ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಆದ್ದರಿಂದ ಸೂತನೇ (ಎಂದರೆ ವಿದುರನೇ), ಹೋಗು, ನೀನೇ ಪಾಂಡವರನ್ನು ಕರೆತಾ. ಸರ್ವಸತ್ಕಾರಗಳೊಂದಿಗೆ ಅವರನ್ನು ತಾಯಿಕುಂತಿಯೊಂದಿಗೆ ಹಾಗೂ ದೇವರೂಪಿಣಿಯಾದ ಕೃಷ್ಣೆ(ಎಂದರೆ ದ್ರೌಪದಿ)ಯೊಂದಿಗೆ ಕರೆತಾ.
ಪಾಂಡವರು ಜೀವಿಸಿರುವರೆಂಬುದೇ ಒಂದು ಸೌಭಾಗ್ಯ. ಕುಂತಿಯೂ ಬದುಕಿರುವಳೆಂಬುದೇ ಒಂದು ಸೌಭಾಗ್ಯ. ಹಾಗೆಯೇ ಇದಲ್ಲದೆ ಆ ಮಹಾರಥರಿಗೆ ದ್ರೌಪದಿಯು ದೊರೆತಿರುವಳು - ಎಂಬುದು ಸಹ ಸೌಭಾಗ್ಯವೇ ಸರಿ. ಮಹಾದ್ಯುತಿಸಂಪನ್ನನೇ (ಎಂದರೆ ಮಹಾತೇಜಶ್ಶಾಲಿಯಾದ ವಿದುರನೇ) ನಮ್ಮಗಳ ವೃದ್ಧಿಯಾಗುತ್ತಿದೆಯೆಂಬುದೂ ಸೌಭಾಗ್ಯದ ಮಾತೇ. ಪುರೋಚನನು ಮುಗಿದುಹೋದನೆಂಬುದೂ ಸೌಭಾಗ್ಯವೇ. ನನ್ನ ಮಹಾದುಃಖವೂ ತೊಲಗಿತೆಂಬುದೂ ಸೌಭಾಗ್ಯವೇ ಸರಿ." ಎಂದು ಹೇಳಿದನು.
ಧೃತರಾಷ್ಟ್ರನ ಅಪ್ಪಣೆಯಂತೆ ವಿದುರನು ಹೊರಟನು. ರತ್ನಗಳು, ವಿಧವಿಧವಾದ ಐಶ್ವರ್ಯಗಳು - ಇವನ್ನೆಲ್ಲಾ ತೆಗೆದುಕೊಂಡು ದ್ರೌಪದೀ, ಪಾಂಡವರು, ಹಾಗೂ ಯಜ್ಞಸೇನ (ದ್ರುಪದ) - ಇವರಿರುವಲ್ಲಿಗೆ ಹೋದನು. ಧರ್ಮಜ್ಞನೂ ಧರ್ಮಶಾಸ್ತ್ರವಿಶಾರದನೂ ಆದ ಆತನು ನ್ಯಾಯವಾದ ಪರಿಯಲ್ಲಿ ದ್ರುಪದ ಮುಂತಾದವರನ್ನು ಸಮೀಪಿಸಿದನು. ದ್ರುಪದನಾದರೂ ವಿದುರನನ್ನು ಧರ್ಮಾನುಸಾರ ಬರಮಾಡಿಕೊಂಡನು. ಇಬ್ಬರೂ ಪರಸ್ಪರ ಕುಶಲವಾರ್ತೆಯನ್ನು ಮಾಡಿಕೊಂಡರು.
ಅಲ್ಲಿ ಪಾಂಡದವರನ್ನು ಕಂಡ ವಿದುರನು ಜೊತೆಗೇ ಕೃಷ್ಣನನ್ನೂಕಂಡನು; ಸ್ನೇಹಭಾವದಿಂದ ಅವರನ್ನು ಆಲಿಂಗಿಸಿಕೊಂಡನು. ಬಳಿಕ ಅವರ ಅನಾಮಯವನ್ನು ಕೇಳಿದನು. (ಆಮಯ ಎಂದರೆ ರೋಗ; ಅದಿಲ್ಲದಿರುವಿಕೆಯೇ ಅನಾಮಯ. ಬ್ರಾಹ್ಮಣರಲ್ಲಿ ಕುಶಲಪ್ರಶ್ನೆಯು ಹೇಗೆ ವಾಡಿಕೆಯೋ ಹಾಗೆ ಕ್ಷತ್ರಿಯರಲ್ಲಿ ಅನಾಮಯಪ್ರಶ್ನೆಯು ವಾಡಿಕೆ: ಆರೋಗ್ಯವೇ? – ಎಂದು ವಿಚಾರಿಸುವುದು.)
ಯಥಾಕ್ರಮವಾಗಿ - ಎಂದರೆ ಹಿರಿಯರು ಮೊದಲು, ಚಿಕ್ಕವರು ಆಮೇಲೆ ಎಂಬ ಕ್ರಮದಲ್ಲಿ - ಅವರುಗಳೂ ಆ ವಿದುರನನ್ನು ಆದರಿಸಿದರು. ಧೃತರಾಷ್ಟ್ರನ ವಚನದಂತೆ ಸ್ನೇಹಪೂರ್ವಕವಾಗಿ ಮತ್ತೆ ಮತ್ತೆ ಎಲ್ಲರ ಅನಾಮಯಪ್ರಶ್ನವನ್ನು ಮಾಡಿದನು, ವಿದುರ. ರತ್ನಗಳನ್ನೂ ವಿವಿಧವಾದ ವಸುಗಳನ್ನೂ (ಎಂದರೆ ಸಂಪತ್ತುಗಳನ್ನೂ) ಕೊಟ್ಟನು: ಅವು ಪಾಂಡವರಿಗೂ ಕುಂತಿಗೂ ದ್ರೌಪದಿಗೂ ಹಾಗೂ ದ್ರುಪದನಿಗೂ ಮತ್ತು ಆತನ ಮಕ್ಕಳಿಗೂ ಕೌರವರು ಇತ್ತಿರುವಂತಹವು.
ನಮ್ರತೆಯಿಂದ ಬಗ್ಗಿದವನಾಗಿ, ಅಮಿತ-ಮತಿಯಾದ ವಿದುರನು ಕೇಶವ ಪಾಂಡವರುಗಳ ಸಂನಿಧಿಯಲ್ಲಿ ದ್ರುಪದನನ್ನು ಸಂಬೋಧಿಸಿ ಹೀಗೆಂಬುದಾಗಿ ಹೇಳಿದನು:
"ರಾಜನೇ, ಮಂತ್ರಿಗಳೊಂದಿಗೆ ಹಾಗೂ ಪುತ್ರನೊಂದಿಗೆ ನನ್ನೀ ಮಾತನ್ನು ಕೇಳು. ಧೃತರಾಷ್ಟ್ರನು ತನ್ನ ಪುತ್ರರು-ಮಂತ್ರಿಗಳು-ಬಂಧುಗಳೊಂದಿಗೆ ಸಂತೋಷದಿಂದ ನಿಮ್ಮೆಲ್ಲರ ಕುಶಲಪ್ರಶ್ನೆಯನ್ನು ಮತ್ತೆ ಮತ್ತೆ ಮಾಡಿರುವನು. ತಮ್ಮೊಂದಿಗೆ ಯಾವ ಸಂಬಂಧವು ಉಂಟಾಗಿದೆಯೋ, ಅದರಿಂದ ಬಹುವಾಗಿ ನಿನ್ನ ವಿಷಯದಲ್ಲಿ ಸಂತೋಷಗೊಂಡಿದ್ದಾನೆ. ಹಾಗೆಯೇ ಮಹಾಪ್ರಾಜ್ಞನಾದ ಭೀಷ್ಮನೂ ಸಹ ಕೌರವರೆಲ್ಲರೊಂದಿಗೆ ನಿನ್ನ ಕುಶಲವನ್ನು ಕೇಳುತ್ತಿದ್ದಾನೆ. ಹಾಗೆಯೇ ನಿನ್ನ ಪ್ರಿಯಸ್ನೇಹಿತನಾದ ಮಹಾಪ್ರಾಜ್ಞನಾದ ದ್ರೋಣನೂ ಸಹ ಆಲಿಂಗಿಸಿಕೊಂಡು ನಿನ್ನ ಕುಶಲವನ್ನು ವಿಚಾರಿಸಿದ್ದಾನೆ.
ಹಾಗೆಯೇ, ಪಾಂಚಾಲದೇಶರಾಜನೇ, ನಿನ್ನೊಡನೆ ಸಂಬಂಧವನ್ನು ಪಡೆದವನಾಗಿ, ಕೌರವನೂ (ಎಂದರೆ ಧೃತರಾಷ್ಟ್ರನೂ) ತನ್ನನ್ನು ಧನ್ಯನಾದವನನ್ನಾಗಿ ಭಾವಿಸುತ್ತಾನೆ. ಹಾಗೆಯೇ ಇತರ ಕೌರವರೂ ಸಹ ಭಾವಿಸುತ್ತಾರೆ. ನಿನ್ನೊಂದಿಗೆ ಸಂಬಂಧವನ್ನು ಹೊಂದಿರುವಂತಹುದು ಅದೆಷ್ಟು ಸಂತೋಷವನ್ನುಂಟುಮಾಡಿದೆಯೋ ಅಷ್ಟು ಸಂತೋಷವನ್ನು ರಾಜ್ಯಪ್ರಾಪ್ತಿಯು ಸಹ ಅವರಿಗೆ ಉಂಟುಮಾಡಿಲ್ಲ. ಇದನ್ನರಿತವನಾಗಿ ನೀನು ಪಾಂಡವರನ್ನು ಹಸ್ತಿನಾಪುರಕ್ಕೆ ಹೊರಡಿಸು: ಪಾಂಡವರನ್ನು ಕಾಣಲು ಕೌರವರೂ ಬಹಳವೇ ತ್ವರೆಪಡುತ್ತಿದ್ದಾರೆ – ಎಂಬುದಾಗಿ ಹೇಳಿದನು.