ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೪೯ - ಕಿವುಡನು ಯಾರು ?
ಉ. ಹಿತವಚನವನ್ನು ಕೇಳದವ.
ಈ ಹಿಂದಿನ ಪ್ರಶ್ನೋತ್ತರದಲ್ಲಿ 'ಅಂಧ ಯಾರು? ಎಂಬ ವಿಷಯವನ್ನು ಚರ್ಚಿಸಿದ್ದಾಗಿತ್ತು. ಅದೇ ರೀತಿಯಲ್ಲಿ ಈ ಉತ್ತರವನ್ನು ಚಿಂತಿಸಬೇಕಾಗಿದೆ. ಅಂದರೆ 'ಕಿವುಡ ಎಂದರೆ ಯಾರು?' 'ಕಿವಿ ಕೇಳದವನು. ಕಿವಿಯ ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡಿರುವವನು ಎಂಬ ಅರ್ಥ ಈ ಶಬ್ದಕ್ಕೆ ಬರುತ್ತದೆ. ಆದರೆ ಇಲ್ಲಿ ಈ ಅರ್ಥವನ್ನು ಭಾವಿಸಲಾಗದು. ಅದಕ್ಕೆ ಇಲ್ಲಿ ಉತ್ತರವಾಗಿ 'ಯಾರು ಹಿತವಚನವನ್ನು ಅಥವಾ ಉಪದೇಶವನ್ನು ಕೇಳುವುದಿಲ್ಲವೋ ಅವನು ಕಿವಿ ಇದ್ದೂ ಕಿವುಡ' ಎಂಬ ಅರ್ಥವನ್ನು ಭಾವಿಸಬೇಕು. ಹಾಗಾದರೆ ಕಿವಿಯಿದ್ದೂ ಕಿವುಡ ಹೇಗಾಗುತ್ತಾನೆ?!
ಹಿತವಚನವನ್ನು ಅಥವಾ ಉಪದೇಶವನ್ನು ಕೇಳುವ ಆಸಕ್ತಿ ಇಲ್ಲದವನು, ಕೇಳದವನು. ಅವನು ಕಿವುಡನಂತೆ. ಅವನಿಗೆ ಯಾವುದೇ ಉಪದೇಶಗಳು ಅವನ ಗುಣ ಸ್ವಭಾವಗಳನ್ನು ಬದಲಿಸಲು ಸಾಧನವಾಗದು ಎಂಬುದು ತಾತ್ಪರ್ಯ. ಸಾಮಾನ್ಯವಾಗಿ 'ಉಪದೇಶ' ಎಂಬುದು ಒಬ್ಬ ವ್ಯಕ್ತಿಯನ್ನು ಸರಿದಾರಿಗೆ ತರಲು ಉಪಯೋಗಿಸುವ ಮಾತುಗಳು. ಇವು ಶಬ್ದರೂಪವಾಗಿ ಇರುತ್ತವೆ. ಈ ಶಬ್ದಗಳನ್ನು ಕೇಳುವ ಇಂದ್ರಿಯ ಕಿವಿಯಷ್ಟೆ. ಹಾಗಾಗಿ ಈ ಉಪದೇಶಗಳನ್ನು ಕೇಳಲು ಅವನು ಕಿವಿಯನ್ನು ಬಳಸಿಕೊಳ್ಳಬೇಕು. 'ಉಪದೇಶ' ಎಂಬ ಶಬ್ದಕ್ಕೆ ಹತ್ತಿರದಲ್ಲಿ ಹೇಳುವುದು ಎಂದರ್ಥ' 'ಉಪ- ಸಮೀಪ, ದಿಶ ಅತಿಸರ್ಜನ-ದಾನ ಎಂಬುದಾಗಿ ಅರ್ಥ. ಅಂದರೆ ಅವನ ಕಿವಿಯಲ್ಲಿ ಬಂದು ಶಬ್ದಗಳ ಮೂಲಕ ಅವನಿಗೆ ಒಳ್ಳೆಯ ವಿಚಾರವನ್ನು ಕೋಡಬೇಕು. ಅದು ಉಪದೇಶವಾಗುತ್ತದೆ. ಅದಕ್ಕೆ ಸಂಸ್ಕೃತದಲ್ಲಿ 'ಹಿತವಚನ' ಅಥವಾ 'ಶಿಕ್ಷಣ' ಎಂಬುದಾಗಿ ಅರ್ಥವನ್ನೂ ನೀಡಲಾಗಿದೆ. ಉಪದೇಶವು ಅವನಿಗೆ ಹಿತವಾಗಿರಬೇಕು. 'ಹಿತ' ಎಂಬುದು ಯಾವುದನ್ನು ಕೊಡುತ್ತದೆ? ಅದು ಹೇಗಿರಬೇಕು? ಎಂಬುದಕ್ಕೆ ಶ್ರೀಶಂಕರ ಭಗವತ್ಪಾದರು 'ಹಿತ' ಎಂಬ ಶಬ್ದಕ್ಕೆ ಹೀಗೆ ಭಾಷ್ಯವನ್ನು ಬರೆದಿದ್ದಾರೆ - "ಹಿತಮ್ ಪರಂ ಜ್ಞಾನಪ್ರಾಪ್ತಿಸಾಧನಂ" ಎಂದು. ವಸ್ತುತಃ ನಮ್ಮ ಇಹಪರ ಜೀವನವು ಸುಖವಾಗಿ ಸಾಗಬೇಕಾದರೆ ಅನೇಕ ಸಾಧನಗಳು ಬೇಕು. ಯಾವ ಸಾಧನಗಳನ್ನು ಬಳಸಬೇಕು; ಯಾವುದು ನಮಗೆ ಹಿತವಾಗುತ್ತದೆ; ಯಾವ ಸಾಧನಗಳನ್ನು ಬಳಸಬಾರದು; ಅದು ನಮಗೆ ಅಹಿತವಾಗುತ್ತದೆ ಎಂಬ ಅರಿವನ್ನು ಪಡೆದವರಿಂದ, ನಾವು ಆ ಬಗೆಯ ಮಾಹಿತಿಗಳನ್ನು ಸಂಗ್ರಹಿಸಬೇಕು. ಆಗ ಅದಕ್ಕೆ ನಾವು ಕಿವಿಗೊಡಬೇಕು. ಹಾಗಿದ್ದಾಗ ನಮ್ಮ ಜೀವನ ಅದರಿಂದ ಪರಿವರ್ತಿತವಾಗುತ್ತದೆ. ಹಿತವಾದ ವಚನವನ್ನು ಕೇಳಿದಾಗ ಅದು ನಮ್ಮ ಈ ಭೌತಿಕ ಜೀವನವನ್ನು ಮಾತ್ರ ಅನುಕೂಲಿಸದೆ ಪರ ಜೀವನಕ್ಕೂ ಅಂದರೆ ಭಗವಂತನನ್ನು ಈ ಜನ್ಮದಲ್ಲಿ ಪಡೆಯಲು ಕೂಡ ಅನುಕೂಲಿಸುತ್ತದೆ ಎಂಬ ಅರ್ಥದಲ್ಲಿ ಭಗವತ್ಪಾದರು ಹಿತ ಎಂಬ ಶಬ್ದಕ್ಕೆ ಅರ್ಥವನ್ನು ನೀಡಿದ್ದಾರೆ. ಹಾಗಾಗಿ ಇಂತಹ ಉತ್ತಮವಾದ ಉಪದೇಶವನ್ನು ಅಥವಾ ಹಿತವಚನವನ್ನು ಕೇಳಬೇಕು. ಆಗ ನಮ್ಮ ಜೀವನ ಸಾರ್ಥಕವಾಗುತ್ತದೆ. ನಮಗೆ ಇಂದ್ರಿಯಗಳು ಇರುವುದು, ಅದರಿಂದ ಬರುವ ಸುಖವನ್ನು ಪಡೆದು, ತನ್ಮೂಲಕ ಇಂದ್ರಿಯಾತೀತವಾದ ಆನಂದವನ್ನು ಅನುಭವಿಸಲು. ಹಾಗಾಗಿ ಈ ಕಿವಿ ಎಂಬ ಇಂದ್ರಿಯವು ಕೇಳುವುದರ ಮೂಲಕ ಅತಿಶಯವಾದ ಆನಂದವನ್ನು ಪಡೆಯಲು ಸಾಧ್ಯ. ಇದನ್ನು ಪಡೆಯದವನು, ಈ ಕಿವಿಯನ್ನು ಹಾಗೆ ಬಳಸದವನು, 'ಕಿವಿಯಿದ್ದು ಕಿವುಡನಂತೆ ಸರಿ' ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 18/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.