ಭಗವಂತನನ್ನು 'ಹೃಷೀಕೇಶ' ಎಂದು ಕರೆಯುತ್ತೇವೆ. ಇಂದ್ರಿಯಗಳಿಗೆ ಒಡೆಯ ಅಥವಾ ಇಂದ್ರಿಯಗಳ ನಿಯಾಮಕ ಎಂಬುದು ಅದರ ಅರ್ಥ. ಭಗವಂತನ ಇಂದ್ರಿಯಗಳನ್ನು ತೃಪ್ತಿಪಡಿಸಲು ಬಳಸುವ ಉಪಚಾರವೇ ಧೂಪೋಪಚಾರ. ತನ್ಮೂಲಕ ನಮ್ಮನ್ನು ನಾವು ಹತೋಟಿಗೆ ತಂದುಕೊಳ್ಳುವ ವಿಧಾನ. "ದಶಾಂಗಂ ಗುಗ್ಗುಲಂ ಧೂಪಂ ಸುಗಂಧಂ ಚ ಸುಮನೋಹರಮ್ | ಕಪಿಲಾಘೃತಸಂಯುಕ್ತಂ ಧೂಪೋಽಯಂ ಪ್ರತಿಗೃಹ್ಯತಾಮ್" ಎಂದು ಹೇಳುತ್ತಾ ಭಗವಂತನಿಗೆ ಧೂಪದ ಸೇವೆಯನ್ನು ಮಾಡುತ್ತೇವೆ. ಈ ಸೇವೆಯು ಪ್ರಧಾನವಾಗಿ ಘ್ರಾಣೇಂದ್ರಿಯದ ತೃಪ್ತಿಗಾಗಿ ಇರುವ ಸೇವೆಯಾಗಿದೆ.
ಹಾಗಾಗಿ ಇಲ್ಲಿ ಬಳಸುವ ದ್ರವ್ಯವು ಸುಗಂಧದಿಂದ ಕೂಡಿದ್ದಾಗಿರುತ್ತದೆ. ಶ್ರೀಚಂದನ, ಸಾಲ, ಕಾಲಾಗುರು ಮೊದಲಾದ ಕಟ್ಟಿಗೆಯನ್ನು ಇಲ್ಲಿ ಬಳಸಲಾಗುವುದು. ಕೆಲವು ವೃಕ್ಷಗಳಿಂದ ಬರುವ ಪರಾಗವನ್ನು ಅಥವಾ ಅಂಟುದ್ರವ್ಯವನ್ನೂ ಇಲ್ಲಿ ಬಳಸಲಾಗುತ್ತದೆ. ಕೆಂಡದ ಮೇಲೆ ಸುಗಂಧದ್ರವ್ಯವನ್ನು ಹಾಕಿದಾಗ ಹೊಗೆಯು ಸುಗಂಧದಿಂದ ಕೂಡಿ ಘ್ರಾಣೇಂದ್ರಿಯಕ್ಕೆ ಆಘ್ರಾಣಿಸಲು ಯೋಗ್ಯವಾಗುತ್ತದೆ. ದಶಾಂಗ ಗುಗ್ಗುಳ ಎಂಬ ಧೂಪವನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಮಧು ಮುಸ್ತ-ಅನೇಕ ಮೂಲಿಕೆಗಳಿಂದ ಕೂಡಿದ, ಘೃತ, ಶ್ರೀಗಂಧ, ಗುಗ್ಗುಲು- ಗೋರೋಚನ, ಅಗುರು-ಒಂದು ಮರದ ಅಂಟು, ಪರ್ವತದಲ್ಲಿ ಬೆಳೆಯುವ ಧೂಪವೃಕ್ಷ, ಸರಲವೃಕ್ಷ, ಸಿಹ್ಲ-ಸ್ನಿಗ್ಧವಾದ ಒಂದು ಬಗೆಯ ಸುಗಂಧದ್ರವ್ಯ, ಸಿದ್ಧಾರ್ಥ ಎಂಬ ಹತ್ತು ದ್ರವ್ಯಗಳಿಂದ ಕೂಡಿದ ಧೂಪವು ಪೂಜೆಗೆ ಶ್ರೇಷ್ಠವಾಗಿದೆ. ಒಂದೊಂದೂ ಓಷಧೀಯ ದ್ರವ್ಯವಾಗಿದೆ. ಇವೆಲ್ಲದರ ಸಂಯೋಗದಲ್ಲೂ ಒಂದು ವಿಶೇಷವಾದ ಪರಿಣಾಮವಿದೆ. ಋಷಿಗಳು ಮಾತ್ರವೇ ಈ ದ್ರವ್ಯಸಂಯೋಗದಿಂದ ಉಂಟಾಗುವ ಸತ್ಪರಿಣಾಮವನ್ನು ತಿಳಿಯುತ್ತಾರೆ. ಇದು ನಮ್ಮ ಇಂದ್ರಿಯವನ್ನು ಸಂಯಮಗೊಳಿಸುತ್ತದೆ -ಏಕಾಗ್ರಗೊಳಿಸುತ್ತದೆ. ಇಂದ್ರಿಯಸಂಯಮವೇ ಎಲ್ಲಾ ಪೂಜೆಯ ತಾತ್ಪರ್ಯವಷ್ಟೆ!
ಶ್ರೀರಂಗಮಹಾಗುರುಗಳು ಹೀಗೆ ಅಪ್ಪಣೆ ಕೊಡಿಸುತ್ತಿದ್ದರು – "ಅಗ್ನಿಯಲ್ಲಿ ಯಾವುದಾದರೂ ಒಂದು ಧೂಪದ ಪದಾರ್ಥವನ್ನು, ನೀವು ಕೆಳಗಡೆ ಹಾಕಿದರೂ ಕೂಡ ಅದರ ಹೊಗೆ ಮೇಲಕ್ಕೇ ಹೋಗುತ್ತದೆ. ಎಲ್ಲೇ ಹಾಕಿದರೂ ಹೋಗುವ ದಾರಿ ಕೆಳಕ್ಕೆ ಅಥವಾ ಅಡ್ದಲಾಗಿ ಹೋಗದೇ ಹಗುರವಾಗಿ ಮಾಡಿಕೊಂಡು ಗಾಳಿಯ ಒಂದು ಧರ್ಮದಂತೆ ಮೇಲಕ್ಕೇ ಹೋಗುತ್ತದೆ. ಅಂತೆಯೇ ನಮ್ಮ ಮನಸ್ಸೂ ಕೂಡ ಮೇಲ್ಮುಖವಾಗಿ –'ಊರ್ಧ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ' – ಎನ್ನುವ ಪರಂಜ್ಯೋತಿಯ ಕಡೆಗೆ ಮೇಲ್ಮುಖವಾದ ಪ್ರಯಾಣವನ್ನು ಬೆಳೆಸಲಿ ಎನ್ನುವ ಭಾವದ ಜೊತೆಯಲ್ಲಿ ದೇವರಿಗೆ ಧೂಪವನ್ನು ಸಮರ್ಪಣೆ ಮಾಡಬೇಕು". ನಮ್ಮ ಭಾರತೀಯರ ಪೂಜೆ- ಪುರಸ್ಕಾರಗಳಲ್ಲಿರುವ ಧ್ಯೇಯವು ಇಂದ್ರಿಯಗಳನ್ನು ಸಮಾಧಾನವಾಗಿ ಕೂರಿಸುವುದೇ ವಿನಾ ಕುಣಿಸುವುದಲ್ಲ.