ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಮಾರ! ಮಾಽಽರಮ ಮದೀಯ-ಮಾನಸೇ
ದೇಶದಲ್ಲಿ ಒಂದು ಸುವ್ಯವಸ್ಥೆಯಿದೆಯೆಂದು ಹೇಳಿದರೆ ಅದರ ಅರ್ಥವೇನು? ಇನ್ನೇನಿಲ್ಲದಿದ್ದರೂ ಕೊನೆಯ ಪಕ್ಷ ಇಷ್ಟಾದರೂ ಇರುತ್ತದೆ - ಎಂದುಕೊಳ್ಳಬಹುದಲ್ಲವೇ? ಯಾರಿಗೂ ಸ್ವ-ಸ್ವಕೀಯಗಳಿಗೆ ಘಾತವಾಗುವುದಿಲ್ಲ - ಎಂದು.
ಹಾಗೆಂದರೇನು? ಎಲ್ಲರೂ ನೆಚ್ಚಿಕೊಳ್ಳುವ ಎರಡಂಶಗಳಿರುತ್ತವಲ್ಲವೇ, ಅವಕ್ಕೆ ಘಾಸಿಯಾಗಬಾರದು. ಯಾವ ಎರಡಂಶಗಳು? ತಾನು ಮತ್ತು ತನಗೆ ಸೇರಿದಂತಹವು, ಇವಕ್ಕೆ ಘಾತವಾಗಬಾರದು, ಎಂದರೆ ಹೊಡೆತಬೀಳಬಾರದು. ಅರ್ಥಾತ್, ನಮಗೆ, ಎಂದರೆ ನಮ್ಮಜೀವಕ್ಕೆ, ಘಾಸಿಯಾಗಬಾರದು; ಹಾಗೂ ಎರಡನೆಯದಾಗಿ, ನಮ್ಮ ಸ್ವತ್ತಿಗೂ ಭಂಗಬರಬಾರದು: ಇದನ್ನೇ ಆಂಗ್ಲಭಾಷೆಯಲ್ಲಿ ಲೈಫ್ ಎಂಡ್ ಪ್ರಾಪರ್ಟಿ - ಎನ್ನುತ್ತಾರೆ.
ಹಾಗಿರುವುದರಿಂದಲೇ ಯಾರಾದರೂ ಅನುಮತಿಯಿಲ್ಲದೆ ನಮ್ಮ ಕಾಂಪೌಂಡಿನೊಳಗೆ ಬಂದರೂ ತಪ್ಪೇ; ಇನ್ನು ಮನೆಯ ಒಳಭಾಗಕ್ಕೇ ನುಗ್ಗಿದರೆಂದರೆ, ಸುಮ್ಮನೆ ಬಂದರೆಂದರೂ ಸಹ ಅದು ಕಾನೂನಿನನುಸಾರ ಶಿಕ್ಷಾರ್ಹವಾಗುತ್ತದೆ. ತನ್ನ ಮನೆಯೊಳಗೆ ಯಾರುಯಾರೋ ನುಗ್ಗಿಬಂದರೆ ಅದನ್ನು ಕಂಡೂ ಯಾರು ತಾನೇ ಸುಮ್ಮನಿದ್ದಾರು?
ಈ ಕಾನೂನಿನ ವಿಷಯಕ್ಕೂ ಕೃಷ್ಣಕರ್ಣಾಮೃತಕ್ಕೂ ಏನು ಸಂಬಂಧ? - ಎಂಬ ಪ್ರಶ್ನೆಯಲ್ಲವೇ? ತನ್ನ ಮನೆಗೆ ಅತಿಕ್ರಮ-ಪ್ರವೇಶವಾದರೆ ಯಾರು ಸಹಿಸಿಯಾರೆಂಬ ಪ್ರಶ್ನೆಯನ್ನೇ ಲೀಲಾಶುಕನು ಎತ್ತಿದ್ದಾನೆ.
ನಿಜವೆಂದರೆ ಸುಳ್ಳಲ್ಲದ್ದು - ಎಂಬ ಅರ್ಥ ಕನ್ನಡದಲ್ಲಿ ಪ್ರಸಿದ್ಧ. ಸಂಸ್ಕೃತದಲ್ಲಿ, ಅದರ ಬದಲಾಗಿ, ನಿಜ ಎಂದರೆ 'ತನ್ನ' ಎಂಬ ಅರ್ಥವೇ. ನಿಜ-ವೇಶ್ಮವೆಂದರೆ ತನ್ನ ಮನೆ. ಲಂಘನ-ಉಲ್ಲಂಘನಗಳೆಂದರೆ ನಿಯಮ ಮೀರಿ ಹೊಕ್ಕಿಬಿಡುವುದು. ಹಾಗೆ ಹೊಗುವುದು ತಪ್ಪೆಂಬ ಲೌಕಿಕಲೆಕ್ಕವನ್ನು ಅಧ್ಯಾತ್ಮಕ್ಕಾಗಿ ಬಳಸುತ್ತಿದ್ದಾನೆ, ಲೀಲಾಶುಕ, ಪ್ರಕೃತ-ಪದ್ಯದಲ್ಲಿ.
ಏಕೆ? ಲೀಲಾಶುಕನ ಮನೆಯೊಳಗೆ ಯಾರಾದರೂ ನುಗ್ಗಿದ್ದಾರೇನು? ನುಗ್ಗಿದ್ದಾರೆ, ಹೌದು: ಆದರೆ ಮನೆಯೊಳಗಲ್ಲ, ಮನದೊಳಗೆ ನುಸುಳಿರುವರು. ಮನವೂ ಮನೆಯಂತೆಯೇ ಅಲ್ಲವೇ? 'ಅಂತೆ'ಯೇನು? ವಾಸ್ತವವಾಗಿ ಮನವೇ ಮೊದಲ ಮನೆ - ಜೀವಕ್ಕೆ; ಆಮೇಲೆ ದೇಹವೇ ಗೇಹ; ಆಮೇಲೆ ಗೃಹಿಣಿಯೇ ಗೃಹ; ಆ ಬಳಿಕವೇ ಇಟ್ಟಿಗೆ-ಗಾರೆ-ಸಿಮೆಂಟುಗಳಿಂದಾದ ಸದನದ ಸರದಿ. ಇರಲಿ.
ಅಂತೂ ಮನಸ್ಸೆಂಬ ಅಂತರ್-ಗೃಹಕ್ಕೇ, ಒಳಮನೆಯೊಳಗೇ, ನುಸುಳಿ ಬಂದು ನಿಂತಿದ್ದಾನೆ, ಈತ: ಯಾರೀತ? ಮತ್ತಾರೂ ಅಲ್ಲ, ಮಾರ. ಮಾರ ಎಂದರೆ ಹೊಡೆಯುವವನು: ಎಲ್ಲರನ್ನೂ ಹೊಡೆಯುವ ಮನ್ಮಥ. "ಎಲವೋ ಮದನ, ನನ್ನ ಮನಸ್ಸಿನೊಳಗೆ ಮಾತ್ರ ಬಂದುಬಿಡಬೇಡ, ಅದೂ ನಿನ್ನಿಷ್ಟದಂತೆ ಬರುವುದೂ ನಿಲ್ಲುವುದೂ ಬೇಡ!" ಎಂದು ಎಚ್ಚರಿಸುತ್ತಿದ್ದಾನೆ, ಲೀಲಾಶುಕ.
"ಅಯ್ಯೋ ಇದೇನಿದು? ಕಾಮನಿಗೆ, ಎಂದರೆ ಕಾಮಕ್ಕೆ, ತಮ್ಮ ಮನಸ್ಸಿನಲ್ಲಿ ಎಲ್ಲರೂ ಸ್ವಾಗತ ಕೊಡುತ್ತಾರಲ್ಲಾ, ಏನಾಯಿತೀ ಲೀಲಾಶುಕನಿಗೆ?" ಎಂಬ ಪ್ರಶ್ನೆಯೋ? ಏಕೆಂದರೆ, ತನ್ನ ಮನಸ್ಸೆಂದರೆ ಎಲ್ಲರ ಮನಸ್ಸಿನಂತಲ್ಲ- ಎಂಬುದಾತನ ನಿಲುವು.
ಏನು ವಿಶೇಷ, ಹಾಗಾದರೆ ಈತನ ಮನಸ್ಸಿನಲ್ಲಿ? "ನನ್ನ ಮನಸ್ಸು 'ಮಾಧವೈಕ-ನಿಲಯ'ವಾದದ್ದು": ಎಂದರೆ, ಮಾಧವನಿಗೊಬ್ಬನಿಗೇ ಆವಾಸ-ಸ್ಥಾನವಾದದ್ದು, ಅದು. ಏಕ-ನಿಲಯವೆಂದರೆ ಮುಖ್ಯ-ಗೃಹವೂ ಹೌದು: ಅಲ್ಲಿಗೆ, ಮಾಧವನಿಗಿದುವೆ ಪ್ರಧಾನ ಆವಾಸ-ಸ್ಥಾನ. ಒಟ್ಟಿನಲ್ಲಿ, ಕೃಷ್ಣನ ನೆಲೆಯಾಗಿದೆ ನನ್ನ ಚಿತ್ತ. ಎಚ್ಚರ, ಅಚ್ಯುತನ ನೆಲೆಯಾದ ನನ್ನ ಅಂತರಂಗದೊಳಗೆ ನಿನ್ನಿಚ್ಛೆಬಂದಂತೆ ಬಂದೀಯೆ, ಜೋಕೆ, ಅಲ್ಲಿ ನೀ ಆಡುವಂತಿಲ್ಲ (ಮಾ ಆರಮ)!
ಆದರೆ ಮಾರನೋ, ಇಂತಹ ಯಾರ ಬೆದರಿಕೆಗಳಿಗೂ ಹೆದರದವನೇ ಸರಿ. ಹೆಸರೇ ಮನ್ಮಥನಲ್ಲವೇ?. ಮನಸ್ಸನ್ನು ಮಥನಮಾಡುವವನೇ ಮನ್ಮಥ. ಸಾಧಾರಣರೀಯುವ ಎಚ್ಚರಕ್ಕೆಲ್ಲಾ ಬೆಚ್ಚುವವನೇ ಆತ?
"ಕೃಷ್ಣನ ಮನೆ"ಗಲ್ಲವೇ ಈ ಮಾರನೀಗ ನುಗ್ಗಿಬಂದಿರುವುದು? ಸೊಕ್ಕಿನಿಂದ ಹೊಕ್ಕಿರುವ ಈತನನ್ನು ಹತ್ತಿಕ್ಕಬೇಕೆಂದರೆ ಒಡೆಯನಿಗೇ ಹೇಳಿದರಾಯಿತು, ಶಾಸಕನಾದ ಆತನೇ ತಕ್ಕ ಶಾಸ್ತಿ ಮಾಡುವನು - ಎಂದುಕೊಳ್ಳುತ್ತಾ, ಲೀಲಾಶುಕನು ಕೃಷ್ಣನಿಗೇ ಹೇಳುತ್ತಿದ್ದಾನೆ: "ರಮಾ-ರಮಣನೇ, ತಡೆಯೀತನನ್ನು!" ಎಂದು.
ಆದರೆ ಕೃಷ್ಣನು ಮಮತೆಯಿಂದ ಆತನ ಮೇಲೇನಾದರೂ ದಯೆತೋರಿಬಿಟ್ಟರೆ? - ಎಂಬ ಆತಂಕವಾಯಿತೇನೋ, ಲೀಲಾಶುಕನಿಗೆ? ಅದಕ್ಕೇ ಹಕ್ಕಿನ ವಿಷಯವನ್ನು ಜ್ಞಾಪಿಸುತ್ತಿದ್ದಾನೆ, ಸಾಕ್ಷಾತ್ ಕೃಷ್ಣನಿಗೇ! ತನ್ನ ಮನೆಗೆ ಯಾವನೋ ಹೇಳದೆ ಕೇಳದೆ ಒಳಹೊಕ್ಕು ಬಂದು ನಿಂತಲ್ಲಿ, ಹಾಗೆ ನಿಯಮೋಲ್ಲಂಘನೆ ಮಾಡಿದ್ದಲ್ಲಿ, ಯಾವನು ತಾನೆ ಸಹಿಸಿಯಾನು? - ಎಂದು.
ಈ ಮೂದಲಿಕೆಯ ಮಾತನ್ನು ಮಾಧವನು ಕೇಳಿದೊಡನೆಯೇ ಕೆರಳಿ ಮದನನ್ನು ಸದನದಿಂದ ಆಚೆಗಟ್ಟುವಲ್ಲಿ ಸಂಶಯವೇನು? ಲೋಕಧರ್ಮವನ್ನು ಮೀರಿ ನಡೆದ ಮಾರನಿಗೆ ಲೋಕೇಶನ ಶಿಕ್ಷೆಯ ಭೀತಿಯನ್ನು ಈ ರೀತಿಯಾಗಿ ಹುಟ್ಟಿಸುತ್ತಿದ್ದಾನೆ, ಲೀಲಾಶುಕ.
ಶ್ಲೋಕದ ಸಾರವಿಷ್ಟೆ: ನಮ್ಮ ಚಿತ್ತರಂಗದಲ್ಲಿ ರಮಾ-ಪತಿಯು ಬಂದು ರಮಿಸಲಿ - ಎಂದು ನಾವೆಂದುಕೊಂಡರೆ, ಮರುಕ್ಷಣದಲ್ಲಿಯೇ ಮಾರನೇ ಧಾವಿಸಿಬಂದು ಮನೆಮಾಡಿಕೊಂಡುಬಿಡುವನು, ಅಲ್ಲಿ!
ಕಾಮನನ್ನು, ಅರ್ಥಾತ್ ಕಾಮವನ್ನು, ಗೆದ್ದವರಾರು? ನಮ್ಮ ಕೈಯಲ್ಲಿ ಅದು ಸಾಧ್ಯವೇ? ಕೆಲವೊಮ್ಮೆ ಆದೀತೇನೋ? ಆದರೆ ಹೆಚ್ಚಿನ ಸಂನಿವೇಶಗಳಲ್ಲಿ ಕಡುಕಷ್ಟವೆನಿಸುವುದಿಲ್ಲವೇ? ಎಂದೇ, ನಾವೇ ಗೆಲ್ಲುವೆವೆಂಬ ಹುಚ್ಚಿನ ಕೆಚ್ಚಿಗಿಂತಲೂ, ಅಚ್ಯುತನನ್ನು ನೆಚ್ಚಿಕೊಂಡವರು, ಆತನನ್ನೇ ಹಚ್ಚಿಕೊಂಡವರು, ಇದನ್ನು ಸಾಧಿಸುವುದು ಹೆಚ್ಚು ಸುಲಭವಲ್ಲವೇ?
ಕಂದರ್ಪನ ದರ್ಪವನ್ನಡಗಿಸಬೇಕೆಂದರೆ, ಮನಸಸ್ಪತಿ (ಎಂದರೆ ಮನಸ್ಸಿಗೆ ಒಡೆಯ) ಎನಿಸಿಕೊಂಡ ಶ್ರೀಪತಿಯ ಬಲವನ್ನು ಕೋರುವುದೇ ಜಾಣ್ಮೆಯಲ್ಲವೇ?
ಈ ಶ್ಲೋಕದಲ್ಲಿ ಮಾರ-ಮಾ-ರಮ ಎಂಬಲ್ಲಿ ಅನುಪ್ರಾಸವಿದೆ; ಇನ್ನೂ ಮೂರ್ನಾಲ್ಕು ಮಕಾರಗಳೂ ಇವೆ. ಕೊಸರಾಗಿ, ಕೊನೆಯ ಪಾದದಲ್ಲೊಂದು ಪುಟ್ಟ ಸುಗಮ-ಸೂಕ್ತಿಯೂ ಇದೆ. ಜಗದೀಶನಿಗೇ ಉಪದೇಶವೂ ಇದೆ!
ಶ್ಲೋಕ ಹೀಗಿದೆ:
ಮಾರ! ಮಾಽಽರಮ ಮದೀಯ-ಮಾನಸೇ
ಮಾಧವೈಕ-ನಿಲಯೇ ಯದೃಚ್ಛಯಾ |
ಹೇ ರಮಾ-ರಮಣ! ವಾರ್ಯತಾಮಸೌ
ಕಃ ಸಹೇತ ನಿಜ-ವೇಶ್ಮ-ಲಂಘನಮ್? ||
ಪುಟ್ಟದಾದ ಮತ್ತೊಂದು ಶ್ಲೋಕದಲ್ಲಿ ಶ್ರೀಕೃಷ್ಣನನ್ನು ಕುರಿತಾಗಿ ಬೇಡಿಕೊಳ್ಳುತ್ತಾನೆ, ಲೀಲಾಶುಕ. ಕೃಷ್ಣನನ್ನು ಕೃಷ್ಣನೆನ್ನದೆ, ಆತನನ್ನೇ ಸೂಚಿಸುವ ಸುಭಗ-ವಿಶೇಷಣಗಳನ್ನು ಬಳಸಿದ್ದಾನೆ, ಕವಿ.
ಕೃಷ್ಣ "ಯಾರು" ಎನ್ನುವುದಲ್ಲ, "ಏನು" ಎನ್ನುವುದು! ಕೃಷ್ಣನೊಂದು ಕೃಪಾ-ಲಹರಿ, ಕರುಣೆಯ ಪ್ರವಾಹ. ಕಿಶೋರ-ರೂಪದಲ್ಲಿರುವಂತಹುದು. ಎಂತಹ ಕಿಶೋರ? ಮಧುರವಾದ ಮುಖವುಳ್ಳ ಕಿಶೋರ. ಮಂಥರವಾದ, ಎಂದರೆ ಮಂದವಾದ ನಡೆಯುಳ್ಳ ಅಪಾಂಗವನ್ನು, ಎಂದರೆ ಕುಡಿನೋಟವನ್ನುಳ್ಳದ್ದು. ಕೈಯಲ್ಲಿ ಕೊಳಲು ಹಿಡಿದಿರುವ ಕಿಶೋರ. ಅದೂ ಲಲಿತವಾದ ವೇಣು, ಸುಂದರವಾದ ಕೊಳಲು.
ಅದು ನನ್ನ ಮನಸ್ಸಿನಲ್ಲಿ ನಿಲ್ಲಲಿ, ಚೆನ್ನಾಗಿ ನಿಲ್ಲಲಿ ಎನ್ನುತ್ತಾನೆ, ಕವಿ. ನನ್ನ ಮನೋ-ಮಂದಿರದಲ್ಲಿ ಆತನನ್ನು ಹಿಡಿದಿಡುತ್ತೇನೆ - ಎನ್ನುವುದಿಲ್ಲ. ಆ ಕಿಶೋರನೇ ನನ್ನ ಚಿತ್ತದಲ್ಲಿ ತನ್ನ ಸಂನಿಧಾನವನ್ನೀಯಲಿ - ಎನ್ನುತ್ತಾನೆ.
ನಮ್ಮ ಚಿತ್ತವೋ ಚಂಚಲ: ಏನನ್ನೂ ಚಿರಕಾಲ ಹಿಡಿದಿಟ್ಟುಕೊಳ್ಳಲು ಅಸಮರ್ಥವಲ್ಲವೇ? ತನ್ನ ಸಾಂನಿಧ್ಯವನ್ನು ಆ ಶಿಶುವೇ ಅನುಗ್ರಹಿಸುವಂತಾದರೆ ಅದೆಂತಹ ಭಾಗ್ಯ! ಅದಲ್ಲವೆ ಕರುಣೆಯ ಪರಿ! ಅದಕ್ಕಲ್ಲವೇ ಅದನ್ನು ಕೃಪಾ-ಲಹರಿಯೆಂದಿರುವುದೂ?
"ಲಹರಿ"ಯು ಸ್ತ್ರೀಲಿಂಗವಾದ್ದರಿಂದಲೇ ಅದರ ನಾಲ್ಕೈದು ವಿಶೇಷಣಗಳೂ ಸ್ತ್ರೀಲಿಂಗವೇ.
ಮನಸಿ ಮಮ ಸಂನಿಧತ್ತಾಂ
ಮಧುರ-ಮುಖಾ ಮಂಥರಾಪಾಂಗಾ |
ಕರ-ಕಲಿತ-ಲಲಿತ-ವಂಶಾ
ಕಾಽಪಿ ಕಿಶೋರೀ ಕೃಪಾ-ಲಹರೀ ||
ಸೂಚನೆ : 19/10/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.