Sunday, October 19, 2025

ಕೃಷ್ಣಕರ್ಣಾಮೃತ 78 ಕತ್ತಲಾಗಿಸಿ ಬೆಣ್ಣೆ ಕದ್ದವನೆಮ್ಮ ಕತ್ತಲ ಕಳೆಯಲಿ (Krishakarnamrta 78)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಗೋಪಾಲಬಾಲನು ಕಾಪಾಡಲಿ. ಎಂತಹವನು ಈ ಬಾಲಗೋಪಾಲ? ಅದನ್ನು ಒಂದು ಪ್ರಸಂಗದ ಮೂಲಕ ಕವಿ ಹೇಳಿದ್ದಾನೆ. ಬೆಳಗ್ಗೆ ಬೇಗನೇಳುತ್ತಲೇ ಕೃಷ್ಣನ ಚೇಷ್ಟಿತವೇನೆಂಬುದನ್ನೂ ಚಿತ್ರಿಸಿದ್ದಾನೆ.

ಹಿಂದೆಯೆಲ್ಲಾ ಹಳ್ಳಿಗಳಲ್ಲಿ - ಪಟ್ಟಣಗಳಲ್ಲಿ ಸಹ - ಬೆಳಗಾಗುತ್ತಲೇ ಮೊಸರನ್ನು ಗಡಿಗೆಗೆ ಹಾಕಿಕೊಂಡು, ಕಡೆಗೋಲಿಗೆ ಹಗ್ಗವನ್ನು ಕಟ್ಟಿ ಮೊಸರನ್ನು ಕಡೆಯುತ್ತಿದ್ದರು. ಎಡಗೈಲೊಮ್ಮೆ ಬಲಗೈಲೊಮ್ಮೆ ಹಗ್ಗವನ್ನು ಸೆಳೆದು ಹೀಗೆ ಮಥನ ಮಾಡುತ್ತಿದ್ದಾಗ ಗೇರ್ ಗೇರ್ ಎಂಬ ಸದ್ದು ಬರುತ್ತಿತ್ತು.

ಮಕ್ಕಳು ಮಲಗಲು ಲಾಲಿ ಹೇಳುವುದುಂಟಲ್ಲವೇ? ಮಲಗಲೊಂದು ದನಿಯಾದರೆ ಏಳಲೂ ಒಂದು ದನಿ! ಬೆಣ್ಣೆಯೆಂದರೆ ಹಾತೊರೆವ ಪುಟ್ಟಕೃಷ್ಣನಿಗೆ ಹೀಗೆ ದಧಿಯನ್ನು, ಎಂದರೆ ಮೊಸರನ್ನು, ಕಡೆಯುವ ಧ್ವನಿಗೇ ಎಚ್ಚರವಾಗಿಬಿಡುತ್ತಿತ್ತು!

ನವವಾಗಿ, ಎಂದರೆ ಹೊಸತಾಗಿ, ತೆಗೆದ ಬೆಣ್ಣೆಗೆ ತಾನೆ ನವ-ನೀತವೆನ್ನುವುದು? ಹೀಗೆ ದಧಿ-ಮಥನದ ಈ ನಿನಾದದಿಂದಲೇ, ಎಂದರೆ ಸದ್ದಿನಿಂದಲೇ, ಕೃಷ್ಣನಿಗೆ ಎಚ್ಚರವಾಗುತ್ತಿದ್ದುದು.

ಹೀಗೆ ನಿದ್ದೆ ಕಳೆದ ಕೃಷ್ಣನು ಮಾಡುತ್ತಿದ್ದುದೇನು? ನಿಭೃತವಾದ - ಅರ್ಥಾತ್ ಸದ್ದೇ ಇಲ್ಲದ - ಹೆಜ್ಜೆಗಳಿಂದ ನಡೆಯುತ್ತ ಪ್ರವೇಶಿಸುತ್ತಿದ್ದನು - ವಲ್ಲವಿಯರ ಅಗಾರಗಳನ್ನು, ಎಂದರೆ ಗೊಲ್ಲತಿಯರ ಮನೆಗಳನ್ನು.

ವಾಸ್ತವವಾಗಿ ಆಗಿನ್ನೂ ಬೆಳಗಿನ ಜಾವ. ಆ ಪ್ರಭಾತಸಮಯದಲ್ಲಿ ಇನ್ನೂ ಒಂದಿಷ್ಟು ಕತ್ತಲೆಯೇ. ಎಂದೇ ವಲ್ಲವಿಯರು ದೀಪಗಳನ್ನು ಅಲ್ಲಲ್ಲಿ ಹಚ್ಚಿಟ್ಟುಕೊಂಡಿದ್ದು ತಮ್ಮಕೆಲಸಗಳನ್ನು ಮಾಡಿಕೊಳ್ಳುತ್ತಿರುವರು. ಮೊಸರು ಕಡೆಯುವಾಗಲೂ ದೀಪಗಳು ಜೊತೆಗಿರತಕ್ಕವೇ. ಕೃಷ್ಣನು ಸ್ವಲ್ಪ ಕಪ್ಪೇ ಆದರೂ, ಆ ಬೆಳಕುಗಳಿರುವಾಗ ಕಾಣುವುದೇ ಇಲ್ಲವೆಂದೇನಲ್ಲವಲ್ಲ? ಅವಿದ್ದರೆ ತಾನು ಸಿಕ್ಕಿಹಾಕಿಕೊಳ್ಳಬಹುದೇನೋ? – ಎಂಬ ಎಚ್ಚರ ಈ ಪೋರನಿಗಿರದೇ? ಎಳೆಯವನಾದರೂ ಅಷ್ಟು ಜಾಣತನಕ್ಕೇನೂ ಕಡಿಮೆಯಿಲ್ಲ, ಈ ಕಳ್ಳಹೆಜ್ಜೆಯ ಕೃಷ್ಣನಿಗೆ.

ಎಲ್ಲ ಕಳ್ಳರಿಗೂ ತಮ್ಮ ಕೆಲಸವನ್ನು ಅರಂಭಿಸುವ ಮುಂಚೆ ಎರಡು ಎಚ್ಚರಗಳು ಇದ್ದೇ ಇರುತ್ತವೆ. ತಾನು ಹೇಗೆ ಯಾರ ಕಣ್ಣಿಗೂ ಬೀಳಬಾರದು, ಹಾಗೂ ಸಿಕ್ಕಿಕೊಳ್ಳಲೇಬಾರದು - ಎಂಬುದೊಂದು. ಮತ್ತು ಎರಡನೆಯದು, ತಾನು ಸಿಕ್ಕಿಬೀಳುವಂತಾದರೂ ಥಟ್ಟನೆ ತಪ್ಪಿಸಿಕೊಂಡು ಓಡಿಹೋಗುವುದು ಹೇಗೆ? - ಎಂಬುದು. ಎಂದೇ ಈ ಅತಿಜಾಣ ಕೃಷ್ಣನೇನು ಮಾಡಿದ್ದಾನೆ? ಉಫ್- ಎಂದು ದೀಪಗಳನ್ನು ಊದಿ ಆರಿಸಿದ್ದಾನೆ. ತನ್ನ ಬಾಯುಸಿರಿನಿಂದ ಬೇಗಬೇಗನೆ ನಂದಿಸಿದ್ದಾನೆ, ದೀಪಗಳನ್ನು.

ಎಷ್ಟಾದರೂ ಬಂದ ಕೆಲಸ ಬೇಗನೆ ಆಗಬೇಕಲ್ಲವೇ? ಇನ್ನೂ ಎಷ್ಟೆಷ್ಟು ಕಡೆ ಹೋಗಿ ಮಾಡಬೇಕಾದ ಇಂತಹವೇ ಮುಖ್ಯಕೆಲಸಗಳಿವೆಯೋ! ವಿಳಂಬವಾಗಿಬಿಟ್ಟಲ್ಲಿ, ಬೆಳಕು ಹರಿದಷ್ಟೂ ಸಿಕ್ಕಿಕೊಳ್ಳುವ ಸಂಭವವೂ ಹೆಚ್ಚೇ ಆಗುವುದಲ್ಲವೇ ಎಷ್ಟಾದರೂ?

ಈ ಸಂದರ್ಭದಲ್ಲೂ ಕವಿಯ ಮನಶ್ಚಕ್ಷುಸ್ಸಿಗೆ - ಎಂದರೆ ಮನಸ್ಸೆಂಬ ಕಣ್ಣಿಗೆ - ಮುದ್ದು ಬಾಲನ ಮುದ್ದು ಮುಖ ಗೋಚರವಾಗಿದೆ. ಹೇಗಿದೆ ಅದು? ಕಮಲದಂತಿರುವ ಮುಖವದು! ಅದರಿಂದ ಹೊಮ್ಮಿದ ಸಮೀರದಿಂದ ದೀಪವನ್ನಾರಿಸಿದ್ದಾನೆ. ಸಮೀರವೆಂದರೆ ವಾಯು.

ಆಮೇಲಿನ್ನೇನು? ದೀಪ ನಂದಿಸಿ ನವನೀತವನ್ನು ಕಬಳಿಸಿದ್ದಾನೆ.

ಹಾಗೆ ಗಬಗಬನೆ ಬೆಣ್ಣೆ ಮುಕ್ಕಿರುವ ಈ ಮುದ್ದುಮೊಗದ ಗೋಪಾಲಬಾಲನು ಕಾಪಾಡಲಿ - ಎಂದು ಶ್ಲೋಕವನ್ನು ಮುಗಿಸಿದ್ದಾನೆ, ಲೀಲಾಶುಕ.

ಶ್ಲೋಕ ಹೀಗಿದೆ:
ದಧಿ-ಮಥನ-ನಿನಾದೈಃ ತ್ಯಕ್ತ-ನಿದ್ರಃ ಪ್ರಭಾತೇ /
ನಿಭೃತ-ಪದಂ ಅಗಾರಂ ವಲ್ಲವೀನಾಂ ಪ್ರವಿಷ್ಟಃ |
ಮುಖಕಮಲ-ಸಮೀರೈಃ ಆಶು ನಿರ್ವಾಪ್ಯ ದೀಪಾನ್ /
ಕವಳಿತ-ನವನೀತಃ ಪಾತು ಗೋಪಾಲಬಾಲಃ ||

*****

ಕೃಷ್ಣನ ಆಟ ನಮ್ಮನ್ನು ಪೋಷಿಸಲಿ - ಎಂದು ಕೇಳಿಕೊಳ್ಳುತ್ತಾನೆ, ಕವಿ ಲೀಲಾಶುಕ. ಯಾವ ಆಟವದು? ಅದು ಕಟಾಕ್ಷ-ಕೇಲಿ, ಓರೆಗಣ್ಣಿನ ಆಟ. ಆ ಕಟಾಕ್ಷದ ಹಿಂದಿರುವುದು ಆತನ ಕಾರುಣ್ಯ. ಆತನ ಕರುಣಾ-ಕಟಾಕ್ಷವು ರಕ್ಷಕವು ಮಾತ್ರವಲ್ಲ, ಪೋಷಕವೂ ಹೌದು.

ಎಂತಹವನು ನಮ್ಮ ಕೃಷ್ಣ? ಆತನು ದಯಾರಾಶಿ. ರಾಶಿಯೇನು, ಸಮುದ್ರವೇ. ದಯೆಯೊಂದೇ ಆತನಲ್ಲಿರುವುದು. ಎಂದೇ ದಯೈಕಸಿಂಧು ಅವನು. ಸಿಂಧುವೆಂಬ ನದಿಯುಂಟು. ಸಿಂಧುವೆಂದರೆ ಸಮುದ್ರವೂ ಹೌದಲ್ಲವೇ? ಇಲ್ಲಿ ಎರಡನೆಯದೇ, ಸಾಗರವೆಂಬ ಅರ್ಥವೇ, ಅನ್ವಿತ. ಹಾಗಾಗಿ, ಪುಣ್ಯಶಾಲಿಗಳ ಮಟ್ಟಿಗೆ ಆತನು ದಯಾಮಾತ್ರಸಾಗರನೇ.

ಆದರೆ ಅಯ್ಯೋ, ಅತನು ನಮ್ಮ ಮನಸ್ಸಿನ ಮೇಲೆ ಹೇಗೆ ತಾನೆ ಕೆಲಸಮಾಡಿಯಾನು? ಸಾಧ್ಯವಾಗದು. ಏಕೆ? ನಮ್ಮ ಚಿತ್ತವು ತೃಷ್ಣೆಯಿಂದ ಆತುರವಾಗಿದೆ. ಆತುರವೆಂದರೆ ಬೇಗಬೇಗನೆ - ಎಂಬ ಅರ್ಥ, ಕನ್ನಡದಲ್ಲಿ. ಸಂಸ್ಕೃತದಲ್ಲಿಯ ಅರ್ಥವೇ ಬೇರೆ. ಅತುರವೆಂದರೆ ರುಗ್ಣ, ರೋಗಕ್ಕೆ ತುತ್ತಾಗಿರುವಂತಹುದು, ಪೀಡಿತವಾಗಿರುವುದು. ಆಸೆಯೆಂಬುದೇ ರೋಗ. ಹೀಗೆ ತೃಷ್ಣೆಯಿಂದ ಆತುರವಾಗಿದೆ, ನಮ್ಮ ಚಿತ್ತ. ಆಸೆಗಳೆಂಬ ರೋಗಗಳು ಬೇರುಬಿಟ್ಟಿವೆ ಚಿತ್ತದಲ್ಲಿ. "ಇಷ್ಟು ಸಿಕ್ಕರೆ ಮತ್ತಷ್ಟು ಬೇಕೆಂಬಾಸೆ" – ಎಂದು ದಾಸರು ಚಿತ್ರಿಸಿದ್ದಾರಲ್ಲವೇ? ಆಸೆಗೇನು ಅಂತವುಂಟೇ? ಆಸೆಯಿಲ್ಲದ ಕ್ಷಣವುಂಟೇ?

ಅಂತಹ ಚಿತ್ತದಲ್ಲಿ ಏನು ವಿಜೃಂಭಿಸುವುದು? ಮತ್ತೇನು, ಅಂಧಕಾರವೇ ಸರಿ. ಅದೇನು ಕಡಿಮೆ ಕತ್ತಲೆಯೇ? ಅದು ಮಹಾಂಧಕಾರವೇ ಹೌದು, ಕಗ್ಗತ್ತಲೇ ಅದು.

ಚಿತ್ತದಲ್ಲಿ ಕತ್ತಲೆಂದರೆ ಅದೊಂದು ರೂಪಕವಷ್ಟೆ. ಯಾವುದಾ ಕತ್ತಲೆ? ಮೋಹವೇ ಮಹಾಂಧಕಾರ. ತೃಷ್ಣೆಯೆಲ್ಲಿಯ ತನಕ ಇರುವುದೋ ಮೋಹವೂ ಅಲ್ಲಿಯ ತನಕ ಇರುವುದೇ. ಯಾವುದರ ಬಗ್ಗೆ ಆಸೆಯೋ ಅದರ ಬಗೆಗಿನ ಸೆಳೆತವೂ ಬಿಗಿಯೇ. ಶಿಶುಮೋಹ, ಸತಿಮೋಹ – ಎಂದು ಮುಂತಾಗಿ ಅಷ್ಟಮೋಹಗಳನ್ನು ಪಟ್ಟಿಮಾಡುವುದುಂಟಲ್ಲವೇ? ಎಂದೇ, ಅದನ್ನು ಆಗಾಗ ಸರಿಪಡಿಸಲೆಳಸಿದರೂ ಮತ್ತೆ ಮತ್ತೆ ವಿಜೃಂಭಿಸುವುದೇ ಅದು. ಹೇಗೆ ಕತ್ತರಿಸಿದರೂ ವರ್ಧಿಸುತ್ತಿರುವಂತಹುದು, ಈ ಮೋಹ. ಜೃಂಭಮಾಣವೆಂದರೆ ಬೆಳೆಯುತ್ತಿರುವುದೇ, ತಿಂದುಹಾಕಲು ಬಾಯ್ಬಿಡುತ್ತಿರುವುದೇ, ಕಬಳಿಸಲು ಹೊಂಚುತ್ತಿರುವುದೇ.

ಆ ಮೋಹವನ್ನು ಕಿತ್ತೆಸೆದರೆ, ಪರಿಣಾಮವಾಗಿ ಆಶಾಪೀಡೆಯು ತೊಲಗಿದರೆ, ಆತನ ಅಪಾಂಗಲೀಲೆಯು ಆಗ ಕೆಲಸ ಮಾಡೀತು. ಹಾಗೆಂದು ತೋರುವುದೇನೋ ಸರಿಯೇ. ಅದಕ್ಕಾಗಿ ಯತ್ನಿಸಿ ಯತ್ನಿಸಿ ಸೋಲುವುದಷ್ಟೆ ನಮ್ಮ ಪಾಡು! ಆತನೇ ಅದನ್ನು ಕೀಳಬೇಕು. ಅತನೇ ಈ ಮೋಹವೆಂಬ ಕಗ್ಗತ್ತಲನ್ನು ಕಿತ್ತು ಬಿಸಾಡಬೇಕು.

ಕದಿಯುವ ಕಲೆ ಕರಗತವಾಗಿದೆಯಲ್ಲವೇ, ಕೃಷ್ಣನಿಗೆ? ನಮಗೆ ತಿಳಿಯದಂತೆಯೇ ಅದನ್ನು ತಾನೇ ಹೊರಸಾಗಿಸಿ ತನ್ನ ಕಟಾಕ್ಷವನ್ನು ಬೀರಲಿ - ಎಂದಿಲ್ಲಿ ಬೇಡಿಕೊಂಡಿದೆ.

ಒಟ್ಟಿನಲ್ಲಿ, ಲೋಭ-ಮೋಹಗಳು ನಮ್ಮನ್ನು ಕಾಡಿಸುವುವಲ್ಲವೇ? ಅರಿ-ಷಡ್ವರ್ಗದಲ್ಲಿ ಮೂರನೆಯ ಮತ್ತು ನಾಲ್ಕನೆಯವು ಅವು. ಅವೆರಡನ್ನೂ ಮೊದಲೆರಡು ಪಾದಗಳಲ್ಲಿ ಸೂಚಿಸಿದೆ. ಅವನ್ನು ಹೋಗಲಾಡಿಸಿ ತನ್ನ ಕಡೆಗಣ್ಣೋಟವನ್ನು ಬೀರಲಿ - ಎಂಬ ಕೇಳ್ಕೆಯಿಲ್ಲಿದೆ.

ಶ್ಲೋಕದ ದ್ವಿತೀಯಾಕ್ಷರಪ್ರಾಸ ಸುವೇದ್ಯವಾಗಿದೆ. ಪ್ರಥಮಪಾದ-ತೃತೀಯಪಾದಗಳಲ್ಲಿಯ ತೃಷ್ಣಾ/ಪುಷ್ಣಾ-ಪದಗಳೂ ದ್ವಿತೀಯಪಾದ-ಚತುರ್ಥಪಾದಗಳಲ್ಲಿಯ ಮುಷ್ಣ/ಕೃಷ್ಣಗಳೂ ಅನುಪ್ರಾಸಾರ್ಥವಾಗಿಯೇ.

ಶ್ಲೋಕ ಹೀಗಿದೆ:

ತೃಷ್ಣಾತುರೇ ಚೇತಸಿ ಜೃಂಭಮಾಣಂ /
ಮುಷ್ಣನ್ ಮುಹುಃ ಮೋಹ-ಮಹಾಂಧಕಾರಂ |
ಪುಷ್ಣಾತು ನಃ ಪುಣ್ಯ-ದಯೈಕ-ಸಿಂಧೋಃ /
ಕೃಷ್ಣಸ್ಯ ಕಾರುಣ್ಯ-ಕಟಾಕ್ಷ-ಕೇಲಿಃ ||

ಸೂಚನೆ : 18/10/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.