Sunday, October 27, 2024

ಯಕ್ಷ ಪ್ರಶ್ನೆ 112 (Yaksha prashne 112)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  111 ವಿಮರ್ಶೆ ಮಾಡಿ ಕಾರ್ಯ ಮಾಡುವವರಿಗೆ ಏನು ಲಭಿಸುತ್ತದೆ?

ಉತ್ತರ - ಕಾರ್ಯದಲ್ಲಿ ಜಯ ಸಿಗುತ್ತದೆ

ಯಾವುದೇ ಕಾರ್ಯವನ್ನು ಯೋಚಿಸಿ, ಪರಾಮರ್ಶಿಸಿ, ಪೂರ್ವಸಿದ್ಧತೆಯೊಂದಿಗೆ ಮಾಡಿದಾಗ ಅದರಲ್ಲಿ ಜಯ ಸಿಗುತ್ತದೆ. ಆ ಕೆಲಸ ಫಲಪ್ರದವಾಗುತ್ತದೆ. ಅಥವಾ ಅತಿಶೀಘ್ರದಲ್ಲಿ ಉದ್ದಿಷ್ಟಫಲ ಸಾಧ್ಯವಾಗುತ್ತದೆ ಎಂಬ ಆಶಯದೊಂದಿಗೆ ಈ ಪ್ರಶ್ನೋತ್ತರ ಬಂದಿದೆ. ಇಲ್ಲಿ ಯಕ್ಷನು ಕರ್ಮದ ಮರ್ಮವನ್ನು ತಿಳಿಸುತ್ತಿದ್ದಾನೆ. ಕರ್ಮದ ಮರ್ಮವನ್ನು ಅರಿತ ಧರ್ಮರಾಜನು ಪ್ರಶ್ನೆಗೆ ಉಚಿತವಾದ ಉತ್ತರವನ್ನು ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಶ್ರೀರಂಗ ಮಹಾಗುರುವು ಹೇಳಿದ ಒಂದು ಮಾತು ನೆನಪಾಗುತ್ತದೆ - "ಕರ್ಮವನ್ನು ಮರ್ಮವರಿತು ಆಚರಿಸಬೇಕಪ್ಪ" ಎಂಬುದಾಗಿ. ಇದೇ ವಿಷಯ ಶಾಸ್ತ್ರದಲ್ಲೂ ಪ್ರಸ್ತಾಪವಾಗಿದೆ. ಅಂದರೆ ಮಾಡುವ ಕರ್ಮಕ್ಕೆ ಒಂದು ಮರ್ಮವಿರುತ್ತದೆ. ಅದನ್ನು ಸರಿಯಾಗಿ ತಿಳಿದಾಗ ಆ ಕರ್ಮ ಬೇಗ ಫಲವನ್ನು ಕೊಡಲು ಸಾಧ್ಯವಾಗುತ್ತದೆ ಎಂಬುದು ಇದರ ಅರ್ಥ.

ಇಲ್ಲಿ ಚಿಂತಿಸಲೇಬೇಕಾದ ವಿಷಯವೇನೆಂದರೆ ಕರ್ಮವನ್ನು ಅರಿಯುವುದು ಮತ್ತು ಅದರ ಮರ್ಮವನ್ನು ಅರಿಯುವುದು. ಎರಡೂ ಒಂದೇ ಅರ್ಥ. ಕರ್ಮದ ಮಹಿಮೆಯನ್ನು ತಿಳಿಯುವುದು ಕಷ್ಟಸಾಧ್ಯ ಎಂಬುದಾಗಿ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅಪ್ಪಣೆ ಕೊಡಿಸುತ್ತಾನೆ- "ಗಹನಾ ಕರ್ಮಣೋ ಗತಿಃ" ಎಂಬುದಾಗಿ. ಕರ್ಮವನ್ನು ಮಾಡಿದಾಗ ಯೋಗವು ಸಿದ್ಧವಾಗುತ್ತದೆಯೋ ಅದನ್ನೇ 'ಕರ್ಮಯೋಗ' ಎಂಬುದಾಗಿ ಹೇಳಲಾಗಿದೆ. ಇದನ್ನೇ ಇನ್ನೊಂದು ಭಾಷೆಯಲ್ಲಿ 'ಕುಶಲಕರ್ಮ' ಎಂಬುದಾಗಿ ಗೀತಾಚಾರ್ಯರು ಕರ್ಮದ ಮಹಿಮೆಯನ್ನು ಸಾರುತ್ತಿದ್ದಾನೆ. ಇದಕ್ಕೆ ಒಂದು ಉದಾಹರಣೆಯನ್ನು ಗಮನಿಸುವುದಾದರೆ ಬೀಜದಿಂದ ಮೊಳಕೆ ಬರಿಸಿ, ಒಂದು ಗಿಡವನ್ನು ಮಾಡಿ, ಅದರಿಂದ ಫಲವನ್ನು ಪಡೆಯುವುದು ಎಂಬುದು ಒಂದು ಕರ್ಮವಾಗಿದೆ. ಇದನ್ನು ಹೇಗೆ ಮಾಡಬೇಕು ಎಂದು ಸರಿಯಾಗಿ ತಿಳಿದು ಮಾಡಿದಾಗ ಆ ಬೀಜವು ಬೇಗ ಫಲವನ್ನು ಕೊಡುತ್ತದೆ. ಅಂದರೆ ಯಾವ ಬೀಜ, ಯಾವಾಗ ನೆಟ್ಟಾಗ, ಅದಕ್ಕೆ ಬೇಕಾದ ಪೋಷಕವಾದ ಸಂಗತಿಗಳನ್ನು ನೀಡಿದಾಗ ಮಾತ್ರ ಅದು ನಮ್ಮ ನಮ್ಮ ಉದ್ದಿಷ್ಟವಾದ ಫಲವನ್ನು ಕೊಡಲು ಸಾಧ್ಯ ಎಂಬಿತ್ಯಾದಿ ಅನೇಕ ಅಂಶಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ.

ಅದನ್ನೇ ಕರ್ಮದ ಕೌಶಲ ಎಂಬುದಾಗಿ ಕರೆಯಲಾಗಿದೆ. ಬೀಜದ ಬಗ್ಗೆ ಗೊತ್ತಿಲ್ಲವಾದರೆ ಅಥವಾ ಬೀಜವನ್ನು ಯಾವಾಗ ನೆಡಬೇಕು? ಹೇಗೆ ನೆಡಬೇಕು? ಯಾವ ರೀತಿಯಾದ ಗೊಬ್ಬರವನ್ನು ಕೊಡಬೇಕು? ಯಾವಾಗ ಕೊಡಬೇಕು? ಎಷ್ಟು ನೀರನ್ನು ಹಾಕಬೇಕು? ಇತ್ಯಾದಿ ಅಂಶಗಳು ಗೊತ್ತಿಲ್ಲವಾದರೆ ಆಗ ಉದ್ದೇಶಿತ ಫಲವನ್ನು ಪಡೆಯಲು ಸಾಧ್ಯವೇ. ಒಂದು ಭಾರವಾದ ಮೂಟೆಯನ್ನೋ ಅಥವಾ ಕಲ್ಲನ್ನೋ ಎತ್ತಬೇಕೆಂದರೆ ಅದನ್ನು ಯಾವ ಜಾಗದಲ್ಲಿ ಹಿಡಿದಾಗ ಅದನ್ನು ಸುಲಭವಾಗಿ ಎತ್ತುವುದಕ್ಕೆ ಸಾಧ್ಯವಾಗುತ್ತದೆ ಎಂಬ ಹಿಕ್ಕಮತ್ತು  ತಿಳಿದಿರಬೇಕಾಗುತ್ತದೆ. ಇದೇ ಕರ್ಮದ ಮರ್ಮ - ಪರಾಮರ್ಶೆ. 'ಶಕ್ತಿಗಿಂತ ಯುಕ್ತಿ ಮೇಲು' ಎಂಬ ಕನ್ನಡದ ಗಾದೆಮಾತು ಕರ್ಮದ ಮಹಿಮೆಯನ್ನು ಸಾರುತ್ತದೆ. ಕೇವಲ ಶಕ್ತಿಮಾತ್ರ ಇದ್ದರೆ ಸಾಲದು. ಅದನ್ನೇ ಇಂದಿನ ಭಾಷೆಯಲ್ಲಿ 'ಸ್ಮಾರ್ಟ್ ವರ್ಕ್' ಎಂಬುದಾಗಿ ಹೇಳಲಾಗುತ್ತದೆ. ಹೀಗೆ ಯಾವುದೇ ಕರ್ಮವನ್ನು ಮಾಡಬೇಕಾದರೆ ಅದರ ಆಮೂಲಾಗ್ರವಾದ ಪರಿಚಯ ಇದ್ದಾಗ ಅದು ಬೇಗ ಮತ್ತು ಅತ್ಯಂತ ಸುಲಭದಲ್ಲಿ ಕಾರ್ಯಗತವಾಗುತ್ತದೆ. ಹಾಗಾಗಿ ಇಂತಹ ಅನೇಕ ವಿಷಯಗಳನ್ನು ಆ ಕಾರ್ಯಕ್ಕೆ ಬೇಕಾದ ಅನೇಕ ಸಂಗತಿಗಳನ್ನು ತಿಳಿದಾಗ ಮಾತ್ರ ಕಾರ್ಯವು ಅತ್ಯಂತ ಶೀಘ್ರವಾಗಿ ಫಲದಾಯಕವಾಗುತ್ತದೆ ಎಂಬುದು ಈ ಪ್ರಶ್ನೋತ್ತರ ಸಾರುತ್ತದೆ.

ಸೂಚನೆ : 27/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.