Monday, February 19, 2024

ಯಕ್ಷ ಪ್ರಶ್ನೆ77 (Yaksha prashne 77)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 76 ಜಲ ಯಾವುದು ?

ಉತ್ತರ - ಆಕಾಶ 

ಇಲ್ಲಿನ ಯಕ್ಷನ ಪ್ರಶ್ನೆ ಬಹಳ ವಿಚಿತ್ರವಾಗಿದೆ. "ನೀರು ಯಾವುದು?" ಎಂದು. ಅದಕ್ಕೆ ಧರ್ಮರಾಜ ಕೊಟ್ಟ ಉತ್ತರವೂ ಅಷ್ಟೇ ವಿಚಿತ್ರವಾಗಿದೆ. "ಆಕಾಶ" ಎಂದು. ಇಂತಹ ಸಂದರ್ಭಗಳಲ್ಲಿ ಪ್ರಶ್ನೆಗೆ ಎರಡು ರೀತಿಯಲ್ಲಿ ಉತ್ತರವನ್ನು ಕೊಡಬಹುದು. ಪ್ರಶ್ನೆಯಲ್ಲಿ ಬರುವ ಪದಕ್ಕೆ ಅದೇ ಅರ್ಥ ಬರುವ ಇನ್ನೊಂದು ಪದವನ್ನು ಹೇಳುವುದರ ಮೂಲಕ; ಅಥವಾ ಪದಕ್ಕಿರುವ ಅರ್ಥ- ವಸ್ತು ಯಾವುದು? ಎಂದು ಆ ಪದಾರ್ಥವನ್ನು ತೋರಿಸುವುದರ ಮೂಲಕ. ಇಲ್ಲಿ ಯಕ್ಷನ ಜಲ ಯಾವುದು? ಎಂಬ ಪ್ರಶ್ನೆಗೆ, ಆಕಾಶ ಎಂಬ ಉತ್ತರವನ್ನು ನೀಡಿದ್ದಾನೆ ಧರ್ಮರಾಜ. ಜಲ ಎಂಬುದಕ್ಕೆ ಯಾವ ರೀತಿಯಲ್ಲಿ ಆಕಾಶ ಎಂಬ ಉತ್ತರ ಸರಿಯಾಗಬಹುದು! ಎಂಬುದೇ ಸಂದೇಹ. ಏಕೆಂದರೆ ಆಕಾಶ ಎಂಬುದು ಜಲ ಎಂಬ ಪದದ ಪರ್ಯಾಯ ಅಲ್ಲ. ಅಥವಾ ಜಲ ಎಂಬ ಪದವು ಆಕಾಶ ಎಂಬ ಒಂದು ದ್ರವ್ಯವನ್ನೂ ಸೂಚಿಸುವುದಿಲ್ಲ. ಹಾಗಾದರೆ ಆಕಾಶ ಎಂಬ ಉತ್ತರ ಹೇಗೆ ಸರಿ? ಎಂಬ ಸಂದೇಹ ಹಾಗೆಯೇ ಉಳಿಯುತ್ತದೆ. 

ಪೃಥಿವೀ, ಜಲ, ಅಗ್ನಿ, ವಾಯು ಮತ್ತು ಆಕಾಶ ಎಂಬ ಪಂಚಭೂತಗಳಲ್ಲಿ ಜಲ ಮತ್ತು ಆಕಾಶಗಳೂ ಇವೆ. ಇವುಗಳ ಗುಣ ಸ್ವಭಾವಗಳೂ ಭಿನ್ನ ಭಿನ್ನವೇ. ಜಲವು ರಸ ಮತ್ತು ಶೀತಸ್ಪರ್ಶ ಎಂಬ ವಿಶೇಷಗುಣಗಳಿಂದ ಕೂಡಿದೆ. ಆದರೆ ಆಕಾಶಕ್ಕೆ ಶಬ್ದ ಎಂಬ ಒಂದು ವಿಶೇಷಗುಣವಿದೆ. ಯಾವುದೇ ಕಾರಣಕ್ಕೂ ಇವುಗಳಲ್ಲಿ ಸಾಮ್ಯ ಎಂಬುದು ತೋರುವುದೇ ಇಲ್ಲ. ಪರಸ್ಪರ ವಿರುದ್ಧವಾದ ಗುಣಗಳಿಂದ ಕೂಡಿವೆ. ಆದರೂ ಇವೆರಡು ಅಭಿನ್ನವಾದವುಗಳು ಎಂಬ ಉತ್ತರವು ಇಲ್ಲಿ ಬಂದಿದೆ. ಇಲ್ಲಿ ಕಾರಣವನ್ನು ಈ ರೀತಿಯಾಗಿ ಪತ್ತೆ ಮಾಡಬಹುದು. ಅಷ್ಟೇ ಅಲ್ಲದೇ ಇದಕ್ಕೆ ಶ್ರುತಿವಾಕ್ಯವೂ ಉಪಷ್ಟಂಬಕವಾಗಿ ಕಂಡುಬರುತ್ತದೆ. ಅದರ ಬಲದ ಮೇಲೆ ಇವೆರಡಕ್ಕೂ ಸಾಮ್ಯವನ್ನು ಹೇಳಬಹುದಾಗಿದೆ. 

ಈ ಪ್ರಪಂಚವು ಸೃಷ್ಟಿಯಾಗಬೇಕಾದರೆ ಆಕಾಶದಿಂದ ವಾಯು ಅಗ್ನಿ ಜಲ ಭೂಮಿ ಸೃಷ್ಟಿಯಾಗಿದೆ. ಒಂದರಿಂದ ಇನ್ನೊಂದು ಸೃಷ್ಟಿಯಾಗುತ್ತದೆ. ಕಾರಣದಲ್ಲಿರುವ ಗುಣಗಳೂ ಕಾರ್ಯದಲ್ಲಿ ಸಂಕ್ರಾಂತವಾಗಲೇಬೇಕು ಎಂಬ ಶಾಸ್ತ್ರದ ನಿಯಮ. ಈ ನಿಯಮದ ಪ್ರಕಾರ ಜಲದ ಉತ್ಪತ್ತಿ ಆಕಾಶದಿಂದಲೇ ಆಗಿದೆ. ಹಾಗಾಗಿ ಅವೆರಡರಲ್ಲಿರುವ ಕೆಲವು ಸಾಮ್ಯ ಗುಣಗಳಿಂದಾಗಿ ಜಲಕ್ಕೆ ಆಕಾಶ ಎಂದು ಅರ್ಥೈಸಲಾಗಿದೆ. ಜಲವು ಆಕಾಶದಷ್ಟೇ ವಿಸ್ತಾರವಾದುದು, ಅಸೀಮವಾದುದು, ದೃಷ್ಟಿ ಹಾಯಿಸಿದಷ್ಟೂ ಕಾಣುವ, ಅಥವಾ ಕಣ್ಣಿಗೆ ಕಂಡು ಮುಗಿಯದಷ್ಟು ವಿಶಾಲವಾದುದು, ಆಕಾಶಕ್ಕಿರುವ ವರ್ಣವೂ ಜಲದ ವರ್ಣಕ್ಕೆ ಸಮಾನವಾದುದು, ಇಂತಹ ಬಾಹ್ಯವಾದ ಅನೇಕ ಗುಣಗಳಿಂದ ಅವೆರಡೂ ಒಂದು ಎನ್ನಬಹುದು. ಮತ್ತು ಜಲ ಎಂದರೆ ಆಚ್ಛಾದನ ಗುಣವುಳ್ಳದ್ದು. ಆಕಾಶಕ್ಕೂ ಇಂತಹದ್ದೇ ಗುಣವಿದೆ. ಜಲಕ್ಕೆ ವ್ಯೋಮ ಎಂದೂ ಕೆಲವು ಕಡೆ ಕರೆಯುತ್ತಾರೆ. 'ಆಪ ಏವ ಸಸರ್ಜಾದೌ' ಎಂಬ ಮಾತಿನಂತೆ ಜಲವೇ ಮೊದಲು ಸೃಷ್ಟಿಯಾಯಿತು. ಹೀಗೆ ಜಲ ಮತ್ತು ಆಕಾಶ ಸೂಕ್ಷ್ಮವಾಗಿ ಮತ್ತು ಆಳವಾಗಿ ವಿಚಾರಿಸಿದಾಗ ಎರಡೂ ಒಂದೇ. 

ಸೂಚನೆ :18 /2/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.