ಲೇಖಕರು: ಶ್ರೀಮತಿ ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ಕೆಲವೊಮ್ಮೆ ದೊಡ್ಡ ವಿಷಯವನ್ನು ಕೊಡಬೇಕಾದಾಗ ಉಪಾಯವನ್ನು ಅವಲಂಬಿಸಬೇಕಾಗುತ್ತದೆ ಎಂಬುದಕ್ಕೆ ಶ್ರೀರಂಗಮಹಾಗುರುಗಳು ಒಂದು ಕಥೆಯನ್ನು ಹೇಳುತ್ತಿದ್ದರು. ಹಿಂದೆ ನಾಥಮುನಿಗಳು ಎಂಬ ಯೋಗಿಗಳ ಶಿಷ್ಯರ ಪೈಕಿ ಮಣಕ್ಕಾಲ್ ನಂಬಿ ಎಂಬುವವರಿದ್ದರು, ಅವರ ಕಾಲದಲ್ಲಿ ಮೊಮ್ಮಕ್ಕಳಾದ ಯಾಮುನರು ಇನ್ನೂ ಚಿಕ್ಕವರಾಗಿದ್ದರು. ಆಗ ಅವರು ಜ್ಞಾನವನ್ನು ಮುಂದುವರೆಸುವ ಜವಾಬ್ದಾರಿಯನ್ನು ಮಣಕ್ಕಾಲ್ ನಂಬಿ ಎಂಬ ಶಿಷ್ಯನಿಗೆ ವಹಿಸಿದರು. ಯಾಮುನರು ವಾದದಲ್ಲಿ ಗೆದ್ದು ರಾಜ್ಯಾಧಿಪತಿಗಳಾಗಿದ್ದರು. ರಾಜ್ಯಾಧಿಪತಿಗಳಾದ ಅವರಲ್ಲಿಗೆ ಮಣಕ್ಕಾಲ್ ನಂಬಿಗಳು ಹೋಗುವುದಾದರೂ ಹೇಗೆ? ಆದರೆ ಗುರುಗಳು ತಮ್ಮ ಜ್ಞಾನಸಂಪತ್ತನ್ನು ಅವರಿಗೆ ಕೊಡುವಂತೆ ವಹಿಸಿದ ಜವಾಬ್ದಾರಿಯಿದೆ, ಅದನ್ನು ಹೇಗೆ ನಿರ್ವಹಿಸುವುದು? ಕೊನೆಗೆ ಪ್ರತಿದಿನವೂ ಒಂದು ತರಹದ ಸೊಪ್ಪನ್ನು ರಾಜನಿಗೆ ಅಡಿಗೆ ಮಾಡಿ ಬಡಿಸಲು ತರಕಾರಿಯಾಗಿ ಕೊಂಡೊಯ್ಯುತ್ತಿದ್ದರು. ರಾಜನಿಗೆ ಅದೊಂದು ಹೊಸತಿಂಡಿಯಾಗಿತ್ತು.
ಹೀಗೆ ಪ್ರತಿದಿನವೂ ತಪ್ಪದೇ ಈ ಸೊಪ್ಪಿನ ಪದಾರ್ಥ ರಾಜನಿಗೆ ತಲುಪಿ ಅದು ಚೆನ್ನಾಗಿ ಅವನಿಗೆ ಹಿಡಿಸಿತು. ಒಂದು ದಿನ ಅವರು ಈ ಸೊಪ್ಪನ್ನು ತರಲಿಲ್ಲ, ಆಗ ರಾಜನು ಸೊಪ್ಪು ಏಕೆ ಇಲ್ಲ ಎಂದು ಕೇಳಿದ, ಯಾರೋ ಒಬ್ಬರು ಯಾವ ಪ್ರತಿಧನವನ್ನೂ ತೆಗೆದುಕೊಳ್ಳದೆ ತಂದು ಕೊಡುತ್ತಿದ್ದಾರೆ, ಇಂದು ಅವರು ಬರಲಿಲ್ಲ ಎಂದು ಅಡುಗೆಯವರು ಹೇಳಿದರು. ನಂತರ ಮತ್ತೊಮ್ಮೆ ಅವರು ಬಂದಾಗ ಆಸ್ಥಾನಕ್ಕೆ ಕರೆಸಿದರು. ಆ ಸಮಯಕ್ಕೆ ಸರಿಯಾಗಿ ರಾಜ್ಯಕ್ಕೆ ಧನದ ಅಗತ್ಯವಿತ್ತು. ಆ ಸಂದರ್ಭಕ್ಕೆ ಸರಿಯಾಗಿ ಇವರು ಹೋಗಿ ನಿಮ್ಮ ತಾತನವರು ನನ್ನಲ್ಲಿ ಯಾವುದೋ ಒಂದು ದೊಡ್ಡ ನಿಧಿಯನ್ನು ಇಟ್ಟಿದ್ದಾರೆ; ನನ್ನ ಜೊತೆ ಬಂದರೆ ಅದನ್ನು ಕೊಡುತ್ತೇನೆ ಎಂದು ಹೇಳಿ ರಾಜನನ್ನು ಶ್ರೀರಂಗಕ್ಕೆ ಜೊತೆಯಲ್ಲಿ ಕರೆದೊಯ್ದು, ಶ್ರೀ ರಂಗನಾಥನನ್ನು ತೋರಿಸಿ ಇದೇ ಆ ನಿಧಿಯೆಂದು ಹೇಳಿ ಅದರ ಮರ್ಮದೊಡನೆ ಇತ್ತರು. ಅವರ ತಾತನ ಆಸ್ತಿಯನ್ನು ಅವರಿಗೇ ಕೊಟ್ಟರು; ಅವರ ಜ್ಞಾನಭಂಡಾರವನ್ನೂ ಅವರಿಗೇ ತುಂಬಿಕೊಟ್ಟರು. ಹೀಗೆ, ಇಲ್ಲಿ ಅಪೂರ್ವವಾದ ಜ್ಞಾನಭಂಡಾರವನ್ನು ಧಾರೆಯೆರೆದು ಕೊಡಲು ಈ ರೀತಿಯ ಉಪಾಯವನ್ನು ಮಾಡಿದಾಗ ರಾಜನ ಉದ್ಧಾರವೂ ಆಗಿ ರಾಜ್ಯಕ್ಕೂ ಕ್ಷೇಮವುಂಟಾಯಿತು.
ಸೂಚನೆ: 6/1/2021 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.