Sunday, April 7, 2024

ಅಷ್ಟಾಕ್ಷರೀ​ - 56 ಉತ್ತಿಷ್ಠ ನರಶಾರ್ದೂಲ (Astaksari 55 Uttistha Narashardula)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


"ಕೌಸಲ್ಯಾ ಸುಪ್ರಜಾ ರಾಮ" ಎಂಬ ಮಾತನ್ನು ಯಾರು ಕೇಳಿಲ್ಲ? ಶನಿವಾರವು ಬಂತೆಂದರೆ ಬೆಳಿಗ್ಗೆಯೇ ಕೇಳಿಸಿಕೊಳುವ ಮಂಗಳಪದ್ಯಗಳಲ್ಲಿ ಇದೊಂದು ಪದ್ಯದ ಪಾದ. ಇದು ವಾಲ್ಮೀಕಿ ರಾಮಾಯಣದಲ್ಲಿ ಬರುವ ಮಾತಾದ್ದರಿಂದ, ವಾಲ್ಮೀಕಿಗಳು ಮಹರ್ಷಿಗಳೆನಿಸುವುದರಿಂದ ಅದನ್ನು ಬಳಸುವುದಾಯಿತು.

ವಾಲ್ಮೀಕಿಗಳಿಗೆ ಯಾವ ಪ್ರಸಂಗವೊದಗಿ ಈ ಮಾತನ್ನು ಹೇಳಿದರು? ರಾಮಲಕ್ಷ್ಮಣರು ಇನ್ನೂ ಚಿಕ್ಕವರು. ತಾಟಕೆಯು ಕೊಡುತ್ತಿದ್ದ ಕಾಟಕ್ಕೆ ಒಂದು ಪರಿಹಾರವು ಬೇಕಿತ್ತು, ಯಜ್ಞಮಾಡುತ್ತಿದ್ದ ವಿಶ್ವಾಮಿತ್ರರಿಗೆ. ಅದಕ್ಕಾಗಿ ರಾಮಲಕ್ಷ್ಮಣರನ್ನು ತಮ್ಮ ತಪೋವನಕ್ಕೆ ಕರೆದೊಯ್ದರು, ವಿಶ್ವಾಮಿತ್ರರು. ದೂರದ ದಾರಿ, ಕಾಲ್ನಡಿಗೆ ಪ್ರಯಾಣ. ಹೀಗಾಗಿ ಮಧ್ಯದಲ್ಲೊಂದು ರಾತ್ರಿ ತಂಗಿ ಪ್ರಯಾಣ ಮುಂದುವರೆಸಬೇಕಿತ್ತು. ನಡೆದು ನಡೆದು ಆಯಾಸವಾಗಿತ್ತೋ ಏನೋ, ಅಂತೂ ಬಾಲಕರಾದ ರಾಮಲಕ್ಷ್ಮಣರು ಇನ್ನೂ ಮಲಗಿಯೇ ಇದ್ದರು; ಅವರನ್ನೆಬ್ಬಿಸಬೇಕಾದಾಗ ಹೇಳಿದ ಶ್ಲೋಕವೇ "ಕೌಸಲ್ಯಾ ಸುಪ್ರಜಾ ರಾಮ". ಏನು ಅದರ ಅರ್ಥ? "ಅಯ್ಯಾ ರಾಮ, ನಿನ್ನಿಂದಾಗಿ ಕೌಸಲ್ಯೆಯು ಸುಪ್ರಜಾಶಾಲಿನಿಯಾಗಿದ್ದಾಳೆ. ಬೆಳಗಿನ ಸಂಧ್ಯಾಕಾಲವಾಗುತ್ತಿದೆ. ಏಳಯ್ಯಾ, ನರಶ್ರೇಷ್ಠನೇ. ದೇವತಾಸಂಬಂಧಿಯಾದ ಕರ್ತವ್ಯವು ನೆರವೇರಬೇಕು, ನಿನ್ನಿಂದ" - ಎಂಬುದಾಗಿ.

ಹೀಗೆ "ಕೌಸಲ್ಯಾ ಸುಪ್ರಜಾ" ಎಂದು ಎರಡು ಪದಗಳಾಗಿ ನೋಡುವುದೂ ಉಂಟು; ಅಥವಾ "ಕೌಸಲ್ಯೆಯ ಸುಪ್ರಜೆಯೇ" ಎಂಬರ್ಥದಂತೆ, "ಕೌಸಲ್ಯಾಸುಪ್ರಜಾ" ಎಂಬುದಾಗಿ ಒಂದೇ ಪದವಾಗಿ ನೋಡುವುದೂ ಉಂಟು; ಆಗ ಅದು ರಾಮನಿಗೇ ಸಂಬೋಧನೆಯಾಗುವುದು. "ನ ಪ್ರಮದಿತವ್ಯಂ" ಎಂಬಂತೆ ಕರ್ತವ್ಯದಲ್ಲಿ ಚ್ಯುತಿಯಾಗದಿರುವಂತೆ ಹೇಳಿರುವ ಎಚ್ಚರದ ಮಾತಿದೆಂದು ಶ್ರೀರಂಗಮಹಾಗುರುಗಳು ಸೂಚಿಸಿದ್ದರು: ಗೀತೆಯಲ್ಲಿ ಕೃಷ್ಣನು ಹೇಳುವಂತೆ, "ಶ್ರೇಷ್ಠರು ಏನೇನನ್ನು ಆಚರಿಸುವರೋ ಅದದನ್ನೇ ಸಾಧಾರಣರೂ ಮಾಡಹತ್ತುವರು". ಹೀಗಾಗಿ ರಾಮನು ಆದರ್ಶಗುಣಸಂಪನ್ನರಾಗಿದ್ದರೆ ಮುಂದೆ ಜನತೆಗೆ ಮಾರ್ಗದರ್ಶಿಯಾಗಬಲ್ಲನು - ಎಂಬ ಋಷಿಸಂದೇಶವು ಇಲ್ಲಿದೆ.

ಇದೆಲ್ಲವೂ ಸರಿಯೇ, ಆದರೆ ರಾಮನನ್ನು "ನರಶಾರ್ದೂಲ" ಎಂದು ಇಲ್ಲಿ ಕರೆದಿದೆಯಲ್ಲವೇ? - ಎಂಬುದು ಪ್ರಶ್ನೆ. ಇಲ್ಲಿ ಮಾತ್ರವಲ್ಲ. ಇನ್ನೂ ಎರಡು ಪ್ರಸಂಗಗಳಲ್ಲಿ "ಉತ್ತಿಷ್ಠ ನರಶಾರ್ದೂಲ" ಎಂಬ ಮಾತಿದೆ. ಮೇಲೆ ಹೇಳಿದುದು ಬಾಲಕಾಂಡದಲ್ಲಿ. ಅಯೋಧ್ಯಾಕಾಂಡದಲ್ಲಿಯೂ ಯುದ್ಧಕಾಂಡದಲ್ಲಿಯೂ ಇವೇ ಮಾತುಗಳೇ ಬರುತ್ತವೆ. ಇವಲ್ಲಿ ಅಯೋಧ್ಯಾಕಾಂಡದ ಮಾತನ್ನು ಬಿಡಬಹುದು. ಏಕೆಂದರೆ ಅದು ಪಾದುಕೆಗಾಗಿ ಬಂದ ಭರತನನ್ನು ಸಂಬೋಧಿಸಿ ರಾಮನಾಡಿದ ಮಾತು. ಅದರ ಬಗ್ಗೆ ಚರ್ಚೆ/ವಿವರಣೆ ನಮಗೆ ಇಲ್ಲಿ ಪ್ರಕೃತವಲ್ಲ.

ಆದರೆ ಮುಂದಿನದು - ಎಂದರೆ ಯುದ್ಧಕಾಂಡದಲ್ಲಿ ಮತ್ತೆ ಬರುವ ಇದೇ ಮಾತನ್ನು ಲಕ್ಷ್ಮಣನು ರಾಮನನ್ನು ಕುರಿತಾಗಿ ಆಡುತ್ತಾನೆ. ರಾಮನು ಶೋಕಾತಿರೇಕದಲ್ಲಿ ಮುಳುಗಿಹೋಗಿದ್ದಾಗ ಹೇಳುವ ಮಾತು. ಶೋಕವು ಧೈರ್ಯ-ಶೌರ್ಯಗಳನ್ನು ಕುಗ್ಗಿಸಿಬಿಡಬಲ್ಲುದು. ಆದ್ದರಿಂದ ವ್ಯಾಕುಲನಾಗಿ ತತ್ತರಿಸಿದ್ದ ರಾಮನನ್ನು ಎಚ್ಚರಿಸಿ ಎಬ್ಬಿಸುವ ಮಾತು ಬೇಕಾಗಿದ್ದಿತು. ಎಂದೇ ಲಕ್ಷ್ಮಣನ ಈ ಮಾತು. "ನೀ ಯಾರೆಂಬುದಾಗಿ ನಿನ್ನನ್ನು ನೀನೇ ಅರಿಯೆಯೇ?" ಎಂದು ಕೇಳುತ್ತಿದ್ದಾನೆ, ಲಕ್ಷ್ಮಣ.

ಗೀತೆಯಲ್ಲಿ, ಅರ್ಜುನನು ಶೋಕಮೋಹಗಳಿಗೆ ತುತ್ತಾಗಿ ತತ್ತರಿಸಿ ಕುಸಿದಿದ್ದಾಗ ಕೃಷ್ಣನು ಅವನನ್ನು ಎಚ್ಚರಗೊಳಿಸಿ ತಿಳಿವಳಿಕೆಯಿತ್ತು ಕೆಲಸ ಮಾಡಿಸುವನಲ್ಲವೇ? ಒಂದರ್ಥದಲ್ಲಿ ಇದೂ ಹಾಗೆಯೇ. ಅಲ್ಲಿಗೆ ಎರಡೂ ಸಂದರ್ಭಗಳಲ್ಲೂ - ಎಂದರೆ ಮೇಲೆ ಹೇಳಿದಂತೆ ಬಾಲಕಾಂಡ-ಯುದ್ಧಕಾಂಡಗಳಲ್ಲಿ - ರಾಮನನ್ನು ಎಚ್ಚರಗೊಳಿಸಿ ಅವನಿಂದ ಆಗಿಸಬೇಕಾದ ಕಾರ್ಯವಿದೆಯೆಂಬುದಾಯಿತು. ಮೊದಲನೆಯದರಲ್ಲಿ ನಿದ್ರಾವಸ್ಥೆಯಲ್ಲಿದ್ದ ರಾಮನನ್ನು ಎಬ್ಬಿಸಬೇಕಾಗಿತ್ತು, ಗುರು ವಿಶ್ವಾಮಿತ್ರರು; ತಾಟಕಾವಧಕ್ಕೂ ಅಪ್ರಮಾದ(ಅಥವಾ ಎಚ್ಚರ)ವು ಬೇಕಲ್ಲವೇ? ಎರಡನೆಯದಲ್ಲಿ, ಶೋಕಾವಸ್ಥೆಯಲ್ಲಿದ್ದ ರಾಮನನ್ನು ಎಚ್ಚರಿಸಬೇಕಾಗಿತ್ತು, ತಮ್ಮ ಲಕ್ಷ್ಮಣ. ಮೊದಲನೆಯದರಲ್ಲಿ ಸದ್ಯಃಕರ್ತವ್ಯವಾಗಿದ್ದುದು ಪ್ರಾತಃಸಂಧ್ಯಾವಂದನೆ, ಎರಡನೆಯದರಲ್ಲಿ ಶೋಕವನ್ನು  ಕೊಡವಿಕೊಂಡು ಮಹಾಪೌರುಷದಿಂದ ರಾವಣಸಂಹಾರಕ್ಕಾಗಿ ಸಂನಾಹಗಳು ನಡೆಯಬೇಕಾಗಿದೆ. ಹೀಗೆ ನರಶಾರ್ದೂಲ – ಎಂದು ಕರೆಸಿಕೊಂಡವನು ತಮಸ್ಸನ್ನು ಕೊಡವಿಕೊಂಡೆದ್ದು, ಸತ್ತ್ವವೃದ್ಧಿಯನ್ನುಂಟುಮಾಡಿಕೊಂಡು ಅಸುರವಧೆಗೆ ಬೇಕಾಗುವ ಹೆಜ್ಜೆಗಳನ್ನಿಡಬೇಕಾಗಿದೆ.

ಏಳಯ್ಯಾ ನರಶಾರ್ದೂಲ - ಎಂಬಲ್ಲಿ ನರಶ್ರೇಷ್ಠ ಎಂಬ ಅರ್ಥವೇ ಇದೆಯಾದರೂ ಅದು ತನ್ನಲ್ಲಿಯ ಪೌರುಷವನ್ನು ಜಾಗರಗೊಳಿಸುವ ಮಾತು. ಶಾರ್ದೂಲವೆಂದರೆ ಹುಲಿ. ಯಾರನ್ನಾದರೂ ಮಹಾಪರಾಕ್ರಮಿಯೆನ್ನಲು "ನರಶ್ರೇಷ್ಠ" ಎನ್ನುವ ಬದಲು ನರವ್ಯಾಘ್ರ, ನರಶಾರ್ದೂಲ - ಎಂದು ಮುಂತಾಗಿ ಸಂಬೋಧಿಸುವುದುಂಟು.

ಯಾರೇ ಆಗಲಿ, ಮಾನಸಿಕಕ್ಲೇಶಕ್ಕೆ ಒಳಗಾಗಿದ್ದಾಗಲೋ ಹಿರಿದಾದ ಸಾಧನೆಗೆಂದು ಹೊರಡಬೇಕಾಗಿದ್ದಾಗಲೋ, ಇಂತಹ ಪ್ರಶಂಸಾವಚನವು ಉತ್ಸಾಹ-ಆತ್ಮವಿಶ್ವಾಸಗಳನ್ನು ಹೆಚ್ಚುಗೊಳಿಸೀತಲ್ಲವೇ?

ಸೂಚನೆ: 6/04/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.