Sunday, May 3, 2026

ವ್ಯಾಸ ವೀಕ್ಷಿತ 186 ಅಚ್ಚರಿಯ ತೇರಿಗೆ ಮೆರುಗಿತ್ತ ಗರುಡ (Vyaasa Vikshita186)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


image.png



ಯಾವ ರಾಜರೂ ಆ ರಥವನ್ನು, ಎಂದರೆ ಆ ರಥದಲ್ಲಿ ಆಸೀನರಾಗಿರುವವರನ್ನು, ಜಯಿಸುವುದು ಸಾಧ್ಯವೇ ಇರಲಿಲ್ಲ. ಹೀಗಿರುವಂತಹುದಾಗಿ ಆ ರಥವು ಕಂಗೊಳಿಸಿತು. ಎಂತಹ ರಥವದು! ಹಿಂದೆ ಆ ರಥದಲ್ಲಿ ಕುಳಿತೇ ಇಂದ್ರನೂ ವಿಷ್ಣುವೂ ಸಂಗ್ರಾಮದಲ್ಲಿ ತಾರಕಾಸುರನನ್ನು ಸಂಹಾರ ಮಾಡಿದುದು.

ಅದೇ ರಥದ ಮೇಲೆ ಕುಳಿತೇ ಕೃಷ್ಣನೀಗ ಹೊರಟಿರುವುದು. ಕಾದ ಸುವರ್ಣದ ಕಾಂತಿ ಆ ರಥಕ್ಕಿತ್ತು. ಕಿಂಕಿಣಿಗಳ ಜಾಲವನ್ನೇ (ಬಲೆಯನ್ನೇ) ಅದು ಹೊಂದಿತ್ತು. ಮೋಡಗಳ ಗುಡುಗಿನ ನಾದವನ್ನೂ ಹೊಂದಿತ್ತು. ಶತ್ರುಘಾತಕವಾಗಿದ್ದ ಅದು ಜಯವನ್ನು ತಂದುಕೊಡುವಂತಹುದೂ ಆಗಿತ್ತು. ತೊಂಭತ್ತೊಂಭತ್ತು ದಾನವರನ್ನು ಇಂದ್ರನು ಸಂಹರಿಸಿದುದು ಆ ರಥದಲ್ಲಿ ಕುಳಿತು ಹೋಗಿದ್ದಾಗಲೇ. ಅಂತಹ ಅದ್ಭುತ-ರಥವನ್ನು ಹೊಂದಿದ್ದರಿಂದಾಗಿ ಆ ಮೂವರು ಪುರುಷ-ಶ್ರೇಷ್ಠರೂ ಪರಮ-ಹರ್ಷಗೊಂಡರು.

ಮಹಾಬಾಹುವಾದ ಕೃಷ್ಣನು ಈ ಸಹೋದರರಿಬ್ಬರೊಡಗೂಡಿ ರಥದಲ್ಲಿ ಬರುತ್ತಿರುವುದನ್ನು ಕಂಡು ಮಗಧದೇಶದ ಪ್ರಜೆಗಳೆಲ್ಲರೂ ವಿಸ್ಮಿತರಾದರು. ದಿವ್ಯವಾದ ಹಯಗಳನ್ನು, ಎಂದರೆ ಕುದುರೆಗಳನ್ನು, ಹೊಂದಿದ್ದ ಆ ರಥವು ವಾಯುವೇಗವುಳ್ಳದ್ದು. ಅಂತಹ ರಥವು ಈಗ ಕೃಷ್ಣನಿಂದ ಅಧಿಷ್ಠಿತವಾಗಿದ್ದು ಅಧಿಕವಾಗಿ ಕಂಗೊಳಿಸಿತು.

ಆ ಶ್ರೇಷ್ಠವಾದ ರಥದ ಮೇಲಿನ ಧ್ವಜವು ದೇವವಿಹಿತವಾಗಿದ್ದು, ಅದು ಒಂದು ಯೋಜನದಷ್ಟು ದೂರಕ್ಕೂ, ಎಂದರೆ ಸುಮಾರು ಎಂಟು ಮೈಲಿ ದೂರಕ್ಕೂ, ಕಾಣಿಸುವುದಾಗಿದ್ದರೂ, ಅದನ್ನು ರಥಕ್ಕೆ ಎಲ್ಲಿ ಸಿಕ್ಕಿಸಿರುವರೆಂಬುದೇ ಗೋಚರವಾಗುತ್ತಿರಲಿಲ್ಲ! ಅದು ಇಂದ್ರಾಯುಧದಂತೆ, ಎಂದರೆ ಕಾಮನಬಿಲ್ಲಿನ ಹಾಗೆ, ಶೋಭಿಸುತ್ತಿತ್ತು.

ಆ ಸಮಯದಲ್ಲಿ ಕೃಷ್ಣನು ಗರುತ್ಮಂತನನ್ನು, ಎಂದರೆ ಗರುಡನನ್ನು, ಸ್ಮರಿಸಿದನು. ಅದೇ ಕ್ಷಣಕ್ಕೇ ಆತನೂ ಅಲ್ಲಿಗೆ ಆಗಮಿಸಿದನು. ಮೇಲೆದ್ದ ಒಂದು ಚೈತ್ಯವೃಕ್ಷದ ಹಾಗೆ ಗರುಡನು ತೋರಿದನು. ಬಾಯ್ದೆರೆದು ಮಹಾನಾದವನ್ನು ಮಾಡುತ್ತಿದ್ದ, ಹಾಗೂ ಧ್ವಜವನ್ನು ಆಶ್ರಯಿಸಿದ್ದ, ಭೂತಗಳೊಂದಿಗೆ, ಸರ್ಪಭಕ್ಷಕನೆನಿಸಿದ ಗರುಡನು ಆ ಶ್ರೇಷ್ಠರಥದ ಮೇಲೆ ಕುಳಿತುಕೊಂಡನು. ಆಗ ಹೇಗೆ ಕಂಡಿತು ಆ ಧ್ವಜ? ಭೂತಗಳಿಗೆ, ಎಂದರೆ ಯಾವುದೇ ಪ್ರಾಣಿಗಳಿಗೆ, ದಿಟ್ಟಿಸಿನೋಡಲಾಗದ ಹಾಗೆ ಅಧಿಕವಾದ ತೇಜಸ್ಸಿನಿಂದಾಗಿ ಕೂಡಿದ್ದಾಗಿ  ಕಂಡಿತು. ಮಧ್ಯಾಹ್ನದ ಹೊತ್ತಿನಲ್ಲಿ ತನ್ನ ಸಹಸ್ರ-ಕಿರಣಗಳಿಂದಲೂ ಕೂಡಿದ ಆದಿತ್ಯನು ಕಣ್ಣು ಕೋರೈಸುವಂತಿರುವನಲ್ಲವೇ? ಹಾಗೆ.

ಆ ಶ್ರೇಷ್ಠಧ್ವಜದ ಮತ್ತೊಂದು ಆಶ್ಚರ್ಯವೆಂದರೆ ಅದು ಮರಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಶಸ್ತ್ರಗಳಿಂದ ಘಾಸಿಕೊಳ್ಳುತ್ತಿರಲಿಲ್ಲ. ಆ ದಿವ್ಯವಾದ ಧ್ವಜವು ಮನುಷ್ಯರಿಗೆ ಗೋಚರವಾಗಿರುತ್ತಿತ್ತು.

ಮಳೆಯ ಹಾಗೆ ಶಬ್ದ ಮಾಡುತ್ತಿದ್ದ ಆ ದಿವ್ಯ-ರಥದಲ್ಲಿ ಆಸೀನನಾಗಿ ಭೀಮಾರ್ಜುನರೊಡನೆ ಕೃಷ್ಣನು ಆ ಊರಿನಿಂದ ನಿರ್ಗಮಿಸಿದನು. ಇಂದ್ರನಿಂದ ವಸುವಿಗೂ ಆತನಿಂದ ಬೃಹದ್ರಥನಿಗೂ ಅಲ್ಲಿಂದ ಕ್ರಮ-ಪ್ರಾಪ್ತವಾಗಿ ಜರಾಸಂಧನಿಗೂ ಬಂದ ರಥವದು.

ಗಿರಿವ್ರಜದಿಂದ ಹೊರಹೊರಟು ಈಗ ಸಮತಟ್ಟಾದ ಎಡೆಗೆ ಕೃಷ್ಣನು ಬಂದು ಸೇರಿದನು. ಬಂಧನದಿಂದ ಬಿಡುಗಡೆಯನ್ನು ಹೊಂದಿದ ರಾಜರುಗಳು ಕೃಷ್ಣನನ್ನು ಅರ್ಚಿಸಿ ಹೀಗೆ ಸ್ತುತಿಸಿದರು:

"ಮಹಾಬಾಹುವಾದ ಕೃಷ್ಣನೇ, ದೇವಕಿಗೆ ಆನಂದ ತಂದವನೇ, ಭೀಮಾರ್ಜುನ ಬಲದೊಂದಿಗೆ ಕೂಡಿರುವ ನೀನು ಧರ್ಮರಕ್ಷಣೆಯನ್ನು ಮಾಡುವೆಯೆಂಬುದರಲ್ಲಿ ಆಶ್ಚರ್ಯವೇ ಇಲ್ಲ. ದುಃಖವೆಂಬ ಕೆಸರಿನ ರಾಶಿಯೇ ಆಗಿದ್ದುದು ಜರಾಸಂಧವೆಂಬ ಮಡು. ಅದರೊಳಗೆ ಸಿಲುಕಿದ್ದೆವು ನಾವು ರಾಜರುಗಳು. ಅಂತಹ ನಮ್ಮಗಳ ಉದ್ಧಾರವನ್ನು ನೀನು ಈಗ ಎಸಗಿರುವೆ. ಬೆಟ್ಟವೆಂಬ ಭಯಂಕರವಾದ ಕೋಟೆಯೊಳಗೆ ಸಿಲುಕಿ ನಲುಗಿಹೋಗಿದ್ದ ನಮಗೆ, ಅದೃಷ್ಟವಶಾತ್ ಮೋಕ್ಷವನ್ನು ದಯಪಾಲಿಸಿರುವೆ, ಓ ವಿಷ್ಣುವೇ!

ಸೂಚನೆ : 3/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.