ಷೋಡಶೋಪಚಾರಗಳಲ್ಲಿ ಮೂರನೆಯ ಉಪಚಾರವೇ ಪಾದ್ಯ. ಪೂಜೆಯಲ್ಲಿ ಮಾನುಷರೂಪವನ್ನುಭಾವಿಸುತ್ತೇವೆ. ಹಾಗಾಗಿ ಒಬ್ಬ ಮನುಷ್ಯನಿಗೆ ಯಾವ ರೀತಿ ಉಪಚಾರಗಳು ಸಲ್ಲುತ್ತವೆಯೋ ಅಂತೆಯೇದೇವಪೂಜೆಯಲ್ಲೂ ನಡೆಸಬೇಕಾಗುತ್ತದೆ. ಗೌರವಾನ್ವಿತ ವ್ಯಕ್ತಿಯು ಮನೆಗೆ ಬಂದಾಗ ಅವರಪಾದವನ್ನು ತೊಳೆಯುತ್ತೇವೆ. ಪಾದವನ್ನು ತೊಳೆಯುವ ತೀರ್ಥಕ್ಕೆ ಪಾದ್ಯ ಎನ್ನುತ್ತಾರೆ.ಅತಿಥಿಯನ್ನೋ ಅಥವಾ ಕಾಲಾತೀತನಾದ ಭಗವಂತನನ್ನು ಪೂಜಿಸುವಾಗ ಪಾದವನ್ನು ತೊಳೆಯುವಉದ್ದೇಶವೇನು? ಹೊರಗಡೆಯಿಂದ ಬರುವಾಗ ಕಾಲಿಗೆ ದೊಷಗಳು ಅಂಟುವ ಸಾಧ್ಯ್ಯತೆ ಇರುತ್ತದೆ,ಅದನ್ನು ತೊಳೆಯಲು ಈ ವ್ಯವಸ್ಥೆ ಬಂದಿದೆಯೆ? ಇತ್ಯಾದಿ ಸಂಶಯ ಬರುವುದು ಸಹಜ. ಭಗವಂತನುಸದಾ ಪವಿತ್ರನಾಗಿರುವುದರಿಂದ ಅವನಿಗೆ ಪಾದ್ಯವೆನ್ನುವುದು ವ್ಯರ್ಥವಾದೀತು. ಆದ್ದರಿಂದಪಾದ್ಯವೆಂಬುದು ಈ ಅರ್ಥವನ್ನು ಹೊಂದಿಲ್ಲವೆಂಬುದು ಸ್ಪಷ್ಟ.ನಾವು ಆವಾಹನೆ ಮಾಡಿದ ಭಗವಂತನ ಸಮಸ್ತವೂ ಚೈತನ್ಯಶಕ್ತಿಯ ಸ್ರೋತಸ್ಸಾದರೂ ಕೆಲವುಭಾಗಗಳನ್ನು ಶಕ್ತಿಯು ಪ್ರವಹಿಸುವ ವಿಶೇಷಕೇಂದ್ರಗಳು ಎನ್ನುತ್ತಾರೆ. ಇವುಗಳಲ್ಲಿ ಪಾದ, ಹಸ್ತ, ಮುಖಪ್ರಧಾನವಾದವುಗಳು. ಅಂದರೆ ಈ ಭಾಗಗಳಿಂದ ಭಗವಂತನ ಚೈತನ್ಯವು ಹರಿಯುತ್ತಿರುತ್ತದೆ. ಸಲ್ಲಿಸಿದನೀರು ಶಕ್ತಿಕೇಂದ್ರಗಳನ್ನು ಸ್ಪರ್ಶಿಸುವುದರಿಂದ ಅದು ತೀರ್ಥವಾಗುತ್ತದೆ. 'ತೀರ್ಥೀಕುರ್ವಂತಿ ತೀರ್ಥಾನಿ'ಎಂಬಂತೆ ತೀರ್ಥರೂಪರು ಸ್ಪರ್ಶಿಸಿದ ಪ್ರತಿಯೊಂದು ಪದಾರ್ಥವೂ ತೀರ್ಥವಾಗುತ್ತದೆಯಷ್ಟೆ!.ನಮ್ಮನ್ನು ಪವಿತ್ರಗೊಳಿಸಿಕೊಳ್ಳಲು ಈ ಉಪಚಾರವಿದೆಯೇ ಹೊರತು ಪಾದಕ್ಕೆ ತಗುಲಿದ ಹೊಲಸನ್ನುತೊಳೆಯುವ ಉದ್ದೇಶದಿಂದ ಬಂದ ವ್ಯವಸ್ಥೆಯಲ್ಲ ಎಂಬುದನ್ನು ತಿಳಿಯಬೇಕಾಗಿದೆ.
ಈ ಎಲ್ಲಾ ಉಪಚಾರಗಳಲ್ಲೂ ಒಂದು ಸಾಮಾನ್ಯ ವಿಷಯವನ್ನು ಗಮನಿಸಬೇಕು. ನಾವು ಯಾವದೇವರ ಪೂಜೆಯನ್ನು ಮಾಡುತ್ತೇವೋ ಆ ದೇವರಿಗೆ ಸಂಬಂಧಿಸಿದ ಮಂತ್ರವನ್ನು ಭಾವಪೂರ್ಣವಾಗಿಬಳಸಬೇಕು. ಮಂತ್ರಶಕ್ತಿ ಮತ್ತು ಭಾವಶಕ್ತಿಯಿಂದ ಪೂಜೆಗೆ ಶೀಘ್ರಫಲವನ್ನು ಕೊಡುವ ಸಾಮರ್ಥ್ಯವೃದ್ಧಿಸುತ್ತದೆ. ದೂರ್ವೆ, ವಿಷ್ಣುಕ್ರಾಂತ, ಶ್ಯಾಮಕ ಮತ್ತು ಕಮಲಗಳನ್ನು ಈ ಪಾದ್ಯಕ್ಕೆ ಬಳಸುವಜಲದ ಜೊತೆ ಸೇರಿಸಿಕೊಳ್ಳಬೇಕು. ಪಾದ್ಯತೀರ್ಥವನ್ನು ಸಂಗ್ರಹಿಸಲು ಬಳಸುವ ಪಾತ್ರವು ದೇವಪೂಜೆಗೆಬಳಸಲು ಯೋಗ್ಯವಾದ ಪಾತ್ರವಾಗಿರಬೇಕು. ಮಣ್ಣು, ಮರ, ಬೆಳ್ಳಿ, ಬಂಗಾರ- ಹೀಗೆ ಇಲ್ಲೂಅವರವರ ಯೋಗ್ಯತೆ ಮತ್ತು ಅವರವರ ಭಾವಕ್ಕೆ ಪೂರಕವಾಗಿರಬೇಕು. ಕೌತ್ಸನೆಂಬಬ್ರಹ್ಮಚಾರಿಯನ್ನು ಆದರಿಸಲು ಆಗ ತಾನೆ ವಿಶ್ವಜಿತ್ ಯಾಗವನ್ನು ಮಾಡಿ ಎಲ್ಲವನ್ನೂ ದಾನಮಾಡಿರಿಕ್ತಹಸ್ತನಾದ ರಘುಮಹಾರಾಜನು ರಜತಪಾತ್ರೆಗೆ ಬದಲಾಗಿ ಮೃಣ್ಮಯಪಾತ್ರವನ್ನು ಬಳಸಿದ ಎಂದುಕಾಳಿದಾಸನು ರಘುವಂಶಮಹಾಕಾವ್ಯದಲ್ಲಿ ಹೇಳುತ್ತಾನೆ. ಭಗವತ್ಪ್ರೀತಿ ಬಹುಮುಖ್ಯವೇ ಹೊರತುಬಳಸುವ ದ್ರವ್ಯವಲ್ಲ.
ಸೂಚನೆ : 3/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.