Sunday, July 7, 2024

ಯಕ್ಷ ಪ್ರಶ್ನೆ 97(Yaksha prashne 97)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ –  96 ಧೈರ್ಯವೆಂದರೆ ಯಾವುದು ?

ಉತ್ತರ - ಇಂದ್ರಿಯನಿಗ್ರಹ. 

ಧೈರ್ಯವು ಹೇಗೆ ಉಂಟಾಗುತ್ತದೆ? ಎಂಬುದು ಇಲ್ಲಿನ ಪ್ರಶ್ನೆಯ ಅಭಿಪ್ರಾಯವಾಗಿದೆ. ಆತ್ಮದ ಸ್ಥಿರತೆಯನ್ನು ಕಾಪಾಡಿಕೊಳ್ಳುವುದೇ ಪ್ರತಿಯೊಬ್ಬ ಮಾನವನ ಮುಖ್ಯ ಉದ್ದೇಶವಾಗಿದೆ. ಆತ್ಮದ ಸ್ಥಿರತೆಯು ಉಳಿದ ಅಂಗಗಳ ಸ್ಥಿರತೆಯಿಂದ ಮಾತ್ರ ಸಾಧ್ಯ. ಕೇವಲ ಆತ್ಮದ ಸ್ಥಿರತೆಯನ್ನು ಮಾತ್ರ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಮನಸ್ಸು ಇಂದ್ರಿಯಗಳನ್ನು ಪಳಗಿಸಬೇಕು. ಇದನ್ನೇ ಇಂದ್ರಿಯನಿಗ್ರಹ ಎನ್ನುತ್ತಾರೆ. 

ಇಂದ್ರಿಯನಿಗ್ರಹ ಅಥವಾ ಇಂದ್ರಿಯಜಯ ಮುಂತಾದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಯೋಗಶಾಸ್ತ್ರದ ಮೊರೆಹೊಗಬೇಕು. ಪಾತಂಜಲ ಯೋಗಸೂತ್ರದಲ್ಲಿ ಇಂದ್ರಿಯನಿಗ್ರಹವನ್ನು ಮಾಡುವ ವಿಧಾನವನ್ನು ತಿಳಿಸಲಾಗಿದೆ. ಯೋಗಸೂತ್ರ ಈ ರೀತಿಯಾಗಿದೆ " ಸ್ವವಿಷಯಾಸಂಪ್ರಯೋಗೇ ಚಿತ್ತಸ್ವರೂಪಾನುಕಾರಃ ಇವ ಇಂದ್ರಿಯಾಣಾಂ ಪ್ರತ್ಯಾಹಾರಃ" ಎಂದು.  ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬುದಾಗಿ ಐದು ಜ್ಞಾನೇಂದ್ರಿಯಗಳಿವೆ. ಈ ಇಂದ್ರಿಯಗಳಿಂದ ರೂಪ, ಶಬ್ದ, ಗಂಧ, ರಸ ಮತ್ತು ಸ್ಪರ್ಶ ಎಂಬ ವಿಷಯಗಳ ಜ್ಞಾನವು ಬರುತ್ತದೆ. ಈ ಜ್ಞಾನಗಳು ಬೇಡವೆಂಬ ತಾತ್ಪರ್ಯವಲ್ಲ. ಯಾವ ಜ್ಞಾನವು ಮನಸ್ಸಿನ ಒಳಹರಿವಿಗೆ ಪೂರಕವಾಗುತ್ತದೆಯೋ ಅಂತಹ ಜ್ಞಾನವನ್ನು ಪಡೆಯುವಂತಾಗಬೇಕು. ಉಳಿದವು ಒಳಹರಿವಿಗೆ ಅನುಕೂಲಿಸಲಾರವು. ಈ ಶರೀರವನ್ನು 'ಯೋಗಭೋಗಾಯತನಂ ಶರೀರಂ' ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಶರೀರವನ್ನು ಕೇವಲ ನಿವೃತ್ತಿಮಾರ್ಗಕ್ಕೆ ಮಾತ್ರ ಬಳಸಿಕೊಳ್ಳದೇ ಪ್ರವೃತ್ತಿಮಾರ್ಗಕ್ಕೂ ಬಳಸಿಕೊಳ್ಳಬೇಕು ಎಂಬ  ಮಾತನ್ನೂ ಹೇಳುತ್ತಿದ್ದರು. ಇದೇ ಶರೀರದಲ್ಲೇ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳೂ ಇವೆ. ಇದಕ್ಕರ್ಥ ಇಷ್ಟೇ ಈ ಶರೀರದಲ್ಲಿರುವ ಇಂದ್ರಿಯಗಳು ಯೋಗಕ್ಕೂ ಭೋಗಕ್ಕೂ ಸಾಧನವೆಂದು. ಇದೇ ವಸ್ತುತಃ ಇಂದ್ರಿಯನಿಗ್ರಹ. ತಿನ್ನಲೇಬಾರದು ಎಂಬ ವಿಷಯವಿಲ್ಲ. ಎಷ್ಟು ತಿನ್ನಬೇಕು? ಯಾವಾಗ ತಿನ್ನಬೇಕು? ಹೇಗೆ ತಿನ್ನಬೇಕು? ಯಾವುದನ್ನು ತಿನ್ನಬೇಕು? ಎಂಬ ನಿಯಮವು ಯಾವ ರೀತಿಯಾಗಿ ನಾಲಗೆಯ ನಿಗ್ರಹವೋ ಅಂತೆಯೇ ಎಲ್ಲಾ ಇಂದ್ರಿಯಗಳಿಗೂ ಇಂತಹದ್ದೇ ನಿಯಮಗಳಿರುತ್ತವೆ. ವಸ್ತುತಃ ನಿಯಮವೇ ನಿಗ್ರಹ.  ಹಿತವೂ ಮಿತವೂ ಆಗಿರುವಂತಹದ್ದೇ ನಿಗ್ರಹ. ಶಬ್ದಾದಿ ವಿಷಯಗಳಲ್ಲಿ ಆಸಕ್ತಿ ಹೊಂದದಿರುವುದು, ರಾಗ ಅಥವಾ ಅಂಟು ಇಲ್ಲದಿರುವುದು. ವೇದವಿಹಿತವಾದ ಅಥವಾ ಶಾಸ್ತ್ರಕ್ಕೆ ಅವಿರೋಧವಾದ ಶಬ್ದಾದಿ ವಿಷಯಾಸಕ್ತಿಯನ್ನೂ ಇಂದ್ರಿಯ ನಿಗ್ರಹ ಎಂದೇ ಕರೆಯುತ್ತಾರೆ. ಯಾವುದು ಮನಸ್ಸಿನ ಏಕಾಗ್ರತೆಗೆ ಕಾರಣಬಾಗ್ಯೇ ವಸ್ತುತಃ ಇಂದ್ರಿಯ ನಿಗ್ರಹ ಎನ್ನಬಹುದು. ಎಲ್ಲಾ ನಿಗ್ರಹಕ್ಕಿಂತಲೂ ಶ್ರೇಷ್ಠನಿಗ್ರಹ ಯಾವುದು ? ಎಂದರೆ ಯೋಗಸೂತ್ರ "ತತಃ ಪರಮವಶ್ಯತಾ ಇಂದ್ರಿಯಾಣಾಮ್" ಎಂದು ಹೇಳಿದೆ. ಶಬ್ದಾದಿ ವಿಷಯಗಳು ಗುಣಗಳು. ಅವು ಯಾವುದೋ ಒಂದು ದ್ರವ್ಯವನ್ನು ಆಶ್ರಯಿಸಿಯೇ ಇರಬೇಕಾಗುತ್ತದೆ. ಅಂದರೆ ಶಬ್ದಾದಿ ವಿಷಯಗಳ ಅಂಟು ಇಲ್ಲದಿದ್ದಾಗ ಅವುಗಳ ಆಶ್ರಿರವಾದ ಪದಾರ್ಥಗಳ ಬಗೆಗಿನ ಅಂತೂ ದೂರವಾಗುತ್ತಾದೆ. ಅದರ ಪರಿಣಾಮವಾಗಿ ಮನಸ್ಸು ಬಾಹ್ಯಮುಖವನ್ನು ಬಿಟ್ಟು ಅಂತರ್ಮುಖವಾಗುತ್ತದೆ. ಬಾಹ್ಯ ಮತ್ತು ಆಂತರ ಎಂಬುದಾಗಿ ಎರಡು ಬಗೆಯ ಇಂದ್ರಿಯಗಳಿವೆ.  ಮನಸ್ಸನ್ನು ಅಂತರಿಂದ್ರಿಯ, ಬಾಹ್ಯ ಇಂದ್ರಿಯಗಳು ಕಣ್ಣು ಕಿವಿ ಇತ್ಯಾದಿ ಐದು. ಇವೆರಡರ ನಿಯಮನವೇ ಇಂದ್ರಿಯನಿಗ್ರಹ. ಇದರಿಂದ ಇಂದ್ರಿಯಗಳು ಮನಸ್ಸಿನಲ್ಲಿ ಲಯಗೊಳ್ಳುತ್ತವೆ. ಮನಸ್ಸು ಮನಸಸ್ಪತಿಯಲ್ಲಿ ಲಯಗೊಳ್ಳುತ್ತದೆ.

ಸೂಚನೆ : 7/7/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.