ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 109 ಬ್ರಾಹ್ಮಣ್ಯವು ಕುಲ, ನಡತೆ, ವೇದಾಧ್ಯಯನ, ವಿದ್ಯೆ ಇವುಗಳಲ್ಲಿ ಯಾವುದರಿಂದ ಸಿದ್ಧಿಸುವುದು?
ಉತ್ತರ - ನಡತೆ ಅಥವಾ ಸದಾಚಾರದಿಂದ,
ಬ್ರಾಹ್ಮಣನಲ್ಲಿ ಇರಲೇಬೇಕಾದ ಸಹಜವಾದ ಸ್ವಭಾವ ಯಾವುದಿದೆಯೋ ಅದನ್ನು ಬ್ರಾಹ್ಮಣ್ಯ ಎಂದು ಕರೆಯಲಾಗುತ್ತದೆ. ಬ್ರಹ್ಮಭಾವವನ್ನು ತುಂಬಿಕೊಳ್ಳುವವನೇ ಬ್ರಾಹ್ಮಣನಾಗುತ್ತಾನೆ. ಬ್ರಾಹ್ಮಣನಾದವನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಸತ್ಕರ್ಮದ ಫಲವಾಗಿ ಪಡೆದಿರುವ ಈ ಬ್ರಾಹ್ಮಣ ಜನ್ಮವನ್ನು ಪವಿತ್ರಗೊಳಿಸಿಕೊಂಡು, ಸಾರ್ಥಕಗೊಳಿಸುವ ಬಗೆ ಹೇಗೆ? ಎಂಬುದು ಈ ಯಕ್ಷಪ್ರಶ್ನೆಯ ಆಶಯವಾಗಿದೆ. ಸಂಪಾದಿಸಿದ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕಾದರೆ ಕುಲದಿಂದಲೋ? ವೇದಾಧ್ಯಯನದಿಂದಲೋ? ವಿದ್ಯೆಯಿಂದಲೋ? ಉತ್ತಮ ನಡತೆಯಿಂದಲೋ? ಎಂಬುದಾಗಿ ಯಕ್ಷ ಪ್ರಶ್ನೆಯನ್ನು ಕೇಳುತ್ತಾನೆ. ಇವುಗಳಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಸದಾಚಾರ ಅಥವಾ ನಡತೆಯಿಂದ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಲು ಸಾಧ್ಯ ಎಂಬುದಾಗಿ ಧರ್ಮರಾಜನು ಉತ್ತರವನ್ನು ಕೊಡುತ್ತಾನೆ. ಉಳಿದ ವಿಚಾರಗಳು ಬೇಡವೆಂದರ್ಥವಲ್ಲ. ಉಳಿದವುಗಳಿಗೆ ಬೆಲೆ ಅಥವಾ ಮೌಲ್ಯವು ಬರಬೇಕಾದರೆ ಅಥವಾ ಇರಬೇಕಾದರೆ ಈ 'ಸದಾಚಾರ' ಎಂಬ ಗುಣ ಇದ್ದಾಗ ಮಾತ್ರ ಸಾಧ್ಯ ಎಂಬುದು ಉತ್ತರದ ಆಶಯವಾಗಿದೆ. ಬ್ರಾಹ್ಮಣ ಕುಲದಲ್ಲಿ ಹುಟ್ಟಿದವನು, ಕೇವಲ ವೇದಾಧ್ಯಯನವನ್ನು ಮಾಡಿದರೆ ಅಥವಾ ಒಂದಷ್ಟು ವಿದ್ಯೆಯನ್ನು ಗಳಿಸಿದರೆ ಸಾಕು; ಅದು ಬ್ರಾಹ್ಮಣ್ಯವನ್ನು ಉಳಿಸುತ್ತದೆ ಎಂಬುದು ಭ್ರಮೆಗೆ ವಿಷಯ ಅಷ್ಟೆ. ವೇದಾಧ್ಯಯನ ಸಂಪನ್ನನಾಗಿ ಸದಾಚಾರವನ್ನು ಆತ ಮೈಗೂಡಿಸಿಕೊಳ್ಳದಿದ್ದರೆ ಅದಕ್ಕೆ ಅಪಮೌಲ್ಯವೇ ಸರಿ. ಆದ್ದರಿಂದ ಕೇವಲ ವಿದ್ಯೆ ಅಥವಾ ವೇದಾಧ್ಯಯನ ಇವುಗಳು ಮಾತ್ರ ಬ್ರಾಹ್ಮಣ್ಯವನ್ನು ಉಳಿಸುವಂತಹದ್ದಲ್ಲ. ಆಚಾರವಿಲ್ಲದಿದ್ದರೆ ಸಂಪಾದಿಸಿದ ವೇದ ಅಥವಾ ವಿದ್ಯೆಯೆಂಬ ರತ್ನವೂ ತನ್ನ ಮೌಲ್ಯವನ್ನು ಕಳೆದುಕೊಂಡಂತೆಯೇ.
ಹಾಗಾಗಿ ಆಚಾರಕ್ಕೆ ಆದ್ಯತೆ ಕೊಡಲಾಗಿದೆ. ಹೆಚ್ಚೆಕೆ ನಮ್ಮ ಭಾರತೀಯ ಸಂಸ್ಕೃತಿ - ಪರಂಪರೆ ಉಳಿದಿದ್ದೇ ಆಚಾರದಿಂದಲೇ ಹೊರತು, ವಿಚಾರದಿಂದ ಅಲ್ಲ. ವಿಚಾರವು ಆಚಾರದ ಜೊತೆಯಲ್ಲಿ ಇದ್ದಾಗ ಮಾತ್ರ ಅದಕ್ಕೆ ಬೆಲೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಶ್ರೀರಂಗಮಹಾಗುರುಗಳು ಆಚಾರ್ಯ ಎಂಬ ಪದವನ್ನು ವಿವರಣೆ ಕೊಡುವಾಗ "ಆಚಿನೋತಿ ಹಿ ಶಾಸ್ತ್ರಾಣಿ ಆಚಾರೇ ಸ್ಥಾಪಯತ್ಯಪಿ। ಸ್ವಯಮ್ ಆಚರತೇ ಯಸ್ತು ತಸ್ಮಾತ್ ಆಚಾರ್ಯ ಉಚ್ಯತೇ" ಎಂಬ ಶ್ಲೋಕವನ್ನು ಉದಾಹರಿಸುತ್ತಿದ್ದರು. ಶಾಸ್ತ್ರವನ್ನು ಓದಿ ಸ್ವತಃ ತಾನೂ ಆಚರಣೆಯಲ್ಲಿ ಇಟ್ಟುಕೊಂಡವನು ಮಾತ್ರ ಆಚಾರ್ಯನಾಗಬಲ್ಲ ಎಂಬ ಮಾತನ್ನು ಪುನರುಚ್ಚರಿಸುತ್ತಿದ್ದರು. ಆಚಾರವಿಲ್ಲದಿದ್ದರೆ ವಿಚಾರಕ್ಕೆ ಸಾಂಗತ್ಯವಿಲ್ಲದಂತಾಗುತ್ತದೆ. ಇದೇ ಯಕ್ಷಪ್ರಶ್ನೆಯ ಸಂದರ್ಭದಲ್ಲಿ ಧರ್ಮರಾಜನು "ಯಃ ಕ್ರಿಯಾವಾನ್ ಸಃ ಪಂಡಿತಃ' ಎಂಬ ಮಾತಿನಿಂದ ಉತ್ತರವನ್ನು ವಿವರಿಸುತ್ತಾನೆ. ಒಂದು ವೇಳೆ ವಿಚಾರವಿಲ್ಲದಿದ್ದರೂ ಆಚಾರ ಒಂದಿದ್ದರೆ ಸಾಕು; ಅದು ಆ ವ್ಯಕ್ತಿಯನ್ನು ಪವಿತ್ರಗೊಳಿಸುತ್ತದೆ ಎಂಬುದಾಗಿ ಶಾಸ್ತ್ರಗಳು ಸಾರುತ್ತವೆ. 'ಆಚಾರಾತ್ ಪ್ರಭಾವಃ ಧರ್ಮಃ; ಆಚಾರಹೀನಂ ನ ಪುನಂತಿ ವೇದಾಃ' ಇತ್ಯಾದಿ ವಾಕ್ಯಗಳು ಆಚಾರಗಳಿಗೆ ಪ್ರಾಧಾನ್ಯವನ್ನು ಕೊಡುವುದನ್ನು ಕಾಣುತ್ತೇವೆ. ಕುಲ ಮೊದಲಾದವುಗಳು ಬ್ರಾಹ್ಮಣ್ಯವನ್ನು ಸದೃಢಗೊಳಿಸಬಲ್ಲವು. ಆದರೆ ಈ ಸದಾಚಾರ ಅಥವಾ ನಡತೆ ಎಂಬುದು ಆಚರಣೆಯಿಂದ ಸಂಪಾದಿಸಿದ ಬ್ರಾಹ್ಮಣ್ಯವು ನೈಜಾರ್ಥದಲ್ಲಿ ಬ್ರಾಹ್ಮಣ್ಯವಾಗಿರುತ್ತದೆ. ಆಚಾರದಿಂದ ಮಾತ್ರವೇ ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳಲು ಸಾಧ್ಯ. ಬ್ರಾಹ್ಮಣ್ಯ ಎಂಬುದು ಬ್ರಾಹ್ಮಣಲ್ಲಿ ಇರುವ ಅತಿ ವಿಶಿಷ್ಟವಾದ ಗುಣವಾಗಿ ಉಳಿಯಬೇಕಾದರೆ ಆಚಾರದಿಂದ ಮಾತ್ರ ಎಂಬುದು ಉತ್ತರದಿಂದ ಸಿಗುವ ವಿಚಾರವಾಗಿದೆ.
ಸೂಚನೆ : 13/10/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.