Sunday, January 4, 2026

ಬ್ರಹ್ಮ ಸಾಯುಜ್ಯವೇ ಜೀವನದ ಮಹಾ ಧ್ಯೇಯ (Brahma Sayujyave Jivanada Maha Dhyeya)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


ಜೀವನಧ್ಯೇಯವನ್ನು ನೆನಪಿಸುವ ಒಂದು ಪ್ರಸಿದ್ಧವಾದ ಕಥೆ -ಮಾಂಧಾತ ಎಂಬ ಪ್ರಖ್ಯಾತನಾದ ರಾಜ. ರಾಜರ್ಷಿ ಎಂದೇ ಹೇಳಬಹುದು. ತನ್ನ ತಪಸ್ಯೆಯಿಂದ ಪರಾಕ್ರಮದಿಂದ, ಸತ್ವಮಯವಾಗಿ ರಾಜ್ಯವನ್ನು ಆಳುತ್ತಿದ್ದವನು. ಧರ್ಮಾತ್ಮ. ಹಾಗೆಯೇ ಆ ಕಾಲದಲ್ಲೊಬ್ಬ ಮಹರ್ಷಿ. ತಪಸ್ಯೆಯಿಂದ ಅಸಂಖ್ಯ ವರ್ಷಗಳು ಶರೀರ ಶೋಧನೆ ಮಾಡಿದವನು. ನಿತ್ಯ ಬ್ರಹ್ಮಚಾರಿ.  ನಿರಂತರ ತಪಸ್ಸಿನ ಕಾರಣದಿಂದಲೇ ವೃದ್ಧನಾದವನು. ಹೆಸರು ಸೌಭರೀ.ಅವನೊಮ್ಮೆ ಯಮುನೆಯಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದನು. ಅನತಿ ದೂರದಲ್ಲಿ ಗಂಡು ಮೀನೊಂದು ಅನೇಕ ಹೆಣ್ಣು ಮೀನುಗಳೊಂದಿಗೆ ಕೂಡಿ ಸುಖವನ್ನು ಅನುಭವಿಸುವುದನ್ನು ನೋಡಿದನು. ಕಾಲಕರ್ಮ ಸಂಯೋಗ. ಮಹರ್ಷಿಯ ಮನಸ್ಸಿನಲ್ಲಿ ತಾನೂ ಸಂಸಾರ ಸುಖವನ್ನು ಅನುಭವಿಸಬೇಕು ಎಂಬ ಆಸೆ ಉಂಟಾಯಿತು.


ಮಾಂಧಾತ ಮಹಾರಾಜನಿಗೆ ೫೦ ಮಂದಿ ಹೆಣ್ಣುಮಕ್ಕಳಿದ್ದರು. ಸೌಭರಿ ಮಹರ್ಷಿಗಳು ಅವನಲ್ಲಿಗೆ ಬಂದು,ಒಬ್ಬಳನ್ನು ತಮಗೆ ವಿವಾಹ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಮಾಂಧಾತ ಒಬ್ಬ ತಂದೆಯಂತೆ ಆಲೋಚಿಸಿದ. ಇವನು ಹಣ್ಣು ಹಣ್ಣು ಮುದುಕ. ಇವನಿಗೆ ಹೇಗೆ ಮಗಳನ್ನು ಕೊಡುವುದು? ನಿರಾಕರಿಸಿದರೆ ಕೋಪಗೊಂಡು ಶಪಿಸಿಯಾನು. ಅದಕ್ಕೇ ಬುದ್ಧಿವಂತಿಗೆ ತೋರಿದ. ಹೀಗೆಂದ-" ಮಹರ್ಷಿಯೇ ಕ್ಷತ್ರಿಯ ಸಂಪ್ರದಾಯದಂತೆ ನನ್ನ ಯಾವಳಾದರೂ ಕನ್ಯೆಯು ನಿನ್ನನ್ನು ವರಿಸಿ ಸ್ವಯಂವರಮಾಲೆಯನ್ನು ನಿನ್ನ ಕೊರಳಿಗೆ ಹಾಕಿದರೆ ನೀನು ಅವಳನ್ನು ಪ್ರತಿಗ್ರಹಿಸಬಹುದಾಗಿದೆ".  ತ್ರಿಕಾಲಜ್ಞನಾದ ಮಹರ್ಷಿಗೆ ರಾಜನ ಮನಸ್ಸಿನ ಭಾವ ಒಡನೆಯೇ ಅರ್ಥವಾಯಿತು. ಅವರ ತಪೋಬಲವನ್ನು ತೋರಿಸಲು ಇದು ಸಕಾಲ. ಒಡನೆಯೇ ದೇವಕನ್ಯೆಯರೂ ಮೊಹಿಸುವಂತಹ ಕಡುಚೆಲುವನಾದ ಯುವಕನಾದನು. ರಾಜನ ಆಜ್ಞೆಯಂತೆ ಸೌಭರಿಯನ್ನು ಕನ್ಯೆಯರ ಅಂತಃಪುರಕ್ಕೆ ಕರೆದೊಯ್ದರು. ಇವನ ಸೌಂದರ್ಯಕ್ಕೆ ಮನಸೋತು ಒಬ್ಬಳಲ್ಲ, ಎಲ್ಲಾ ಐವತ್ತುಜನ ಕನ್ಯೆಯರೂ ಹಠಹಿಡಿದು ಸೌಭರಿಯನ್ನೇ ಮದುವೆಯಾದರು. ಆ ಎಲ್ಲರನ್ನೂ ಮದುವೆಯಾಗಿ ದೇವಲೋಕಸದೃಶವಾದ ಭೋಗವಸ್ತುಗಳಿಂದ ಅಲಂಕೃತವಾದ ಭವನಗಳನ್ನೇ ಅವರಿಗಾಗಿ ನಿರ್ಮಿಸಿದನು. ತಾನೇ ತನ್ನ ತಪಸ್ಸಿನ ಪ್ರಭಾವದಿಂದ ಐವತ್ತು  ಪ್ರತ್ಯೇಕವಾದ ಶರೀರಗಳನ್ನು ಧರಿಸಿ ಎಲ್ಲಾ ರಾಜಕನ್ಯೆಯರೊಂದಿಗೂ ವಿಹರಿಸುತ್ತಿದ್ದನು.

ಮಾಂಧಾತ ಮಹಾರಾಜನೊಮ್ಮೆ ತನ್ನ ಕನ್ಯೆಯರ ಯೋಗಕ್ಷೇಮಗಳನ್ನು ನೋಡಿಕೊಂಡು ಹೋಗಲು ಬರಲಾಗಿ ಅಲ್ಲಿ ಸೌಭರಿ ಮಹರ್ಷಿಯು ಅನುಭವಿಸುತಿದ್ದ ಅನಿರ್ವಚನೀಯವಾದ ಸುಖವನ್ನು ನೋಡಿ ಅಚ್ಚರಿಪಟ್ಟನು. ತಾನು ಸಾರ್ವಭೌಮ ಸಂಪತ್ತಿನಿಂದ ಸಂಪನ್ನನೆಂಬ ಗರ್ವವೆಲ್ಲವೂ ಇಳಿದುಹೋಯಿತು. ಒಬ್ಬೊಬ್ಬ ಹೆಣ್ಣುಮಗಳೂ ತನ್ನನ್ನೇ ಬಹಳ ಸುಖವಾಗಿಟ್ಟಿದ್ದಾನೆ ಎಂದು ತಂದೆಗೆ ತಿಳಿಸಿ ಸಂತೋಷಪಡುತ್ತಿದ್ದಳು.


ಹೀಗೆ ಆ ಮಹರ್ಷಿಯು ಬಹಳಕಾಲ ಗೃಹಸ್ಥಾಶ್ರಮದ ಸುಖವನ್ನು ಅನುಭವಿಸಿದರೂ ಅವನಿಗೆ ತೃಪ್ತಿಯಾಗಲಿಲ್ಲ. ಅಗ್ನಿಗೆ ತುಪ್ಪ ಸುರಿದಂತೆ ಆಯಿತು. ಆಗ ಅವನು ದೀರ್ಘವಾದ ಆತ್ಮಾವಲೋಕನಕ್ಕೆ ತೊಡಗಿದನು. ತನ್ನ ತಪಸ್ಯೆಯೆಲ್ಲವೂ  ಈ ಸುಖಗಳಿಗಾಗಿ ವ್ಯಯವಾದುದನ್ನು ಅರಿತು ಅತೀವ ವೇದನೆಪಟ್ಟನು. ಬ್ರಹ್ಮಾನಂದದ ಸುಖಕ್ಕಾಗಿ ಆಚರಿಸಿದ ತಪಸ್ಸೆಲ್ಲವನ್ನೂ ಕ್ಷುದ್ರವಾದ ಸಾಂಸಾರಿಕ ಸುಖಕ್ಕಾಗಿ ವ್ಯಯಿಸಿದ್ದು ಅವನಲ್ಲಿ ತೀವ್ರ ಪಶ್ಚಾತ್ತಾಪವನ್ನುತಂದಿತು. "ಮಹಾಧ್ಯೆಯದ ಸಾಧನೆಗಾಗಿ ಅವಾಂತರಧ್ಯೇಯಗಳನ್ನು ಇಟ್ಟುಕೊಳ್ಳಬೇಕಾಗುವುದು. ಆದರೆ ಅವಾಂತರಧ್ಯೇಯಗಳ ಗೊಂದಲದಲ್ಲಿ ಮಹಾಧ್ಯೇಯವನ್ನು ಮರೆತುಬಿಡಬಾರದು" ಎಂಬ ಶ್ರೀರಂಗಮಹಾಗುರುಗಳ ಮಾತು ಈ ಸಂದರ್ಭದಲ್ಲಿ ಸ್ಮರಣೀಯ.

ಸೌಭರಿಯ ವಿಷಯದಲ್ಲಿ ಸ್ವಲ್ಪಕಾಲ ಹೀಗಾಯಿತು. ಆದರೆ ಒಡನೆಯೇ ತನ್ನ ಅರಮನೆಯನ್ನು ಬಿಟ್ಟು ತಪಸ್ಸನ್ನು ಆಚರಿಸಲು ಕಾಡಿಗೆ ಹೋದನು. ಘೋರವಾದ ತಪಸ್ಸಿನಿಂದ ಶರೀರವನ್ನು ಶೋಷಿಸಿ ಪರಮಾತ್ಮನಲ್ಲಿ ಮನಸ್ಸನ್ನು ಲೀನಗೊಳಿಸಿ ಮುಕ್ತನಾದನು. ಅವನ ಆಧ್ಯಾತ್ಮಿಕ ಗತಿಯನ್ನು ನೋಡಿದ ಅವನ ಪತ್ನಿಯರೂ ಅವನ ಪ್ರಭಾವದಿಂದ ಜ್ವಾಲೆಗಳೆಲ್ಲವೂ ಮಹಾಗ್ನಿಯಲ್ಲಿ ಲೀನವಾಗುವಂತೆ ಮಹರ್ಷಿಯಲ್ಲೇ ಲೀನವಾಗಿ ಮುಕ್ತರಾದರು.


ಈ ಕಥೆ ನಮಗೆ ಅನೇಕ ಪಾಠಗಳನ್ನು ಕಲಿಸುತ್ತಿದೆ. ಮಾಂಧಾತ ಮಹಾರಾಜ. ತಾನು ಸಾರ್ವಭೌಮನೆಂಬ ಅಹಂಕಾರದಿಂದ ಮುನಿಯು ಕನ್ಯಾರ್ಥಿಯಾಗಿ ಕೇಳಿದಾಗ ಸಾಮಾನ್ಯರಂತೆ ನಡೆದುಕೊಂಡನು. ಅವನೊಬ್ಬ ರಾಜರ್ಷಿ ಆಗಿದ್ದರೂ ಸಂತಾನದ ವ್ಯಾಮೋಹ ಅವನ ರಾಜಧರ್ಮವನ್ನು ಸ್ವಲ್ಪ ಬದಿಗೊತ್ತಿತ್ತು. ಕೇಳುತ್ತಿರುವವನು ಸಾಮಾನ್ಯನಲ್ಲ. ಭವಿಷ್ಯತ್ತಿನ ಸತ್ಸಂತಾನಕ್ಕೋ, ಅಥವಾ ಯಾವುದೋ ಸೃಷ್ಟಿ ಸಂಕಲ್ಪದ ಕಾರಣಕ್ಕಾಗಿ ಕೇಳುತ್ತಿದ್ದಾನೆ ಎಂದು ಗೌರವಪೂರ್ವಕವಾಗಿ ಅದನ್ನು ನಡೆಸಿಕೊಡಬೇಕಾಗಿತ್ತು. ಹಾಗೆ ಮಾಡದ ಕಾರಣ ಎಲ್ಲಾ ಕನ್ಯೆಯರನ್ನೂ ಅವನೊಡನೆ ಕಳಿಸಬೇಕಾಯಿತು. ಕಡೆಯಲ್ಲಿ ತನ್ನ ಅಹಂಕಾರದ ನಡೆಗೆ ಪಶ್ಚಾತ್ತಾಪ ಪಡಬೇಕಾಯಿತು. ಸೌಭರಿಯ ತಪಸ್ಸು ಎಷ್ಟು ಬಲಶಾಲಿ ಎಂಬುದೂ ವೇದ್ಯವಾಗುತ್ತದೆ. ಕಡೆಯಲ್ಲಿ ಜೀವನದ ಸಂತೃಪ್ತಿ ಕೇವಲ ವಿಷಯಸುಖಗಳಲ್ಲಿ ಇಲ್ಲ ಅದು ಪೂರ್ಣವಾದ ಬ್ರಹ್ಮ ಸಾಯುಜ್ಯದಲ್ಲೇ ದೊರಕುವುದು ಎಂಬ ಅವನ ನಿಶ್ಚಯ ಈ ದೇಶದ ಎಲ್ಲಾ ಮಹರ್ಷಿಗಳ , ಜ್ಞಾನಿಶ್ರೇಷ್ಠರ ನಿಷ್ಕರ್ಷೆ. ಒಡನೆಯೇ ತನ್ನ ಮನಸ್ಸನ್ನು ಆ ಎಡೆಗೆ ತಿರುಗಿಸಿ ಕೃತಾರ್ಥನಾದ ಅವನ ಧೃತಿ, ಜೀವನ ಪಾಠ ನಮಗೆಲ್ಲರಿಗೂ ಪರಮಾದರ್ಶ.  "ಜೀವನದ ಎಲ್ಲಾ ಬಗೆಯ ವಿಧಾನಗಳೂ ವಿಶ್ವವನ್ನು ನಡೆಸುವವನ ಹತ್ತಿರಕ್ಕೆ ಹೋಗಿ ಸೇರುವಂತೆ ಋಷಿಗಳು ಜೀವನವನ್ನು ಅಣಿಮಾಡಿಕೊಂಡರು " ಎಂಬ ಶ್ರೀರಂಗಮಹಾಗುರುಗಳ ಮಾತು ಅವಿಸ್ಮರಣೀಯ.


ಸೂಚನೆ : 03/1/2026 ರಂದು ಈ ಲೇಖನವು  ವಿಜಯವಾಣಿಯ ಸುದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.