ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ನಮ್ಮ ದೇಶದಲ್ಲಿ, ಅಷ್ಟೇ ಏಕೆ, ಜಗತ್ತಿನಲ್ಲೇ ಓಂಕಾರದ ಬಗ್ಗೆ ಕೇಳದೇ ಇರುವವರೇ ಇಲ್ಲ. ನಮ್ಮ ಭಾರತೀಯ ಸಂಪ್ರದಾಯದಲ್ಲಿ ಬಂದಂತಹ ಎಲ್ಲಾ ಸಂಸ್ಕಾರಗಳ ಆರಂಭ, ಮಧ್ಯ ಮತ್ತು ಅಂತ್ಯಗಳಲ್ಲಿ ಈ ಓಂಕಾರವೆಂಬ ಪ್ರಣವ ಘೋಷವನ್ನು ನಾವು ಕೇಳಿಯೇ ಇರುತ್ತೇವೆ.
ಏನಿದು ಓಂಕಾರ? ಕೇವಲ ಎರಡು ತುಟಿಗಳನ್ನು ಒಟ್ಟು ಮಾಡಿ ಓಂ ಎಂದು ಹೇಳಿಬಿಟ್ಟರೆ, ಅಷ್ಟಕ್ಕೇ ಇದರ ಅರ್ಥ ವಿಸ್ತಾರ ಮುಗಿಯದು. ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಇದು ಕೇವಲ ನಾವು ತುಟಿಗಳನ್ನು ಒಟ್ಟು ಮಾಡಿ ಹೇಳುವಂತಹ ಅಥವಾ ಮೊಳಗಿಸುವಂತಹ ಶಬ್ದ ಮಾತ್ರವಲ್ಲದೇ, ಯೋಗಿಗಳು, ನಮ್ಮ ದೇಶದ ಮಹರ್ಷಿಗಳು, ಯಾರು ನಿರಂತರವಾದ ಆಧ್ಯಾತ್ಮಿಕ ಸಾಧನೆ ಮತ್ತು ತಪಸ್ಸಿಯಲ್ಲಿ ತೊಡಗಿದ್ದರೋ, ಅಂತಹವರ ಅಂತರಂಗದಲ್ಲಿ ತಾನೇ ತಾನಾಗಿ ಸದಾ ಕಾಲ ಮೊಳಗುತ್ತಿರುವ ಒಂದು ಅನಾಹತ ನಾದ ಎಂದು ಹೇಳುತ್ತಾರೆ.
ಏನಿದು ಅನಾಹತ? ಎಂದರೆ, ಸಾಮಾನ್ಯವಾಗಿ ಆಹತವೆಂದರೆ ಎರಡು ವಸ್ತುಗಳ ಸಂಘರ್ಷದಿಂದ ಉತ್ಪತ್ತಿಯಾಗುವ ಶಬ್ದ. ಆದರೆ ಈ ಓಂಕಾರವು ನಮ್ಮ ಮಹರ್ಷಿಗಳ ಹೃದಯದಲ್ಲಿ ಯಾವ ಸಂಘರ್ಷವೂ ಇಲ್ಲದೆ ತಾನೇ ತಾನಾಗಿಯೇ ಸದಾಕಾಲ ಮೊಳಗುತ್ತಾ ಇರುವಂತಹ ಒಂದು ನಾದವಾಗಿದೆ. ಯೋಗಿಗಳ ಅನುಭವದ ಪ್ರಕಾರ, ಓಂಕಾರವು ಇಡೀ ವಿಶ್ವಕ್ಕೆ, ಬ್ರಹ್ಮಾ೦ಡಕ್ಕೆ, ಪಿಂಡಾಂಡಕ್ಕೆ ಮತ್ತು ಸೃಷ್ಟಿಗೆ ಬೀಜ ಭೂತವಾಗಿದೆ. ಹೀಗಾಗಿ ಸಾಕ್ಷಾತ್ ಭಗವಂತನನ್ನು ಕೂಡ "ಓಂ" ಎಂದೇ ಕರೆಯಬಹುದು. ಇದು ಭಗವಂತನ ವಾಚಕವಾಗಿದೆ. ಏನಿದು, ಕೇವಲ ಒಂದು ಧ್ವನಿಯು, ವಿಶ್ವದ ಬೀಜ ಎಂದು ಹೇಳಿಬಿಟ್ಟರೆ, ಇದನ್ನು ಹೇಗೆ ನಂಬುವುದು? ಎಂದು ಪ್ರಶ್ನೆಯಾಗುವುದು ಸಹಜ. ಇದಕ್ಕೆ ನಮ್ಮ ಶ್ರೀರಂಗ ಮಹಾಗುರುಗಳ ಮನಸ್ಸಿಗೆ ಮುಟ್ಟುವಂತಹ, ಒಂದು ಉದಾಹರಣೆ ಹೀಗಿದೆ.-
ಆಲದ ಮರವು ವಿಸ್ತಾರವಾದ ಶಾಖೋಪಶಾಖೆಗಳೊಂದಿಗೆ ಕೂಡಿರುತ್ತದೆ. ದೀರ್ಘಾಯುಷ್ಯಕ್ಕೆ, ಉತ್ತಮ ಆರೋಗ್ಯಕ್ಕೆ, ಹಲವಾರು ರೋಗಗಳಿಗೆ ಔಷಧಿಯಾಗಿರುವಂತಹ ಇಷ್ಟು ದೊಡ್ಡ ಆಲದ ವೃಕ್ಷಕ್ಕೆ ಯಾವುದು ಮೂಲ? ಎಂದರೆ, ಕೇವಲ ಒಂದು ಉಗುರಳತೆಯಲ್ಲಿ ಸಿಗಬಹುದಾದಂತಹ ಸಣ್ಣ ಬೀಜವಷ್ಟೇ. ಈ ಸಂಗತಿಯು ನಮಗೆ ನಂಬಲು ಕಷ್ಟವೆನಿಸಿದರೂ ಕೂಡ, ವ್ಯವಸಾಯ ಮಾಡುವವನು ಈ ಸತ್ಯವನ್ನು ಚೆನ್ನಾಗಿ ಬಲ್ಲ. ಇಷ್ಟು ಸಣ್ಣ ಬೀಜದಿಂದಲೇ ಅಷ್ಟು ದೊಡ್ಡದಾಗಿ ಆಲದ ಮರವು ಬೆಳೆಯುತ್ತದೆ ಎಂದು ನಿಸರ್ಗವನ್ನು ಬಲ್ಲವನು ಹೇಗೆ ತಿಳಿಯುತ್ತಾನೆಯೋ ಅಂತೆಯೇ ನಮ್ಮ ಮಹರ್ಷಿಗಳು ತಮ್ಮ ಅಂತರಂಗದಲ್ಲಿ ದರ್ಶನ ಮಾಡಿ, ಅನುಭವಿಸಿ, ಇಡೀ ಜಗತ್ತಿಗೆ ಓಂಕಾರವೇ ಬೀಜವಾಗಿದೆ, ಈ ಓಂಕಾರದಿಂದಲೇ ಇಡೀ ಜಗತ್ತು ವಿಸ್ತಾರವಾಗಿದೆ ಎನ್ನುವ ಸತ್ಯವನ್ನು ಸಾರಿದರು. ಧ್ವನಿ ವಿಜ್ಞಾನವನ್ನರಿತು ಇಂದು ಎಲ್ಲೋ ಆಡಿದ ಮಾತುಗಳು, ಹಾಡಿದ ಹಾಡುಗಳು ನಮ್ಮ ಮನೆಯ ದೂರದರ್ಶನದಲ್ಲಿ,ಆಕಾಶವಾಣಿಯಲ್ಲಿ ಬರುವಂತಾಗಿದೆಯಲ್ಲವೇ?
ನಮಗೇಕೆ ಇದು ಅರ್ಥವಾಗುತ್ತಿಲ್ಲ ಎಂದರೆ, ನಾವು ನಮ್ಮ ಪೂರ್ವಿಕರಾದ ಋಷಿ ಮಹರ್ಷಿಗಳoತೆ ಸಾಧನೆ, ತಪಸ್ಸುಗಳನ್ನು ಮಾಡಿಲ್ಲ. ಆಯುರ್ವೇದದ ಒಂದು ಮಾತು- ನ ಶಕ್ಯಃ ಚಕ್ಷುಷಾ ದ್ರಷ್ಟುಂ ದೇಹೇ ಸೂಕ್ಷ್ಮತಮೋ ವಿಭು: | ದೃಷ್ಯತೇ ಜ್ಞಾನ ಚಕ್ಷುರ್ಭಿ: ತಪಶ್ಚಕ್ಷುರ್ಭಿರೇವಚ||- ಈ ದೇಹದಲ್ಲಿ ಸೂಕ್ಷ್ಮವಾಗಿರುವ ಸರ್ವವ್ಯಾಪಿಯಾದ ಚೈತನ್ಯವನ್ನು ಈ ಚರ್ಮ ಚಕ್ಷುಸ್ಸಿನಿಂದ ನೋಡಲಾಗದು. ಅದಕ್ಕೆ ಜ್ಞಾನದ ಕಣ್ಣು,ತಪಸ್ಸಿನ ಕಣ್ಣು ಬೇಕಾಗುತ್ತದೆ. ಎಂಬುದಾಗಿ. ನಮ್ಮ ಜೀವನಗಳು ಶುದ್ಧವಾಗಿದ್ದು ಜನ್ಮಾಂತರ ಸಂಸ್ಕಾರಗಳಿಂದ ಸಹಜವಾದ ಇಂದ್ರಿಯಸಂಯಮದಿಂದ ಒಳಗಿರುವ ಬೆಳಕನ್ನು ನೋಡುವಂತಹ ಪ್ರಕೃತಿ ನಮ್ಮದಿದ್ದಾಗ ಜ್ಞಾನದ ಕಣ್ಣು ಸಹಜವಾಗಿ ತೆರೆಯುವಂತಾಗುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗದು. ನಮ್ಮ ಜನ್ಮಾಂತರ ಕರ್ಮಗಳಿಂದ ಪ್ರಕೃತಿ ಕಲುಷಿತವಾಗಿದ್ದಾಗ ಅದನ್ನು ಒಳ ಅನುಭವವನ್ನು ಪಡೆಯಲು ಸಜ್ಜುಗೊಳಿಸಬೇಕಾಗುತ್ತದೆ. ಅದಕ್ಕಾಗಿ ಜ್ಞಾನೀಜನ ಪ್ರಣೀತವಾದ ನಾನಾ ಬಗೆಯ ತಪಸ್ಸು, ಸಾಧನೆಗಳ ಅಭ್ಯಾಸ ಮಾಡಿದಾಗ ನಮ್ಮ ಶರೀರವು ಸಹಜ ಸ್ಥಿತಿಗೆ ಬಂದು ಒಳ ಅನುಭವವನ್ನು ಪಡೆಯುವಂತಾಗುವುದು ತಪಸ್ಸಿನ ಕಣ್ಣು. ಹಾಗೆ ನಾವು ಪರಮಗುರುವಿನ ನಿರ್ದೇಶನದಲ್ಲಿ ತೊಡಗಿದರೆ ನಮಗೂ ಕೂಡ ಮಹರ್ಷಿಗಳಿಗಾದ ಅನುಭವವು ಉಂಟಾಗಿ ಅರಿವು ಮೂಡುತ್ತದೆ. ಹಾಗಾದಾಗ ಎಲ್ಲಾ ಶುಭ ಕಾರ್ಯಗಳ ಆರಂಭ, ಮಧ್ಯ, ಅಂತ್ಯಗಳೂ ಸೃಷ್ಟಿಮೂಲವಾದ ಪ್ರಣವಘೋಷದಿಂದ ತುಂಬಿರುವುದು ಅರ್ಥವತ್ತಾಗುತ್ತದೆ.
ಇಡೀ ವಿಶ್ವವನ್ನು ತನ್ನಲ್ಲಿ ಅಡಗಿಸಿಕೊಂಡು, ಈ ವಿಶ್ವದ ವಿಸ್ತಾರಕ್ಕೆ ಈ ಓಂಕಾರವು ಕಾರಣವಾಗಿದೆ ಎನ್ನುವ ಸತ್ಯಾರ್ಥವನ್ನು ನಾವೂ ಕಂಡು ಅನುಭವಿಸುವಂತಾಗಲಿ ಎಂದು ಭಗವಂತನನ್ನು ಪ್ರಾರ್ಥಿಸೋಣ.
ಸೂಚನೆ : 3/2/2024 ರಂದು ಈ ಲೇಖನವು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.