Sunday, April 28, 2024

ವ್ಯಾಸ ವೀಕ್ಷಿತ - 85 ಪಾಂಡವರು ಹಸ್ತಿನಾವತಿಗೆ ತೆರಳುವರೆ? (Vyaasa Vikshita - 85 Pandavaru Hastinavatige Teraluvare?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಧೃತರಾಷ್ಟ್ರನ ಸೂಚನೆಯಂತೆ ವಿದುರನು ದ್ರುಪದನಲ್ಲಿಗೆ ಬಂದು, ಮಾತೃ-ಪತ್ನೀಸಮೇತರಾಗಿ ಪಾಂಡವರು  ಹಸ್ತಿನಾವತಿಗೆ ಬರಬೇಕೆಂಬ ಪ್ರಾರ್ಥನೆಯನ್ನು ಸಲ್ಲಿಸುತ್ತಾ ಹೀಗೆಂದನು:

"ಈ ನರಶ್ರೇಷ್ಠರೂ (ಎಂದರೆ ಪಾಂಡವರೂ) ಸಹ ದೀರ್ಘಕಾಲವೇ ಪರದೇಶವಾಸವನ್ನು ಹೊಂದಿರುವುದಾಗಿದೆ: ನಗರವನ್ನು ಕಾಣಲು ಅವರೂ ಉತ್ಸುಕರಾಗಿಯೇ ಇರುವರಲ್ಲವೆ? ಅಂತೆಯೇ ದ್ರೌಪದಿಯೂ ಸಹ. ಅತ್ತ, ಪಾಂಚಾಲರಾಜಕುಮಾರಿಯಾದ ಕೃಷ್ಣೆಯನ್ನು ಕಾಣಲು ಕುರುವಂಶದ ನಾರಿಯರೆಲ್ಲರೂ ಕುತುಕವುಳ್ಳವರಾಗಿದ್ದಾರೆ. ನಮ್ಮ ನಗರ ಹಾಗೂ ರಾಷ್ಟ್ರದ ಸಮಸ್ತಜನರೂ ಇವರೆಲ್ಲರ ಆಗಮನವನ್ನು ಎದುರುನೋಡುತ್ತಿದ್ದಾರೆ.

ಆದ್ದರಿಂದ ನೀನು ಪಾಂಡುಪುತ್ರರಿಗೆ ಆದೇಶವನ್ನು ಕೊಡು – ಸಪತ್ನೀಕರಾಗಿ ಅವರು ಹಸ್ತಿನೆಗೆ ಹೊರಟುಬರುವುದಾಗಲಿ; ವಿಳಂಬ ಬೇಡ. ಈ ವಿಷಯದಲ್ಲಿ ನನಗೆ ಹೀಗೆ ತೋರುತ್ತದೆ. ಮಹಾತ್ಮರಾದ ಪಾಂಡವರಿಗೆ ಹೊರಟುಬರಲು ಆಜ್ಞೆಯನ್ನು ನೀನು ಯಾವಾಗ ಕೊಡುವೆಯೋ, ಆಗಲೇ ಶೀಘ್ರಗಾಮಿಗಳಾದ ದೂತರನ್ನು ಧೃತರಾಷ್ಟ್ರನಲ್ಲಿಗೆ ನಾನು ಕಳುಹಿಸುವೆ: ಕುಂತಿಯೂ ಕೌಂತೇಯರೂ ಕೃಷ್ಣೆಯೂ, ಹಸ್ತಿನಾಪುರಕ್ಕೆ ಆಗಮಿಸುತ್ತಿದ್ದಾರೆಂಬ ಸಂದೇಶವನ್ನು ಕಳುಹಿಸಿಕೊಡುವೆ" – ಹೀಗೆ ಹೇಳಿದನು, ವಿದುರ.

ಆಗ ದ್ರುಪದನು ಹೇಳಿದನು: ಮಹಾಪ್ರಾಜ್ಞನಾದ ವಿದುರನೇ, ನೀನು ಹೇಳಿದುದೆಲ್ಲವೂ ಯುಕ್ತವೇ ಆಗಿದೆ. ಈ ಸಂಬಂಧವು ನೆರವೇರಿರುವುದು ನನಗೂ ಮಹಾಹರ್ಷವನ್ನೇ ಒದಗಿಸಿರುವುದು. ಮಹಾತ್ಮರಾದ ಈ ಪಾಂಡವರೂ ತಮ್ಮ ನಗರಕ್ಕೆ ಹಿಂದಿರುಗುವುದೂ ಯುಕ್ತವೇ ಆಗಿರುವಂತಹುದು. ಆದರೂ ಸಹ ನಾನು ನನ್ನ ಬಾಯಿಂದ ಹೊರಡಿರೆಂದು ಸೂಚಿಸುವುದು ಯುಕ್ತವಲ್ಲವಷ್ಟೆ. ಕುಂತೀಪುತ್ರನಾದ ವೀರಯುಧಿಷ್ಠಿರ, ಭೀಮಾರ್ಜುನರು, ಹಾಗೂ ನರಶ್ರೇಷ್ಠರಾದ ಅವಳಿಜವಳಿಗಳು (ನಕುಲ-ಸಹದೇವರು), ಹಾಗೂ ಧರ್ಮಜ್ಞರಾದ ರಾಮ-ಕೃಷ್ಣರು - ಇವರುಗಳಿಗೆ ತೋರಿದಾಗ ಹೊರಟುಬರಲಿ. ಪುರುಷವ್ಯಾಘ್ರರಾದ ಬಲರಾಮ-ಕೃಷ್ಣರಂತೂ ಪಾಂಡವರ ಪ್ರಿಯಹಿತಗಳಲ್ಲೇ ಸದಾ ತೊಡಗಿರುವವರು, ಎಷ್ಟಾದರೂ! - ಎಂದನು.

ಆಗ ಯುಧಿಷ್ಠಿರನು ಹೇಳಿದನು - "ನಾವೂ ನಮ್ಮ ಸಹಚರರೂ ತಮಗೇ ಅಧೀನರಾಗಿದ್ದೇವೆ." ಆಗ ವಾಸುದೇವನು, "ಇವರುಗಳು ಹೊರಡುವುದೇ ನನಗೆ ಸರಿದೋರುತ್ತದೆ. ಸರ್ವಧರ್ಮಗಳನ್ನೂ ಬಲ್ಲವನಾದ ದ್ರುಪದನು ಹೇಗೆ ಭಾವಿಸುತ್ತಾನೋ ಹಾಗೂ ಆಗಬಹುದು" – ಎಂದು ಹೇಳಿದನು.

ಅದಕ್ಕೆ ದ್ರುಪದನು ಹೇಳಿದನು - ವೀರವರನೂ ಪುರುಷೋತ್ತಮನೂ ಆದ ಶ್ರೀಕೃಷ್ಣನು ಏನನ್ನು ಮಾಡುವುದೀಗ ಯೋಗ್ಯವೆಂದು ಭಾವಿಸುತ್ತಾನೋ ನನಗೂ ಅದು ಸಂಮತವಾಗಿರುವುದೆಂಬುದರಲ್ಲಿ ಸಂಶಯವಿಲ್ಲ. ಆದರಣೀಯರಾದ ಪಾಂಡವರು ನನಗೀಗ ಯಾವ ರೀತಿ ಆತ್ಮೀಯರೋ,  ಅದೇ ರೀತಿಯಲ್ಲಿಯೇ ಕೃಷ್ಣನಿಗೂ ಆತ್ಮೀಯರೆಂಬುದರಲ್ಲಿ ಸಂಶಯವಿಲ್ಲ. ಪಾಂಡವರ ವಿಷಯದಲ್ಲಿ ಅವರಿಗೆ ಶ್ರೇಯಸ್ಸು ಯಾವುದು ಎಂಬುದಾಗಿ ನರಶ್ರೇಷ್ಠನಾದ ಕೇಶವನು ಹೇಗೆ ಚಿಂತಿಸುತಾನೋ ಅಷ್ಟರಮಟ್ಟಿಗೆ ಪಾಂಡುಪುತ್ರನಾದ ಯುಧಿಷ್ಠಿರನೇ ಚಿಂತಿಸಲಾರ! (ಶ್ರೇಯೋ ಧ್ಯಾಯತಿ ಕೇಶವಃ) - ಎಂದನು.

ಬಳಿಕ ವಿದುರನು ಕುಂತೀಸದನವನ್ನು ಪ್ರವೇಶಿಸಿದನು ಅವಳ ಪದವನ್ನು ಸ್ಪರ್ಶಿಸಿದನು. ಶಿರಸಾ ಬಾಗಿದನು. ಕುಂತಿಗೆ ದುಃಖವುಕ್ಕಿತು. ಆಕೆ ಹೇಳಿದಳು: ವಿದುರಾ, ಪಾಂಡವರು ನಿನ್ನ ಮಕ್ಕಳೇ ಸರಿ. ನಿನ್ನ ಅನುಗ್ರಹದಿಂದಲ್ಲವೆ, ಅರಗಿನ ಮನೆಯಲ್ಲಿದ್ದ ಅವರು ಬದುಕಿಬಂದಿರುವುದು? ದೂರದಲ್ಲಿರುವ ತನ್ನ ಮರಿಗಳನ್ನು ಕುರಿತಾಗಿ ಆಮೆಯು ಚಿಂತಿಸುವುದಂತೆ; ಅಷ್ಟರಿಂದಲೇ ಅವು ಬೆಳೆದುಕೊಳ್ಳುವುವಂತೆ, ಕೂಡ! ಇಲ್ಲಾದದ್ದೂ ಹಾಗೆಯೇ. ಪ್ರಾಣಾಂತಿಕವಾದ (ಎಂದರೆ ಜೀವವನ್ನೇ ಕೊನೆಗಾಣಿಸುವ) ಹಲವು ದುಃಖಗಳು ಬಂದೊದದಿದವು. ಅದರೂ ನನ್ನ ಮಕ್ಕಳು ಸುರಕ್ಷಿತರಾಗಿಯೇ ಇದ್ದಾರೆ - ಎಂದು ಮುಂತಾಗಿ ಹಲುಬಿದಳು.

ಸೂಚನೆ : 28/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.