ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಶ್ರೀಕೃಷ್ಣನ ಅಭಿಪ್ರಾಯವನ್ನು ಮೊದಲು ಆಲಿಸಬೇಕೆಂದು ಬಲರಾಮನು ಗಡುಸಾಗಿ ಹೇಳಿದನಷ್ಟೆ. ಆತನ ಮಾತನ್ನು ಕೇಳಿದೊಡನೆಯೇ ಎಲ್ಲರೂ ಮೌನ ತಾಳಿದರು. ಅಷ್ಟೇ ಅಲ್ಲದೆ, ಸಾಧು! ಸಾಧು! ಎಂದರು. ಅರ್ಥಾತ್, ಭಲೆ! ಭಲೆ! ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟರಲ್ಲಿ ಮತ್ತೆ ಬಲರಾಮನ ಧ್ವನಿ ಕೇಳಿಸಿ ಎಲ್ಲರೂ ಸಭೆಯಲ್ಲಿ ಮೌನವಾಗಿ ಕುಳಿತುಕೊಂಡರು.
ಆಮೇಲೆ ಶ್ರೀಕೃಷ್ಣನನ್ನು ಕುರಿತಾಗಿ ಬಲರಾಮನು ಹೇಳಿದನು: "ಏನು ಕೃಷ್ಣ, ನೀನು ಎಲ್ಲವನ್ನೂ ನೋಡುತ್ತಿದ್ದರೂ ಅವಾಕ್ಕಾಗಿ ಕುಳಿತಿರುವೆ, ಎಂದರೆ ಮಾತೇ ಇಲ್ಲದಾಗಿರುವೆ? ನಿನ್ನ ನಿಮಿತ್ತವಾಗಿಯೇ ಅಲ್ಲವೆ, ನಾವುಗಳೆಲ್ಲರೂ ಅರ್ಜುನನನ್ನು ಸತ್ಕರಿಸಿದುದು? ಆತನಾದರೋ ದುರ್ಬುದ್ಧಿಯುಳ್ಳವನು, ವಂಶಕ್ಕೇ ಕಲಂಕ ತಂದಿರುವನು! ನಾವು ಮಾಡಿದ ಸತ್ಕಾರಗಳಿಗೆ ಅವನು ಅನರ್ಹನೇ ಸರಿ.
ಊಟ ಮಾಡಿದಮೇಲೆ ಊಟದ ಪಾತ್ರೆಯನ್ನೇ ಒಡೆದುಹಾಕುವವರುಂಟೇ? ತಾನು ಉತ್ತಮಕುಲದಲ್ಲಿ ಹುಟ್ಟಿದವನು ಎಂದು ಭಾವಿಸತಕ್ಕವನು ಯಾರೇ ಆಗಲಿ, ಸಂಬಂಧವನ್ನು ಬಯಸುವವನಾಗಿದ್ದು ಈ ರೀತಿಯ ಸಾಹಸವನ್ನು, ಎಂದರೆ ಒರಟಿನ ವರ್ತನೆಯನ್ನು, ಮಾಡಿಯಾನೇ? ನಮ್ಮನ್ನೂ ತಿರಸ್ಕರಿಸಿ, ಕೇಶವನನ್ನೂ ಲೆಕ್ಕಿಸದೆ, ಸುಭದ್ರೆಯನ್ನಿಂದು ಬಲಾತ್ಕಾರದಿಂದ ಅಪಹರಿಸಿದ್ದಾನೆ: ಅವಳೇ ಆತನಿಗೆ ಮೃತ್ಯು!
ನನ್ನ ತಲೆಯ ಮೇಲೇ ಆತನು ತನ್ನ ಕಾಲನ್ನೇ ಇಟ್ಟಂತಾಗಿದೆ. ಕೃಷ್ಣಾ, ಇದನ್ನು ನಾನು ಹೇಗೆ ತಾನೆ ಸಹಿಸಲಿ? ಇದು ಹಾವನ್ನು ತುಳಿದಂತೆಯೇ ಸರಿ. ಕುರುವಂಶದವರೊಬ್ಬರೂ ಈ ಭೂಮಿಯ ಮೇಲೆ ಇಲ್ಲದಂತೆ, ನಾನೀಗ ಒಬ್ಬಂಟಿಯಾಗಿಯೇ ಮಾಡಿಬಿಡುವೆ! ಅರ್ಜುನನ ಈ ವ್ಯತಿಕ್ರಮವನ್ನು, ಎಂದರೆ ಧರ್ಮವನ್ನು ಮೀರಿರುವಿಕೆಯನ್ನು, ಸಹಿಸಲಾಗದು."
ಮೋಡದ ಹಾಗೆ, ದುಂದುಭಿಯ ಹಾಗೆ, ಧ್ವನಿಯುಳ್ಳ ಬಲರಾಮನು ಹೀಗೆ ಗರ್ಜಿಸುತ್ತಿರಲು, ಭೋಜ-ವೃಷ್ಣಿ-ಅಂಧಕರಾಜರುಗಳೆಲ್ಲರೂ ಆತನ ನಡೆಯನ್ನೇ ಅನುಸರಿಸಿದರು.
ವೃಷ್ಣಿಗಳೆಲ್ಲರೂ ತಮ್ಮ ತಮ್ಮ ಪರಾಕ್ರಮಕ್ಕೆ ಅನುಸಾರವಾಗಿ ಮಾತನಾಡಿದರು. ಅದೆಲ್ಲ ಆದ ಬಳಿಕ ವಾಸುದೇವನು ಧರ್ಮಾರ್ಥಸಂಯುಕ್ತವಾದ ಮಾತುಗಳನ್ನಾಡಿದನು:
"ಅರ್ಜುನನು ಈ ಕುಲಕ್ಕೆ ಅವಮಾನವನ್ನು ಎಸಗಿಲ್ಲ. ಬದಲಾಗಿ, ಅಧಿಕವಾದ ಸಂಮಾನವನ್ನೇ ಮಾಡಿದ್ದಾನೆ. ಇದರಲ್ಲಿ ಸಂಶಯವಿಲ್ಲ. ನಾವು ಸಾತ್ತ್ವತವಂಶದವರಲ್ಲವೇ? ಸಾತ್ತ್ವತರು ಧನಲೋಭಿಗಳು - ಎಂಬುದಾಗಿ ಆತ ಭಾವಿಸಿಲ್ಲ. ಅರ್ಥಾತ್, ಕನ್ಯಾಶುಲ್ಕವನ್ನು ತೆಗೆದುಕೊಂಡು ಕನ್ಯೆಯನ್ನು ಕೊಟ್ಟುಬಿಡುವವರೆಂದು ತಿಳಿದಿಲ್ಲ. ಇನ್ನು ಸ್ವಯಂವರವೋ? ಅದರಲ್ಲಿ ಕನ್ಯೆಯು ಯಾರನ್ನು ವರಿಸುವಳೆಂಬುದು ನಿಶ್ಚಿತವಿಲ್ಲ - ಎಂದಾತನು ಭಾವಿಸುತ್ತಾನೆಂದು ತೋರುತ್ತದೆ.
ಅಲ್ಲದೆ, ಕನ್ಯಾಪ್ರದಾನವನ್ನು ಪಶುಪ್ರದಾನದಂತೇನಾದರೂ ಮಾಡುವುದಾದಲ್ಲಿ, ಅದನ್ನು ಯಾರು ತಾನೆ ಒಪ್ಪಿಯಾರು? ಹಾಗೆಯೇ ತನ್ನ ಸಂತಾನವನ್ನೇ ಯಾವ ಪುರುಷನು ತಾನೆ ಮಾರಿಯಾನು? ಎಂದರೆ ಕನ್ಯಾಶುಲ್ಕಕ್ಕೆ ಮಗಳನ್ನು ಕೊಟ್ಟವರಂತೆ ನಾವೂ ತೋರಬಾರದು. ಈ ಎಲ್ಲ ದೋಷಗಳನ್ನೂ ಅರ್ಜುನನು ಪರಿಗಣಿಸುರುವನೆಂದೇ ನನಗೆ ತೋರುತ್ತದೆ.
ಆ ಕಾರಣಕ್ಕೇ ಬಲಾತ್ಕಾರದಿಂದ ಕನ್ಯೆಯನ್ನು ಕ್ಷತ್ತ್ರಧರ್ಮಕ್ಕನುಸಾರವಾಗಿಯೇ ಅಪಹರಿಸಿರುವನು, ಅರ್ಜುನ.
ಇಷ್ಟರ ಮೇಲೆ, ಈ ಸಂಬಂಧವೂ ಯೋಗ್ಯವಾದುದು - ಎಂದೇ ನಾನು ಭಾವಿಸುತ್ತೇನೆ. ಏಕೆಂದರೆ, ಸುಭದ್ರೆಯೂ ಯಶಸ್ವಿನಿ, ಎಂದರೆ ಒಳ್ಳೆಯ ಹೆಸರನ್ನು ಪಡೆದಿರುವವಳು. ಅರ್ಜುನನೂ ಸಹ ಹಾಗೆಯೇ, ಸುಕೀರ್ತಿಯನ್ನು ಪಡೆದಿರುವವನೇ. ಈ ಕಾರಣಕ್ಕೇ ಆಕೆಯನ್ನು ಬಲಾತ್ಕಾರದಿಂದ ಅವನು ಒಯ್ದಿರುವನೆಂದು ಎನ್ನ ಅನಿಸಿಕೆ.
ಸೂಚನೆ : 27/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.