Thursday, July 22, 2021

ಷೋಡಶೋಪಚಾರ - 9 ಸ್ನಾನ (Shodashopachaara - 9 Snana)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)



ಷೋಡಶೋಪಚಾರಗಳಲ್ಲಿ ಆರನೆಯ ಉಪಚಾರ. ಭಗವಂತನಿಗೆ ಸ್ನಾನವನ್ನು ಮಾಡಿಸುವುದು. . ಈ ಹಿಂದೆ ಉಪಚಾರಗಳ ಬಗ್ಗೆ ಹೇಳಿದ ತಾತ್ತ್ವಿಕ ಅರ್ಥವು ಈ ಉಪಚಾರಕ್ಕೂ ಸಲ್ಲುತ್ತದೆ. ಸ್ನಾನೋಪಚಾರ ಎಂದರೆ ಸ್ನಾನದಿಂದ ಭಗವಂತನ ಪ್ರತಿಮೆ ಅಥವಾ ವಿಗ್ರಹವನ್ನು  ಶುದ್ಧಿಗೊಳಿಸುವುದು. ಆದರೆ ನಿರಾಕಾರನಾದ ಭಗವಂತನಿಗೆ ಇಂತಹ ಉಪಚಾರ ಸಲ್ಲುವುದಾದರೂ ಹೇಗೆ? ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಅಂದರೆ ಇಲ್ಲಿ ಸ್ನಾನ ಮಾಡಿಸುವ ವಿಗ್ರಹವು ಭೌತಿಕವಾದ ಯಾವುದೋ ಒಂದು ಲೋಹವೋ, ಮೃತ್ತಿಕೆಯೋ ಅಥವಾ ಇನ್ನಾವುದೋ ಪದಾರ್ಥದಿಂದ ಮಾಡಿದ್ದು ಎಂದು ಮಾತ್ರ ಭಾವಿಸಬಾರದು. ಈ ವಿಗ್ರಹದಲ್ಲಿ ಹಿಂದೆ ಮಾಡಿರುವ ಆವಾಹನಾದಿ ಉಪಚಾರಗಳಿಂದ ಭಗವಂತನ ದಿವ್ಯವಾದ ಸಾನ್ನಿಧ್ಯ ಬಂದಿರುತ್ತದೆ. ಹಾಗಾಗಿ ಅಲ್ಲಿ ಮಾಡುವ ಸೇವೆಯು ನೇರವಾಗಿ ಭಗವಂತನಿಗೇ ತಲುಪುವುದರಲ್ಲಿ ಯಾವ ಸಂಶಯವೂ ಇಲ್ಲ. ಯಾವ ರೀತಿಯಾಗಿ ಒಬ್ಬ ವ್ಯಕ್ತಿಗೆ ಸ್ನಾನವನ್ನು ಮಾಡಿಸಲಾಗುತ್ತದೆಯೋ ಅಂತೆಯೇ ಭಗವಂತನಿಗೂ ಸ್ನಾನವನ್ನು ಮಾಡಿಸಲಾಗುತ್ತದೆ. ಅಭ್ಯಂಗಸ್ನಾನ, ಮೃತ್ತಿಕಾಸ್ನಾನ, ಸುಗಂಧದ್ರವ್ಯಯುಕ್ತವಾದ ಜಲದಿಂದ ಸ್ನಾನ, ಮಜ್ಜನಸ್ನಾನ ಹೀಗೆ.ಪಂಚಾಮೃತ ಮೊದಲಾದ ದ್ರವ್ಯಗಳಿಂದ ದೇವರಿಗೆ ಅಭಿಷೇಕವನ್ನು ಮಾಡುತ್ತೇವೆ. ಮನುಷ್ಯನು ಮಾಡುವ ಸ್ನಾನವು ದೇಹದಲ್ಲಿರುವ ಕೊಳೆಯನ್ನು ತೊಳೆದು, ತನ್ಮೂಲಕ ಮಾನಸಿಕವಾದ ಮಲವನ್ನೂ ತೊಳೆಯಲು ಸಹಕರಿಸುತ್ತದೆ. ಭಗವಂತನಿಗೆ ಮಾಡಿದ ಸ್ನಾನಕ್ಕೆ 'ಮಹಾಭಿಷೇಕ' ವೆಂದು ಕರೆಯಲಾಗುತ್ತದೆ. 

ಇಲ್ಲಿ ಮಾಡಿದ ಅಭಿಷೇಕಜಲದ ಪಾನ, ಸ್ನಾನ, ಪ್ರೋಕ್ಷಣಗಳು ನಮ್ಮನ್ನು ಶುದ್ಧಿಗೊಳಿಸುವುದು. ಇದು ನಮ್ಮನ್ನು ಶುದ್ಧಿಗೊಳಿಸುವ ಪ್ರಕ್ರಿಯೆಯೇ ಹೊರತು, ಭಗವಂತನಿಗೆ ಅಂಟಿದ ಮಲವನ್ನು ತೆಗೆಯುವ ಕಾರ್ಯವೆಂದರ್ಥವಲ್ಲ. ಭಗವಂತನಿಗೆ ಅಭಿಷೇಕೋಪಚಾರವನ್ನು ಸಲ್ಲಿಸುವಾಗ ನಾವು ಯಾವ ದೇವತೆಯನ್ನು ಆರಾಧಿಸುತ್ತೇವೋ ಅದಕ್ಕೆ ಸೂಕ್ತವಾದ ಮಂತ್ರ-ಶ್ಲೋಕಗಳನ್ನು ಪಠಿಸುತ್ತಾ ಮಂತ್ರಪೂತವಾದ ಜಲದಿಂದ ಪ್ರೋಕ್ಷಣ, ಅಭಿಷೇಕ, ಮಜ್ಜನ ಮೊದಲಾದ ವಿಧಾನಗಳಿಂದ ಸ್ನಾನವನ್ನು ಮಾಡಿಸುತ್ತೇವೆ. 'ಅಭಿಷೇಕ ಪ್ರಿಯಃ ಶಿವಃ' ಎಂಬಂತೆ ಮಹಾದೇವನಿಗೆ ಅಭಿಷೇಕವೆಂದರೆ ಅತ್ಯಂತ ಪ್ರಿಯ. ಹಾಗಾಗಿ ಶಿವನ ಪೂಜೆಯನ್ನು ಮಾಡುವಾಗ ಅಭಿಷೇಕವೆಂಬ ಉಪಚಾರವು ವಿಶೇಷತೆಯನ್ನು ಪಡೆದುಕೊಳ್ಳುತ್ತದೆ. ಉಳಿದ ಉಪಚಾರಗಳು ಇಲ್ಲಿ ಗೌಣವಾಗಿರುತ್ತವೆ. ಈ ಉಪಚಾರದಲ್ಲಿ ಬಳಸಲ್ಪಡುವ ವಿಶೇಷ ದ್ರವ್ಯವು ನೀರು ಆಗಿದೆ. ನೀರಿಗೂ ಶಿವನಿಗೂ ಯಾವುದೋ ಒಂದು ಬಗೆಯ ಸಂಬಂಧವಿರುವುದರಿಂದಲೇ ಶಿವನಿಗೆ ಅಭಿಷೇಕವು ಪ್ರಿಯವೆಂದು ಹೇಳಲು ಕಾರಣವಾಗಿದೆ. ಉಪಚಾರವು ಆ ದೇವತೆಯ ಸಮೀಪಕ್ಕೆ ಸಾಗಲು ಸಾಧನವಷ್ಟೆ.

ಸೂಚನೆ : 17/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.