Sunday, October 12, 2025

ಪ್ರಶ್ನೋತ್ತರ ರತ್ನಮಾಲಿಕೆ 33 (Prasnottara Ratnamalike 33)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೩೫. ಅಮೂಲ್ಯವಾದುದು ಯಾವುದು?

ಉತ್ತರ - ಸಮಯದಲ್ಲಿ, ಅಧಿಕಾರಿಗೆ ಕೊಟ್ಟಿದ್ದು.


ಈ ಪ್ರಶ್ನೆಯ ಆಶಯ ಹೀಗಿದೆ - ನಮ್ಮ ಬದುಕನ್ನು ಹಸನು ಮಾಡಿಕೊಳ್ಳುಲು ಸೃಷ್ಟೀಶನು ನಮಗೆ ಅನೇಕ ಪದಾರ್ಥಗಳನ್ನು ನೀಡಿದ್ದಾನೆ. ಅವುಗಳಲ್ಲಿ ಅನೇಕವು ನಮ್ಮ ಉಪಯೋಗಕ್ಕಾಗಿಯೇ ಇರುವಂತವು; ಇನ್ನು ಕೆಲವು ಬೇರೆಯವರಿಗೆ ಉಪಯೋಗಕ್ಕೆ, ನಾವು ಕೊಡಲು ಯೋಗ್ಯವಾದದ್ದು. ಇಂತಹ ಬದುಕಿನಲ್ಲಿ ಅಮೂಲ್ಯವಾದ ವಸ್ತು ಯಾವುದು? ಎಂಬುದು.

ಅದಕ್ಕೆ ಉತ್ತರ - ಸಕಾಲದಲ್ಲಿ - ಅವಶ್ಯಕತೆ ಇರುವಾಗ ಸರಿಯಾದ ವ್ಯಕ್ತಿಗೆ - ಯೋಗ್ಯನಾದ ವ್ಯಕ್ತಿಗೆ ಅಂದರೆ ಅಧಿಕಾರಿಗೆ ನಾವು ಯಾವುದನ್ನು ಕೊಡುತ್ತೇವೋ ಅದು ಅಮೂಲ್ಯವಾದ ವಸ್ತು ಎಂದು ಅನಿಸಿಕೊಳ್ಳುತ್ತದೆ. ಅಂತಹ ವಸ್ತುವನ್ನು ಮತ್ತು ಆ ವಸ್ತುವನ್ನು ಪಡೆದುಕೊಳ್ಳಲು ಯೋಗ್ಯನಾದ ವ್ಯಕ್ತಿಯನ್ನು ಆರಿಸಿಕೊಳ್ಳುವುದರಲ್ಲಿ ಜಾಣತನ ಇದೆ ಎಂಬ ಮಾರ್ಮಿಕವಾದ ವಿಷಯ ಇಲ್ಲಿ ಅಡಗಿದೆ. ಸಕಾಲದಲ್ಲಿ ಅಧಿಕಾರಿಗೆ ಕೊಟ್ಟಂತಹ ವಸ್ತು ಹೇಗೆ ಅಮೂಲ್ಯದದ್ದು? ಎಂಬುದನ್ನು ನಾವಿಲ್ಲಿ ಚಿಂತಿಸೋಣ.


ಅಮೂಲ್ಯ ಎಂದರೆ ಮೌಲ್ಯವನ್ನು ಎಣಿಸಲು ಆಗದ್ದು; ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ ಎಂದರ್ಥ. ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಬೆಲೆ ಇರುತ್ತದೆ ಮತ್ತು ಅದಕ್ಕೆ ಬೆಲೆಕಟ್ಟಲು ಸಾಧ್ಯವೂ ಆಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಆ ವಸ್ತುವು ಬೆಲೆಕಟ್ಟಲಾಗದ ವಸ್ತುವಾಗಿ ಪರಿಣಮಿಸುತ್ತದೆ. ಆಗ ಆ ವಸ್ತುವನ್ನು 'ಅಮೂಲ್ಯ' ಎಂಬುದಾಗಿ ಕರೆಯಲಾಗುತ್ತದೆ.

ವಸ್ತುವನ್ನು ಕೊಡಬೇಕು; ಅದಕ್ಕೆ 'ದಾನ' ಎಂಬುದಾಗಿ ಕರೆಯುತ್ತಾರೆ. ಆದರೆ ಕೊಟ್ಟಿದ್ದೆಲ್ಲವೂ ದಾನವಾಗುವುದಿಲ್ಲ. ಸರಿಯಾದ ವ್ಯಕ್ತಿಗೆ ಅಂದರೆ ಅಧಿಕಾರಿವ್ಯಕ್ತಿಗೆ ಕೊಟ್ಟಾಗ ಮಾತ್ರ ಅದು ದಾನ ಎಂಬುದಾಗಿ ಕರೆಸಿಕೊಳ್ಳುತ್ತದೆ. ದಾನ ಸಫಲವಾಗಲು ಪಾತ್ರನ ಪಾತ್ರತ್ವ ಬಹಳ ಮುಖ್ಯವಾದದ್ದು. ತುಂಬಿಸಬೇಕು, ಅಂದುಕೊಂಡಿರುವ ಪಾತ್ರೆಯೇ ತೂತಾಗಿದ್ದರೆ ಅಲ್ಲಿ ಯಾವ ಉತ್ತಮವಾದ ಪದಾರ್ಥವನ್ನು ಅಥವಾ ಅಮೃತವನ್ನು ಹಾಕಿದರೂ ಆ ಪಾತ್ರದಲ್ಲಿ ಒಂದು ಹನಿಯೂ ಉಳಿಯುವುದಿಲ್ಲ. ಅದೇ ಪಾತ್ರ ಸರಿಯಾಗಿದ್ದರೆ ಹಾಕಿದ ಒಂದೊಂದು ಬಿಂದುವೂ  ಉಪಯುಕ್ತವಾಗುತ್ತದೆ. ಹಾಲು ಉತ್ತಮವಾದದ್ದೇ ಆದರೂ ಕಿಲಿಬುವ ಪಾತ್ರದಲ್ಲಿ ಹಾಲನ್ನು ಹಾಕಿದರೆ ಅದು ಹಾಳಾಗುತ್ತದೆ. ಅಂದರೆ ವಸ್ತು ತನ್ನತನವನ್ನು ಕೆಡಿಸಿಕೊಳ್ಳದೇ ಇರಲು ಆ ಪಾತ್ರವು ಅಷ್ಟೇ ಅಚ್ಚುಕಟ್ಟಾಗಿ ಇರಬೇಕಾದದ್ದು ಅವಶ್ಯ. ಇದನ್ನೇ ಈ ಪ್ರಶ್ನೋತ್ತರದಲ್ಲಿ ಹೇಳಲಾಗಿದೆ. ಆದರೆ ಉತ್ತರದಲ್ಲಿ ಸ್ವಾರಸ್ಯವಿದೆ. 'ಸಮಯ' ಮತ್ತು 'ಅಧಿಕಾರಿ' ಎಂಬ ಎರಡು ಮುಖ್ಯವಾದ ಅಂಶ ಇಲ್ಲಿದೆ. ಅಂದರೆ ಹಸಿದಾಗ ಊಟವನ್ನು ಕೊಟ್ಟರೆ, ಅದನ್ನು ಪಡೆದವನಿಗೆ ತೃಪ್ತಿ; ಅಂತೆಯೇ ಕೊಟ್ಟವನಿಗೂ ದಾನದ ಫಲ. ಆದರೆ ಉಂಡವನಿಗೇ ಊಟ ಅದು ಎಷ್ಟು ರುಚಿ ಎನ್ನಿಸೀತೂ! ಅಲ್ಲಿ ಊಟ ಕೊಟ್ಟರೂ ಅದು ಸಮಯವೂ ಅಲ್ಲ; ಆತ ಅಧಿಕಾರಿಯೂ ಅಲ್ಲ. ಹಾಗಾಗಿ ಅದು ಅಮೂಲ್ಯ ಎನಿಸುವುದಿಲ್ಲ. ಹಸಿದವನಿಗೆ ಊಟ ಕೊಡಬೇಕು; ಹಸಿದಾಗ ಊಟ ಕೊಡಬೇಕು. ಆದ್ದರಿಂದ ಸಮಯ ಮತ್ತು ಅಧಿಕಾರಿ ಈ ಎರಡು ಸಂಗತಿಗಳು ಒಂದು ವಸ್ತುವನ್ನು ಅಮೂಲ್ಯವಾಗಿಸುತ್ತವೆ. ನಮ್ಮಲ್ಲಿ 'ವಸ್ತುವಿದೆ' ಎಂದು ಕೊಡುವುದು, ಆ ವಸ್ತುವಿಗೆ ಕೊಡುವ ಗೌರವ ಆಗುವುದಿಲ್ಲ. ಪ್ರಶ್ನೋತ್ತರದ ತಾತ್ಪರ್ಯವಿಷ್ಟು -ಪಾತ್ರ ಯಾರು? ಎಂಬುದನ್ನು ಗುರುತಿಸಿಕೊಳ್ಳಬೇಕು ಎಂದು."ನ ವಿದ್ಯಯಾ ಕೇವಲಯಾ ತಪಸಾ ವಾಪಿ ಪಾತ್ರತಾ" ಯತ್ರ ವೃತ್ತಮ್  ಇಮೇ ಚೋಭೇ ತದ್ಧಿ ಪಾತ್ರಂ ಪ್ರಕೀರ್ತಿತಮ್" ಎಂದು. ಅಂದರೆ ವಿದ್ಯೆ ಅಥವಾ ತಪಸ್ಸು ಉಳ್ಳವನು ಮಾತ್ರ ಪಾತ್ರನಲ್ಲ; ಯಾರಲ್ಲಿ ಇವೆರಡೂ ಇದೆಯೋ ಅವನೇ ನಿಜಾರ್ಥದಲ್ಲಿ ಪಾತ್ರ - ಯೋಗ್ಯ. ಅಂಥವನಿಗೆ ಕೊಟ್ಟ ಪ್ರತಿಯೊಂದು ವಸ್ತುವೂ ಅಮೂಲ್ಯವೇ. 

ಸೂಚನೆ : 12/10/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.