Thursday, October 2, 2025

ನವರಾತ್ರ - 8 (Navaratra - 8)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)


ಮೊದಲ ಮೂರು ರಾತ್ರಿಗಳಲ್ಲಿ ಲಕ್ಷ್ಮಿಯ ಪೂಜೆಯನ್ನು ಅನಂತರದ ಮೂರು ರಾತ್ರಿಗಳಲ್ಲಿ ಸರಸ್ವತಿಯ ಪೂಜೆಯನ್ನು ನಿರ್ವಹಿಸಿ ಇಂದಿನಿಂದ ಪ್ರಾರಂಭಿಸಿ ಮೂರು ದಿನಗಳ ಪರ್ಯಂತ ದುರ್ಗಾ ಮಹಾಶಕ್ತಿಯನ್ನು ಪೂಜಿಸಬೇಕು. ಈ 9 ದಿವಸಗಳ ಪರ್ಯಂತವೂ ಚಂಡೀ ಸಪ್ತಶತಿಪಾಠ, ನಾರಾಯಣಹೃದಯ ಪಾಠ, ಲಕ್ಷ್ಮಿ ಹೃದಯಪಾಠ ಇತ್ಯಾದಿಗಳನ್ನು ಮಾಡುವುದಾಗಿ ಸಂಕಲ್ಪಿಸಿ ಪಾರಾಯಣವನ್ನು ಮಾಡಬೇಕು. ಪಾರಾಯಣದ ನಿಯಮಗಳೆಂದರೆ, ಮಧ್ಯದಲ್ಲಿ ಎದ್ದು ಹೋಗಬಾರದು, ಪಾರಾಯಣವನ್ನು ನಿಲ್ಲಿಸಬಾರದು, ಅರ್ಥವನ್ನು ತಿಳಿದು ಸ್ಪಷ್ಟವಾದ ಉಚ್ಚಾರಣೆ, ರಸ-ಭಾವ-ಸ್ವರಸಹಿತವಾಗಿ ಪಾರಾಯಣವನ್ನು ಮಾಡಬೇಕು. ಹಾಗಾಗಿ ಈ ಮಂತ್ರಗಳ ದೀಕ್ಷೆಯನ್ನು ಪಡೆದು ಅಭ್ಯಾಸ ಮಾಡಿದವರಿಂದ ಇವುಗಳನ್ನು ಮಾಡಿಸುವುದು ಉತ್ತಮ. ಹಾಗೆ ಪಾರಾಯಣವು ನಡೆಯುತ್ತಿರುವಾಗ ಅತ್ಯಂತ ಶ್ರದ್ಧೆಯಿಂದ ಅದನ್ನು ಶ್ರವಣ ಮಾಡಬೇಕು..


ಕುಮಾರೀ ಪೂಜೆ

ಜಗನ್ಮಾತೆಯನ್ನು ಪುಟ್ಟ ಮಕ್ಕಳಲ್ಲಿ ಕಾಣುವ ಸಂಪ್ರದಾಯ ನಮ್ಮದು. ಎರಡನೇ ವರ್ಷದಿಂದ ಆರಂಭಿಸಿ ಹತ್ತು ವಯಸ್ಸಿನವರೆಗಿನ ಹೆಣ್ಣು ಮಕ್ಕಳನ್ನು 'ಕುಮಾರೀ' ಎಂದು ಕರೆಯುತ್ತಾರೆ. ಅವರನ್ನು ಜಗನ್ಮಾತೆಯ ಸ್ಥಾನದಲ್ಲಿ ಕುಳ್ಳಿರಿಸಿ ಅವರಲ್ಲಿ ಕ್ರಮವಾಗಿ ಕುಮಾರೀ, ತ್ರಿಮೂರ್ತಿ, ಕಲ್ಯಾಣೀ, ರೋಹಿಣೀ, ಕಾಲೀ, ಚಂಡಿಕಾ, ಶಾಂಭವೀ, ದುರ್ಗಾ, ಭದ್ರಾ ಎಂಬ ಒಂಭತ್ತು ದೇವಿಯರನ್ನು ಸಂಕಲ್ಪಿಸಿ ಅವಾಹಿಸಬೇಕು. ದುರ್ಗಾಪರಮೇಶ್ವರಿಯನ್ನು ಅವರಲ್ಲಿ ಭಾವಿಸಿ ಪೂಜಿಸಿ ಅವರ ಆಶೀರ್ವಾದವನ್ನು ಪಡೆಯಬೇಕು.

         ಏಳನೆಯ ದಿವಸದ ದೇವತೆ- ರಕ್ತಬೀಜಹಾ ದುರ್ಗೆ ಎಂಬುದಾಗಿ. ಅವಳ ಸ್ವರೂಪವು ಇಂತಿದೆ-


ರಕ್ತ ವರ್ಣಾದ್ಯಲಂಕಾರಾಂ

 ದ್ವಿಭುಜಾಂಬುಜ ಧಾರಿಣೀಮ್/

ಸಪ್ತಮ್ಯಾಂ ಪೂಜೆಯೇದ್ದೇವೀಂ

 ರಥಾರೂಢಾಂ ಪ್ರಯತ್ನತಃ//


        ಈ ದೇವಿಯು ಎರಡು ಭುಜಗಳುಳ್ಳವಳು. ಎರಡು ಭುಜಗಳಲ್ಲಿ ಎರಡು ಕಮಲಗಳನ್ನು ಧರಿಸಿರುವವಳು. ರಥದಲ್ಲಿ ಕುಳಿತವಳಾಗಿ ಕೆಂಪು ಮೊದಲಾದ ವರ್ಣಗಳಿಂದ ಕೂಡಿದ ಅಲಂಕಾರ ಸಾಮಗ್ರಿಗಳಿಂದ ಕಂಗೊಳಿಸುತ್ತಿರುವವಳು ಎಂಬುದು ವಿಶೇಷ. ನಾಳೆಯ ದಿವಸ ದುರ್ಗಾಷ್ಟಮೀ ಮಹಾ ಪರ್ವದಿವಸ. ಅದನ್ನು ಇದಿರು ನೋಡುತ್ತಾ ಮತ್ತೊಮ್ಮೆ ಜಗದಂಬೆಗೆ ನಮಸ್ಕಾರಗಳನ್ನು ಸಲ್ಲಿಸೋಣ.

ಸೂಚನೆ: 29/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.