ಷೋಡಶೋಪಚಾರಗಳಲ್ಲಿ ಒಂಭತ್ತನೆಯ ಉಪಚಾರ ಗಂಧ. ಈ ಮುಂದೆ ಹೇಳುವ ಕೆಲವು ಉಪಚಾರಗಳು ಭಗವಂತನ ಅಲಂಕಾರಕ್ಕಾಗಿ ಬಳಸಲ್ಪಡುತ್ತವೆ. ವಸ್ತುತಃ ನಿರ್ವಿಕಾರನಾದ ಭಗವಂತನಿಗೆ ಯಾವುದೇ ಅಲಂಕಾರದ ಆವಶ್ಯಕತೆಯಿರುವುದಿಲ್ಲ. ಆದರೆ ಪೂಜೆಗಾಗಿ ಅವನನ್ನು ಸಾಕಾರಗೊಳಿಸಲಾಗುತ್ತದೆ. ಭಗವಂತನ ಸಾನ್ನಿಧ್ಯವಿರುವ ಎಲ್ಲೆಡೆ ಅಲಂಕಾರವನ್ನು ಮಾಡಲಾಗುತ್ತದೆ. ಇದರಿಂದ ನಮ್ಮ ಇಂದ್ರಿಯ, ಮನಸ್ಸುಗಳಿಗೆ ಪ್ರಸನ್ನತೆ ಮೂಡುತ್ತದೆ. ಅಲಂಕಾರವನ್ನು ಕಣ್ತುಂಬಿಸಿಕೊಳ್ಳುವುದರ ಮೂಲಕ ಮನಸ್ಸಿನಲ್ಲಿ ಭಗವಂತನ ಭಾವವು ಅಚ್ಚಳಿಯದಂತೆ ಉಳಿದು, ದೀರ್ಘಕಾಲ ಸ್ಮರಿಸುವುದಕ್ಕೆ ಅನುಕೂಲವಾಗುತ್ತದೆ. ಮತ್ತು ಆಕಾರಕ್ಕೆ ಅಲಂಕಾರಗೊಳಿಸುವುದರಿಂದ ನಮ್ಮ ಇಂದ್ರಿಯಗಳು ಬೇರೆಡೆ ಹೋಗದಂತೆ ತಡೆದು, ಶ್ರದ್ಧೆ-ಭಕ್ತಿಗಳಿಂದ ಒಂದೇ ಧ್ಯೇಯವನ್ನು ಭಾವಿಸಲು ಬೇಕಾದ ಸ್ಥಿತಿ ಉಂಟಾಗುತ್ತದೆ. "ಆತ್ಮಕ್ಕೆ ಅನುಗುಣವಾಗಿ ಭಗವಂತನನ್ನು ಪ್ರತಿಫಲಿಸುವ, ಪ್ರಕಾಶಪಡಿಸುವ ರೀತಿಯಲ್ಲಿ ಅಲಂಕಾರವಿರಬೇಕು" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಪ್ರಸ್ತುತವಾಗಿದೆ. ಅಂದರೆ ನಾವು ಮಾಡುವ ಅಲಂಕಾರವು ಭಗವಂತನನ್ನು ಇನ್ನಷ್ಟು ಬೆಳಗಿಸುವಂತೆ ಇರಬೇಕೇ ಹೊರತು ಅದನ್ನು ಬಾಡಿಸುವಂತೆ ಇರಬಾರದು. ಇದೇ ಅಲಂಕಾರ ಮತ್ತು ಗಂಧಲೇಪನದ ಮುಖ್ಯ ಉದ್ದೇಶವಾಗಿದೆ. ಐದು ಬಗೆಯ ಗಂಧವಿದೆ. ೧.ಚೂರ್ಣಗಂಧ- ಗಂಧ ಅಥವಾ ಚಂದನದ ಮರದ ಎಲೆಗಳನ್ನು ಒಣಗಿಸಿ ಪುಡಿಮಾಡಿರುವುದು. ೨. ಘೃಷ್ಟಗಂಧ(ಮಲಯಗಂಧ)- ಮಲಯಪರ್ವತದಲ್ಲಿ ಸಿಗುವ ಗಂಧದ ಕೊರಡನ್ನು ಕಲ್ಲಿನಲ್ಲಿ ತೇಯ್ದಾಗ ಸಿಗುವಂತಹದ್ದು. ೩. ದಾಹಗಂಧ- ದೇವದಾರು, ಅಗುರು, ಪಲಾ, ಸಾಲ ಮೊದಲಾದ ವೃಕ್ಷಗಳ ಸಾರಭಾಗವನ್ನು ಬೆಂಕಿಯಲ್ಲಿ ಸುಟ್ಟಾಗ ಸಿಗುವ ಭಸ್ಮ. ೪. ರಸಗಂಧ- ಕಾರವೀ, ಬಿಲ್ವ ಮೊದಲಾದ ಎಲೆ ಅಥವಾ ವೃಕ್ಷವನ್ನು ಹಿಂಡಿ ತೆಗೆದದ್ದು. ೫. ಸಂಮರ್ದಗಂಧ- ಪುನಗು ಮೊದಲಾದ ಪ್ರಾಣಿಗಳ ನಾಭಿಯಲ್ಲಿ ಸಿಗುವ ರಸ. ಇವುಗಳಲ್ಲಿ ಮಲಯಗಂಧವು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಈ ಉಪಚಾರದಲ್ಲೂ ದೇವತಾಭೇದದಿಂದ ಗಂಧದ ಭೇದವೂ ಇದೆ. ಕೃಷ್ಣಾಗರು ಮತ್ತು ಕರ್ಪೂರಮಿಶ್ರಿತವಾದ ಗಂಧವು ವಿಷ್ಣುಪ್ರೀತಿಕರವಾದರೆ, ಕುಂಕುಮ ಅಗುರು, ಕಸ್ತೂರಿ ಮತ್ತು ಚಂದನದಿಂದ ಮಿಶ್ರವಾದ ಗಂಧವು ಕುಮಾರ, ದುರ್ಗೆ ಮತ್ತು ಭೈರವರಿಗೆ ಪ್ರೀತಿದಾಯಕವಾಗಿದೆ. ಅಷ್ಟಗಂಧವಾದ ಚಂದನ, ಅಗುರು, ಕರ್ಪೂರ, ತಮಾಲಜಲ, ಕುಂಕುಮ, ಕುಶೀತ, ಕುಷ್ಠಿತ ಮತ್ತು ಶೈವ ಎಂಬ ಗಂಧವನ್ನೂ ಬಳಸುವುದುಂಟು. ಪವಿತ್ರಬೆರಳಿನಿಂದ ದೇವತೆಗಳಿಗೆ ಮತ್ತು ಋಷಿಗಳಿಗೆ, ಪಿತೃಗಳಿಗೆ ತೋರುಬೆರಳಿನಿಂದ ಮತ್ತು ತನಗೇ ಆದರೆ ಮಧ್ಯಬೆರಳಿನಿಂದ ಗಂಧಲೇಪನವನ್ನು ಮಾಡಬೇಕೆಂಬ ನಿಯಮವಿದೆ. ಒಟ್ಟಾರೆ, ಭಗವಂತನನ್ನು ಅಲಂಕರಿಸುವುದರಿಂದ ಮಾನಸಿಕವಾದ ತೃಪ್ತಿಪಡುವ ಒಂದು ಬಗೆಯೇ ಈ ಗಂಧೋಪಚಾರ.