Sunday, January 31, 2021

ಆರ್ಯಸಂಸ್ಕೃತಿ ದರ್ಶನ - 28 (Arya Samskruti Darshana - 28)

ಓಂ ಶ್ರೀಃ
ಗುಪ್ತನಿಧಿ
ಲೇಖಕರು : ವಿದ್ವಾನ್|| ಶ್ರೀ ಛಾಯಾಪತಿ



ಅಳಿಯದ ಮೌಲ್ಯಗಳುಳ್ಳ ಚಿನ್ನ-ಬೆಳ್ಳಿ-ರತ್ನಗಳು ಮೊದಲಾದವುಗಳನ್ನು, ರಕ್ಷಣೆ, ಅಪಾಯಭೀತಿ, ಮುಂದಿನ ಪೀಳಿಗೆಗಾಗಿ ಆಸ್ತಿಯಾಗಿಡುವ ಬಯಕೆ, ಇತ್ಯಾದಿ ಕಾರಣಗಳಿಂದ ಬಚ್ಚಿಡುವುದು—ಹಾಗೆ ಬಚ್ಚಿಟ್ಟ ಸಂಪತ್ತು ಕಾಲಕ್ರಮದಲ್ಲಿ ಗುಪ್ತನಿಧಿಯಾಗುವುದು ಎಲ್ಲ ದೇಶಗಳಲ್ಲಿಯೂ ನಡೆಯುವ ಸಂಗತಿ. ಸಂಪದ್ಭರಿತ ರಾಷ್ಟ್ರವೊಂದು ನೈಸರ್ಗಿಕ ಪ್ರಕೋಪ, ಯುದ್ಧಾದಿ ವಿಪತ್ತುಗಳಿಗೆ ಗುರಿಯಾದಾಗಲೂ ಭೂಗರ್ಭದಲ್ಲಿ ಸಂಪತ್ತು ಹುದುಗಿ ನಿಧಿಯಾಗುವುದುಂಟು. ಸಮುದ್ರತಳ, ಭೂಗರ್ಭ, ನೆಲಮಾಳಿಗೆಗಳು, ವಿಶಾಲಮಹಲುಗಳು, ಇವುಗಳಲ್ಲಿ ನಿಧಿಯಡಗಿರುವ ಸುದ್ದಿಗಳೇ ಅವುಗಳ ಶೋಧಕ್ಕೆ ಪ್ರೇರಕವಾದ ಸನ್ನಿವೇಶಗಳು ವಿರಳವೇನೂ ಅಲ್ಲ. ಒಮ್ಮೆಗೇ ಅಪಾರವಾದ ಸಂಪತ್ತಿನ ಒಡೆಯನಾಗುವ ಕನಸು ಯಾರನ್ನು ತಾನೇ ಪ್ರೇರಿಸದು? ಅಂತಹ ಮಹದಾಶೆಯಿಂದ ಪ್ರಾಣವನ್ನೇ ಪಣವಾಗಿಟ್ಟು ನಿಧಿ ಶೋಧ ನಡೆಸಿದ ಅಸಂಖ್ಯಾತ ಸಾಹಸಿಗಳ ಕಥೆ ಜನಜನಿತವೂ ಹೌದು. ಗುಪ್ತನಿಧಿಗಳನ್ನು ಸರ್ಪಗಳು ಕಾಯುವುವೆಂಬ ಸುದ್ದಿಯೂ ಜನಜನಿತವಾಗಿವೆ.

ನಿಧಿಲಾಭಕ್ಕಾಗಿ  ನಿಧಿದರ್ಶನಮಾಡಿಸುವ ಸಿದ್ಧಾಂಜನಗಳನ್ನು ಬಳಸಿಕೊಳ್ಳುವುದರಿಂದ ಹಿಡಿದು ವೈಜ್ಞಾನಿಕ  ಉಪಕರಣಗಳ ಬಳಕೆಯವರೆಗೂ ಹರಡಿದೆ ಶೋಧಯತ್ನ. ನಿಧಿಲಾಭದ ಮೂಲಕ ಕಡುಬಡತನದಿಂದ-ಸಮೃದ್ಧಿಯ ಮುಗಿಲಿಗೆ ಏರಿದವರ ಕತೆಯೂ ಅಲ್ಲಲ್ಲಿ ಕೇಳಿಬರುತ್ತಿದೆ. ಇದರ ನಿಜ-ಸುಳ್ಳುಗಳೇನೇ ಇರಲಿ ಗುಪ್ತನಿಧಿ ಶೋಧಕಾರ್ಯವಂತೂ ಅವಿರತವಾಗಿ ಒಂದಲ್ಲ ಒಂದೆಡೆ ನಡೆಯುತ್ತಲೇ ಇದೆ. ಕೌತುಕ ಪೂರ್ಣವಾದ ಗುಪ್ತನಿಧಿಗಳ ಸುದ್ಧಿಗಂತೂ ಕೊರತೆಯಿಲ್ಲ. ರಷ್ಯಾ-ಬ್ರಿಟನ್‌ಗಳಂತಹ ದೇಶಗಳೆರಡು ಯುದ್ಧಕಾಲದಲ್ಲಿ ಸಮುದ್ರತಲದಲ್ಲಿ ಹುದುಗಿದ ಚಿನ್ನಕ್ಕಾಗಿ ಶೋಧವನ್ನಾರಂಭಿಸಿವೆಯೆಂಬ ಸುದ್ಧಿ ಇತ್ತೀಚಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.

ಆದರೆ ಪ್ರತಿ ಮಾನವದೇಹವೂ ಒಂದು ಗುಪ್ತನಿಧಿಯ ಭಂಡಾರವಾಗಿದೆ ಎಂಬುದನ್ನು ಬಲ್ಲವರು ಅತಿವಿರಳ. ಆ ನಿಧಿಯನ್ನು ಪತ್ತೆ ಹಚ್ಚಿ ಕೈವಶ ಮಾಡಿಕೊಂಡವರಂತೂ ಮಹಾಧೀರರೇ ಸರಿ. ಆ ನಿಧಿಯನ್ನು ಪತ್ತೆ ಹಚ್ಚಿ ಅದನ್ನು ಅನುಭವಿಸಿ, ಅದರತ್ತ ತೋರಬಲ್ಲ ಗುರುವಿನ ಕೃಪೆಯೇ ಆ ನಿಧಿ ಲಾಭಕ್ಕೆ ಅಗತ್ಯವಾದ ಸಿದ್ದಾಂಜನ. ಪ್ರಕೃತಿಗರ್ಭದಲ್ಲಿ ನಿಗೂಢವಾದ ಜ್ಞಾನಧನವೇ ಆ ನಿಧಿ. ಅದು ಪರಮಾನಂದ ನಿಧಿ. ಅಕ್ಷಯ ನಿಧಿ. ಆ ನಿಧಿಯನ್ನು ಕುಂಡಲೀರೂಪವಾದ ಸರ್ಪವು ಕಾಯುತ್ತಿರುವುದು.

ಭೌತಿಕವಾದ ನಿಧಿಯ ಕಥೆಯೇ ಪೊಳ್ಳಾಗಿ ಶೋಧ ವ್ಯರ್ಥವಾಗಬಹುದು. ಆದರೆ ಈ ನಿಧಿಯಾದರೋ ಶತಾಂಶ ಸತ್ಯವಾದ ನಿಧಿ. ಆದ್ದರಿಂದ ಶೋಧವ್ಯರ್ಥವಾಗುವ ಪ್ರಶ್ನೆಯಿಲ್ಲ. ಭೌತಕನಿಧಿ ದೊರೆಯುವ ಮೊದಲೂ ನಂತರವೂ ಸುಖ-ದುಃಖ, ಹಾನಿ-ಲಾಭಗಳೆರಡನ್ನೂ ತರಬಹುದು. ಆದರೆ ಈ ಅಕ್ಷಯನಿಧಿಯಾದರೋ ಪರಮಾನಂದವನ್ನು ಬಿಟ್ಟರೆ ಮತ್ತೇನನ್ನೂ ತರದು. ಭೌತಿಕನಿಧಿಯ ಅನ್ವೇಷಣೆಗೆ ಬೇಕಾಗುವ  ಹೊರ ಉಪಕರಣಗಳು ವಿಪುಲ. ಆದರೆ ಒಳ ನಿಧಿಯ ಶೋಧಕ್ಕೆ ದೈವದತ್ತವಾದ ದೇಹೇಂದ್ರಿಯ-ಮನೋ-ಬುದ್ಧಿಗಳೇ ಸಾಕು. ಹೊರಬಡತನವನ್ನು ಮಾತ್ರ  ಭೌತಿಕನಿಧಿಯು ನೀಗುವುದು. ಆದರೆ ಈ ಒಳನಿಧಿಯಾದರೋ ಆತ್ಮೈಶ್ವರ್ಯಸಂಪತ್ತನ್ನುಂಟುಮಾಡಿ, ಹೊರಸಂಪತ್ತಿನ ಅಲ್ಪತೆಯನ್ನು ತೋರಿಕೊಡುವುದು.  ಹೊರನಿಧಿ ಗಳಿಸಿದಷ್ಟೂ ಮತ್ತೆ ಧನತೃಷ್ಣತೆಯನ್ನು  ಬೆಳೆಸುವುದು. ಈ ಒಳನಿಧಿಯಾದರೋ ತೃಷ್ಣೆಯನ್ನು ಕಳೆದು, ಪಡೆದ ಜೀವಿಯನ್ನು ಧನ್ಯನನ್ನಾಗಿ ಮಾಡುವುದು. ಚಿನ್ನ-ಬೆಳ್ಳಿ-ರತ್ನಗಳ ಬೆಲೆ ಮಿತವಾದುದು-ಇಂತಹ ಒಳನಿಧಿಯ ರಹಸ್ಯವನ್ನು ಬಲ್ಲ ಶ್ರೀ ಶ್ರೀರಂಗ ಮಹಾಗುರುವಿಗೆ ನಮಿಸಿ ಆ ಆನಂದ ನಿಧಿಗೆ, ಗುಪ್ತನಿಧಿಗೆ ಈ ಬರಹವನ್ನರ್ಪಿಸುವೆನು.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : ೦೧ ಸಂಪುಟ: ೦೪ ಸಂಚಿಕೆ: ನವೆಂಬರ್೧೯೮೧ ತಿಂಗಳಲ್ಲಿ ಪ್ರಕಟವಾಗಿದೆ.