Saturday, July 3, 2021

ಯೋಗತಾರಾವಳಿ - 12 ಪ್ರಾಣ-ಪ್ರತ್ಯಾಹರಣ (Yogataravali - 12 Prana-Pratyaharana)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಯೋಗತಾರಾವಳೀ (ಶ್ಲೋಕ – ೧೨) 

ಪ್ರತ್ಯಾಹೃತಃ…

ಕೇವಲ-ಕುಂಭಕದಿಂದ ಆಗುವ ಲಾಭವನ್ನೇ ಮುಂದುವರೆಸಿ ಹೇಳಿದೆ.

ಹಾವಿನ ಬಗೆ

ಬಿಲದೊಳಗೆ ವಾಸಿಸುವ ಅನೇಕಪ್ರಾಣಿಗಳು ಬಿಸಿಲುಗಾಲದಲ್ಲಿ  ಹೊರಸಂಚಾರ ಹೆಚ್ಚು ಮಾಡಿಕೊಳ್ಳುವುದನ್ನು ಕಾಣುತ್ತೇವೆ. ಛಳಿಗಾಲದಲ್ಲೂ ಬಿಸಿಲುಕಾಯಿಸಿಕೊಳ್ಳಲು ಹೊರಬಂದಿರುವ ಹಾವುಗಳನ್ನೂ ಕಾಣಬಹುದು. ಹಾಗೆ ಬಂದಿರುವ  ಹಾವುಗಳ ಉಸಿರಾಟದಲ್ಲಿಯೇ ವಿಶೇಷವನ್ನೂ ಕಾಣಬಹುದು. ಉಸಿರಾಟದ ಒಂದು ಚಕ್ರ ಮುಗಿಯುತ್ತಲೇ ಕೆಲಕ್ಷಣ ಅವು ಸ್ತಬ್ಧವಾಗಿರುತ್ತವೆ; ಆಗ ಉಸಿರಾಟವಿರುವುದಿಲ್ಲ. ಹಾಗೆಯೇ ಆಹಾರ-ಸೇವನೆಯಾದ ಬಳಿಕವೂ ಅವುಗಳ ಉಸಿರಾಟದಲ್ಲಿ ಭಿನ್ನತೆಯಿರುತ್ತದೆ.

ಅವುಗಳ ಆಹಾರ-ಸೇವನೆ ಸಹ ವಿರಳವೇ! ಸಾಧಾರಣವಾಗಿ ವಾರಕ್ಕೊಮ್ಮೆ, ಎರಡು-ಮೂರು ವಾರಗಳಿಗೊಮ್ಮೆ – ಈ ಬಗೆ. ಮಿಕ್ಕಂತೆ ಬರೀ ವಾಯು-ಸೇವನೆಯೇ ಅವಕ್ಕೆ ಸಾಕಾಗಿರುವಂತೆ ತೋರಿಬರುತ್ತದೆ. "ಬರೀ ಗಾಳಿ ಕುಡಿದುಕೊಂಡಿದ್ದರೂ ಬಲಹೀನವೇನಲ್ಲ ಹಾವುಗಳು!" - ಎಂಬರ್ಥದಲ್ಲಿ ಉಕ್ತಿಯೊಂದು ಸಂಸ್ಕೃತದಲ್ಲಿದೆ: "ಸರ್ಪಾಃ ಪಿಬಂತಿ ಪವನಂ, ನ ಚ ದುರ್ಬಲಾಸ್ತೇ!" ಕುಂಡಲಿನೀ-ಸರ್ಪದ ವಿಷಯದಲ್ಲೂ ಈ ವಾಯು-ಸೇವನಾ-ಪ್ರಕಾರದ ಕೆಲವಂಶಗಳು ಅನ್ವಿತವಾಗುವುವು.

ಕೇವಲ-ಕುಂಭಕದಿಂದಾಗಿ ಒಳಸೆಳೆಯಲ್ಪಟ್ಟ ಪ್ರಾಣ-ವಾಯುವು ಎರಡೂ ನಾಡಿಗಳನ್ನು ಬಿಟ್ಟು ಸುಷುಮ್ನೆಯೊಳಗೆ ಪ್ರವೇಶಿಸುವುದನ್ನು ಹಿಂದಿನ ಶ್ಲೋಕದಲ್ಲಿ ಹೇಳಿತಷ್ಟೆ. "ಪ್ರಬೋಧಗೊಂಡ ಕುಂಡಲಿನೀ-ಸರ್ಪವು ಆ ವಾಯುವನ್ನು ಸೇವಿಸುತ್ತದೆ." – ಎಂದು ಈ ಶ್ಲೋಕದಲ್ಲಿ ಹೇಳಿದೆ. ಹಾಗೆಂದರೇನು ?

ಪೂರ್ವಾಭ್ಯಾಸದಂತೆಯೇ ನಾವು ಸಾಧಾರಣವಾಗಿ ವರ್ತಿಸುತ್ತೇವಷ್ಟೆ. ನಮ್ಮ ಮನಸ್ಸು ಹಾಗೆ ವರ್ತಿಸುವುದಲ್ಲದೆ ನಮ್ಮ ಇಂದ್ರಿಯಗಳೂ ಶರೀರಾಂಗಗಳೂ ಕೂಡ ಸಹಜವಾಗಿ ಹಾಗೆಯೇ ವರ್ತಿಸುವುವು. ಹಾಗೆಯೇ ಉಸಿರಾಟವೂ. ಇಡೆ-ಪಿಂಗಳೆಗಳಲ್ಲೇ ಪ್ರಾಣ-ವಾಯು-ಸಂಚಾರವು ಮೊದಲಿನಿಂದಲೂ ನಡೆಯುತ್ತಿರುವುದು. ಬಹುಮಂದಿಯ ಜೀವನವು ಸಾಧಾರಣವೇ ಆಗಿರಲು ಅದೂ ಒಂದು ಕಾರಣವೆಂದರೆ ತಪ್ಪಾಗಲಾರದು! 

ಪ್ರಾಣ-ಪ್ರತ್ಯಾಹರಣ 

ಈ ಎರಡು ನಾಡಿಗಳಲ್ಲಿಯೇ ಪ್ರಾಣದ ಸಂಚಾರವಾಗುತ್ತಿರುವುದನ್ನು ತಡೆದು, ಅದರ ದಿಕ್ಕು-ದಶೆಗಳನ್ನು ನಿರ್ದಿಷ್ಟವಾದ ಬಗೆಯಲ್ಲಿ ಕೆಲಕಾಲ ಬದಲಾಯಿಸುವುದು ಲಾಭಕರ. ಪ್ರಕೃತ, ಬಹಿರ್ಮುಖತೆಯಲ್ಲಿ ಚೆಲ್ಲಿ ಚೆದುರಿಹೋಗುವುದನ್ನು ಒಳಮುಖವಾಗಿ ಸೆಳೆದುಕೊಳ್ಳುವುದೇ ಪ್ರತ್ಯಾಹರಣ ಅಥವಾ ಪ್ರತ್ಯಾಹಾರ. ಪ್ರತ್ಯಾಹಾರವೆಂಬುದನ್ನು ಮನಸ್ಸಿಗೆ ಮಾತ್ರವಲ್ಲದೆ ಉಸಿರಿಗೂ ಅನ್ವಯಿಸುವುದು  ಯುಕ್ತವಾಗುವುದು.

ಹರಣವೆಂದರೆ ಒಯ್ಯುವುದು. ಆಹರಣವೆಂದರೆ ತರುವುದು. ಪ್ರತ್ಯಾಹರಣವೆಂದರೆ ಎಳೆದು ಹಿಂದಕ್ಕೆ ತಂದುಕೊಳ್ಳುವುದು.  ಪ್ರಾಣ-ವಾಯುವಿನ ವಿಷಯದಲ್ಲಿ ಹೀಗೆ ಮಾಡಲಾಗುವುದು ಕೇವಲ-ಕುಂಭಕದಿಂದ. ಅದರಿಂದಾಗಿ ಪ್ರಾಣ-ವಾಯುವು ಪೂರ್ವಾಭ್ಯಾಸದ ಸಂಚಾರ-ಮಾರ್ಗಗಳನ್ನು ಬಿಟ್ಟು ನವ-ಸಂಚಾರ-ಮಾರ್ಗವೊಂದನ್ನು ಕಂಡುಕೊಳ್ಳುತ್ತದೆ.

ಪ್ರಾಣ-ವಾಯುವಿನ ಪೂರ್ವಾಭ್ಯಾಸವೆಂದರೆ ಪೂರ್ವ-ಮಾರ್ಗ-ಸಂಚಾರ. ಪೂರ್ವ-ಮಾರ್ಗ ಅಥವಾ ಪೂರ್ವದಿಕ್ಕೆಂದರೆ ಇಂದ್ರಿಯಗಳು ಬಹಿರ್ಮುಖವಾಗಿರುವ ಬಗೆ. ಪ್ರವೃತ್ತಿ-ಮಾರ್ಗದಲ್ಲಿ ಹೆಜ್ಜೆಯಿಡುವಾಗ ಪೂರ್ವಾಭಿಮುಖವಾಗಿ ಕುಳಿತೇ ಸಂಕಲ್ಪವನ್ನು ಮಾಡುವುದು. ಸೂರ್ಯನು ಉದಯಿಸುವುದು ಪೂರ್ವದಲ್ಲಿ. ಎಲ್ಲರನ್ನೂ ಕೆಲಸಕಾರ್ಯಗಳಲ್ಲಿ ತೊಡಗಿಸುವವನವನೇ. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳ ಚಟುವಟಿಕೆಗಳು ಸೂರ್ಯೋದಯವಾಗುತ್ತಲೇ ಆರಂಭವಾಗುತ್ತವೆ. 

ಇಂದ್ರಿಯಗಳ ಬೆಳಕಿನಲ್ಲಿ ನಡೆಯುವ ಕೆಲಸಗಳು ಹಲವು. ಆದರೆ ಅಷ್ಟುಮಾತ್ರವೇ ಜೀವನವೇ?

ಪ್ರತೀಚೀನ-ಸಮೀಚೀನ

ಅಷ್ಟೇ ಜೀವನವಾದರೆ ಅದು ಕ್ಷುದ್ರ-ಜೀವನವೆನಿಸಿಕೊಳ್ಳುತ್ತದೆ. ಇಂದ್ರಿಯಗಳ ಬೆಳಕು "ಪ್ರಾಗ್ಜ್ಯೋತಿಷ". ಪ್ರಾಗ್-ಜ್ಯೋತಿಷಪುರದಲ್ಲಿ ವಾಸಮಾಡುವವನು ನರಕನೆಂಬ ಅಸುರ -ಎಂಬ ಕಥೆಯನ್ನು ಕೇಳಿರುವೆವಲ್ಲವೆ? . "'ನರ-ಕ' ಎಂದರೆ 'ಕುತ್ಸಿತನಾದ ನರ'" - ಎಂಬ ವಿವರಣೆಯನ್ನೂ ಶ್ರೀರಂಗಮಹಾಗುರುಗಳು ಕೊಟ್ಟಿದ್ದರು. ಹೀಗೆ ಕೇವಲ ಬಹಿರ್ಮುಖೇಂದ್ರಿಯ-ಪ್ರವೃತ್ತಿಗಳಲ್ಲೇ ಮುಳುಗಿರುವವನಲ್ಲಿ ಪೂರ್ಣ-ಮನುಷ್ಯತ್ವವಿರದು. ಇಂದ್ರಿಯಸುಖ-ಮಾತ್ರದಲ್ಲಿ ರಮಿಸುವವರೇ ಅಸುರರು.

ಸಂಜೆಯಾಗುತ್ತಲೇ ಸೂರ್ಯನ ಕಿರಣಗಳು ಸೌಮ್ಯವಾಗಿ "ಹಿಂತಿರುಗುವುವು". ಇದು ನಿವೃತ್ತಿಯ ಬಗೆ. ಪಶ್ಚಿಮದತ್ತ ಪ್ರಯಾಣ. 'ಪ್ರತ್ಯಕ್-'ಪ್ರತೀಚೀನ'ಗಳೆಂದರೂ ಪಶ್ಚಿಮವೇ. ಪ್ರತ್ಯಗ್-ಜ್ಯೋತಿಸ್ಸೆಂದರೆ ಆತ್ಮಜ್ಯೋತಿಯೇ.

ಕೇವಲ-ಕುಂಭಕದಿಂದ ಪ್ರತ್ಯಾಹಾರ ಹೊಂದಿದ ಪ್ರಾಣವು, ಕುಂಡಲಿಯಿಂದ 'ಭಕ್ಷಿತ'ವಾಗುತ್ತದೆ. ಅದಾಗಿ ಕಿಂಚಿತ್ತಾಗಿ ಉಳಿದದ್ದು ಪ್ರತೀಚೀನ-ಪಥದಲ್ಲಿ - ಅಂದರೆ ಒಳಮುಖವಾಗಿ - ಮೆಲ್ಲನೆ ಸಾಗುತ್ತದೆ. ಕೊನೆಗೆ ವಿಷ್ಣುಪದದ ಬಳಿಗೆ ವಿಲೀನವಾಗುತ್ತದೆ.

ಹಿಂದಿನ ಶ್ಲೋಕದಲ್ಲಿ ಸದ್ಯೋ-ವಿಲಯವನ್ನೂ ಈ ಶ್ಲೋಕದಲ್ಲಿ ಮಂದ-ವಿಲಯವನ್ನೂ ಹೇಳಿದೆ: ಮುಖ್ಯ-ಭಾಗವು ಮೊದಲು ಶೀಘ್ರವಾಗಿ ವಿಲೀನವಾಗಿ, ಉಳಿದ ಸ್ವಲ್ಪಾಂಶವು ಮೆಲ್ಲಮೆಲ್ಲನೆ ವಿಲೀನವಾಗುವುದನ್ನು ಇಲ್ಲಿ ಹೇಳಿದೆ.

ಪ್ರತ್ಯಾಹೃತಃ ಕೇವಲ-ಕುಂಭಕೇನ

      ಪ್ರಬುದ್ಧ-ಕುಂಡಲ್ಯುಪಭುಕ್ತ-ಶೇಷಃ |

ಪ್ರಾಣಃ ಪ್ರತೀಚೀನ-ಪಥೇನ ಮಂದಂ

      ವಿಲೀಯತೇ ವಿಷ್ಣುಪದಾಂತರಾಲೇ ||೧೨||

ಸೂಚನೆ : 3/7/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.