ಓಂ ಶ್ರೀಃ
ಗುಪ್ತನಿಧಿ
ಲೇಖಕರು : ವಿದ್ವಾನ್|| ಶ್ರೀ ಛಾಯಾಪತಿ
ನಿಧಿಲಾಭಕ್ಕಾಗಿ ನಿಧಿದರ್ಶನಮಾಡಿಸುವ ಸಿದ್ಧಾಂಜನಗಳನ್ನು ಬಳಸಿಕೊಳ್ಳುವುದರಿಂದ ಹಿಡಿದು ವೈಜ್ಞಾನಿಕ ಉಪಕರಣಗಳ ಬಳಕೆಯವರೆಗೂ ಹರಡಿದೆ ಶೋಧಯತ್ನ. ನಿಧಿಲಾಭದ ಮೂಲಕ ಕಡುಬಡತನದಿಂದ-ಸಮೃದ್ಧಿಯ ಮುಗಿಲಿಗೆ ಏರಿದವರ ಕತೆಯೂ ಅಲ್ಲಲ್ಲಿ ಕೇಳಿಬರುತ್ತಿದೆ. ಇದರ ನಿಜ-ಸುಳ್ಳುಗಳೇನೇ ಇರಲಿ ಗುಪ್ತನಿಧಿ ಶೋಧಕಾರ್ಯವಂತೂ ಅವಿರತವಾಗಿ ಒಂದಲ್ಲ ಒಂದೆಡೆ ನಡೆಯುತ್ತಲೇ ಇದೆ. ಕೌತುಕ ಪೂರ್ಣವಾದ ಗುಪ್ತನಿಧಿಗಳ ಸುದ್ಧಿಗಂತೂ ಕೊರತೆಯಿಲ್ಲ. ರಷ್ಯಾ-ಬ್ರಿಟನ್ಗಳಂತಹ ದೇಶಗಳೆರಡು ಯುದ್ಧಕಾಲದಲ್ಲಿ ಸಮುದ್ರತಲದಲ್ಲಿ ಹುದುಗಿದ ಚಿನ್ನಕ್ಕಾಗಿ ಶೋಧವನ್ನಾರಂಭಿಸಿವೆಯೆಂಬ ಸುದ್ಧಿ ಇತ್ತೀಚಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
ಆದರೆ ಪ್ರತಿ ಮಾನವದೇಹವೂ ಒಂದು ಗುಪ್ತನಿಧಿಯ ಭಂಡಾರವಾಗಿದೆ ಎಂಬುದನ್ನು ಬಲ್ಲವರು ಅತಿವಿರಳ. ಆ ನಿಧಿಯನ್ನು ಪತ್ತೆ ಹಚ್ಚಿ ಕೈವಶ ಮಾಡಿಕೊಂಡವರಂತೂ ಮಹಾಧೀರರೇ ಸರಿ. ಆ ನಿಧಿಯನ್ನು ಪತ್ತೆ ಹಚ್ಚಿ ಅದನ್ನು ಅನುಭವಿಸಿ, ಅದರತ್ತ ತೋರಬಲ್ಲ ಗುರುವಿನ ಕೃಪೆಯೇ ಆ ನಿಧಿ ಲಾಭಕ್ಕೆ ಅಗತ್ಯವಾದ ಸಿದ್ದಾಂಜನ. ಪ್ರಕೃತಿಗರ್ಭದಲ್ಲಿ ನಿಗೂಢವಾದ ಜ್ಞಾನಧನವೇ ಆ ನಿಧಿ. ಅದು ಪರಮಾನಂದ ನಿಧಿ. ಅಕ್ಷಯ ನಿಧಿ. ಆ ನಿಧಿಯನ್ನು ಕುಂಡಲೀರೂಪವಾದ ಸರ್ಪವು ಕಾಯುತ್ತಿರುವುದು.
ಭೌತಿಕವಾದ ನಿಧಿಯ ಕಥೆಯೇ ಪೊಳ್ಳಾಗಿ ಶೋಧ ವ್ಯರ್ಥವಾಗಬಹುದು. ಆದರೆ ಈ ನಿಧಿಯಾದರೋ ಶತಾಂಶ ಸತ್ಯವಾದ ನಿಧಿ. ಆದ್ದರಿಂದ ಶೋಧವ್ಯರ್ಥವಾಗುವ ಪ್ರಶ್ನೆಯಿಲ್ಲ. ಭೌತಕನಿಧಿ ದೊರೆಯುವ ಮೊದಲೂ ನಂತರವೂ ಸುಖ-ದುಃಖ, ಹಾನಿ-ಲಾಭಗಳೆರಡನ್ನೂ ತರಬಹುದು. ಆದರೆ ಈ ಅಕ್ಷಯನಿಧಿಯಾದರೋ ಪರಮಾನಂದವನ್ನು ಬಿಟ್ಟರೆ ಮತ್ತೇನನ್ನೂ ತರದು. ಭೌತಿಕನಿಧಿಯ ಅನ್ವೇಷಣೆಗೆ ಬೇಕಾಗುವ ಹೊರ ಉಪಕರಣಗಳು ವಿಪುಲ. ಆದರೆ ಒಳ ನಿಧಿಯ ಶೋಧಕ್ಕೆ ದೈವದತ್ತವಾದ ದೇಹೇಂದ್ರಿಯ-ಮನೋ-ಬುದ್ಧಿಗಳೇ ಸಾಕು. ಹೊರಬಡತನವನ್ನು ಮಾತ್ರ ಭೌತಿಕನಿಧಿಯು ನೀಗುವುದು. ಆದರೆ ಈ ಒಳನಿಧಿಯಾದರೋ ಆತ್ಮೈಶ್ವರ್ಯಸಂಪತ್ತನ್ನುಂಟುಮಾಡಿ, ಹೊರಸಂಪತ್ತಿನ ಅಲ್ಪತೆಯನ್ನು ತೋರಿಕೊಡುವುದು. ಹೊರನಿಧಿ ಗಳಿಸಿದಷ್ಟೂ ಮತ್ತೆ ಧನತೃಷ್ಣತೆಯನ್ನು ಬೆಳೆಸುವುದು. ಈ ಒಳನಿಧಿಯಾದರೋ ತೃಷ್ಣೆಯನ್ನು ಕಳೆದು, ಪಡೆದ ಜೀವಿಯನ್ನು ಧನ್ಯನನ್ನಾಗಿ ಮಾಡುವುದು. ಚಿನ್ನ-ಬೆಳ್ಳಿ-ರತ್ನಗಳ ಬೆಲೆ ಮಿತವಾದುದು-ಇಂತಹ ಒಳನಿಧಿಯ ರಹಸ್ಯವನ್ನು ಬಲ್ಲ ಶ್ರೀ ಶ್ರೀರಂಗ ಮಹಾಗುರುವಿಗೆ ನಮಿಸಿ ಆ ಆನಂದ ನಿಧಿಗೆ, ಗುಪ್ತನಿಧಿಗೆ ಈ ಬರಹವನ್ನರ್ಪಿಸುವೆನು.
ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : ೦೧ ಸಂಪುಟ: ೦೪ ಸಂಚಿಕೆ: ನವೆಂಬರ್೧೯೮೧ ತಿಂಗಳಲ್ಲಿ ಪ್ರಕಟವಾಗಿದೆ.