Sunday, March 31, 2024

ಸುಖಭೋಗಗಳು ನಿಜವಾಗಿ ಭೋಗ್ಯವಾಗುವುದು ಯಾವಾಗ? (Sukhabhogagalu Nijavagi Bhogyavaguvudu Yavaga?)


ಡಾ. ಹೆಚ್. ಆರ್. ಮೀರಾ

ಪ್ರತಿಕ್ರಿಯಿಸಿರಿ (lekhana@ayvm.in)


ಸುಖಾಪೇಕ್ಷೆಯು ಎಲ್ಲರಿಗೂ ಸಹಜ. ಅಕ್ಕಪಕ್ಕದವರೊಂದಿಗೆ ಹೋಲಿಕೆಗಳು ಬರುವುದೂ ಸಹಜ. ಆ ಹೋಲಿಕೆಗಳಿಂದಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು, ನಮ್ಮ ನಡೆ ಇವೆಲ್ಲ ಪ್ರಭಾವಿತವಾಗುವ ಸಾಧ್ಯತೆಗಳು ಹೆಚ್ಚು. ಎಷ್ಟೋ ಬಾರಿ ನಾವು ಆ ಹೋಲಿಕೆಯ ಚಕ್ರಕ್ಕೆ ಸಿಲುಕಿ ಅನಗತ್ಯವಾದ ಸ್ಪರ್ಧೆಗಳಲ್ಲಿ ಭಾಗಿಗಳಾಗಿಬಿಡುತ್ತೇವೆ. ಯಾವುದೋ ಸುಖಭೋಗಗಳ ಲಾಲಸೆಯಿಂದ ಅನವರತ ದುಡಿಯುತ್ತೇವೆ. ಅವುಗಳನ್ನು ಭೋಗಿಸುತ್ತಾ ನೋಡನೋಡುತ್ತಿದ್ದಂತೆಯೇ ವಾರಗಳೂ ವರ್ಷಗಳೂ ಉರುಳಿಹೋಗುತ್ತವೆ. ಎಷ್ಟೋ ವೇಳೆ ನಮಗೆ ಆ ಭೋಗಗಳು ಬೇಕೇ ಆಗಿತ್ತೆಂದೂ ಇರುವುದಿಲ್ಲ. ಬೇರೆಯವರು ಭೋಗಿಸುವುದನ್ನು ಕಂಡು ಅದರಿಂದ ಆಸೆ ಅಂಕುರಿತವಾಗಿ, ನಮಗೆ ನಿಜವಾಗಿಯೂ ಬೇಕೋ ಬೇಡವೋ ಎನ್ನುವುದನ್ನೂ ಲೆಕ್ಕಿಸದೆ, ಅದಕ್ಕಾಗಿ ಹಾತೊರೆಯುವುದಾಗಿರುತ್ತದೆ. ಕೊನೆಗೊಂದು ದಿನ ಇದ್ದಕ್ಕಿದ್ದಂತೆ "ನನ್ನ ಸಮಯವೆಲ್ಲ ಹೇಗೆ ಕಳೆಯಿತು? ನಾನು ಜೀವನದಲ್ಲಿ ಏನನ್ನು ಸಾಧಿಸಿದೆ?" ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ. ಅದಕ್ಕೆ ತಕ್ಕ ಉತ್ತರ ಸಿಕ್ಕದಿದ್ದಾಗ ಏನೋ ಒಂದು ಬಾಧೆ ಪ್ರಾರಂಭವಾಗುತ್ತದೆ. ನಾವು ಆ ಸುಖಗಳನ್ನು ಅನುಭವಿಸಿದೆವೋ, ಅವೇ ನಮ್ಮನ್ನು ಸೇವಿಸಿಬಿಟ್ಟವೋ ಎಂಬ ಸಂಶಯವೂ ತಕ್ಕುದೇ.


ಭರ್ತೃಹರಿಯು ತನ್ನ ವೈರಾಗ್ಯಶತಕದಲ್ಲಿ ಇದನ್ನು ಬಹಳ ಚೆನ್ನಾಗಿ ವರ್ಣಿಸುತ್ತಾನೆ. ಅವನು ಹೇಳುವುದು:


ಕಾಲೋ ನ ಯಾತೋ, ವಯಮೇವ ಯಾತಾಃ

  ತಪೋ ನ ತಪ್ತಂ, ವಯಮೇವ ತಪ್ತಾಃ |

ಭೋಗಾ ನ ಭುಕ್ತಾ, ವಯಮೇವ ಭುಕ್ತಾಃ

  ತೃಷ್ಣಾ ನ ಜೀರ್ಣಾ, ವಯಮೇವ ಜೀರ್ಣಾಃ ||


ಕಾಲವು ಕಳೆದುಹೋಗಲಿಲ್ಲ; ಕಳೆದುಹೋದದ್ದು ನಾವೇ. ತಪಸ್ಸು ಆಚರಿಸಲಾಯಿತೆಂದಲ್ಲ; ನಾವೇ ಬೆಂದುಹೋದೆವು (ತಪ್ತವೆಂದರೆ ಬೆಂದಿರುವುದು, ಸುಟ್ಟದ್ದು ಎಂದೂ ಅರ್ಥ; ತಪಸ್ ಕೂಡ ಬಂದಿರುವುದು ಅದೇ ಮೂಲದಿಂದಲೇ, ತಾಪವೆಂದೇ ಅದಕ್ಕೂ ಅರ್ಥ). ಭೋಗವು ಭೋಗಿಸಲ್ಪಡಲಿಲ್ಲ; ಭೋಗಿಸಲ್ಪಟ್ಟವರು (ಎಂದರೆ ತಿನ್ನಲ್ಪಟ್ಟವರು) ನಾವೇ.

ಆಸೆ ಬತ್ತಲಿಲ್ಲ; ಬತ್ತಿಹೋದದ್ದು ನಾವೇ.


ಹಾಗಾದರೆ, ಜೀವನದಲ್ಲಿ ಭೋಗವೆಂಬುದೇ ಇರಬಾರದೇ? - ಎಂದರೆ, ಖಂಡಿತ ಇರಬೇಕಾದದ್ದೇ. ಆದರೆ ಅದರ ಉದ್ದೇಶ ಹಾಗೂ ಅದು ಎಲ್ಲಿ ಪರ್ಯವಸಾನ(ಎಂದರೆ ಕೊನೆ)ಹೊಂದುತ್ತದೆ ಎನ್ನುವುದು ಮುಖ್ಯ. ಉದಾಹರಣೆಗೆ, ಆಹಾರವೆಂಬುದು ಜೀವನದ ಒಂದು ಅಗತ್ಯ. ಬರಿಯ ಅಗತ್ಯವಾಗಿ ಅದನ್ನು ನಾವು ಕಂಡಿದ್ದೆವಾದರೆ ಆಹಾರದಲ್ಲಿ ಇಷ್ಟು ವೈವಿಧ್ಯ, ರುಚಿಗಳು ನಮಗೆ ಬೇಕಿರಲಿಲ್ಲ. ಬೇರೆ ಜೀವಜಂತುಗಳ ಹಾಗೆ ನಮ್ಮ ದೇಹಕ್ಕೆ ಪುಷ್ಟಿ ಕೊಡುವಂಥದ್ದನ್ನು ಹಾಗೇ ತಿನ್ನುತ್ತಿದ್ದೆವು, ಅದರ ರುಚಿಯನ್ನು ಲೆಕ್ಕಿಸದೆ. ಆದರೆ, ಭಾರತೀಯಪಾಕಪದ್ಧತಿ ತೆಗೆದುಕೊಂಡರೆ ಭಕ್ಷ್ಯ-ಭೋಜ್ಯ-ಲೇಹ್ಯ-ಚೋಷ್ಯ-ಪಾನೀಯಗಳೆಂಬ ವರ್ಗಗಳಲ್ಲಿ ಷಡ್ರಸೋಪೇತವಾದ ಆಹಾರಗಳಿವೆ. ಆದ್ದರಿಂದ ಆಹಾರವು ಭೋಗವೂ ಕೂಡ.


ಬಹಳ ಹಸಿದಿದ್ದಾಗ ಗಬಗಬ ತಿಂದಾಗ, ಆಹಾರದಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ದಕ್ಕಬಹುದು (ಪೂರ್ಣ ದಕ್ಕದೆಯೂ ಇರಬಹುದು, ಆದರೆ ಅದರ ವಿಷಯ ಇಲ್ಲಿ ಬೇಡ) ಅದರ ಒಂದು ಆಯಾಮವಾದ ರುಚಿಯನ್ನು ನಾವು ಕಳೆದುಕೊಂಡಂತಾಗುತ್ತದೆ. ಒಂದೊಂದು ತುತ್ತನ್ನೂ ಸರಿಯಾಗಿ ಗಮನವಿಟ್ಟು ಆಸ್ವಾದಿಸಿಕೊಂಡು ತಿಂದಾಗ, ನಮಗೆ ಆಹಾರದ ಪೋಷಣೆಯೊಂದಿಗೆ ಮನಕ್ಕೂ ಒಂದು ತೋಷಣೆ ದೊರಕುವುದು. ಅದರಿಂದ ದೇಹೇಂದ್ರಿಯಗಳಿಗೂ ಒಂದು ತೃಪ್ತಿ ಒದಗಿಬರುವುದು. ಆದರೆ ನಾವು ಇಲ್ಲಿಗೇ ಇದನ್ನು ನಿಲ್ಲಿಸಿಬಿಟ್ಟಾಗ ಆಹಾರದಿಂದ ದೊರಕುವ ಭೋಗವು ಕೇವಲ ಐಂದ್ರಿಯಿಕ(ಎಂದರೆ ಇಂದ್ರಿಯಗಳಿಗೆ ಮಾತ್ರ ಸಂಬಂಧಪಟ್ಟದ್ದು)-ಭೋಗವಾಗಿಬಿಡುತ್ತದೆ. ಇದು ತಪ್ಪಲ್ಲದಿದ್ದರೂ ಇದಕ್ಕೂ ಮಿಗಿಲಾದ ಒಂದು ಆಯಾಮವಿದೆ.


ನಾವು ಸೇವಿಸುವ ಆಹಾರವನ್ನೆಲ್ಲ ಭಗವಂತನಿಗೆ ಮೊದಲು ಸಮರ್ಪಿಸಿ ನಂತರ ಪ್ರಸಾದವಾಗಿ ಅದನ್ನು ಸ್ವೀಕರಿಸುವುದು ನಮ್ಮಲ್ಲಿ ಬಂದಿರುವ ಪದ್ಧತಿ. ಅಂತಹ ಪ್ರಸಾದವು ನಾಲಗೆಗೆ ಮುದ ಕೊಟ್ಟಾಗ, "ಪರಮಾತ್ಮನಿಗೆ ಭೋಗ್ಯವಾಗಿತ್ತು" ಎಂದು ಹೇಳುತ್ತಿದ್ದುದು ಸಂಪ್ರದಾಯ. ಶ್ರೀರಂಗಮಹಾಗುರುಗಳ ಅವಿಸ್ಮರಣೀಯವಚನಗಳನ್ನು ನೆನೆಸಿಕೊಳ್ಳುವುದಾದರೆ:

"ಎಂತಹ ಒಳ್ಳೆಯ ಸುಖವನ್ನೇ ಅನುಭವಿಸಿದ್ದರೂ, ಅದರ ಜೊತೆಯಲ್ಲೆಲ್ಲಾ ಅವನ(ಭಗವಂತನ) ಜ್ಞಾಪಕವಿಟ್ಟುಕೊಂಡು ಎಲ್ಲವನ್ನೂ ಅವನಿಗೆ ಸೋಂಕಿಸಿಕೊಂಡು ಜೀವನವನ್ನು ಸಾಗಿಸುವುದು ಎಷ್ಟು ರಮಣೀಯವಾಗಿದೆ!...ಮಾಡುವ ಕೆಲಸವೆಲ್ಲವೂ ಅವನನ್ನು ಮರೆಯದೇ, ಅವನನ್ನು ಮೆರೆಯಿಸುವಂತೆ  ನಡೆದರೆ, ಎಲ್ಲವನ್ನೂ ಅವನ ಪಕ್ಕದಲ್ಲೇ ಸೇರಿಕೊಂಡಂತೆ ಇಟ್ಟರೆ ಭವ್ಯವಾಗುತ್ತದೆ".


ಆದ್ದರಿಂದ ಭಗವಂತನು ನಮ್ಮ ಅರ್ಹತೆ-ಆವಶ್ಯಕತೆಗಳಿಗೆ ತಕ್ಕಂತೆ ಕೊಟ್ಟಿರುವ ಭೋಗವನ್ನು ಅವನ ಪ್ರಸಾದವಾಗಿ ತಿಳಿದು, ಅವನನ್ನು ಮನಸ್ಸಿನಲ್ಲಿಟ್ಟುಕೊಂಡು ಭೋಗಿಸಿದರೆ, ಅದನ್ನು ಅವನಿಗೇ ಸಮರ್ಪಿಸಿದಂತೆ, ಆಹುತಿ ಮಾಡಿದಂತೆ. ಹೀಗೇ ಮಾಡಿದ್ದಲ್ಲಿ ಪುಷ್ಟಿ-ತುಷ್ಟಿಗಳೊಂದಿಗೆ ನಮಗೆ ಇಷ್ಟಿ(ಎಂದರೆ ಯಜ್ಞ)ಯೂ ಫಲಿಸಿದಂತಾಗುವುದು.


ಸೂಚನೆ: 31/03/2024 ರಂದು ಈ ಲೇಖನ ವಿಜಯವಾಣಿಯ ಸತ್ಸಂಗ ಲ್ಲಿ ಪ್ರಕಟವಾಗಿದೆ.