Sunday, November 24, 2024

ಯಕ್ಷ ಪ್ರಶ್ನೆ 115 (Yaksha prashne 115)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ –  114 ಆನಂದಿಸುವವನು ಯಾರು?

ಉತ್ತರ - ಹಗಲಿನ ಐದು ಅಥವಾ ಆರನೆ ಮುಹೂರ್ತದಲ್ಲಿ ಯಾವನು ತನ್ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾನೋ ಅವನು ಆನಂದಿಸುತ್ತಾನೆ

ಯಕ್ಷನು ಕೇಳುವ ಪ್ರಶ್ನೆಗೆ ಧರ್ಮರಾಜನ ವಿಚಿತ್ರವಾದ ಉತ್ತರ ಇಲ್ಲಿದೆ. ಈ ಉತ್ತರದಲ್ಲಿ ಊಟದ ವಿಷಯವಿದೆ, ಊಟವನ್ನು ಯಾವ ಹೊತ್ತಿನಲ್ಲಿ ಮಾಡಬೇಕು ಎನ್ನುವ ವಿಷಯ ಇದೆ, ಯಾವ ರೀತಿಯಾದ ಊಟವನ್ನು ಮಾಡಿದರೆ ಅವನು ಸುಖಿಯಾಗಿರುತ್ತಾನೆ ಎಂಬುದರ ಬಗ್ಗೆ ಮಾಹಿತಿ ಇದೆ, ಊಟವು ಆನಂದವನ್ನು ಉಂಟುಮಾಡುವ ಸಾಧನ ಎಂಬ ವಿಷಯವೂ ಕೂಡ ಇಲ್ಲಿ ಅಡಕವಾಗಿದೆ. "ಆನಂದಿಸುವವನು ಯಾರು?" ಎಂಬುದು ಪ್ರಶ್ನೆ. ಯಾವ ವ್ಯಕ್ತಿ ಹಗಲಿನ ಐದು ಅಥವಾ ಆರನೇ ಮಹೂರ್ತದಲ್ಲಿ ತನ್ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾನೋ ಅವನು ಆನಂದಿಸುತ್ತಾನೆ ಎಂಬುದು ಉತ್ತರ. 

ಒಂದು ದಿನದ ಹಗಲಿನಲ್ಲಿ ಗಂಟೆಗೆ ಒಂದರಂತೆ ಹದಿನೈದು ಮುಹೂರ್ತಗಳು ಇರುತ್ತವೆ ಎಂಬುದಾಗಿ ಜ್ಯೌತಿಷಶಾಸ್ತ್ರ ತಿಳಿಸುತ್ತದೆ. ಅಂದರೆ ಹಗಲು ಹನ್ನೆರಡು ತಾಸು ಎಂಬುದಾಗಿ ಇಟ್ಟುಕೊಂಡರೆ ಒಂದು ಗಂಟೆ ಹದಿನೈದು ನಿಮಿಷಕ್ಕೆ ಸಾಮಾನ್ಯವಾಗಿ ಒಂದು ಮುಹೂರ್ತ ಎಂಬುದಾಗಿ ತಿಳಿಯಬೇಕು. ಆಗ ಐದು ಅಥವಾ ಆರನೇ ಮುಹೂರ್ತವು ಸಾಮಾನ್ಯವಾಗಿ ಅದು ಹನ್ನೊಂದರಿಂದ ಒಂದು ಗಂಟೆಯ ಅವಧಿಯಲ್ಲಿ ಬರುತ್ತದೆ. ಒಂದು ದಿನದಲ್ಲಿ ಎರಡು ಹೊತ್ತು ಮಾತ್ರ ಊಟವನ್ನು ಮಾಡಬೇಕು ಅಥವಾ ಹೊಟ್ಟೆ ತುಂಬಾ (ಮಿತವಾಗಿ) ಊಟಮಾಡಬೇಕು ಎಂಬುದಾಗಿ ಆಯುರ್ವೇದಶಾಸ್ತ್ರ ಹೇಳುತ್ತದೆ - ಅಂದರೆ ಮಧ್ಯಾಹ್ನದ ಒಂದು ಊಟ, ಸಂಜೆಯ ಒಂದು ಊಟ. ಇದರಲ್ಲಿ ಮಧ್ಯಾಹ್ನದ ಊಟಕ್ಕೆ ವಿಶೇಷ ಪ್ರಾಧಾನ್ಯ ಇದೆ. ಹಾಗಾಗಿ ಈ ಮಧ್ಯಾಹ್ನದ ಊಟವನ್ನು ಇಲ್ಲಿ ವಿಶೇಷವಾಗಿ ಪರಿಗಣಿಸಲಾಗಿದೆ. ಹಗಲಿನ ಐದು ಅಥವಾ ಆರನೇ ಮುಹೂರ್ತವನ್ನು ಮಧ್ಯಾಹ್ನದ ಊಟದ ಮುಹೂರ್ತ ಎಂಬುದಾಗಿ ಹೇಳಲಾಗಿದೆ. ಮನೆಯಲ್ಲಿ ಮಾಡಿದ ಅಡಿಗೆಯಿಂದಲೇ ಊಟವನ್ನು ಮಾಡಿ ಮಾಡಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಿದೆ. 

ಯಾರು ಮನೆಯಲ್ಲಿ ಊಟ ಮಾಡುತ್ತಾನೋ ಅವನು ಅತ್ಯಂತ ಶುಚಿಯು ರುಚಿಯೂ ಆಗಿರುವ ಊಟವನ್ನು ಮಾಡಬಹುದು. ಬೇರೆ ಮನೆಯಲ್ಲಿ ಊಟ ಮಾಡಿದರೆ ಇದನ್ನು ನಿರೀಕ್ಷಿಸುವುದು ಕಷ್ಟವೆಂದರ್ಥ. ಅದಕ್ಕೆ ಒಂದು ಮಾತು ಕೂಡ ಇದೆ 'ಪರಾನ್ನಂ ಪ್ರಾಣಸಂಕಟಂ' ಎಂಬುದಾಗಿ. ಯಾರು ಬೇರೆಯವರ ಮನೆಯಲ್ಲಿ ಮಾಡುವ ಊಟವನ್ನೇ ಬಯಸುತ್ತಾರೋ ಅವರು ನರಕಭಾಜರಾಗುತ್ತಾರೆ ಎಂಬುದಾಗಿ ತಿಳಿಸುತ್ತದೆ ಧರ್ಮಶಾಸ್ತ್ರ. ಈ ಹಿಂದೆ ಸ್ವಪಾಕ ಎಂಬ ಒಂದು ವ್ಯವಸ್ಥೆ ಇತ್ತು. ಅಂದರೆ ತನ್ನ ಊಟಕ್ಕೆ ತಾನೇ ಪಾಕವನ್ನೂ ಮಾಡಿಕೊಳ್ಳಬೇಕು ಎಂಬುದಾಗಿ. ಅಂದರೆ ತನ್ನ ಮಡದಿ ಅಥವಾ ತಾಯಿ ಮಾಡಿದ ಅಡುಗೆಯಲ್ಲಿ ಕೇವಲ ರುಚಿ ಶುಚಿ ಮಾತ್ರವಿರದೆ, ಪ್ರೀತಿಯೂ ಸೇರಿರುವುದರಿಂದ ಇದಕ್ಕೆ ಬೆಲೆಯನ್ನು ಕಟ್ಟಲಾಗದು. ಆನಂದವು ಅನ್ನದಿಂದ ಸಿಗುತ್ತದೆ ಎಂಬುದನ್ನು ಉಪನಿಷತ್ತುಗಳು ಸಾರುತ್ತವೆ. ಇದು ಅನುಭವ ಸಿದ್ಧವೂ ಹೌದು. ಅನ್ನವನ್ನು ಊಟ ಮಾಡಿದರೆ ಯಾರಿಗೆ ತಾನೆ ತೃಪ್ತಿ ಸಿಗದು! ಆದ್ದರಿಂದ ಆನಂದಕ್ಕಾಗಿ ಎಂತಹ ಅನ್ನವನ್ನು? ಯಾವಾಗ? ಎಲ್ಲಿ ಸ್ವೀಕರಿಸಬೇಕು? ಎಂಬುದನ್ನು ಬಹಳ ಸೊಗಸಾಗಿ ವಿವರಿದ್ದಾನೆ ಧರ್ಮರಾಜ

ಸೂಚನೆ : 24/11/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.