Monday, June 12, 2023

ವ್ಯಾಸ ವೀಕ್ಷಿತ - 41 ವಸಿಷ್ಠ-ವಿಶ್ವಾಮಿತ್ರ ವೃತ್ತಾಂತ (Vyaasa Vikshita - 41 Vasishtha-Vishvamitra Vrittanta)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ವಿಶ್ವಾಮಿತ್ರನು ಒಮ್ಮೆ ವಸಿಷ್ಠರ ವಿಷಯದಲ್ಲಿ ತೀವ್ರವಾದ ಅಪಚಾರವನ್ನು ಮಾಡಿದನು. ಅವನ ವಂಶವನ್ನೇ ಅವರು ಅಡಗಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ತಮ್ಮ ಕೋಪವನ್ನೇ ಅಡಗಿಸಿಕೊಂಡರು. ತಮ್ಮ ನೂರು ಮಕ್ಕಳು ಅವನಿಂದಾಗಿ ಸಾವಿಗೀಡಾಗುವಂತಾಯಿತು. ಆದರೂ ದಾರುಣಕೃತ್ಯವನ್ನು ಅವರೆಸಗಲಿಲ್ಲ. ಮೃತರಾದ ಪುತ್ರರನ್ನು ಮತ್ತೆ ಜೀವಿಸುವಂತೆ ಮಾಡಲು ಸಾಮರ್ಥ್ಯವಿತ್ತಾದರೂ ವಿಧಿಯನ್ನು ಮೀರಿಹೋಗಲಿಲ್ಲ.

ಇಷ್ಟು ಸಂಯಮಸಂಪನ್ನರಾಗಿದ್ದ ಋಷಿಯನ್ನು ಪುರೋಹಿತನನ್ನಾಗಿ ಹೊಂದಿ, ಕುರುವಂಶದ ಅರಸರು ಅನೇಕ ಯಾಗಗಳನ್ನು ಪೂರೈಸಿ ಸಫಲರಾದರು. ತಮಗೂ ಅಂತಹ ಮಾರ್ಗದರ್ಶಕ-ಪುರೋಹಿತನೊಬ್ಬನಿದ್ದರೆ ಒಳ್ಳೆಯ ಏಳ್ಗೆಯುಂಟು.  ಹೀಗೆಂಬುದಾಗಿ ಗಂಧರ್ವನು ಹೇಳಿದನು.

ವಸಿಷ್ಠರಿಗೂ ವಿಶ್ವಾಮಿತ್ರರಿಗೂ ಆದ ವೈರವೇನೆಂಬುದನ್ನು ತಿಳಿಯಲು ಅರ್ಜುನನು ಕುತುಕಪಟ್ಟನು. ಆಗ ಆ ಕಥೆಯನ್ನು ಗಂಧರ್ವನು ಹೇಳಿದನು.

ವಿಶ್ವಾಮಿತ್ರನೊಮ್ಮೆ ವಸಿಷ್ಠರ ಆಶ್ರಮಕ್ಕೆ ಬಂದಾಗ ವಸಿಷ್ಠರು ಆತನನ್ನೂ ಆತನ ಪರಿವಾರವನ್ನೂ ಅದ್ಭುತವಾಗಿ ಸತ್ಕರಿಸಿದರು. ಅದು ಸಾಧ್ಯವಾದುದು ಅವರಲ್ಲಿದ್ದ ನಂದಿನಿಯೆಂಬ ಕಾಮಧೇನುವಿನಿಂದಾಗಿ. ಅದು ಸರ್ವಪ್ರದೆ (ಎಲ್ಲವನ್ನೂ ಕೊಡುವಂತಹುದು). ಅದನ್ನು ಕಂಡು ಆಶ್ಚರ್ಯಪಟ್ಟ ವಿಶ್ವಾಮಿತ್ರನು ತನಗೆ ಆ ಹಸುವು ಬೇಕೆಂದನು. ಅದನ್ನು ಸರ್ವಥಾ ಕೊಡಲಾಗದೆಂದು ವಸಿಷ್ಠರು ಹೇಳಲು, ಬಲಾತ್ಕಾರದಿಂದ ಅದನ್ನು ಒಯ್ಯಲು ವಿಶ್ವಾಮಿತ್ರನು ಉದ್ಯುಕ್ತನಾದನು. ನಂದಿನಿಯಿಂದ ಒಂದು ಸೈನ್ಯವೇ ಸೃಷ್ಟವಾಯಿತು; ಅದು ವಿಶ್ವಾಮಿತ್ರನ ಸೈನ್ಯವನ್ನು ಸದೆಬಡಿಯಿತು.

ತನ್ನ ಕ್ಷಾತ್ರಬಲವು ಏನೂ ಸಮರ್ಥವಾಗಲಿಲ್ಲವೆಂದು ವಿಶ್ವಾಮಿತ್ರನು ಕಂಡುಕೊಂಡನು; ಬ್ರಹ್ಮಬಲವೇ ಬಲವೆಂದು ನಿಶ್ಚಯಿಸಿದನು. ರಾಜ್ಯಕೋಶಗಳನ್ನು ತೊರೆದನು; ಘೋರವಾದ ತಪಸ್ಸನ್ನು ಮಾಡಿದನು. ತಪಸ್ಸಿನಿಂದಲೇ ಬ್ರಾಹ್ಮಣತ್ವವನ್ನು ಪಡೆದನು.

ಆದರೂ ವಸಿಷ್ಠರನ್ನು ಕುರಿತಾಗಿ ದ್ವೇಷಭಾವನೆಯು ಇನ್ನೂ ಹೋಗಿರಲಿಲ್ಲ. ಹಾಗಿದ್ದ ವಿಶ್ವಾಮಿತ್ರನು, ವಸಿಷ್ಠರ ನೂರು ಮಕ್ಕಳ ಸಾವಿಗೆ ಕಾರಣವಾಗುವಂತಾಯಿತು. ವಿಶ್ವಾಮಿತ್ರನ ಮೇಲೆ ಕೋಪಗೊಳ್ಳುವುದರ ಬದಲು ತಾವೇ ಅಸು ನೀಗಲು ವಸಿಷ್ಠರು ಬಹುವಾಗಿ ಯತ್ನಿಸಿದರು. ಆದರೂ ದೈವವು ಅವರನ್ನು ಕಾಪಾಡಿತು.

ಇದೆಲ್ಲವನ್ನೂ ಗಂಧರ್ವನು ಹೇಳಿದನು. ಇದನ್ನೇ ವಿಸ್ತರಪಡಿಸುತ್ತಾ, ಇಕ್ಷ್ವಾಕುವಂಶದ ಕಲ್ಮಾಷಪಾದರಾಜ - ವಸಿಷ್ಠರ ಹಿರಿಯ ಮಗನಾದ ಶಕ್ತಿ - ವಿಶ್ವಾಮಿತ್ರನಿಂದ ಸೃಷ್ಟನಾದ ಕಿಂಕರನೆಂಬ ರಾಕ್ಷಸ - ಶಕ್ತಿಯ ಸಾವು - ವಸಿಷ್ಠರ ಉಳಿದ ಮಕ್ಕಳ ಸಾವು - ಶಕ್ತಿಯ ಧರ್ಮಪತ್ನಿಯಾದ ಅದೃಶ್ಯಂತಿ - ಸೌದಾಸ-ಮದಯಂತಿ-ಅಶ್ಮಕ-ಪರಾಶರ-ಕೃತವೀರ್ಯ-ಔರ್ವ-ಪಿತೃದೇವತೆಗಳು-ಅತ್ರಿ-ಪುಲಸ್ತ್ಯ - ಇವರುಗಳನ್ನು ಒಳಗೊಂಡ ವಿಸ್ತಾರವಾದ ವೃತ್ತಾಂತಗಳು – ಇವೆಲ್ಲವನ್ನೂ ಅರ್ಜುನನಿಗೆ ಗಂಧರ್ವನು ತಿಳಿಸಿದನು.

ಉತ್ಕೃಷ್ಟರಾದ ಪುರೋಹಿತರಿಂದಾಗಿ ಶ್ರೇಯಸ್ಸು ಸಂಪಾದಿತವಾಗುವುದು - ಎಂಬುದು ಅರ್ಜುನನಿಗೆ ಮನದಟ್ಟಾಯಿತು. ಆದರೆ ಅಂತಹ ಪುರೋಹಿತರು ಯಾರಿರುವರು? ಎಂಬ ಪ್ರಶ್ನೆಯೂ ತಲೆದೋರಿತು. ಆ ಬಗ್ಗೆ ಆ ಗಂಧರ್ವನನ್ನೇ ಕೇಳಿದನು. ಆಗ ಧೌಮ್ಯರ ವಿಷಯವನ್ನು ಆ ಗಂಧರ್ವನು ಹೇಳಿದನು. ಅವರು ದೇವಲಮಹರ್ಷಿಯ ಕೊನೆಯ ತಮ್ಮ. ಉತ್ಕೋಚಕ-ತೀರ್ಥದ ಬಳಿಯಿರುವ ಆಶ್ರಮದಲ್ಲಿ ತಪೋನಿರತರಾಗಿರುವರು. ಅವರು ನಿಮ್ಮ ಪುರೋಹಿತರಾಗಲು ಯೋಗ್ಯರು – ಎಂದನು, ಗಂಧರ್ವ.

ಗಂಧರ್ವನ ಮಾತುಗಳು ಅರ್ಜುನನಿಗೆ ರುಚಿಸಿದವು. ಹಿಂದೆ ಹೇಳಿದ್ದಂತೆ ಆಗ್ನೇಯಾಸ್ತ್ರವನ್ನು ಗಂಧರ್ವನಿಗೆ ಉಪದೇಶಿಸಿದನು. ಆತನು ಕೊಡಬೇಕೆಂದಿದ್ದ ಕುದುರೆಗಳನ್ನು ಮುಂದೆ ಕಾರ್ಯಕಾಲದಲ್ಲಿ ಸ್ವೀಕರಿಸುವುದಾಗಿ ಹೇಳಿದನು.

ಸೂಚನೆ : 11/6/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.