ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೪೭ - ಎಲ್ಲಿ ನಿಲ್ಲಬೇಕು ?
ಉ. ದೃಷ್ಟ ಮತ್ತು ಅದೃಷ್ಟದ ಲಾಭವನ್ನು ಕೊಡುವ ನ್ಯಾಯವಾದ ಮಾರ್ಗದಲ್ಲಿ.
ಈ ಜೀವನದಲ್ಲಿ ಅಂದರೆ ಈ ಜನ್ಮದಲ್ಲಿ ನಾವು ಅತ್ಯಂತ ಪ್ರಧಾನವಾಗಿ ಐಹಿಕ ಲಾಭ ಮತ್ತು ಪಾರಮಾರ್ಥಿಕ ಲಾಭ ಎಂಬ ಎರಡು ವಿಧವಾದ ಲಾಭವನ್ನು ಪಡೆಯುತ್ತೇವೆ. ಇದನ್ನೇ ದೃಷ್ಟಲಾಭ ಮತ್ತು ಅದೃಷ್ಟಲಾಭ ಎಂಬುದಾಗಿ ಕರೆಯುತ್ತೇವೆ. ಯಾವ ಕಾರ್ಯದಿಂದ ಸದ್ಯದಲ್ಲೇ ಅದರ ಫಲವನ್ನು ಅನುಭವಿಸುವಂಥಾಗುತ್ತದೆಯೋ, ಅದನ್ನು 'ದೃಷ್ಟಲಾಭ' ಎಂದು ಕರೆಯಬಹುದು. ಮತ್ತು ಯಾವ ಕಾರ್ಯವನ್ನು ಮಾಡಿದರೆ ಅದು ಯಾವುದೋ ಕಾಲದಲ್ಲಿ ಅಂದರೆ ಜನ್ಮ ಜನ್ಮಾಂತರದಲ್ಲಿ ಆ ಲಾಭವನ್ನು ಕೊಡುವಂತಾದರೆ ಅದಕ್ಕೆ 'ಅದೃಷ್ಟಲಾಭ' ಎಂದು ಕರೆಯುತ್ತಾರೆ. ಹೀಗೆ ಎರಡು ವಿಧವಾದ ಲಾಭವನ್ನು ಪಡೆಯಬೇಕಾದರೆ ನಾವು ಸಾಗುವ ಮಾರ್ಗ ಹೇಗಿರಬೇಕು? ಅದು ಯಾವುದಾಗಿರಬೇಕು? ಎಂಬುದನ್ನು ಇಲ್ಲಿ ಪ್ರಶ್ನಿಸಲಾಗಿದೆ. ಯಾವ ಮಾರ್ಗದಲ್ಲಿ ಇದ್ದರೆ ಈ ದೃಷ್ಟ ಮತ್ತು ಅದೃಷ್ಟ ಎಂಬ ಲಾಭವು ಉಂಟಾಗುತ್ತದೆ ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ ಉತ್ತರವಾಗಿ ನ್ಯಾಯವಾದ ಮಾರ್ಗದಲ್ಲಿ ನಡೆದರೆ ಅದರಿಂದ ಸಿಗುವ ಯಾವ ಲಾಭ ಉಂಟೋ ಅದು ದೃಷ್ಟವೂ ಆಗಿರಬಹುದು, ಅಥವಾ ಅದೃಷ್ಟವು ಆಗಿರಬಹುದು. ಅವೆರಡು ನಮ್ಮ ಜೀವನವನ್ನು ಉತ್ತುಂಗದತ್ತ ಸಾಗಿಸುವ ಮಾರ್ಗಗಳಾಗಿವೆ ಎಂಬುದನ್ನು ನಾವು ಇಲ್ಲಿ ಅರಿಯಬೇಕಾಗಿದೆ. ಹಾಗಾದರೆ ಈ ವಿಷಯವನ್ನು ಇನ್ನೂ ಸ್ವಲ್ಪ ವಿಸ್ತಾರವಾಗಿ ಚಿಂತಿಸಬೇಕಾಗಿದೆ. ಯಾವ ಮಾರ್ಗವು ಎರಡನ್ನು ಕೊಡುವಂತಹದ್ದು? ಎಂಬುದು ಇಲ್ಲಿ ಚರ್ಚಿಸಬೇಕಾದ ವಿಷಯ.
ಧರ್ಮಮಾರ್ಗ ಅಥವಾ ನ್ಯಾಯಮಾರ್ಗವು ನಮಗೆ ಈ ಫಲವನ್ನು ಕೊಡುತ್ತದೆ ಎಂಬುದಾಗಿ ಅರ್ಥ. ಯಾವುದು ಧರ್ಮ? ಯಾವುದು ನ್ಯಾಯ? ಎಂಬುದನ್ನು ತಿಳಿಯುವುದು ಅಷ್ಟು ಸುಲಭವಲ್ಲ. ನಮಗೆ ಉದ್ಱಿಷ್ಟವಾದ ಗುರಿಯನ್ನು ತಲುಪಲು ಮಾರ್ಗ ಬೇಕೇ ಬೇಕು. ಗುರಿ ಮತ್ತು ಅದಕ್ಕೆ ತಲುಪುವ ದಾರಿ ಯಾವುದು? ಎಂಬ ಎರಡು ಸಂಗತಿಗಳು ನಮಗೆ ತಿಳಿದರೆ ಆಗ ನಮ್ಮ ಪಯಣವು ಅನಾಯಾಸವಾಗುತ್ತದೆ. ಹಾಗಾಗಿ ಗುರಿ ಮತ್ತು ಮಾರ್ಗ ಇವೆರಡರ ಅರಿವು ಅತ್ಯಂತ ಮುಖ್ಯ. ಈ ಜೀವನಕ್ಕೆ ಇರುವ ಗುರಿ ಯಾವುದು? ನಮ್ಮ ವೇದ, ಶಾಸ್ತ್ರಗಳೆಲ್ಲವೂ ಸಾರುವಂಥಹದ್ದು ಮೋಕ್ಷವೇ ಪರಮಪುರುಷಾರ್ಥ ಎಂಬುದಾಗಿ. ಇದನ್ನು ಸಾಧಿಸಲು ಧರ್ಮದ ಚೌಕಟ್ಟಿನಲ್ಲಿ ಅರ್ಥ ಕಾಮಗಳನ್ನು ಅನುಭವಿಸಿದರೆ ಮೋಕ್ಷವನ್ನು ಪಡೆಯಲು ಸಾಧ್ಯ ಎಂಬುದು ತಾತ್ಪರ್ಯ. ಇದೇ ವಿಷಯವನ್ನು ಶ್ರೀರಂಗ ಮಹಾಗುರುಗಳು ಹೀಗೆ ಹೇಳುತ್ತಿದ್ದರು - ಅರ್ಥಕಾಮಗಳೆಂಬ ತುಂಟ ಹಸುವನ್ನು ಧರ್ಮ ಎಂಬ ಕಂಬಕ್ಕೆ ಕಟ್ಟಿ, ಮೋಕ್ಷ ಎಂಬ ಅಮೃತವನ್ನು ಪಡೆಯಬೇಕು ಎಂಬುದಾಗಿ. ಅದೇ ವಿಷಯವನ್ನು ಈ ಬಗೆಯಲ್ಲಿ ಈ ಪ್ರಶ್ನೋತ್ತರದಲ್ಲಿ ಚಿಂತಿಸಲಾಗಿದೆ. ಕರ್ತವ್ಯರೂಪವಾದ ಕರ್ಮವು, ಮತ್ತೊಬ್ಬರಿಗೆ ಹಿಂಸೆಯಾಗದ ರೀತಿಯ ಕರ್ಮವು ಮೋಕ್ಷ ಮಾರ್ಗಕ್ಕೆ ಉಪಕಾರವಾದ ಕರ್ಮವೇ ಧರ್ಮಮಾರ್ಗ ಎಂಬುದಾಗಿ ಇಲ್ಲಿ ಕರೆಯಲ್ಪಟ್ಟಿದೆ. ಯಾವುದು ಯೋಗವನ್ನು ಸಿದ್ಧಿಸುತ್ತದೆಯೋ ಅದನ್ನೇ 'ಕರ್ಮಯೋಗ' ಎಂಬುದಾಗಿ ಕರೆದಿದ್ದಾರೆ. ಅಂತಹ ಕರ್ಮಯೋಗದಿಂದ ಜೀವನವನ್ನು ಸಾಗಿಸಿ ಕೊನೆಗೆ ಜ್ಞಾನದಿಂದ ಕೈವಲ್ಯವನ್ನು ಪಡೆಯುವಂತಹದ್ದು. ಹೀಗೆ ಕೈವಲ್ಯವನ್ನು ಪಡೆಯುವಾಗ ಮಧ್ಯೆ ಅನೇಕ ಲಾಭವನ್ನು ಪಡೆಯುತ್ತೇವೆ. ಇದಕ್ಕೆ ಪೂರಕವಾದ ಅನೇಕ ಲಾಭಗಳು ಏನಿವೆಯೋ ಅವುಗಳನ್ನು ದೃಷ್ಟಲಾಭ ಮತ್ತು ಅದೃಷ್ಟಲಾಭ ಎಂಬುದಾಗಿ ವಿಭಾಗಿಸಿ, ಇವೆರಡನ್ನು ಧರ್ಮಮಾರ್ಗದಲ್ಲೇ ಪಡೆದರೆ ಇವೆರಡೂ ಮೋಕ್ಷಕ್ಕೆ ಮೆಟ್ಟಿಲಾಗಿ ಪರಿಣಮಿಸುತ್ತವೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 4/1/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.