Showing posts with label author_rathnavathisuresh. Show all posts
Showing posts with label author_rathnavathisuresh. Show all posts

Tuesday, August 3, 2021

ಪ್ರಮೆಯಿಂದ ಭ್ರಮೆಯ ನಿವಾರಣೆ (Prameyinda Bhrameya Nivaraṇe)

ಶ್ರೀಮತಿ ರತ್ನಾಸುರೇಶ.
ಪ್ರತಿಕ್ರಿಯಿಸಿರಿ lekhana@ayvm.in


ಆ ರಾಜರಾಣಿಯರಿಗೊಂದು ಚಿಕ್ಕ ಮಗು. ರಾಜನು  ದಿಗ್ವಿಜಯಕ್ಕೆಂದು ಹೊರಡಬೇಕಾಯಿತು. ವಾಪಸ್ಸಾಗುವಾಗ  ಎಷ್ಟೋ ವರ್ಷಗಳೇ ಕಳೆದಿದ್ದವು. ರಾಜ ಅರಮನೆಗೆ ಬಂದವನೇ ರಾಣಿಗೆ ವಿಸ್ಮಯವನ್ನುಂಟು ಮಾಡುವ ಉದ್ದೇಶದಿಂದ ಸೀದಾ  ಅಂತಃಪುರಕ್ಕೆ  ಪ್ರವೇಶಿಸುತ್ತಾನೆ. ರಾಣಿ ಮಂಚದ ಮೇಲೆ ಪವಡಿಸಿದ್ದಾಳೆ. ಇಷ್ಟೇ ಆದರೆ ಏನೂ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಪಕ್ಕದಲ್ಲಿ ತರುಣನೊಬ್ಬ ಮಲಗಿದ್ದನ್ನು ಕಂಡು ರಾಜನ ಬುದ್ಧಿ ಭ್ರಮಿಸಿತು.  ತಕ್ಷಣವೇ ಕುಪಿತಗೊಂಡ ರಾಜನು ತನ್ನ ಖಡ್ಗವನ್ನೆತ್ತಿ ಇಬ್ಬರನ್ನೂ ಸಂಹರಿಸಲೆಂದು ಹೊರಟಾಗ ಖಡ್ಗದ ತುದಿ ಬಾಗಿಲಿನ ಫಲಕದ ಮೇಲೆ ತಾಕಿತು. ಅಲ್ಲೊಂದು ಶ್ಲೋಕ ಬರೆದಿತ್ತು.  ಅದರ ಅಭಿಪ್ರಾಯ ಹೀಗಿತ್ತು. "ವಿಚಾರ ಮಾಡದೇ ಯಾವಕಾರ್ಯವನ್ನೂ ಮಾಡಬಾರದು ಏಕೆಂದರೆ ಪರಿವೆ ಇಲ್ಲದೇ ಮಾಡುವ ಕಾರ್ಯ ಆಪತ್ತಿಗೆ ಕಾರಣವಾಗುವುದು.  ಪರಾಮರ್ಶಿಸಿ ಮಾಡುವವರನ್ನು ಸಂಪತ್ತುಗಳು ತಾನಾಗಿಯೇ ವರಿಸುವುವು.  ಏಕೆಂದರೆ ಅವು ಒಳ್ಳೆಯಗುಣಕ್ಕೆ ಅಧೀನವಷ್ಟೇ." ಇದನ್ನು ಓದಿದ ರಾಜನು ರಾಣಿಯನ್ನು ಎಬ್ಬಿಸಿ ತರುಣನಾರೆಂದು ಕೇಳಿದಾಗ ಅವರ ಮಗನೇ ಎಂದು ತಿಳಿದು ರಾಜನ ಕೈಯಿಂದ ಖಡ್ಗ ಜಾರಿ ಕೆಳಗೆ ಬಿತ್ತು.  ನನ್ನಿಂದ ಅನಾಹುತವಾಗುವುದನ್ನು ಈ ಸೂಕ್ತಿಯೇ ರಕ್ಷಿಸಿತು ಎನ್ನುತ್ತಾನೆ. ಇಂತಹ ಪ್ರಮಾದಗಳು ನಮ್ಮೆಲ್ಲರ ಜೀವನಗಳಲ್ಲೂ ಬರಬಹುದು. ಮನುಷ್ಯನ  ಅಸಾವಧಾನತೆಯಿಂದ ಆದ ಭ್ರಮೆಯಿಂದ  ಹೀಗೆಲ್ಲ ಸಂಭವಿಸುವುದುಂಟು.


ಪ್ರಮೆ ಎಂದರೆ ಯಥಾರ್ಥ ಜ್ಞಾನ. ಶ್ರೀರಂಗಮಹಾಗುರುಗಳು ಭ್ರಮೆ ಪ್ರಮೆಗಳ ವಿಚಾರಗಳನ್ನು ಸೊಗಸಾದ  ಅನೇಕ ದೃಷ್ಟಾಂತಗಳಿಂದ ವಿವರಿಸಿದ್ದಾರೆ. ಉದಾಹರಣೆಗೆ – ರೈಲಿನಲ್ಲಿ  ಪ್ರಯಾಣ  ಮಾಡುವಾಗ ನಮ್ಮೆದುರುರಿನ  ರೈಲು  ಚಲಿಸಿದರೂ ನಮ್ಮ ರೈಲೇ ಚಲಿಸುತ್ತಿದೆ ಎಂಬ ಭ್ರಮೆ ಉಂಟಾಗುತ್ತದೆ. ಚಲಿಸದ ರೈಲು ನಿಲ್ದಾಣವನ್ನು ನೋಡಿದಾಗ  ನಿಜ ತಿಳಿಯುತ್ತದೆ.  ಎಂದರೆ ಶಾಶ್ವತವಾಗಿ ಇರುವುದನ್ನು ಅವಲಂಬಿಸಿದಾಗ ಭ್ರಮೆ ಹೋಗುತ್ತದೆ.  ನಮ್ಮ ಜೀವನದಲ್ಲೂ ಶಾಶ್ವತನಾದ  ಭಗವಂತನನ್ನು ಅವಲಂಬಿಸಿದಾಗ  ಜೀವನದ ಭ್ರಮೆಗಳು ತೊಲಗುತ್ತವೆ, ಇಂದಿದ್ದು, ನಾಳೆ ಹೋಗುವುದು ಯಾವುದು? ಎಂದೆಂದಿಗೂ ಇದ್ದು ನಮ್ಮನ್ನು ಉದ್ಧರಿಸುವುದು ಯಾವುದು ಎಂಬುದರ ಜ್ಞಾನ-ಪ್ರಮೆ ಉಂಟಾಗುತ್ತದೆ. ಆಗ ನೆಮ್ಮದಿ  ಉಂಟಾಗುತ್ತದೆ. ಅಸಾವಧಾನತೆ ಅನೇಕ ಭ್ರಮೆಗಳಿಗೆ ಕಾರಣವಾಗುತ್ತದೆ ಎಂಬುದು ನಮ್ಮ ದೇಶದ ಜ್ಞಾನಿಗಳ ಮಾತು. ನಮ್ಮ ಜೀವನ ಇಂತಹ ಭ್ರಮೆಯಲ್ಲಿ ನಿಲ್ಲದೇ ಪ್ರಮೆಯಲ್ಲಿ ನಿಲ್ಲುವಂತೆ ಆಗಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ.


ಸೂಚನೆ: 9/7/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ. 

Wednesday, December 30, 2020

ಕರ್ಮದ ಮರ್ಮವರಿತು ಕರ್ಮ ಮಾಡಬೇಕು (Karmada Marmavaritu Karma Madabeku)

ಲೇಖಕರು: ಶ್ರೀಮತಿ ರತ್ನಾಸುರೇಶ 
(ಪ್ರತಿಕ್ರಿಯಿಸಿರಿ lekhana@ayvm.in)



ದೇವಾಲಯದ ನಿರ್ಮಾಣಕಾರ್ಯ ನಡೆಯುತ್ತಾ ಇತ್ತು. ಅಲ್ಲಿ ಮೂವರು ಕಲ್ಲು ಕೆತ್ತುತ್ತಿದ್ದರು. ಒಬ್ಬನು ಬಂದು ಮೊದಲನೆಯವನನ್ನು "ನೀನ್ಯಾಕೆ ಕಲ್ಲು ಕೆತ್ತುತ್ತಿದ್ದೀಯಾ? ಎಂದು ಕೇಳಿದನು. ಅದಕ್ಕೆ ಅವನು ಅಯ್ಯೋ ಬಡತನ ಬುದ್ದಿ, ಹೆಂಡತಿ ಮಕ್ಕಳನ್ನು ಸಾಕಬೇಕಲ್ಲಾ" ಎಂದನು. ಎರಡನೆಯವಳನ್ನೂ ಅದೇ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಅವಳು "ನನ್ನ ಗಂಡ ಒಬ್ಬನೇ ದುಡಿಯುತ್ತಾನೆ;ನೆ, ಸಾಕಾಗುವುದಿಲ್ಲ. ನಾನೂ ಸ್ವಲ್ಪ ಸಹಾಯಮಾಡಿದರೆ ಸಂಸಾರದ ವೆಚ್ಚ ಸರಿದೂಗಿಸಲು  ಸುಲಭವಾಗುತ್ತದೆ" ಎಂದಳು. ಮೂರನೆಯವಳು ಒಬ್ಬ ವೃದ್ಧೆ. ಬಹಳ ಶ್ರದ್ಧೆಯಿಂದ ಕಲ್ಲು ಕೆತ್ತುತ್ತಿದ್ದಳು. ಅವಳಿಗೂ ಮೇಲಿನ ಪ್ರಶ್ನೆಯನ್ನೇ ಕೇಳಲಾಗಿ, ಅವಳು ಹೇಳುತ್ತಾಳೆ "ಯಾರೋ ಪುಣ್ಯಾತ್ಮರು ದೇವಸ್ಥಾನ ಕಟ್ಟಿಸಿದ್ದಾರೆ. ನನ್ನ ಕೈಯಲ್ಲಿ ಭಗವಂತನ ಕೆಲಸ ಇನ್ನೇನೂ ಮಾಡುವುದಕ್ಕಾಗುವುದಿಲ್ಲ. ಅದಕ್ಕೇ ಈ ಚಿಕ್ಕ ಸೇವೆ ಮಾಡುತ್ತಿರುವುದು. ಎಲ್ಲಾ ಅವನಿಗಾಗಿ". ಪ್ರಶ್ನೆ ಕೇಳಿದವನು  ಒಂದು ನಿಮಿಷ ಮೂಕವಿಸ್ಮಿತನಾದ. ಅವಳು ಮಾಡುತ್ತಿರುವುದು ಹೊಟ್ಟೆಪಾಡಿಗಾಗಿಯೇ. ಆದರೆ ಅವಳ ಭಾವ ಉನ್ನತವಾದದ್ದು. ಭಗವಂತನನ್ನು ಭಾವಿಸಿದಷ್ಟೂ ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾನೆ. "ಭಾವಗ್ರಾಹೀ ಜನಾರ್ದನಃ" ಎನ್ನುತ್ತಾರೆ. ನಾವು  ಏನನ್ನೇ ಮಾಡಿದರೂ ಅದರಲ್ಲಿ ಪೂರ್ತಿ ಮನಸ್ಸಿಟ್ಟು ಭಗವಂತನಿಗೆ ಪ್ರೀತಿಯಾಗಲಿ ಎಂಬ ಭಾವದೊಡನೆ ಶ್ರದ್ಧೆಯಿಂದ ಮಾಡಿದಾಗ ಅದು ಭಗವನ್ಮಯವಾದ ಬಾಳಾಟವಾಗುತ್ತೆ ಎಂದು ಹಿರಿಯರು ನುಡಿಯುತ್ತಾರೆ. 

ಭಾವಕ್ಕೆ ಸಂಬಂಧಪಟ್ಟ ಇನ್ನೊಂದು ಉತ್ಕೃಷ್ಟವಾದ ದೃಷ್ಟಾಂತ-ಗೋಪಿಯರು ಗೋಕುಲದಲ್ಲಿ ಪರಂಜ್ಯೋತಿ ಸ್ವರೂಪನಾದ ಶ್ರೀಕೃಷ್ಣನನ್ನು ಭಾವಿಸಿದ ಪರಿ. ಅವರ ಬೆಳಗಿನ ದಿನಚರಿ ಪ್ರಾರಂಭವಾಗುವುದೇ ಶ್ರೀ ಕೃಷ್ಣನ ಮಧುರ ಸ್ಮರಣೆಯಿಂದ. ಮನೆ ಗುಡಿಸಿ, ಸಾರಿಸಿ, ರಂಗವಲ್ಲಿ ಇಡುವಾಗ, ನೀರು ತರುವಾಗ, ಹಾಲು ಕರೆಯುವಾಗ, ಮೊಸರು ಕಡೆಯುವಾಗ ಅವರ ಮನಸ್ಸಿನ ಏಕಮಾತ್ರ ಧ್ಯೇಯಮೂರ್ತಿ ನೀಲಮೇಘಶ್ಯಾಮನಾದ ಶ್ರೀಕೃಷ್ಣ. ಸದಾ ಅವರ ಮನಸ್ಸು ಭಗವಂತನಲ್ಲಿಯೇ ರಮಿಸುತ್ತಿತ್ತು ಇದರಿಂದಾದ ಪ್ರಯೋಜನ - ಅಲಭ್ಯ ಲಭ್ಯನಾದ ಶ್ರೀಕೃಷ್ಣನ ದರ್ಶನ; ಆಲಿಂಗನ ಸೌಖ್ಯ. ಗೋಪಿಯರು ಏನನ್ನೂ ಬಯಸದೇ ಭಗವಂತನೊಬ್ಬನನ್ನೇ ಬಯಸಿ ಅವನನ್ನೇ ಪಡೆದರು. ಶ್ರೀರಂಗಮಹಾಗುರುಗಳ  ದಿವ್ಯವಾಣಿ ಇಂತಿದೆ--"ನಾವು ಮಾಡುವ ಪ್ರತಿಕರ್ಮವೂ ಬ್ರಹ್ಮಾರ್ಪಿತವಾಗಬೇಕು. ಅದಕ್ಕೆ ತಕ್ಕ ಯುಕ್ತಿಯೂ ಬೇಕು". ಇದನ್ನು ಜ್ಞಾಪಿಸಿಕೊಳ್ಳುತ್ತಾ ನಮ್ಮ ಕರ್ಮಗಳೆಲ್ಲ ಭಗವಂತನಿಗೆ ಪ್ರೀತಿಯನ್ನುಂಟುಮಾಡಿ ಅವನನ್ನೇ ಹೊಂದುವಂತಾಗಲಿ ಎಂದು ಪ್ರಾರ್ಥಿಸುತ್ತಾ "ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ"(ಎಲ್ಲ ಕರ್ಮಗಳೂ ಜ್ಞಾನದಲ್ಲಿ ಪರಿಸಮಾಪ್ತಿಯನ್ನು ಹೊಂದಬೇಕು) ಎಂಬ ಶ್ರೀಕೃಷ್ಣನ ದಿವ್ಯವಾಣಿಯನ್ನು ಸ್ಮರಿಸೋಣ.

ಸೂಚನೆ: 30/12/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.     

Wednesday, November 4, 2020

ಅವಧೂತ ಗೀತಯ ಪಾಠ (Avadhuta Geetaya Paṭha)

ಲೇಖಕರು: ಶ್ರೀಮತಿ ರತ್ನಾಸುರೇಶ

(ಪ್ರತಿಕ್ರಿಯಿಸಿರಿ lekhana@ayvm.in)




ಗುರು-ಕತ್ತಲೆಯನ್ನು ಹೋಗಲಾಡಿಸಿ ಒಳಬೆಳಕನ್ನು ತೋರಿಸುವ ತತ್ತ್ವ. ಇದು ಮನುಷ್ಯರೂಪದಲ್ಲಿರಬಹುದು; ಬೇರೆ ರೂಪದಲ್ಲೂ ಇರಬಹುದು. ಶ್ರೀಮದ್ಭಾಗವತದಲ್ಲಿ ಅವಧೂತ-

ಯದು-ಇವರ ಸಂವಾದದಲ್ಲಿ ಅವಧೂತನು ಭೂಮಿ, ಪರ್ವತ, ಆಕಾಶ, ನೀರು, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ, ದುಂಬಿ, ಆನೆ, ಜೇನುತೆಗೆಯುವವನು, ಜಿಂಕೆ, ಮೀನು, ಪಿಂಗಳ- ವೇಶ್ಯೆ, ಕುರರ ಪಕ್ಷಿ, ಮಗು, ಕುಮಾರಿ, ಬಿಲ್ಲುಗಾರ, ಸರ್ಪ, ಜೇಡರಹುಳು – ಹೀಗೆ ತನಗೆ ೨೪ ಗುರುಗಳಿದ್ದಾರೆ ಎಂದು ಹೇಳುತ್ತಾನೆ. ಯಾರಿಂದ ಯಾವ ಶಿಕ್ಷಣ ಪಡೆದೆ ಎಂಬುದನ್ನು ವಿಸ್ತಾರವಾಗಿ ವಿವರಿಸುತ್ತಾನೆ. ಅವುಗಳಲ್ಲಿ ಕೆಲವನ್ನು ನೋಡೋಣ.

ಭೂಮಿ: ಭೂದೇವಿಯ ಮೇಲೆ ಯಾರು ಎಷ್ಟಾದರೂ ತುಳಿದಾಡಲಿ ಗಲೀಜುಮಾಡಲಿ, ಅದು ದೈವದ ಕಟ್ಟಳೆಯೆಂದು ತಿಳಿದು ಕ್ಷಮಾನಿಧಿಯಾದ ಭೂದೇವಿಯು ಕಂಪಿಸದೇ ಇರುತ್ತಾಳೆ. ಹಾಗೆಯೇ ದೈವದ ಆಣತಿಗೆ ಒಳಪಟ್ಟು ಅಸಂಖ್ಯಾತ ಪ್ರಾಣಿಗಳು ತನ್ನನ್ನು ಆಕ್ರಮಿಸಿದರೂ ತಾನು ಸತ್ಯದಿಂದ ವಿಚಲಿತನಾಗಬಾರದೆಂಬ ಪಾಠವನ್ನು ಕಲಿತೆ.

ಬಿಲ್ಲುಗಾರ:-ಲಕ್ಷ್ಯಕ್ಕೆ ಗುರಿ ಇಟ್ಟ ಬಿಲ್ಲುಗಾರನಿಗೆ ಹೇಗೆ ಪಕ್ಕದಲ್ಲಿ ಯಾವುದೇ ಮೆರವಣಿಗೆಯು ಹೋದರೂ, ಅದಾವುದರ ಪರಿವೆಯೂ ಇಲ್ಲದೇ ಕೇವಲ ಲಕ್ಷ್ಯದತ್ತ ಗುರಿ ಇರುತ್ತದೋ ಹಾಗೆಯೇ ನಮ್ಮ ಮನಸ್ಸಿಗೆ ಭಗವಂತನೊಬ್ಬನೇ ಲಕ್ಷ್ಯವಾಗಿರಬೇಕೆಂಬುದನ್ನು ಕಲಿತೆ.

ಕಣಜದ ಹುಳು: ಕಣಜದ ಹುಳುವೊಂದು ತನ್ನ ಆಹಾರಕ್ಕಾಗಿ ಬೇರೊಂದು ಹುಳುವನ್ನು ತಂದು ತನ್ನ ಗೂಡಿನಲ್ಲಿ ತಂದಿಟ್ಟಾಗ ಕೀಟವು ಕಣಜವನ್ನೇ ಭಯದಿಂದ ಧ್ಯಾನಿಸುತ್ತಾ ಕಣಜದ ತಾದಾತ್ಮ್ಯವನ್ನೇ ಪಡೆಯುವುದು. ಹಾಗೆಯೇ ಭಗವಂತನನ್ನೇ ನಿರಂತರ ಧ್ಯಾನಿಸುತ್ತಿದ್ದರೆ ಅಂತಹವರು ಭಗವಂತನ ಸಾರೂಪ್ಯ ಪಡೆಯುವುದರಲ್ಲಿ ಆಶ್ಚರ್ಯವೇನಿಲ್ಲ ಎಂಬುದನ್ನು ಕಲಿತೆ.


ನಮ್ಮ ಲಕ್ಷ್ಯಸಾಧನೆಗೆ ಅನುಕೂಲವಾಗುವ ಅಂಶಗಳು ಏನಾದರೂ ನಿಸರ್ಗದಲ್ಲೇ ಇವೆಯೇ ಎಂಬ ಅನ್ವೇಷಕ ಬುದ್ಧಿಯಿಂದ ಆ ಅವಧೂತನು ನಿಸರ್ಗದ ವಸ್ತು, ಪ್ರಾಣಿಗಳಲ್ಲೆಲ್ಲಾ ಗುರುವೆಂದು ಭಾವಿಸಿದುದು ಮನೋಜ್ಞವಾಗಿದೆ. ನಮ್ಮನ್ನು ನಾವು ಜೀವನದ ಪರಮಲಕ್ಷ್ಯವಾದ ಸತ್ಯ ಸಾಕ್ಷಾತ್ಕಾರಕ್ಕಾಗಿ ಸಿದ್ಧಗೊಳಿಸಿಕೊಳ್ಳುವಾಗ ನಮ್ಮ ಮನಸ್ಸನ್ನು ಹೀಗೆ ತೆರೆದಿಟ್ಟು ಆ ಅವಧೂತನಂತೆ ಪ್ರೇರಣೆ ಪಡೆಯಬೇಕೆಂಬುದು ಇಲ್ಲಿಯ ಪಾಠ. ಮನುಷ್ಯನ ಬಂಧಮೋಕ್ಷಗಳಿಗೆ ಮನಸ್ಸೇ ಕಾರಣ. ಅದು ಅತ್ಯಂತ ಬಲವಾದ ಇಂದ್ರಿಯ. ಅದನ್ನು ಕಟ್ಟಿಹಾಕುವುದು ದುಷ್ಕರ.

"ಮದಿಸಿದ ಆನೆಯನ್ನಾದರೂ ಕಟ್ಟಿಹಾಕಬಹುದು ,ಆದರೆ ಮನಸ್ಸನ್ನು ಕಟ್ಟಿಹಾಕುವುದು ಕಷ್ಟ. ಪಳಗಿದ ಆನೆಯ ಸಹಾಯವಿದ್ದರೆ ಮದಿಸಿದ ಆನೆಯನ್ನೂ ಪಳಗಿಸಿಬಿಡಬಹುದಲ್ಲವೇ. ಹಾಗೆಯೇ ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ" ಎಂಬುದು ಶ್ರೀರಂಗಮಹಾಗುರುಗಳ ಮಾತು.

ಸೂಚನೆ: 04/11/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Wednesday, October 21, 2020

ಸತ್ಸಂಕಲ್ಪದ ಮಹಿಮೆ (Satsankalpada Mahime)

ಲೇಖಕರು: ಶ್ರೀಮತಿ ರತ್ನಾಸುರೇಶ
 (ಪ್ರತಿಕ್ರಿಯಿಸಿರಿ lekhana@ayvm.in)


ಜ್ಯೋತಿಷಿಯೊಬ್ಬನ ಪ್ರಸಿದ್ಧಿಗೆ ಪ್ರಭಾವಿತನಾಗಿ ಯುವಕನೊಬ್ಬ ತುಂಬಾ ಹೊತ್ತು ಕಾದು ದರ್ಶನ ಪಡೆದನು. ಯುವಕನ ಪ್ರಾರ್ಥನೆಯಂತೆ ಜ್ಯೋತಿಷಿ ಯುವಕನ ಅಂಗೈ ನೋಡಿ ನಾಳೆ ಬಾ ಎಂದರು. ಕತ್ತಲಾದ್ದರಿಂದ ಆ ರಾತ್ರಿ ಊರಿನ ಆಚೆಯಿರುವ ಪಾಳು ಶಿವದೇವಾಲಯದಲ್ಲಿ ತಂಗಿದ. ದೇವಸ್ಥಾನದ ದುಃಸ್ಥಿತಿ ನೋಡಿ ದುಃಖಿತನಾಗಿ, ಭಗವಂತ ಆಯುಸ್ಸು ಕೊಟ್ಟರೆ ಈ ದೇವಾಲಯದ ಜೀರ್ಣೋದ್ಧಾರ ಮಾಡುತ್ತೇನೆ ಎಂಬ ಸತ್ಸಂಕಲ್ಪಮಾಡಿ ನಿದ್ರಿಸಿದ. ಮಧ್ಯರಾತ್ರಿ ಭಾರೀ ಶಬ್ದದೊಂದಿಗೆ ಯುವಕನ ಪಕ್ಕದಲ್ಲಿಯೇ ಕಲ್ಲಿನ ತೊಲೆಯೊಂದು ಬಿದ್ದುಬಿಟ್ಟಿದೆ. ಯುವಕನಿಗೆ ಗಾಬರಿ, ಆಶ್ಚರ್ಯ. ಭಗವಂತನೇ ತನ್ನನ್ನು ಕಾಪಾಡಿದನೆಂಬ ಕೃತಜ್ಞತೆಯಿಂದ ವಿಶ್ರಾಂತಿ ಪಡೆದು ಪ್ರಾತಃಕಾಲ ಎದ್ದು ಜ್ಯೋತಿಷಿಯಲ್ಲಿಗೆ ಹೋದನು. ಜ್ಯೋತಿಷಿಗೆ ಆಶ್ಚರ್ಯ. ಹಿಂದಿನ ದಿನವೇ ಯುವಕನ ಆಯುಸ್ಸು ಮುಗಿದಿದೆ ಎಂಬುದು ತಿಳಿದಿತ್ತು. ತನ್ನ ಲೆಕ್ಕಾಚಾರ ತಪ್ಪದಿರುವ ಆತ್ಮವಿಶ್ವಾಸದಿಂದ ಜ್ಯೋತಿಷಿಯು- ನೀನು ನಿನ್ನೆ ಇಲ್ಲಿಂದ ಹೋದ ಮೇಲೆ ಏನೇನು ಮಾಡಿದೆ ಎಂಬುದನ್ನು ಸವಿಸ್ತಾರವಾಗಿ ಹೇಳು ಎನ್ನಲು, ಯುವಕನು ನಡೆದಿದ್ದೆಲ್ಲವನ್ನೂ ತಿಳಿಸಿದ. ಅದಕ್ಕೆ ಜ್ಯೋತಿಷಿಗಳು-ನಿನ್ನ ಆಯುಸ್ಸು ನಿನ್ನೆಗೆ ಮುಗಿದಿತ್ತು. ನೀನು ಮಾಡಿದ ಸತ್ಸಂಕಲ್ಪ ನಿನ್ನ ಆಯುಸ್ಸನ್ನು ವೃದ್ಧಿಸಿದೆ ಎಂದರು. ಗಭೋ೯ಪನಿಷತ್ತು ಸಾರುವಂತೆ ಪ್ರತಿ ಜೀವಿಯು ತಾಯಿಯ ೭-೮ ತಿಂಗಳಿನ ಗರ್ಭದಲ್ಲಿರುವಾಗ ಭಗವಂತನ ದರ್ಶನ ಪಡೆಯುತ್ತೆ. ಅದಕ್ಕೆತನ್ನ ಹಿಂದಿನ ಜನ್ಮಗಳ ಸ್ಮರಣೆಯು ಉಂಟಾಗಿ ಅದೊಂದು ಸಂಕಲ್ಪ ಮಾಡುತ್ತೆ.
 "ನಾನು ಗರ್ಭದಿಂದ ಆಚೆ ಬಂದ ಮೇಲೆ ಭಗವಂತ ನಿನ್ನನ್ನು ಮರೆಯದೇ ಬಾಳುತ್ತೇನೆ" ಎಂದು. ಆದರೆ ಭೂಪತನವಾಗುತ್ತಿದ್ದಂತೆಯೇ ಮಾಯೆಗೆ ಒಳಗಾಗಿ ತನ್ನ ಸಂಕಲ್ಪವನ್ನು ಮರೆತುಬಿಡುತ್ತೆ. ಹಾಗಾಗದಿರಲೆಂದೇ ಮಗು ಹುಟ್ಟಿದಾಗ ಪ್ರಸೂತಿಗೃಹದಲ್ಲಿ ತ್ರಿಕೋಣಾಕಾರದ ಹಣತೆ ಹಚ್ಚುವುದು,ಮತ್ತು ಘಂಟಾನಾದ ಮಾಡುವುದ. ಒಟ್ಟಿನಲ್ಲಿ,  ಷೋಡಶ ಸಂಸ್ಕಾರಗಳು ಇತ್ಯಾದಿ ಎಲ್ಲವೂ ಜೀವಿಗೆ ತನ್ನ ಸತ್ಸಂಕಲ್ಪವನ್ನು ನೆನಪಿಸುವ ಅಭಿಜ್ಞಾನಗಳನ್ನಾಗಿ ಆರ್ಯ ಮಹರ್ಷಿಗಳು ನಮ್ಮ ಸಂಸ್ಕೃತಿಯಲ್ಲಿ ತಂದಿದ್ದಾರೆ.ಶ್ರೀರಂಗಮಹಾಗುರುಗಳು ಹೇಳುವಂತೆ- "ಸಂಕಲ್ಪವು ಸುದೃಢವಾಗಿ ಶಕ್ತಿಯುತವಾಗಿದ್ದರೆ ಆ ಸಂಕಲ್ಪವನ್ನು ಹರಿಸಿಬಿಟ್ಟರೂ ಪರವಾಗಿಲ್ಲ. ಆ ಸಂಕಲ್ಪವೇ ಕೆಲಸ ಮಾಡಿಕೊಳ್ಳುತ್ತೆ" ಎಂಬುದಾಗಿ ಸತ್ಸಂಕಲ್ಪ ಮಾಡಿ ಭಗವಂತನೆಡೆಗೆ ಸಾಗೋಣ.

ಸೂಚನೆ: 21/10/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.   

Wednesday, June 24, 2020

ಮಾನವ ಜನ್ಮ ಬಲು ದೊಡ್ಡದು (Manava Janma Balu Doddadu)

ಲೇಖಕರು: ಶ್ರೀಮತಿ ರತ್ನಾಸುರೇಶ
 (ಪ್ರತಿಕ್ರಿಯಿಸಿರಿ lekhana@ayvm.in)



ವೃದ್ಧ ಗೃಹಸ್ಥನೊಬ್ಬ ತನ್ನ ಪರಿವಾರದೊಡನೆ ಸಂತೋಷವಾಗಿದ್ದ. ತಲೆಮಾರಿನವರೆಗೂ ಉಂಡು ತೇಗುವಷ್ಟು ಆಸ್ತಿಯನ್ನೂ ಸಂಪಾದಿಸಿದ್ದ. ಜೀವನ ಸಂಜೆಯಲ್ಲಿ ತನ್ನ ಜೀವನದ ಬಗ್ಗೆ ಪುಣ್ಯವಿಶೇಷದಿಂದ ಅವನಿಗೆ, -ಅಯ್ಯೋ, ಇಷ್ಟು ದಿನ ನನ್ನವರಿಗಾಗಿ ಕಷ್ಟಪಟ್ಟು ಅಸ್ತಿಯನ್ನೇನೋ ಗಳಿಸಿದೆ ಆದರೆ ನನ್ನ ಪರಲೋಕಕ್ಕೆ ಯಾವ ಪುಣ್ಯಸಂಪಾದನೆಯನ್ನೂ ಮಾಡದೇ ವ್ಯರ್ಥಮಾಡಿಕೊಂಡೆ ಎನಿಸಿತು. ಮಲಗುವಾಗ ತನ್ನ ಮಗನನ್ನು ಕರೆದು- "ಜಾತಸ್ಯ ಮರಣಂ ಧ್ರುವ೦" ಹುಟ್ಟಿದವರಿಗೆ ಮರಣ ನಿಶ್ಚಯ, ಮುಂದಿನ ಜನ್ಮದಲ್ಲಿ ನಾನು ಹಂದಿಯಾಗಿ ಹುಟ್ಟಿ ನಿನ್ನೆದುರು ಬರುತ್ತೇನೆ. ನೀನು ಏನೂ ಸಂಕೋಚಪಟ್ಟುಕೊಳ್ಳದೇ ನನ್ನನ್ನು ಕೊಂದುಬಿಡು. ಅದರ ನಂತರ ನನಗೆ ಪುನಃ ಮನುಷ್ಯ ಜನ್ಮ ಬರುತ್ತದೆ ಆಗ ಸಾಧನೆ ಮಾಡಿ ಭಗವಂತನನ್ನು ಸೇರುತ್ತೇನೆ ಎಂದು ಹೇಳಿದ್ದ. ವೃದ್ದ ರಾತ್ರಿ ಚಿರನಿದ್ರೆಗೆ ಜಾರಿದ. ಅತ್ಯಮೂಲ್ಯವಾದ ಮಾನವದೇಹ ವ್ಯರ್ಥವಾಗಿ ಕಾಲವಶವಾಯಿತು. ವರುಷಗಳುರುಳಿದವು. ಒಮ್ಮೆ ಆ ಗೃಹಸ್ಥನ ಮಗನ ಮನೆಯ ಹಿತ್ತಲಲ್ಲಿ ಹಂದಿಗಳ ಹಿಂಡು ಪರಿವಾರ ಸಮೇತ ಬಂದವು. ಕೂಡಲೇ ಗೃಹಸ್ಥನ ಮಗನಿಗೆ ತಂದೆಯ ಮಾತು ಜ್ಞಾಪಕಕ್ಕೆ ಬಂದು ತನ್ನ ಬಂದೂಕನ್ನು ಒತ್ತಿ ಗುಂಡುಹಾರಿಸಲು ಉದ್ಯುಕ್ತನಾದ. ಆಗ ಹಂದಿಯು ಹೇಳಿತು- 'ನಿಲ್ಲು ನನ್ನನ್ನು ಕೊಲ್ಲಬೇಡ. ನಾನು ನಿನಗೆ ಹಿಂದೇನೋ ಹೇಳಿರಬಹುದು, ಆದರೆ ಈಗ ಈ ಹಂದಿ ಜನ್ಮದಲ್ಲಿ ನನ್ನ ಹೆಂಡತಿ ಮಕ್ಕಳೊಡನೆ ಅತ್ಯಂತ ಸಂತೋಷವಾಗಿದ್ದೇನೆ' ಎಂದಿತು. ಆದರೆ ಗೃಹಸ್ಥನ ಮಗನು ತನ್ನ ತಂದೆಯು ಪ್ರಾಜ್ಞನಾಗಿ ಮಾನವ ಜನ್ಮದಲ್ಲಿ ಹೇಳಿದ ಆಜ್ಞೆಯೇ ಅನುಕರಣೀಯ ಎಂದು ಆ ಹಂದಿಯನ್ನು ವಧಿಸಿದ. ಉಳಿದೆಲ್ಲವೂ ಆ ಗೃಹಸ್ಥನು ಬಯಸಿದಂತೆಯೇ ಆಯಿತು.

ಮಾನವ ದೇಹ ಸೃಷ್ಟಿಯ ಅತ್ಯದ್ಭುತವಾದ ಯಂತ್ರ. ಈ ದೇಹದಲ್ಲಿ ಮಾತ್ರ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡು ಪುರುಷಾರ್ಥಮಯವಾದ ಬಾಳಾಟವನ್ನು ಮಾಡುವುದಕ್ಕೆ ಸಾಧ್ಯವಿದೆ. "ಚತುರ್ದಶ ಭುವನಗಳನ್ನು ಕೊಟ್ಟರೂ ಅವು ಈ ಮಾನವ ದೇಹಕ್ಕೆ ಸಮಾನವಲ್ಲ" ಎಂಬ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. "ಮಹತ್ತಾದ ಪುಣ್ಯವೆಂಬ ಹಣವನ್ನು ಕೊಟ್ಟು ಈ ಮಾನವ ದೇಹವನ್ನು ಪಡೆದಿದ್ದೀಯೇ. ಈ ನೌಕೆ ಮುರಿಯುವ ಮುನ್ನವೇ ಮೋಕ್ಷದ ದಡ ಸೇರಿಕೋ" ಎಂಬ ಋಷಿವಾಣಿಯೂ ಇದನ್ನೇ ಸಾರುತ್ತದೆ. ಮನುಷ್ಯ ಜನ್ಮದ ಬೆಲೆಯರಿತು ಬಾಳೋಣ.

ಸೂಚನೆ: 24/06/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ. 

Sunday, June 14, 2020

ಆಹಾರ ಸಂಪಾದನೆ - ಆಹಾರ ಶುದ್ಧಿ (Ahara Sampadane - Ahara Suddhi)

ಲೇಖಕಿ ; ಶ್ರೀಮತಿ ರತ್ನಾವತಿ ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)

  

ಮಹಾತ್ಮರೊಬ್ಬರು ಧರ್ಮಪ್ರಚಾರ ಮಾಡುತ್ತ ಊರಿಂದೂರಿಗೆ ಸಂಚರಿಸುತ್ತಿದ್ದರು. ಅಲ್ಲಿರುವ ಕೆಲವು ಶ್ರೀಮಂತರು ಭೋಜನ ಕೂಟವನ್ನೇರ್ಪಡಿಸಿ ಅವರನ್ನು ಸತ್ಕರಿಸಿ ಆಶೀರ್ವಾದ ಪಡೆಯುತ್ತಿದ್ದರು. ಸಂತರ್ಪಣೆಯಲ್ಲಿ ಭಾಗವಹಿಸಿದ್ದ ಬಡವನಾದ ಗೃಹಸ್ಥನೊಬ್ಬನಿಗೂ, ಆ ಮಹಾತ್ಮರನ್ನು ಕರೆದು ಅನ್ನಸಂತರ್ಪಣೆ ಮಾಡಿ ಆಶೀರ್ವಾದ ಪಡೆಯಬೇಕೆಂಬ ಆಸೆಯಾಯಿತು. ಮಹಾತ್ಮರನ್ನು ಆಹ್ವಾನಿಸಿ ವೈಭೋಪೇತವಾದ ಅನ್ನಸಂತರ್ಪಣೆ ಏರ್ಪಡಿಸಿದನು. ಆ ಮಹಾತ್ಮರು ರಾತ್ರಿ ಅಲ್ಲಿಯೇ ವಿಶ್ರಾಂತಿ ಪಡೆದರು. ಗೃಹಸ್ಥ ಬೆಳಗ್ಗೆ ಎದ್ದು ನೋಡಿದರೆ ಮಹಾತ್ಮರ ಪತ್ತೆಯೇ ಇರಲಿಲ್ಲ. ಆತಂಕಗೊಂಡು ಮಹಾತ್ಮರನ್ನು ಹುಡುಕುತ್ತಾ ಹೊರಟ.

ಅನತಿ ದೂರದಲ್ಲಿ ಮಹಾತ್ಮರು ಹಸುಕರುವಿನೊಂದಿಗೆ ಶೀಘ್ರವಾಗಿ ಇವನ ಮನೆಕಡೆ ಬರುತ್ತಿದ್ದರು, ಅವರು ಗೃಹಸ್ಥನ ಬಳಿ "ಅಯ್ಯಾ ಈ ಹಸುಕರುಗಳು ನಿನ್ನವು, ನಿನ್ನೆ ರಾತ್ರಿ ನಾನು ಇವುಗಳನ್ನೇ ಕದ್ದೊಯ್ದಿದ್ದೆ " ಎನ್ನುತ್ತಾ ಅವುಗಳನ್ನು ಹಿಂದಿರುಗಿಸಿ ನನ್ನ ಅಪರಾಧವನ್ನು ಮನ್ನಿಸು ಎಂದು ಪ್ರಾರ್ಥಿಸಿದರು. ಅದಕ್ಕೆ ಗೃಹಸ್ಥ- ಮಹಾತ್ಮರೇ ನೀವು ಕೇಳಿದ್ದರೆ ನಾನೇ ನಿಮಗೆ ತಲುಪಿಸುತ್ತಿದ್ದೆ, ಎಂದ. ಅದಕ್ಕೆ ಮಹಾತ್ಮರು-ನನ್ನಲ್ಲಿ ಯಾವತ್ತೂ ಕಳ್ಳತನಮಾಡುವ ದುರ್ಬುದ್ಧಿಯು ಉಂಟಾಗಿರಲಿಲ್ಲ. ಈಗ ಏಕೆ ಉಂಟಾಯಿತೋ ತಿಳಿಯುತ್ತಿಲ್ಲ. ಏನೋ ಜನ್ಮಾಂತರದ ಕರ್ಮವಿರಬಹುದು, ಆದರೂ ನಿನ್ನನ್ನೊಂದು ಪ್ರಶ್ನೆ ಕೇಳುತ್ತೇನೆ ತಪ್ಪು ತಿಳಿದುಕೊಳ್ಳಬೇಡ. ನನಗೆ ನಿನ್ನೆ ಬಡಿಸಿದ ಆಹಾರ ಪದಾರ್ಥಗಳನ್ನು ಹೇಗೆ ಸಂಗ್ರಹಿಸಿದೆ ? ನಿಜ ಹೇಳೆಂದರು. ಅದಕ್ಕೆ ಗೃಹಸ್ಥ ನನ್ನ ಬಳಿ ಏನೂ ಇರಲಿಲ್ಲ, ಶ್ರೀಮಂತರೊಬ್ಬರ ಮನೆಯಲ್ಲಿ ಕದ್ದು ತಂದಿದ್ದು ಎಂದನು. ಮಹಾತ್ಮರಿಗೆ ತಾನೇಕೆ ಕದ್ದೆ ಎಂಬ ಅರಿವಾಯಿತು. ಕಳ್ಳತನದ ಸಂಸ್ಕಾರ ತಿಂದ ಆಹಾರದಲ್ಲಿ ಸಂಕ್ರಮಿತವಾಗಿತ್ತು. ಆದರೆ ಅದು ಜೀರ್ಣವಾದ ನಂತರ ಮಹಾತ್ಮರ ಮೂಲ ಸಂಸ್ಕಾರ ಜಾಗೃತವಾಗಿ  ಹಸುಕರುವನ್ನು  ಹಿಂದಿರುಗಿಸಲು ಬಂದಿದ್ದರು. ಗೃಹಸ್ಥನಿಗೆ ತನ್ನ ತಪ್ಪಿನರಿವಾಗಿ ಮಹಾತ್ಮರಲ್ಲಿ ಕ್ಷಮೆಯಾಚಿಸಿದನು.

ಜೀವಹೋಗುವ ಸಂದರ್ಭವೊಂದನ್ನು ಬಿಟ್ಟು ಉಳಿದಂತೆ ಕಳ್ಳತನದಿಂದ ಸಂಪಾದಿಸಿದ ಅನ್ನವನ್ನು ತಿನ್ನಬಾರದು. ದ್ರವ್ಯಶುದ್ಧಿ, ಅರ್ಥಶುದ್ಧಿ ಇದ್ದರೆ ಮಾತ್ರವೇ ಆಹಾರ ಶುದ್ಧಿ. ಶುದ್ಧವಾದ ಆಹಾರ ಸೇವನೆಯು ಸನ್ನಡತೆ ಮತ್ತು ಭಗವತ್ಪ್ರಾಪ್ತಿಗೆ ಪೋಷಕವಾಗುತ್ತದೆ ಎಂಬ ಶ್ರೀರಂಗ ಮಹಾಗುರುಗಳ ಮಾತು ಸ್ಮರಣೀಯವಾಗಿದೆ.  

ಸೂಚನೆ: 27/05/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Wednesday, April 29, 2020

ಪರಿಶ್ರಮದ ಬೆಲೆ (Parisramada Bele)

ಲೇಖಕಿ ; ಶ್ರೀಮತಿ ರತ್ನಾವತಿ ಸುರೇಶ್ 
(ಪ್ರತಿಕ್ರಿಯಿಸಿರಿ lekhana@ayvm.in) 
  

ಗುರುಕುಲದಲ್ಲಿ ದಡ್ಡಶಿಖಾಮಣಿ ಬಾಲಕನೊಬ್ಬ ಅಧ್ಯಯನ ಮಾಡುತ್ತಿದ್ದ. ಒಮ್ಮೆ ಪಾಠದಲ್ಲಿ ತಪ್ಪುಮಾಡಿದ್ದಕ್ಕೆ ಗುರುಗಳು ಬೆತ್ತಪ್ರಹಾರಕ್ಕಾಗಿ ಕೈಚಾಚಲು ಹೇಳುತ್ತಾರೆ. ಅದು ಹಿಂದಿನಕಾಲದ ಪದ್ದತಿ. ಬಾಲಕನ ಕೈನೋಡಿ ತಕ್ಷಣ ಗುರುಗಳು ತಮ್ಮ ಕೈಯನ್ನು ಹಿಂದಕ್ಕೆಳೆದು ಕೊಳ್ಳುತ್ತಾರೆ. ಬಾಲಕನ ಕೈಯಲ್ಲಿ ವಿದ್ಯಾರೇಖೆಯೇ ಇರಲಿಲ್ಲ! ಗುರುಗಳು "ನಿನ್ನಕೈಯಲ್ಲಿ ವಿದ್ಯಾರೇಖೆಯೇ ಇಲ್ಲ, ನಿನ್ನನ್ನು ದಂಡಿಸಿಯೂ ಪ್ರಯೋಜನವಿಲ್ಲ. ಮನೆಗೆ ಹೋಗು" ಎನ್ನುತ್ತಾರೆ.
ಬಾಲಕ ಅತ್ಯಂತ ದುಃಖತಪ್ತನಾಗಿ ಮನೆಗೆ ಬರುತ್ತಿರುವಾಗ ಕೆಲವು ಹೆಂಗಳೆಯರು ಬಾವಿಕಟ್ಟೆಯಲ್ಲಿ ನೀರು ಸೇದುತ್ತಿದ್ದರು. ಹೆಂಗಸರು ನೀರುಸೇದಿ ಕೊಡ ಇಡುವ ಜಾಗದಲ್ಲಿ ಮಾತ್ರ ಹೊಂಡವೇರ್ಪಟ್ಟಿತ್ತು. ಅದನ್ನು ಕಂಡ ಬಾಲಕ "ಬಾವಿಕಟ್ಟೆ ಕಟ್ಟುವಾಗಲೇ ಹೀಗೆ ಕೊರೆದುಕಟ್ಟಿದ್ದಾರೆಯೇ?" ಎಂದ. ಅವರು "ಇಲ್ಲ, ಕಟ್ಟುವಾಗ ಸರಿಯಾಗಿಯೇಕಟ್ಟಿದ್ದರು, ದಿನವೂ ಕೊಡ ಇಟ್ಟುಇಟ್ಟು ಹೀಗಾಗಿದೆ" ಎಂದರು. ಬಾಲಕನು ಕಲ್ಲೇ ಹೀಗಾದರೆ 'ನಾನು ಪ್ರಯತ್ನಪಟ್ಟರೆ ವಿದ್ಯೆ ಬಾರದೇಕೆ? ಆದರೆ ವಿದ್ಯಾರೇಖೆಯೇ ಇಲ್ಲವಲ್ಲ' ಎಂದು ಯೋಚಿಸಿ, ಹರಿತವಾದ ಕತ್ತಿಯೊಂದರಿಂದ ವಿದ್ಯಾರೇಖೆ ಇರಬೇಕಾದಲ್ಲಿ ರೇಖೆಯನ್ನು ಕೊರೆದುಕೊಂಡು ಗುರುಕುಲಕ್ಕೆ ಪ್ರವೇಶಿಸುತ್ತಾನೆ.

ಕೋಪಗೊಂಡ ಗುರುಗಳು "ನಿನಗೆ ವಿದ್ಯಾರೇಖೆಯೇ ಇಲ್ಲ, ಇಲ್ಲಿಗೆ ಬರಬೇಡವೆಂದಿದ್ದನಲ್ಲ" ಎಂದರು. ಆತನು "ಗುರುಗಳೇ, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದಿದ್ದೇನೆ" ಎಂದನು. ಗುರುಗಳು "ಏನು, ವಿದ್ಯಾರೇಖೆಯನ್ನು ಮಾಡಿಕೊಂಡು ಬಂದೆಯಾ?" ಎಂದು ಬಾಲಕನ ಕೈಯನ್ನು ನೋಡುತ್ತಾರೆ. ವಿದ್ಯಾರೇಖೆಯಿರುವಲ್ಲಿ ಕೈಸಿಗಿದಿರುವುದನ್ನು ಕಂಡು ಅವರ ಕಣ್ತುಂಬಿ ಬಂದು  ಪ್ರೀತಿಯಿಂದ "ಮಗು, ಸಹಜವಾಗಿ ಇರೆಬೇಕಾದ ವಿದ್ಯಾರೇಖೆ ಇಲ್ಲವಾದ್ದರಿಂದ ಶಿವನನ್ನು ಮೊರೆಹೋಗು" ಎಂದು ಅವನನ್ನು ತಪಸ್ಸಿಗೆ ಹಚ್ಚುತ್ತಾರೆ. ಬಾಲಕನ ಕಠೋರತಪಸ್ಸಿಗೆ ಶಿವ ಪ್ರತ್ಯಕ್ಷನಾದನು. ಆದರೆ ಒಂದಕ್ಷರವನ್ನೂ ಮಾತನಾಡದೆ ತನ್ನ ಢಮರುಗವನ್ನು ೧೪-ಸಾರಿ ಬಾರಿಸುತ್ತಾನೆ. ೧೪-ನಾದಗಳು ಹೊರಹೊಮ್ಮಿತು, 'ನೃತ್ತಾವಸಾನೆ ನಟರಾಜರಾಜಃ' ಇದನ್ನಾಧರಿಸಿ ಸಂಸ್ಕೃತ-ವ್ಯಾಕರಣಶಾಸ್ತ್ರ ರಚನೆಮಾಡಿದ ಆ ಬಾಲಕನೇ ಪಾಣಿನಿಮಹರ್ಷಿಗಳು.

ಶ್ರಮದ ಅರಿವು ಇಲ್ಲದಿದ್ದರೆ, ವಿದ್ಯೆಯ ಬೆಲೆ ತಿಳಿಯುವುದಿಲ್ಲ ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ವಿದ್ಯಾರ್ಜನೆಗಿರಬೇಕಾದ ಅರ್ಹತೆಗಳಲ್ಲಿ ಇದೊಂದು ಮುಖ್ಯವಾದ ಅಂಶವಾಗಿದೆ. ಪುರುಷಪ್ರಯತ್ನ-ದೈವಾನುಗ್ರಹಗಳೆರಡೂ ಕೂಡಿದಾಗ ಕಾರ್ಯಸಿದ್ಧಿ ಖಚಿತವೆಂಬುದನ್ನು ಸ್ಪಷ್ಟಪಡಿಸುತ್ತದೆ ಮೇಲಿನ ಘಟನೆ. ಭಗವಂತನನ್ನು ಪ್ರಾರ್ಥಿಸಿ ಪುರುಷಪ್ರಯತ್ನ ಮಾಡೋಣ. ವಿದ್ಯಾವಂತರಾಗೋಣ.

ಸೂಚನೆ: 29/04/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.