Sunday, June 18, 2023

ಯಕ್ಷ ಪ್ರಶ್ನೆ41(Yaksha prashne 41)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪ್ರಶ್ನೆ – 41 ಹುಟ್ಟಿದವನು ಮತ್ತೆ ಮತ್ತೆ ಹುಟ್ಟುವವನು ಯಾರು ?

ಉತ್ತರ - ಚಂದ್ರ

ಈ ಪ್ರಪಂಚವು ಚರ ಮತ್ತು ಅಚರ ಎಂಬ ಎರಡು ವಿಧವಾದದ್ದು. ಅಚರವಾದುದರಿಂದ ಚರದ ಸೃಷ್ಟಿ. ಇವುಗಳು ಪರಸ್ಪರ ಒಂದು ಇನ್ನೊಂದನ್ನು ಆಶ್ರಯಿಸಿಕೊಂಡೇ ಇರುತ್ತದೆ. ಇಲ್ಲಿ ಚರವಾದದ್ದು ಎಂದರೆ ಅಶಾಶ್ವತವಾದ ಬದುಕು. ಅಚರ ಎಂದರೆ ಶಾಶ್ವತವಾದ ಬದುಕು. ಎರಡೂ ಇದ್ದಾಗ ಮಾತ್ರ ಎರಡಕ್ಕೂ ಬೆಲೆ ಮತ್ತು ಅಸ್ತಿತ್ವ. ಭತ್ತದ ಕಟಾವು ಆದಮೇಲೆ ಅದನ್ನು ಕಣಕ್ಕೆ ತಂದು ಹಾಕುತ್ತೇವೆ. ಅಲ್ಲಿ ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸಬೇಕಾತ್ತದೆ. ಆಗ ಕಣದಲ್ಲಿ ಂದು ಮೇಟಿಕಂಬವನ್ನು ನೆಟ್ಟಿಡುತ್ತಾರೆ. ಅದಕ್ಕೆ ಎತ್ತುಗಳನ್ನು ಕಟ್ಟಿ ತಿರುಗಿಸುತ್ತಾರೆ. ಇಲ್ಲಿ ಎತ್ತುಗಳು ಮಾತ್ರ ತಿರುಗುತ್ತವೆ ಹೊರತು ಮೇಟಿಕಂಬವಲ್ಲ. ಒಂದು ವೇಳೆ ಕಂಬವೂ ತಿರುತ್ತದೆ ಎಂದು ಭಾವಿಸಿದರೆ ಎತ್ತುಗಳು ಯಾವುದನ್ನು ನಂಬಿ ಅಲ್ಲೇ ಸುತ್ತುಹಾಕುತ್ತವೆ! ಅಲ್ಲವೇ? ಮನೆಯೆಂಬುದು ಸ್ಥಿರವಾಗಿದ್ದರಿಂದಲೇ ಎಲ್ಲರೂ ಮನೆಗೆ ಬರಬೇಕೆಂದು ಬಯಸುತ್ತಾರೆ. ಮನೆಯೇ ಮನಬಂದಕಡೆ ಓಡಾಡುವಂತಿದ್ದರೆ!? ಶಾಶ್ವತವಾದ ಬದುಕನ್ನು ನಂಬಿ ಬಾಳಾತಮಾಡುವಂತಿದ್ದರೆ ಮಾತ್ರವೇ ಅದಕ್ಕೊಂದು ಅರ್ಥವಿದೆ ಎಂಬ ವಿಷಯವನ್ನು ಮನಸ್ಸಿಗೆ ತಂದುಕೊಡಲೆಂದೇ ಯಕ್ಷನು ಧರ್ಮರಾಜನಿಂದ ಈ ಉತ್ತರವನ್ನು ನಿರೀಕ್ಷಿಸಿರಬಹುದು. 

ಮತ್ತೆ ಮತ್ತೆ ಹುಟ್ಟುವವರು ಯಾರು? ಎಂಬುದು ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ- ಚಂದ್ರ ಎಂದು. ಇಲ್ಲಿನ ಉತ್ತರವನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಹಿಂದಿನ ಉತ್ತರವನ್ನು ಮನಸ್ಸಿಗೆ ತಂದುಕೊಳ್ಳಬೇಕು. ಸ್ಥಿರವಾದುದು ಸೂರ್ಯ ಅಥವಾ ಆತ್ಮಾ. ಅದು ಒಂದೇ. ಎಂದೂ ಹುಟ್ಟುವುದಿಲ್ಲ. ಆದ್ದರಿಂದ ಕೊನೆಯೆಂಬುದೂ ಇಲ್ಲ. ಅದಕ್ಕೆ ಅದನ್ನು ನಿತ್ಯ ಎನ್ನುತ್ತಾರೆ. ಸೂರ್ಯನೇ ಚಂದ್ರನ ವೃದ್ಧಿಕ್ಷಯಗಳಿಗೆ ಕಾರಣವಲ್ಲವೇ? ಆತ್ಮದಿಂದಲೇ ಮನಸ್ಸು ಹುಟ್ಟಿತು. ಆತ್ಮಸ್ಥಾನದಲ್ಲಿರುವುದು ಸೂರ್ಯನಾದರೆ ಮನಸ್ಸಿನ ಸ್ಥಾನದಲ್ಲಿರುವುದು ಚಂದ್ರ. ಮನಸ್ಸಿನಿಂದ ಎಲ್ಲಾ ತತ್ತ್ವಗಳೂ ಹುಟ್ಟುತ್ತವೆ. ಮತ್ತು ಹುಟ್ಟಿದ ಎಲ್ಲಾತತ್ತ್ವಗಳೂ ಅಲ್ಲೇ ಲಯವಾಗುತ್ತವೆ. ಈ ಸಾರಾಂಶವನ್ನು ಇಲ್ಲಿನ ಉತ್ತರದಲ್ಲಿ ಗಮನಿಸಬಹುದು. 

ಮಾನವನ ಪ್ರತಿಯೊಂದು ವ್ಯವಹಾರವೂ ಮನಸ್ಸಿನ ಕಾರಣದಿಂದಲೇ ಆಗುತ್ತಿರುತ್ತದೆ. ಆಲೋಚನೆಯಾಗಲಿ ವಿಸ್ಮರಣೆಯಾಗಲಿ, ಆನಂದವಾಗಲಿ, ದುಃಖವಾಗಲಿ ಎಲ್ಲವೂ ಮನಸ್ಸಿನ ಕಾರಣದಿಂದಲೇ. ಮನಸ್ಸು ಆತ್ಮದ ಸಂಬಂಧವನ್ನು ಪಡೆದಾಗ ಮಾತ್ರ ಅನುಭವವು ಬರುತ್ತದೆ ಎಂದು ಶಾಸ್ತ್ರಗಳು ಸಾರುತ್ತವೆ. ಆತ್ಮವು ಮನಸ್ಸಿನ ಜೊತೆ ಸಂಪರ್ಕವನ್ನು ಹೊಂದುತ್ತದೆ. ಮನಸ್ಸು ಇಂದ್ರಿಯಗಳ ಜೊತೆ, ಇಂದ್ರಿಯಗಳು ಅರ್ಥದ ಜೊತೆ, ಹೀಗೆ ಆತ್ಮ ಮತ್ತು ಪದಾರ್ಥಗಳ ಸಂಪರ್ಕವು ಮನಸ್ಸಿನ ಮಾಧ್ಯಮದಿಂದಲೇ ಆಗುತ್ತದೆ. ಇದನ್ನೇ ವೇದವೂ " ಚಂದ್ರಮಾ ಮನಸೋ ಜಾತಃ। ಚಂದ್ರಃ ಮನೋ ಭೂತ್ವಾ ।" ಇತ್ಯಾದಿಯಾಗಿ ಹೇಳುತ್ತಿದೆ. ಚಂದ್ರನ ಉದಯಾಸ್ತಗಳೇ ಜೀವಿಯ ಜೀವನನಿರ್ವಹಣೆಗೆ ಮೂಲ. ಸಸ್ಯಗಳು ತಮ್ಮಲ್ಲಿ ಓಷಧೀಯಗುನಗಳನ್ನು ಪಡೆದು ಪೂರ್ಣವಾಗುವುದೂ ಇದೇ ಚಂದ್ರನಿಂದಲೇ. ಚಂದ್ರನಿಲ್ಲದೆ ಸೃಷ್ಟಿಯ ಯಾವ ಕಾರ್ಯವೂ ಅಸಾಧ್ಯ. ಹಾಗಾಗಿ  ಚಂದ್ರನೇ ಸೃಷ್ಟಿಗೆ ಕಾರಣ. ಪುನರುತ್ಪತ್ತಿಗೆ ಮೂಲಕಾರಣ. ಅಂತೆಯೇ ಚಂದ್ರತತ್ತ್ವದಿಂದಲೇ ಹುಟ್ಟಿದ ಮನಸ್ಸಿನಿಂದಲೇ ಪ್ರತಿಯೊಂದು ವ್ಯವಹಾರವೂ ಆರಂಭವಾಗುವುದು, ಮುಂದುವರಿಯುವುದು ಮತ್ತು ಕೊನೆಗೊಳ್ಳುವುದು. ಇದೇ ಉತ್ತರವನ್ನು ಮನಸ್ಸಿನಲ್ಲಿಟ್ಟುಕೊಂಡು ಚಂದ್ರನು ಮಾತ್ರವೇ ಮತ್ತೆ ಹುಟ್ಟನ್ನು ಪಡೆಯುವಂತವನು ಎಂಬ ಉತ್ತರವನ್ನು ಧರ್ಮರಾಜನು ಇಲ್ಲಿ ನೀಡಿದ್ದು ಸೊಗಸಾಗಿ ಕಾಣುತ್ತದೆ. 

 ಸೂಚನೆ : 18/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.