Sunday, October 20, 2024

ಅಷ್ಟಾಕ್ಷರೀ 68 ಅಹಂ ವೇದ್ಮಿ ಮಹಾತ್ಮಾನಂ (Astaksari 68 Aham Vedmi Mahatmanam)

aಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಜೀವನವು ಯಾವಾಗ ಯಾವ ತೆರನ ತಿರುವನ್ನು ಪಡೆಯುವುದೋ ಹೇಳಲಾರೆವು. ಆಡಿದ ಮಾತನ್ನು ಬದಲಿಸಿಕೊಳ್ಳಬೇಕಾಗುವ ಸಂನಿವೇಶವು ಸಜ್ಜನರಿಗೂ ಬಂದುಬಿಡಬಹುದೆಂದು ನಿರೀಕ್ಷಿಸಲಾರೆವು. ಕ್ಲಿಷ್ಟ-ಪದಗಳ ಪ್ರಯೋಗವಿಲ್ಲದ ಮಾತಾದರೂ ಅದರ ಸಾರವನ್ನು ಎಷ್ಟೋ ವೇಳೆ ಗ್ರಹಿಸಲಾರೆವು.

ಇವೆಲ್ಲಕ್ಕೂ ನಿದರ್ಶನವು ರಾಮಾಯಣದ ಬಾಲಕಾಂಡದಲ್ಲಿಯೇ ದೊರೆಯುವುದು.

ತನ್ನ ಉಪಾಧ್ಯಾಯರು, ಬಾಂಧವರು, ಇವರುಗಳೊಂದಿಗೆ ದಶರಥನು ರಾಮಾದಿಗಳ ವಿವಾಹದ ಬಗ್ಗೆ ವಾರ್ತಾಲಾಪ ಮಾಡುತ್ತಿರುವ ಹೊತ್ತಿಗೇ ಅಲ್ಲಿಗೆ ಬಂದರು ವಿಶ್ವಾಮಿತ್ರ-ಮಹರ್ಷಿಗಳು! ತನ್ನ ಯಜ್ಞದ ರಕ್ಷಣೆಗೆ ರಾಮನನ್ನು ಕಳುಹಿಸಿಕೊಡೆಂದು ಅವರು ಕೇಳಿದುದಂತೂ ದಶರಥನಿಗೆ ಅತ್ಯನಿರೀಕ್ಷಿತವೇ ಆಯಿತು: ತಾನೊಂದು ದಿಕ್ಕಿನಲ್ಲಿ ಯೋಚಿಸುತ್ತಿದ್ದರೆ, ವಿಶ್ವಾಮಿತ್ರರ ಕೋರಿಕೆಯ ದಿಕ್ಕೇ ಮತ್ತಾವುದೋ ಆಯಿತು! ಅಂತೂ ಕರೆದುಕೊಂಡೇ ಹೋಗಿಬಿಟ್ಟರಲ್ಲಾ, ವಿಶ್ವಾಮಿತ್ರರು – ಎಂದುಕೊಂಡರೆ, ಆದರಿದೋ, ಕೆಲಕಾಲದಲ್ಲೇ ಧನುರ್ಭಂಗವಾಗಿ, ಸೀತೆಯೊಡನೆ ವಿವಾಹವೇರ್ಪಡುವ ಸುದ್ದಿಯೇ ಮುಟ್ಟಿತು, ದಶರಥನಿಗೆ! ಏನೇನು ತಿರುವುಗಳು!

ಇದಕ್ಕಿಂತಲೂ ಆಶ್ಚರ್ಯವೆಂದರೆ ದಶರಥನೇ ವಿಶ್ವಾಮಿತ್ರರನ್ನಾದರಿಸಿದ ವೈಖರಿ: "ತಾವು ಬಂದುದು ಬರಗಾಲದಲ್ಲಿ ಮಳೆ ಸುರಿದಂತೆ! ಮಕ್ಕಳಿಲ್ಲದವನಿಗೆ ಪುತ್ರೋತ್ಸವವು ಘಟಿಸಿದಂತೆ! ಇಂದಿಗೆ ನನ್ನ ಜನ್ಮ ಸಫಲವಾಯಿತು. ಮೊದಲು ರಾಜರ್ಷಿಯಾಗಿದ್ದ ತಾವು ಈಗಂತೂ ಬ್ರಹ್ಮರ್ಷಿಯಾಗಿದ್ದೀರಿ! ತಮ್ಮನ್ನದೆಂತು ಆದರಿಸಲಿ! ತಮ್ಮ ಮಾತೆನಗೆ ಅಪ್ಪಣೆಯಂತೆ."

ಯಜ್ಞಾರ್ಥಕ್ಕಾಗಿ ಹತ್ತುದಿನದ ಮಟ್ಟಿಗೆ ರಾಮನನ್ನು ಕಳುಹಿಸಿಕೊಡೆಂದು ವಿಶ್ವಾಮಿತ್ರರು ಕೇಳುತ್ತಿದ್ದಂತೆಯೇ ಬೆಚ್ಚಿದ, ದಶರಥ: "ರಾಮನಿನ್ನೂ ಹದಿನಾರೂ ತುಂಬಿಲ್ಲದ ಎಳೆಯ! ವಿದ್ಯೆಯಿಲ್ಲ, ಅಸ್ತ್ರಬಲವಿಲ್ಲ, ಯುದ್ಧ-ಪರಿಚಯವಿಲ್ಲ. ಆತನೆಂತು ಹೋರುವ? ಆತನನ್ನು ಬಿಟ್ಟು ಕ್ಷಣವೂ ನಾನಿರಲಾರೆ."

ದಶರಥನೇನು ದುರ್ಜನನೇ? ಆದರೂ ಮೊದಲಿತ್ತ ಮಾತೇನು? ಈಗಿತ್ತ ಉತ್ತರವೇನು? ವ್ಯಾಮೋಹವೆಂಬುದೆಂತು ಪ್ರಬಲ!

ವಿಶ್ವಾಮಿತ್ರರು ಹೇಳಿದ್ದೇನು? ಮಾರೀಚ-ಸುಬಾಹುಗಳೆಂಬ ರಾಕ್ಷಸರಿಬ್ಬರು ಯಜ್ಞವೇದಿಕೆಯ ಮೇಲೆ ರಕ್ತ-ಮಾಂಸಗಳನ್ನು ಸುರಿದು ನನ್ನ ಯಜ್ಞಕ್ಕೆ ವಿಘ್ನವೊಡ್ಡುತ್ತಿದ್ದಾರೆ. ವ್ರತಸ್ಥನಾಗಿರುವ ಕಾರಣ ನಾನು ಕ್ರೋಧಗೊಳ್ಳಲಾರೆ, ಶಾಪವೀಯಲಾರೆ. ರಾಮನು ದಿವ್ಯ-ತೇಜಸ್ಸಂಪನ್ನ; ಜೊತೆಗೆ ನನ್ನ ರಕ್ಷಣೆಯಿದ್ದೇ ಇದೆ. ಅವರನ್ನವನು ಕೊಲ್ಲುವವನೇ ಸರಿ. ರಾಮನಲ್ಲದೆ ಮತ್ತಾರೂ ಅವರಿಬ್ಬರನ್ನು ಕೊಲ್ಲಲಾರರು."

ಹೀಗೆ ಹೇಳುತ್ತಿದ್ದ ವಿಶ್ವಾಮಿತ್ರರಿಗೆ ದಶರಥನ ಚಹರೆಯಲ್ಲಿ ಬದಲಾವಣೆಗಳು ಕಂಡುಬಂದಿರಬೇಕು! "ರಾಜನೇ, ಪುತ್ರ-ಸ್ನೇಹವಿಲ್ಲಿ ಬೇಡ. ಆ ರಾಕ್ಷಸರಿಬ್ಬರೂ ಹತರಾದರೆಂದು ತಿಳಿ (ಎಂದರೆ ಅವರ ಸಾವು ನಿಶ್ಚಿತವಾದದ್ದು). ಸತ್ಯ-ಪರಾಕ್ರಮನಾದ ರಾಮನು ಮಹಾತ್ಮನೆಂಬುದನ್ನು ಬಲ್ಲೆ (ಅಹಂ ವೇದ್ಮಿ ಮಹಾತ್ಮಾನಂ). ಮಹಾತೇಜಶ್ಶಾಲಿಗಳಾದ ವಸಿಷ್ಠರೂ ಬಲ್ಲರು. ತಪಸ್ಸಿನಲ್ಲಿ ನೆಲೆಗೊಂಡ ಈ ಇತರರೂ ಬಲ್ಲರು" - ಎಂದರು.

ಕೊನೆಗೆ, "ನಿನ್ನ ಮಂತ್ರಿಗಳು - ವಸಿಷ್ಠಾದಿಗಳು - ಅನುಮತಿಯಿತ್ತಲ್ಲಿ ಕಳುಹಿಸಿಕೊಡು - ಎಂದರು.

ರಾಮನು ಮಹಾತ್ಮನೆಂಬುದನ್ನು ನಾ ಬಲ್ಲೆ, ಮಹಾತೇಜಸ್ವಿಗಳಾದ ವಸಿಷ್ಠರೂ, ಇತರ ತಪೋನಿಷ್ಠರೂ ಅರಿತಿದ್ದಾರೆ - ಎಂಬ ಅವರ ಮಾತಿನಲ್ಲಿ ಏನೂ ಕ್ಲಿಷ್ಟ-ಪದವೇ ಇಲ್ಲ. ಆದರೆ ದಶರಥನಿಗೆ ವಿಶ್ವಾಮಿತ್ರರ ಇಂಗಿತವು ಅರ್ಥವಾಗಲೇ ಇಲ್ಲ! ಶಬ್ದ-ಶಬ್ದಾರ್ಥಗಳು ಗೊತ್ತಾದ ಮಾತ್ರಕ್ಕೆ, ಆಶಯ-ತಾತ್ಪರ್ಯಗಳು ಗೊತ್ತಾಗಿಬಿಡತಕ್ಕವೇ?

ಈ ಮಾತುಗಳನ್ನು ವಿವರಿಸುತ್ತಾ, ವಿಶ್ವಾಮಿತ್ರರು ದಶರಥನಿಗೆ ಇದನ್ನು ಗುಟ್ಟಾಗಿ ಹೇಳಿರುವರೆನ್ನುತ್ತಾ, ಶ್ರೀರಂಗಮಹಾಗುರುಗಳು ಹೀಗೆ ಸೂಚಿಸಿದ್ದಾರೆ: "ರಾಮನು ವಿಷ್ಣುವಿನ ಅವತಾರವೆಂಬುದು ಮರೆಯಲ್ಲಿ ಬೆಳಗುವ ಸತ್ಯ. ಅದನ್ನು ನೇರವಾಗಿ ಹೊರಬಿಡುವುದರಲ್ಲಿ ಲೌಕಿಕವಾದ ತೊಡಕಿದೆ: ಬ್ರಹ್ಮವರಾನುಸಾರ ಮಾನುಷ-ಭಾವಕ್ಕೆ ಅನುಗುಣವಾದ ವ್ಯವಹಾರ ನಡೆಯಬೇಕು. ಕಾರ್ಯವಾಗುವವರೆಗೂ ಗುಟ್ಟೊಡೆಯಬಾರದು" - ಎಂಬ ಅವರೀ ಮಾತುಗಳು ಮಾರ್ಮಿಕವಾದಂತಹವು.

ವಸಿಷ್ಠರೂ ತಿಳಿಹೇಳಿದ ಮೇಲೇ, ತನ್ನ ಮನಸ್ಸನ್ನು ಬದಲಾಯಿಸಿ ರಾಮ-ಲಕ್ಷ್ಮಣರನ್ನು ದಶರಥನು ಕಳುಹಿಸಿಕೊಟ್ಟದ್ದು.

ವಸಿಷ್ಠರು ಹೇಳಿದ್ದೇನು? " ಮೊದಲು ಮಾತನ್ನಿತ್ತು ಈಗಿಲ್ಲವೆನ್ನುವೆಯಾ? ರಘು-ಕುಲಕ್ಕಿದು ಸಲ್ಲದು. ರಾಮನನ್ನೇನೆಂದುಕೊಂಡೆ? ಈತ ಧರ್ಮವೇ ಮೈದಾಳಿದವ. ವೀರ್ಯವಂತರಲ್ಲಿ ಶ್ರೇಷ್ಠ. ಬುದ್ಧಿ-ತಪಸ್ಸುಗಳಲ್ಲಿ ಸಾಟಿಯಿಲ್ಲದವ. ರಾಮನಿಗೆ ತಿಳಿದಿರುವ ಅಸ್ತ್ರಗಳನ್ನು ಇತರರರಿಯರು. ವಿಶ್ವಾಮಿತ್ರನು ನಿನ್ನ ಮಕ್ಕಳ ಹಿತಕ್ಕಾಗಿಯೇ ಬಂದಿರುವನು." ಹೀಗೆಲ್ಲಾ ಅವರು ಹೇಳಿದ ಮೇಲೇ ದಶರಥನೊಪ್ಪಿದ್ದು.

ನಾನು ಬಲ್ಲೆನೆಂದು ವಿಶ್ವಾಮಿತ್ರರು ಹೇಳುವಾಗ, ಅವರ ತಪೋಮಹಿಮೆಯು ದಶರಥನಿಗೆ ಅರ್ಥವಾಗಲಿಲ್ಲ. ರಾಮನು ಸತ್ಯ-ಪರಾಕ್ರಮನೆಂದಾಗ ರಾಮನ ಸತ್ತ್ವ-ಮಹಿಮೆ ಅರ್ಥವಾಗಲಿಲ್ಲ. ವಸಿಷ್ಠ-ವಿಶ್ವಾಮಿತ್ರರಲ್ಲಿ ಕೆಲಕಾಲ ದ್ವೇಷವಿತ್ತಾದರೂ, ವಸಿಷ್ಠರೂ ಬಲ್ಲರೆಂದರೂ, ದಶರಥನಿಗದರ ಸೂಕ್ಷ್ಮ ಅರ್ಥವಾಗಲಿಲ್ಲ. ಇನ್ನಿತರ ತಪೋನಿಷ್ಠರೂ ಬಲ್ಲರೆಂದಾಗಲಾದರೂ "ಓ, ರಾಮನೆಂದರೆ ತಪೋವೇದ್ಯ-ತತ್ತ್ವ!" - ಎಂಬುದು ದಶರಥನಿಗೆ ಸ್ಫುರಿಸಬಹುದಾಗಿತ್ತು. ಆಗಲೂ ಗೊತ್ತಾಗಲಿಲ್ಲ!

ಹೀಗೆ, ತಿಳಿಯಾದ ಮಾತು ಸಹ ತಕ್ಕ ಪೂರ್ವಭಾವಿ ತಿಳಿವಳಿಕೆಯಿಲ್ಲದಿದ್ದಾಗ ತಿಳಿಯುವುದಿಲ್ಲವಲ್ಲವೇ?

ಸೂಚನೆ: 20/10/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.