬಣಗೊಂಡ ಸ್ಥಿತಿಯನ್ನು ಸಮತೋಲನಗೊಳಿಸುವ ಶಕ್ತಿ ನೀರಿಗೆ ಇದೆ.


ನಮ್ಮ ಶರೀರ, ಇಂದ್ರಿಯ, ಮನಸ್ಸು, ಬುದ್ಧಿ, ಆತ್ಮ ಹೀಗೆ ತನ್ನ ಸಹಜವಾದ ಧರ್ಮವನ್ನು- ಸ್ಥಿತಿಯನ್ನು ಕಳೆದುಕೊಂಡಾಗ ಮತ್ತೆ ಅವೆಲ್ಲವನ್ನು ವಾಸ್ತವಿಕತೆಗೆ ಜಾರುವಂತೆ ಮಾಡುವುದು ಈ ನೀರೇ ಆಗಿದೆ. ಪ್ರಕೃತ ನಾವು ಭಗವಂತನನ್ನು ಉಪಚರಿಸುತ್ತಿದ್ದೇವೆ. ಮನೋಬುದ್ಧೀಂದ್ರಿಯಗಳು ಭಗವಂತನನ್ನು ಭಾವಿಸುವ ಸ್ಥಿತಿಯಲ್ಲಿ ಇರಬೇಕಾಗಿದೆ. ಇವುಗಳು ತಮ್ಮ ಧರ್ಮದಿಂದ ಜಾರಿದರೆ, ಆಗ ಮಾಡುವ ಪೂಜೆಯು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. "ದೇಹಧರ್ಮ, ಇಂದ್ರಿಯಧರ್ಮ, ಮನೋಧರ್ಮ, ಬುದ್ಧಿಧರ್ಮ ಎಲ್ಲ ಧರ್ಮಗಳೂ ಆತ್ಮನಲ್ಲಿ ನಿಲ್ಲಬೇಕು. ಹೀಗೆ ಎಲ್ಲ ಧರ್ಮಗಳೂ ಆತ್ಮಧರ್ಮದಲ್ಲಿ ಸಮನ್ವಯಗೊಂಡಾಗ ಮಾತ್ರ ಅಲ್ಲಿ ಸರ್ವಧರ್ಮಸಮನ್ವಯ ಸಾಧ್ಯ" ಎಂದು ಶ್ರೀರಂಗಮಹಾರುಗಳು ಧರ್ಮದ ವ್ಯಾಖ್ಯಾನವನ್ನು ಮಾಡಿದ್ದರು. ಭಗವಂತನಿಗೆ ಸಲ್ಲಿಸುವ ಉಪಚಾರರೂಪವಾದ ಈ ಪ್ರಕ್ರಿಯೆಯು ನಮ್ಮನ್ನು ಶುದ್ಧಗೊಳಿಸಿಕೊಳ್ಳುವುದರಲ್ಲೇ ಸಾರ್ಥಕಗೊಳ್ಳುವುದು. ಧರ್ಮದಿಂದ ಜಾರಿದ ವಿಷಯವನ್ನು ಮತ್ತೆ ಅದೇ ಧರ್ಮದಲ್ಲಿ ನೆಲೆನಿಲ್ಲುವಂತೆ ಮಾಡುವುದೇ ಈ ಆಚಮನ. ಮೂರು ಬಾರಿ ತೆಗೆದುಕೊಳ್ಳುವ ಈ ತೀರ್ಥವು ನಮ್ಮ ಕರಣಕಳೇಬರಗಳನ್ನು ಪವಿತ್ರಗೊಳಿಸುವುದು. ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕವಾದ ಮೂರೂ ಸ್ತರದಲ್ಲೂ ನಮ್ಮನ್ನು ಪವಿತ್ರಗೊಳಿಸಿ ನಮ್ಮ ಅಭೀಷ್ಟವು ಸಿದ್ಧಿಸಲು ಈ ಅಮೃತಪ್ರಾಯವಾದ ನೀರು ಸಹಕಾರಿಯಾಗುತ್ತದೆ. ಶುದ್ಧಾರ್ಥವಾಗಿ ಆಚಮನ ಮಾಡಬೇಕು.

ಸೂಚನೆ : 7/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.