ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)
ಪ್ರಶ್ನೆ – 38 ಅಮೃತವು ಯಾವುದು ?
ಉತ್ತರ - ಗೋಕ್ಷೀರ
ಯಕ್ಷನು ಕೇಳುವ ಈ ಪ್ರಶ್ನೆಯು ಈ ಹಿಂದೆ ಕೇಳಿದ ಪ್ರಶ್ನೆಗಳಿಗೆ ಸಂಬಂಧಿಸಿದ್ದೇ ಆಗಿದೆ. ಪ್ರತಿಯೊಬ್ಬ ಮಾನವನು ತನ್ನ ಜೀವಿತಕಾಲದಲ್ಲಿ ಸಂಪಾದಿಸಲೆ ಬೇಕಾದುದು ಧರ್ಮ. ಈ ಧರ್ಮವು ಅಮೃತತ್ವವನ್ನು ಪಡೆಯಲು ಬೇಕಾದ ಸಾಧನವಾಗಿದೆ. ಅಂದರೆ ಅಮೃತತ್ವ- ಮೋಕ್ಷವನ್ನು ಪಡೆಯಲು ಬೇಕಾದುದು ಧರ್ಮವಾದರೆ, ಅಂತಹ ಧರ್ಮವನ್ನು ಸಾಧಿಸಲು ಮುಖ್ಯವಾದ ಸಾಧನ ಯಾವುದು? ಎಂಬುದು ಯಕ್ಷ ಕೇಳುವ ಪ್ರಶ್ನೆಯಾಗಿದೆ. ಗೋವಿನ ಹಾಲು ಅಂತಹ ಧರ್ಮವನ್ನು ಸಾಧಿಸಲು ಬೇಕಾದ ಪರಮೋತ್ಕೃಷ್ಟ ಸಾಧನವಾಗಿದೆ ಎಂಬುದು ಧರ್ಮರಾಜನ ಉತ್ತರದಲ್ಲಿರುವ ಅಂಶವಾಗಿದೆ.
ಹುಟ್ಟಿದ ಪ್ರತಿಯೊಂದು ಜೀವವೂ ಹಾಲಿನಿಂದಲೇ ಬದುಕುತ್ತದೆ. ತಾಯಿಯ ಹಾಲೇ ಮರಿಗೆ ಜೀವಾತು. ಆ ತಾಯಿಯ ಮರಿಗಷ್ಟೇ ಆ ಹಾಲು ಜೀವಾತುವಾಗಬಲ್ಲದು. ಆದರೆ ಕೆಲವು ಪ್ರಾಣಿಗಳ ಹಾಲು ತನ್ನ ಸಂತಾನಕ್ಕೆ ಮಾತ್ರ ಜೀವನೌಷಧವಾಗದೇ ಅನೇಕ ಪ್ರಾಣಿಗಳ ಪ್ರಾಣಧಾರಣೆಗೆ ಕಾರಣವಾಗಬಲ್ಲದು. ಅವುಗಳಲ್ಲಿ ಗೋವು ಮೊದಲಸ್ಥಾನದಲ್ಲಿ ನಿಲ್ಲುತ್ತದೆ. ಅದಕ್ಕೆ ಕಾರಣವಿಷ್ಟೇ ಆ ಹಾಲಿನಲ್ಲಿರುವ ಸಾರ. ಬದುಕಲು ಬೇಕು ಹಾಲು. ಮಗುವಾದ ಕೆಲವು ತಿಂಗಳವರೆಗೆ ಮಾತ್ರ ತಾಯಿಯ ಹಾಲು ಬೇಕಾಗುತ್ತದೆ. ಅನಂತರ ತಾಯಿಯ ಹಾಲು ಮಗುವಿನ ಬೆಳವಣಿಗೆಗೆ ಸಾಲದು. ಆದರೆ ಗೋವಿನ ಹಾಲು ಜೀವನ ಪರ್ಯಂತವೂ ಪ್ರಾಣಧಾರಣೆಗೆ ಬೇಕಾದ ಪೌಷ್ಟಿಕಾಂಶವನ್ನು ನೀಡಬಲ್ಲದು. ಆದ್ದರಿಂದಲೇ ಗೋವಿನ ಹಾಲನ್ನು ಆಯುರ್ವೇದದಲ್ಲಿ ಪೂರ್ಣಾಹಾರವೆಂದು ಪರಿಗಣಿತವಾಗಿದೆ. ಕ್ಷಿಪ್ರಬಲವನ್ನು ಕೊಡುವ ಪದಾರ್ಥಗಳಲ್ಲಿ ಗೋವಿನ ಹಾಲೂ ಕೂಡ ಒಂದು. ಹಸಿದವನಿಗೆ ತುಂಬಾ ಬಳಲಿಕೆ ಉಂಟಾಗಿದ್ದರೆ ಹಾಲುನ್ನು ಕೊಟ್ಟರೆ ಆತನಿಗೆ ಬಹಳ ಬೇಗ ಚೇತರಿಕೆ ಉಂಟಾಗುತ್ತದೆ. ರಾತ್ರಿಯಲ್ಲಿ ಕೇವಲ ಕ್ಷೀರಾನ್ನ ಭೋಜನವು ಪ್ರಶಸ್ತವಾದು ಎಂದು ಆಯುರ್ವೇದದಲ್ಲಿ ಅದರ ಪೂರ್ಣಾಹಾರವನ್ನು ಈ ರೀತಿಯಲ್ಲಿ ತಿಳಿಸಲಾಗಿದೆ. ಅಂದರೆ ಆಹಾರವು ಪ್ರಾಣಿಗಳ ಜೀವನಕ್ಕೆ ಬೇಕೇಬೇಕು. ಅದು ಹಾಲಿನ ರೂಪದಲ್ಲಿ.
ಮಾನವನ ಜೀವನ ಕೇವಲ ಪ್ರಾಣಧಾರಣಕ್ಕೆ ಮಾತ್ರ ಸೀಮಿತವಾದುದಲ್ಲ. 'ಪ್ರಾಣಾಃ ರಕ್ಷ್ಯಾಃ ತತ್ತ್ವಜಿಜ್ಞಾಸನಾರ್ಥಂ' ಎಂಬ ಮಾತಿನಂತೆ ಪ್ರಾಣರಕ್ಷಣೆಯ ಉದ್ದೇಶವೇ ತತ್ತ್ವವನ್ನು ತಿಳಿಯುವುದು. ಅಂದರೆ ಮತ್ತೆ ಮತ್ತೆ ದುಃಖವನ್ನು ಪಡೆಯದಿರುವ ಸ್ಥಿತಿಯನ್ನು ಪಡೆಯುವುದು ಎಂದರ್ಥ. ಇಹ ಜೀವನದಲ್ಲಿ ಪಡೆಯುವ ಸುಖವು ಶಾಶ್ವತವಲ್ಲ. ಶಾಶ್ವತಸುಖಕ್ಕಾಗಿ ಪ್ರಾಣಧಾರಣ ಮಾಡಬೇಕು ಎಂಬುದೇ ನಮ್ಮ ಪೂರ್ವಜರು ಹೇಳಿಕೊಟ್ಟ ಜೀವಿಕೆಯ ಉಪದೇಶ. ಅಂತಹ ಜೀವಿಕೆಗೆ ಗೋವಿನ ಹಾಲು ಶ್ರೇಷ್ಠವಾಗಿದೆ.
ಮೋಕ್ಷವನ್ನು ಅಥವಾ ಅಮೃತತ್ವವನ್ನು ಪಡೆಯಲು ಅದಕ್ಕೆ ಪೂರಕವಾದ ಆಹಾರಪದ್ಧತಿ ಆವಶ್ಯಕವಾದುದು. ನಮ್ಮ ಜೀವನದಲ್ಲಿ ಸಾತ್ತ್ವಿಕತೆಯನ್ನು ಬೆಳೆಸಿಕೊಂಡು ಹೋಗುವಂತಾಗಲು ಅಂತಹ ಸಾತ್ತ್ವಿಕವಾದ ಆಹಾರವೆ ಬೇಕಾಗುತ್ತದೆ. ಹಾಗಾಗಿ ಸಾತ್ತ್ವಿಕವಾದ ಆಹಾರದ ಪಟ್ಟಿಯನ್ನು ಮಾಡುವಾಗ ಆಯುರ್ವೇದವು ಗೋವಿನ ಹಾಲಿಗೆ ಪ್ರಥಮಸ್ಥಾನವನ್ನು ಕೊಡುತ್ತದೆ. ಅಂತಹ ಪರಮಸಾತ್ತ್ವಿಕವಾದ ಆಹಾರಪದಾರ್ಥ ಗೋವಿನ ಹಾಲು. ಕ್ಷೀರಕ್ಕೆ ಸಂಸ್ಕೃತದಲ್ಲಿ ನೀರು ಎಂಬ ಪರ್ಯಾಯಪದವೂ ಇದೆ. ನೀರಿನ ಪರ್ಯಾಯಪದವನ್ನು ಹೇಳುವಾಗ ಅಮರಕೋಶದಲ್ಲಿ 'ನೀರಕ್ಷೀರಾಂಬುಶಂಬರಮ್ । ಪಯಃ ಕೀಲಾಲಮ್ ಅಮೃತಮ್' ಅಮೃತ, ಕ್ಷೀರ, ನೀರು ಈ ಎಲ್ಲಾ ಪದಗಳು ಆ ಪದಾರ್ಥದಲ್ಲಿರುವ ಗುಣಧರ್ಮವನ್ನು ಪ್ರತೀಕಿಸುವುದಷ್ಟೇ! ಈ ಕಾರಣಕ್ಕೆ ಧರ್ಮರಾಜನ ಉತ್ತರ 'ಗೋಕ್ಷೀರವು ಯಾವರೀತಿಯಾಗಿ ಅಮೃತತ್ವದಾಯಕ' ಎಂಬುದನ್ನು ಜಗತ್ತಿಗೆ ತೋರಿಸುತ್ತದೆ.
ಸೂಚನೆ : 28/5/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.