Monday, October 7, 2024

ಯಕ್ಷ ಪ್ರಶ್ನೆ 108 (Yaksha prashne 108)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  108 ಶಾಶ್ವತವಾದ ನರಕವು ಯಾವುದರಿಂದ ದೊರಕುವುದು ?

ಉತ್ತರ - ದಾನ ಕೊಡುತ್ತೇನೆಂದು ಬ್ರಾಹ್ಮಣನನ್ನು ಕರೆಸಿ ಕೊಡದೆ ಇರುವುದರಿಂದ,

ಯಕ್ಷನು ಈ ಪ್ರಶ್ನೆಯಲ್ಲಿ ಶಾಶ್ವತವಾದ ಅಂದರೆ ಎಂದೂ ಕೂಡ ಕಳೆಯಲಾಗದ ಪಾಪಕರ್ಮವನ್ನು ಯಾವ ರೀತಿಯಾಗಿ ಮಾಡಬಹುದು ಮತ್ತು ಅದರಿಂದ ಯಾವ ರೀತಿ ಪಾಪಫಲವನ್ನು ಸಂಪಾದಿಸಬಹುದು ಎಂಬುದನ್ನು ಹೇಳುತ್ತಿದ್ದಾನೆ. ಪಾಪಕರ್ಮವು ನರಕವನ್ನು, ಪುಣ್ಯಕರ್ಮವು ಸ್ವರ್ಗವನ್ನು ಕೊಡುತ್ತದೆ ಎಂಬುದು ಭಾರತೀಯರ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಳಿರುವ ಪ್ರಶ್ನೆ ಇದಾಗಿದೆ. ಅತ್ಯಂತ ಶ್ರೇಷ್ಠವಾದ ಕರ್ಮ ಯಾವುದು? ಮತ್ತು ಅದನ್ನು 'ಮಾಡುತ್ತೇನೆ' ಎಂದು ಸಂಕಲ್ಪಿಸಿ ಮಾಡದಿದ್ದರೆ ಯಾವ ರೀತಿಯಾಗಿ ಪಾಪದ ಫಲ ಲಭಿಸುತ್ತದೆ? ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ ಮತ್ತು ಈ ಪ್ರಶ್ನೆಯಿಂದ ದಾನದ ಮಹತ್ವವನ್ನು ಕೂಡ ತಿಳಿಯಬಹುದಾಗಿದೆ. ದಾನವು ಎಷ್ಟು ಶ್ರೇಷ್ಠವಾದ ಕರ್ಮ? ಅದರಿಂದ ಯಾವ ರೀತಿಯಾದ ಪುಣ್ಯಸಂಪಾದನೆ ಆಗುತ್ತದೆ? ಅದರ ಫಲವಾದದ್ದು ಸ್ವರ್ಗ ಮತ್ತು ದಾನವನ್ನು ಮಾಡದಿದ್ದರೆ ಅಥವಾ 'ದಾನ ಮಾಡುತ್ತೇನೆ' ಎಂದು ಮಾಡದಿದ್ದರೆ ಅದರಿಂದ ಯಾವ ರೀತಿಯಾಗಿ ಪಾಪಕರ್ಮವಾಗುತ್ತದೆ ಮತ್ತು ಅದರ ಫಲ ಶಾಶ್ವತವಾದ ನರಕ ಹೇಗೆ? ಎಂಬುದನ್ನು ಇಲ್ಲಿ ಹೇಳಿರುವುದರಿಂದ ದಾನದ ಮಹತ್ವವು ಇನ್ನಷ್ಟು ಸ್ಪಷ್ಟವಾಗಿ ತಿಳಿಯುತ್ತದೆ. ಮತ್ತು ದಾನವನ್ನು ಸ್ವೀಕರಿಸಲು ಬ್ರಾಹ್ಮಣನು ಯಾವ ರೀತಿಯಾಗಿ ಅರ್ಹನಾಗಿರುತ್ತಾನೆ? ಎಂಬುದನ್ನು ಈ ಪ್ರಶ್ನೆಯಲ್ಲಿ ನಾವು ಕಾಣಬಹುದಾಗಿದೆ. ಈ ಹಿಂದಿನ ಪ್ರಶ್ನೆಯಲ್ಲಿ ಬ್ರಾಹ್ಮಣನಿಗೆ ಏಕೆ ದಾನ ಮಾಡಬೇಕು? ಎಂಬುದನ್ನು ನಾವು ತಿಳಿದಿದ್ದೆವು. ಅದನ್ನು ಒಮ್ಮೆ ಇಲ್ಲಿ ಮನನ ಮಾಡಿಕೊಂಡು ಈ ಉತ್ತರವನ್ನು ಸ್ಪರ್ಶಿಸೋಣ.

'ದಾನವನ್ನು ಕೊಡುತ್ತೇನೆ' ಎಂದು ಹೇಳಿ ಮನೆಗೆ ಕರೆಸಿಕೊಂಡು ಅದನ್ನು ಕೊಡದೆ ಇರುವುದು ಒಂದು ಮೋಸದ ವ್ಯಾಪಾರ; ಇದೊಂದು ವಂಚನೆಯಾಗಿದೆ. ಮಾತಿಗೆ ತಪ್ಪುವ ವ್ಯವಹಾರ, ಕೊಟ್ಟ ಮಾತನ್ನು ಉಳಿಸಿಕೊಳ್ಳದಿರುವ ರೀತಿ. ತನಗೆ ತಾನೇ ಮಾಡಿಕೊಳ್ಳುವ ಅಪರಾಧ. ಇದು ಕೇವಲ ಬ್ರಾಹ್ಮಣನಿಗೆ ಮಾತ್ರ ಮಾಡುವ ಮೋಸವಲ್ಲ. ಯಾವುದೇ ವ್ಯಕ್ತಿಗೂ ಈ ರೀತಿಯಾಗಿ ಮಾಡಬಾರದು. ಯಾರಿಗೆ ಮಾಡಲಾಗಿದೆ? ಎನ್ನುವುದರ ಆಧಾರದ ಮೇಲೆ ಪಾಪದ ಪರಿಣಾಮದಲ್ಲಿ ವ್ಯತ್ಯಾಸವಾಗುವುದು ಅಷ್ಟೆ. ಬೇರೆ ವ್ಯಕ್ತಿಗಳಿಗೆ ಮಾಡುವುದಕ್ಕಿಂತ ಬ್ರಾಹ್ಮಣನಿಗೆ ಮಾಡುವ ಪಾಪವು ಅಧಿಕವಾಗಿ ಬರುತ್ತದೆ ಎಂಬುದು ಇದರ ಅರ್ಥವಾಗಿದೆ. ದಾನ ಮತ್ತು ಬ್ರಾಹ್ಮಣ ಮಧ್ಯದಲ್ಲಿ ಆಗುವ ಈ ವ್ಯವಹಾರವು ಅತ್ಯಂತ ಶ್ರೇಷ್ಠವಾದ್ದರಿಂದ ಅದನ್ನು ತಪ್ಪಾಗಿ ಮಾಡಿದಾಗ ಅದರಿಂದ ಬರುವ ಫಲವೂ ಅಷ್ಟೇ ಉಗ್ರವಾಗಿಯೇ ಬರುತ್ತದೆ. ಹಾಗಾದರೆ ಬ್ರಾಹ್ಮಣನಿಗೆ ಇಷ್ಟು ಮಹತ್ವ ಏಕೆ? 

ಈ ಸೃಷ್ಟಿಯು ಸತ್ತ್ವ ರಜಸ್ಸು ಮತ್ತು ತಮಸ್ಸು ಎಂಬ ತ್ರಿಗುಣಗಳ ವ್ಯಾಪಾರದಿಂದ ಆಗಿದೆ. ಈ ಗುಣಗಳಲ್ಲಿ ಯಾವ ಗುಣಕ್ಕೆ ಪ್ರಾಧಾನ್ಯವಿದೆಯೋ ಅದಕ್ಕೆ ಅನುಗುಣವಾಗಿ ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಸೃಷ್ಟಿ ಆಗಿದೆ. ಇವುಗಳಲ್ಲಿ ಬ್ರಾಹ್ಮಣ ಸೃಷ್ಟಿಯು ಸತ್ತ್ವ ಗುಣದ ಪ್ರಾಬಲ್ಯದಿಂದ ಆಗಿದೆ ಎಂದು ಶಾಸ್ತ್ರಗಳು ಸಾರುತ್ತವೆ.  ಉತ್ಕೃಷ್ಟವಾದ ವಿಷಯಕ್ಕೆ ಕೊಡುವ ಗೌರವವು ಪುಣ್ಯಕರ್ಮವಾದರೆ, ಅದೇ ವಿಷಯಕ್ಕೆ ಮಾಡುವ ಅಪಮಾನವು ಪಾಪಸಂಚಯಕ್ಕೆ ಕಾರಣವಾಗುತ್ತದೆ ಎಂಬುದನ್ನೂ ಅದೇ ಶಾಸ್ತ್ರವು ಸಾರುತ್ತದೆ. ಪ್ರಶ್ನೋತ್ತರದ ಸಾರವೂ ಇದೇ ಆಗಿದೆ.

ಸೂಚನೆ : 6/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.