ರಾಘವೇಂದ್ರ ಉರಳ್ ಕೆ ಆರ್
ಪ್ರತಿಕ್ರಿಯಿಸಿರಿ lekhana@ayvm.in
ಒಂದು ಸಣ್ಣ ಕುಟುಂಬ, ಸಾಗರದ ತೀರದಲ್ಲಿ ವಾಸವಾಗಿತ್ತು. ಆ ಕುಟುಂಬದವರು ಬೆಳಿಗ್ಗೆ ಬೇಗ ಎದ್ದು ಸಮುದ್ರದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದರು. ಮಧ್ಯಾಹ್ನದವರೆಗೆ ಮೀನು ಹಿಡಿದು, ಅದನ್ನು ಹತ್ತಿರದ ಮಾರುಕಟ್ಟೆಯಲ್ಲಿ ಮಾರಾಟಮಾಡಿ, ಊಟಕ್ಕೆ ಮನೆಗೆ ಬರುತ್ತಿದ್ದರು. ಊಟ ಆದ ನಂತರ, ಸಂಜೆಯವರೆಗೆ ಸಮುದ್ರತೀರದಲ್ಲಿ ತಮ್ಮ ಸಂಸಾರದೊಂದಿಗೆ ಆನಂದ ಹಾಗು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದರು.
ಒಮ್ಮೆ ದೂರದ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಸಂಬಂಧಿಕ ಇವರ ಮನೆಗೆ ಬಂದ. ಅವನು ಈ ಕುಟುಂಬದವರ ದಿನಚರಿಯನ್ನು ಗಮನಿಸತೊಡಗಿದ. ಪಟ್ಟಣದಲ್ಲಿ ನಾನಾ ಕಾರಣದಿಂದ ಹಗಲೂ ರಾತ್ರಿ ದುಡಿಯುತ್ತಿದ್ದ ಅವನಿಗೆ ಈ ಕುಟುಂಬದವರ ಮೇಲೆ ಕನಿಕರ. ಅವರಿಗೆ ಸಲಹೆ ಕೊಟ್ಟನು .
ನೀವೆಲ್ಲಾ ನಿಮ್ಮ ಜೀವನವನ್ನು ವ್ಯರ್ಥ ಮಾಡುತ್ತಿದ್ದೀರಿ. ನೀವು ಕೇವಲ ಮಧ್ಯಾಹ್ನದವರೆಗೆ ಕೆಲಸ ಮಾಡುವುದರಿಂದ ಸ್ವಲ್ಪ ಮಾತ್ರ ಮೀನು ಸಿಗುತ್ತದೆ; ಆದ್ದರಿಂದ ಕಡಿಮೆ ಹಣ ಸಿಗುತ್ತದೆ. ಒಂದು ವೇಳೆ ನೀವು ಸಂಜೆಯವರೆಗೆ ಮೀನು ಹಿಡಿದು ದೊಡ್ಡ ಮಾರುಕಟ್ಟೆಯಲ್ಲಿ ಮಾರಾಟಮಾಡಿದರೆ ಹೆಚ್ಚು ಹಣ ಸಿಗುತ್ತದೆ, ಹೀಗೆ ಹೆಚ್ಚು ಹಣ ಬರುವುದರಿಂದ ಮುಂದೆ ನೀವು ಒಂದು ದೊಡ್ಡ ಹಡಗನ್ನು ಖರೀದಿಸಬಹುದು. ಅದರಿಂದ ಇನ್ನೂ ಆಳದ ಸಮುದ್ರಕ್ಕೆ ಹೋಗಿ ಹೆಚ್ಚು ಮೀನು ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೀನು ಮಾರಿ ಕೋಟಿಗಟ್ಟಲೆ ಹಣ ಮಾಡಬಹುದು. ಅದರಿಂದ ನೀವು ನಿಮ್ಮದೇ ಆದ ಒಂದು ದೊಡ್ಡ ಬಂಗಲೆಯನ್ನು ಖರೀದಿಸಿ ನಿಮ್ಮ ಸಂಸಾರದೊಂದಿಗೆ ಆನಂದ ಹಾಗು ನೆಮ್ಮದಿಯಿಂದ ಬದುಕಬಹುದು ಎಂದು ಹೇಳಿದ. ಇಷ್ಟೆಲ್ಲಾ ಮಾಡುವುದು ನೆಮ್ಮದಿ ಹಾಗೂ ಆನಂದಕ್ಕಾಗಿ ಎಂದಾದರೆ ನಾವು ಈಗಾಗಲೇ ಆ ನೆಮ್ಮದಿ ಆನಂದವನ್ನು ಅನುಭವಿಸುವುತ್ತಿದ್ದೇವಲ್ಲ ಎಂದು ಆ ಮನೆಯವರು ಆಶ್ಚರ್ಯದಿಂದ ಕೇಳಿದರು.
ಹೀಗೆ ನಮ್ಮೊಳಗೇ ಐವರು ಸಂಬಂಧಿಕರಿದ್ದಾರೆ. ಇವೇ ನಮ್ಮ ಪಂಚೇಂದ್ರಿಯಗಳು. ಎಷ್ಟೋ ಬಾರಿ ಅವರು ತೋರಿಸುವ ಆಮಿಷಗಳು ನಮ್ಮನ್ನು ನಮ್ಮ ಜೀವನದ ಪರಮ ಗುರಿಯಿಂದ ದೂರ ಮಾಡಿಬಿಡುತ್ತದೆ. ಜೀವನದ ತುತ್ತ ತುದಿಯಲ್ಲಿ ಬೆಳಗುತ್ತಿರುವ ಜ್ಯೋತಿಯೊಡನೆ ಒಂದಾಗುವುದೇ ಜೀವನದ ಪರಮ ಲಕ್ಷ್ಯ ಎಂದು ಸನಾತನಾರ್ಯ ಭಾರತದ ಮಹರ್ಷಿಗಳು ಸಾರಿ ಹೇಳಿದ್ದಾರೆ.ಹೇಗೆ ೧೮ ವರ್ಷವಾದ ತಕ್ಷಣ ನಮಗೆ ಮತ ಹಾಕಲು ಹಕ್ಕು ಬರುತ್ತದೆಯೋ, ಅದೇ ರೀತಿ ಮಾನವ ಜನ್ಮ ಬಂದ ಕೂಡಲೇ ಆ ಬ್ರಹ್ಮಾನಂದದ ಸ್ಥಿತಿಯನ್ನು ಹೊಂದಲು ಹಕ್ಕು ಬಂದಂತೆ ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು.
ಭಗವಂತನ ಅನುಗ್ರಹದಿಂದ ಮಾನವ ಜನ್ಮ ಬಂದಾಗಿದೆ. ಇನ್ನು ಪರಮಲಕ್ಷ್ಯದ ಕಡೆಗೆ ಹೆಜ್ಜೆ ಇಡುವುದಷ್ಟೇ ಬಾಕಿ ಇದೆ. ಆದ್ದರಿಂದ ಇಂದ್ರಿಯಗಳ ಗುಲಾಮರಾಗಿ ಅವುಗಳು ತೋರುವ ಆಮಿಷಗಳಿಂದ ದಾರಿ ತಪ್ಪದೆ, ಅವನ್ನು ನಮ್ಮ ಹತೋಟಿಯಲ್ಲಿಟ್ಟುಕೊಂಡು ಪರಮಗುರಿಯನ್ನು ಇದೇ ಜನ್ಮದಲ್ಲಿ ಪಡೆಯಲು ಆಶಿಸೋಣ.
ಸೂಚನೆ: 4/08/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.