Monday, July 22, 2024

ವ್ಯಾಸ ವೀಕ್ಷಿತ 97 ಸುಂದೋಪಸುಂದ-ಕಥೆಯಿಂದ ಪಾಂಡವರಿಗಾದ ಪಾಠ (Vyasa Vikshita 97 Sundopasunda-katheyinda Pandavarigada Patha}

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



 


ಅಂತೂ ಸರ್ವ-ಲೋಕ-ಕಂಟಕರಾಗಿದ್ದ ಸುಂದೋಪಸುಂದರ ಸಂಹಾರವಾಯಿತು! ಇದಕ್ಕೆ ಕಾರಣೀಭೂತಳಾದ ತಿಲೋತ್ತಮೆಯ ವಿಷಯದಲ್ಲಿ ಬ್ರಹ್ಮನಿಗೆ ಸಂತೋಷವಾಯಿತು. ಅವಳಿಗೆ ವರವನ್ನು ಕೊಡಬೇಕೆಂಬ ಅಪೇಕ್ಷೆಯುಂಟಾಯಿತು. ಅವಳನ್ನು ಕುರಿತು ಹೀಗೆ ಹೇಳಿದನು, ಬ್ರಹ್ಮನು:


"ಸುಂದರಿ, ಎಲ್ಲೆಲ್ಲಿ ಸೂರ್ಯನ ಸಂಚಾರವೆಂಬುದುಂಟೋ ಅಲ್ಲಲ್ಲೆಲ್ಲ, ನೀನೂ ಸ್ವೇಚ್ಛೆಯಾಗಿ ವಿಹರಿಸುವಂತಾಗಲಿ. ನಿನ್ನ ತೇಜಸ್ಸು ಎಷ್ಟು ತೀಕ್ಷ್ಣವಾಗುವುದೆಂದರೆ ನಿನ್ನನ್ನು ಯಾರೂ ದಿಟ್ಟಿಸಿ ನೋಡಲೂ ಆರರು!"


ಈ ರೀತಿಯಾಗಿ ಅವಳಿಗೆ ವರವಿತ್ತು, ಸರ್ವ-ಲೋಕಗಳಿಗೂ ಪಿತಾಮಹನೆನಿಸಿದ ಬ್ರಹ್ಮನು ತ್ರೈಲೋಕ್ಯವನ್ನೂ ಇಂದ್ರನಿಗೊಪ್ಪಿಸಿ, ಸ್ವ-ಲೋಕಕ್ಕೆ ತೆರಳಿದನು.


ಹೀಗೆ ಸುಂದೋಪಸುಂದರ ವೃತ್ತಾಂತವನ್ನು ಪಾಂಡವರಿಗೆ ತಿಳಿಸಿದ ನಾರದರು ನಮ್ಮ ಮಾತನ್ನು ಮುಂದುವರೆಸಿದರು: "ನೋಡಿದಿರಾ, ಎಲ್ಲ ವಿಷಯಗಳಲ್ಲೂ ಏಕ-ನಿಶ್ಚಯವನ್ನು ಹೊಂದಿರುತ್ತಾ ಸದಾ ಜೊತೆಗಿರುತ್ತಿದ್ದ ಆ ದೈತ್ಯರಿಬ್ಬರು, ತಿಲೋತ್ತಮೆಯೊಬ್ಬಳಿಗೋಸ್ಕರವಾಗಿ ಕೆರಳಿದವರಾಗಿ, ಪರಸ್ಪರ ಬಡಿದಾಡಿ ಇಬ್ಬರೂ ಸತ್ತರು.


ಆದ್ದರಿಂದಲೇ, ನಿಮ್ಮ ಮೇಲಣ ಸ್ನೇಹದಿಂದ, ನಿಮ್ಮೆಲ್ಲರನ್ನೂ ಕುರಿತು ಹೇಳುತಿದ್ದೇನೆ, ಭರತ-ಶ್ರೇಷ್ಠರೇ! ದ್ರೌಪದಿಯ ಸಲುವಾಗಿ ನಿಮ್ಮೊಳಗೇ ಒಡಕುಂಟಾಗಬಾರದು - ಎನ್ನುವ ಬಗೆಯಲ್ಲಿ ನೀವು ವರ್ತಿಸಬೇಕು - ನನಗೆ ಪ್ರಿಯವಾದುದನ್ನು ತಾವು ಬಯಸುವುದಾದರೆ! ಆಯಿತು; ನಿಮಗೆ ಒಳ್ಳೆಯದಾಗಲಿ" - ಎಂದು ಮಾತು ಮುಗಿಸಿದರು.


ನಾರದ ಮಹರ್ಷಿಗಳು ಮಹಾತ್ಮರಾದ ಆ ಪಾಂಡವರಿಗೆ ಹೀಗೆ ಹೇಳಲಾಗಿ, ದೇವರ್ಷಿ-ನಾರದರೆದುರಿಗೇ ಆ ಮಹಾ-ತೇಜಸ್ವಿಗಳು ಪರಸ್ಪರಾಧೀನರಾದರು. ಎಂದರೆ, ಒಂದು ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾದರು. ಅವರ ಒಪ್ಪಂದ ಹೀಗಿತ್ತು:


ಪಾಪ-ರಹಿತಳಾದ ದ್ರೌಪದಿಯು ಒಂದೊಂದು ವರ್ಷ ಒಬ್ಬೊಬ್ಬರ ಮನೆಯಲ್ಲಿ ವಾಸಿಸತಕ್ಕದ್ದು. ದ್ರೌಪದಿಯೊಂದಿಗೆ ಒಬ್ಬನು ಇರುವಲ್ಲಿ, ಮತ್ತೊಬ್ಬನು ಅವರನ್ನು ನೋಡಲಾಗದು; ಹಾಗೇನಾದರೂ ನೋಡಿಬಿಟ್ಟಲ್ಲಿ, ನೋಡಿದಾತನು ಹನ್ನೆರಡು ವರ್ಷಗಳ ಕಾಲ ಬ್ರಹ್ಮಚಾರಿಯಾಗಿ ವನವಾಸಮಾಡತಕ್ಕದ್ದು – ಎಂಬುದಾಗಿ.


ಧರ್ಮಚಾರಿಗಳಾದ ಪಾಂಡವರು ಈ ರೀತಿಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲು, ತೃಪ್ತರಾದರು ಮಹಾಮುನಿಗಳಾದ ನಾರದರು. ಮತ್ತು ಅಲ್ಲಿಂದ ತಮಗೆ ಬೇಕಾದಲ್ಲಿಗೆ ಹೊರಟುಬಂದರು.


ಈ ಪ್ರಕಾರವಾಗಿ ನಾರದರಿಂದ ಪ್ರೇರಿತರಾಗಿ, ಪಾರಸ್ಪರಿಕವಾದ ಸಮಯವನ್ನು, ಎಂದರೆ ಒಪ್ಪಂದವನ್ನು, ಮಾಡಿಕೊಂಡ ಪಾಂಡವರು, ಪರಸ್ಪರ ಒಡಕನ್ನು ಎಂದೂ ಹೊಂದಲಿಲ್ಲ.


ಹೀಗೆ ತಮ್ಮ ಶಿಸ್ತು-ಸಂಯಮಗಳನ್ನು ಕಾಪಾಡಿಕೊಂಡ ಪಾಂಡವರು ತಮ್ಮ ಶಸ್ತ್ರ-ಪ್ರತಾಪದಿಂದಾಗಿ ಇತರ ರಾಜರುಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ಅಮಿತ-ತೇಜಸ್-ಸಂಪನ್ನರಾದ ಪಾಂಡವರೈವರೂ ಮನುಜ-ಸಿಂಹರು. ಆ ಎಲ್ಲ ಪಾರ್ಥರಿಗೂ ವಶ-ವರ್ತಿನಿಯಾಗಿ, ಎಂದರೆ ಅವರ ಆಶಯವನ್ನು ಅನುಸರಿಸುವವಳಾಗಿ, ದ್ರೌಪದಿಯೂ ಅವರೊಂದಿಗಿದ್ದಳು. ಅವಳೊಂದಿಗೆ ಆ ಐವರೂ, ಆ ಐವರೊಂದಿಗೆ ದ್ರೌಪದಿಯೂ ಪರಮ-ಸಂತೋಷದಿಂದ ಇರುವುದಾಯಿತು.


ಇವೆಲ್ಲದರಿಂದಾಗಿ ಈ ನಗರಿಯೂ ಸುಶೋಭಿತವಾಯಿತು - ಭೋಗವತೀ-ನಗರಿಯು ನಾಗರಿಂದಾಗಿ ಹೇಗೆ ಸುಶೋಭಿತವಾಗಿರುವುದೋ ಹಾಗೆ.


ಮಹಾತ್ಮರಾದ ಪಾಂಡವರು ಹೀಗೆ ಧರ್ಮಾನುಸಾರವಾಗಿ ರಾಜ್ಯಭಾರವನ್ನು ಮಾಡುತ್ತಿರಲಾಗಿ, ಕುರುವಂಶದವರೆಲ್ಲರೂ ದೋಷ-ಹೀನರೂ ಗುಣಶಾಲಿಗಳೂ ಆಗಿ ವರ್ಧಿಸಿದರು.

 

ಹೀಗೆ ಸಾಕಷ್ಟು ಕಾಲವೇ ಕಳೆಯಿತು. ಒಮ್ಮೆ ಯಾರೋ ಕಳ್ಳರು ಬ್ರಾಹ್ಮಣನೊಬ್ಬನ ಗೋವುಗಳನ್ನು ಕದ್ದುಬಿಟ್ಟರು. ಆ ಬ್ರಾಹ್ಮಣನಿಗಾದರೋ ಗೋವುಗಳೇ ಧನವಾಗಿದ್ದಿತು. ಅದರ ಕಳ್ಳತನವಾಗಿಹೋಗಲು ಆತನು ಅತ್ಯಂತ ಕ್ರೋಧಗೊಂಡನು; ಖಾಂಡವ-ಪ್ರಸ್ಥಕ್ಕೆ ಬಂದನು; ಪಾಂಡವರನ್ನು ಕುರಿತು ಉತ್ಕ್ರೋಶಮಾಡಿದನು; ಎಂದರೆ ಎತ್ತರದ ಧ್ವನಿಯಲ್ಲಿ ಹೇಳಿದನು.


ಸೂಚನೆ : 21/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.