ಉಸಿರಾಟದ ನಿಯಂತ್ರಣದ ಮೂಲಕ ಪ್ರಾಣಶಕ್ತಿಗಳನ್ನು ನಿಯಂತ್ರಿಸುವುದು ಅಷ್ಟಾಂಗಯೋಗದ ನಾಲ್ಕನೇ ಮೆಟ್ಟಿಲಾದ ಪ್ರಾಣಾಯಾಮ. ನಮ್ಮ ಶ್ವಾಸಕೋಶವು ತಿದಿಯಂತೆ ಹಿಗ್ಗುವುದು, ಕುಗ್ಗುವುದು ಆಗುತ್ತಾ ಇರುವುದರಿಂದ ನಾವು ಗಾಳಿಯನ್ನು ಒಳಗೆ ತೆಗೆದುಕೊಳ್ಳುವ, ಪುನಃ ಹೊರಗೆ ಬಿಡುವ ರೂಪದಲ್ಲಿ ಉಸಿರಾಟ ಮಾಡುತ್ತಾ ಇರುತ್ತೇವೆ. ಶ್ವಾಸಕೋಶವು ಹೀಗೆ ಕೆಲಸ ಮಾಡಲು ಅದರ ಹಿಂದೆ ಒಂದು ಶಕ್ತಿ ಇದ್ದಾಗ ಮಾತ್ರ ಸಾಧ್ಯ. ಈ ಶಕ್ತಿಯೇ ಪ್ರಾಣಶಕ್ತಿ. ಪ್ರಾಣಶಕ್ತಿಯು ಎರಡು ವಿಭಾಗವಾಗಿ ಅಂದರೆ ಪ್ರಾಣ ಮತ್ತು ಅಪಾನ ಎಂಬ ಎರಡು ವಾಯುಗಳಾಗಿ ಒಂದು ಮೇಲ್ಮುಖವಾಗಿ ಮತ್ತೊಂದು ಕೆಳಮುಖವಾಗಿ ಕೆಲಸ ಮಾಡುವುದರಿಂದ ಶ್ವಾಸಕೋಶದ ಮೇಲೆಯೂ ಒತ್ತಡವುಂಟಾಗಿ ಅದು ಹಿಗ್ಗುವುದು-ಕುಗ್ಗುವುದು ಆಗಿ ಉಸಿರಾಟ ನಡೆಯುತ್ತಿರುತ್ತದೆ. ಸುಲಭವಾಗಿ ಅರ್ಥ ಮಾಡಿಕೊಳ್ಳಲು ಪ್ರಾಣವಾಯುವನ್ನು ಒಂದು ಶಕ್ತಿ(force) ಎಂದೂ ಕರೆಯಬಹುದು. ಆಳವಾಗಿ ಉಸಿರಾಡುತ್ತಾ ನಮ್ಮ ಶರೀರವನ್ನು ಗಮನಿಸಿದರೆ ಈ ವಾಯುಗಳ ಪರಿಚಯವನ್ನು ಪಡೆಯಬಹುದು. ಉಸಿರನ್ನು ತೆಗೆದುಕೊಂಡಾಗ ಕ್ರಮೇಣ ಎದೆಯಭಾಗವು ಹಿಗ್ಗುತ್ತಾ ಕೊನೆಗೆ ಹೊಟ್ಟೆಯೂ ಹಿಗ್ಗುತ್ತದೆ. ಮತ್ತು ದೀರ್ಘವಾಗಿ ಉಸಿರನ್ನು ಬಿಡುತ್ತಾ ಬಂದರೆ ಹೊಟ್ಟೆಯು ಒಳಗೆ ಹೋಗುತ್ತದೆ. ಶರೀರ ರಚನೆಯಲ್ಲಿ ಮೂಗಿನ ಹೊಳ್ಳೆಗಳು ಸಂಪರ್ಕ ಹೊಂದಿರುವುದು ಎದೆಯ ಭಾಗದಲ್ಲಿರುವ ಶ್ವಾಸಕೋಶಗಳ ಜೊತೆ. ಆದರೂ ಹೊಟ್ಟೆಯು ಏಕೆ ಹಿಗ್ಗುವುದು ಕುಗ್ಗುವುದು ಆಗುತ್ತದೆಯೆಂದರೆ ಇಲ್ಲಿ ಒಂದು ಶಕ್ತಿ ಕೆಲಸ ಮಾಡುತ್ತದಾದುದರಿಂದ. ಈ ಮೇಲ್ಮುಖ ಹಾಗೂ ಕೆಳಮುಖವಾಗಿ ಕೆಲಸ ಮಾಡುವ ಶಕ್ತಿಗಳನ್ನೇ ಪ್ರಾಣವಾಯು, ಅಪಾನವಾಯು ಎನ್ನುವುದು. ಉಸಿರಾಟವನ್ನು ನಿಯಂತ್ರಿಸಿದರೆ ಪ್ರಾಣಶಕ್ತಿಯೂ ನಿಯಂತ್ರಣಕ್ಕೆ ಬರುತ್ತದೆ. ಪ್ರಾಣವು ನಿಯಂತ್ರಣಗೊಂಡರೆ ಅದು ಅನೇಕ ವಿಧವಾದ ರೋಗಗಳಿಗೆ ಪರಿಹಾರವನ್ನುಂಟು ಮಾಡಿ ಆರೋಗ್ಯ ಸಿದ್ಧಿಯಾಗುವುದಷ್ಟೇ ಅಲ್ಲದೇ ಮನಸ್ಸೂ ಸಹ ನಿಯಂತ್ರಣಗೊಂಡು ಏಕಾಗ್ರವಾಗುತ್ತದೆ.
ಪ್ರಾಣಾಯಾಮಗಳಲ್ಲಿರುವ ಸಾಮಾನ್ಯ ಅಂಶಗಳೆಂದರೆ ಪೂರಕ, ರೇಚಕ, ಕುಂಭಕಗಳು. ಪೂರಕವೆಂದರೆ ಉಸಿರನ್ನು ಒಳಗೆ ತೆಗೆದುಕೊಳ್ಳುವುದು, ರೇಚಕವೆಂದರೆ ಉಸಿರನ್ನು ಹೊರಗೆ ಬಿಡುವುದು ಮತ್ತು ಕುಂಭಕವೆಂದರೆ ಉಸಿರನ್ನು ಕಟ್ಟುವುದು. ಮೂಗಿನ ಯಾವ ಹೊಳ್ಳೆಯಲ್ಲಿ ಪೂರಕ, ಯಾವ ಹೊಳ್ಳೆಯಲ್ಲಿ ರೇಚಕ ಮತ್ತು ಯಾವಾಗ ಕುಂಭಕವೆಂಬ ವಿಭಿನ್ನತೆಯು ಪ್ರಾಣಾಯಾಮದ ನಾನಾ ವಿಧಗಳನ್ನು ರೂಪಿಸುತ್ತದೆ.
ಚಿತ್ತ ಹಾಗೂ ಪ್ರಾಣಗಳ ಪರಸ್ಪರ ಸಂಬಂಧವಿರುವುದರಿಂದ ಒಂದನ್ನು ತಡೆಗಟ್ಟಿದರೆ ಮತ್ತೊಂದರ ಸ್ಪಂದನಿರೋಧವಾಗುತ್ತದೆಯೆಂಬ ಅಂಶ ಶ್ರೀರಂಗಮಹಾಗುರುಗಳ ಪಾಠಗಳಲ್ಲಿ, ಎತ್ತಿ ಹೇಳಲ್ಪಟ್ಟಿದೆ.
ಸೂಚನೆ : 24/1/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.