ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯೋಗತಾರಾವಳೀ (ಶ್ಲೋಕ ೧೯)
ಉನ್ಮನ್ಯವಸ್ಥಾ
ಜ್ಞಾನವೆಂಬುದೇನು?
ಉನ್ಮನ್ಯವಸ್ಥೆಯು ಉದಾತ್ತವಾದುದು. ಇಂತಹ ಅವಸ್ಥೆಯನ್ನು ಹೊಂದುವುದು ಹೇಗೆ?
ನಾಡೀ-ಶೋಧನದಿಂದ ಆರಂಭಿಸಿ ಸಾಕಷ್ಟು ವಿಚಾರ-ವಿಮರ್ಶೆಗಳಿಂದಲೂ ಪ್ರಯತ್ನ-ಅನುಭವಗಳಿಂದಲೂ ಇಲ್ಲಿಯವರೆಗೂ ಪ್ರಯಾಣಿಸಿರುವವನು ಸಾಕಷ್ಟೇ ಅನುಭವ-ಜ್ಞಾನವನ್ನು ಸಂಪಾದಿಸಿಕೊಂಡಿರುವವನೇ. ಜ್ಞಾನವೆಂಬುದು ಬರೀ ಪುಸ್ತಕದ ಬದನೆಕಾಯಿಯಾಗಿರದೆ, ಪ್ರಯೋಗಗಳಿಂದ ಅರ್ಜಿತವೂ ಊರ್ಜಿತವೂ ಆದ ಅನುಭವಗಳಿಂದ ಪರಿಷ್ಕಾರವಾಗುತ್ತಿರಬೇಕಾದದ್ದು.
ಅಂತೂ ಇಷ್ಟು ದೂರ ಬಂದಿರುವನನ್ನು 'ವಿದ್ವಾಂಸನೇ' ಎಂದೇ ಇಲ್ಲಿ ಸಂಬೋಧಿಸಿರುವುದು ಉಚಿತವೇ. ಇಷ್ಟು ದೂರ ಬರುವುದೂ ಸುಲಭವಲ್ಲವಲ್ಲವೆ? ಇನ್ನುಳಿದಿರುವುದು ಸ್ವಲ್ಪವೇ ದೂರ. ಆದ್ದರಿಂದ ಇನ್ನು ಮುಂದಕ್ಕೆ ಸಾಧನೀಯವಾದದ್ದೇನೋ ಅದಕ್ಕೆ ಹಾದಿಯೇನೆಂಬುದನ್ನು ಹೇಳಬೇಕು. ಅದನ್ನಿಲ್ಲಿ ಹೇಳಿದೆ.
ಎಲ್ಲ ಕೆಲಸಗಳನ್ನೂ ಮನಸ್ಸಿಟ್ಟು ಮಾಡಬೇಕು – ವಿಶೇಷವಾಗಿ ಪ್ರಾಣಾಯಾಮಕ್ಕೆ ಸಂಬಂಧಪಟ್ಟವುಗಳನ್ನು ("ಮನೋ-ಯುಕ್ತಂ ಸಮಭ್ಯಸೇತ್") - ಎಂಬ ಸಾಧಾರಣ-ನಿಯಮವೊಂದಿದ್ದೇ ಇದೆಯಷ್ಟೆ. ಯೋಗಾಭ್ಯಾಸಿಗಳಿಗಂತೂ ಅದು ಸಹಜವೇ ಆಗಿಬಿಟ್ಟಿರುತ್ತದೆ. ಕ್ರಿಯೆಯೆಲ್ಲೋ ಮನಸ್ಸೆಲ್ಲೋ - ಎಂಬಂತಾಗಲೇಬಾರದು. ಯೋಗ್ಯವಾದುದನ್ನೇ ಮಾಡತಕ್ಕದ್ದು; ಮಾಡುವುದರ ಮೇಲೆ ಗಮನವಿಟ್ಟೇ ಮಾಡತಕ್ಕದ್ದು - ಎಂಬ ಮುಖ್ಯ-ನಿಯಮವು ಸರ್ವದಾ ಪಾಲನೀಯವಾದುದೇ.
ಆದರೂ, ಪ್ರಕೃತ ಸಂದರ್ಭದಲ್ಲಿ, ಎಚ್ಚರದಿಂದ ಮಾಡಬೇಕಾದ ಕ್ರಿಯೆಯೊಂದಿದೆ. ಅದನ್ನು ಇಲ್ಲಿ ಹೇಳಲಾಗಿದೆ. ಮಾಡಬೇಕಾದುದೇನು, ಅದಕ್ಕೆ ಪೂರ್ವಸಿದ್ಧತೆಯಾಗಿ ಮಾಡಿಕೊಳ್ಳಬೇಕಾದುದೇನು? - ಎಂಬುದನ್ನು ಇಲ್ಲಿ ಹೇಳಿದೆ.
ಪ್ರಪಂಚವನ್ನು ಬಿಡುವುದೇ!
ಮೊದಲು ಪೂರ್ವಸಿದ್ಧತೆಯ ವಿಷಯ. ನಮಗೂ ಪ್ರಪಂಚಕ್ಕೂ ಯಾವ ರೀತಿಯ ಸಂಬಂಧವಿರಬೇಕೆಂಬುದನ್ನು ಸ್ಪಷ್ಟಪಡಿಸಿಕೊಂಡಿರಬೇಕಾದದ್ದು ಮುಖ್ಯ. ನಮ್ಮ ನಡೆಯೂ ಮಾತುಕತೆಗಳೂ ನಮಗೂ ನಾಲ್ಕು ಜನಕ್ಕೂ ಉಪಯೋಗವಾಗುವಂತಿರಲಿ - ಎಂಬ ಒಳ್ಳೆಯ ಅಪೇಕ್ಷೆಯು ಬರುವುದೇನೋ ಸಹಜವೇ. ಆದರಿಲ್ಲೊಂದು ಸೂಕ್ಷ್ಮವಿದೆ: ನಾವು ಪ್ರಪಂಚಕ್ಕೆ ಉಪಯೋಗಕ್ಕೆ ಬರಲು ಸಹ ಮೊದಲು ಕೆಲಕಾಲ ಪ್ರಪಂಚವನ್ನು "ಬಿಟ್ಟಿರಬೇಕಾಗುತ್ತದೆ"! ಇದೇನು? ಲೋಕಸೇವೆಗೆಂದು ಹೊರಟು ಲೋಕವನ್ನೇ ದೂರಮಾಡಿಕೊಳ್ಳುವುದೇ? - ಎಂಬ ಪ್ರಶ್ನೆಯೇ?
ಒಂದರ್ಥದಲ್ಲಿ ಇದನ್ನು ನಿತ್ಯವೂ ನಾವು ಮಾಡುತ್ತಿರುವವರೇ! ಉತ್ಸಾಹದಿಂದ ಹೆಚ್ಚು ಕಾರ್ಯವನ್ನು ಮಾಡಬಯಸುವವರು ಕೆಲಕಾಲ ನಿದ್ದೆಮಾಡುವುದೂ ಅವಶ್ಯವಾಗುತ್ತದಲ್ಲವೆ? ಶ್ರಾಂತಿಗಾಗಿ (ಅಂದರೆ ಶ್ರಮಪಡುವುದಕ್ಕಾಗಿ) ವಿಶ್ರಾಂತಿ. "ನಿದ್ದೆಗೆಟ್ಟೆಯೋ ಬುದ್ಧಿಗೆಟ್ಟೆಯೋ?" ಎಂದು ಕೇಳುವುದಿಲ್ಲವೇ? ಪ್ರಪಂಚವನ್ನು ಬಿಟ್ಟುಹೋಗಿ ನಿದ್ದೆಮಾಡಿ ಏಳುವಷ್ಟರಲ್ಲಿ ಪ್ರಪಂಚವೇ ಹೊರಟುಹೋಗಿರುವುದಿಲ್ಲವಲ್ಲ? ಪ್ರಪಂಚವೇನು, ಇದ್ದೇ ಇರುತ್ತದೆ!
ಜೊತೆಗೆ ಪ್ರಪಂಚವು ಎಷ್ಟಾದರೂ 'ವ್ಯಾಧ್ಯಭಿಮಾನ-ಗ್ರಸ್ತ'ವಾದುದು, ಲೋಕವು 'ಶೋಕ-ಹತ'ವಾದುದು – ಎಂದು ಆಚಾರ್ಯರು ಹೇಳುವರಲ್ಲವೇ? ಆದ್ದರಿಂದ ಅದರ ಬಗ್ಗೆ ಮೊದಲು ಒಂದಿಷ್ಟು ಉದಾಸೀನ-ಭಾವವೂ ಉಪಕಾರಿಯೇ. ವೈದ್ಯನಾಗಿ ಮಾಡಬಹುದಾದ ಸೇವೆ ವಿಶಿಷ್ಟವಾದುದು; ಚಿಕಿತ್ಸೆಮಾಡಲು ಅರ್ಹತೆ ಸಾಮರ್ಥ್ಯಗಳನ್ನು ಸಂಪಾದಿಸಬೇಕು; ಅಷ್ಟು ಕಾಲ ವಿದ್ಯೆಯತ್ತ ಗಮನಕೊಟ್ಟಿರಬೇಕು: ಆ ಅವಧಿಯಲ್ಲೂ ಪ್ರಾಪಂಚಿಕದಲ್ಲೇ ಮುಳುಗಿರಲಾದೀತೇ? ಪ್ರಪಂಚವನ್ನು ಮರೆತು ವಿದ್ಯೆಯಲ್ಲಿ ಕೆಲಕಾಲ ಮುಳುಗಬೇಕು. ಮಿಕ್ಕದ್ದರ ಬಗ್ಗೆ "ಉದಾಸೀನತೆ" ಬೇಕು.
ಉದಾಸೀನತೆ ಬೇಕೆ!
ಉತ್-ಆಸೀನನೆಂದರೆ ವಾಸ್ತವವಾಗಿ "ಮೇಲೆ ಕುಳಿತಿರುವವನು". (ನ್ಯಾಯಾಧೀಶನ ಹಾಗೆ) ಮಧ್ಯದಲ್ಲಿ ಎತ್ತರಕ್ಕೆ ಹತ್ತಿ ಕುಳಿತಾಗ ಲೌಕಿಕ-ಜಂಜಾಟದಲ್ಲಿ ತಾನು ಸಿಲುಕಿಹಾಕಿಕೊಳ್ಳದೆ ನಿರ್ಲಿಪ್ತನಾಗಿಯೂ ನಿಷ್ಪಕ್ಷಪಾತವಾಗಿಯೂ ನೋಡಿ ಯಥಾರ್ಥವನ್ನು ತಿಳಿಯಲು ಅನುಕೂಲವಾಗುತ್ತದಲ್ಲವೇ? ಹೀಗಾಗಿ, ಕೆಲಕಾಲ ದೂರವಿರುವುದು ಅವಶ್ಯವೇ.
ದೂರವಿದ್ದು ಮಾಡಬೇಕಾದುದೇನು?: ಸಂಕಲ್ಪವನ್ನು ತ್ಯಜಿಸುವುದು. ಎಲ್ಲ ಬಯಕೆಗಳೂ ಕಾಮಗಳೇ; ಎಲ್ಲ ಕಾಮಗಳ ಹಿಂದೆಯೂ ಸಂಕಲ್ಪವೆಂಬುದೊಂದಿರುತ್ತದೆ. ಅದನ್ನು ತೊರೆದು ದೈವಸಂಕಲ್ಪಕ್ಕೆ ತನ್ನನ್ನು ಒಡ್ಡಿಕೊಳ್ಳುವುದಾದಲ್ಲಿ, "ನಾನು ಹೀಗೆ ಮಾಡಬೇಕು, ನಾನು ಹಾಗೆ ಮಾಡಬೇಕು" - ಎಂಬಲ್ಲಿಯ ನಾನು-ನಾನು ಎಂಬುದು ಕ್ಷೀಣವಾಗುತ್ತದೆ.
ಅರಿವು ಅಲ್ಪವಾಗಿದ್ದಾಗ ಸಂಕಲ್ಪಗಳ ರಾಶಿಯೇ ಇರುತ್ತದೆ. ಅರಿವು ಅಧಿಕವಾದಾಗ ಮೂಲಭೂತವಾದ ಕೆಲವೇ ಸಂಕಲ್ಪಗಳಿರುತ್ತವೆ. ಧ್ಯಾನಕ್ಕೆಂದು ಕುಳಿತಾಗ ಕೆಲಕಾಲ ಅವಿಂದ ಸಹ ದೂರವಿರಬೇಕಾಗಿತ್ತದೆ. ಎಷ್ಟೋ ಸಂಕಲ್ಪಗಳು ಅರಿವಿಗೆ ತೋರದೆಯೂ ಅಂಟಿಕೊಂಡೇ ಇರುವುದರಿಂದ ಸಾವಧಾನತೆಯಿಂದ, ಎಂದರೆ ಎಚ್ಚರವಾಗಿ, ಅದನ್ನು ಸಾಧಿಸಬೇಕಾಗಿರುತ್ತದೆ. ಉನ್ಮನಿಗಿದು ಹಾದಿ.
ಉನ್ಮನ್ಯವಸ್ಥಾಽಧಿಗಮಾಯ ವಿದ್ವನ್ !
ಉಪಾಯಮ್ ಏಕಂ ತವ ನಿರ್ದಿಶಾಮಃ |
ಪಶ್ಯನ್ನುದಾಸೀನತಯಾ ಪ್ರಪಂಚಂ
ಸಂಕಲ್ಪಮ್ ಉನ್ಮೂಲಯ ಸಾವಧಾನಃ ||೧೯ ||
ಸೂಚನೆ : 21/8/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.