ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 113 ಧರ್ಮರತನಾದವನಿಗೆ ಏನು ಸಿಗುತ್ತದೆ?
ಉತ್ತರ - ಒಳ್ಳೆಯ ಗತಿ
ಇಲ್ಲಿ ಯಕ್ಷನು ಧರ್ಮರಾಜನಿಗೆ ಈ ಪ್ರಶ್ನೆಯನ್ನು ಮುಂದಿಡುತ್ತಿದ್ದಾನೆ. "ಧರ್ಮದಲ್ಲಿ ಯಾವಾಗಲೂ ನಿರತನಾದವನಿಗೆ - ಆಸಕ್ತನಾದವನಿಗೆ ಧರ್ಮಚರಣೆಯನ್ನು ಸದಾ ಮಾಡುತ್ತಿರುವವನಿಗೆ ಏನು ಲಭಿಸುತ್ತದೆ?" ಎಂದು. ಅದಕ್ಕೆ ಉತ್ತರ 'ಒಳ್ಳೆಯ ಗತಿ - ಸದ್ಗತಿ' ಎಂಬುದಾಗಿ. ನಾವು ಇಲ್ಲಿ ಚಿಂತಿಸಬೇಕಾದ ವಿಷಯ ಒಳ್ಳೆಯ ಗತಿ ಎಂದರೇನು? ಮತ್ತು ಅದಕ್ಕೆ ಧರ್ಮವು ಹೇಗೆ ಸಹಕಾರಿ ಆಗುತ್ತದೆ? ಎಂಬುದನ್ನು.
ಈ ಹಿಂದಿನ ಅನೇಕ ಲೇಖನಗಳಲ್ಲಿ ಧರ್ಮದ ಬಗ್ಗೆ ವಿಚಾರವನ್ನು ವಿವರಿಸಲಾಗಿತ್ತು. ಸಾಮಾನ್ಯವಾಗಿ ನಾವು 'ಧರ್ಮ' ಎಂಬ ಪದಕ್ಕೆ 'ರಿಲಿಜನ್' ಎಂಬ ಇಂಗ್ಲೀಷ್ ಪದವನ್ನು ಉಪಯೋಗಿಸಿಕೊಂಡು 'ಮತ' ಎಂಬ ಅರ್ಥದಲ್ಲಿ ಬಳಸುತ್ತಿರುವುದನ್ನು ನೋಡುತ್ತಿದ್ದೇವೆ. ಮತ ಎಂಬ ಅರ್ಥದಲ್ಲಿ ಈ ಧರ್ಮ ಎಂಬ ಪದ ಬಳಕೆಯಾಗುವುದಿಲ್ಲ. "ಧರ್ಮ ಎಂದರೆ ಯಾವುದೋ ಒಂದು ಕಂಡೀಶನ್ನಪ್ಪ" ಎಂದು ಧರ್ಮ ಎಂಬ ಪದಕ್ಕೆ ಅದರದರ ಸಹಜವಾದ ಸ್ಥಿತಿ ಎಂಬ ಅರ್ಥದಲ್ಲಿ ಶ್ರೀರಂಗ ಮಹಾಗುರುಗಳು ವಿವರಣೆಯನ್ನು ನೀಡುತ್ತಿದ್ದರು. ಅಂದರೆ ಆ ಆ ವಸ್ತುವಿನ ಯಾವ ಸಹಜ ಸ್ವಭಾವವಿದೆಯೋ ಅದನ್ನೇ ಧರ್ಮ ಎಂಬುದಾಗಿ ಕರೆಯುತ್ತಾರೆ. ಆ ಧರ್ಮವನ್ನು ಸಹಜಸ್ಥಿತಿಯನ್ನು ಉಳಿಸಲು ಮಾಡಬೇಕಾದ ಯಾವ ಕಾರ್ಯವಿದೆಯೋ ಅದನ್ನು ಕೂಡ ಧರ್ಮ ಎಂಬುದಾಗಿ ಕರೆದು, ಅದನ್ನು ಆಚರಣೆ ಎಂದು ಕರೆಯಲಾಗುತ್ತದೆ. ಧರ್ಮದ ಆಚರಣೆಯಿಂದ ಧರ್ಮವು ಸಿದ್ಧವಾಗುತ್ತದೆ ಎಂಬುದು ಇದರ ತಾತ್ಪರ್ಯ. ಒಳ್ಳೆಯ ಗತಿ ಎಂದರೆ ಅಂತಹ ಧರ್ಮವನ್ನು ಅದರ ಸಹಜಸ್ವಭಾವವನ್ನು ಆ ಕಂಡೀಶನ್ ಅನ್ನು ಉಳಿಸಲು ಬೇಕಾದ ಗತಿ - ನಡೆ ಎಂಬುದಾಗಿ ಅರ್ಥ. ಮನುಷ್ಯನು ಒಳ್ಳೆಯ ಗತಿಯನ್ನು ಪಡೆಯಬೇಕಾದದ್ದು. ಆತ ಯಾವ ಗತಿಯನ್ನು ಪಡೆಯಬೇಕು ಎಂದರೆ ಮೋಕ್ಷದ ಕಡೆ ಅಥವಾ ಮತ್ತೆ ಹುಟ್ಟಿಲ್ಲದ ರೀತಿಯಲ್ಲಿ. ಇದಕ್ಕೆ ಅನುಗುಣವಾದ ತನ್ನ ಜೀವನದ ನಡೆಯನ್ನು ಇಟ್ಟುಕೊಳ್ಳುವುದನ್ನೇ ಒಳ್ಳೆಯ ನಡೆ 'ಸದ್ಗತಿ' ಎಂಬುದಾಗಿ ಕರೆಯಲಾಗಿದೆ. ಸದ್ಗತಿ ಎಂಬುದಕ್ಕೆ ನಾವಿಂದು ಕೇವಲ ಮರಣ ಎಂಬುದಾಗಿ ಅರ್ಥೈಸುತಿದ್ದೇವೆ. ಆದರೆ ಸತ್ತಿನ ಅಂದರೆ ಯಾವುದು ನಿತ್ಯವೂ ಶಾಶ್ವತವೂ ಆದ ವಸ್ತುವಿದೆಯೋ ಆ ಕಡೆ ನಮ್ಮ ನಡೆ ಇದ್ದರೆ ಅದಕ್ಕೆ ಸದ್ಗತಿ ಎಂಬುದಾಗಿ ಕರೆಯಲಾಗುತ್ತದೆ. ಈ ಜೀವನದಲ್ಲಿ ಸಾಧಿಸಲೇಬೇಕಾದ ಯಾವ ಬ್ರಹ್ಮಾನಂದ ಉಂಟೋ ಅದನ್ನೇ 'ಸತ್' ಎಂದು ಕರೆದು, ಅದನ್ನು ಅನುಭವಿಸಲು ಬೇಕಾದ ಯಾವೆಲ್ಲ ಕಾರ್ಯಗಳಿವೆಯೋ ಅವೆಲ್ಲವನ್ನೂ ಸದಾಚಾರ ಎಂದು ಕರೆದು, ಅವೆಲ್ಲವೂ ಗತಿಗೆ ಸಾಧನವಾವಾಗಿರುತ್ತವೆ. ಇದನ್ನೇ ಕುಸುಮಾಂಜಲಿ ಎಂಬ ಗ್ರಂಥದಲ್ಲಿ ಉದಯನಾಚಾರ್ಯರು "ತಪೋ-ಜ್ಞಾನ-ಯಜ್ಞ-ದಾನಾತ್ಮಕಚತುಷ್ಪಾದ್ ಧರ್ಮ" ಎಂದು ಇವೇ ಧರ್ಮ ಎಂಬ ಪದಕ್ಕೆ ಅರ್ಥ ಎಂದಿದ್ದಾರೆ. ಪುಣ್ಯ, ಸುಕೃತ, ಶ್ರೇಯಸ್ಸು, ನ್ಯಾಯ ಇತ್ಯಾದಿ ಅರ್ಥಗಳೂ ಇವೆ. ಅಂದರೆ ಇವೆಲ್ಲವೂ ಸದ್ಗತಿಗೆ ಸಾಧನಗಳು ಎಂದರ್ಥ. ಇವುಗಳಲ್ಲಿ ಅಂಹಿಂಸೆಯನ್ನು 'ಅಹಿಂಸಾ ಪರಮೋ ಧರ್ಮಃ' ಅತ್ಯಂತ ಶ್ರೇಷ್ಠವಾದ ಧರ್ಮ ಎಂದು ಕರೆಯಲಾಗಿದೆ. ಒಟ್ಟಾರೆ ಹೇಳುವುದಾದರೆ ಧರ್ಮಾಚರಣೆಯಿಂದ ಸದ್ಗತಿಯು ಸಿಗುತ್ತದೆ ಎಂಬುದಾಗಿ ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 17/11/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.