Sunday, July 7, 2024

ಭಗವಂತ ಕರುಣಾಮಯನೇ ? ಭಾಗ-೨ (Bhagavanta Karunamayane? Bhaga-2)

 

ಹಿಂದಿನ ಸಂಚಿಕೆಯಲ್ಲಿ ಭಗವಂತನ ಕರುಣೆಯ ಬಗ್ಗೆ ಆಲೋಚಿಸಿದೆವು. ಹಾಗಾದರೆ ನಮ್ಮ ದುಃಖ ದೈನ್ಯಗಳಿಗೆ ಕಾರಣವೇನು ಎಂದು ವಿಚಾರ ಮಾಡೋಣ.


ನಮ್ಮ ಕರ್ಮಗಳ ದೋಷವನ್ನು ಮೇಲಿನವನ ಮೇಲೆ ಹೇಳುತ್ತಿದ್ದೆವೆಯೇ?:

 

ಒಬ್ಬ ಅಜ್ಞಾನಿ ಬೆಂಗಳೂರಿನ ರಸ್ತೆಯಲ್ಲಿ ನಡೆದುಹೋಗುತ್ತಿದ್ದ. ಗೊತ್ತಾಗದೇ ದಾರಿಯಲ್ಲಿನ ಸಗಣಿಯನ್ನು ತುಳಿದ. ಸ್ವಲ್ಪಹೊತ್ತಿನ ನಂತರ ಮಳೆ ಆರಂಭವಾಯಿತು. ಮಳೆಯಿಂದ ರಕ್ಷಣೆ ಪಡೆಯಲು ತನ್ನ ಕಾಲಿನ ಚಪ್ಪಲಿಯನ್ನು ತಲೆಯ ಮೇಲಿಟ್ಟು ನಡೆದ. ಮಳೆಯ ನೀರಲ್ಲಿ ಕರಗಿ ಅವನೇ ತುಳಿದ ಸಗಣಿ ಮೈಗೆಲ್ಲಾ ಇಳಿಯಿತು. ಅದನ್ನು ನೋಡಿ ಅವನು ಈ ಊರಿನಲ್ಲಿ ಸಗಣಿಯ ಮಳೆ ಬರುತ್ತದೆ ಎಂದನಂತೆ. ಕಥೆಯ ತಮಾಷೆ ಒಂದು ಭಾಗ. ಇಲ್ಲಿ ಮಳೆಯ ದೋಷವೇನೂ ಇಲ್ಲದೇ ಶುದ್ಧವಾಗಿ ಸುರಿಯುತ್ತಿದ್ದರೂ  ಅವನು ತನ್ನ ಅವಿವೇಕದಿಂದ ಆದ ಪರಿಣಾಮವನ್ನು ಮೇಲಿಂದ ಬೀಳುವ ಮಳೆಯಮೇಲೆ ಹೇಳಿದ. ಪ್ರಾಯಃ ನಾವೂ ಸಹ ನಮ್ಮ ಕರ್ಮಗಳಿಂದಾದ ದೋಷಗಳನ್ನು , ನಮ್ಮ ಇಂದ್ರಿಯಗಳಿಂದ ನಮ್ಮ ಅಜ್ಞಾನದ ಪರಿಣಾಮವಾಗಿ ಆಗಿರುವ ದೋಷಗಳನ್ನು ಇಂದ್ರಿಯಾತೀತನಾಗಿ ಮೇಲೆ ಬೆಳಗುವ ಭಗವಂತನ ಮೇಲೆ ಹಾಕುತ್ತಿದ್ದೇವೆ. 

 

ನಮ್ಮ ದುಷ್ಕರ್ಮಗಳೇ ನಮ್ಮ ದುಃಖಕ್ಕೆ ಕಾರಣ:

 

ಮನಸ್ಸಿನ ಕಡಿವಾಣವಿಲ್ಲದ ನಮ್ಮ ಅತಿಯಾದ ಇಂದ್ರಿಯ ಲಾಲಸೆ ಈ ಎಲ್ಲಾ ಕಷ್ಟಗಳಿಗೆ ಕಾರಣವಾದ ದುಷ್ಕರ್ಮಗಳನ್ನು ನಮ್ಮಿಂದ ಮಾಡಿಸಿತು.ಈ ಇಂದ್ರಿಯಗಳೆಲ್ಲವನ್ನು ಅವನು ನಮ್ಮ ಸುಖ ಸಂತೋಷಗಳಿಗಾಗಿಯೇ ಕೊಟ್ಟಿದ್ದಾನೆ. ಆದರೆ ಅವುಗಳ ಅನುಭವಕ್ಕೆ ಧರ್ಮ-ಮೋಕ್ಷಗಳ ಸೀಮೆ ಇದ್ದರೆ ಮಾತ್ರ ಅವುಗಳ ಪೂರ್ಣ ಆನಂದವನ್ನು ಅನುಭವಿಸಿ ಸುಖ ಪಡಬಹುದು ಎಂಬ ವಿಜ್ಞಾನ, ಋಷಿದೃಷ್ಟಿ ನಮ್ಮಲ್ಲಿ ಮರೆಯಾಯಿತು. ನಮ್ಮ ಮನಸ್ಸು ಇಂದ್ರಿಯ ನಿಗ್ರಹ ಮಾಡುವ ಬದಲು ತಾನೇ ಇಂದ್ರಿಯಗಳಿಗೆ ವಶವಾಗಿ ಆತ್ಮನ ಸುಖವನ್ನು ಮರೆಯಿತು. ಅತಿಯಾದ ಇಂದ್ರಿಯ ಸುಖಗಳ ಅಪೇಕ್ಷೆಯೇ ಹೀಗೆ ಮರೆಯುವಂತೆ ಮಾಡಿತು. ಹಸಿವಿದೆ. ಹಾಗೆಯೇ ರುಚಿಯೂ ಇದೆ. ಹಾಗೆಂದು ಅತಿಯಾಗಿ ದೇಹಾರೋಗ್ಯಕ್ಕೆ ಸಲ್ಲದಿರುವುದನ್ನು ತಿಂದರೆ ಅದರ ಕಹಿಯನ್ನು ಅನುಭವಿಸಬೇಕಲ್ಲವೇ?

 

ಎಂದೋ ಮಾಡಿದ್ದು ಇನ್ನೆಂದೋ ಅನುಭವಿಸಬೇಕು:


ಕೆಲವೊಮ್ಮೆ ಇಂದು ತಿಂದ ಅಂತಹ ಆಹಾರಗಳು ಬಹಳ ಕಾಲದ ನಂತರ  ದುಷ್ಪರಿಣಾಮ ಮಾಡಬಹುದು. ನಮಗೆ ನಾವು ತಿಂದದ್ದು ಮರೆತುಹೋಗಲೂ ಬಹುದು. ಹಾಗೆಂದು ಒಳಗೆ ಹೋದ ಆಹಾರ ತನ್ನ ಪ್ರಭಾವ ಬೀರದೇ ಬಿಡದು. ಹಾಗೆಯೇ ನಮ್ಮ ಅನ್ಯಾನ್ಯ ದುಷ್ಕರ್ಮಗಳು ಜನ್ಮಾನ್ತರಗಳಿಂದ ಸಂಚಿತವಾಗಿವೆ. ನಮಗೆ ಅವೆಲ್ಲ "ಅದೃಷ್ಟ" ವಾಗಿರಬಹುದು. ಅದೃಷ್ಟ ಎಂದರೆ ಕಾಣದಿರುವುದು. ಅವೆಲ್ಲವೂ ಇಂದು ಫಲಕೊಡಲು ಆರಂಭಿಸುವ ಸಾಧ್ಯತೆ ಇರುತ್ತದೆ.


ಕರ್ಮ ವ್ಯವಸ್ಥೆಯೇ ಭಗವಂತನ ಕರುಣೆ:

 

ಭಗವಂತನ ಸೃಷ್ಟಿಯಲ್ಲಿ ಈ ಕರ್ಮಫಲಾನುಭವ ಇರುವುದರಿಂದಲೇ ಜೀವಲೋಕ ತನ್ನೆಲ್ಲಾ ಪಾಪ ಕರ್ಮಗಳನ್ನು ತೊಳೆದುಕೊಂಡು ಮತ್ತೆ ಸುಖಾನುಭವ ಮಾಡುವ ಸ್ಥಿತಿಗೆ ಬರುವಂತಾಗುವುದು. ಅವನ ಈ ವ್ಯವಸ್ಥೆಯೂ ಜೀವಲೋಕದ ಮೇಲಿನ ಕರುಣೆಯಿಂದಲೇ ಇದೆ. ಹೀಗೆ ನಮ್ಮ ದುಷ್ಕರ್ಮಗಳಿಂದಲೇ ಎಲ್ಲಾ ಸುಖಗಳಿಗೂ ಮಿಗಿಲಾದ ಆತ್ಮ ಸುಖವನ್ನು ನಾವು ದೂರಮಾಡಿಕೊಂಡೆವು.ನಮ್ಮ ಅಸಾವಧಾನತೆಯಿಂದ ಕರ್ಮಪರಂಪರೆಯನ್ನೇ ಹೆಣೆದೆವು.ಇವೆಲ್ಲದರ ಪರಿಣಾಮವಾಗಿ ಬಂದ ದುಃಖ ದೈನ್ಯಗಳಿಗೆ ಕಡೆಯಲ್ಲಿ ದಯಾಮಯನಾದ ಭಗವಂತನೇ ಕಾರಣ ಎಂದುಬಿಟ್ಟೆವು.

 

ಅವನ ಸೃಷ್ಟಿ ಸಂಕಲ್ಪವೇ ಎಲ್ಲದಕ್ಕೂ ಕಾರಣವೇ?:

 

ಅವನ ಸೃಷ್ಟಿಯ ಕಾರಣದಿಂದಲೇ ಇಷ್ಟೆಲ್ಲಾ ಸಮಸ್ಯೆಗಳಾದುವು. ಅವನು ಸೃಷ್ಟಿಯನ್ನೇ ಮಾಡಬಾರದಿತ್ತು. ಎಂದು ಕೆಲವೊಮ್ಮೆ ಅನ್ನಿಸಿಬಿಡುತ್ತದೆ. ತೆಂಗಿನ ಗಿಡ ಎಂದು ಇದ್ದಿದ್ದರಿಂದಲೇ ಹಳದಿ ರೋಗ ಬರುವಂತಾಯಿತು. ಅದೇ ಇರಬಾರದಿತ್ತು ಎಂದರೆ ಹೇಗೆ? ರೋಗರಹಿತವಾದ ತೆಂಗಿನ ಗಿಡದ ಎಳನೀರು, ಕಾಯಿ ಎಲ್ಲವನ್ನೂ ನಾವು ಚಪ್ಪರಿಸಿ ಸವಿದು ಆನಂದಿಸಲಿಲ್ಲವೇ? ಆಗ ಅದು ಬೇಡವೆಂದು ನಮಗೆ ಅನ್ನಿಸಿತ್ತೆ? ನಮ್ಮ ಹ್ರಸ್ವ ದೃಷ್ಟಿಯೇ ಇಂತಹ ಆಲೋಚನೆಗಳಿಗೆ ಕಾರಣವೇ ಹೊರತು ಭಗವಂತನ ಸೃಷ್ಟಿಯಲ್ಲ ಎಂಬುದು ಗಮನಿಸಬೇಕಾದ ವಿಷಯ. 

 

ಜೀವಲೋಕದ ಹಿತಕ್ಕಾಗಿಯೇ ಸೃಷ್ಟಿ:

 

ಸಾವಿರಾರು ಜನಗಳಿಗೆ ಜೀವನೋಪಾಯವಾದ ಒಂದು ಕಾರ್ಖಾನೆ ಇದೆ. ಅಲ್ಲಿ ಬಗೆ ಬಗೆಯ ಯಂತ್ರಗಳಿವೆ. ಅದರ ಸದುಪಯೋಗದಿಂದ ನಮಗೆ ಬೇಕಾದ ವಸ್ತುಗಳನ್ನು ಪಡೆಯಬಹುದಾಗಿದೆ. ಆದರೆ ಯಾರೋ ತಮ್ಮ ಅಸಾವಧಾನತೆಯಿಂದ ಒಂದು ಯಂತ್ರದ ಒಳಗೆ ತನ್ನ ಕೈ ಇಟ್ಟು  ಕೈ ಕಳೆದುಕೊಳ್ಳುತ್ತಾನೆ. ಹಾಗೆಂದು ಕಾರ್ಖಾನೆ ಪ್ರಾರಂಭಿಸಿದ್ದರಿಂದಲೇ ಅವನ ಕೈ ಹೋಯಿತು ಎನ್ನೋಣವೇ? ಹಾಗಲ್ಲ. ಅವನ ಅಸಾವಧಾನತೆಯಿಂದ ಕೈ ಕಳೆದುಕೊಂಡ ಎನ್ನುವುದೇ ಸರಿಯಾದುದು. ಹಾಗೆಯೇ ಭಗವಂತನ ಈ ಸೃಷ್ಟಿಯಲ್ಲಿ ಸ್ವರೂಪತಃ ಕೆಡುಕಾದುದು ಯಾವುದೂ ಇಲ್ಲ. ಎಲ್ಲವೂ ಅವವುಗಳ ವಿಜ್ಞಾನದೊಂದಿಗೆ ನಮ್ಮ ಉಪಯೋಗಕ್ಕಾಗಿಯೇ ಸೃಷ್ಟಿಯಾಗಿದೆ.ಎಲ್ಲವೂ ತಮ್ಮ ತಮ್ಮ ಧರ್ಮದೊಂದಿಗೆ ಬಂದಿವೆ. ಅದರದರ ಧರ್ಮ ವಿಶೇಷವನ್ನು ಅರ್ಥ ಮಾಡಿಕೊಂಡು ಬಳಸಿದರೆ ಜೀವನ ಅತ್ಯಂತ ಸುಖಮಯ. ಹರಿತವಾದ ಕತ್ತಿ ಇದೆ. ಅದು ತರಕಾರಿ ಕತ್ತರಿಸುವಾಗ ಹರಿತವಾಗಿದ್ದು, ನಾವು ಗೊತ್ತಾಗದೇ ಕೈ ಇಟ್ಟಾಗ ಮೊಂಡಾಗುವಂತೆ ಅದನ್ನು ಸೃಷ್ಟಿಸಲಾಗದು. ಹಾಗೆ ಅದು ಕೈ ಕತ್ತರಿಸಿದಾಗ ಕತ್ತಿಯನ್ನು ತಯಾರಿಸಿದ್ದೇ ತಪ್ಪು ಎನ್ನುವ ಮೂರ್ಖತನದಂತೆ ಭಗವಂತನ ಸೃಷ್ಟಿಯನ್ನು ಹಳಿಯುವುದೂ ಸಹ.


ಈ ಮಾನವ ದೇಹ-ಭಗವಂತನ ಕರುಣೆಯ ಪರಿಣಾಮವೇ:

 

ಜಾಗ್ರತ್,ಸ್ವಪ್ನ,ಸುಷುಪ್ತಿ,ತುರೀಯ ಗಳೆಂಬ ನಾಲ್ಕೂ ಸ್ಥಿತಿಗಳನ್ನು ಅನುಭವಿಸಿ ಆನಂದಮಯವಾಗಿ ಬಾಳುವ ಪೂರ್ಣ ವ್ಯವಸ್ಥೆಯುಳ್ಳ  ಮಾನವ ದೇಹವಿದು. ಅದು ಜೀವಿಗಳ ಮೇಲಿನ ಕರುಣೆಯಿಂದಲೇ ಅವನು ದಯಪಾಲಿಸಿರುವುದು.ಅದನ್ನು ನಾವು ಹಾಗೆ ಬಳಸದೇ ಹಾಳುಮಾಡಿಕೊಂಡಿದ್ದೇವೆ. ನಮ್ಮ ಸಹಜ ಸ್ಥಿತಿ ನಮಗೀಗ ಇಲ್ಲವಾಗಿದೆ.ಖಾಯಿಲೆ ಎಷ್ಟು ಉಲ್ಬಣಗೊಂಡಿದೆ ಎನ್ನುವುದಕ್ಕೆ ಯಾರ ಮಾತು ಪ್ರಮಾಣ? ಖಾಯಿಲೆಯಲ್ಲಿ ಬಳಲುವ ರೋಗಿಯದೋ ಅಥವಾ ಅವನ ಚಿಕಿತ್ಸೆ ಮಾಡುತ್ತಿರುವ ವೈದ್ಯನದೋ? ಹಾಗೆಯೇ ನಾವೆಲ್ಲಾ ರೋಗಿಗಳು. ಭಗವಂತ ವೈದ್ಯ.ಅವನ ಕರುಣೆಯ ವಿಷಯ ನಮಗೆ ನಾವು ಗುಣಮುಖರಾಗುವವರೆಗೂ ಗೊತ್ತಾಗದು. ವೈದ್ಯರು ಆಪರೇಷನ್ ಎಂದು ಹೊಟ್ಟೆ ಕೊಯ್ಯುವುದೇ? ಎಂತಹ ನಿಷ್ಕರುಣಿ! ಎಂದಂತೆ ನಾವೂ ಭಗವಂತನನ್ನು ಕರುಣೆಯಿಲ್ಲದವನು ಎನ್ನುವುದೂ ಸಹ. ಹೀಗೆ ನಮ್ಮ ದುಃಖಗಳಿಗೆಲ್ಲ ಕಾರಣ ಅವನು ಕೊಟ್ಟ ಮನಸ್ಸು ಬುದ್ಧಿಗಳನ್ನು ದುರುಪಯೋಗ ಮಾಡಿರುವುದೇ ಆಗಿದೆ. 


ಭಗವಂತನ ಸಂಹಾರಕಾರ್ಯ, ಮರೆವು  ಕರುಣೆ ಹೇಗಾದೀತು? ಜೀವಲೋಕದ ಮೇಲೆ ಕರುಣೆ ಮುಂದಿನ ಸಂಚಿಕೆಯಲ್ಲಿ ನೋಡೋಣ

 

ಮುಂದುವರೆಯುವುದು

ಸೂಚನೆ : 06/07/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ  ಪತ್ರಿಕೆಯಲ್ಲಿ ಪ್ರಕಟವಾಗಿದೆ.