ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಕನವರಿಸುತ್ತಾ ಕೃಷ್ಣನಾಡಿದ ನುಡಿಯು ಆತನ ಅಂತರಂಗದೊಳಗಿನ ಯಾವುದೋ ವೇದನೆಯನ್ನು ಹೇಳಿಕೊಳ್ಳುವಂತಹುದು. ಸಾಮಾನ್ಯವಾಗಿ ವೇದನೆಯೆಂದರೆ, ನಾವು ಈಗ ಅನುಭವಿಸುತ್ತಿರುವುದೋ, ಸ್ವಲ್ಪ ಹಿಂದಿನ ಕಾಲದ್ದೋ ಆಗಿರಬೇಕೆಂಬ ಲೆಕ್ಕವಿರುವುದಲ್ಲವೇ? ನಮ್ಮೊಳಗೆ ಹುದುಗಿರುವ ಸಂಸ್ಕಾರಗಳು ಮೇಲೆದ್ದಾಗ ನಾವು ಮಂಪರಿನಲ್ಲಿಯೂ ಮಾತನಾಡಿಯೇವು.
ನಮ್ಮ ಹಳೆಯ ಸಂಸ್ಕಾರಗಳೋ, ಈಗಿನ ತೀವ್ರ ಅನುಭವದ ಅಚ್ಚೋ, ಮೇಲೆ ಬಂದಾಗ ಅದನ್ನು ಅಭಿವ್ಯಂಜಿಸುವ, ಎಂದರೆ ವ್ಯಕ್ತಪಡಿಸುವ, ಮಾತುಗಳು ಹೊರಬರುವುವು. ಯಾವ ಸಂನಿವೇಶದಲ್ಲಿ ಹಾಗಾಗುವುದು? ಅದಕ್ಕೊಂದು ಉದಾಹರಣೆ ಬೇಕಲ್ಲವೆ? ಕಾಳಿದಾಸನೇ ತನ್ನ ಮೇಘದೂತದಲ್ಲಿ ಅಂತಹ ಒಂದು ಸಂನಿವೇಶವನ್ನು ಚಿತ್ರಿಸಿದ್ದಾನೆ. ವಿರಹಿಯಾದ ಯಕ್ಷನಿಗೆ ಮೋಡವನ್ನು ಕಂಡೊಡನೆಯೇ ತನ್ನ ಭಾವವು ಹೊಮ್ಮಿತಂತೆ.
ಮೋಡವನ್ನೇನು, ನಾವು ಮಳೆಗಾಲದಲ್ಲಿ ಬೇಕಾದಷ್ಟೇ ನೋಡುತ್ತೇವಲ್ಲವೆ? ಅದರಿಂದೇನು? -ಎನ್ನಬಹುದು. ಇಂದಿನ ಓಟದ ಜೀವನದಲ್ಲಿ ಏನನ್ನು ಆಸ್ವಾದಿಸುವುದಕ್ಕೂ ಬಿಡುವಿಲ್ಲವಾಗಿದೆ. ಪ್ರಕೃತಿಯ ಆರಾಧಕನಾದ ಕಾಳಿದಾಸನ ಮಾತನ್ನೊಮ್ಮೆ ಆಲಿಸಿದರೆ ಜೀವನದ ಬೇರೆ ಮುಖಗಳ ಅರಿವೂ ನಮಗೆ ಉಂಟಾಗಬಹುದು.
ಆಷಾಢಮಾಸದ ಆರಂಭದ ಸಮಯಕ್ಕೆ ಪರ್ವತದ ಶಿಖರವನ್ನು "ಆಲಿಂಗಿಸಿಕೊಂಡಿರುವ" ಮೋಡವನ್ನು ಕಂಡನಂತೆ, ಮೇಘದೂತ ಕಾವ್ಯದ ಯಕ್ಷ. ಮೋಡವೆಂಬುದು ಕೌತುಕವನ್ನುಂಟುಮಾಡುವುದು - ಎನ್ನುತ್ತಾನೆ, ಕಾಳಿದಾಸ. ಇಲ್ಲಿ ಕೌತುಕವೆಂದರೆ ಅಭಿಲಾಷೆ. ಆಪ್ತರೊಂದಿಗಿರುವ ಬಯಕೆ. ಆಪ್ತರೆಂದರೆ ಇಲ್ಲಿ - ತನ್ನ ಪ್ರಿಯ ಅಥವಾ ಪ್ರಿಯೆ - ಅವರ ಜೊತೆಗೆ ಇರಬೇಕೆಂಬ ಹಂಬಲಿಕೆ.
ಮೇಘಾಲೋಕ ಅಥವಾ ಮೋಡದ ದರ್ಶನವೆಂಬುದರ ವಿಶೇಷವೇನು? - ಎಂಬುದನ್ನು ನಾವು ಗುರುತಿಸಿಕೊಳ್ಳಬೇಕು. ಇನ್ನೇನು ಮಳೆಗಾಲ ಬರುವುದೆಂಬುದರ ಸೂಚನೆಯದಲ್ಲವೆ? "ಅದರ ಪರಿಣಾಮವು ಇಡೀ ಭಾರತದ ಮೇಲೆ ವಿಶಿಷ್ಟವಾಗಿ ಆಗುವುದು" - ಎಂಬುದನ್ನು ಪಾಶ್ಚಾತ್ತ್ಯನೊಬ್ಬನು ಗುರುತಿಸಿದ್ದಾನೆ.
ಧಗೆಯ ಕಾಲವು ಮುಗಿಯುತ್ತಲೇ ಬರುವ ಮಳೆಗಾಲದ ಆರಂಭದ ಸಂನಿವೇಶವೆಂದರೆ ಭಾರತದೇಶದಲ್ಲಿರುವವರಿಗೆಲ್ಲಾ ಸಂತೋಷದ ಸಮಯವದು. ಬಿಸಿಯ ಕಾಲ ಕಳೆದು ತಂಪಿನ ಸಮಯದ ಆಗಮನವನ್ನು ಇಡೀ ಭಾರತವೇ ಸ್ವಾಗತಿಸುತ್ತದೆ. ಯೂರೋಪಿನವರಿಗೆ ವಸಂತ ಋತುವಿನ ಬಗ್ಗೆ ಯಾವ ಭಾವನಗಳಿರುವುದೋ ಮಳೆಗಾಲದ ಬಗ್ಗೆ ಭಾರತೀಯರಿಗೆ ಹಾಗಿರುವುದು - ಎಂಬುದಾಗಿ ಹೇಳುತ್ತಾನೆ, ಮೇಘದೂತವನ್ನು ಅನುವಾದಿಸಿರುವ ವಿಲ್ಸನ್. ಎಂದೇ, ಅದು ಕವಿಗಳಿಗೂ ಪ್ರೇಮಿಗಳಿಗೂ ಸಂತಸದ ಸಮಯ - ಎಂದು ಆತ ಗುರುತಿಸುತ್ತಾನೆ. ಪ್ರಕೃತಿಯಲ್ಲಿ ಏನೋ ಹೊಸತನವು ತೋರಿಕೊಳ್ಳುವ ಸಮಯವದು.
ಪಾಶ್ಚಾತ್ತ್ಯರಿಗೆ ಹಾಗಲ್ಲ. ಅವರು ಮಳೆಗಾಲವೆಂದರೆ ಕರುಬುವರೇ ಸರಿ! ಎಂದೇ, "Save for a rainy day!" ಎನ್ನುತ್ತಾರೆ. (ಎಂದರೆ ಕಷ್ಟಕಾಲಕ್ಕಾಗಿ ದುಡ್ಡುಳಿಸಿಕೊಂಡಿರು ಎಂದರ್ಥ). ಅಲ್ಲಿಗೆ ಮಳೆಗಾಲವೆಂದರೆ ಅವರಿಗೆ ಕಷ್ಟಕಾಲ! ಎಂದೇ, "Rain, rain, go away" - ಮಳೆಯೇ, ಮಳೆಯೇ, ನೀ ತೊಲಗಿಹೋಗು! - ಎಂಬುದು ಅಲ್ಲಿಯ ಮಕ್ಕಳು ಆಟವಾಡುತ್ತಾ ಹಾಡುವ ಪದ್ಯ! ಆಟಕ್ಕೆ ಬಾಧಕ ಮಳೆ - ಎಂಬಷ್ಟೇ ಅಲ್ಲ, ಅದರ ಹಿಂದಿರುವ ಚಿಂತನ!
ನಮಗೆ ಹಾಗಲ್ಲ. ನಾವಂತೂ "ಹುಯ್ಯೋ ಹುಯ್ಯೋ ಮಳೆರಾಯ!" ಎಂದು ಹಾರ್ದವಾಗಿ ಸ್ವಾಗತಿಸುವೆವು. ನಮಗೆ ವರ್ಷರ್ತು ಅಥವಾ ಮಳೆಗಾಲವು ಅತ್ಯಂತ ಖುಷಿಕೊಡುವ ಕಾಲ. ಎಂದೇ ನಮ್ಮ ಕಾಲಗಣನೆಯ ಲೆಕ್ಕ "ಇಷ್ಟು ವರ್ಷಗಳು" (ಎಂದರೆ ಇಷ್ಟು ಮಳೆಗಾಲಗಳು) - ಎಂಬುದಾಗಿಯೇ! ಕಾಳಿದಾಸನಂತೂ ಘನಾಗಮವನ್ನು ಎಂದರೆ ಆಕಾಶದಲ್ಲಿ ಮೋಡವು ಕಾಣಿಸಿಕೊಳ್ಳುವುದನ್ನು "ಕಾಮಿಜನಪ್ರಿಯ"ವಾದ ಕಾಲವೆಂದು ತನ್ನ ಋತುಸಂಹಾರವೆಂಬ ಕೃತಿಯಲ್ಲಿ ಹೇಳುತ್ತಾನೆ.
ಸುಖವಾಗಿರುವವರಿಗೂ ಎಂದರೆ ಒಟ್ಟಿಗಿರುವ ಪ್ರೇಮಿಗಳಿಗೂ ಮೇಘದರ್ಶನವು ಮನಸ್ಸಿನಲ್ಲಿ ಏನೋ ಬದಲಾವಣೆಯನ್ನು ತಂದುಬಿಡುತ್ತದೆ, ಇನ್ನು ವಿರಹಿಗಳ ಮಾತೇನು? - ಎನ್ನುತ್ತಾನೆ ಕಾಳಿದಾಸ, ತನ್ನ ಮೇಘದೂತದ ಮೂರನೆಯ ಶ್ಲೋಕದಲ್ಲಿ. ಆಗಲ್ಲವೆ ನವಿಲುಗಳು ನಲಿವ ಕಾಲ? ಅವುಗಳ ಕೇಕೆಗಳೂ ನರ್ತನಗಳೂ ಆಗಲೇ ತೋರತಕ್ಕವು (ಕೇಕೆಹಾಕುವುದು - ಎಂಬ ಪದವನ್ನು ಕನ್ನಡದಲ್ಲಿ ಬಳಸುವ ಪರಿ ಬೇರೆ. ನವಿಲು ಧ್ವನಿಗೈಯುವುದಕ್ಕೆ "ಕೇಕಾ" ಎಂಬ ಹೆಸರು ಸಂಸ್ಕೃತದಲ್ಲಿದೆ).
ಹೀಗಾಗಿ ಮೇಘವೆಂಬುದು ಉದ್ದೀಪನವಿಭಾವ - ಎಂಬುದಾಗಿ ಕರೆಸಿಕೊಳ್ಳುತ್ತದೆ. ಏನು ಹಾಗೆಂದರೆ? ವಿರಹದ ನೋವನ್ನು ಯಾವುದು ವೃದ್ಧಿ ಮಾಡುವುದೋ ಅದು. ನೋವೆಂಬ ಕಿಚ್ಚನ್ನು ಹೆಚ್ಚುಮಾಡುವುದೇ ಉದ್ದೀಪನ.
ಇಷ್ಟೆಲ್ಲ ಮಾತನ್ನು ಮೋಡದ ಬಗ್ಗೆ ಹೇಳಲು ಕಾರಣ, ನಾವು ನಮ್ಮ ಪ್ರಕೃತಿ ನಮ್ಮ ಪರಿಸರಗಳನ್ನು ಇಂದು ಕಾಣುತ್ತಿರುವ ಪರಿಯೇ ಬರೀ ಪಾಶ್ಚಾತ್ತ್ಯರ ಅನುಭವವನ್ನು ಅನುಸರಿಸುವುದಾಗಿದೆಯೆಂಬುದನ್ನು ಜ್ಞಾಪಿಸಲು. ಅಂತೂ ವಿರಹಿಗಳ ನೋವನ್ನು ಉಲ್ಬಣಗೊಳಿಸುವ ಕಾಲವೇ ಮೇಘಗಳ ವಿಲಾಸ-ಆರ್ಭಟೆಗಳಿರುವ ಆಷಾಢ-ಶ್ರಾವಣಗಳದ್ದು.
ಕೃಷ್ಣನ ಕನವರಿಕೆಯ ಮಾತು ರಾಮಾವತಾರದ ಸಂದರ್ಭದ್ದು, ಲಕ್ಷ್ಮಣನನ್ನು ಕುರಿತದ್ದಾಗಿರುವುದು: "ಓ ಲಕ್ಷ್ಮಣಾ, ಜಾನಕಿಯಿಂದ ನಾನು ವಿರಹಿತನಾಗಿದ್ದೇನೆ. ಎಂದೇ ನೋಡು, ಈ ಮೋಡಗಳು ನನಗೆ ಖೇದವುಂಟುಮಾಡುತ್ತಿವೆ! ಅಷ್ಟೇ ಅಲ್ಲ, ಈ ಕದಂಬಾನಿಲಗಳು (ಎಂದರೆ ಈಚಲು ಮರದಿಂದ ಬೀಸುವ ಗಾಳಿಗಳು) ನನ್ನ ಮರ್ಮಸ್ಥಾನಗಳನ್ನು ಚುಚ್ಚುತ್ತಿವೆ!" - ಎಂದೆಲ್ಲಾ ಹೇಳಿಕೊಳ್ಳುತ್ತಿದ್ದಾನೆ.
ಇದೆಲ್ಲಾ ಕನವರಿಕೆಯ ಮಾತುಗಳು. ಇದರಲ್ಲಿ ವಿಶೇಷವೇನು ಬಂತು? ಹೋದ ಜನ್ಮದ ಗಾಢವಿರಹವೇದನೆಯ ಮಾತುಗಳು ಇವು ಅಷ್ಟೇ - ಎಂದುಕೊಳ್ಳಬೇಡಿ. ಆಗ ಮುಂದಾದದ್ದು ಏನೆಂಬುದನ್ನು ನೋಡಿ.
ಕೃಷ್ಣನ ಈ ಕನವರಿಕೆಯ ಹೊತ್ತಿಗೆ ಅಲ್ಲಿಗೆ ಬಂದವಳು ರಾಧೆ! ಜನ್ಮಾಂತರ ಮಾತಿದೆಂದು ಅವಳಿಗೆ ಹೊಳೆಯುವುದಾದರೂ ಹೇಗೆ? ಅವಳಿಗೆ ಈರ್ಷ್ಯೆಯಾಯಿತಂತೆ! ಕೃಷ್ಣನಿಗೇನು ಒಬ್ಬಿಬ್ಬರೇ ಪ್ರೇಯಸಿಯರು? ಯಾರೋ "ಜಾನಕಿ"ಯಂತೆ ! ಇವಳಾರಪ್ಪಾ ಹೊಸಬಳು? - ಎಂದು ಅಸೂಯೆ-ಗಾಬರಿಗಳಿಂದ ನಿದ್ರಾಸ್ಥಿತಿಯಲ್ಲಿದ್ದ ಕೃಷ್ಣನನ್ನು ದುರುಗುಟ್ಟಿಕೊಂಡು ನೋಡಿದಳಂತೆ!
ಕನಸನ್ನು ನಿಜವೆನ್ನೋಣವೇ ಸುಳ್ಳೆನ್ನೋಣವೇ? ಈ ಜನ್ಮದ್ದೆನ್ನೋಣವೇ ಪೂರ್ವಜನ್ಮ(ಗಳ)ದ್ದೆನ್ನೋಣವೇ? ಕೃಷ್ಣನ ಈ ಕನಸು ಅದೆಂತಹ ಕುತುಕ-ಆಶ್ಚರ್ಯಗಳ ಮೇಳನ!
ಅಂತೂ ಕನಸಿನಲ್ಲಿ ಹೀಗೆಲ್ಲ ಮಾತನಾಡಿದ ಕೃಷ್ಣನು ನಮ್ಮನ್ನು ಪೊರೆಯಲಿ - ಎನ್ನುತ್ತಾನೆ, ಲೀಲಾಶುಕ. ಈಗ ಈ ಪದ್ಯವನ್ನು ಆಸ್ವಾದಿಸಿ:
"ಏತೇ ಲಕ್ಷ್ಮಣ! ಜಾನಕೀ-ವಿರಹಿತಂ ಮಾಂ ಖೇದಯಂತ್ಯಂಬುದಾಃ
ಮರ್ಮಾಣೀವ ಚ ಘಟ್ಟಯಂತ್ಯಲಮಮೀ ಕ್ರೂರಾಃ ಕದಂಬಾನಿಲಾಃ "|
ಇತ್ಥಂ ವ್ಯಾಹೃತ-ಪೂರ್ವಜನ್ಮ-ಚರಿತಂ ಯೋ ರಾಧಯಾ ವೀಕ್ಷಿತಃ
ಸೇರ್ಷ್ಯಂ ಶಂಕಿತಯಾ ಸ ನಃ ಸುಖಯತು ಸ್ವಪ್ನಾಯಮಾನೋ ಹರಿಃ! ||
ಕಾವ್ಯವು ಹೇಗಿರಬೇಕು, ಹೇಗಿರಬಾರದು? - ಎಂಬುದನ್ನೆಲ್ಲಾ ಚರ್ಚಿಸುವ ಶಾಸ್ತ್ರಕ್ಕೆ ಸಾಹಿತ್ಯಶಾಸ್ತ್ರ ಅಥವಾ ಅಲಂಕಾರಶಾಸ್ತ್ರ - ಎನ್ನುತ್ತಾರೆ. ಈ ಕ್ಷೇತ್ರದ ಅತಿಪ್ರಸಿದ್ಧವಾದ ಮೂರುನಾಲ್ಕು ಕೃತಿಗಳನ್ನು ಉಲ್ಲೇಖಿಸುವುದಾದರೆ ದಂಡಿಯ ಕಾವ್ಯಾದರ್ಶ, ಆನಂದವರ್ಧನನ ಧ್ವನ್ಯಾಲೋಕ, ಮಮ್ಮಟನ ಕಾವ್ಯಪ್ರಕಾಶ ಹಾಗೂ ಧನಂಜಯನ ದಶರೂಪಕ. ಇವೆಲ್ಲಕ್ಕೂ ಮೂಲಪ್ರೇರಣೆಯೆಂದರೆ ಭರತನ ನಾಟ್ಯಶಾಸ್ತ್ರವೇ ಸರಿ!
ಈ ಕಾವ್ಯಶಾಸ್ತ್ರಗ್ರಂಥಗಳಲ್ಲಿ ರಸಾನುಭವವು ಹೇಗಾಗುವುದೆಂದು ಚಿತ್ರಿಸುವ ಸಂದರ್ಭದಲ್ಲಿ ಎರಡು ಪಾರಿಭಾಷಿಕಪದಗಳನ್ನು ಬಳಸುತ್ತಾರೆ. ಅವೆಂದರೆ ಉದ್ದೀಪನವಿಭಾವ ಹಾಗೂ ಆಲಂಬನವಿಭಾವ - ಎಂಬುದಾಗಿ. ರಾಧೆಯ ಪ್ರೇಮವಿರುವುದು ಕೃಷ್ಣನನ್ನು ಕುರಿತಾಗಿ. ಇದನ್ನೇ ಕೃಷ್ಣನನ್ನು ಆವಲಂಬಿಸಿರುವ ಪ್ರೇಮವೆನ್ನಬಹುದು. ಅವಲಂಬನವೆಂದರೂ ಆಲಂಬನವೆಂದರೂ ಒಂದೇ. ಎಂದೇ ರಾಧೆಗೆ ಕೃಷ್ಣನು ಆಲಂಬನವಿಭಾವ. ವಿಭಾವವೆಂದರೆ ರಸಕ್ಕೆ ಕಾರಣವಾದದ್ದು. ರಾಧೆಗೆ ಕೃಷ್ಣನು ಹೇಗೋ ಕೃಷ್ಣನಿಗೆ ರಾಧೆಯೂ ಹಾಗೆಯೇ. ಹೀಗಾಗಿ ಕೃಷ್ಣನಿಗೆ ರಾಧೆಯು ಆಲಂಬನವಿಭಾವ.
ಇಲ್ಲಿಯ ಈ ಶ್ಲೋಕದಲ್ಲಿ ಬಂದಿರುವುದು ಉದ್ದೀಪನವಿಭಾವ. ಹಾಗೆಂದರೇನು? – ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಅರಿಯೋಣ.
ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ16/3/2024 ರಂದು ಪ್ರಕವಾಗಿದೆ.