ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ನಮ್ಮ ಸಂಪ್ರದಾಯದಂತೆ, ಯಾರೇ ಹಿರಿಯರಿಗೆ ನಾವು ವಂದಿಸಿದರೂ, ಅವರು ಸಾಧಾರಣವಾಗಿ ಆಶೀರ್ವಾದ ಮಾಡುವುದು "ದೀರ್ಘಾಯುಷ್ಮಾನ್ ಭವ" ಎಂದೇ. ಹೆಣ್ಣುಮಕ್ಕಳಿಗೆ ಮಾಡುವ ಆಶೀರ್ವಚನದಲ್ಲೂ ಈ ದೀರ್ಘಾಂಶವಿರುತ್ತದೆ. ಸಾವು ಸಮೀಪಿಸಿದೆಯೆಂದು ರೋಗಿಗೆ ಹೇಳಲು ವೈದ್ಯರೂ ಜ್ಯೋತಿಷಿಗಳೂ ಇಷ್ಟಪಡರಷ್ಟೆ. ಯಾರಿಗೆ ಸಾವಿಷ್ಟ?
ಇಷ್ಟಪಡುವವರೂ ಉಂಟು! ಸಾವು ಬಂದುಬಿಡಲಿ - ಎಂದು ಬಯಸುವ ಪ್ರಸಂಗಗಳೇ ಬರಬಹುದು. ಅವರಿವರೇನು, ಸಾಕ್ಷಾದ್ ವಸಿಷ್ಠರೇ ಆತ್ಮಹತ್ಯೆಗೊಮ್ಮೆ ಯತ್ನಿಸಿದ್ದರಂತೆ! ರಾಮಾಯಣದ ಸೀತೆ ಸಹ ತನ್ನ ಜೀವಿತವನ್ನು ಕೊನೆಗೊಳಿಸಬೇಕೆಂದು ಸಂಕಲ್ಪಿಸಿದ್ದಳಂತೆ!
ದೇಹಬಲವೋ ಬುದ್ಧಿಬಲವೋ ಕಡಿಮೆಯಿರುವವರಿಗೆ ಮಾತ್ರ ಹಾಗಾಗಬಹುದೆನ್ನಬೇಡಿ. ಏಕೆ? ಬುದ್ಧಿ-ಬಲಗಳಿಗೇ, ಧೈರ್ಯ-ನಿರ್ಭಯತೆಗಳಿಗೇ ಪ್ರಸಿದ್ಧನಾದ ಹನುಮಂತನೇ ಆತ್ಮಹತ್ಯೆಯ ಚಿಂತೆಮಾಡಿದ್ದನಂತೆ!
ಎಲ್ಲಿ? ರಾಮಾಯಣದ ಸುಂದರಕಾಂಡದಲ್ಲೀ ವಿಷಯವಿದೆ. ಹನುಮಂತನು ಸೀತೆಯನ್ನು ಎಲ್ಲೆಡೆ ಹುಡುಕಿ ಬವಣೆಪಟ್ಟನೇ ವಿನಾ, ಸೀತೆಯನ್ನು ಕಾಣದಾದನು. ಪಾನ-ಶಾಲೆ, ಪುಷ್ಪ-ಗೃಹ, ಚಿತ್ರ-ಶಾಲೆ, ಕ್ರೀಡಾ-ಗೃಹ, ಉದ್ಯಾನ-ವೀಥಿ - ಮುಂತಾದ ಹತ್ತಾರೆಡೆ ಹುಡುಕಾಡಿದನು. ವಿಕಾರಗಳುಳ್ಳ ರಾಕ್ಷಸಿಯರಷ್ಟೆ ಕಂಡದ್ದು. ವೈಫಲ್ಯದಿಂದಾಗಿ ಖೇದ-ಚಿಂತೆಗಳಿಗೊಳಗಾದನು:
"ರಾವಣನ ಹಿಂಸೆ ತಾಳಲಾರದೆ ಸೀತೆಯು ಆತನಿಗೆ ವಶಳಾಗಿಬಿಟ್ಟಿರಬಹುದೇ? ಅಥವಾ ರಾವಣನು ಹೊತ್ತೊಯ್ಯುತ್ತಿರುವಾಗ ಜಾರಿ ಬಿದ್ದುಹೋಗಿರಬಹುದೇ? ರಾವಣನೇನಾದರೂ ಆಕೆಯನ್ನು ತಿಂದುಹಾಕಿರಬಹುದೇ? ಅಯ್ಯೋ, ಅವಳು ದೊರೆಯಲಿಲ್ಲವೆಂದು ರಾಮನಿಗೆಂತು ಹೇಳಲಿ? ಹೇಳಿದರೆ ರಾಮನಂತೂ ಪ್ರಾಣಬಿಡುವವನೇ. ಲಕ್ಷ್ಮಣನು ಅಣ್ಣನನ್ನು ಅನುಸರಿಸುವವನೇ. ಇನ್ನು ಭರತನುಳಿಯುವನೇ? ಶತ್ರುಘ್ನ-ಕೌಸಲ್ಯಾದಿಗಳೂ, ಕೊನೆಗೆ ಸುಗ್ರೀವನೂ, ಇತರ ವಾನರರೂ ಅಷ್ಟೇ. ಇವೆಲ್ಲದರ ಬದಲಾಗಿ ಇತ್ತ ನಾನೇ ಅಗ್ನಿಪ್ರವೇಶಮಾಡಿಬಿಡಲೇ? "
ಇಷ್ಟು ಯೋಚಿಸಿದ ಬಳಿಕ ಆತನ ಚಿಂತನ-ಸರಣಿ ಬದಲಾಯಿತು. ಆತ್ಮಹತ್ಯೆ ಸರಿಯಲ್ಲ. ಬದುಕಿದ್ದರೇನೇ ಒಳ್ಳೆಯದನ್ನು ಕಾಣಲಾಗುವುದು. ಸೀತೆ ದೊರೆಯದಿದ್ದರೆ ರಾವಣ-ಸಂಹಾರವನ್ನಾದರೂ ಮಾಡಿಯೇ ಹಿಂದಿರುಗುತ್ತೇನೆ - ಎಂದಂದುಕೊಳ್ಳುತ್ತಾನೆ.
ಅಷ್ಟರಲ್ಲಿ ಅಶೋಕವನವು ಕಂಡು, ಅಲ್ಲಿ ಹುಡುಕಿಲ್ಲವೆಂಬುದು ಹೊಳೆಯಿತು. ರಾಮ-ಲಕ್ಷ್ಮಣ-ಸೀತೆಯರಿಗೂ ನಾನಾದೇವತೆಗಳಿಗೂ ವಂದಿಸಿ, ಅಲ್ಲಿಯ ಎತ್ತರದ ಶಿಂಶಪಾ-ವೃಕ್ಷವನ್ನೇರಿದನು. ಸೀತೆಯೀಗ ಕಂಡಳು.ಅಂತೂ ಪ್ರಾಣಬಿಡುವ ಸಂಕಲ್ಪವು ಹನುಮಂತನಿಗುಂಟಾಗಿತ್ತು.
ಇತ್ತ ಸೀತೆಯತ್ತ ಬಂದ ರಾವಣನು ನಾನಾ-ಪ್ರಲೋಭನೆಗಳನ್ನೊಡ್ಡಿದನು. ಸೀತೆಯೂ ಕಟುವಾಕ್ಯಗಳನ್ನಾಡಿದಳು. ಅವಳಿಗೆ ಕಡುಭಯವೊಡ್ಡಿ ಹಿಂದಿರುಗಿದನು, ರಾವಣ. ಸುತ್ತಲಿನ ರಾಕ್ಷಸಿಯರು ಸೀತೆಗುಪದೇಶ ಮಾಡಲೆಳಸಿ, ವಿಫಲರಾಗಿ, ಮತ್ತಷ್ಟು ಹೆದರಿಸಿದರು.
ಇವೆಲ್ಲದರಿಂದ ಖಿನ್ನಳಾದ ಸೀತೆಯು ಕಣ್ಣೀರು ಹರಿಸುತ್ತಾ, ರಾಮಲಕ್ಷ್ಮಣಾದಿಗಳನ್ನು ಸ್ಮರಿಸುತ್ತಾ, ತಾನಿನ್ನು ಬದುಕಿರಬಾರದೆಂದುಕೊಂಡಳು. ನೆಲದ ಮೇಲೆ ಹೊರಳಾಡುತ್ತಾ ಗೋಳಿಟ್ಟಳು. "ಅಯ್ಯೋ ಇಲ್ಲಿ ವಿಷವಾಗಲೀ, ಚೂಪಾದ ಶಸ್ತ್ರವಾಗಲೀ ದೊರೆಯುತ್ತಿಲ್ಲವಲ್ಲಾ, ಆತ್ಮಹತ್ಯೆ ಮಾಡಿಕೊಳ್ಳಲು!" - ಎಂದುಕೊಂಡಳು. ಅಷ್ಟರಲ್ಲಿ ತನಗೆ ಉದ್ದವಾದ ವೇಣಿ(ಜಡೆ)ಯಿರುವುದು ಹೊಳೆಯಿತು. ಶಿಂಶಪಾ-ವೃಕ್ಷಕ್ಕೆ ಇದನ್ನು ಕಟ್ಟಿಕೊಂಡು ನೇಣುಹಾಕಿಕೊಳ್ಳಬೇಕೆಂದುಕೊಂಡಳು.
ಅಷ್ಟರಲ್ಲಿ ಕೆಲವು ಶುಭ-ಶಕುನಗಳಾಗಿ, ಖೇದವು ಕಡಿಮೆಯಾಯಿತು. ಇದೇ ಸರಿಯಾದ ಸಮಯವೆಂದು ಚಿಂತಿಸಿ ಹನುಮಂತನು ಅವಳಿಗೆ ಕೇಳಿಸುವಂತೆ ರಾಮ-ಗುಣ-ಗಾನವನ್ನು ಮಾಡಿದನು. ಮೊದಲೇ ಭಯವಾವರಿಸಿದ್ದ ಸೀತೆಗೆ, ಇದೆಲ್ಲವನ್ನೂ ಕನಸಿನಲ್ಲಿ ಕಾಣುತ್ತಿದ್ದೇನೆಂಬ ಭ್ರಾಂತಿಯಾಯಿತು. ತನ್ನ ಒಳ ಆಸೆಗಳೇ ಹೀಗೆ ತೋರಿಕೊಳ್ಳುತ್ತಿವೆ - ಎಂದುಕೊಂಡಳು! ಅಷ್ಟರಲ್ಲಿ ಹನುಮಂತನು ಅವಳಿಗೆ ನಂಬುಗೆ ಬರಿಸುವ ಮಾತುಗಳನ್ನಾಡಿದನು. ಆಗಂದುಕೊಳ್ಳುತ್ತಾಳೆ ಸೀತೆ: ಬದುಕಿದ್ದರಲ್ಲವೇ ಆನಂದವು ಸಾಧ್ಯ? (ಏತಿ ಜೀವಂತಮಾನಂದಃ)
ರಾವಣನೇ ವೇಷಾಂತರದಲ್ಲಿ ಬಂದಿರಬಹುದೆಂದು ಸೀತೆಗೀಗಲೂ ಭಯವಾಯಿತಾದರೂ, ಹನುಮಂತನು ರಾಮ-ವೃತ್ತಾಂತವನ್ನು ಯಥಾವತ್ತಾಗಿ ಚಿತ್ರಿಸಿ ಅವಳಿಗೆ ಮತ್ತೂ ವಿಶ್ವಾಸವನ್ನುಂಟುಮಾಡಿದನು. ಮುಂದಿನದ್ದೆಲ್ಲಾ ಪ್ರಸಿದ್ಧವಾದ ಕಥೆಯೇ.
ಹೀಗೆ ಇವರಿಬ್ಬರಿಗೂ ಪ್ರಾಣತ್ಯಾಗಮಾಡಬೇಕೆನಿಸಿದುದುಂಟು. ದುಃಖಾತಿರೇಕವೂ, ದುಃಖಕ್ಕೆ ಕೊನೆಯೆಂಬುದೇ ಕಾಣದುದೂ ಉಂಟಾದಾಗ, ಆತ್ಮಹತ್ಯೆಯತ್ತ ಮನಸ್ಸು ಒಮ್ಮೊಮ್ಮೆ ಹರಿದುಬಿಡುವುದುಂಟು. ಕೆಲಕಾಲ ಹಾಗೆನ್ನಿಸಿದರೂ, ಬೇಗನೆ ಸಮಾಧಾನವನ್ನು ತಂದುಕೊಂಡು ಸರಿಯಾದ ಹಾದಿಯಲ್ಲಿ ಹೆಜ್ಜೆಯಿಡಬೇಕು. ಆತ್ಮಹತ್ಯೆಯು ತಪ್ಪೇಕೆಂದು ಶ್ರೀರಂಗಮಹಾಗುರುಗಳನ್ನೊಮ್ಮೆ ಪ್ರಶ್ನಿಸಿದಾಗ ಅವರಿತ್ತ ಉತ್ತರವು ಕಣ್ತೆರೆಸುವಂತಹುದು:
"ತಪ್ಪು ಮಾಡಿದವರನ್ನು ಜೈಲಿಗೆ ಹಾಕುತ್ತಾರಲ್ಲವೆ? ಆದರೆ ಅಲ್ಲಿಯ ಕಷ್ಟವನ್ನು ತಾಳಲಾರೆನೆಂದು ಜೈಲಿನಿಂದಲೇ ತಪ್ಪಿಸಿಕೊಂಡು ಓಡಿಹೋಗುವವನನ್ನು ಹಿಡಿದು ಹಾಕಿ, ಮೊದಲಿಗಿಂತಲೂ ಉಗ್ರವಾದ ಶಿಕ್ಷೆಯನ್ನು ಕೊಡುವರಲ್ಲವೇ?
ಆತ್ಮಹತ್ಯೆಗೂ ಇದನ್ವಯಿಸುತ್ತದೆ. ನಮ್ಮ ಕರ್ಮಗಳಿಂದಾಗಿಯೇ ಈ ಶರೀರದಲ್ಲಿ ನಮಗೆ ಬಂಧವುಂಟಾಗಿರುವುದು. ಹೇಗೆ ಜೈಲುಪಾಲಾದವನು ಸದ್ವೃತ್ತದಿಂದಾಗಿ, ಎಂದರೆ ತನ್ನ ಒಳ್ಳೆಯ ನಡತೆಯಿಂದಾಗಿ, ಬೇಗನೆ ಬಿಡುಗಡೆಪಡೆಯಲು ಆಸ್ಪದವುಂಟೋ, ಇಲ್ಲೂ ಹಾಗೆಯೇ.
ಆತ್ಮಹತ್ಯೆಯನ್ನು ಮಾಡಿಕೊಂಡವನು ದುಃಖದಿಂದ ಪಾರಾಗುವುದಿಲ್ಲ, ಮತ್ತೂ ಹೆಚ್ಚಿನ ಕ್ಲೇಶಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಾನೆ. ಎಂದೇ ಅದು ಮಹಾಪಾಪ. ಮನುಷ್ಯ-ಜನ್ಮವು ದೊರಕಿರುವುದನ್ನು ಭಾಗ್ಯವೆಂದೆಣಿಸಿ, ಧರ್ಮ-ಮಾರ್ಗದಲ್ಲಿ ಸಾಗಿ, ಭಗವಂತನನ್ನು ಪಡೆಯುವತ್ತ ಸತತ-ಪ್ರಯತ್ನವಿರಬೇಕು. ಅದುವೇ ಜನ್ಮ-ಸಾರ್ಥಕ್ಯ!"
ಸೂಚನೆ: 14/11/2024 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.